Monday 11 September 2017

"ಗೋಟಡಕೆಗೆ ಸಿಕ್ಕ ಮಿಠಾಯಿ"



ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂಹಲ,ಹತ್ತಿಕ್ಕಲಾಗದ ಆಸೆ,ತಿಂದಷ್ಟೂ ಬೇಕೆಂಬ ಬಯಕೆ. ನಾವು ಚಿಕ್ಕವರಿದ್ದಾಗ 'ಪೋಂಯ್ಕ್ ಪೋಂಯ್ಕ್' ಎಂದು ಪೀಪೀ ಒತ್ತುತ್ತಾ 'ಬೊಂಬಾಯ್ ಮಿಠಾಯಿ'ಯ ಮಾಮ ಬರುತ್ತಿದ್ದರೆ, ಅದೆಲ್ಲೇ ಇದ್ದರೂ ಕಿವಿ ನೆಟ್ಟಗಾಗುತ್ತಿದ್ದವು. ಇನ್ನೇನು ಗೆಲ್ಲುವ ಹಂತದಲ್ಲಿದ್ದ ಆಟವನ್ನೂ ಬಿಟ್ಟು, ಉಣ್ಣುತ್ತಿದ್ದ ಕೊನೆತುತ್ತನ್ನೂ ಕೆಳಗಿಟ್ಟು, ಸ್ನಾನ ಮಾಡುವಾಗ ಕೊನೆಯಲ್ಲಿ ಹೇಳುವ 'ಗಂಗೇಚ ಯಮುನೇಚೈವ'ವನ್ನು  ಅಲ್ಲಿಗೇ ತುಂಡು ಮಾಡಿ 'ಸನ್ನಿಧಿಂ ಕುರು' ಎಂದಷ್ಟೇ ಜೋರಾಗಿ ಕೂಗಿ, ನೀರೆತ್ತುತ್ತಿದ್ದರೆ ಕೊಡಪಾನವನ್ನು ಬಾವಿಯಲ್ಲೇ ಜಾರಿಬಿಟ್ಟು, ಅಂಬೆಗರು ತಾಯದನಿ ಕೇಳು ಛಂಗನೇ ಜಿಗಿದು ನೆಗೆದು ಉಸಿರುಬಿಟ್ಟು ಓಡುತ್ತಿದ್ದೆವು. 'ಮಾಮಾ! ಇಲ್ಲೆ ನಿಂತ್ಕಳಿ,ಆಯಿ ಹತ್ರಾ ದುಡ್ ತಕಂಡ್ ಈಗ್ ಬರ್ತೆ,ಮುಂದ್ ಹೋಗ್ಬೇಡಿ' ಎಂದವನಿಗೆ ತಾಕೀತು ಮಾಡಿ,ಅಮ್ಮನ ಬಳಿ ಕಾಸು ಕೀಳಲು ಯಾವ ರೀತಿಯ ಹೊಸತಂತ್ರವನ್ನು ಉಪಯೋಗಿಸಬೇಕು ಎಂದು ಮಹಾನ್ ಪಂಡಿತನಂತೇ ಯೋಚಿಸುತ್ತಾ ಮನೆಗೆ ಹಿಂದೋಡುತ್ತಿದ್ದೆವು. ಅಲ್ಲಿ ಉಳಿದ ಮಕ್ಕಳ ಮುಂದೆ ತೋರಿಸಿದ್ದ ಗತ್ತು-ಗಮ್ಮತ್ತು-ಸೊಕ್ಕಿನ ಭಾವವೆಲ್ಲಾ ಮನೆಗೆ ಬರುವಷ್ಟರಲ್ಲಿ 'ದೀನ'ವಾಗಿ ಬದಲಾಗಿರುತ್ತಿತ್ತು. ದುಡ್ಡಿಗಾಗಿ ಕಾಡಿಸಿ-ಪೀಡಿಸಿ ಕಣ್ಣೀರುಗರೆದು ಐದು ರೂಪಾಯಿ ತೆಗೆದುಕೊಂಡು ಬರುವಷ್ಟರಲ್ಲಿ, ಮಾಮನಾಗಲೇ ಕಾದು-ಕಾದು ಮುಂದೆಲ್ಲೋ ಹೋಗಿರುತ್ತಿದ್ದ ತನ್ನ ಬಡ ಸೈಕಲ್ ತುಳಿಯುತ್ತಾ. 'ಮಾಮಾ ಮಾಮಾ ನಿಂತ್ಕಳಾ,ಮಾಮಾ' ಎಂದು ಊರಿಗೆಲ್ಲಾ ಕೇಳಿಸುವಂತೆ ಗಂಟಲು ಹರಿದು ಕೂಗಿ ಅವನನ್ನು ನಿಲ್ಲಿಸಿ ಓಡೋಡುತ್ತಾ ಎದುರುಸಿರಿನ ಜೊತೆಗೆ ಕೈಯಲ್ಲಿ ಬೊಂಬಾಯ್ ಮಿಠಾಯ್ ಬಿದ್ದೊಡನೆ ಅದೇನೋ ಸಾರ್ಥಕ ಭಾವ..ತಂಗಿಯು ತನ್ನ ಕೈಯಲ್ಲಿದ್ದ ಬೊಂಬಾಯ್ ಮಿಠಾಯಿಯನ್ನು  ಸರಕ್ಕನೇ ತಿಂದು ಮುಗಿಸಿದರೆ,ನಾನದನ್ನು ಬೇಕೂಂತಲೇ ಮೆಲ್ಲನೆ ಮೆಲ್ಲುತ್ತಾ,ಅವಳ ಹೊಟ್ಟೆಯುರಿಸಿ ಅಮ್ಮನ ಕೈಲಿ ಸಮಾ ಬೈಸಿಕೊಳ್ಳುತ್ತಿದ್ದೆ.
      ಹೀಗೊಂದು ದಿನ ಪ್ರತಿಸಲದಂತೇ 'ಬೊಂಬಾಯ್ ಮಿಠಾಯಿ' ಮಾಮ ಬಂದ ಎಂದಿನ ತನ್ನ ಪೀಪೀ ಸದ್ದಿನೊಡನೆ. ಆ ಸದ್ದು ಕೇಳಿದೊಡನೆ ಎಂದಿನಂತೆ ನನ್ನ ಥಕಧಿಮಿತಾಂ ಶುರುವಾಗಿತ್ತು. ಕಾಸು ಕೊಡೆಂದು ನಾನು,ತಂಗಿಗೇ ಜ್ವರ ನೀನ್ ತಿಂದ್ರೆ ಅವಳೂ ಹಠ ಮಾಡ್ತಾಳೆ ಅಂತ ಅಮ್ಮ. ಹಠ-ಅಳು ತಾರಕ್ಕೇರಿ ಸಣ್ಣ ಯುದ್ಧವೊಂದು ನಡೆದು,ದಾಸವಾಳದ ಶೆಳೆಯಿಂದ ಒಂದೇಟೂ ಬಿದ್ದು,ಅಮ್ಮ ಸ್ನಾನಕ್ಕೆ ಹೊರಟಳು ತಾತ್ಕಾಲಿಕ ಕದನ ವಿರಾಮ ಘೋಷಿಸಿ. ನನಗೋ ಗುಬ್ಬಿಮರಿಯಂತೇ ಮಲಗಿದ್ದ ತಂಗಿಯ ಮೇಲೆ ಹುಸಿಕೋಪ,ಜ್ವರದಿಂದ ಮಲಗಿದ್ದಾಳೆಂದು ಪೆಟ್ಟು ಹಾಕುವ ಮನಸ್ಸೂ ಬರುತ್ತಿಲ್ಲಾ(ಇಲ್ಲಾಂದ್ರೆ ಅಂಡಿಗೆರಡೆಟು ಬಿಳ್ತಿತ್ತು). ಹಾಗಂತಾ ಹೋಗ್ಲಿಬಿಡು ಅಂತ 'ಬೊಂಬಾಯ್ ಮಿಠಾಯಿ' ತ್ಯಾಗ ಮಾಡ್ಲಿಕ್ಕಂತೂ ಮನಸ್ಸೇ ಇಲ್ಲ. ಕೊನೆಗೊಂದು ಉಪಾಯ ಮಾಡಿ ಓಡಿದೆ,ಮಾಮನ ಹತ್ರ ಹೋಗಿ 'ಮಾಮ! ನಿಮ್ಮನೇ ಕರ್ಕಿ ಅಲ್ವನಾ?ಅಲ್ಲಿ ನನ್ನ್ ದೊಡ್ಡಪ್ಪಾ-ದೊಡ್ಡಮ್ಮಾ ಇರ್ತು.ಅವರತ್ರ ದುಡ್ಡ್ ತಕಳ್ತ್ಯಾ? ಆ ರೈಸ್ ಮಿಲ್ ಹತ್ರಾ ಅವ್ರ ಮನೆ." ಅಂತೆಲ್ಲಾ ಅಲವತ್ತುಕೊಂಡೆ. ಅವನಿಗೆ ತಕ್ಷಣಕ್ಕೆ ಗೊತ್ತಾಯ್ತು ಅಂತ ಕಾಣುತ್ತೆ,ಸಮಾ ಬೈದು ವಾಪಸ್ ಕಳುಹಿಸಿದ್ದ. ಸಪ್ಪೆಮೋರೆ ಹೊತ್ತು ಮನೆಗೆ ಬಂದವಳಿಗೆ ಕಾಣಿಸಿದ್ದು ಅಂಗಳದಲ್ಲಿ ಒಣಗಿಸಿಟ್ಟ ರಾಶಿ ರಾಶಿ ಗೋಟಡಿಕೆ,ಎನೋ ಆಲೋಚನೆಯಿಂದ ಮುಖವರಳಿತ್ತು. ಹಾಕಿಕೊಂಡ ಫ್ರಾಕ್ ಅನ್ನು ಮೇಲಕ್ಕೆತ್ತಿ ,ಅದರೊಳಗೆ ಮುಷ್ಟಿಗೆ ಸಿಕ್ಕಷ್ಟು ಅಡಿಕೆ ತುಂಬಿಸಿ ಮತ್ತೆ ಮಾಮಾನ ಬಳಿಯೋಡಿದೆ.ಸದಾ ಬಾಯ್ತುಂಬಾ ಕವಳ ಮೆಲ್ಲುವ ಮಾಮನಿಗೆ ಗೋಟಡಿಕೆ ಕಂಡಿದ್ದೆ ಜೊಲ್ಲು ಜಾರಿಬೀಳುವ ಮೊದಲೇ ಒಳಗೆಳೆದುಕೊಂಡದ್ದು ಸ್ಪಷ್ಟವಾಗಿ ಕಾಣಿಸಿತ್ತು. ಖುಶಿಯಿಂದ ಎರಡೆರಡು ಮಿಠಾಯಿ ಪ್ಯಾಕೆಟ್ ಕೈಯಲ್ಲಿಟ್ಟ,ನಾನೂ ಖುಶಿಯಿಂದ ಜಿಗಿದು ಹಿಂತಿರುಗುವಷ್ಟರಲ್ಲಿ ರಪ್ಪನೇ ಬೆನ್ನಮೇಲೆ ಏಟೊಂದು ಬಿತ್ತು,ನೋಡಿದರೆ ಸತೀಶಣ್ಣ ನಿಂತಿದ್ದ ಕಣ್ಣುಗೆಂಪು ಮಾಡಿಕೊಂಡು.'ಅಲ್ವಾ ಅದು ಸಣ್ ಕೂಸು ಗುತ್ತಾಗುದಿಲ್ಲ. ನಿಂಗ್ ಬುದ್ಧಿ ಬೇಡ್ವನಾ? ಅಡ್ಕೆ ತಕಬಂದ್ ಕೊಟ್ರೆ ಬೈಯ್ಯುದು ಬಿಟ್ಟ್ ತಕಳ್ತ್ಯಲ ಮಾರಾಯ. ಇನ್ನೊಂದ್ಸಲಾ ಹಿಂಗ್ ಮಾಡ್ರೆ ಊರಿಗ್ ಕಾಲ್ ಇಡುಕ್ ಬಿಡುದಿಲ್ಲಾ ನೋಡ್ಕಾ' ಎಂಬ ಸತೀಶಣ್ಣನ ಕೋಪದ ಮಾತಿಗೆ 'ತಪ್ಪಾಯ್ತು ಒಡೆದಿರೆ' ಎಂದಷ್ಟೇ ಹೇಳಿ ಮಾಮನೂ ಸೈಕಲ್ ಕಿತ್ತ. ಅಡಿಕೆ ಮರಳಿ ತೆಗೆದುಕೊಂಡು ದುಡ್ಡು ಕೊಡುವಷ್ಟರಲ್ಲೇ ಮಾಮ ಮರೆಯಾಗಿದ್ದ. ಮನೆಗೆ ಬಂದ ಸತೀಶಣ್ಣ ನನ್ನ ಪರವಾಗಿ ಮಾತನಾಡಿ ಅಮ್ಮನಿಗೇ ಬೈದಂತೇ ಮಾಡಿದಾಗ ನನಗೆ ಒಳಗೊಳಗೇ ಖುಶಿಯಾಗಿತ್ತು. ಅದಾದ್ಮೇಲೆ ಅಮ್ಮ ಯಾವತ್ತೂ ದುಡ್ಡು ಕೊಡಲು ಸತಾಯಿಸಲಿಲ್ಲಾ,ನನಗೂ ಹಠ ಮಾಡಬೇಕೆಂದು ಅನಿಸಲೇ ಇಲ್ಲ.
    ಈಗಲೂ ಊರಲ್ಲಿ ಒಮ್ಮೊಮ್ಮೆ 'ಬೊಂಬಾಯಿ ಮಿಠಾಯಿ' ಮಾರುವವ ಬರುತ್ತಾನೆ. ಸುಕ್ಕುಹಿಡಿದ ಸೈಕಲ್ ಜಾಗದಲ್ಲಿ ತಳ್ಳುಗಾಡಿಯೊಂದು ಬಂದಿದೆ, 'ಬೊಂಬಾಯಿ ಮಿಠಾಯಿ ಮಾಮ' ಈಗ 'ಹೋಯ್ ಹಲ್ಲೋ' ಆಗಿ ಬದಲಾಗಿದ್ದಾನೆ. ಅದೇನೋ ಈಗೀನ ಮಕ್ಕಳಿಗೆ ನಮ್ಮಂತೆ ಸಣ್ಣಪುಟ್ಟ ವಿಷಯದಲ್ಲಿ ಆಸಕ್ತಿಯೂ ಇಲ್ಲಾ,ಆಸೆಯೂ ಇಲ್ಲ. ತಿನ್ನಬೇಕು ಅನ್ನಿಸಿದರೆ ತೆಗೆದುಕೊಂಡು ತಿನ್ನುತ್ತಾರಷ್ಟೇ. ಬೆಂಗಳೂರಲ್ಲಂತೂ 'ಬೊಂಬಾಯ್ ಮಿಠಾಯಿ'ಯನ್ನು ಕೇಳುವವರೇ ಕಮ್ಮಿ. ಆದರೂ ಕೆಂಗುಲಾಬಿ ಬಣ್ಣದ ಆ ಕೊಟ್ಟೆ ಕಂಡೊಡನೆ ನನ್ನ ಮುಖವರಳುತ್ತೆ,ಊರಿನ ಸುಮಧರ ನೆನಪುಗಳು ಹೀಗೆ ಕಣ್ಮುಂದೆ ತೇಲಿ ಬರುತ್ತೆ.
-ಶುಭಶ್ರೀ ಭಟ್ಟ,ಬೆಂಗಳೂರು

2 comments:

Unknown said...

ಪದಗಳು ತುಂಬಾ ಅದ್ಭುತವಾಗಿವೆ. ಪ್ರತಿ ಒಂದೊಂದು ಪದ ಮನ ಮುಟ್ಟುವಂತಿದೆ. ನಾ ಕಂಡ ಬೊಂಬಾಯಿ ಮಿಠಾಯಿ. ಸವಿ ನೆನಪು

Amaresh said...

chennagi barediruviri.

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...