Wednesday, 17 May 2017

ಅಹಲ್ಯೆಯೆಂಬ ಮತ್ತೊಬ್ಬ ಶಬರಿ

(ಅಮೇರಿಕದ ನ್ಯೂಜೆರ್ಸಿಯಲ್ಲಿನ ದ್ವೈಮಾಸಿಕ ಪತ್ರಿಕೆ 'ಬೃಂದಾವನ ವಾಣಿ'ಯಲ್ಲಿ ಪ್ರಕಟವಾದ ಕಥೆ)


 
 ಅದೊಂದು ಹಿಮಾಲಯದ ತೊಪ್ಪಲಿನ ಸುಂದರ ಮುಂಜಾವು.ಒಂದುಕಡೆ ಪರ್ವತದಂಚಿಂದ ಬಿಳಿಸೀರೆಯುಟ್ಟು, ಬೆಳ್ಳಿಗೆಜ್ಜೆ ತೊಟ್ಟು ನುಲಿಯುತ್ತಾ, ಕುಣಿಯುತ್ತಾ, ಬಿಳಿನವಿಲು ನರ್ತಿಸಿದಂತೆ ಝುಳು-ಝುಳು ಹರಿಯುತ್ತಿರುವ ಗಂಗೆ,ಇನ್ನೊಂದೆಡೆ ಗೌತಮರ ಆಶ್ರಮ,ಅದರ ಪಕ್ಕ ಅಪರೂಪದ ನಾಗಪುಷ್ಪ,ಬ್ರಹ್ಮಕಮಲ,ಸೌಗಂಧಿಕಾ ಪುಷ್ಪಗಳಂತಹ ಪುಷ್ಪರಾಶಿಯನ್ನು ಹೊತ್ತ ತೊಪ್ಪಲು,ಅದರಿಂದ ಹೊರಬರುತ್ತಿರೋ ಪರಿಮಳ,ಪತಿಯ ಪೂಜೆಗೆಂದು ಹೂವು ಕೊಯ್ಯಲು ಬಂದವಳು ಮೈಮರೆತು ನಿಂತಿದ್ದೆ,ಸುತ್ತಲಿನ ಸೊಬಗನ್ನು ಬೆರಗಿನಿಂದ ಆಸ್ವಾದಿಸುತ್ತಿದ್ದೆ. ಆಗಲೇ ಕಾಣಿಸಿಕೊಂಡನವ,ಮೋಡಗಳ ರಥದಲ್ಲು ಕುಳಿತು ಎಲ್ಲಿಗೋ ತೆರಳುತ್ತಿದ್ದ. ಈಗ ನಮ್ಮ ಆಶ್ರಮದತ್ತ ಕಣ್ಣು ಹಾಯಿಸಲೂ ಭಯ ಅವನಿಗೆ,ನನಗೂ ಅವನ ಕಂಡಾಗಲೆಲ್ಲಾ ಏನೋ ಹೇಳಲಾರದ ಕಸಿವಿಸಿ. ಲಗುಬಗೆಯಿಂದ ಹೂವು ಕೊಯ್ದು,ಪತಿಯ ಧ್ಯಾನಕ್ಕೆ-ಪೂಜೆಗೆ ಅಣಿಮಾಡಿ,ನಾನೂ ಧ್ಯಾನಕ್ಕೆ ಕುಳಿತರೆ ಮನಸ್ಸು ಸ್ಥಿಮಿತ ತಪ್ಪಿತ್ತು. ಮಾತು ಕೇಳದೇ ಹಠ ಮಾಡುವ ಮಗುವಿನಂತೆ ನೆನಪು ಹಿಂದಕ್ಕೋಡಿತು...
             *ಜನನ-ಬಾಲ್ಯ*
  ಸೃಷ್ಟಿಕರ್ತನಾದ ಬ್ರಹ್ಮನಿಗೆ ಸದಾ ಹೊಸತೊಂದು ಬಗೆಯ ಸೃಷ್ಟಿ ಪ್ರಯೋಗ ಮಾಡುವುದರಲ್ಲೇ ಆಸಕ್ತಿ. ಹೀಗಿರಲಿ ಒಂದು ದಿನ ಅವರಿಗೆ ಜಗತ್ತಿನಲ್ಲೇ ಅತೀ ಸುಂದರಳಾದ ಹೆಣ್ಣನ್ನು ಸೃಷ್ಟಿಮಾಡಬೇಕೆಂದು ಬಯಕೆಯುಂಟಾಯ್ತಂತೆ.ಜಗತ್ತಿನ ಸುಂದರ ಸ್ತ್ರೀಯರ ಸೌಂದರ್ಯ-ಲಾವಣ್ಯಗಳ ಮಿಶ್ರಣದಂತೆ ಇರುವ ಒಂದು ಮಗುವನ್ನು ಸೃಷ್ಟಿಸಿ, ಲೋಪವಿಲ್ಲದಿರುವ ಮಾಸದ ಚೆಲುವು ಎಂಬರ್ಥ ಬರುವ 'ಅಹಲ್ಯಾ' ಎಂಬ ಹೆಸರಿಟ್ಟರಂತೆ. ಹೀಗೇ ಸೃಷ್ಟಿಸಿದ ತಮ್ಮ ಮಾನಸಪುತ್ರಿಯನ್ನು ಬೆಳೆಸುವುದು ಹೇಗೆ? ಅದಕ್ಕೆ ಯೋಗ್ಯರಾದವರು ಯಾರು ಎಂಬ ಯೋಚನೆ ಕಾಡಿದೊಡನೆ,ನನ್ನ ಪಿತಾಮಹನಿಗೆ ನೆನಪಾಗಿದ್ದೇ,ವೇದಶಾಸ್ತ್ರಪಾರಂಗತರೂ, ಸಕಲಗುಣ ಸಂಪನ್ನರೂ ಆದ ಗೌತಮ ಋಷಿಗಳು. ತಕ್ಷಣ ಗೌತಮರನ್ನು ಕರೆಯಿಸಿ ಅವರ ಕೈಗೆ ನನ್ನನ್ನು ಕೊಟ್ಟು ಬೆಳೆಸಲು ತಿಳಿಸಿ,ನಾನು ಸುಂದರ ಯುವತಿಯಾಗಿ ಬೆಳೆದು ನಿಂತಾಗ ತಮ್ಮಲ್ಲಿ ಮತ್ತೆ ಕರೆತರುವಂತೆ ತಿಳಿಸಿ ಕಳುಹಿಸಿಕೊಟ್ಟರಂತೆ. ಇತ್ತ ವಿಧೇಯರಾದ ಗೌತಮರು ನನ್ನನ್ನು ಮಗುವಂತೆ ಮುಚ್ಚಟೆಮಾಡಿ,ವೇದಶಾಸ್ತ್ರದ ಅಧ್ಯಯನದ ಜೊತೆಗೆ ಸಂಸ್ಕಾರವಂತಳಾಗಿ ಬೆಳೆಸುತ್ತಿದ್ದರು.ಹುಟ್ಟಿದಾಗಲಿನಿಂದ ನನ್ನನ್ನು ಸಾಕಿ ಸಲಹುತ್ತಿರೋ ಗೌತಮರನ್ನು ನಾನು ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದೆ. ದಿನದಿಂದ ದಿನಕ್ಕೆ ನನ್ನ ಸೌಂದರ್ಯ ವೃದ್ಧಿಸುತ್ತಿತ್ತು,ಹುಣ್ಣಿಮೆಯ ಚಂದ್ರನೂ ನಾಚುವಂತ ರೂಪವತಿಯೆಂದು ಆಶ್ರಮದ ಗೆಳತಿಯರು ಹೊಗಳುತ್ತಿದ್ದರು. ಅವರ ಹೊಗಳುವಿಕೆಗೆ ಹುಸಿಮುನಿಸು ತೋರಿದಂತಾಡಿದರೂ ಮನ ಮತ್ತೆ-ಮತ್ತೆ ಸೌಂದರ್ಯದ ವರ್ಣನೆ ಕೇಳಬಯಸುತ್ತಿತ್ತು. ಒಂದು ದಿನ ಗೌತಮರು ಕರೆದು ನನ್ನನ್ನು ನನ್ನ ಪಿತಾಮಹ ಬ್ರಹ್ಮದೇವರಲ್ಲಿಗೆ ಕರೆದೊಯ್ಯುವುದಾಗಿ ತಿಳಿಸಿದರು. ಹೊಸ ಜಾಗ, ಹೊಸ ಜನ, ಬೇರೆಯದ್ದೇ ಜಗತ್ತು,ಪಿತಾಮಹ,ದೇವಲೋಕ ಎಲ್ಲವನ್ನೂ ನೋಡಿ ಸವಿಯುವ ಅವಕಾಶವೆಂದು ತಿಳಿದು ಸಡಗರದಿಂದ ತಯಾರಿಗೆ ಬಿದ್ದೆ. ಹಗಲೂ-ಇರುಳೂ ನೂರಾರು ಬಣ್ಣ ಬಣ್ಣದ ಕನಸುಗಳು.ಆಗ ತಾನೇ ಯೌವ್ವನವೂ ತೆಕ್ಕೆಮುರಿದು ಬಿದ್ದಿತ್ತು ..
      *ಯೌವ್ವನ-ಮದುವೆ*
   ಹದಿಹರೆಯದ ಹೊಸ್ತಿಲಲ್ಲಿ ಮೈದುಂಬಿಕೊಂಡು,ಕಣ್ತುಂಬುವಂತೆ ಎದುರು ನಿಂತ ತಮ್ಮ ಮಾನಸ ಪುತ್ರಿಯನ್ನು ನೋಡಿ ಪಿತಾಮಹ ಬ್ರಹ್ಮದೇವನಿಗೆ ಕ್ಷಣಕಾಲ ಮಾತೇ ಹೊರಡಲಿಲ್ಲ.ಮರುಕ್ಷಣ ನನ್ನ ತಲೆ ಅವರ ಪಾದದಡಿಯಿತ್ತು,ಅವರು ನನ್ನ ತಲೆ ಸವರುತ್ತಿದ್ದರು. ತನ್ನ ಮಾನಸ ಪುತ್ರಿ ಅಲೌಕಿಕ ಸುಂದರಿಯಾದರೂ , ಯಾವುದೇ ಪ್ರಲೋಭೆಗೊಳಗಾಗದೆ,ವಿಧೇಯನಾಗಿ ತನ್ನೆಡೆಗೆ ಅವಳನ್ನು ಕರೆತಂದ ಗೌತಮರ ಮೇಲೆ ಪಿತಾಮಹರಿಗೆ ವಿಶೇಷ ಅಭಿಮಾನ, ಅಕ್ಕರಾಸ್ಥೆಗಳುಂಟಾಗಿದ್ದವು.ನನ್ನ ಸೌಂದರ್ಯಕ್ಕೆ ಮರುಳಾಗಿ ನನ್ನ ವಿವಾಹವಾಗಲು ಪೈಪೋಟಿಗಿಳಿದಾಗ, ಪಿತಾಮಹರು ಒಂದು ಉಪಾಯ ಮಾಡಿದರು. ಸುರಾಸುರರಲ್ಲಿ ಯಾರು ಮೊದಲು ಜಗವನ್ನೆಲ್ಲಾ ಒಂದು ಪ್ರದಕ್ಷಿಣೆಗೈದು ಯಾರು ಮೊದಲು ತಲಪುವರೋ,ಅವರಿಗೆ ನನ್ನನ್ನು ಕೊಟ್ಟು ವಿವಾಹ ಮಾಡುತ್ತೆನೆ ಎಂದು ಘೋಷಿಸುವುದೇ ತಡ,ಎಲ್ಲರೂ ತಮಗೆ ತೋಚಿದ ಮಾರ್ಗದಲ್ಲಿ ಶರತ್ತನ್ನು ಮುಗಿಸಲು ಮುಗಿಬಿದ್ದರು,ಅದರಲ್ಲಿ ಇಂದ್ರ ಮೊದಲಿಗಿದ್ದ. ಸ್ತ್ರೀ ಲಂಪಟನಾದ ಇಂದ್ರನಿಗೆ ನನ್ನನ್ನು ವಿವಾಹ ಮಾಡಿಕೊಡುವುದು ಪಿತಾಮಹರಿಗೂ,ನನ್ನ ಸಹೋದರ ನಾರದರಿಗೂ ಒಂದಿನೀತೂ ಇಷ್ಟವಿರಲಿಲ್ಲ.
   ಆದರೆ ಯೌವ್ವನದ ಹೊಸ್ತಿಲಲ್ಲಿ ಕಾಲಿಟ್ಟ ನನಗೆ ಇದೆಲ್ಲದೂ ಆಕರ್ಷಕವಾಗಿತ್ತು.ಥಳ-ಥಳಿಸುವ ದೇವಲೋಕ,ಅಲ್ಲಿನ ವೈಭವದಲ್ಲಿ ಮೆರೆಯುವ ಜನರೆಲ್ಲಾ, ನನ್ನನ್ನು ವಿವಾಹವಾಗಲು ಬಯಸುತ್ತಿರುವುದು ವಯೋಸಹಜವಾದ ಆನಂದವಾಗಿತ್ತು.ಮನವು ನವಿಲಂತೆ ಕುಣಿಯುತ್ತಿತ್ತು ರೆಕ್ಕೆಬಿಚ್ಚಿ..
 ಇತ್ತ ನನ್ನನ್ನು ಪಿತಾಮಹನಿಗೊಪ್ಪಿಸಿ ತಮ್ಮ ಕರ್ತವ್ಯ ಮುಗಿಸಿದ ಗೌತಮರು ಭೂಲೋಕದತ್ತ ತೆರಳುವಾಗ ದಾರಿಯಲ್ಲಿ ಕಾಮಧೇನುವಿಗೆ ಪ್ರಸವ ವೇದನೆ ಶುರುವಾಗಿ,ಪುಟ್ಟ ಕರುವಿಗೆ ಜನ್ಮನೀಡಿತಂತೆ.ರಕ್ತದ ಮುದ್ದೆಯಲ್ಲಿ ಬಿದ್ದುಕೊಂಡ ಆ ಎಳೆಗರುವನ್ನು ಶುದ್ಧಗೊಳಿಸಿ,ತಾಯಿ ಕಾಮಧೇನುವಿಗೆ ಯಥೇಚ್ಛ ಹುಲ್ಲು ನೀಡಿ, ಅದಕ್ಕೊಂದು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ,ತಮ್ಮ ಆಶ್ರಮದತ್ತ ಮುನ್ನಡೆಯುತ್ತಿದ್ದರಂತೆ.ಇದನ್ನೆಲ್ಲಾ ತಮ್ಮ ತಪಃಶಕ್ತಿಯಿಂದ ನೋಡಿದ ಪಿತಾಮಹರು ಗೌತಮರನ್ನು ಮತ್ತೆ ತಮ್ಮೆಡೆಗೆ ಕರೆಸಿಕೊಂಡರು.ಕಾಮಧೇನುವಿನ ಪ್ರದಕ್ಷಿಣೆಯೂ ಒಂದೇ,ಜಗತ್ತಿನ ಪ್ರದಕ್ಷಿಣೆಯೂ ಒಂದೇ,ನಿಮ್ಮ ಬಿಟ್ಟರೇ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವರಿಲ್ಲವೆಂದು ಹೊಗಳುತ್ತಾ,ಗೌತಮರಿಗೆ ನನ್ನ ಧಾರೆಯೆರೆದು ಕೊಟ್ಟರು,ನನ್ನ ಇಚ್ಛೆಯನ್ನು ಕೇಳುವ ಮನಸ್ಸೂ ಮಾಡದೇ..
  ಗೌತಮರನ್ನು ತಂದೆಯ ಸ್ಥಾನದಲ್ಲಿಟ್ಟು ಗೌರವದಿಂದಿದ್ದ ನನಗೆ ಅವರನ್ನು ಪತಿಯೆಂದು ಒಪ್ಪಲು ಸಾಧ್ಯವಾಗಲೇ ಇಲ್ಲ.ಬ್ರಹ್ಮ ಹೇಳಿದ್ದಕ್ಕೆ ವಿಧೇಯನಾಗಿ ಇವರು ನನ್ನನ್ನು ಕಟ್ಟಿಕೊಂಡರು.ತನ್ನದೇ ವಯಸ್ಸಿನವನಿಗೆ ತನ್ನ ಮಗಳನ್ನು ಧಾರೆಯೆರೆದು ಕೊಟ್ಟರೆ ಅವಳಿಗೆನನಿಸಬಹುದು?ಅವಳ ಇಷ್ಟಾನಿಷ್ಟಗಳೇನು ಎಂದು ತಿಳಿಯಲೂ ಪ್ರಯತ್ನಿಸಲಿಲ್ಲ.ಸುಂದರವಾಗಿ ನನ್ನ ಹುಟ್ಟಿಸಿದ್ದೊಂದು ಬಿಟ್ಟರೇ,ಇನ್ನೇನೂ ಮಾಡದ ಪಿತಾಮಹನ ಮೇಲಿದ್ದ ಗೌರವ-ಪ್ರೀತಿ ಕಡಿಮೆಯಾಗಿತ್ತು. ಅಷ್ಟರಲ್ಲಾಗಲೇ ಜಗತ್ತನ್ನು ಪ್ರದಕ್ಷಿಣೆ ಮಾಡಿಬಂದ ಸುರಾಸುರರೆಲ್ಲರೂ,ನಮ್ಮ ವಿವಾಹ ನೋಡಿ ದಂಗಾಗಿದ್ದರು.ಎಲ್ಲರಿಗಿಂತ ಮೊದಲು ಬಂದ ಇಂದ್ರನಂತೂ ಕುದಿಯತೊಡಗಿದ್ದ.ಆಡುವಂತಿಲ್ಲ,ನುಂಗಿವಂತಿಲ್ಲ,ಸುಮ್ಮನೇ ಧುಮ್ಮಿಕ್ಕುತ್ತಾ ಹೋದೆ.ಅವನು ಹೋದೆಡೆ ಕ್ಷಣ ನೋಡಿದ ದೀರ್ಘ ನಿಟ್ಟುಸಿರೊಂದು ಹೊರಬಂತು. ಅಲ್ಲಿಗೆ ಎಲ್ಲಾ ಭಾವನೆಗಳಿಗೂ ಹೊರಗಟ್ಟಲ್ಪಟ್ಟವು. ನಾನು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದೆ
       *ಪ್ರೀತಿ-ಪ್ರಣಯ-ಶಾಪಗ್ರಹಣ*
  ಮದುವೆಯಾಗಿ ವರುಷವೇ ಕಳೆಯತ್ತಾ ಬಂದರೂ ಗೌತಮರಿಗೆ ನನ್ನೆಡೆಗೆ ಅದೇ ನಿರ್ಲಿಪ್ತಭಾವ.ಪತ್ನಿಯ ದರ್ಜೆಯೊಂದು ಸಿಕ್ಕಿದ್ದು ಬಿಟ್ಟರೆ ಮತ್ಯಾವ ಬದಲಾವಣೆಯೂ ಇಲ್ಲ.ನನಗೂ ಅಷ್ಟೇ ಅವರನ್ನು ತಂದೆಯ ಸ್ಥಾನದಿಂದ ಕೆಳಗಿಳಿಸಿ,ಪತಿಯೆಂಬ ಸಿಂಹಾಸನವನ್ನೇರಿಸಿ ಕುಳಿತಿದ್ದು ಬಿಟ್ಟರೇ ಮತ್ಯಾವ ವಿಶೇಷ ಪ್ರೇಮವೆನೂ ಉಕ್ಕಿ ಬರಲಿಲ್ಲ. ಆದರೆ ಅವರು ಹಾಕಿಕೊಟ್ಟ ಸಂಸ್ಕಾರದಲ್ಲಿ ನಡೆಯುತ್ತಿದ್ದ ನನಗೆ ಪತಿಯೇ ಪರದೈವವಾಗಿದ್ದರು.ಬೆಳಿಗ್ಗೆ ಕೋಳಿ ಕೂಗುವ ವೇಳೆ ನದಿಯತ್ತ ತೆರಳಿ,ಪ್ರಾತ:ಕರ್ಮಾದಿಗಳನ್ನು ಮುಗಿಸಿ ಶುದ್ಧರಾಗಿ ಆಶ್ರಮದತ್ತ ಬಂದು ತಮ್ಮ ಎಂದಿನ ಧ್ಯಾನ-ಪೂಜೆಯನ್ನು ಮುಗಿಸುವ ವೇಳೆಗೆ,ನಾನೂ ಸ್ನಾನಾದಿಗಳನ್ನು ಮುಗಿಸಿ ಫಲಹಾರಾದಿಗಳನ್ನು ಉಪಹಾರಕ್ಕೆ ತಂದಿಡುತ್ತಿದ್ದೆ.
  ಅದೊಂದು ಕರಾಳದಿನವೆನ್ನಲೋ?ಕಣ್ತೆರೆಸಿದ ದಿನವೆನ್ನಲೋ ತಿಳಿಯದು. ಗೌತಮರು ಎಂದಿನಂತೆ ಕೋಳಿ ಕೂಗಿದೊಡನೆ ಎದ್ದು ನದಿ ತೀರಕ್ಕೆ ತೆರಳಿದ ಕೆಲ ನಿಮಿಷಕ್ಕೆ ಹಿಂತಿರುಗಿ ಬಂದರು.ಯಾವತ್ತೂ ಇಲ್ಲದ ಪ್ರೀತಿ-ಸಲುಗೆ ತೋರಿಸುತ್ತಾ ಬಳಿಸರಿದರು,ಸೆರಗು ಕೆಳಗೆ ಜಾರಿತ್ತು..ನನ್ನ ಸೌಂದರ್ಯವನ್ನು ಬಗೆಬಗೆಯಾಗಿ ವರ್ಣಿಸುತ್ತಾ ಬಿಗಿದಪ್ಪಿದರು,ಮೈಯೆಲ್ಲಾ ನವಿರೆದ್ದಿತ್ತು..ತಪೋಶಕ್ತಿಯಿಂದ ಬಳಿಬಂದಂದ್ದು ಇಂದ್ರನೆಂದು ತಿಳಿದು,ಅವನಿಗೆ ಬುದ್ಧಿ ಹೇಳಿ ಸಾಗಹಾಕಲು ಯತ್ನಿಸಿದಷ್ಟೂ ಸಮೀಪಿಸುತ್ತಿದ್ದ. ನನ್ನ ಚೆಲುವನ್ನು ಹೊಗಳುತ್ತಾ ಅಟ್ಟಕ್ಕೇರಿಸಿ,ಮಾತಲ್ಲೇ ಮರಳು ಮಾಡಿ,ಅವನ ಮೋಡಿಗೆ ಮೈಮರೆತು ಎಚ್ಚೆತ್ತುಕೊಳ್ಳುವಷ್ಟರಲ್ಲಿ  ನನ್ನನ್ನು ಸೂರೆಹೊಡೆದಿದ್ದ.ವಿವಾಹವಂತೂ ಆಗಲಿಲ್ಲ,ಕೊನೆಗೊಂದು ದಿನ ಅಹಲ್ಯೆಯನ್ನು ಸೌಂದರ್ಯವನ್ನು ಆಸ್ವಾದಿಸುವುದೇ ಎಂದು ಶಪಥ ಮಾಡಿ ಕುತಂತ್ರ ಮಾಡಿದ್ದನಂತೆ. ಗೌತಮರಿಗೆ ತಂತ್ರ ಮಾಡಿ ಕೇವಲ ಸೌಂದರ್ಯಕ್ಕಾಗಿ ನನ್ನನ್ನು ಅನುಭವಿಸಿದೆನೆಂದು ಇಂದ್ರ ಥರಥರನೆ ನಡುಗತೊಡಗಿದ್ದ.ಅವನ ಹೊಗಳಿಕೆಗೆ ಮರುಳಾಗಿ ಪತಿಗೆ ದ್ರೋಹ ಬರೆದೆನಲ್ಲಾ ಎಂದೂ ನಾನೂ ಕಂಪಿಸುತ್ತಿದ್ದೆ. ಅವನನ್ನೂ ಹೊರನೂಕುವಷ್ಟರಲ್ಲಿ ಮರಳಿ ಬಂದ ಗೌತಮರು,ಕ್ಷಣಮಾತ್ರದೀ ನಡೆದಿದ್ದೆಲ್ಲವ ಗ್ರಹಿಸಿದರು.
 ಕೋಪೊದ್ರಿಕ್ತರಾದ ಗೌತಮರು, ಸ್ತ್ರೀಯಲ್ಲಿ ಅಪಾರ ಆಸಕ್ತಿ ಹೊಂದಿರುವ ಇಂದ್ರನಿಗೆ ಸಹಸ್ರಯೋನಿಯಾಗುವಂತೆ ಶಪಿಸಿದರು.ನಾನು ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದೆ, ಬೇಡಿಕೊಂಡೆ,ಆದರೂ ಅವರ ಕೋಪ ಕಡಿಮೆಯಾಗಲಿಲ್ಲ.ನನ್ನ ಮುಖವನ್ನೂ ನೋಡದೆ,ನೆರಳೂ ತಾಕದಂತೆ ನಿಂತು 'ನಿನಗೆ ನಿನ್ನ ಸೌಂದರ್ಯದ ಮೇಲೆ ಅಪಾರ ಅಭಿಮಾನವಲ್ಲವೇ?ಇವತ್ತಿನಿಂದ ನಿನ್ನ ಸೌಂದರ್ಯ ಯಾರ ಕಣ್ಣಿಗೂ ಕಾಣದಿರಲಿ,ಕಲ್ಲಾಗು.. ಸಾಕ್ಷಾತ್ ವಿಷ್ಣು ಈ ಆಶ್ರಮಕ್ಕೆ ಕಾಲಿಡುವ ತನಕ ನಿನಗೆ ಈ ಶಾಪದಿಂದ ಮುಕ್ತಿಯಿಲ್ಲ.' ಎಂದು ಶಾಪವನ್ನಿತ್ತು ಹಿಮಾಲಯದತ್ತ ತೆರಳಿದರು.ನಾನು ಕಲ್ಲಾದೆ,ಜೊತೆಗೆ ನನ್ನ ಮನವೂ..
 ಇಷ್ಟು ದಿನ ಆಶ್ರಮದಲ್ಲಿ ನನಗೆ ಗೌರವ ಕೊಡುತ್ತಿದ್ದವರೆಲ್ಲಾ,ನನ್ನನ್ನಿಂದು ತುಚ್ಛವಾಗಿ ಕಾಣತೊಡಗಿದ್ದರು.ಈ ಶಿಲೆಕಲ್ಲನ್ನು ನೋಡಿಕೊಂಡು ಹೋಗುವ ನೆಪ ಮಾಡಿ, ನಡೆದಿದ್ದೆಲ್ಲವುದಕ್ಕೆ ಉಪ್ಪು-ಖಾರ ಸೇರಿಸಿ ಹೇಳುತ್ತಾ ಢಂಗೂರ ಸಾರುತ್ತಿದ್ದರು.ಇತ್ತ ಜನರಾಡುವ ಮಾತಿಗೆ ಕಿವಿಯಾಗಿ ಕಿವುಡಾಗಿ ಶಿಲೆಯಲ್ಲೊಂದು ಶಿಲೆಯಾಗಿದ್ದೆ.
         *ರಾಮಾಗಮನ-ಶಾಪಮುಕ್ತಿ*
  ಇದೆಲ್ಲಾ ಕಳೆದು ತುಂಬಾ ವರುಷಗಳೇ ಕಳೆಯಿತೋ ನಾ ತಿಳಿಯೆ.ಹಸಿವು,ಬಾಯರಿಕೆ,ತಿಂಗಳ ನೋವೆಲ್ಲಾ ಅನುಭವಿಸಿ ನರಳಿ ನರಳಿ ಕೊರಡಾಗಿದ್ದೆ. ಮೊದ ಮೊದಲು ನನ್ನ ಮನದಿಚ್ಛೆಯನ್ನೂ ಅರಿಯದೇ ಮದುವೆಯಾದಾಗಲಿನಿಂದ ಯಾವ ಸುಖವನ್ನೂ ನೀಡದೆ,ನಿಗ್ರಹಿಯಾಗಿದ್ದ ಪತಿಗೆ ತಕ್ಕ ಶಾಸ್ತಿ ಮಾಡಿದ್ದೆನೆಂದು ಬೀಗುತ್ತಿದ್ದೆ. ಸೌಂದರ್ಯವನ್ನು ಮಕರಂದ ಹೀರಿದ ದುಂಬಿಯಂತೆ ಹೀರಿ,ನಂತರ ಪರಿಸ್ಥಿತಿಯನ್ನು ಎದುರಿಸುವ ತಾಕತ್ತಿಲ್ಲದೇ ಥರಗುಟ್ಟುತ್ತಿದ್ದ ಹೆದರುಪುಕ್ಕಲ ಇಂದ್ರನ ಮೇಲೆ ಅಸಹ್ಯ ಹುಟ್ಟಿತ್ತು. ನನ್ನ ನೆರಳು ಬಿದ್ದರೂ ಅಪವಿತ್ರನಾಗುವೆನೆಂದು ದೂರದಿ ಬೆನ್ನಿ ತಿರುಗಿಸಿ ನಿಂತು ಶಾಪ ಹಾಕಿದ ಗೌತಮರ ಮೇಲೆ ಕೋಪಗೊಂಡೆ. ಕೊನೆಕೊನೆಗೆ ಕ್ಷಣಿಕ ಸುಖಕ್ಕಾಗಿ ಮೈಮರೆತು,ಕೈಹಿಡಿದವನೂ ಎಂತವನೇ ಆದರೂ ಅನುಸರಿಸಿಕೊಂಡು ಹೋಗಬೇಕಾದ ಪತ್ನಿ ಧರ್ಮ ಮರೆತದ್ದಕ್ಕೆ ತಳಮಳಿಸುತ್ತಿದ್ದೆ.ಕಾಲಕ್ರಮೇಣ ಮನವೊಂದು ಸ್ಥಿಮಿತಕ್ಕೆ ಬಂದ ಮೇಲೆ ನನ್ನ ತಪ್ಪೆನೆಂದು ಅರಿವಾಗಿತ್ತು. ಪಶ್ಚಾತ್ತಾಪದ ಬೇಗೆಯಲ್ಲಿ ಕುದಿಯತೊಡಗಿದ್ದೆ,ರಾಮನಿಗಾಗಿ ಕಾಯತೊಡಗಿದ್ದೆ. 
  ಅದೊಂದು ಸುದಿನ,ನನ್ನ ಜೀವನದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ರಾಮನವತಾರದಲ್ಲಿದ್ದ ವಿಷ್ಣುವಿನ ಆಗಮನವಾಯ್ತು ನಮ್ಮ ಆಶ್ರಮದೊಳು. ಅವನ ಸ್ಪರ್ಶಮಾತ್ರದಿಂದ,ನಾನು ಶಾಪಮುಕ್ತಳಾದೆ. ಶಿಲೆಯಿಂದೆದ್ದು ಬಂದೆ ಪರಿಶುದ್ಧಳಾಗಿ, ಪಶ್ಚಾತ್ತಾಪದ ಬೆಂಕಿಯ ಪುಟಕ್ಕಿಟ್ಟ ಚಿನ್ನದಂತೆ. ಅನುದಿನವೂ, ಅನುಕ್ಷಣವೂ ನೊಂದಿದ್ದವಳಿಗೆ ಗೌತಮರ ಮಾತೆಲ್ಲವೂ ನೆನಪಿತ್ತು. ಯಾವಾಗ ಶಾಪಮುಕ್ತಳಾಗಿ ಗೌತಮರ ಸೇರುವೆನೋ?ಯಾವಾಗ ಅವರಲ್ಲಿ ಕ್ಷಮೆಯಾಚಿಸುವೆನೋ? ವಿಷ್ಣುವಿನ ಅವತಾರಿ ಯಾವಗ ಬರುವನೋ?' ಎಂದೆಲ್ಲಾ ಪರಿತಪಿಸುತ್ತಿರುವ ನನಗೆ ಶಾಪದಿಂದ ಮುಕ್ತಿ ಸಿಕ್ಕಿತ್ತು. ಅದಾದ ಮೇಲೆ ಹಿಮಾಲಯದಲ್ಲಿ ಗೌತಮರನ್ನು ಸೇರಿ ಮರು ಜೀವನ ಶುರುಮಾಡಿದ್ದೆ.ಈಗ ನಾನು ಪತೀತೆಯಾಗದೇ ಪತಿವೃತೆಯಾಗಿದ್ದೆ...
  'ಅಹಲ್ಯಾ' ಎಂಬ ಗೌತಮರ ಕೂಗು ನೆನಪಿನಾಳದಿಂದ ಅವಳನ್ನೆಬ್ಬಿಸಿ ಒಳಗೆ ಕರೆದೊಯ್ದಿತು..
-ಶುಭಶ್ರೀ ಭಟ್ಟ

No comments:

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...