Tuesday 16 May 2017

ಅಮ್ಮಾ! ಎಲ್ಲಿರುವೆ?

(ಪ್ರತಿಲಿಪಿ ಕನ್ನಡದಲ್ಲಿ ಪ್ರಕಟವಾದ ಕಥೆ)



                               --ಒಂದು--
      ಎಲ್ಲೋ ಕತ್ತಲೆಯಾಳದಲಿ ಅಡಗಿ ಮುದುರಿ ಕುಳಿತಂತಿದೆ ನನ್ನ ಸ್ಥಿತಿ. ಮೃದುಮನದ ಹೆಣ್ಣಾಕೆ,ಈ ಭಾವುಕ ಮನಸ್ಸಿನವಳ ಹೆಸರು 'ಅಮ್ಮಾ' ಅಂತ ಗೊತ್ತು.ನನ್ನನ್ನು ತನ್ನಲ್ಲಿ ಹೊತ್ತಿದ್ದಾಳೆ ಅಂತಾನೂ ಗೊತ್ತು.ನನಗೆ ಒಂದೆ ಸಮ ಮುದುರಿ ಕುಳಿತಿದ್ದು ಬೇಸರವಾದಾಗ ಕಾಲನ್ನೆತ್ತಿ ಬೀಸುತ್ತೆನೆ,ಆಗ ಅಮ್ಮ ಮೆಲ್ಲಗೆ ನನ್ನ ಸವರಿದ ಅನುಭವವಾಗುತ್ತದೆ. ಆದರೆ ಈಗೀಗ ಅಮ್ಮ ಬರೀ ಅಳುತ್ತಾಳೆ,ಕಾರಣದರಿವಿಲ್ಲ ನನಗೆ. ಹೇಗೆ ಕೇಳಲಿ ನಾನು?ಅಮ್ಮ ಅತ್ತಾಗೆಲ್ಲ ದಹಿಸಿಹೋಗುತ್ತೆನೆ ನಾನು,ದುಃಖದಿಂದ.ನನ್ನ ಮುದ್ದು ಅಮ್ಮನಿಗೆ ಸಮಾಧಾನ ಹೇಳಲು ಆಗದ ನನ್ನ ಸ್ಥಿತಿಗೆ ಬೇಸರವಿದೆ ನನಗೆ.ಏನೂ ತೋಚದೆ ಅಮ್ಮ ಅತ್ತಾಗ ನಾನೂ ಅಳುತ್ತೆನೆ.ನಾನು ಒದ್ದು ಚೆಂಡಾಟವಾಡಿದಾಗ,ಈಗ ಎಂದಿನಂತೆ ಅಮ್ಮ ನನ್ನ ಸವರುವುದಿಲ್ಲ.ಮೊದಲೆಲ್ಲಾ ನನ್ನ ಮುಟ್ಟಿದಂತೆ ಸವರಿ ಮುದ್ದುಗರೆಯುತ್ತಾ ಮಾತನಾಡುತಿದ್ದ ಅಮ್ಮ,ಈಗ ಮೌನಗೌರಿಯಂತಾಗಿದ್ದಾಳೆ.ಅಮ್ಮ ಮಲಗಿದಾಗ ನನಗೆ ಬೇಡವೆಂದರೂ ಕಣ್ಮುಚ್ಚಿ ಬರುತ್ತದೆ.ಮಲಿಗಿದಾಗಲೂ ಅಮ್ಮ ಬೀಡೊ ನಿಟ್ಟುಸಿರು ಗುಡುಗಿನಂತೆ ನನ್ನ ಹೆದರಿಸುತ್ತದೆ.ನನಗ್ಯಾಕೋ ಅಮ್ಮ ನನ್ನಿಂದ ದೂರವಾಗ್ತಿದಾಳೆ ಅನ್ನಿಸತೊಡಗಿದೆ.ಏಷ್ಟೋ ದಿನ ಅಮ್ಮಾ ಊಟಾನೇ ಮಾಡೊದಿಲ್ಲ,ನನಗಿಲ್ಲಿ ಹಸಿವಾಗ್ತಿರೊದೂ ಅಮ್ಮಂಗೆ ತಿಳಿಯೊಲ್ವ? ನನಗಿಲ್ಲಿದ್ದು ಸಾಕಾಗಿದೆ.ಬೇಗ ಹೊರಗೆ ಬರಬೇಕು,ಈ ಕತ್ತಲೆಯ ಸೀಳಿಕೊಂಡು ನನ್ನ ಮುದ್ದು ಅಮ್ಮನಿಗೆ ಬೆಳಕಾಗಿ.ಅಮ್ಮ ಅಳುವಾಗ ನಾನೇ ಸಮಾಧಾನಿಸಬೇಕು,ನನ್ನ ಹತ್ರ ಅಮ್ಮ ಮಾತನಾಡದ್ದಕ್ಕೆ ಬೈಯಬೇಕು,ಊಟ ಮಾಡದ್ದಕ್ಕೆ ಗದರಿಸಬೇಕು. ಅಯ್ಯೋ! ಈ ಅಮ್ಮ ನನಗೆ ಮಾತಾಡ್ಲಿಕ್ಕೆ ಬೀಡೊದಿಲ್ಲ,ಬೇಗ ನಿದ್ರೆ ಮಾಡ್ತಾಳೆ..ಆಆಆ ಹ್ಮಾಂ.......

                            --ಎರಡು--
    'ಅಯ್ಯೋ ನೋವು...' ಅಂತ ಅಮ್ಮ ಸಿಕ್ಕಾಪಟ್ಟೆ ಕಿರಿಚಾಡುತ್ತಿದ್ದಾಳೆ,ಒಂದೆ ಸಮ ಒದ್ದಾಡುತ್ತಿದ್ದಾಳೆ. ಪಾಪ ಅಮ್ಮ! ಏನಾಯ್ತೋ ಗೊತ್ತಿಲ್ಲ,ಉರುಳಾಡುತ್ತಿದ್ದಾಳೆ..ನನಗೂ ಅಳು ಬರ್ತಿದೆ.ಅಯ್ಯೋ ಅಮ್ಮ ನನಗೇನಾಯ್ತು?ನನ್ನ ಯಾರೋ ಹೊರದೂಡಿದಂತಾಗುತಿದೆ.ಅಂದ್ರೀಗ ನಾನು ನನ್ನಮ್ಮನ ಬಳಿಗೆ? ತುಂಬಾ ಖುಷಿಯಾಗ್ತಿದೆ,ಜೊತೆಗೆ ಎನೋ ಆತಂಕ!!ಅಬ್ಬಾ!ಏಷ್ಟು ಬೆಳಕು.ಕಣ್ಬಿಡಲೂ ಆಗ್ತಿಲ್ಲ..ತುಂಬಾ ಅಳುಬರ್ತಿದೆ,ಯಾರೋ ಎತ್ತಿಕೊಳ್ತಿದ್ದಾರೆ.ಆದರೆ ಅಮ್ಮನ ಬಳಿಗೇ ಬಿಡ್ತಿಲ್ಲ.ಅತ್ತೂ-ಅತ್ತೂ ಸುಸ್ತಾಯ್ತು,ಎಲ್ಲರ ಮೇಲೆ ಕೋಪ ಬರ್ತಿದೆ ನನಗೆ.ಅಯ್ಯಬ್ಬಾ!ಅಂತೂ ನನ್ನನ್ನೂ ಅಮ್ಮನ ಕೈಲಿ ಕೊಟ್ರು.ಅಮ್ಮಾ ನನ್ನನ್ನ ಹೂವಂತೆ ನನ್ನೆತ್ತಿಕೊಂಡು ಎದೆಹಾಲ ಕೊಟ್ಟಳು.ನೆತ್ತಿಗೆ ಮುತ್ತಿಟ್ಟಳು ಆದರೆ ಕಣ್ಣಲ್ಲಿ ನೀರಿತ್ತು,ಅದೇಷ್ಟು ಬೆಚ್ಚಗಿತ್ತು ಅಮ್ಮನ ಮಡಿಲು..ತಲೆನೇವರಿಸಿದಳು ಅಮ್ಮಾ,ಮಂಪರಂತಾಗಿ ನಿದ್ದೆ ಬಂತು.ಜೋರಾದ ನಿದ್ದೆಯಿಂದೆದ್ದು ಸುತ್ತ ನೋಡಿದೆ ಅಮ್ಮನಿರಲಿಲ್ಲ ಅಲ್ಲೆಲ್ಲೂ.ಕಾದೆ-ಕಾದೆ ಅಮ್ಮ ಬರಲೇ ಇಲ್ಲ.ಛೇ! ನಾ ನಿದ್ದೆ ಮಾಡಲೇ ಬಾರದಿತ್ತು.ಈ ಅಮ್ಮನಿಗೆ ನನ್ಮೇಲೆ ಕೋಪ ಬಂದು ಬಿಟ್ಟುಹೋದಳಾ?ಅಮ್ಮಾ! ನಾನಿನ್ನ ಮಡಿಲಲ್ಲಾಡಬೇಕಮ್ಮಾ,ನಿನ್ನ ಮುದ್ದಿಸಿ ಸಮಾಧಾನಿಸಬೇಕಮ್ಮಾ ಬೇಗ ಬಾ..ನಿನ್ನ ಅಳುವಿಗೆ ಕಾರಣಬೇಕಮ್ಮಾ ನನಗೆ..ನನಗೂ ಹೇಳದೆ ಎಲ್ಲಿ ಹೋದೆಯಮ್ಮಾ?ನನಗೆ ಮತ್ತೆ ಅಳುವುಕ್ಕಿ ಬಂದಿತ್ತು, ಜೊತೆಗೆ ನಿಯಂತ್ರಿಸಲಾಗದಷ್ಟು ಬಿಕ್ಕು..ಜೋರಾಗಿ ಬಿಕ್ಕಳಿಸತೊಡಗಿದೆ.ಬಿಳಿಯಂಗಿಯುಟ್ಟ ಹುಡುಗಿಯರಿಬ್ಬರು ಓಡಿಬಂದು ನನ್ನನ್ನೆತ್ತಿಕೊಂಡರು,ಅಮ್ಮನಷ್ಟು ಸುಖವಾಗಿಲ್ಲದಿದ್ದರೂ ಯಾರೋ ನನ್ನ ಜೊತೆಗಿದ್ದಾರೆಯೆಂಬ ಭಾವನೆ ಚೆನ್ನಾಗಿತ್ತು..ಒಬ್ಬಳು ಬಾಟಲಿಯಲ್ಲಿದ್ದ ಹಾಲನ್ನು ಕುಡಿಸಿದಳು,ಹಸಿವಾಗಿತ್ತು ಕುಡಿದೆ.ಅಮ್ಮನ ಅಮೃತದ ರುಚಿಕಂಡಿದ್ದ ನನಗೆ ಉಳಿದಿದ್ದೆಲ್ಲಾ ಸಪ್ಪೆಯೆನಿಸಿತು..
  ಆ ಹುಡುಗಿಯರಿಬ್ಬರೂ ನನ್ನಮ್ಮನ ಬಗ್ಗೆ ಮಾತಾಡಿಕೊಳ್ತಿದ್ದನ್ನು ನೋಡಿ ಕಿವಿ ನೆಟ್ಟಗಾಯ್ತು  ನಂದು,ಕೇಳತೊಡಗಿದೆ ಕಿವಿ ನಿಮರಿಸಿ 'ಅಲ್ವೆ ಗಾಯತ್ರಿ!ಅದೇಂತ ಕೆಟ್ಟ ಜನ್ರೇ ಮಾರಾಯ್ತಿ?ಪಾಪ ಇಂತಾ ಚೆಂದದ ಕೂಸನ್ನ ಈ ಆಸ್ಪತ್ರೆಲಿ ಬಿಟ್ಟಿಕ್ ಹೋಗಿರಲೇ..ಈ ಮಗುಗೆ ಅಪ್ಪ-ಅಮ್ಮನ ಜೊತೆ ಬದ್ಕು ಯೋಗಿಲ್ಲ ಬಿಡು. ಪಾಪದ್ದೆ ಕೂಸು ದೇವಾ... ಹೆಂಗ್ ನೋಡ್ತಿತ್ತು ನೋಡು,ನನ್ ಹೊಟ್ಟೆಲೆಲ್ಲಾ ಸಂಕ್ಟಾಗ್ತದ್ಯೇ ಪಾಪ' ಎಂಬ ಲೋಚಗುಟ್ಟುವಿಕೆ ಕೇಳಿ ನನಗೆ ತಲೆ ಸುತ್ತಿದಂತಾಗಿ, ಕಣ್ಣೆಳೆಯಿತು..
  
                             --ಮೂರು--
     ಮರುದಿನ ಕಣ್ಣುತೆರೆಯುವಷ್ಟರಲ್ಲಿ ನಾನು ಅನಾಥಾಶ್ರಮದ ಹೊಸಿಲಲ್ಲಿದ್ದೆನೆಂದು ತಿಳಿಯಿತು..ಇಲ್ಲಿನ ದಾದಿಗಳು ನನ್ನಮ್ಮನಂತೆ ತಲೆಸವರಿ ಪ್ರೀತಿ ಮಾಡೊದಿಲ್ಲ, ಮಡಿಲಲ್ಲಿ ಮಲಗಿಸಿ ಮುದ್ದು ಮಾಡೊದಿಲ್ಲ. ಈ ನನ್ನಮ್ಮ ನನ್ಯಾಕೇ ಬಿಟ್ಟುಹೋದ್ಲು? ಎಂಬ ಪ್ರಶ್ನೆಗೆ ಉತ್ತರವಿಲ್ಲದೆ ಅಳುವುಕ್ಕಿ ಬಂತು..ದಾದಿಯ ಬೈಗುಳ ಕೇಳಿ ಅಳುಮರೆತು ಸುಮ್ಮನಾದರೂ,ಅಳುತ್ತಿದ್ದೆ ಮನದೊಳಗೇ..'ಅಮ್ಮಾ! ನಿನ್ನ ಈ ಮುದ್ದು ಗೊಂಬೆ,ಚೆಂದನದ ಪುತ್ಠಳಿ ನಿನಗಿಂದು ಬೇಡವಾದೆನಾ? ಅಷ್ಟೆಲ್ಲಾ ಮುದ್ದು ಮಾಡ್ತಿದ್ದೊಳ್ಗೆ ನನ್ನನ್ನಾ ಅನಾಥ ಮಗುವನ್ನಾಗಿ ಮಾಡಲಿ ಮನಸ್ಸಾದರೂ ಹೇಗೆ ಬಂತು?ಅಮ್ಮ..ಅಮ್ಮ!ಇಲ್ಯಾರೂ ನನ್ನ ಪ್ರೀತಿ ಮಾಡೊಲ್ಲ,ಮುದ್ದು ಮಾಡೊಲ್ಲ ನಿನ್ನಂತೆ..ನಿನ್ನ ಮಡಿಲಲ್ಲಿ ಮೈಮರೆತು ಮಾಡಿದ ಮಂಪರು ನಿದ್ರೆ  ಮತ್ತೆ ಸಿಗೋಲ್ವ ನನಗೆ? ನಿನಗೆ ನಾನ್ಯಾಕೆ ಇಷ್ಟವಾಗಿಲ್ಲ ಅಮ್ಮಾ? ಹೆಣ್ಣು ಅಂತಲೇ?ಇಲ್ಲಮ್ಮ!ಹಾಗೆನೂ ಇಲ್ಲಾ ಅಲ್ವಾ?ನೀನೆಷ್ಟು ಒಳ್ಳೆಯವಳು, ನಿನಗೆ ನಾನಂದ್ರೆ ತುಂಬಾ ಇಷ್ಟ ಅಂತ ಗೊತ್ತು ನನಗೆ.  ನೀ ಮತ್ತೆ ಬಂದೇ ಬರ್ತಿಯಾ ನನ್ನ ಬಳಿ ಅಲ್ವಾ ಅಮ್ಮ. ಈ ಪ್ರಶ್ನೆಗೆಲ್ಲಾ ಉತ್ತರಿಸಲೂ ಯಾರೂ ಇರಲಿಲ್ಲ. ಈ ಬಾರಿ ಅಳು ತಡೆಯಲಾಗಲಿಲ್ಲ.ಬಿಕ್ಕಿ-ಬಿಕ್ಕಿ ಅತ್ತೂ-ಅತ್ತೂ ಸುಸ್ತಾಗಿತ್ತು.ಬರುವ ಮಂಜಾವು ನನಗೆ ಶುಭವನ್ನೀಯುವುದೆಂದ ಭರವಸೆಯಿಂದ,ಅಮ್ಮಾ ಮತ್ತೆ ಬಂದೆ ಬರುವಳೆಂಬ ನಂಬಿಕೆಯೊಡನೆ ನಿದ್ರೆ ಬಂತು..
            -----

   ಎಲ್ಲಕ್ಕೂ ಸಾಕ್ಷಿಯಾದ  ಸೂರ್ಯ ಮಾತ್ರ 'ಎಲ್ಲಿರುವೆಯಮ್ಮಾ?' ಎನ್ನುತ್ತಲೇ ಮಗುವ ಅಮ್ಮನ ಹುಡುಕಿ ತರಲು ಪಡುವಣದತ್ತ ಹೊರಟ,ಮರುದಿನ ಮತ್ತೆ ಬರುವಾಗ ಅಮ್ಮನ ಕರೆತರುವ ಭರವಸೆಯನ್ಹೊತ್ತು..

-ಶುಭಶ್ರೀ ಭಟ್ಟ

No comments:

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...