Monday 11 September 2017

"ಗೋಟಡಕೆಗೆ ಸಿಕ್ಕ ಮಿಠಾಯಿ"



ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂಹಲ,ಹತ್ತಿಕ್ಕಲಾಗದ ಆಸೆ,ತಿಂದಷ್ಟೂ ಬೇಕೆಂಬ ಬಯಕೆ. ನಾವು ಚಿಕ್ಕವರಿದ್ದಾಗ 'ಪೋಂಯ್ಕ್ ಪೋಂಯ್ಕ್' ಎಂದು ಪೀಪೀ ಒತ್ತುತ್ತಾ 'ಬೊಂಬಾಯ್ ಮಿಠಾಯಿ'ಯ ಮಾಮ ಬರುತ್ತಿದ್ದರೆ, ಅದೆಲ್ಲೇ ಇದ್ದರೂ ಕಿವಿ ನೆಟ್ಟಗಾಗುತ್ತಿದ್ದವು. ಇನ್ನೇನು ಗೆಲ್ಲುವ ಹಂತದಲ್ಲಿದ್ದ ಆಟವನ್ನೂ ಬಿಟ್ಟು, ಉಣ್ಣುತ್ತಿದ್ದ ಕೊನೆತುತ್ತನ್ನೂ ಕೆಳಗಿಟ್ಟು, ಸ್ನಾನ ಮಾಡುವಾಗ ಕೊನೆಯಲ್ಲಿ ಹೇಳುವ 'ಗಂಗೇಚ ಯಮುನೇಚೈವ'ವನ್ನು  ಅಲ್ಲಿಗೇ ತುಂಡು ಮಾಡಿ 'ಸನ್ನಿಧಿಂ ಕುರು' ಎಂದಷ್ಟೇ ಜೋರಾಗಿ ಕೂಗಿ, ನೀರೆತ್ತುತ್ತಿದ್ದರೆ ಕೊಡಪಾನವನ್ನು ಬಾವಿಯಲ್ಲೇ ಜಾರಿಬಿಟ್ಟು, ಅಂಬೆಗರು ತಾಯದನಿ ಕೇಳು ಛಂಗನೇ ಜಿಗಿದು ನೆಗೆದು ಉಸಿರುಬಿಟ್ಟು ಓಡುತ್ತಿದ್ದೆವು. 'ಮಾಮಾ! ಇಲ್ಲೆ ನಿಂತ್ಕಳಿ,ಆಯಿ ಹತ್ರಾ ದುಡ್ ತಕಂಡ್ ಈಗ್ ಬರ್ತೆ,ಮುಂದ್ ಹೋಗ್ಬೇಡಿ' ಎಂದವನಿಗೆ ತಾಕೀತು ಮಾಡಿ,ಅಮ್ಮನ ಬಳಿ ಕಾಸು ಕೀಳಲು ಯಾವ ರೀತಿಯ ಹೊಸತಂತ್ರವನ್ನು ಉಪಯೋಗಿಸಬೇಕು ಎಂದು ಮಹಾನ್ ಪಂಡಿತನಂತೇ ಯೋಚಿಸುತ್ತಾ ಮನೆಗೆ ಹಿಂದೋಡುತ್ತಿದ್ದೆವು. ಅಲ್ಲಿ ಉಳಿದ ಮಕ್ಕಳ ಮುಂದೆ ತೋರಿಸಿದ್ದ ಗತ್ತು-ಗಮ್ಮತ್ತು-ಸೊಕ್ಕಿನ ಭಾವವೆಲ್ಲಾ ಮನೆಗೆ ಬರುವಷ್ಟರಲ್ಲಿ 'ದೀನ'ವಾಗಿ ಬದಲಾಗಿರುತ್ತಿತ್ತು. ದುಡ್ಡಿಗಾಗಿ ಕಾಡಿಸಿ-ಪೀಡಿಸಿ ಕಣ್ಣೀರುಗರೆದು ಐದು ರೂಪಾಯಿ ತೆಗೆದುಕೊಂಡು ಬರುವಷ್ಟರಲ್ಲಿ, ಮಾಮನಾಗಲೇ ಕಾದು-ಕಾದು ಮುಂದೆಲ್ಲೋ ಹೋಗಿರುತ್ತಿದ್ದ ತನ್ನ ಬಡ ಸೈಕಲ್ ತುಳಿಯುತ್ತಾ. 'ಮಾಮಾ ಮಾಮಾ ನಿಂತ್ಕಳಾ,ಮಾಮಾ' ಎಂದು ಊರಿಗೆಲ್ಲಾ ಕೇಳಿಸುವಂತೆ ಗಂಟಲು ಹರಿದು ಕೂಗಿ ಅವನನ್ನು ನಿಲ್ಲಿಸಿ ಓಡೋಡುತ್ತಾ ಎದುರುಸಿರಿನ ಜೊತೆಗೆ ಕೈಯಲ್ಲಿ ಬೊಂಬಾಯ್ ಮಿಠಾಯ್ ಬಿದ್ದೊಡನೆ ಅದೇನೋ ಸಾರ್ಥಕ ಭಾವ..ತಂಗಿಯು ತನ್ನ ಕೈಯಲ್ಲಿದ್ದ ಬೊಂಬಾಯ್ ಮಿಠಾಯಿಯನ್ನು  ಸರಕ್ಕನೇ ತಿಂದು ಮುಗಿಸಿದರೆ,ನಾನದನ್ನು ಬೇಕೂಂತಲೇ ಮೆಲ್ಲನೆ ಮೆಲ್ಲುತ್ತಾ,ಅವಳ ಹೊಟ್ಟೆಯುರಿಸಿ ಅಮ್ಮನ ಕೈಲಿ ಸಮಾ ಬೈಸಿಕೊಳ್ಳುತ್ತಿದ್ದೆ.
      ಹೀಗೊಂದು ದಿನ ಪ್ರತಿಸಲದಂತೇ 'ಬೊಂಬಾಯ್ ಮಿಠಾಯಿ' ಮಾಮ ಬಂದ ಎಂದಿನ ತನ್ನ ಪೀಪೀ ಸದ್ದಿನೊಡನೆ. ಆ ಸದ್ದು ಕೇಳಿದೊಡನೆ ಎಂದಿನಂತೆ ನನ್ನ ಥಕಧಿಮಿತಾಂ ಶುರುವಾಗಿತ್ತು. ಕಾಸು ಕೊಡೆಂದು ನಾನು,ತಂಗಿಗೇ ಜ್ವರ ನೀನ್ ತಿಂದ್ರೆ ಅವಳೂ ಹಠ ಮಾಡ್ತಾಳೆ ಅಂತ ಅಮ್ಮ. ಹಠ-ಅಳು ತಾರಕ್ಕೇರಿ ಸಣ್ಣ ಯುದ್ಧವೊಂದು ನಡೆದು,ದಾಸವಾಳದ ಶೆಳೆಯಿಂದ ಒಂದೇಟೂ ಬಿದ್ದು,ಅಮ್ಮ ಸ್ನಾನಕ್ಕೆ ಹೊರಟಳು ತಾತ್ಕಾಲಿಕ ಕದನ ವಿರಾಮ ಘೋಷಿಸಿ. ನನಗೋ ಗುಬ್ಬಿಮರಿಯಂತೇ ಮಲಗಿದ್ದ ತಂಗಿಯ ಮೇಲೆ ಹುಸಿಕೋಪ,ಜ್ವರದಿಂದ ಮಲಗಿದ್ದಾಳೆಂದು ಪೆಟ್ಟು ಹಾಕುವ ಮನಸ್ಸೂ ಬರುತ್ತಿಲ್ಲಾ(ಇಲ್ಲಾಂದ್ರೆ ಅಂಡಿಗೆರಡೆಟು ಬಿಳ್ತಿತ್ತು). ಹಾಗಂತಾ ಹೋಗ್ಲಿಬಿಡು ಅಂತ 'ಬೊಂಬಾಯ್ ಮಿಠಾಯಿ' ತ್ಯಾಗ ಮಾಡ್ಲಿಕ್ಕಂತೂ ಮನಸ್ಸೇ ಇಲ್ಲ. ಕೊನೆಗೊಂದು ಉಪಾಯ ಮಾಡಿ ಓಡಿದೆ,ಮಾಮನ ಹತ್ರ ಹೋಗಿ 'ಮಾಮ! ನಿಮ್ಮನೇ ಕರ್ಕಿ ಅಲ್ವನಾ?ಅಲ್ಲಿ ನನ್ನ್ ದೊಡ್ಡಪ್ಪಾ-ದೊಡ್ಡಮ್ಮಾ ಇರ್ತು.ಅವರತ್ರ ದುಡ್ಡ್ ತಕಳ್ತ್ಯಾ? ಆ ರೈಸ್ ಮಿಲ್ ಹತ್ರಾ ಅವ್ರ ಮನೆ." ಅಂತೆಲ್ಲಾ ಅಲವತ್ತುಕೊಂಡೆ. ಅವನಿಗೆ ತಕ್ಷಣಕ್ಕೆ ಗೊತ್ತಾಯ್ತು ಅಂತ ಕಾಣುತ್ತೆ,ಸಮಾ ಬೈದು ವಾಪಸ್ ಕಳುಹಿಸಿದ್ದ. ಸಪ್ಪೆಮೋರೆ ಹೊತ್ತು ಮನೆಗೆ ಬಂದವಳಿಗೆ ಕಾಣಿಸಿದ್ದು ಅಂಗಳದಲ್ಲಿ ಒಣಗಿಸಿಟ್ಟ ರಾಶಿ ರಾಶಿ ಗೋಟಡಿಕೆ,ಎನೋ ಆಲೋಚನೆಯಿಂದ ಮುಖವರಳಿತ್ತು. ಹಾಕಿಕೊಂಡ ಫ್ರಾಕ್ ಅನ್ನು ಮೇಲಕ್ಕೆತ್ತಿ ,ಅದರೊಳಗೆ ಮುಷ್ಟಿಗೆ ಸಿಕ್ಕಷ್ಟು ಅಡಿಕೆ ತುಂಬಿಸಿ ಮತ್ತೆ ಮಾಮಾನ ಬಳಿಯೋಡಿದೆ.ಸದಾ ಬಾಯ್ತುಂಬಾ ಕವಳ ಮೆಲ್ಲುವ ಮಾಮನಿಗೆ ಗೋಟಡಿಕೆ ಕಂಡಿದ್ದೆ ಜೊಲ್ಲು ಜಾರಿಬೀಳುವ ಮೊದಲೇ ಒಳಗೆಳೆದುಕೊಂಡದ್ದು ಸ್ಪಷ್ಟವಾಗಿ ಕಾಣಿಸಿತ್ತು. ಖುಶಿಯಿಂದ ಎರಡೆರಡು ಮಿಠಾಯಿ ಪ್ಯಾಕೆಟ್ ಕೈಯಲ್ಲಿಟ್ಟ,ನಾನೂ ಖುಶಿಯಿಂದ ಜಿಗಿದು ಹಿಂತಿರುಗುವಷ್ಟರಲ್ಲಿ ರಪ್ಪನೇ ಬೆನ್ನಮೇಲೆ ಏಟೊಂದು ಬಿತ್ತು,ನೋಡಿದರೆ ಸತೀಶಣ್ಣ ನಿಂತಿದ್ದ ಕಣ್ಣುಗೆಂಪು ಮಾಡಿಕೊಂಡು.'ಅಲ್ವಾ ಅದು ಸಣ್ ಕೂಸು ಗುತ್ತಾಗುದಿಲ್ಲ. ನಿಂಗ್ ಬುದ್ಧಿ ಬೇಡ್ವನಾ? ಅಡ್ಕೆ ತಕಬಂದ್ ಕೊಟ್ರೆ ಬೈಯ್ಯುದು ಬಿಟ್ಟ್ ತಕಳ್ತ್ಯಲ ಮಾರಾಯ. ಇನ್ನೊಂದ್ಸಲಾ ಹಿಂಗ್ ಮಾಡ್ರೆ ಊರಿಗ್ ಕಾಲ್ ಇಡುಕ್ ಬಿಡುದಿಲ್ಲಾ ನೋಡ್ಕಾ' ಎಂಬ ಸತೀಶಣ್ಣನ ಕೋಪದ ಮಾತಿಗೆ 'ತಪ್ಪಾಯ್ತು ಒಡೆದಿರೆ' ಎಂದಷ್ಟೇ ಹೇಳಿ ಮಾಮನೂ ಸೈಕಲ್ ಕಿತ್ತ. ಅಡಿಕೆ ಮರಳಿ ತೆಗೆದುಕೊಂಡು ದುಡ್ಡು ಕೊಡುವಷ್ಟರಲ್ಲೇ ಮಾಮ ಮರೆಯಾಗಿದ್ದ. ಮನೆಗೆ ಬಂದ ಸತೀಶಣ್ಣ ನನ್ನ ಪರವಾಗಿ ಮಾತನಾಡಿ ಅಮ್ಮನಿಗೇ ಬೈದಂತೇ ಮಾಡಿದಾಗ ನನಗೆ ಒಳಗೊಳಗೇ ಖುಶಿಯಾಗಿತ್ತು. ಅದಾದ್ಮೇಲೆ ಅಮ್ಮ ಯಾವತ್ತೂ ದುಡ್ಡು ಕೊಡಲು ಸತಾಯಿಸಲಿಲ್ಲಾ,ನನಗೂ ಹಠ ಮಾಡಬೇಕೆಂದು ಅನಿಸಲೇ ಇಲ್ಲ.
    ಈಗಲೂ ಊರಲ್ಲಿ ಒಮ್ಮೊಮ್ಮೆ 'ಬೊಂಬಾಯಿ ಮಿಠಾಯಿ' ಮಾರುವವ ಬರುತ್ತಾನೆ. ಸುಕ್ಕುಹಿಡಿದ ಸೈಕಲ್ ಜಾಗದಲ್ಲಿ ತಳ್ಳುಗಾಡಿಯೊಂದು ಬಂದಿದೆ, 'ಬೊಂಬಾಯಿ ಮಿಠಾಯಿ ಮಾಮ' ಈಗ 'ಹೋಯ್ ಹಲ್ಲೋ' ಆಗಿ ಬದಲಾಗಿದ್ದಾನೆ. ಅದೇನೋ ಈಗೀನ ಮಕ್ಕಳಿಗೆ ನಮ್ಮಂತೆ ಸಣ್ಣಪುಟ್ಟ ವಿಷಯದಲ್ಲಿ ಆಸಕ್ತಿಯೂ ಇಲ್ಲಾ,ಆಸೆಯೂ ಇಲ್ಲ. ತಿನ್ನಬೇಕು ಅನ್ನಿಸಿದರೆ ತೆಗೆದುಕೊಂಡು ತಿನ್ನುತ್ತಾರಷ್ಟೇ. ಬೆಂಗಳೂರಲ್ಲಂತೂ 'ಬೊಂಬಾಯ್ ಮಿಠಾಯಿ'ಯನ್ನು ಕೇಳುವವರೇ ಕಮ್ಮಿ. ಆದರೂ ಕೆಂಗುಲಾಬಿ ಬಣ್ಣದ ಆ ಕೊಟ್ಟೆ ಕಂಡೊಡನೆ ನನ್ನ ಮುಖವರಳುತ್ತೆ,ಊರಿನ ಸುಮಧರ ನೆನಪುಗಳು ಹೀಗೆ ಕಣ್ಮುಂದೆ ತೇಲಿ ಬರುತ್ತೆ.
-ಶುಭಶ್ರೀ ಭಟ್ಟ,ಬೆಂಗಳೂರು

Wednesday 2 August 2017

ಮನತಾಕಿದ ಅಕ್ಕು ನಾಟಕ

  ಮನತಾಕಿದ ಅಕ್ಕು ನಾಟಕ






ನಾನು ವೈದೇಹಿಯವರ ಅಭಿಮಾನಿ ಓದುಗಳು,ಅವರ ಕಥೆಗಳಲ್ಲಿ ಬರುವ ಪ್ರತೀ ಪಾತ್ರಗಳು ಮನದಲ್ಲಿ ಅಚ್ಚೊತ್ತಿಬಿಡುವಂತಿರುತ್ತವೆ.ವೈದೇಹಿಯವರು ರಚಿಸಿದ ಕಥೆಗಳಲ್ಲಿ ಬರುವ ಮೂರು ಅದ್ಭುತವಾದ ಪಾತ್ರಗಳಾದ 'ಪುಟ್ಟಮ್ಮತ್ತೆ', 'ಅಮ್ಮಚ್ಚಿ' ಮತ್ತು 'ಅಕ್ಕು'ವನ್ನು ಆರಿಸಿಕೊಂಡು ರಚಿಸಲ್ಪಟ್ಟ ನಾಟಕವೇ 'ಅಕ್ಕು'. ಶ್ರೀಮತಿ ಚಂಪಾ ಶೆಟ್ಟಿ ನಿರ್ದೇಶನದಲ್ಲಿ 'ರಂಗಮಂಟಪ' ಕಲಾವಿದರ ಸಾನಿಧ್ಯದಲ್ಲಿ ಕಳೆದ ಶುಕ್ರವಾರ ದಿ.28-07-2017ರಂದು ರಂಗಶಂಕರದಲ್ಲಿ ಪ್ರದರ್ಶನಗೊಂಡಿತು. ಮೊದಲಬಾರಿಗೆ ನಾಟಕ ನೋಡಲು ರಂಗಶಂಕರಕ್ಕೆ ಬಂದ ನಮಗೆ ಅಲ್ಲಿ ಸೇರಿರುವ ಜನರ ಕಂಡು ಅಚ್ಚರಿ-ಸಂತೋಷ. ಇನ್ನೂ ರಂಗಭೂಮಿಯನ್ನು ಪ್ರೀತಿಸುವ ಜನ ಇದ್ದಾರಲ್ಲಾ ಎಂಬ ಸಣ್ಣದೊಂದು ನೆಮ್ಮದಿಯ ಮುಗುಳುನಗು. ಒಳಹೊಕ್ಕು ಪ್ರದರ್ಶನ ನೋಡಿದಾಗ,ಯಾವುದೇ ರೀ-ಟೇಕ್ ಇಲ್ಲದೇ  ಅಭಿನಯಿಸಿದ ಕಲಾವಿದರ ಸಹಜಾಭಿನಯ ಕಂಡು ಅನಿಸಿದ್ದು ಸಿನೆಮಾವೆಲ್ಲಾ ನಿವಾಳಿಸಿ ಹಾಕಬೇಕು ನಾಟಕದ ಮುಂದೆ ಎಂದು. ಅಷ್ಟು ಸಹಜವಾಗಿ ಅದ್ಭುತವಾಗಿತ್ತು ಪ್ರದರ್ಶನ.
     ಮದುವೆಯೆಂಬ ಬಂಧನದಲ್ಲಿ ಸಿಲುಕಿದ ಹೆಣ್ಣೊಬ್ಬಳು ಪತಿಯಿಂದ ಪರಿತ್ಯಕ್ತೆಯಾಗಿ ತವರು ಮನೆಗೆ ನೂಕಲ್ಪಡುತ್ತಾಳೆ. ತಾನು,ತನ್ನ ಗಂಡ,ತಮಗೊಂದು ಮುದ್ದು ಮಗು,ಈ ಪುಟ್ಟ ಸಂಸಾರದ ಆಸೆ,ಹರೆಯದ ನೂರುಕನಸ ಹೊತ್ತು ಪಯಣಿಸುತ್ತಿದ್ದವಳಿಗೆ ಧಿಡೀರ್ ಆಘಾತ ತಡೆದುಕೊಳ್ಳಲಾಗದೇ ಅರೆಹುಚ್ಚಿಯಾಗಿಬಿಡುತ್ತಾಳೆ. ಸಮಾಜದ ಕುಟುಂಬದ ನಿಂದನೆಗಳಿಗೆ ಕಿವಿಗೊಟ್ಟು ರೋಸಿ ಜಿಗುಪ್ಸೆಯಿಂದ ತಲೆಕೆಟ್ಟು ಅರೆಹುಚ್ಚಿಯಾಗಿಯೇ ಉಳಿದವರಿಗೂ ಪಾಠ ಹೇಳುವಂತ ಹೆಣ್ಣುಮಗಳೇ ಈ ಅಕ್ಕು. 'ಅಕ್ಕು'ವಿನ ಪಾತ್ರದಲ್ಲಿ ಚಂಪಾ ಶೆಟ್ಟಿಯವರು ಅದೇಷ್ಟು ಅಲೌಕಿಕ ಅನುಭವ ಕಟ್ಟಿಕೊಟ್ಟಿದ್ದಾರೆಂದರೆ,ಅವರ ಪಾತ್ರ ಪರಿಚಯವಾಗುವಾಗ ನೆರೆದ ಪ್ರೇಕ್ಷಕರ ಕಿವಿಗಡಚಿಕ್ಕುವ ಚಪ್ಪಾಳೆಯೇ ಸಾಕ್ಷಿಯಾಗಿತ್ತು.
     ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ,ಹುಟ್ಟಿದಾರು ತಿಂಗಳಿಗೆ ತಬ್ಬಲಿಯಾಗಿ ಪರರ ಆಶ್ರಯದಲ್ಲಿ ಬೆಳೆದು,ಮದುವೆಯೂ ಆಗಿ ವರುಷದೊಳಗೇ ವಿಧವೆಯಾದ ಹೆಣ್ಣುಮಗಳ ಕೈಯಲ್ಲಿ ಮಲ್ಲಿಗೆಯೆಸಳಂತ ಮುದ್ದುಗೊಂಬೆ. ಯೌವನದ ಹಸಿವು-ಬಾಯಾರಿಕೆಗಳನ್ನೆಲ್ಲಾ ಹರೆಯದಲ್ಲೇ ಬಲಿಕೊಟ್ಟು,ಮುಂದಿನ ಜೀವನವನ್ನೂ-ಜೀವವನ್ನೂ ಮಗಳಿಗಾಗಿ ನಂತರದ ದಿನದಲ್ಲಿ ಮೊಮ್ಮಗಳಿಗಾಗಿ ಕೈಯಲ್ಲಿ ಹಿಡಿದು,ಸಮಾಜದ ವ್ಯಂಗ್ಯಕ್ಕೆಲ್ಲಾ ಬೆಲೆಕೊಡದೇ, ಬೇರೆಯವರ ಆಶ್ರಯದಲ್ಲಿ ಅಕ್ಷರಶಃ ಕೆಲಸದಾಳಾಗಿ ದುಡಿಯುತ್ತಿರುವ ಅಜ್ಜಿಯ ಪಾತ್ರವೇ 'ಪುಟ್ಟಮ್ಮತ್ತೆ'. ಈ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದವರು 'ರಾಧಾಕೃಷ್ಣ ಉರಾಳ'ರು. ಈ ಪಾತ್ರ ಪರಿಚಯ ಮಾಡಿದಾಗ ನನಗೆ ನನ್ನ ಕಿವಿಯನ್ನೇ ನಂಬಲಾಗಲಿಲ್ಲ. ಒಬ್ಬ ಪುರುಷ ಸ್ತ್ರೀಯಾಗಿ,ಅದರಲ್ಲಿಯೂ ಬೊಚ್ಚುಬಾಯಿ ಮುದುಕಿಯಾಗಿ ಅಭಿನಯಿಸುವುದಿದೆಯಲ್ಲಾ ಅಬ್ಬಾ ಹೇಗೇ ವರ್ಣಿಸಲಿ? 
    ಹೆಣ್ಣಿನ ಸ್ವಾಂತಂತ್ರ್ಯವನ್ನು ಸೂಕ್ಷ್ಮವಾಗಿ ಪ್ರತಿಭಟಿಸುತ್ತಾ,ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗ ಕೊಡದಂತೆ ತಿರುಗಿ ನಿಲ್ಲುವ ಹೆಣ್ಣಿವಳು. ಪುಟ್ಟಮ್ಮತ್ತೆಯ ದುರಂತ ಕಥೆಯಲ್ಲಿ ಬರುವ ಇನ್ನೋರ್ವ ಜೀವವೇ ಮೊಮ್ಮಗಳು ರೆಬೆಲ್ ಎನ್ನಬಹುದಾದ 'ಅಮ್ಮಚ್ಚಿ'. ಹುಟ್ಟಿದಾರಭ್ಯ ಅಜ್ಜಿಯ ಮಡಿಲಲ್ಲಿ ಬೆಳೆದ ಅಮ್ಮಚ್ಚಿಗೆ ಅವಳದ್ದೇ ಆದ ಸಣ್ಣಪುಟ್ಟ ಆಸೆ ಕನಸುಗಳು ಹಲವಾರು. ತನ್ನ ಪುಟ್ಟ ಗೆಳತಿ ಸೀತೆಯೊಂದಿಗೆ ಮಾತನಾಡುತ್ತಾ ಸ್ತ್ರೀ ಸಂವೇದನೆಯನ್ನು ಮೆಲ್ಲನೆ ಮೀಟುವ ದಿಟ್ಟ ಹೆಣ್ಣು,ಕೊನೆಗೆ ಅನಿವಾರ್ಯವಾಗಿ ತನ್ನಿಚ್ಛೆಯ ವಿರುದ್ಧ ಅಪ್ಪನ ವಯಸ್ಸಿನವನೊಡನೆ ಮದುವೆಯಾಗಿ,ಅದಕ್ಕೆ ಶರಣಾಗುವ ರೀತಿ ಮನಕ್ಕೆ ತಾಕಿ ಬಿಡುತ್ತದೆ. ಕೊನೆಯ ತನಕ ಕಾಡುವ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದು 'ಲಹರಿ ತಂತ್ರಿ' ಎಂಬ ಪುಟ್ಟ ಹುಡುಗಿ.
    'ಅಕ್ಕು' ನಾಟಕದಲ್ಲಿ ಹೆಚ್ಚಾಗಿ ಗಮನ ಸೆಳೆಯುವುದು ಅಭಿನಯ ವಿಭಾಗ. ಅಕ್ಕುವಿನ ಅಣ್ಣನಾಗಿ ಬಿ.ಜಿ.ರಾಮಕೃಷ್ಣರದು ಪಾತ್ರಕ್ಕೆ ತಕ್ಕ ಅಭಿನಯ,ವಾಸುವಿನ ಪಾತ್ರದಲ್ಲಿ 'ವಿಶ್ವನಾಥ ಉರಾಳ'ರ ಅಭಿನಯಕ್ಕೆ ಫುಲ್ ಮಾರ್ಕ್ಸ್. ವಾಸುವಿನ ಪಾತ್ರ ನೋಡಿದ ಮಲೆನಾಡು-ಕರಾವಳಿಯ ಯಾರಿಗಾದರೂ ತನ್ನ ಅಪ್ಪನೋ ಚಿಕ್ಕಪ್ಪನೋ ಮಾವನೋ ಲಕ್ಕಿಬೆರಲು ಹಿಡಿದು ಹೊಡೆಯಲು ಬಂದಿದ್ದು ನೆನಪಾಗದೇ ಇರಲಿಕ್ಕಿಲ್ಲ. ಶೇಷಮ್ಮನ ಪಾತ್ರದಲ್ಲಿ 'ಗೀತಾ ಸುರತ್ಕಲ್' ಅವರದು ಗಮನಾರ್ಹ್ ಅಭಿನಯ. ಪುಟ್ಟ ಮಾಣಿಯಾಗಿ ಅಭಿನಯಿಸಿದ 'ಅದಿತಿ ಉರಾಳ', ವೆಂಕಪ್ಪಯ್ಯನಾಗಿ 'ಪ್ರಕಾಶ್ ಶೆಟ್ಟಿ', ಅಜ್ಜನಾಗಿ 'ಎಸ್.ರಾಜಕುಮಾರ', ಹೀಗೇ ಹಲವರದು ಸಹಜ ಅಭಿನಯ. ಎಲ್ಲರ ಅಭಿನಯಕ್ಕೆ ಸಾಥ್ ಕೊಟ್ಟಿದ್ದು ಕಾಶಿನಾಥ್ ಪತ್ತಾರರ ಸಂಯೋಜನೆಯ ಹಿತವಾದ ಹಿನ್ನೆಲೆ ಸಂಗೀತ.. ಅದರಲ್ಲೂ 'ಜೋ ಜೋ ಲಾಲಿ' ಹಾಡಂತೂ ಮನೆಗೆ ಬಂದರೂ ಗುನುಗುವಂತಿದೆ, 'ಶವಕ್ಕೆ ಹಾಕುವ ಹೂವು' ಕೂಡ ಮನಮುಟ್ಟುವಂತಿದೆ. ಇದರ ಜೊತೆಗೆ ರಂಗವಿನ್ಯಾಸವೂ ಅಚ್ಚುಕಟ್ಟಾಗಿದೆ. 
    ಕುಂದಾಪುರ ಕಡೆಯ ಹವ್ಯಕ ಕನ್ನಡದ ಭಾಷೆಯನ್ನು ಅಳವಸಿಕೊಂಡ ನಾಟಕ ನೋಡಿ ಮುಗಿಸುವಷ್ಟರಲ್ಲಿ ಸಮಯವಾದುದೇ ತಿಳಿಯುವುದಿಲ್ಲ. ಪಾತ್ರ ಪರಿಚಯವೆಲ್ಲಾ ಮುಗಿದು ಜನರೆಲ್ಲಾ ಮನೆಗೆ ತೆರಳಲು ಎದ್ದರೂ ನಾವೆಲ್ಲೋ ನಮ್ಮ ಮನೆಯಲ್ಲೇ ಕುಳಿತಿದ್ದೆವೆ,ಅಕ್ಕ-ಪಕ್ಕದ ಮನೆಯ ಕಥೆಯನ್ನೇ ನೋಡುತ್ತಿದ್ದೆವೆ ಎಂಬಷ್ಟು ಸಹಜವಾದ ಅನುಭವ. ಯಾವ ಆಡಂಭರದ ಆಟಾಟೋಪವಿಲ್ಲದೆ.ಇಂತದ್ದೊಂದು ಅಮೋಘ ಅನುಭವವನ್ನು ಕಟ್ಟಿಕೊಡುವ ಕಲೆಯಿನ್ನೂ ರಂಗಭೂಮಿಯಲ್ಲಿ ಜೀವಂತವಾಗಿರುವುದು ಕಂಡು ಮನಸಲ್ಲಿ ಸಂತಸದ ಜೀಕು. 
  ಈ ನಾಟಕ ಮತ್ತೆ ಆಗಸ್ಟ್ 6ರಂದು ಭಾನುವಾರ ಮಧ್ಯಾಹ್ನ 3.30 ಗೆ ಮತ್ತು ಅದೇ ದಿನ ಸಂಜೆ 7.30 ಗೆ ಪ್ರದರ್ಶನಗೊಳ್ಳಲಿದೆ.ಕುಟುಂಬ ಸಮೇತ ನೀವೂ ಹೋಗಿ.ಇಂತದ್ದೊಂದು ಅನುಭವ ಕಟ್ಟಿಕೊಂಡು ಬನ್ನಿ.ರಂಗಭೂಮಿ ಕಲೆಯನ್ನೂ,ಕಲಾವಿದರನ್ನೂ ಪ್ರೋತ್ಸಾಹಿಸಿ..
  -ಶುಭಶ್ರೀ ಭಟ್ಟ,ಬೆಂಗಳೂರು

Wednesday 19 July 2017

ಬೊಮ್ಮಿಮಾಸ್ತಿಯ ಗಾಳಿಮದ್ದು


 ಬೊಮ್ಮಿಮಾಸ್ತಿಯ ಗಾಳಿಮದ್ದು 
    ಅವನೊಬ್ಬ ಆರೂವರೆ-ಎಳಡಿ ಎತ್ತರದ ಕಟ್ಟುಮಸ್ತಾಗಿ ಕಾಣಿಸುವ ಆಳು,ವಯಸ್ಸಾದ್ದರಿಂದ ಜೋತುಬಿದ್ದ ದೇಹ,ಹೆಸರು ಬೊಮ್ಮಿಮಾಸ್ತಿ.'ಹಾಲಕ್ಕಿ ಗೌಡ' ಎಂಬ ವಿಶಿಷ್ಟ ಸಮುದಾಯದವ.ಊರಲ್ಲಿರುವ ಎಮ್ಮೆ-ದನಗಳನ್ನು ಗೋರೆಗುಡ್ಡೆಯ ಹುಲ್ಲಿನ ಬಯಲಿಗೆ ಹೊಡೆದುಕೊಂಡು ಹೋಗಿ,ಸಂಜೆಯೊಳಗೆ ಊರಿಗೆ ಬರುವ ದನಗಾಹಿ.ಊರಿನ ಬ್ರಾಹ್ಮಣ ಹೆಂಗಸರು ಕೊಡುವ ಚಾಕಣ್ಣು,ದಪ್ಪ್ ದೋಸೆಯೇ ಬೆಳಗ್ಗಿನ ತಿಂಡಿ.ಸಂಜೆ ಬಂದು ಗಂಜಿ ಕುಡಿದು ಹೊರಟನೆಂದರೆ ಅದು ಜೂಜಿಗೆಂದೇ ಅರ್ಥ.ಅವನ ಜೂಜಿನ ಸಂಖ್ಯೆಯನ್ನು ನನ್ನ ತಂಗಿಯೇ ಹೇಳಬೇಕು,ಕಾರಣವಿಷ್ಟೇ ಅವಳು ತಮಾಷೆಗೆ ಹೇಳಿದ ಸಂಖ್ಯೆ ಅವನಿಗೆ ಕೆಲವು ಸಲ ಅದೃಷ್ಟ ತಂದಿಟ್ಟಿತ್ತು. ಜೂಜಲ್ಲಿ ಗೆದ್ದ ಪುಡಿಗಾಸಲ್ಲಿ ಒಂದು ಕೊಟ್ಟೆ ಸಾರಾಯಿ ಪ್ಯಾಕೆಟ್ ಜೊತೆ ಒಂದೆರಡು ಬಂಗಡೆ ಮೀನು ಹಿಡಿದು ಮನೆಗೆ ಬರುತ್ತಿದ್ದ.ಅವನು ಬರುವಾಗ ದಿನವೂ ಅಡ್ಡಗಟ್ಟುವ ನಾವು, "ಹೊಳೆಬಾಳೆಕಾಯಿ(ಮೀನು) ತಂದೀನ್ರಾ,ಇದ್ನೆಲ್ಲಾ ಹೈಂಗ್ರು(ಹವ್ಯಕರು) ಕಾಂಬುಕಾಗ" ಎಂದು ಗೋಗರೆದರೂ ಅವನು ಮೀನು ತೋರಿಸುವವರೆಗೆ ಬಿಡುತ್ತಿರಲಿಲ್ಲ.ರೇಷನ್ ಅಕ್ಕಿಯ ಗಂಜಿಯ ಅನ್ನ ಜೊತೆಗೆ ಮೀನ್ ಸಾರು ತಿಂದು,ಕೊಟ್ಟೆ ಸಾರಾಯಿ ಕುಡಿದು ಮಲಗಿದರೆ ಬೆಳಗಿನ ತನಕ ನಿರ್ಜೀವ ಅವ.
      ದೈತ್ಯದೇಹಿ,ಬ್ರಹ್ಮಚಾರಿ,ಚಿಕ್ಕಮಕ್ಕಳ ಗುಮ್ಮ,ದನ ಕಾಯುವವ,ಮೀನು ತೋರಿಸುವವ, ಜೂಜಾಡುವವ, ನಿರುಪದ್ರವಿ ಹೀಗೆ ಹತ್ತು ಹಲವು ಬಿರುದುಗಳನ್ನೊಳಗೊಂಡ ಬೊಮ್ಮಿಮಾಸ್ತಿಯಲ್ಲಿನ ಮತ್ತೊಂದು ಮುಖ ನಾಟಿವೈದ್ಯನ ಮುಖ ಪರಿಚಯವಾದ ಸಂದರ್ಭ ಮಾತ್ರ ಬಲು ವಿಚಿತ್ರವಾಗಿತ್ತು. ಅದೊಂದು ದಿನ ಎಂದಿನಂತೆ ಬೆಳಿಗ್ಗೆ ನಸುಕಿನಲ್ಲೇ ಎದ್ದ ಕೆಲಸದ ಮಾಸ್ತಿಯ ಜೊತೆ ಅವರಮನೆ ಕೋಳಿಗೂ ಬೆಳಗಾಗಿತ್ತು.ಬಾಗಿಲು ತೊಳೆದು,ರಂಗೋಲಿಯಿಟ್ಟು ಕೊಟ್ಟಿಗೆಯಲ್ಲಿನ ಸರಸ್ವತಿಗೆ ಹುಲ್ಲುಹಾಕಿ ಮನೆಗೆ ಬಂದವಳೇ ಕುತ್ತಿಗೆ ನೋವು ಬೆನ್ನು ನೋವೆಂದು ಮಲಗಿದಳು.ವಯಸ್ಸಾದ ಕಾರಣಕ್ಕೆ ಬಂದ ಕಸುವಿನಿಂದೆಂದು ಕಷಾಯ ಕೊಟ್ಟರು,ಅಪ್ಪ ಕುಮಟೆಯಿಂದ ಔಷಧಿ ತಂದುಕೊಟ್ಟರು.ವಾರವೆರಡು ಕಳೆದರೂ ಬೆನ್ನುನೋವು ಕಡಿಮೆಯಾಗದಾಗ ನನ್ನಜ್ಜಿಗೇನೋ ಸಂಶಯ. ಅವಳ ಬದಲಿಗೆ ಕೆಲಸಕ್ಕೆ ಬಂದ ಅವಳ ಮಗಳು ತಿಮ್ಮಕ್ಕನನ್ನು "ಅಲ್ವೇ ತಿಮ್ಮಕ್ಕಾ ಯಾವ್ ಔಷುಧಿಗೂ ನಿಮ್ಮವ್ವಿಗೆ ಕಡ್ಮೆ ಆಗ್ಲಿಲ್ಲಾಂದ್ರೇ ಗಾಳಿ-ಗೀಳಿ ಹೋಡದ್ಯಾ ಹೇಳಿ' ಎಂದು ಅವಳ ತಲೆಗೂ ಹುಳಬಿಟ್ಟರು.ಮೊದಲೇ ಮೂಢನಂಬಿಕೆಯನ್ನು ಅತಿಯಾಗೆಂಬಂತೆ ನಂಬುವ ಜನ.ಮುಂಚೆ ಹಳ್ಳಿಯಲ್ಲಿ 'ಗಾಳಿದೆವ್ವ' ಅಂತ ಇರುತ್ತಿತ್ತಂತೆ (ಈಗಿಲ್ಲಾ ಅಂತ ಕಾಣಿಸುತ್ತೆ,ಬೇಜಾರಾಗಿ ಊರುಬಿಟ್ಟಿರಬೇಕು),ಅದು ಗಾಳಿಯಲ್ಲೇ ಎದೆ-ಕುತ್ತಿಗೆ-ಬೆನ್ನು-ಮುಖಕ್ಕೆಲ್ಲಾ 'ಗಾಳಿಗುದ್ದು' ಕೊಟ್ಟು ಹೋಗುತ್ತಿತ್ತಂತೆ. ಅದರ ಬೆರಳು ಮೂಡುತ್ತಿದ್ದಷ್ಟು ಕಾಲ ಗಾಳಿ ಹೊಡೆಸಿಕೊಂಡವರು ಬದುಕುತ್ತಾರೆಂದು ಹಳ್ಳಿಗರ ನಂಬಿಕೆಯಾಗಿತ್ತು.ಇದರಂತೆ ನಮ್ಮಮಾಸ್ತಿಗೂ ಮೂರು ಬೆರಳು ಮೂಡಿತ್ತಂತೆ.ಅಂದರೆ ಅದರ ಪ್ರಕಾರ ಅವಳು ಬದುಕುವುದು ಮೂರೇ ತಿಂಗಳು ಎಂದರ್ಥ. 
        ಆಗ ನಾವಿನ್ನು ತುಂಬಾ ಚಿಕ್ಕವರು,ಇದೆಲ್ಲಾ ಮೂಢನಂಬಿಕೆಯೆಂದು ಅರ್ಥವಾಗದ ವಯಸ್ಸು.ಮಾಸ್ತಿಗಾದ ಅವಸ್ಥೆಗೆ ಮರಗುತ್ತಿದ್ದೆ.ಅಮ್ಮ ಕೊಟ್ಟು ಕಳುಹಿಸುತ್ತಿದ್ದ ಚಾಕಣ್ಣು-ದೋಸೆಯನ್ನು ಕೊಟ್ಟುಬರುವ ನೆಪಮಾಡಿ ಅವರ ಮನೆಯಲ್ಲೇ ಗಂಟೆಗಟ್ಟಲೇ ಕುಳಿತಿರುತ್ತಿದ್ದೆ.ಆವಾಗಲೇ ಒಂದು ದಿನ ಬೊಮ್ಮಿಮಾಸ್ತಿ ಅವರ ಮನೆಗೆ ಬಂದ,ಬರುತ್ತಲೇ ನನಗೆ ಮನೆಗೆ ಹೋಗೆಂದು ಹೆದರಿಸಿದ,ಸುತ್ತಲಿದ್ದ ಮಕ್ಕಳನ್ನೂ ಓಡಿಸಿದ.ಆದರೂ ನಾವೆಲ್ಲಾ ಮನೆಯ ಜಗುಲಿಯ ಹಿಂದಿನ ಕಟ್ಟೆಯ ಹಿಂದಡಗಿ ಅವನ ಮಾತನ್ನು ಕೇಳಿಸಿಕೊಳ್ಳುತ್ತಿದ್ದೆವು.'ನೋಡಾ!ನಾ ಔಷುಂದಿ ತಕಬತ್ತೆ.ಆದ್ರೆ ಔಷುಂದಿ ತರುಕಾರೆ ಯಾವ್ ಹೆಂಗ್ಸ್ರು ನನ್ನ್ ಮಾತಾಡ್ಸುಕಾಗ,ಯಾವ್ ಬಳೆ-ಗೆಜ್ಜೆ ಶಬ್ಧೂ ಕೇಳುಕಾಗ' ಎಂದು ಮಾಸ್ತಿ ಮನೆಯವರಿಗೆ ಹೇಳುತ್ತಿದ್ದ.ನಮಗೆಲ್ಲಾ ಕೆಟ್ಟ ಕುತೂಹಲ,ಅವನ ಹಿಂಬಾಲಿಸಲು ಹೋಗಿ ಕುಪ್ಪಜ್ಜಿ ಕೈಯಲ್ಲಿ ಬೈಸಿಕೊಂಡು ವಾಪಸ್ಸಾದೆವು.ಮನೆಗೆ ಬಂದು ಅಜ್ಜಿಯ ಬಳಿ ಗಾಳಿದೆವ್ವದ ಔಷಧಿಯೆಲ್ಲಿ ಸಿಗುತ್ತದೆಂದು ಕೇಳಿದೆ.ಅದಕ್ಕವರು 'ಅದು ಎರಡ್ ಬೆಟ್ಟ ದಾಟಿದ್ಮೇಲೆ ಇಪ್ಪಾ ಕಾಡಲ್ಲಿ ಸಿಕ್ತು.ಅದ್ನಾ ಹುಟ್ಟಾ ಬ್ರಹ್ಮಚಾರಿಯಕ್ಕೋ ಮಾತ್ರ ತರವು.ನಮ್ಮೂರ ಸುತ್ತಮುತ್ತಾ ಅದು ಗುತ್ತಿಪ್ಪುದು ಬೊಮ್ಮಿಮಾಸ್ತಿಗಷ್ಟೇ' ಎಂದರು.ಅದರ ನಿಜವಾದ ಅರ್ಥ ಆವಾಗ ಅರಿವಾಗದಿದ್ದರೂ,ಬೊಮ್ಮಿಮಾಸ್ತಿ ತರುವ ಔಷಧಿಯಿಂದ ನನ್ನ ಮಾಸ್ತಿಗೆ ಗುಣವಾಗುತ್ತದೆ ಎಂಬ ವಿಚಾರವೇ ಖುಷಿ ಕೊಟ್ಟಿತ್ತು.
   ಶುಕ್ರವಾರದ ನಸುಕಿನಲ್ಲೇ ಎದ್ದು ಬೆಟ್ಟಕ್ಕೆ ಹೋದ ಬೊಮ್ಮಿಮಾಸ್ತಿ ಬರುವುದರೊಳಗೆ ನಮಗೆಲ್ಲಾ ಹತ್ತಿರ ನುಸುಳದಂತೆ ಎಚ್ಚರಿಸಿಯಾಗಿತ್ತು. ಅವನು ಔಷಧಿ ತೆಗೆದುಕೊಂಡು ಬರುವ ದಾರಿಯಲ್ಲೆಲ್ಲಾ ಗೆಜ್ಜೆ-ಬಳೆಯ ಶಬ್ಧಗಳೇನೂ ಕೇಳಬಾರದಂತೆ,ಯಾವ ಹೆಂಗಸರೂ ಅವನನ್ನು ಮಾತನಾಡಿಸಬಾರದಂತೆ ಹೀಗೆ ನಿಯಮಗಳು ಹತ್ತಲವಿದ್ದವು.ಆದರೂ ಕುತೂಹಲ ತಡೆಯದೇ ನನ್ನದೊಂದು ಕಪಿಸೈನ್ಯ ತೋಟದಲ್ಲಿನ ಬಿಂಬ್ಲುಮರದಲ್ಲಿ ಬೀಡು ಬಿಟ್ಟಿತ್ತು,ಬೆಳಗ್ಗಿನ ತಿಂಡಿಯನ್ನೂ ತಿನ್ನದೇ.ಕಾದು ಕಾದು ಸುಸ್ತಾಗಿ ಇನ್ನೇನು ಮರವಿಳಿದು ಮನೆಗೆ ಹೊರಡಬೇಕು ಬೊಮ್ಮಿಮಾಸ್ತಿ,ತೆಳ್ಳಗಿನ ಕಚ್ಚೆಪಂಚೆಯುಟ್ಟು,ತಲೆಗೊಂದು ಟವೆಲ್ ಸುತ್ತಿ,ಕೈಯಲ್ಲೊಂದು ಬಿಳಿವಸ್ತ್ರದ ತುಂಡು ಹಿಡಿದು.ಮುಂದಾಗುವ ಅದ್ಭುತವನ್ನು ಕಾಣಲಿಕ್ಕೆ ಉತ್ಸುಕರಾಗಿ ಕುಳಿತೆವು ನಾವಲ್ಲೇ.
   ಬೊಮ್ಮಿಮಾಸ್ತಿ ಬಂದವನೇ ಮಾಸ್ತಿಯ ಮಗನಿಗೇನೋ ಸನ್ನೆ ಮಾಡಿದ.ಅವನು ತಂಬಿಗೆ ನೀರು ಜೊತೆಗೆ ಸೊಪ್ಪು ಅರೆಯುವ ಸಣ್ಣ ಕಲ್ಲು ತಂದಿಟ್ಟು ಬದಿಸರಿದ. ಮನೆಯೆಲ್ಲಾ ನಿಶ್ಶಬ್ಧ,ಉಸಿರುಬಿಗಿ ಹಿಡಿದು ನಿಂತಂತಿದ್ದರೆಲ್ಲಾ. ಬೊಮ್ಮಿ ಮಾಸ್ತಿ ಸೊಪ್ಪನ್ನು ಅರೆದು ಬೆನ್ನಿಗೆಲ್ಲಾ ಹಚ್ಚಿದ,ನೀರನ್ನು ಕುಡಿಸಿದ,ಮರುಮಾತಾಡದೇ ಅಲ್ಲಿಂದ ತೆರಳಿದ. ಮತ್ತೇನೋ ಅದ್ಭುತವಾಗುವುದೆಂದು ಕುಳಿತಿದ್ದ ನಮಗೆ ನಿರಾಸೆಯಾಗಿತ್ತು.ಆದರೂ ಅದಾಗಿ ವಾರದೊಳಗೆ ಮಾಸ್ತಿಗೆ ಸಂಪೂರ್ಣ ಗುಣವಾಗಿದ್ದು ಮಾತ್ರ ನಂಬಲಸಾಧ್ಯವಾದ ವಿಷಯವಾಗಿತ್ತು.ಇವತ್ತಿಗೂ ಏನೂ ಹೇಗೆ ಎಂಬ ಪ್ರಶ್ನೆ ಹಾಗೇ ಉಳಿದಿದೆ.ಉತ್ತರ ಹೇಳಲು ಬೊಮ್ಮಿಮಾಸ್ತಿಯೂ ಇಲ್ಲ,ಮಾಸ್ತಿಯೂ ಇಲ್ಲ,ನನ್ನಜ್ಜಿಯೂ ಇಲ್ಲ.ಆದರೆ ನೆನಪು ಮಾತ್ರ ಹಾಗೇ ಹಸುರಾಗಿದೆ.
-ಶುಭಶ್ರೀ ಭಟ್ಟ

Sunday 9 July 2017

ಮಿಂಚಾಗಿ ಬಸ್ಸು ಬರಲು..

ಮಿಂಚಾಗಿ ಬಸ್ಸು ಬರಲು..
  ನಾವಿದ್ದುದು ಕರಾವಳಿಯ ಕಡಲತೀರ ಕುಮಟೆಯಲ್ಲಿನ ಒಂದು ಸುಂದರವಾದ ಪುಟ್ಟಗ್ರಾಮದಲ್ಲಿ. ಹೊಳೆಗದ್ದೆ,ಗುಡಬಳ್ಳಿ,ಹರನೀರು,ತಲಗೋಡು ಒಂದಕ್ಕೊಂದು ಅಂಟಿಕೊಂಡಂತಿದ್ದ ಹಸಿರುಗ್ರಾಮ.ಎಲ್ಲಿ ನೋಡಿದರೂ ಮರಗಿಡ-ಸಣ್ಣಪುಟ್ಟ ಝರಿಗಳು,ಕಣ್ಣುಹಾಯಿಸಿದಷ್ಟೂ ದೂರ ಹಸಿರು,ಗುಡ್ಡದ ಮೇಲೆ ನಿಂತರೆ ಮೈತುಂಬಿ ನಿಂತ ಸಹ್ಯಾದ್ರಿ ಸಾಲುಗಳು.ಆ ಸಹ್ಯಾದ್ರಿಯ ಸಾಲುಗಳು ನನ್ನ ಕಣ್ಣಿಗೆ ಹರೆಯವೇ ಮೈದುಂಬಿಕೊಂಡು ನಿಂತ ಷೋಢಶಿಯಂತೆ ಕಾಣಿಸುತ್ತಿತ್ತು.ಏರುತಗ್ಗುಗಳಿದ್ದ ರಸ್ತೆ,ಕಿರಿದಾದ ಕೊರೆವ ದಾರಿಗಳು,ದಾರಿಗಂಟಿದಂತೆ ಮೈತಳೆದ ಗಿಡಮರಗಳ ಪೊದೆಸಾಲುಗಳು.ಮನೆಗೊಂದರಂತಿದ್ದ ಸೈಕಲ್,ಲೂನಾ,ಎಂ.ಎ.ಟಿಗಳೇ ಸಾರಿಗೆ ಸೌಕರ್ಯವೆನಿಸಿದ್ದ ಕಾಲವದು.ಹಣ್ಣು-ಹಣ್ಣು ಮುದುಕನಾದರೂ,ಚೊಚ್ಚಲ ಬಸುರಿಯಾದರೂ,ಹಸೀ ಬಾಣಂತಿ-ಶಿಶುವಿಗಾದರೂ ಇದ್ದ ಎಕೈಕ ಸಾರಿಗೆಯೆಂದರೆ 'ಗೋಪನ ರಿಕ್ಷಾ'.ನಮ್ಮಮ್ಮ-ಚಿಕ್ಕಮ್ಮರೆಲ್ಲರೂ ಅದರಲ್ಲೇ ಹೆರಿಗೆನೋವು ತಿನ್ನುತ್ತಾ ಕುಮಟೆ ಆಸ್ಪತ್ರೆಗೆ ತೆರಳಿದವರು.ಅದನ್ನು ಬಿಟ್ಟರೇ ಪರ್ಯಾಯ ಸಾರಿಗೆ ವ್ಯವಸ್ಥೆಯನ್ನೇ ಕಾಣದ ಗ್ರಾಮಗಳವು..
ಹೀಗಿರುವ ಗ್ರಾಮಕ್ಕೆ 'ಬಸ್ಸು' ಬರುವುದಂತೆ ಎಂಬ ಸುದ್ದಿಯೇ ರೋಮಾಂಚನಕಾರಿಯಾಗಿತ್ತು.ಹೊಂಡ-ತಗ್ಗುಗಳೆಲ್ಲಾ ಮುಚ್ಚುವಂತೇ ಡಾಂಬರಿನಲ್ಲಿ ಮೇಕಪ್ ಮಾಡಿಕೊಂಡ ರಸ್ತೆಯೂ,ತಿಂಗಳಲ್ಲಿ ಬಂದ ವರುಣನ ಆರ್ಭಟಕ್ಕೆ ಕೊಚ್ಚಿಹೋಗಿ ನಾಮಕಾವಸ್ಥೆ ಮಾಡಲ್ಪಟ್ಟ ಕಳಪೆ ಕಾಮಗಾರಿಯ ಕಥೆಯ ಸಾರಿ ಹೇಳುತ್ತಿತ್ತು. ನಂತರ ಗ್ರಾಮದ ಬಿಸಿರಕ್ತದ ಯುವಕರ ಸಂಘದವರು ತಂದ ಒತ್ತಡದಿಂದ,ರಸ್ತೆ ಸ್ವಲ್ಪಮಟ್ಟಿಗೆ ದುರಸ್ತಿಗೊಂಡಿತು.ಆಗಿನ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಯುತ ಶ್ರೀಪಾದ ಶೆಟ್ಟಿಯವರ ಸಹಕಾರದಿಂದ,ಗ್ರಾಮದವರು ಕೊಟ್ಟ ಅರ್ಜಿಯನ್ನು ಸಾರಿಗೆ ಸಂಸ್ಥೆ ಗಣನೆಗೆ ತೆಗೆದುಕೊಂಡು ಬಸ್ಸು ಬಿಡುವ ನಿರ್ಧಾರ ಕೈಗೊಂಡಿತು.
   ರಾಮನಿಗಾಗಿ ಶಬರಿ ಕಾದಂತೆ,ಬರುವ ಬಸ್ಸಿಗಾಗಿ ಕಾದು,ದಿನವೂ  'ಶಿರಿ ನಾಯ್ಕ'ನ ಅಂಗಡಿಯಲ್ಲಿ ವಿಚಾರಿಸಿ ಬೈಸಿಕೊಂಡಿದ್ದುಂಟು.ಇದರರ್ಥ ನಾವೆಂದೂ ಜೀವನದಲ್ಲೇ ಬಸ್ಸು ಕಾಣಲಿಲ್ಲವೆಂದಲ್ಲ.ಆದರೆ ನಮ್ಮೂರಿಗೆ ಬರುವ ಬಸ್ಸಿಗಾಗಿ ಆ ಆಸೆ-ಕೂತುಹಲ ಎಲ್ಲವೂ.ಕೊನೆಗೂ ಬಸ್ಸು ಬರುವ ದಿನ ನಿಕ್ಕಿಯಾಯ್ತು. ನಮ್ಮ ಆಸೆಗೆ ತಣ್ಣೀರೆರಚಬಾರದೆಂದು,ನಮ್ಮನ್ನೆಲ್ಲಾ ಅರ್ಧಘಂಟೆ ಮುಂಚಿತವಾಗಿಯೇ ಕಳುಹಿಸಿಕೊಟ್ಟರು ಶಾಲೆಯಿಂದ.ನಾನಂತೂ ನಮ್ಮನೆ ಕೆಲಸಕ್ಕೆ ಬರುತ್ತಿದ್ದ 'ಬೊಮ್ಮು ಗೌಡ'ನ ಬಳಿ ನನಗೊಂದು ಸೀಟ್ ಹಿಡಿಯಲು ಕೂಡ ಹೇಳಿಟ್ಟಿದ್ದೆ.ಬಸ್ಸಿನ ಹಾರನ್ ಕೇಳಿದೊಡನೆ ಮೈಯೆಲ್ಲಾ ಕಿವಿಯಾಗಿಸಿ ತುದಿಗಾಲಲ್ಲಿ ನಿಂತಿದ್ದೆವು. ನಮಗಿಂತಲೂ ಮೊದಲು ರಂಗೋಲಿ ಕೆಳಗೇ ನುಗ್ಗುವ ಬುದ್ಧಿಯಿರುವ ಉತ್ಸಾಹಿ ಯುವಕರಾಗಲೇ ಅರ್ಧ ಬಸ್ಸಿನ ತುಂಬ ಕುಳಿತಿದ್ದರು.ಕುಮಟೆಯ ಡೀಪೋವಿನಲ್ಲಿಯೇ ಹೊಂಚುಹಾಕಿ ಕಳ್ಳಬೆಕ್ಕಂತೆ ಹತ್ತಿದ್ದರಾ ಗೊತ್ತಿಲ್ಲ.ರಿಪೇರಿಗೆ ಬಿದ್ದ ಹಳೆಯ ಕೆಂಬಣ್ಣದ ಬಸ್ಸನ್ನು ಬಿಡುತ್ತಾರೆಂದು ಅಂದುಕೊಂಡಿದ್ದ ನಮಗೆ.ಬೆಂಗಳೂರಿಗೆ ಓಡಿಸಲ್ಪಡುತ್ತಿದ್ದ,ಹಳೆಯದಾದರೂ ಚೆಂದವಿದ್ದ ಬಸ್ಸು ಕಂಡು ಮನವರಳಿತ್ತು.ಸೇವಂತಿಹಾರ,ಮಲ್ಲಿಗೆ ಮಾಲೆ,ನಿಂಬೆಹಣ್ಣು-ಮಾವಿನೆಲೆಯ ತೋರಣಗಳಿಂದ ಕಂಗೊಳಿಸುತ್ತಿದ್ದ ಬಸ್ಸು ಸಿಂಗರಿಸಿಕೊಂಡ ಮುದಿ ಮುತ್ತೈದೆಯಂತೆ ಕಾಣುತ್ತಲಿತ್ತು. ಅಂತೂ ಬೊಮ್ಮುವಿನ ಸಹಾಯದಿಂದ ದೊರಕಿದ ಸೀಟಿನಲ್ಲಿ ರಾಣಿಯ ಹಾಗೇ ಕುಳಿತು ಪ್ರಯಾಣಿಸಿದ್ದೆ. ಸೀಟು ಸಿಕ್ಕಿದ್ದಕ್ಕೆ ಖುಷಿಯಿತ್ತಾ,ಬಸ್ಸು ಬಂದಿದ್ದಕ್ಕೆ ಹೆಮ್ಮೆಯಿತ್ತಾ ನೆನಪಿಲ್ಲ.ಆದರೆ ಜಂಭದಿಂದ ಒಂದೆರಡೂ ಸುತ್ತು ದಪ್ಪವಾಗಿದ್ದಂತೂ ನಿಜ..
      ಅಮ್ಮ ಕೊಟ್ಟ ಕಾಸು ಖಾಲಿಯಾದರೂ ಬಸ್ಸಲ್ಲೇ ಕುಳಿತು ಮರುಪ್ರಯಾಣಿಸುತ್ತಿದ್ದ ನನಗೆ ಬೊಮ್ಮುವಿದ್ದಾನೆಂಬ ಧೈರ್ಯ.ಆದರೆ ಬೊಮ್ಮುವಲ್ಲೇ ಇಳಿದುಹೋಗಿ, ಟಿಕೆಟ್ ಕೊಳ್ಳಲು ಕಾಸಿಲ್ಲದೇ ಮುಖಬಾಡಿಸಿ ಕುಳಿತಾಗ, ಅದೆಲ್ಲಿಂದಲೋ ಬಂದ ಸಂತು ಅಣ್ಣ ಟಿಕೆಟ್ ಕೊಡಿಸಿ,ಕಂಡಕ್ಟರಿಂದ ಬೈಯುವುದನ್ನು ತಪ್ಪಿಸಿದ.ಹೀಗೆ ಒಂದು ವಾರಗಳ ಕಾಲ ಅಬಾಲವೃದ್ಧರಾಗಿ ಎಲ್ಲರೂ ಕಾರಣವಿಲ್ಲದೇ ಬಸ್ಸಲ್ಲಿ ಓಡಾಡತೊಡಗಿದರು.ಆದರೆ ಇದರ ಆಕರ್ಷಣೆ ಕೇವಲ ಕೆಲದಿನಗಳಷ್ಟೇ ಎಂದರಿಯದ ಸಾರಿಗೆಯವರು,ದಿನಕ್ಕೆರಡು ಬಸ್ಸು ಬಿಡುವ ವ್ಯವಸ್ಥೆ ಮಾಡಿದರು.ಸಮಯಕ್ಕೆ ಸರಿಯಾಗಿ ಬರತೊಡಗಿದ್ದ ಬಸ್ಸಿಗೆ ದಿನಕಳೆದಂತ ಜನ ಕಡಿಮೆಯಾಗ ತೊಡಗಿದರು.ಕೊನೆ-ಕೊನೆಗೆ ಬೆರಳೆಣಿಕೆಯಷ್ಟು ಜನರಿಗೆ,ಮನೆಮುಂದೆ ನಿಂತ ಚಿಣ್ಣಾರಿಗಳು ಮಾಡುವ ಟಾಟಾಗಳಿಗಷ್ಟೇ ಸಾಕ್ಷಿಯಾಗಬೇಕಾದ ಪರಿಸ್ಥಿತಿ ಬರತೊಡಗಿತ್ತು.ಮೈಲುಗಟ್ಟಲೇ ಬರಿಗಾಲಲ್ಲಿ ನಡೆದು ಅಭ್ಯಾಸವಾಗಿದ್ದ ಶ್ರಮಜೀವಿ ಹಳ್ಳಿಗರಿಗೆ,ಈ ಸಾರಿಗೆ ವ್ಯವಸ್ಥೆ ಅಷ್ಟಾಗಿ ಹಿಡಿಸಲಿಲ್ಲ.ಬಸ್ಸು ಬರುತ್ತಿದ್ದರೂ, ಅದನ್ನು ಹಿಂದಿಕ್ಕುವಂತೆ ಬಿರುಸಾಗಿ ನಡೆಯುತ್ತಿದ್ದ ಮುದುಕರು,ಹೆಂಗಸರು ಸಾರಿಗೆಯವರಿಗೆ ಸವಾಲಾದರು.ಒಂದಿನೀತೂ ಲಾಭವಿಲ್ಲದೇ ನಡೆಸುವ ಸಾರಿಗೆ ವ್ಯವಸ್ಥೆ ಅವರಿಗೆ ಬೇಡವಾಗಿತ್ತು.ಕೊನೆಗೊಂದು ದಿನ ಬಸ್ಸು ಬರುವುದು ಸಂಪೂರ್ಣವಾಗಿ ನಿಂತಿತು.
      ಬಸ್ಸು ಬರುವುದೋ ಬಿಡುವುದೋ ತಲೆಬಿಸಿಯಿರಲಿಲ್ಲ,ಅದರಿಂದಾದ ನಷ್ಟದ ಬಗ್ಗೆಯೂ ಯಾರಿಗೂ ಯೋಚನೆಯಿಲ್ಲ.ಆದರೆ ಇದರ ದೆಸೆಯಿಂದ ಡಾಂಬರು ರಸ್ತೆಯಂತೂ ಆಯ್ತು.ಇದರಿಂದ ಅನಾರೋಗ್ಯದ ಜನರಿಗೆ,ಬಸುರಿ ಬಾಣಂತಿಯರಿಗೆ ತಿರುಗುವ ಹಾದಿ ಸುಗಮವಾಯ್ತು.ಈಗಂತೂ ಮನೆಗೊಂದು ಕಾರಿದೆ, ಜನಕ್ಕೊಂದು ಮೋಟಾರು ಬೈಕಿದೆ.ಆದರೂ ನನ್ನಂತಹ ಅನೇಕರಿಗೆ ನಮ್ಮೂರಿಗೆ ಬಂದ ಮೊದಲ ಬಸ್ಸಿನ ಅನುಭವ ಮರೆಯಲಾಗಲಿಲ್ಲ.
-ಶುಭಶ್ರೀ ಭಟ್ಟ,ಬೆಂಗಳೂರು

Wednesday 28 June 2017

ಕೊಂಕಣ ರೈಲೂ ಹಾಳೆಕೊಟ್ಟೆಯ ಬೆನ್ನೂ..

ಕೊಂಕಣ ರೈಲೂ ಹಾಳೆಕೊಟ್ಟೆಯ ಬೆನ್ನೂ..
   ಕೊಂಕಣ ರೈಲ್ವೆ ಬಂದ ಹೊಸತರಲ್ಲಿ ಅದರ ಸೀಟಿಯ ಶಬ್ಧಕ್ಕೆ ಮೈಮನ ಕುಣಿದಾಡುತ್ತಿದ್ದ ದಿನಗಳವು.ಈ ಕೊಂಕಣ ರೈಲ್ವೆ ಬರಲು ಅದೇಷ್ಟು ಜನ ತಮ್ಮ ಹೊಲ-ಗದ್ದೆ-ತೋಟಗಳನ್ನು ತ್ಯಾಗ ಮಾಡಿದರು,ಭೂತಾಯಿ ಅದೇಷ್ಟು ಉಳಿಪೆಟ್ಟಿನ ನೋವ ಸಹಿಸಿದಳು,ವನದೇವಿ ತನ್ನ ಅದೇಷ್ಟು ಮಕ್ಕಳನ್ನು ಬಲಿಕೊಟ್ಟಳು ಎಂದು ಅರಿವು ಮೂಡಿರದ ವಯಸ್ಸಾಗಿತ್ತದು.ದಿನನಿತ್ಯವೂ ಕೊಂಕಣ ರೈಲ್ವೆಯನ್ನು ಕಂಡೊಡನೆ,ಅದರ ಶಬ್ಧ ಕೇಳಿದೊಡನೆ ಹಿಡಿಶಾಪ ಹಾಕುವ ಹಿರಿಯರ ನಡುವೆ ಅದನ್ನು ಮುಗ್ಧವಾಗಿ-ಮುಕ್ತವಾಗಿ ಸ್ವಾಗತಿಸಿದ್ದು ಮಾತ್ರ ನಮ್ಮಂತಹ ಚಿಣ್ಣರು.ಹೀಗಿರುವಾ ಬೇಸಿಗೆರಜೆ ಶುರುವಾದರೂ ಆಡಲು ಬರುತ್ತಿರುವ ಮಕ್ಕಳ ಸಂಖ್ಯೆ ಮಾತ್ರ ನಿತ್ಯ ಕಡಿಮೆಯಾಗುತ್ತಲೇ ಇತ್ತು.ಇದರ ಹಿನ್ನೆಲೆಯನ್ನೆಲ್ಲಾ ಅರಿಯದಿದ್ದ ನಾನು ನಮ್ಮೊಡನೆ ಆಡಲು ಬರುತ್ತಿದ್ದ ಕುಪ್ಪುವನ್ನು ಹಿಡಿದು 'ಎಂತದಾ?ಆಡುಕೆ ಬರುದಿಲ್ಲಾಲ ಈಗ,ಎಂತಾ ಮೀನ್ ಹಿಡುಕ್ ಗಜ್ನಿಗ್ ಹೋಗ್ತ್ರಾನಾ?' ಕೇಳಿದ್ದಕ್ಕೆ,ಅವ 'ಇಲ್ವೇ ದೊಡ್ತಂಗಿ,ನಾಮೆಲ್ಲಾ ದಿನಾ ರೇಲ್ ನೋಡುಕ್ ಹೋಗ್ತ್ರು. ದಿನಾ ೧೨ಘಂಟಿಗ್ ಬತ್ತಿದು,ನಾಮ್ ಟಾಟಾ ಮಾಡ್ತ್ರು,ಅವ್ರೂ ಟಾಟಾ ಮಾಡ್ತ್ರು.ಬರ್ಬೇಕಾರೆ ಮಾಯ್ನಣ್ಣೆಲಾ ತಿಂದ್ಕ ಬತ್ರು,ಛೋಲೋ ಆತಿದು' ಎಂದಾಗ ನನಗೆ ಸಿಕ್ಕಾಪಟ್ಟೆ ಆಸೆಯಾಗಿ ನಾನೂ ಬರುವೆನೆಂದು ಹಠಹಿಡಿದೆ.ಅವರಿಗೆ ನಮ್ಮಮ್ಮ-ಅಜ್ಜಿಯ ಭಯವಿದ್ದರೂ ನಾನು ಧೈರ್ಯ ಹೇಳಿ ಹ್ಮೂಂಗುಡಿಸಿದ್ದೆ.
  ಮರುದಿನ ನಮ್ಮಮ್ಮ ಅಜ್ಜಿಯ ಕಣ್ತಪ್ಪಿಸಿ ನಾನು ನನ್ನ ಎರಡೂವರೆ ವರುಷದ ತಂಗಿಯೊಡನೆ ಮನೆಯಿಂದ ಹೊರಬಿದ್ದೆ.ನಮ್ಮ ತೋಟದ ತುದಿಗೆ ಬರುವಷ್ಟರಲ್ಲಿ ಕುಪ್ಪು,ಶಂಕ್ರ,ತಿಮ್ಮಕ್ಕ,ಸೋಮ,ನಾಗು,ವಿಜಯ,ಲಲಿತ ನಮಗೋಸ್ಕರ ಕಾದಿದ್ದರು.ನನ್ನ ಪುಟ್ಟ ತಂಗಿಯು ನಡೆದು ಸುಸ್ತಾಗಿ ಹಠ ಮಾಡಬಾರದೆಂದು ಕುಪ್ಪು,ಸೋಮ,ವಿಜಯ,ತಿಮ್ಮಕ್ಕ ಸರತಿಯಂತೆ ಅವಳನ್ನು ಕಂಕುಳಲ್ಲಿ,ಹೆಗಲಲ್ಲಿ ಹೊತ್ತುಕೊಂಡು ನಡೆದರು.ಉಳಿದವರೆಲ್ಲಾ ಗದ್ದೆಯಂಚಲ್ಲಾಗುವ ಕುಸುಮಾಲೆ ಹಣ್ಣು,ಬಿಂಬ್ಲಕಾಯಿ,ರಾಜನೆಲ್ಲಿಕಾಯಿ,ಜಂಬೆಹಣ್ಣನ್ನು ಮೆಲ್ಲುತ್ತಾ,ನಡುನಡುವೆ ವಿಶ್ರಮಿಸುತ್ತಾ ಊರಂಚಿಗೆ ತಲುಪಿದೆವು.ಅಲ್ಲೇ ಇದ್ದ ಸಣ್ಣ ಕೆರೆಯಲ್ಲಿ ಕೈಕಾಲು-ಮುಖ ತೊಳೆದು,ಕೆಸರಲ್ಲಿ ಅರಳಿದ ಕಮಲವ ಹರಸಾಹಸಪಟ್ಟರೂ ಕೊಯ್ಯಲಾಗದೇ ಬಿಟ್ಟು,ಅಲ್ಲಿಂದ ತೆರಳಿ ಕೊಂಕಣ ರೈಲ್ವೆಯ ಬುಡದಲ್ಲಿದ್ದ ಗದ್ದೆಯಲ್ಲಿ ಸಾಲಾಗಿ ಮಂಗಗಳ ಗುಂಪಂತೆ ಕುಳಿತೆವು ರೈಲು ಬರುವುದನ್ನೇ ಕಾಯುತ್ತಾ.
    ರೈಲ್ವೆಯ ಚುಕುಬುಕು ಶಬ್ಧ ಕೇಳಿದೊಡನೆ ಕಿವಿನೆಟ್ಟಗಾಗಿ ಕುಳಿತಿದ್ದವೆಲ್ಲಾ ಆವೇಶಬಂದವರಂತೆ ಜಿಗಿದೆದ್ದೆವು.ಅದಾಗಿ ಅರ್ಧಘಂಟೆಯಾದರೂ ರೈಲು ಬರದಿದ್ದುದ ಕಂಡು ನಿರಾಸೆಯಿಂದ ಚಡಪಡಿಸತೊಡಗಿ,'ಏಯ್ ಕುಪ್ಪು ಎಲ್ಲದ್ಯಾ?ಬರ್ಲೇ ಇಲ್ವಲಾ ಇನ್ನುವಾ?' ಎಂದೆ.ಅದಕ್ಕವ 'ತಡ್ಯೆ ದೊಡ್ತಂಗಿ,ಎಲ್ಲೋ ಆಸ್ರಿ ಕುಡುಕೆ ನಿಲ್ಸಿರನಾ' ಎಂದ ಸರ್ವಜ್ನನಂತೆ.ಕಂಡಕಂಡಲ್ಲಿ ಊಟ-ತಿಂಡಿಗೆ ನಿಲ್ಲಿಸಲು ಅದೇನು ಸಾರಿಗೆ ಬಸ್ಸಾ? ಎಂಬ ಪ್ರಶ್ನೆ ಕೂಡ ನಮ್ಮಲ್ಲಿ ಉದಯಿಸದಷ್ಟು ಮುಗ್ಧರಾಗಿದ್ದೆವು.ಕೊನೆಗೆ ಚುಕುಬುಕು ಶಬ್ಧ ಜೋರಾಗಿ ಕೇಳಿಸತೊಡಗಿ,ದೂರದಲ್ಲಿ ರೈಲಿನ ಮೂತಿಯೂ ಕಂಡೊಡನೆ 'ಹೋ' ಎಂದು ಕುಣಿದಾಡಿದ್ದೆವು.
ರೈಲಿನಲ್ಲಿ ಕುಳಿತಿದ್ದ ಜನ ಸಮೀಪವೆನಿಸಿದಾಗ ಕೈಬೀಸಿ ಟಾಟಾ ಮಾಡಿದಾಗ,ಕೆಲವರು ತಿರುಗಿ ಟಾಟಾ ಮಾಡಿದಾಗ ನಮಗಾಗಿದ್ದ ಆನಂದ ಹೇಳಲಾಗದ್ದು. ರೈಲ್ವೆಯಲ್ಲಿ ಪ್ರಯಾಣ ಮಾಡುವವರೆಲ್ಲಾ ಇಂಗ್ಲೀಷಲ್ಲಿ ಪರಿಣಿತರು ಎಂಬ ಸಿನಿಮಿಯ ಮೋಡಿಗೊಳಗಾಗಿದ್ದ ಕಾಲವದು.ಅದಕ್ಕೆ ಅಪ್ಪ ಆಗಷ್ಟೇ ಕಲಿಸತೊಡಗಿದ್ದ ಒಂದೆರಡು ಇಂಗ್ಲೀಷ್ ಶಬ್ಧಗಳು 'Hello..How Do You Do?' ಎಂದು ಹಾರಬಿಟ್ಟೆ.ಅದಕ್ಕೆ ಪ್ರತ್ಯುತ್ತರ ಬರದಾಗ ಪಿಚ್ಚೆನಿಸಿದ್ದರೂ,ಉಳಿದ ಮಕ್ಕಳ ಮುಂದೆ ಪಂಡಿತಳಂತೆ ಬೀಗಿದ್ದೆ.ಹೀಗೇ ರೈಲು ಮರೆಯಾಗುವವರೆಗೆ ನಿಂತ ನಮಗೆ ಮಧ್ಯಾಹ್ನ ಊಟದ ಸಮಯ ಮೀರಿದ್ದೂ ಗೊತ್ತಿರಲಿಲ್ಲ,ಮನೆಯ ನೆನಪೂ ಆಗಲಿಲ್ಲ.
   ಮೀನು ಗಜ್ನಿಯ ವಾಸನೆಗೆ 'ಛೀ' ಎಂದು ಮೂಗ್ಮುಚ್ಚಿಕೊಂಡು ದಾಟಿ,ಪಕ್ಕದ ಝರಿಯ ತಣ್ಣೀರಲ್ಲಿ ಆಟವಾಡಿ ಹೊರಟೆವು.ತೋಟದಂಚಿನ ಗದ್ದೆಗೆ ಬಿದ್ದ ಮಾವಿನಹಣ್ಣನ್ನೆಲ್ಲಾ ಫ್ರಾಕಿನಲ್ಲಿ ತುಂಬಿಕೊಂಡು ಮುಂದುವರೆದೆವು.ಮಾವಿನಹಣ್ಣಿನ ಹಪ್ಪಳದ ಆಸೆಗೆ ದಾಕ್ಷಾಣಜ್ಜಿಯ ಮನೆ ತೋಟದ ಮಾವಿನ ಹಣ್ಣನ್ನು ಕೊಯ್ಯಲು ಕುಪ್ಪು ಮರ ಹತ್ತಿದ್ದನಷ್ಟೇ,ಅದೆಲ್ಲಿದ್ದರೋ ಅಜ್ಜಿ ಕೋಲುಹಿಡಿದು ಬಂದೇ ಬಿಟ್ಟರು.ಅವರದ್ದೇ ಮರದ ಮಾವಿನಹಣ್ಣನ್ನು ನಾವು ತುಂಬಿಕೊಂಡಿದ್ದೆಂದು ತಪ್ಪು ತಿಳಿದು ಬೈಯತೊಡಗಿದಾಗ,ಅಲ್ಲಿಂದ ಕಾಲ್ಕಿತ್ತೆವು.
 ಓಡಿಈಡಿ ಸುಸ್ತಾಗಿ ಬೊಮ್ಮಿಮಾಸ್ತಿಯ ಗದ್ದೆಯಂಚಲಿ ಕೂತು ಉಸಿರುಬಿಟ್ಟಾಗ ಮೊದಲಬಾರಿಗೆ ಹಸಿವಾದದ್ದು ಗಮನಕ್ಕೆ ಬಂತು.ಎಲ್ಲರೂ ಅವರವರ ಬಳಿಯಿದ್ದ ಮಾವಿನಹಣ್ಣನ್ನು ತಿನ್ನತೊಡಗಿದಾಗ,ನಾನೂ-ತಂಗಿಯೂ ಅದನ್ನೇ ಅನುಸರಿಸಿದೆವು.'ತೊಳೆಯದೇ ಹಣ್ಣು ತಿನ್ನಬಾರದು'ಎಂದು ಅಮ್ಮ ಕಲಿಸಿದ ಪಾಠವೆಲ್ಲಾ ಕಾಣದಂತೆ ಅಡಗಿ ಕುಳಿತಿತ್ತು.ಅಂತೂ ನಮ್ಮ ತೋಟದವರೆಗೆ ನಮ್ಮನ್ನು ಬೀಳ್ಕೊಟ್ಟ ಸೈನ್ಯ,ಮನೆಯಲ್ಲಿ ಬೈದರೆ ತಮ್ಮ ಹೆಸರು ಹೇಳಬಾರದೆಂದು ತಾಕಿತು ಮಾಡಿತೆರಳಿತು.ತೋಟದಲ್ಲಿ ನಡೆಯುವಾಗ ಅಷ್ಟು ಹೊತ್ತ ನೆನಪಾಗದ ಅಮ್ಮ ನೆನಪಾದಳು,ಶೆಳೆ(ಸಪೂರ ದಾಸವಾಳದ ಕೋಲು) ಕಾದಿರುವುದಂತೂ ಖಚಿತವೆಂದು ಅದರಿಂದ ತಪ್ಪಿಸಿಕೊಳ್ಳುವ ಉಪಾಯ ಮಾಡುತ್ತಾ ಮನೆಯೆಡೆಗೆ ಹೆಜ್ಜೆ ಹಾಕಿದೆವು.
   ತೆಂಗಿನಮರದ ಸುಂಕವನ್ನು ತಂಗಿಯ ಕೈಹಿಡಿದು ದಾಟುವಾಗಲೇ ಪಕ್ಕದ್ಮನೆ ಸಾವಿತ್ರಕ್ಕ ಓಡಿಬಂದರು.'ಎಲ್ ಹೋಗಿದ್ರೆ ಕೂಸ್ಗಳೆ?ಆಯಿಗಾರೂ ಹೇಳಿಕ್ ಹೋಗುಕಾಗ್ಲಿಲ್ವಾ?ಊರೆಲ್ಲ ಹುಡ್ಕ್ತಿದ್ರು,ಕಡೆಗೆ ಬೊಮ್ಮು ನೀವು ಗೆದ್ದೆ ಬದೀಲ್ ಕಂಡೆ ಹೇಳಿ.ಈಗ್ ನೋಡು ಶೆಳೆ ಹಿಡ್ಕಂಡ್ ಕುಂತರೆ,ಬೆನ್ನಿಗೆ ಹಾಳೆಕೊಟ್ಟೆ ಕಟ್ಕ ಹೋಗಿ' ಎಂದಾಗ,ಹೊಟ್ಟೆಯಿಂದ ಛಳಿ ಕಿತ್ತುಕೊಂಡು ಬಂದು ತತ್ತರಿಸತೊಡಗಿದೆವು.(ವಿ.ಸೂ: ಬೆನ್ನಿಗೆ ಪೆಟ್ಟು ಬೀಳಬಾರದೆಂದು ಚಿಕ್ಕಮಕ್ಕಳಿಗೆ ಹೇಳುವ ಉಪಮೆಯೆ ಬೆನ್ನಿಗೆ ಹಾಳೆಕೊಟ್ಟೆ ಕಟ್ಟುವುದು).
 ಶಬ್ಧವಾಗದಂತೆ ಬಚ್ಚಲಲ್ಲಿ ಕಾಲ್ತೊಳೆದು,ತಂಗಿಯದ್ದೂ ಕಾಲ್ತೊಳಿಸಿ,ಮನೆಯೊಳಗೆ ಕಾಲಿಟ್ಟೆವು ಮೆಲ್ಲ.ಪುಟ್ಟತಂಗಿಗೆ ಪೆಟ್ಟುಬಿಳುವುದು ಕಡಿಮೆಯೆಂದು ಅವಳನ್ನೇ ಮುಂದೆ ಅಸ್ತ್ರದಂತೆ ನಡೆಸಿಕೊಂಡು ಹೆಜ್ಜೆಯೆರಡಿಟ್ಟಿದ್ದೆ.ಇದನ್ನೆಲ್ಲಾ ಮೊದಲೇ ಗ್ರಹಿಸಿದ್ದ ಅಮ್ಮನಂತೂ ಸಪೂರ ಶೆಳೆ ಹಿಡಿದು ಬಾಗಿಲಸಂಧಿಯಲ್ಲಿ ಕಳ್ಳಬೆಕ್ಕಂತೆ ಹೊಂಚುಹಾಕುತ್ತಿದ್ದಳು. ಕೋಲುಕಂಡೆ ಹೆದರಿ ತಂಗಿ ಬೊಬ್ಬೆ ಹಾಕತೊಡಗಿದಾಗ,ಕೋಲು ತಿರುಗಿದ್ದು ನನ್ನೆಡೆಗೆ.ಚುಬುಕು ಚುಬುಕೆಂದು ಎರಡೇಟು ಬಿದ್ದರೂ ತಪ್ಪಿಸಿಕೊಂಡು,ಅಜ್ಜಿಯ ಬೆನ್ನಹಿಂದೆ ಅಡಗಿಕೊಂಡು ಅಳತೊಡಗಿದ್ದೆ,ಅಜ್ಜಿ ಅಮ್ಮನಿಗೆ ಬೈಯತೊಡಗಿದರು.ಅದಕ್ಕಮ್ಮ ಕೋಪಮಿಶ್ರಿತ ದುಃಖದಲ್ಲಿ 'ಅಮ್ಮಾ ನೀವ್ ಮುದ್ದ್ ಮಾಡೇ ಹಾಳಾದ ಇವ್ಳು.ಹೋಗಕಾರೆ ಒಂದ್ ಮಾತ್ ಹೇಳಿಕ್ ಹೋಜಿಲ್ಲೆ ಈ ಕೂಸು.ಸಂತಿಗ್ ಈ ಪಿಳ್ಳೆನ ಬೇರೆ ಕರ್ಕಂಡ್ ಹೋಜು.ಹೋದ್ ಜಾಗ ಬೇರೆ ಸರಿಯಿಲ್ಲೆ,ಬಿಸಿಲು-ನೀರಿಪ್ಪು ಜಾಗ,ಎಂತಾರು ಆಗಿದ್ರೆ' ಕೇಳುತ್ತಾ ಕಣ್ತುಂಬಿಕೊಂಡಾಗ ನನಗೆ ಬೇಸರವಾಯ್ತು.ಅಮ್ಮನ ಸಂಕಟವನ್ನರಿತ ಅಜ್ಜಿ ನಮಗೇ ನಾಜೂಕಾಗಿ ಬುದ್ಧಿ ಹೇಳಿಲ್ಲಿ ಬಿಸಿಲುಗುಮ್ಮ ಇರುವನೆಂದು,ಚೆಂದದ ಮಕ್ಕಳ ಕದ್ಕೊಂಡ್ ಹೋಗ್ತಾನೆಂದು ಹೆದರಿಸಿದಾಗ ಮತ್ತೆ ಕೊಂಕಣ ರೈಲ್ವೆ ನೋಡಲು ಹೋಗಲಿಲ್ಲವಾದರೂ,ಆ ಮಧುರ ನೆನಪು ಮನಸ್ಸಿಂದ ಇಂದಿಗೂ ಮರೆಯಾಗಿಲ್ಲ.
  -ಶುಭಶ್ರೀ ಭಟ್ಟ,ಬೆಂಗಳೂರು

Sunday 18 June 2017






ನಾನು ದೇವರಾ ಮಗ(ಳು)

(ಇಂದಿನ ವಿಶ್ವವಾಣಿ ವಿ+ ಪುರವಣಿಯಲ್ಲಿ ಪ್ರಕಟ)
         ಜೀವನದಲ್ಲಿ 'ಅಪ್ಪ'ನೆಂಬ ಪಾತ್ರದ ಅನುಭವವಾಗುವ ಮೊದಲೇ ಇಲ್ಲವಾದ ಅನುಭವ,ಸಂಪ್ರದಾಯಸ್ಥ ಕೂಡು ಕುಟುಂಬದ ಹಿಡಿಮಡಿ,ಹೊರಗಿನ ಕೆಲಸಕ್ಕಷ್ಟೇ ಮೀಸಲಾದ ಅಮ್ಮ,ಕಣ್ಮುಂದಿದ್ದರೂ ಸಿಗದ ತಿಂಡಿ,ಕದ್ದು ತಿಂಡಿಕೊಡುವ ಅಜ್ಜಿ,ಹಂಗಿಸುವ ಚಿಕ್ಕಪ್ಪಂದಿರು,ಕೊನೆಯ ಚಿಕ್ಕಪ್ಪನ ಒಳ್ಳೆತನದಿಂದ ದೊರೆತ ಒಳ್ಳೆಯ ಶಿಕ್ಷಣ,ಶಕುನಿಮಾವನ ದೆಸೆಯಿಂದ ದೊರೆಯದ ಸಮಪಾಲು,ಕೊನೆಗೂ ಸಿಗದ ಅಜ್ಜಿಯ ಕಾಸಿನಸರ-ಹೀಗೆ ಹುಟ್ಟಿದಾರಭ್ಯ ಕಷ್ಟವನ್ನೇ ಉಟ್ಟುಂಡರೂ ಒಬ್ಬರ ಬಗ್ಗೆ ದೂರಿದವರಲ್ಲ ನನ್ನಪ್ಪ.ಈ ಕಥೆಯನ್ನೆಲ್ಲಾ ಅಜ್ಜಿ ನಮಗೆ ಹೇಳಿರದಿದ್ದರೆ,ಅದರ ಸುಳಿವು ನಮಗೆ ಸಿಗುತ್ತಿರಲಿಲ್ಲವೆನೋ.ಯಾರಿಗೂ ಎದುರಾಡದೇ, ಯಾರನ್ನೂ ದೂರದೇ,ದುಡುಕದೇ ಜೀವನದುದ್ದಕ್ಕೂ ಪಾಲಿಗೆ ಬಂದಿದ್ದು ಪಂಚಾಮೃತವೆಂಬಂತೇ ಸೌಮ್ಯವಾಗೇ ಬದುಕಿಬಿಟ್ಟರು.ಇಂತಹ ಶಾಂತಮೂರ್ತಿಯ,ಮುಗ್ಧಜೀವಿಯ ಒಳ್ಳೆಯ ಗುಣವನ್ನು ದುರುಪಯೋಗಪಡಿಸಿಕೊಂಡವರೇ ಅನೇಕರು.ತಮಗೆ ಕೇಡು ಬಯಸಿದವರಿಗೂ ಒಳ್ಳೆಯದಾಗಲಿ ಎಂದು ಹರಸುವ ಬುದ್ಧಿ ದೇವರಂತವರಿಗಲ್ಲದೇ ಇನ್ಯಾರಿಗಿದ್ದೀತು?
         ಹುಟ್ಟಿದ್ದು ಹೆಣ್ಣುಮಗುವೆಂದು ತಿಳಿದಾಗ ಅಜ್ಜಿ ಬಲು ಬೇಸರಗೊಂಡಿದ್ದರಂತೆ.ಆಗಲೇ ತಮ್ಮ ಮಗಳನ್ನು ಮಗನಂತೇ ಬೆಳೆಸುತ್ತೆನೆಂದು ನಿರ್ಧಾರ ತೆಗೆದುಕೊಂಡ ಅಪ್ಪ ನನ್ನನ್ನೆಂದೂ ಮಗಳಂತೆ ನೋಡಲೇ ಇಲ್ಲ.ಯಾಕೆಂದರೆ ನಾನವರ ಪಾಲಿಗೆ 'ಮಗ'ನಾಗಿದ್ದೆ,ಇಂದಿಗೂ ಮಗನೇ..ನಮಗೆ ಬುದ್ಧಿಬಂದಾಗಿನಿಂದ ಅವರು ನನ್ನ ಮತ್ತು ತಂಗಿ ಮೇಲೆ ಕೋಪಗೊಂಡಿದ್ದಾಗಲಿ,ಹೊಡೆಯಲು ಕೈಯೆತ್ತಿದ್ದಾಗಲಿ,ಬೈಯ್ದಿದ್ದಾಗಲಿ ನೆನಪೇ ಇಲ್ಲ.ನನ್ನ ತಂಗಿಯಂತೂ ಚಿಕ್ಕವಳಿದ್ದಾಗ ಅಪ್ಪನ ಮುಖ ನೋಡದೇ ಕಣ್ಣೇ ತೆರೆಯುತ್ತಿರಲಿಲ್ಲ.ಅವಳನ್ನು 'ಉಪ್ಪಿಮೂಟೆ' ಮಾಡಿಯೋ,ತಲೆಮೇಲೆ ಹೊತ್ತುಕೊಂಡೋ ತೋಟ ಸುತ್ತಿಸಿದರೆ ಮನೆಯವರ ದಿನವೆಲ್ಲಾ ಸುಗಮವಾಗುತ್ತಿತ್ತು,ಇಲ್ಲದಿದ್ದರೇ ದಿನವಿಡೀ ಪಕ್ಕವಾದ್ಯ-ಚಂಡೆಮದ್ದಳೆ.ನಾನೂ ಅಷ್ಟೇ ಅಪ್ಪ ನನ್ನನ್ನೆತ್ತಿಕೊಂಡು ಮಹಡಿಯ ಕೋಣೆಯಲ್ಲಿ ಮಲಗಿಸಲೆಂದು , ಹಜಾರದ ಖುರ್ಚಿಯಲ್ಲೇ ಕಳ್ಳನಿದ್ರೆ ಮಾಡುತ್ತಿದ್ದೆ. ನಿದ್ದೆಬಾರದ ದಿನಗಳಲ್ಲಿ ಅಪ್ಪ ಹೇಳುವ ಕಟ್ಟುಕಥೆಗೆ(ಆಗ ಗೊತ್ತಿರಲಿಲ್ಲ) ಕಿವಿಯಾಗುತ್ತ ರಾತ್ರಿಯ ನಿದ್ರಾದೇವಿಯ ತೆಕ್ಕೆಗೆ ಶರಣಾಗುತ್ತಿದ್ದೆವು.
      ಶಕುನಿಪಾಲಲ್ಲಿ ಸಿಕ್ಕ ಕಾಡಿನಂತಿದ್ದ ಜಾಗದಲ್ಲಿ ತೋಟಮಾಡಿ,ಮನೆಕಟ್ಟಿದ್ದರಂತೆ,ಅದಕ್ಕೆ ನಮ್ಮಜ್ಜಿ 'ಪರಶ್ರಾಮ ಸೃಷ್ಟಿ ನಿನ್ನಪ್ಪಂದು' ಎಂದು ಕೊನೆತನಕ ಹೇಳುತ್ತಲೇ ಇದ್ದರು.ಅವರು ಮನಸ್ಸು ಮಾಡಿದ್ದರೆ ಎಕರೆಗಟ್ಟಲೇ ತೋಟ ಆಸ್ತಿ ಮಾಡಿಕೊಂಡು ತಮ್ಮ ನಿವೃತ್ತಿ ಜೀವನವನ್ನು ಮತ್ತಷ್ಟು ಸುಭದ್ರಗೊಳಿಸಿಕೊಳ್ಳಬಹುದಿತ್ತು.ಆದರೆ ಅವರು ಹಾಗೇ ಮಾಡದೇ 'ಮಗಾ,ಅಪ್ಪಿ ನಿಂಗವಿಬ್ರೂ ಎಷ್ಟ್ ಓದತ್ರಾ ಓದ್ಸ್ತೆ.ಇದೇ ನಾ ನಿಂಗಕ್ ಕೊಡಾ ಆಸ್ತಿ' ಎಂದೆನ್ನುತ್ತಾ, ನನಗೆ ನನ್ನ ತಂಗಿಗೆ ಉನ್ನತ ಶಿಕ್ಷಣ ಕೊಡಿಸಿದರು.ಇದನ್ನೆಲ್ಲಾ ಅರಿಯದ ಕೆಲವು ಸಣ್ಣಮನಸ್ಸಿನ ಶ್ರೀಮಂತ ಜನ ನನ್ನ ತವರುಮನೆಯನ್ನು ನೋಡಿ 'ಮನೆ ಸ್ವಲ್ಪ್ ಚಿಕ್ಕದಾಯ್ತಲ್ದಾ' ಎಂದರೆ ನನಗೆ ಬೆಟ್ಟದಷ್ಟು ಕೋಪವುಕ್ಕಿ ಬರುತ್ತದೆ.'ಮನೆ ಚಿಕ್ಕದಾದರೇನು ಮನಸ್ಸು ದೊಡ್ಡದಾಗಿದೆ' ಎಂಬ ಸತ್ಯ ಅವರಿಗೆಲ್ಲಾ ಯಾಕರ್ಥವಗಲ್ವೋ ನಾ ಕಾಣೆ.
       ಬಿಸಿಲು-ಮಳೆಯೆನ್ನದೇ ಊರಮಕ್ಕಳ ಗುಂಪುಕಟ್ಟಿಕೊಂಡು, ಹಗಲು ರಾತ್ರಿಯೆನ್ನದೇ ಕುಂಟಾಬಿಲ್ಲೆಯಾಡುತ್ತಾ ಶೀತಮಾಡಿಕೊಳ್ಳುತ್ತಿದ್ದ ನಾನು ಅಮ್ಮನಿಗೆ ತಲೆನೋವಾಗಿದ್ದೆ.ಅದನ್ನು ತಪ್ಪಿಸಲು ಅಪ್ಪನೇನೂ ಪೆಟ್ಟುಕೊಡಲಿಲ್ಲ ಬದಲಿಗೆ ಪುಸ್ತಕವನ್ನು ಕೊಟ್ಟು ಓದುವ ರುಚಿ ಹತ್ತಿಸಿದರು.ಚಂಪಕ-ಬಾಲಮಂಗಳ-ಬಾಲಮಿತ್ರದಿಂದ ಶುರುವಾದ ನನ್ನ ಪುಸ್ತಕ ಪ್ರೀತಿ, ಹೈಸ್ಕೂಲ್ ಗೆ ಬರೊವಷ್ಟರಲ್ಲಿ ಅಪ್ಪ ಲೈಬ್ರರಿಯಿಂದ ತರುತ್ತಿದ್ದ 'ಕೌಂಡಿನ್ಯ,ಯಂಡಮೂರಿ,ಸಿಡ್ನಿ ಶೆಲ್ಡನ್, ರಾಬರ್ಟ್ ಲುಡ್ಲಮ್'ರ ಕೃತಿಗಳನು ಓದುವಷ್ಟರ ಮಟ್ಟಿಗೆ ಬಂದು ನಿಂತಿತ್ತು.ನನಗಾಗಲೇ ಬರೆಯುವ ಹುಚ್ಚು,ಬರೆದಿದ್ದೆಲ್ಲಾ ಪತ್ರಿಕೆಗೆ ಕಳುಹಿಸುತ್ತಿದ್ದೆ (ಈಗಲೂ ಅದೇ ಅಭ್ಯಾಸ).ಮೊದಮೊದಲಿಗೆ ಕಳುಹಿಸದ್ದೆಲ್ಲಾ ತಿರಸ್ಕೃತವಾಗಿ ಮರಳಿ ಬರುತ್ತಿದ್ದಾಗ ಅತ್ತಿದ್ದೂ ಅಪ್ಪನ ಹೆಗಲ ಹಿಡಿದೇ.ಮನೆಯಲ್ಲಿ ಅಮ್ಮನಿಗೂ ತಿಳಿಸದೇ ನಾನು ಕಳುಹಿಸಿದ್ದೆಲ್ಲಾ ಪತ್ರಿಕೆಗೆ ಕಳುಹಿಸುತ್ತಿದ್ದುದು ಅಪ್ಪನೇ.ನಾನು ಪಿಯುಸಿಯಲ್ಲಿದ್ದಾಗ ಮೊದಲಸಲ ನನ್ನ ಕಥೆ 'ಪ್ರಿಯಾಂಕ' ಪತ್ರಿಕೆಯಲ್ಲಿ ಪ್ರಕಟವಾಗಿತ್ತು, ಆಗ ಅಪ್ಪ ಪಟ್ಟ ಖುಶಿಯನ್ನು ಹೇಗೆ ವರ್ಣಿಸಲಿ.ಅದಾದಮೇಲೆ ಆಗ ಟಿ.ಕಸ್ತೂರಿಯವರಿಂದ ಬಂದ ಪತ್ರ,ಗೌರವಧನವೆರಡೂ ಅಪ್ಪನ ಬಳಿ ಇಂದಿಗೂ ಜೋಪಾನವಾಗಿದೆ,ಅದು ಅಮೂಲ್ಯ ಆಸ್ತಿಯೆನೋ ಎಂಬಂತೆ.ನಂತರ 'ಮಯೂರದ' ಗುಬ್ಬಚ್ಚಿಗೂಡು' ಅಂಕಣಕ್ಕೆ ನನ್ನ ಲೇಖನ ಆಯ್ಕೆಯಾದಾಗ, ಪತ್ರಿಕೆಯವರು ಮನೆಗೆ ಕರೆಮಾಡಿ ಅಪ್ಪನ ಬಳಿ ಮಾತನಾಡಿ ನನ್ನ ಬಗ್ಗೆ ವಿಚಾರಿಸಿಕೊಂಡಿದ್ದು ಅವರಿಗೆ ಹೆಮ್ಮೆಯ ವಿಚಾರವಾಗಿತ್ತು.ಅದರಲ್ಲೂ ಅಪ್ಪನ ಗೆಳೆಯರು,ನೆಂಟರಿಷ್ಟರೂ ನನ್ನ ಲೇಖನವನ್ನು ಹೊಗಳಿದಾಗ ಅಪ್ಪನಿಗಾದ ಸಂತೋಷ,ಆ ಕಣ್ಣಲ್ಲಿ ನಾ ಕಂಡ ಮಿಂಚೇ ನನ್ನನ್ನೂ ಮತ್ತಷ್ಟೂ,ಮಗದಷ್ಟು ಬರೆಯಲು ಪ್ರೇರೆಪಿಸುವುದು.
       ಜೀವನದಲ್ಲಿ ಹೀನಾಯ ಸೋಲುಕಂಡಾಗಲೂ,ಮುಗ್ಗರಿಸಿ ಬಿದ್ದಾಗಲೂ ನನಗೆಂದೂ ಒಂಟಿತನ ಕಾಡಲೇ ಇಲ್ಲ,ಕಾರಣ ಪ್ರತೀ ಹೆಜ್ಜೆಯಲ್ಲೂ ನೆರಳಾಗಿ,ಬೆನ್ನೆಲುಬಾಗಿ ಅಪ್ಪನಿದ್ದರಲ್ಲ.ಕಷ್ಟದ ಅರಿವೇ ಮಾಡಿಸದೇ,ಅತಿಯಾಗಿ ಮುದ್ದುಮಾಡಿ,ಬೇಕಾದಷ್ಟು ಸ್ವಾತಂತ್ರಕೊಟ್ಟು ಬೆಳೆಸಿದರೂ,ಅವರ ಪ್ರೀತಿಯನ್ನು ನಾನು-ನನ್ನ ತಂಗಿ ಅದರ ದುರುಪಯೋಗ ಪಡೆದುಕೊಳ್ಳಲಿಲ್ಲ.ನಮ್ಮ ಮದುವೆಯಾದ ಮೇಲೆ ಅವರ ಜವಾಬ್ಧಾರಿ ಕಡಿಮೆಯಾದರೂ ಅವರ ಪ್ರೀತಿ-ಕಾಳಜಿಯಲ್ಲಿ ಎಳ್ಳುಕಾಳಷ್ಟು ಕಡಿಮೆಯಾಗಲಿಲ್ಲ.ನನಗೆ ಮದುವೆಯಾಗಿ ಜೀವ ಹಂಚಿಕೊಳ್ಳುವ ಸಂಗಾತಿಯಿದ್ದರೂ ಅಪ್ಪನ ಬಳಿ ಎಲ್ಲವನ್ನೂ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಜೀವಕ್ಕೆ. ಕಾರಣ 'ಅಪ್ಪ ನನ್ನ ಮೊದಲ ಹೀರೋ',ನಾ ಕಂಡ ದೇವತಾ ಮನುಷ್ಯ,ನಾನು ದೇವರಾ ಮಗ(ಳು).ಈ ಲೇಖನಿಯ ಮೂಲಕ ನನ್ನ ದೇವರಂಥಹ ಅಪ್ಪನಿಗೆ 'ಅಪ್ಪಂದಿರ ದಿನದ ಶುಭಾಶಯಗಳು..ನಗುತಾ ನಗುತಾ ಬಾಳು ನೀನು ನೂರು ವರುಷ' ಎಂದು ಶುಭಕೋರುವೆ.
-ಶುಭಶ್ರೀ ಭಟ್ಟ,ಬೆಂಗಳೂರು



ನನ್ನ ಮದುವೆ-ಅಜ್ಜಿ ಕನಸು

(ವಿಶ್ವವಾಣಿ ವಿವಾಹ್ ಪುರವಣಿಯಲ್ಲಿ ಪ್ರಕಟ)

   ಅದಾಗಲೇ ಮದುವೆ ನಿಕ್ಕಿಯಾಗಿತ್ತು ನನಗೆ.ಮನೆಯವರೆಲ್ಲಾ ಖುಷಿಯಾಗಿದ್ದರು,ಮನವೂ ಹತ್ತಿಯ ಹೂವಂತೆ ಹಗುರಾಗಿ ತೇಲುತ್ತಿತ್ತು.ಇನ್ನೇನು ಎರಡು ತಿಂಗಳಲ್ಲಿ ನಿಶ್ಚಿತಾರ್ಥ,ನಿಶ್ಚಿತಾರ್ಥದ ಮದರಂಗಿ ರಂಗು ಮಾಸುವುದರೊಳಗೆ ಮದುವೆ ಎಂದು ಮಾತಾಗಿತ್ತು.ಇವೆಲ್ಲಾ ಗಡಿಬಿಡಿ ಸಂಭ್ರಮದ ನಡುವೆ ನನಗದೆನೋ ಖಾಲಿ ಖಾಲಿ ಅನುಭವ. ಹೇಳಿಕೊಳ್ಳಲಾಗದ್ದು,ಹಲುಬುವಂತಾಗಿದ್ದು ಕಾರಣವಿಲ್ಲದೆ.ಇಷ್ಟುದಿನ ಒಟ್ಟಿಗಿದ್ದ ಗೆಳತಿಯರನ್ನು ಬಿಟ್ಟಗಲುವ ನೋವಾ?ನನ್ನ ಮನೆ ಇನ್ಮುಂದೆ ತವರುಮನೆಯೆನಿಸಿಕೊಳ್ಳುತ್ತದೆ ಎಂಬ ಬೇಸರವಾ?ಅಥವಾ ಹೊಸಜೀವನದ ಶುರುವಲ್ಲಾಗುವ ಗುಡುಗುಡಿಕೆಯಾ ಗೊತ್ತಾಗಲಿಲ್ಲ.
   ಬೆಂಗಳೂರಿನ ಬೀದಿ-ಬೀದಿಯಲ್ಲಿ ಕುಳಿತಿರುವ 'ಮೆಹಂದಿ ಭಯ್ಯಾ'ಗಳಲ್ಲೊಬ್ಬರ ಬಳಿ ಬರೀ ೩೦೦ರೂಪಾಯಿ (ಊರಲ್ಲಾದರೇ ಸಾವಿರದ ದರ) ಕೊಟ್ಟು,ತುಂಬಾ ಚೆಂದದ ಕುಣಿಯುವ ನವಿಲನ್ನೆಲ್ಲಾ ಬಿಡಿಸಿಕೊಂಡು ಮನೆಗೆ ಹೊರಟಾಯ್ತು.ಎಡಗೈಗೆ ಉಂಗುರ ಹಾಕುವವರೆಂಬ ಸಿನಿಮೀಯ ನಂಬಿಕೆಯಿಂದ,ಎಡಗೈ ಬಲಗೈಗಿಂತ ಚೆಂದವಾಗಿ ಮಿಂಚುತ್ತಿತ್ತು.ಹೀಗೆ ಮದರಂಗಿ ಬಳಿದುಕೊಂಡ ನಾನು ಮಹಾರಾಣಿಯಂತೆ ಬಸ್ಸು ಹತ್ತಿ ಕುಳಿತಿದ್ದೆ.ಹೊರಲಾರದ ಚೀಲದ ಭಾರಹೊತ್ತು ಉಸ್ಸಪ್ಪಾ ಎಂದು ಪಕ್ಕದಲ್ಲಿ ಬಂದು ಕುಳಿತಳು ನನ್ನ ತಂಗಿ. ಅಷ್ಟೇನೂ ಅಲಂಕಾರ ಪ್ರಿಯಳಲ್ಲದ ಅವಳಿಗೆ,ಘಳಿಗೆಗೊಮ್ಮೆ ನನ್ನ ಒಣಗಿದ ಮದರಂಗಿಯನ್ನು ಸಕ್ಕರೆನೀರು,ನೀಲಗಿರಿ ಎಣ್ಣೆಯನ್ನು ಹತ್ತಿಯಲ್ಲಿದ್ದಿಸಿ ಮೆತ್ತಮಾಡುವುದು ಕಿರಿಕಿರಿಯಾಗಿ,ಕೊನೆಗೊಮ್ಮೆ ಸರಿಯಾಗಿ ಸಿಡುಕಿ ಮಲಗಿದಳು.ನಾನು ಮತ್ತೆ ನಕ್ಷತ್ರವ ನೋಡುತ್ತಾ ಅರ್ಥವಾಗದ ತಳಮಳದೊಂದಿಗೆ ನಿದ್ರೆಗೆ ಜಾರಿದೆ.
  'ಬಂದ್ಯಾ ಮಗಾ! ಬಾ..ಈ ಸಲ ಬಗೇಲಿ ಸುಧಾರ್ಸಿದ್ದೆ ಹ್ಮಾಂ'ಎನ್ನುವ ಅಮ್ಮನ ಕಕ್ಕುಲಾತಿ,'ಅಪ್ಪೂ ಮಗಾ ನಿದ್ದೆ ಬಂತಾ ಸಮಾವ'ಎಂಬ ಅಪ್ಪನ ಅಪ್ಯಾಯತೆಯ ನಡುವೆಯೂ ಕ್ಷಣಮಾತ್ರ ಮನ ಖಾಲಿಯೆನಿಸಿತ್ತು.ಸೆಗಣಿ ಹಾಕಿ ಸಾರಿಸಿ ಚುಕ್ಕೆ ರಂಗೋಲಿಯೆಂಬ ಮದರಂಗಿ ಹಚ್ಚಿಕೊಂಡು,ಮಾವಿನ ಟುಮಕೆಯ ಬೈತಲೆ ಬೊಟ್ಟಿಟ್ಟು,ತೆಂಗಿನಗರಿಯ ಚಪ್ಪರವೆಂಬ ದಪ್ಪಸೆರಗು,ಸುಣ್ಣ-ಬಣ್ಣವೆಂಬ ಕ್ರೀಮ್ ಬಳಿದುಕೊಂಡ ಗೋಡೆಯ ಮುಖ,ಹೀಗೆ ಒಟ್ಟಿನಲ್ಲಿ ಮನೆಯೂ ಮದುಮಗಳಂತೆ ಸಿಂಗಾರಗೊಂಡಿತ್ತು,ನನಗಿಂತಲೂ ಭರ್ಜರಿಯಾಗಿ. ಆದರೂ ಆ ಮನೆಯ ನಗುವಿನ ಹಿಂದೆ ಯಾವುದೋ ಅಸ್ಪಷ್ಟ ವಿಷಾದದಲೆ ತೇಲಿಬಂದು ಮನ ಪಿಚ್ಚೆಂದಿತು.
   ಪುರುಸೊತ್ತಿಲ್ಲದೇ ಬೆಳಿಗ್ಗೆ ಬೇಗನೆ ಎಬ್ಬಿಸಿದ ಅಮ್ಮನನ್ನು ಗೊಣಗಿಕೊಳ್ಳುತ್ತಾ ಎದ್ದು ತಯಾರಾಗತೊಡಗಿದೆವು.ಬೆಳಿಗ್ಗೆ ಪೂಜೆಗೆ ಸಾಧಾರಣ ಸೀರೆಯುಟ್ಟು ದೇವರಿಗೆ ನಮಸ್ಕರಿಸಿ,ಅಪ್ಪ-ಅಮ್ಮನಿಗೆ ಕೈಮುಗಿಯಲು ಮುಂದಾದಾಗ ಅಮ್ಮ ಕೇಳಿದರು 'ಅಜ್ಜಿಗೆ ಕೈಮುಗಿ ಮೊದಲು'. ಈ ಮಾತಿಗಾಗೇ ಮನ ಕಾಯುತ್ತಿದ್ದ ಮನಕ್ಕೆ ಬರಗಾಲದಲ್ಲಿ ಮಳೆಹನಿ ಸಿಂಪಡಿಸಿದಂತಾಯ್ತು,ಇಷ್ಟುದಿನ ಕಾಡುತ್ತಿದ್ದ-ಕೊರೆಯುತ್ತಿದ್ದ ಭಾವಕ್ಕೆಲ್ಲಾ ಅರ್ಥ ಸಿಕ್ಕಿಬಿಟ್ಟಿತ್ತು. 'ನಿನ್ನ ಮದ್ವೆ ನೋಡಗಿದ್ದೆ ಸಾಯ್ತನಿಲ್ಲೆ' ಎನ್ನುತ್ತಲೇ ಇರುತ್ತಿದ್ದ ಅಜ್ಜಿ,ನನಗೆ ವಿಷಯವೂ ತಿಳಿಸದೇ ಬಾರದ ಲೋಕಕ್ಕೆ ತೆರಳಿದ್ದರು.ಕಣ್ತುಂಬಿಕೊಂಡಂತಾಗಿ ಅಜ್ಜಿಯ ಪಟಕ್ಕೆ ಅಡ್ಡಬಿದ್ದವಳಿಗೆ,ಅಜ್ಜಿಯ ಒರಟು ಕೈ ಸ್ಪರ್ಶ ಆಶೀರ್ವಾದ ಮಾಡಿದಂತಾಗಿ ಮೇಲೆದ್ದೆ,ಅವಳಿರಲಿಲ್ಲ.'ನನ್ನ ಮದ್ವೇ...ಆಶಿರ್ವಾದ ಮಾಡೇ ಪ್ಲೀಸೇ'ಎನ್ನುತ್ತಾ ಅರಿವಿಲ್ಲದೆ ಜೋರಾಗಿ ಬಿಕ್ಕಿದ್ದೆ. ಇದನ್ನು ಕಂಡು ಮನೆಯವರೆಲ್ಲಾ ಕಣ್ತುಂಬಿಕೊಂಡಾಗ,ಅವರಿಗೆ ನೋವಾಗಬಾರದೆಂದು ಭಾವನೆಗಳನ್ನು ಕಟ್ಟಿಟ್ಟೆ.
  ನನ್ನವರ ಅಜ್ಜಿಗೆ ಬರಲಾಗುವುದಿಲ್ಲ,ತುಂಬಾ ದೂರವೆಂಬ ಕಾರಣಕ್ಕೆ ಮದುವೆ ನನ್ನವರ ಊರು ಶೃಂಗೇರಿಯಲ್ಲೇ ಎಂದು ನಿಶ್ಚಿಯವಾಯ್ತು.ಮೊದಲ ಮಗಳ ಮದುವೆಯನ್ನು ಸಹಜವಾಗಿ ತಮ್ಮ ಊರಲ್ಲೇ ಮಾಡಬೇಕೆಂಬ ಆಸೆಹೊತ್ತಿದ್ದ ಅಪ್ಪ-ಅಮ್ಮನಿಗೆ ನಿರಾಶೆಯಾದರೂ,'ಅಜ್ಜಿ'ಯ ಕಾರಣಕ್ಕೆ 'ಹ್ಮೂಂ'ಗುಟ್ಟಿದರು. ನಾನಾಗಲೇ ನನ್ನವರ ಅಜ್ಜಿಯಲ್ಲಿ,ನನ್ನಜ್ಜಿಯನ್ನು ಕಾಣತೊಡಗಿದ್ದೆ.'ಚೆಂದ್ ಸೊಸೆ ಸಿಕ್ಕಿದಾಳ್ ಕಣೇ.ಸಮಾ ಚಿನ್ನಾ ಹಾಕು ಆಯ್ತಾ' ಎಂದು ನನ್ನತ್ತೆಗೆ ಅವರು ಹೇಳುವ ರೀತಿ,ಅವರ ಬೊಚ್ಚುಬಾಯಿ ನಗು,ಆ ಒರಟುಕೈಯಿ ಪ್ರೀತಿ ಸ್ಪರ್ಶ ಎಲ್ಲವೂ ಥೇಟ್ ನನ್ನಜ್ಜಿಯಂತೇ ಅನಿಸಿಬಿಟ್ಟಿತ್ತು.
  ಮದುವೆಯ ಹಿಂದಿನ ದಿನ ನಾಂದಿಯಲ್ಲಿ ಗೂನು ಬೆನ್ನು ಬಾಗಿಸಿಕೊಂಡು ಬಂದು ಕಲಶ ಸ್ನಾನ ಮಾಡಿಸಿದ ಸಣ್ಣಜ್ಜಿ ಕಲ್ಯಾಣಿ,ನನ್ನಜ್ಜಿಯನ್ನು ನೆನಪಿಸಿ ಕಣ್ತೇವೆಗೊಳಿಸಿದ್ದರು.'ಅಬ್ಬೆ ಇದ್ದಿದ್ರೆ ಎಷ್ಟು ಖುಷಿಪಟ್ಕತ್ತಿತ್ತೇನಾ' ನೆರೆದ ಹಿರಿಯರ ಮಾತುಗಳು ಅಜ್ಜಿಯನ್ನು ಮತ್ತೆ ಮತ್ತೆ ನೆನಪಿಸಿದವು.ನನ್ನ ಮದುವೆ ನನ್ನಜ್ಜಿಯ ಕನಸಾಗಿತ್ತು.'ಚೆಂದ ಗಿಣಿ ಸಾಕಿದಾಂಗೇ ಸಾಕಿದ ಕೂಸ್ನಾ,ಛೋಲೋ ಮನೆಗ್ ಕೊಡವು' ಎಂಬುದು ಅವರ ನಿತ್ಯವಾಕ್ಯವಾಗಿತ್ತು.ಹುಷಾರಿಲ್ಲದೇ ಮಲಗಿದ್ದಾಗ ಅವರನ್ನು ನೋಡಲು ಬರುವವರಲ್ಲೆಲ್ಲಾ 'ನಾ ಇಷ್ಟ್ ಬೇಗ್ ಸಾಯ್ವವಲ್ದಾ.ನಾ ಶುಭನ್ ಮದ್ವೆ ನೋಡ್ಕಂಡೇ ಹೋಪವ' ಎಂಬ ಪದ್ಯವಾಗುತ್ತಿತ್ತು.ಇದನ್ನೆಲ್ಲಾ ಕೇಳಿಕೊಂಡೆ ಬೆಳೆದ ನನಗೆ,ಅಜ್ಜಿಗೆ ಅರುಳು-ಮರುಳಾದಾಗಲೂ,ಅವರು ಹಾಸಿಗೆ ಹಿಡಿದಾಗಲೂ,ಅವರ ಜೀವಕ್ಕೇನೂ ಅಪಾಯವಾಗೊಲ್ಲಾ ಎಂಬ ಅಪಾರ ನಂಬಿಕೆಯಿತ್ತು. ನನ್ನ ಮದುವೆಯ ಕನಸು ಹೆಣೆಯುತ್ತಾ,ಕನಸಿನ ಬುಟ್ಟಿಯನ್ನು ನನ್ನ ಕೈಲಿ ಕೊಟ್ಟು,ಹೇಳದೇ ಮರೆಯಾದರು.ಇವತ್ತು ಅವರ ಕನಸು ನನಸಾಗಿದೆ, ಆದರೆ ಅದನ್ನು ನೋಡಲು ಮಾತ್ರ ಅವರಿಲ್ಲ.
  ಮದುವೆಯ ಶಾಸ್ತ್ರವೆಲ್ಲಾ ಮುಗಿಸಿ ನನ್ನವರ ಅಜ್ಜಿಯ ಕಾಲಿಗೆ ನಮಸ್ಕರಿಸುವಾಗ ಚೂರು ತಡವಾಗೇ ಮೇಲೆದ್ದಿದ್ದೆ,ಬರುತ್ತಿರುವ ಕಣ್ಣೀರನ್ನು ಹತ್ತಿಕ್ಕುವ ನೆಪದಲ್ಲಿ. ನನ್ನವರು ಅರುಂಧತಿ ನಕ್ಷತ್ರವ ತೋರಿಸಿದಾಗ,ನನ್ನಜ್ಜಿಯೆಲ್ಲಾದರೂ ಕಾಣುತ್ತಾರೆಂದು ಅತ್ತಿತ್ತ ಕಣ್ಣಾಡಿಸಿದ್ದೆ. ನನ್ನ ಕಷ್ಟ ನೋಡಲಾಗದೇ ನನ್ನವರು ಹೇಳಿದ್ದಿಷ್ಟೇ 'ನೀನು ಚೆನ್ನಾಗಿ ನಗ್ತಾನಗ್ತಾ ಇದ್ರೇನೆ ನಿಮ್ಮಜ್ಜಿಗೆ ಖುಷಿಯಾಗತ್ತೆ.ನಮ್ಮ ಮದ್ವೆನಾ ಅವ್ರು ಅಲ್ಲಿಂದನೇ ನೋಡಿ,ಆಶೀರ್ವಾದ ಮಾಡಿದ್ದಾರೆ'ಅಂತೆಲ್ಲಾ ಮಗುವಿಂತೆ ಸಮಾಧಾನಿಸಿದಾಗ ಸ್ವಲ್ಪ ನಿರಾಳಗೊಂಡೆ.ಈಗ ಮದುವೆಯಾಗಿ ಎರಡೂವರೆ ವರುಷವಾದರೂ,ಅಜ್ಜಿ ನನ್ನ ಮದುವೆ ನೋಡಿಲ್ಲ ಎಂಬ ಕೊರಗು ಪೂರ್ಣವಾಗಿ ನಿಂತಿಲ್ಲ.ಯಾವುದೇ ಅಜ್ಜಿಯನು ಕಂಡರೂ,ಅವರ ಕಂಗಳಲಿ ತಡಕಾಡುತ್ತಿರುತ್ತೆನೆ ನನ್ನಜ್ಜಿ ಬಿಂಬವ,ನಾನು ಮದುವೆಯಾದುದನ್ನು ನೋಡುತ್ತಾಳೆಂಬ ಆಸೆಯಿಂದ.
-ಶುಭಶ್ರೀ ಭಟ್ಟ,ಬೆಂಗಳೂರು

ನಮಸ್ತುಲಸಿ ಕಲ್ಯಾಣಿ

(ಸತ್ವಧಾರದಲ್ಲಿ ಪ್ರಕಟವಾಗಿದೆ)

   "ಓಂ ತುಳಸೀಚ ವಿದ್ಮಹೇ
   ವಿಷ್ಣುಪ್ರಿಯಾಯ ಧಿಮಹೇ
   ತನ್ನೋ ವೃಂದಾ ಪ್ರಚೋಯದಾತ್||"
   ಈ ತುಳಸೀ ಗಾಯತ್ರಿ ಮಂತ್ರದ ಅರ್ಥ ಹೀಗಿದೆ- "ವಿಷ್ಣುವಿನ ಪ್ರೀತಿಪಾತ್ರಳಾದ ಶ್ರೀತುಳಸಿಯೇ ನಾನು ನಿನ್ನನ್ನು ಧ್ಯಾನಿಸುತ್ತೆನೆ.ಅಪರಿಮಿತವಾದ ಜ್ನಾನವನ್ನು ಕೊಟ್ಟು ನನ್ನ ಬುದ್ಧಿಯನ್ನು ಪ್ರಚೋದಿಸು". ಇದನ್ನು ನಿತ್ಯವೂ ಶುಚಿರ್ಭುತರಾಗಿ,ತುಳಸಿಕಟ್ಟೆಗೆ ಪ್ರದಕ್ಷಿಣೆ ಹಾಕುತ್ತಾ,ಶುದ್ಧಮನಸ್ಸಿನಿಂದ,ಉಚ್ಛಾರ ದೋಷವಿಲ್ಲದೇ ಪಟಿಸುವುದರಿಂದ ಶ್ರೀಮಹಾಲಕ್ಷ್ಮೀಯ ಅನುಗ್ರಹವಾಗುವುದರ ಜೊತೆಗೆ,ಉಸಿರಾಟಕ್ಕೆ ಸಂಬಂಧ ಪಟ್ಟ ತೊಂದರೆಗಳು ಕ್ರಮೇಣ ದೂರವಾಗುವವು ಎಂದು ಜೈನಗುರುಗಳೊಬ್ಬರು ನಮ್ಮ ವಿಶ್ವವಿದ್ಯಾಲಯದಲ್ಲಿ ಮಾಡಿದ ಪ್ರವಚನದಲ್ಲಿ ಪ್ರಸ್ಥಾಪಿಸಿದ್ದರು.
  ಸರ್ವರಿಂದಲೂ ಪೂಜಿಸಲ್ಪಡುವ ಈ ಹರಿಪ್ರಿಯ ತುಳಸಿಯು,ಉಳಿದೆಲ್ಲಾ ಸಸ್ಯಗಳಿಗಿಂತಲೂ ವಿಶಿಷ್ಠ ಸ್ಥಾನಮಾನವನ್ನು ಹೊಂದಿದೆ.
 "ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ
 ಯದಗ್ರೇ ಸರ್ವದೇವಾಶ್ಚ ತುಲಸೀ ತ್ಮಾಂ ನಮಾಮ್ಯಹಂ|| " ಈ ಶ್ಲೋಕದ ಮೂಲಕ ತುಳಸಿಗೆ ಸರಿಸಾಟಿಯಾದುದು ಯಾವುದೂ ಇಲ್ಲವೆಂದೆ ಹೇಳಿದ್ದಾರೆ ಹಿರಿಯರು.
ತುಳಸಿಯು 'ಹರಿಪ್ರಿಯಾ,ವಿಷ್ಣುಪ್ರಿಯಾ,ವೃಂದಾ,ದಿವ್ಯಾ,ವೈಷ್ಣವಿ,ವಿಷ್ಣುವಲ್ಲಭೆ,ಪವಿತ್ರಾ, ಭಾರತೀ,ಧಾರಿಣಿ,ಸಾವಿತ್ರಿ,ಪದ್ಮಿನಿ,ಶ್ರೀಮತಿ,ತೃಷ್ಣಾ,ಕಾಮಕ್ಷೀ' ಹೀಗೆ ಬಹುನಾಮಗಳಿಂದ ಕರೆಯಲ್ಪಡುತ್ತಾಳೆ.ಅಮೃತವನ್ನು ಪಡೆಯಲಿಕ್ಕಾಗಿ ದೇವದಾನವರು ಕ್ಷೀರಸಮುದ್ರವನ್ನು ಕಡೆಯತೊಡಗಿದ್ದರು. ದೇವಾಸುರರ ನಡುವೆ ಅಮೃತಕ್ಕಾಗಿ ಘರ್ಷಣೆಯಾಗುತ್ತಿದ್ದಾಗ ಹರಿಯ ಕೈಯಲ್ಲಿದ್ದ ಕಲಶದಲ್ಲಿ ಬಿದ್ದ ಅಮೃತಬಿಂದುವಿನಿಂದ ಹುಟ್ಟಿದವಳೇ 'ತುಳಸಿ',ಅದಕ್ಕೆ ಇವಳು ಹರಿಪ್ರಿಯಳು ಎಂಬ ಕಥೆಯೊಂದಿದೆ. ಇನ್ನು ಕೆಲವು ಮೂಲಗಳ ಪ್ರಕಾರ 'ಜಲಂಧರ(ಶಿವನ ಮೂರನೇ ಕಣ್ಣಿಂದ ಜನಿಸಿದವ)ನ ಪತ್ನಿಯಾದ ವೃಂದಾ ಅಪರಿಮಿತ ಪತಿವೃತೆಯಾಗಿ,ವಿಷ್ಣುವಿನ ಪರಮ ಭಕ್ತಳಾಗಿದ್ದಳು.ವೃಂದೆಯ ಶಕ್ತಿಯನ್ನು ದುರುಪಯೋಗಿಸುತ್ತಾ ಜಲಂಧರನು ದುರಹಂಕಾರಿಯಾದನು.ಅವನನ್ನು ಹುಡುಕುವುದು ಸಾಕ್ಷಾತ್ ಪರಶಿವನಿಗೇ ಕಷ್ಟವಾದಾಗ,ದೇವತೆಗಳೆಲ್ಲಾ ವಿಷ್ಣುವಿನ ಮೊರೆಹೊಕ್ಕರು.ವಿಷ್ಣುವು ಉಪಾಯದಿಂದ ಜಲಂಧರನ ವೇಷ ಧರಿಸಿ ವೃಂದೆಯ ಕಣ್ಮುಂದೆ ಬಂದಾಗ ತನ್ನ ಪತಿಯೆಂದೇ ತಿಳಿದು ವಿಷ್ಣುವನ್ನು ಸ್ಪರ್ಶಿಸಿದಳು.ಸ್ಪರ್ಶಮಾತ್ರದಿಂದ ತನ್ನ ಪಾತಿವೃತ್ಯದ ಶಕ್ತಿಕಳೆದುಕೊಂಡಾಗ ಅದು ಜಲಂಧರನ ಅವಸಾನಕ್ಕೆ ಕಾರಣವಾಯ್ತು.ಅದಕ್ಕೆ ತನ್ನ ಇಷ್ಟದೈವವಾದ ವಿಷ್ಣುವಿನ ಮೇಲೆ ಸಿಟ್ಟುಕೊಂಡ ತುಳಸಿಯು 'ಕಲ್ಲಾಗು' ಎಂದು ಶಪಿಸಿದಾಗ,ಅದನ್ನು ಸಂತೋಷದಿಂದಲೇ ಸ್ವೀಕರಿಸಿದ ವಿಷ್ಣುವು 'ಸಾಲಿಗ್ರಾಮ'ವೆಂಬ ಹೆಸರಿನಲ್ಲಿ ಕಲ್ಲಾದನು. ಯೋಗಾಗ್ನಿಯಲ್ಲಿ ತನ್ನನ್ನು ತಾನು ದಹಿಸಿಕೊಳ್ಳಲು ಹೊರಟ ವೃಂದೆಗೆ 'ಇನ್ನುಮುಂದೆ ನೀನು ತುಳಸಿಯೆಂಬ ಸಸ್ಯವಾಗಿ ಪ್ರಸಿದ್ಧಿ ಪಡೆಯುವೆ,ನೀನಿಲ್ಲದೇ ಮಾಡುವ ಯಾವ ಪೂಜೆಯೂ ನನಗೆ ಸಲ್ಲುವುದಿಲ್ಲ.'ಎಂದು ವರವನ್ನಿತ್ತನೆಂದು ಕಥೆಯಿದೆ.
 ಪವಿತ್ರವಾದ ತುಳಸಿಯಲ್ಲಿಯೂ ಎರಡು ವಿಧವಿದೆ.ಒಂದು ಶ್ರೀತುಳಸಿ(ರಾಮ ತುಳಸಿ),ಇನ್ನೊಂದು ಕೃಷ್ಣತುಳಸಿಯೆಂದು.ಶ್ರೀತುಳಸಿಯ ಎಲೆಗಳು ಹಸಿರಾಗಿದ್ದರೆ,ಕೃಷ್ಣತುಳಸಿಯ ಎಲೆಗಳು ಕಪ್ಪುಬಣ್ಣದಂತಿರುತ್ತದೆ.ಈ ಪೂಜ್ಯ ತುಳಸಿಯು ಸಾಲಿಗ್ರಾಮದ ಪೂಜೆಗೆ ಅತ್ಯವಶ್ಯವಾದುದ್ದು,ಜೊತೆಗೆ ಶ್ರೇಷ್ಠ ಕೂಡ. ಕಾರ್ತಿಕಮಾಸದ ಉತ್ಥಾನ ದ್ವಾದಶಿಯಂದು 'ವಿಷ್ಣುವಿಗೂ-ತುಳಸಿಗೂ' ಮದುವೆ ಮಾಡುವ ವಿಶಿಷ್ಠ ಸಂಪ್ರದಾಯ ಇನ್ನೂ ನಮ್ಮಲ್ಲಿ ಜೀವಂತವಾಗಿದೆ. ಹೆಚ್ಚಾಗಿ ಸ್ತ್ರೀಯರೇ ಆಚರಿಸುವ ಈ ಹಬ್ಬ ನಮ್ಮ ಸಂಸ್ಕೃತಿಗೊಂದು ಮೆರುಗಿಟ್ಟಂತೆ.
   ತುಳಸಿ ಕೇವಲ ಪೂಜನೀಯ ಮಾತ್ರವಲ್ಲ,ಉಪಯುಕ್ತ ಔಷದೀ ಸಸ್ಯವೂ ಹೌದು.ಮನೆಯ ಸುತ್ತಾಮುತ್ತಾ ತುಳಸಿಯಿದ್ದರೇ ಯಾವ ದುಷ್ಟಶಕ್ತಿಗೂ ಮನೆಯೊಳಗೆ ಬರಲಾಗುವುದಿಲ್ಲವಂದು ಹಿರಿಯರು ಹೇಳುವ ಮಾತು ಉತ್ಪ್ರೇಕ್ಷೆಯಂತೂ ಖಂಡಿತ ಅಲ್ಲ. ವೈಜ್ನಾನಿಕ ದೃಷ್ಥಿಕೋನದಿಂದ ನೋಡುವುದಾದರೆ ತುಳಸಿಗಾಳಿಯನ್ನು ಸೇವಿಸುವವರು ಹೆಚ್ಚುಕಾಲ ಆರೋಗ್ಯದಿಂದ ಬಾಳುತ್ತಾರೆ.ಸಸ್ಯಶಾಸ್ತ್ರದ Lumiaccae ಕುಟುಂಬಕ್ಕೆ ಸೇರಿದ ಇದನ್ನು ಆಂಗ್ಲಭಾಷೆಯಲ್ಲಿ 'Holly Basils’ ಎಂದು ಕರೆಯುತ್ತಾರೆ.
 ತುಳಸೀ ಕಟುಕಾ ತಿಕ್ತಾ
  ಹೃದ್ಯೋಷ್ಣಾ ದಾಹಪಿತ್ತಕೃತ್|
 ದೀಪನೀ ಕುಷ್ಠಕೃಚ್ಛಾಸ್ರ
 ಪಾರ್ಶ್ವರುಕ್ ಕಫವಾತಜಿತ್||
    ತುಳಸಿಯು ರುಚಿಯಲ್ಲಿ ಕಹಿ-ಖಾರದಿಂದ ಕೂಡಿದ್ದರೂ,ಅದು ಆರೋಗ್ಯಕ್ಕೆ ಅತೀ ಉಪಯೋಗಕಾರಿ.ಹೃದಯದ ಕಾಯಿಲೆಗೆ,ವಿಷಚಿಕಿತ್ಸೆಗೆ,ಜ್ವರಕ್ಕೆ, ಕುಷ್ಠರೋಗಕ್ಕೆ,ಚರ್ಮರೋಗ-ಮೂತ್ರರೋಗ ತೊಂದರೆಗೆ ತುಳಸಿಯು ತುಂಬಾ ಉಪಯುಕ್ತವಾದುದ್ದು. ಕಾಲರಾ ರೋಗ ನಿವಾರಣೆಯಲ್ಲೂ ಬಲು ಸಹಕಾರಿ.
   ಇಂತಹ ಬಹುಪಯೋಗಿ ತುಳಸಿಯನ್ನು ದೇಹಾಂತವಾದ ಮೇಲೂ ಉಪಯೋಗಿಸುತ್ತಾರೆ.ಇದರಿಂದ ವೈಕುಂಠವಾಸ ಪ್ರಾಪ್ತವಾಗುವುದೆಂದು ನಂಬಿಕೆಯಿದೆ. 'ಒಂದು ದಳ ಶ್ರೀ ತುಳಸಿ,ಒಂದು ಗಂಗೋದಕವು' ಎಂದು ದಾಸರು ಹಾಡಿ ತುಳಸಿಯ ಮಹಿಮೆಯನ್ನು ಜಗತ್ತಿಗೆ ಸಾರಿದ್ದಾರೆ. ಗಂಗಾಜಲದಷ್ಟೇ ಪವಿತ್ರವಾದುದು ಈ ತುಳಸಿ ನೀರು ಎಂದು ಇದರಿಂದ ತಿಳಿದುಬರುತ್ತದೆ.
   ಸರ್ವರಿಗೂ ತುಳಸಿಯ ಮಹತ್ವದ ಅರಿವಾಗಲಿ,ಮನೆಮನೆಯಲ್ಲಿ ತುಳಸೀ ಬನವಿರಲಿ ಎಂದು ಆಶಿಸುತ್ತಾ
 "ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೆ ಶುಭೆ
   ನಮೋ ಮೋಕ್ಷಪ್ರದೇ ದೇವಿ ನಮಸ್ಸಂಪತ್ಪ್ರಾದಾಯಿನಿ||"
-ಶುಭಶ್ರೀ ಭಟ್ಟ ಗುಡಬಳ್ಳಿ,ಬೆಂಗಳೂರು

ಕನಸು ಕಾಣಲು ಕಾಸು ಕೊಡಬೇಕಾಗಿಲ್ಲ

 ಕನಸು ಕಾಣಲು ಕಾಸು ಕೊಡಬೇಕಾಗಿಲ್ಲ

(ಜನಮಾಧ್ಯಮದಲ್ಲಿ ಪ್ರಕಟ)

       'ಅತೀ ದೊಡ್ಡ ಕನಸನ್ನು ಕಾಣುವುದು ಖಂಡಿತ ಅಪರಾಧವಲ್ಲ..ಆದರೆ ಕನಸನ್ನೇ ಕಾಣದಿರುವುದು ಮಾತ್ರ ಮಹಾಪರಾಧ' ಎನ್ನುತ್ತದೆ ಒಂದು ಸಂಶೋಧನೆ.. ಕೆಲವರು ಅಂದುಕೊಳ್ಳುತ್ತಾರೆ ಕನಸೇ ಬೇರೆ,ಗುರಿಯೇ ಬೇರೆಯೆಂದು,ಆದರದು ಸತ್ಯವಲ್ಲ.ಗುರಿ ಮತ್ತು ಕನಸು ಒಂದೇ ನಾಣ್ಯದ ಎರಡು ಮುಖಗಳಂತೆ.ಕನಸು ಸಾಕಾರವಾದರೆ ಗುರಿ ತಲುಪಿದಂತೆ,ಗುರಿ ಮುಟ್ಟಿದರೆ ಕನಸು ನನಸಾದಂತೆ.ಹಾಗೇ ನೋಡಿದರೆ ನಾವು ಕಾಣುವ ಸುಂದರ ಕನಸುಗಳೇ ಬದುಕಲ್ಲಿ ಜೀವಸೆಲೆ ಚಿಮುಕಿಸುವುದು.ಕನಸು ಕಾಣದವ ಅರ್ಧ ಸತ್ತ ಹಾಗೆ ಎಂದು ಮಾತಿದೆ.ಕಂಡ ನೂರು ಕನಸಲ್ಲಿ ಒಂದು ಕನಸು ನನಸಾದರೂ,ಆಗ ನಮಗಾಗುವ ಆತ್ಮತೃಪ್ತಿ,ಸಂತಸಕ್ಕೆ ಪಾರವಿರುವುದೇ? ಅಂದರೆ ಕನಸು ಕಾಣುತ್ತಾ,ಅದನ್ನು ಸಾಕಾರಗೊಳಿಸುವತ್ತ ಹೆಜ್ಜೆಯಿಟ್ಟರೆ,ಜೀವನದಲ್ಲಿ ಅದೇಷ್ಟು ಜೀವಂತಿಕೆ ತುಂಬಬಹುದು ಯೋಚಿಸಿ.
      ಜೀವನದಲ್ಲಿ ಕಂಡ ಕನಸೆಲ್ಲಾ ನನಸಾಗಬೇಕೆಂದಿಲ್ಲ.ಆದರೆ ಕೊನೆಪಕ್ಷ ಕನಸಿನ ಸಮೀಪವಂತೂ ಕರೆದೊಯ್ಯುವುದಂತೂ ಸತ್ಯ. ಉದಾಹರಣೆಗೆ ನೀವು 'ಆಕಾಶಕ್ಕೆ ಏಣಿ ಹಾಕಿ ಚಂದ್ರನ ಮುಟ್ಟಿ ಬರುವೆನೆಂದು' ಕನಸು ಕಾಣುವಿರೆಂದಿಟ್ಟುಕೊಳ್ಳಿ,ಚಂದ್ರಲೋಕಕ್ಕೆ ಏಣಿಯಲ್ಲಿ ತಲುಪುವ ಕನಸು ನನಸಾಗದಿದ್ದರೂ,ವಿಮಾನದಲ್ಲಿ ಚಂದ್ರ-ತಾರೆಗಳ ನಡುವೆ ಹಾಯ್ದು ಹೋಗುವ ಅವಕಾಶವಾದರೂ ಬರಬಹುದು.ಅದಕ್ಕೆ ಕನಸು ಕಾಣಿರಿ,ಕನಸಿಗೆ ಯಾವ ಇತಿಮಿತಿಯೂ ಇಲ್ಲ, ಕನಸಿಗೆ ಸುಂಕವೂ ತೆರಬೇಕಾಗಿಲ್ಲ..ಇದರರ್ಥ ಬರೀ ಕನಸು ಕಾಣುತ್ತಾ,ಮನಸ್ಸಲ್ಲೇ ಮಂಡಿಗೆ ತಿಂದರೆ ರುಚಿ ತಿಳಿಯುವುದಿಲ್ಲ. ಕನಸು ಕಾಣುತ್ತಲೇ,ಅದನ್ನು ಸಾಕಾರಗೊಳಿಸುವತ್ತ ಸ್ವಲ್ಪ ಪ್ರಯತ್ನಿಸಿ. ಆಗ ನೋಡಿ ನಿಮ್ಮ ಕನಸಿಗೆ ಅದೇಷ್ಟು ಅಗಾಧ ಶಕ್ತಿಯಿದೆಯಂದು..
   ಕಳೆದ ವರ್ಷ ನೇಮಿಚಂದ್ರರ 'ಬದುಕ ಬದಲಿಸಬಹುದು' ಎಂಬ ಪುಸ್ತಕ ಓದುತ್ತಿದ್ದೆ.ಕನಸು ಕಾಣುವುದು ಹೇಗೆ ಎಂದು ಅತ್ಯಂತ ಸರಳವಾಗಿ ವಿವರಿಸಿದ್ದಾರೆ.ಅವರೇ ಪುಸ್ತಕದಲ್ಲಿ ಬರೆದುಕೊಂಡಂತೆ ನಿಮಗೆ ಪುರಸೊತ್ತಾದಾಗ ಕನಸಿನ ಪಟ್ಟಿ ಮಾಡಿಟ್ಟುಕೊಳ್ಳಿ,ಸಾಕಾರವಾದ ಕನಸಿನ ಮುಂದೆ ಟಿಕ್ ಮಾರ್ಕ್ ಹಾಕಿಡಿ ಎಂದು.ನಾನೂ ಇದನ್ನು ಸ್ವತಃ ಪ್ರಯೋಗ ಮಾಡಿನೋಡಿದ್ದೆನೆ.ನನ್ನ ಕನಸಿನ ನೂರಾರು ಪಟ್ಟಿಯಲ್ಲಿ,ಕೆಲವೊಂದು ಈಡೇರಿದಾಗ ಆಗುವ ತೃಪ್ತಿಯಿದೆಯಲ್ಲಾ,ಅದನ್ನು ಬಹುಷಃ ಜಗತ್ತಿನ ಇನ್ಯಾವುದೇ ವಸ್ತುವೂ ಕಟ್ಟಿಕೊಡದು. ಕೆಲವೊಮ್ಮೆ ಮನಸ್ಸಿಗಾದ ಒಂದು  ಸಣ್ಣ ಕಿರಿಕಿರಿಯಿಂದಾಗಿ,ಮನ ಮುದುಡಿ ಕುಳಿತಿರುತ್ತದೆ.ಆಗ ನಿಮ್ಮ ಕನಸಿನ ಪಟ್ಟಿಯನ್ನು ತೆಗೆದುನೋಡಿ,ಕ್ಷಣದಲ್ಲಿ ಅದ್ಯಾವ ಜಾದೂ ಮಾಡಿ ನಿಮಗೆ ಆಹ್ಲಾದದ ಅನುಭವ ತಂದುಕೊಡುತ್ತದೆಯೆಂದು. 
  ಮುಪ್ಪಿನ ಷಡಕ್ಷರಿಯವರು ಬರೆದ 'ತಿರುಕನ ಕನಸು'ಪದ್ಯವನ್ನು ಬಾಲ್ಯದಿಂದಲೇ ಕೇಳಿ ಬೆಳೆದಿದ್ದೆವೆ. "ತಿರುಕನೊರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿಒರಗಿರುತ್ತಲೊಂದು ಕನಸ ಕಂಡನೆಂತೆನೆ" ಎಂದು ತಿರುಕನ ಕನಸು ಬಿಚ್ಚಿಕೊಳ್ಳುವ ಪರಿಯಿದೆಯಲ್ಲಾ,ಅದು ವರ್ಣಿಸಲಾದುದು. ಪುರದ ರಾಜ ಸತ್ತು ಅವನ ರಾಜಕುವರಿಯನ್ನು ತಾನೇ ವರಿಸಿ,ಅವಳಿಂದ ಮಕ್ಕಳನ್ನು ಪಡೆದು, ಆ ಮಕ್ಕಳ ಮದುವೆಯನ್ನೂ ಮಾಡಿ,ಧನಬಲ-ಜನಬಲದಿಂದ ಮೆರೆಯುತ್ತಿದ್ದಾಗ,ಯಾರೋ ತನ್ನ ಮುರುಕು ಧರ್ಮಶಾಲೆಗೆ ನುಗ್ಗಿದಂತೆನೆಸಿ ಅವ ಕಣ್ಣು ತೆರೆಯುವಾಗ ಕನಸು ಮುಗಿದಿರುತ್ತದೆ.ಆದರೆ ನನ್ನ ದೃಷ್ಟಿಕೋನದ ಪ್ರಕಾರ ಕನಸು ಮುಗಿದಿರಬಹುದು,ಆದರೆ ಆ ತಿರುಕನ ಕನಸನ್ನು ನನಸಾಗಿಸಲೇ ಆ ನೃಪರು ಬಂದಿರಬಹುದಲ್ಲಾ?ಕನಸನ್ನು ಸಾಕಾರಗೊಳಿಸಲೆಂದೇ ಅವ ನಿದ್ದೆಯಿಂದ ಎಚ್ಚಿತ್ತಿರಬಹುದಲ್ಲಾ?ಮುಂದಿನ ಊಹೆ ಅವರವರ ಭಾವಕ್ಕೆ-ಭಕುತಿಗೆ..
     ಜಗತ್ತಿನಲ್ಲಿ ಯಾರೂ ಕನಸು ಕಾಣುವುದಿಲ್ಲಾ ಹೇಳಿ? ಮನುಷ್ಯನಾದಿಯಾಗಿ,ಮೂಕಪ್ರಾಣಿಗಳೂ ಕನಸು ಕಾಣುತ್ತವೆ.ಮನುಷ್ಯ ಆಸ್ತಿ-ಅಂತಸ್ತು,ಆಕಾಶ-ಭೂಮಿಯೆಂದು ಕನಸು ಕಂಡರೆ, ಮುಗ್ಧ ಮೂಕಪ್ರಾಣಿಗಳು ತಮ್ಮ ಒಡೆಯ,ಮೇವು,ಆಹಾರವೆಂದು ಕನಸು ಕಾಣುತ್ತವೆ.ಕನಸು ಕಾಣುವುದು ಖಂಡಿತ ತಪ್ಪಲ್ಲ,ಆದರೆ ಒಳ್ಳೆಯ ಕನಸು ಕಾಣಿರಿ.ಒಳ್ಳೆಯ ಕನಸು ಕಾಣುವುದು ಜೀವನದಲ್ಲಿ ಧನಾತ್ಮಕ ಅಂಶವನ್ನು ವೃದ್ಧಿಸಿ,ಹೊಸಹುರುಪು ಕಟ್ಟಿಕೊಟ್ಟು,ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.ಅದೇ ಬೇರೆಯವರಿಗೆ ಕೆಟ್ಟದಾಗುವ ಮನೆಮುರುಕ ಕನಸು ಕಂಡರೆ,ಅದರಿಂದ ಋಣಾತ್ಮಕ ಅಂಶಗಳು ಹೆಚ್ಚಾಗಿ ಜೀವನ ಅಂಧಕಾರದತ್ತ ಜಾರತೊಡಗುತ್ತದೆ.ಇದನ್ನು ಯೋಚಿಸಿ ಕನಸು ಕಾಣಿರಿ.

    ಯಾರೂ ಹುಟ್ಟುತ್ತಲೇ ಯಶಸ್ಸನ್ನು ಬೆನ್ನಿಗಂಟಿಸಿಕೊಂಡು ಬರುವುದಿಲ್ಲ.ಇವತ್ತಿನ ದಿನ ಅವರು ಯಶಸ್ವಿಯಾಗಿದ್ದಾರೆ ಅಂದರೆ ಅದಕ್ಕೆ ಅವರು ಕಂಡ ಕನಸು,ಅದನ್ನು ಸಾಕಾರಗೊಳಿಸುವತ್ತ ಅವರ ಪರಿಶ್ರಮವೇ ಮುಖ್ಯ ಕಾರಣವಾಗಿರುತ್ತದೆ.ಕನಸು ಕಾಣದೇ ಇದ್ದರೆ ಮುಂದೊಂದು ದಿನ ಬದುಕು ಎಕತಾನತೆಯಿಂದ ಬರಡಾದೀತು,ಮನಸ್ಸು ಮೂಕವಾದೀತು.ಬದುಕಲ್ಲಿ ಸ್ವಾರಸ್ಯವಿರಬೇಕೆಂದರೆ, ಪ್ರಗತಿಯಿರಬೇಕೆಂದಿದ್ದರೆ,ಆತ್ಮತೃಪ್ತಿ-ಆತ್ಮವಿಶ್ವಾಸದಿಂದ ಕೂಡಿರಬೇಕಂದರೆ ಕನಸು ಕಾಣಲೇಬೇಕು.
  ಕೊನೆಯದಾಗಿ ಇದನ್ನು ಹೇಳಲೇಬೇಕು,ಕನಸಿಗೂ ವಾಸ್ತವಕ್ಕೂ ವ್ಯತ್ಯಾಸದ ಅರಿವಿದ್ದರೆ ಉತ್ತಮ.ಯಾಕೆಂದರೆ ಕನಸಿಗೆ ಯಾವ ಪರಿಶ್ರಮವೂ ಬೇಡ,ಅದೇ ಕನಸನ್ನು ವಾಸ್ತವವಾಗಿಸಲು ತುಂಬಾ ತಾಳ್ಮೆ,ಪರಿಶ್ರಮ ಅತ್ಯಗತ್ಯ.ಉದಾಹರಣೆಗೆ:"ಈ ವರ್ಷ ನೀವು ಸಿಂಗಾಪೂರಕ್ಕೆ ಪ್ರವಾಸ ಹೋಗಬೇಕೆಂದು ಕನಸು ಕಾಣುತ್ತಾ ಕುಳಿತುಕೊಂಡರೆ,ನಿಮ್ಮನ್ನು ಅಲ್ಲಾದ್ದೀನ್ ಕಾರ್ಟೂನಿನಲ್ಲಿ ಬರುವ ಜೀನಿ ನಿಮ್ಮನ್ನು ಸಿಂಗಾಪೂರಕ್ಕೆ ಕರೆದೊಯ್ಯುವುದಿಲ್ಲ.ಆ ಕನಸು ಸಾಕಾರವಾಗಬೇಕಾದರೆ ವೀಸಾ,ಹಣ,ಸಮಯವನ್ನೆಲ್ಲಾ ನೀವು ಸಿದ್ಧಪಡಿಸಿಕೊಂಡಿರಲೇ ಬೇಕು." ಹೀಗೆಯೆ ಬರೀ ಕನಸಷ್ಟೇ ಕಾಣುತ್ತಾ ಕುಳಿತುಕೊಳ್ಳದೇ,ಅದನ್ನು ನನಸಾಗುವತ್ತಲೂ ಪ್ರಯತ್ನ ಪಡಿ.ಕನಸು ಕಾಣುತ್ತಲೇ ಇರಿ,ಕನಸು ಕಾಣಲು ಯಾವ ಕಾಸು ಕೊಡಬೇಕಾಗಿಲ್ಲ.
-ಶುಭಶ್ರೀ ಭಟ್ಟ,ಬೆಂಗಳೂರು

ನೋಡ ಬನ್ನಿ ನಮ್ಮೂರ ಸುಗ್ಗಿ ಕುಣಿತವ ಕಾಮನ ಸುಡುವ ಹಬ್ಬವ








(ವಿಶ್ವವಾಣಿ ಗುರುಪುರವಣಿಯಲ್ಲಿ ಪ್ರಕಟ: 13/04/2017)


-ನೋಡ ಬನ್ನಿ ನಮ್ಮೂರ ಸುಗ್ಗಿ ಕುಣಿತವ ಕಾಮನ ಸುಡುವ ಹಬ್ಬವ-

  'ಢಣಢಣ ಢಣ್ ಢಣಾಎಂದು ತಮಟೆಯ ಶಬ್ಧ ಕೇಳಿದರೆ ಇಂದಿಗೂ ಮೈ ರೋಮಾಂಚನಗೊಳ್ಳುತ್ತದೆನಾವೆಲ್ಲಾ ಚಿಕ್ಕವರಿದ್ದಾಗ  ರೀತಿ ತಮಟೆ ಶಬ್ಧಕೇಳಿದರೆ ಮಾಡುತ್ತಿರೋ ಕೆಲಸವನ್ನೆಲ್ಲಾ ಬದಿಗೊತ್ತಿ ಜಿಂಕೆಯಂತೆ ಜಿಗಿಯುತ್ತಾ ಓಡುತ್ತಿದ್ದೆವು.ಇದರೆಲ್ಲೇನೂ ವಿಶೇಷ ಅಂತೀರಾ?ಅದರಲ್ಲೇ ಇದೆ ವಿಶೇಷ.ಇದುನಮ್ಮೂರ ಸುಗ್ಗಿಯ ಸಂಭ್ರಮಕರಾವಳಿಯ ಕಣ್ಮಣಿಯಾಗಿ ಕಂಗೊಳಿಸುತ್ತಿರೋ ಕುಮಟಾ-ಉತ್ತರಕನ್ನಡ ಜಿಲ್ಲೆಯ ಸಾಂಸ್ಕೃತಿಕತಾಣಗಳಲ್ಲೊಂದು.ಕಡಲಿನಲೆಯಂತೆ ಆಕಾಶದೆತ್ತರಕ್ಕೆ ಚಿಮ್ಮಲು ಪ್ರಯತ್ನಿಸುತ್ತಿರುವ ಪ್ರತಿಭೆಗಳಿಗೆ ಭರವಿಲ್ಲ ಇಲ್ಲಿ.ಹಿಂದಿನಿಂದ ಬಂದ ಕಲೆ-ಸಂಸ್ಕೃತಿಗಳನ್ನುಉಳಿಸಿ ಬೆಳೆಸಲು ಇಂದಿನವರೂ ಶ್ರಮಿಸುತ್ತಿದ್ದಾರೆ.ಅಂತೆಯೇ ಕಾರ್ಯತತ್ಪರಾದವರಲ್ಲಿ 'ಹಾಲಕ್ಕಿ ಒಕ್ಕಲಿಗರೂಕೂಡ ಒಬ್ಬರು.ತಲೆತಲಾಂತರಗಳಿಂದಅವರಿಗೆ ಕೊಡುಗೆಯಾಗಿ ಬಂದಿರುವಂತಹ 'ಸುಗ್ಗಿ ಕುಣಿತ'ವನ್ನು ಅವರೆಂದೂ ಕೈ ಬಿಟ್ಟಿಲ್ಲ,ಉಳಿಸಿ ಬೆಳೆಸುತ್ತಿದಾರೆ.ಯಾರಿಂದ ಏನನ್ನೂ ಅಪೇಕ್ಷಿಸದೆ ಜನರಿಗೆಮುದನೀಡುವ ಇವರೂ ಸಂಸ್ಕೃತಿಯ ಪಾಲಕರೆಂದರೆ ತಪ್ಪಾಗಲಾರದೂ!!..
  ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ವಾಸಿಸುವ  ಸಮುದಾಯದ ಜನರು ಕೂಲಿ ಕೆಲಸಕ್ಕಾಗಿ ಹೆಸರಾದವರು.ಘಟ್ಟದ ಮೇಲಿನ ಶಿರಸಿ,ಸಿದ್ಧಾಪುರದಲ್ಲಿನಜನರು ಇವರನ್ನು ತೋಟದಮನೆ ಕೆಲಸ,ಅಡಿಕೆ ಕೊಯ್ಯಲು ಮುಂತಾದ ಕೆಲಸಗಳಿಗಾಗಿ ಕರೆಸಿಕೊಳ್ಳುತ್ತಾರೆಇವರಲ್ಲಿನ ಬಲಿಷ್ಠತೆ,ನಂಬಿಕೆವಿಶ್ವಾಸಾರ್ಹಗುಣ,ಮಾಡುವ ಕೆಲಸದಲ್ಲಿನ ಅಚ್ಚುಕಟ್ಟುತನವೇ ಇದಕ್ಕೆ ಕಾರಣ.ಇತ್ತಿಚಿನ ದಿನಗಳಲ್ಲಿ ಶಾಲೆ ಕಲಿತು ಉದ್ಯೋಗ ಮಾಡುವವರೂ ಇದ್ದಾರೆ.ಆದರೆ ಅವರೂ ಕೂಡಅಧುನಿಕ ಸಂಸ್ಕೃತಿಗೆ ಮರುಳಾಗಿ ತಮ್ಮ ವಿಶಿಷ್ಠ ಸಂಸ್ಕೃತಿಯಾದ ಸುಗ್ಗಿ ಕುಣಿತವನ್ನು ಮರೆಯದೇ ಮುಂದುವರೆಸುತ್ತಿದ್ದಾರೇ ಎಂಬುದೇ ಗಮನಾರ್ಹಏಲಕ್ಕಿಹೋಳಿಗೆಯ ಘಮದ ಜೊತೆಗೆ ಹಾಲಕ್ಕಿ ಒಕ್ಕಲಿಗರ ಸುಗ್ಗು ಕುಣಿತದ ಸಂಭ್ರಮ ಬೆರೆತರೆ,ಆಹಾಅದರ ಮಜವೇ ಬೇರೆ,ವರ್ಣನೆಗೆ ನಿಲುಕದ್ದು.
  ಹೋಳಿ ಹುಣ್ಣಿಮೆಗಿಂತ ಮುಂಚಿತವಾಗಿ ಬರುವ ದಶಮಿಯಂದು  ಒಕ್ಕಲಿಗ ಸಮುದಾಯದವರು ಹಬ್ಬಕ್ಕೆ ಅವರ ಶಾಸ್ತ್ರದಂತೆ ಚಾಲನೆ ನೀಡುತ್ತಾರೆ.ಬೀರಪ್ಪದೇವರ(ಅವರ ಸಮುದಾಯದ ದೇವರುಪೂಜೆ ಮಾಡಿ 'ಊರಗೌಡ' (ಸಮುದಾಯದ ನಾಯಕಹಬ್ಬಕ್ಕೆ ಶುಭಾರಂಭವನ್ನೀಯುತ್ತಾನೆ. 'ಬುಧವಂತಎಂಬಪಟ್ಟಹೊತ್ತವನು ಊರಿಗೆಲ್ಲಾ ಸುಗ್ಗಿ ಪ್ರಾರಂಭವಾದುದರ ಕುರಿತು ಹೇಳುತ್ತಾನೆ.ಇನ್ನು 'ಕೋಲಕಾರ' (ಕಾಮದಹನಕ್ಕೆ ಕೆಂಡ ತಯಾರಿ ಮಾಡುವವಎಂಬುವವನುಪರಂಪರೆಯಾಗಿ ಬಂದ ಬೆತ್ತದೊಡನೆ ಊರೂರಿಗೆ ಹೋಗಿ ವೀಳ್ಯದೆಲೆ ಕೊಟ್ಟು ಸುಗ್ಗಿಯ ಆಗಮನದ ಬಗ್ಗೆ ತಿಳಿಸಿಬರುತ್ತಾನೆ. ಸುಗ್ಗಿಯಲ್ಲಿ ಎರಡುವಿಧವಿದೆ,ಮೊದಲನೆಯದು ಹಿರಿಸುಗ್ಗಿ,ಎರಡನೇಯದು ಕಿರಿಸುಗ್ಗಿ(ಬೋಳಸುಗ್ಗಿ). ಹಿರಿಸುಗ್ಗಿಯಲ್ಲಿ  ವಿಶಿಷ್ಠವಾಗಿ ವಿನ್ಯಾಸಗೊಂಡ ಪಗಡೆ,ಬೆಂಡಿನತುರಾಯಿ,ನವಿಲುಗರಿಯ ಕುಂಚಸಿಕ್ಕಿಸಿ,ತರೇವಾರಿ ವೇಷತೊಟ್ಟು 'ಬೋ ಹೋ ಸೋ.. ಛೋ ಹೋ ಹೋಯ್ಎನ್ನುತ್ತಾ ,ತಮ್ಮದೇ ಆದ ಪ್ರಾಸ ಹಾಕಿ,ಅವರದ್ದೇಧಾಟಿಯಲ್ಲಿ ಹಾಡಿಕೊಂಡು ಕುಣಿಯುತ್ತಾರೆಅದೇ ಕಿರಿಸುಗ್ಗಿಯಲ್ಲಿ ತಲೆಗೊಂದು ರುಮಾಲು ಸುತ್ತಿ,ತಮ್ಮ ವಾದ್ಯದೊಡನೆ ಕೇವಲ ತಮ್ಮ ಸಮುದಾಯದಮನೆಗಷ್ಟೇ ಹೋಗುತ್ತಾರೆ ಎರಡೂ ಸುಗ್ಗಿಯನ್ನು ಅವರ ಬೀರಪ್ಪ ದೇವರಿಗಾಗೇ ಮಾಡುತ್ತಾರೆಇನ್ನೂ ಕೆಲವರ ಪ್ರಕಾರ ಸಣ್ಣ ದೇವರಿಗಾಗಿ ಕಿರಿಸುಗ್ಗಿ,ದೊಡ್ಡದೇವರಿಗಾಗಿ  ವರ್ಷಕ್ಕೊಂದು ಸುಗ್ಗಿಯನ್ನು ಕುಣಿದು ಅವರ ಪರಂಪರೆಯನ್ನು ಮುಂದುವರೆಸುತ್ತಾರೆಊರೂರು ಅಲೆದು ಮನದಣಿಯೇ ಕುಣಿದರೂ ಅವರಿಗೆದಣಿವಿಲ್ಲ.ಮೊದಲ ದಿನದಿಂದ ಕೊನೆಯತನಕ ಅದೇ ಉತ್ಸಾಹ,ಅದೇ ಶಕ್ತಿ ಚೈತನ್ಯವನ್ನ ನಿಜಕ್ಕೂ ಮೆಚ್ಚಲೇಬೇಕು.
ಗ್ರಾಮದಲ್ಲಿ ಹಿಂದೂ ಹಾಲಕ್ಕಿ ಒಕ್ಕಲಿಗರ ಒಕ್ಕೂಟದಿಂದ ಸಭೆಕರೆದು ಕರ್ಚುವೆಚ್ಚದ ಬಗ್ಗೆ ನಿರ್ಣಯಿಸಲಾಗುತ್ತದೆ.ಪ್ರತಿ ಮನೆಗೆ ಸರಿ ಸುಮಾರು ೧೦೦-೨೦೦ರೂಪಾಯಿಯಂತೆ ಖರ್ಚಾಗಬಹುದು ಎನ್ನುತ್ತಾರೆದೇವಸ್ಥಾನಗಳಿಗೆ,ಮನೆಯಿಂದ ಮನೆಗೆ,ಊರಿಂದೂರಿಗೆ ತೆರಳಿ,ವೇಷಕಟ್ಟಿ ನರ್ತಿಸಿ ನೋಡುಗರಮನಸೂರೆಗೊಳ್ಳುತ್ತಾರೆ.ಪೊಗಡೆ,ಬಿಂಗು,ಕೋರು,ವಿಭಿನ್ನ ವಸ್ತ್ರ ಮುಂತಾದ ಕಲಾಕೃತಿಗಳು,ಬಣ್ಣ(ಮೇಕಪ್),ಕಾಲ್ಗೆಜ್ಜೆ ಮುಂತಾದವುಗಳ ವೆಚ್ಚ ಎಂಟು ದಿನಕ್ಕೆಸುಮಾರು ೨೦-೨೫ ಸಾವಿರ ರೂಪಾಯಿಗಳಷ್ಟಾಗಿರುತ್ತದೆತಮ್ಮದೇ ದುಡಿಮೆಯ ಹಣವನ್ನು ಕರ್ಚುಮಾಡಿ,ಯಾರಿಂದ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇಮನೆಯವರು ಕೊಡುವ ಅಕ್ಕಿ-ಕಾಯಿ-ದುಡ್ಡು ಪ್ರೀತಿಯಿಂದ ತೆಗೆದುಕೊಂಡು ಮುನ್ನಡೆಯುತ್ತಾರೆ.ರಾತ್ರಿ ೧೨ಘಂಟೆಗೂ ಮಧ್ಯಾನ್ಹ ೧೨ರ ಉತ್ಸಾಹನೋವನ್ನುಂಡಾದ್ರೂ ನಗಿಸಬೇಕೆಂಬ ಮಾತಿನಂತೆ ಎಲ್ಲರಿಗೂ ಸಂತಸವನ್ನೇ ನೀಡುವ ಇವರು ನನಗೆ ಯಾವಾಗ್ಲೂ ಅಚ್ಚರಿಯೆನಿಸುತ್ತಾರೆ.
  ಹೋಳಿ ಹುಣ್ಣಿಮೆಯ ಹಿಂದಿನ ದಿನ ಕೂಟದ ಯಜಮಾನನ ಮನೆಯ ತುಳಸಿಕಟ್ಟೆಯ ಮುಂದೆ ಕಮಿ(ಕಣಿಹೇಳಲಾಗುತ್ತದೆ.'ಹರಿವಿನ್ ಎಂಬುದು ಗುರುವಿನ್ಗುಲಗಂಜಿಎಂಬುದು ಸುಗ್ಗಿಯಲ್ಲಿ ಪ್ರಪ್ರಥಮವಾಗಿ ಬರುವ ಕಮಿ(ಕಣಿ) ಪದವಾಗಿದೆ.ಇದನ್ನು ಸೀತಮ್ಮನವರ ಕಮಿ ಎಂದೂ ಕರೆಯಲಾಗುವುದು.ಇದನ್ನುಸೀತಾಮಾತೆ ರಾಮನಿಗಾಗಿ ಹಾಡುತ್ತಿದ್ದ ಪದ್ಯವೆಂದೂ ಪ್ರಚಲಿತದಲ್ಲಿದೆ.ಸುಮಾರು ಒಂದು ತಾಸಿನವರೆಗೆ ಹಾಡಲಾಗುವ  ಸೀತೆ ಕಮಿ(ಕಣಿ)ಯನ್ನು ಸುಗ್ಗಿಕುಣಿತದ ಆರಂಭದಲ್ಲೂ ಹಾಡಲಾಗುವುದು.
  ಚಿನ್ನದಿಂದ ಮೈತೊಳೆದು ಬಂದಂತೆ ಕಾಣುವ ಚಂದಿರ ಬಾನಂಚಲಿ ಮೆಲ್ಲನವತರಿಸಿದ ರಾತ್ರಿಯದು.ಎಲ್ಲರೂ ಅದುಮಿಟ್ಟ ಭಕ್ತಿಭಾವವನ್ನು ಭೊರ್ಗರೆದುತೆಗೆದಿಡುವ ಫಾಲ್ಗುಣ ಶುಕ್ಲ ಪೌರ್ಣಮಿಯ ಆಗಮನವಾಗುವ ಶುಭದಿನಕ್ಕಾಗಿ ಊರಮಂದಿಯೆಲ್ಲಾ ಕಾತರಿಸಿ ಕಾಯುತ್ತಾರೆಹಗಲಿಡೀ ಬಣ್ಣವೆರೆಚಿಓಕುಳಿಯಾಡಿನಂತರ ಕಾಮದಹನಕ್ಕಾಗಿ ತಯಾರಿ ಭರದಿಂದ ನಡೆಯುತ್ತದೆ.ಮುಸ್ಸಂಜೆ ಸೂರ್ಯ ಮನೆಗೋಡುವುದೇ ತಡ,ಇತ್ತ ಯಜಮಾನನತುಳಸೀವನದ ಬಳಿ ಜನಜಂಗುಳಿ.ಕಾಮದಹನಕ್ಕೂ ಮೊದಲು  ತುಳಸಿವನಕ್ಕೆ ಯಜಮಾನ ಪೂಜೆಮಾಡಿದ ಮೇಲೆ ತುರಾಯಿ ಕಟ್ಟಿ ಕೊನೆಯ ಸುಗ್ಗುಕುಣಿತವ ಕುಣಿದು ಮಂಗಳ ಹಾಡುತ್ತಾರೆ.ನೋಡನೋಡುತ್ತಿದ್ದಂತೆ ಯುವಕ ವೃದ್ಧರ ಬೇಧವಿಲ್ಲದೇ ಆವೇಶಭರಿತರಾಗಿ ಕುಣಿಯುತ್ತಾರೆ,ವಿಚಿತ್ರವಾಗಿ ಏನೇನೋಮಾತನಾಡತೊಡಗುತ್ತಾರೆಇದಕ್ಕೆ ಅವರು ಹೇಳುವುದು 'ದೇವ್ರು ಮೈಮೇಲ್ ಬಂತುಎಂದು.ಬ್ರಹ್ಮದೇವರ ಪೂಜೆ ಮುಗಿದು ಯಜಮಾನ ಅಪ್ಪಣೆಕೊಡುವುದೊಂದೇ ತಡ ಅಬಾಲವೃದ್ಧರೆಲ್ಲಾ 'ಹೊಂಯ್ಕ್ಯೋ' (ಹೋ ಕಾಮಎನ್ನುತ್ತಾ ಒಂದು ಗುಡ್ಡದೆಡೆಗೆ ಓಡುತ್ತಾರೆ.
  ಇತ್ತ ಕರಿದೇವರ ಗುಡ್ಡ(ಅವರ ಬೀರಪ್ಪ ದೇವರ ವಿಗ್ರಹವಿರುವ ಗುಡ್ಡ)ದಲ್ಲಿ ಕೋಲಕಾರ ಪಟ್ಟ ಹೊತ್ತವನು ಮೊದಲೇ  ೧೦-೧೫ ಕ್ವಿಂಟಾಲ್ ಸೌದೆಯ ಕೆಂಡವನ್ನುಸಿದ್ಧಪಡಿಸಿಟ್ಟುಕೊಳ್ಳುತ್ತಾನೆ.ಇವರ ಕೆಂಡಹಾಯುವುದನ್ನು (ಕಾಮದಹನದ ಒಂದು ವಿಧನೋಡಲು ಎಲ್ಲೆಲ್ಲಿಂದಲೋ ಜನಜಾತೆ ನೆರೆದಿರುತ್ತದೆಕೆಂಡಸಿದ್ಧಪಡಿಸಿದ ಕೋಲಕಾರ ಪಟಾಕಿ ಹೊಡೆದು,ಆಚೆ ಗುಡ್ಡದಲ್ಲಿರುವವರಿಗೆ ಸೂಚನೆ ಕೊಡುತ್ತಾನೆ.ಕ್ಷಣಮಾತ್ರದಲ್ಲಿ ಬಾಣದಂತೆ ಚಿಮ್ಮಿ ಬಂದು ಮೂರು ಸಾರಿಕೆಂಡವನ್ನು ಹಾಯ್ದುಹೋಗುತ್ತಾರೆ.ನೋಡುಗರ ಮೈ ಜುಮ್ಮೆಂದು ಕಂಪನವಾಗುತ್ತುರುವಾಗಲೇ,ಕೆಂಡ ಹಾಯುವವರು ಆರಾಮಾಗಿ ದೇವರ ಪೂಜೆಗೆ ಕೈಮುಗಿದುನಿಂತಿರುತ್ತಾರೆ.'ಕೆಂಡ ಹಾಯುವಾಗ ಬೆಂಕಿ ಬಿಸಿನೇ ನಮ್ಗಾಗುದಿಲ್ಲ.ತಂಪನ್ ನೀರಲ್ಲಿ ಹೋದಾಂಗ್ ಆತೀತು.ಇದ್ಕೆ ನಮ್ ಬೀರಪ್ಪ ದ್ಯಾವ್ರೆ ಕಾರ್ಣಎಂದು ಅವರುಸ್ಪಷ್ಟಿಕರಣವೀಯುತ್ತಾರೆ.ಅವರ ಆದೇಶಪೂರಿತ ಭಕ್ತಿ,ಭಯವಿಲ್ಲದ ನಡೆ,ಅಪಾರ ಆತ್ಮವಿಶ್ವಾಸವೇ ಇದಕ್ಕೆ ಕಾರಣವೆಂದು ನಾವೆಂದುಕೊಳ್ಳೊಣ.ಅದೆಲ್ಲವಆಚೆಯಿರಿಸಿ ನೋಡಿದಾಗ ನಮಗೆ ಕಾಣುವುದು ಸಂಸ್ಕೃತಿ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರೋ ಅವರ ಗುಣ,ಅಭಿನಂದನಾರ್ಹ.
 ಇದು ಕೇವಲ ನಮ್ಮೂರು ಗುಡಬಳ್ಳಿ ಊರಿನ ಒಕ್ಕಲಿಗರ ಸುಗ್ಗಿಯಲ್ಲ.ಬದಲಾಗಿ ಉತ್ತರಕನ್ನಡ ಜಿಲ್ಲೆಯ ಸಂಸ್ಕೃತಿಯ ಕೀರ್ತಿಕಿರಿಟದಲ್ಲಿ ಕಂಗೊಳಿಸುತ್ತಿರೋಪುಟ್ಟಗರಿ. 'ಕುಣಿಸಲು ನೀನು,ಕುಣಿವೆನು ನಾನುಎನ್ನುವಂತೆ  ದೇವರಲ್ಲಿ ಅಪರಿಮಿತ ನಂಬಿಕೆಯನ್ನಿಟ್ಟ  ಮುಗ್ಧಜನರೆಂದೂ ತಮ್ಮ ಸಂಪ್ರದಾಯ ಬಿಡದಿರಲಿಅದನ್ನು ಬೆಳೆಸಿ ಮುನ್ನಡೆಸಲು  ಭಗವಂತ ಶಕ್ತಿಯನ್ನೀಯಲಿ ಎಂದಾಶಿಸುತ್ತೇನೆಓದುಗರೇನಿಮಗೂ  ಸುಗ್ಗಿ ಕುಣಿತ,ಕೆಂಡ ಹಾಯುವುದನ್ನು ನೋಡಬೇಕುಅನಿಸುತ್ತಿದೆಯಾಮುಂದಿನ ವರ್ಷ ತಪ್ಪದೇ ಬನ್ನಿ,ನಮ್ಮೂರು ತಮ್ಮ ಸ್ವಾಗತಕ್ಕೆ ಸದಾ ಸಿದ್ಧ..
 
ಲೇಖನಶುಭಶ್ರೀ ಭಟ್ಟ,ಬೆಂಗಳೂರು
ಫೊಟೋ ಕೃಪೆಗಜಾನನ ಹೆಗಡೆ,ವಿಸ್ಮಯ ಟಿ.ವಿ.ಕುಮಟಾ

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...