Sunday 18 June 2017






ನಾನು ದೇವರಾ ಮಗ(ಳು)

(ಇಂದಿನ ವಿಶ್ವವಾಣಿ ವಿ+ ಪುರವಣಿಯಲ್ಲಿ ಪ್ರಕಟ)
         ಜೀವನದಲ್ಲಿ 'ಅಪ್ಪ'ನೆಂಬ ಪಾತ್ರದ ಅನುಭವವಾಗುವ ಮೊದಲೇ ಇಲ್ಲವಾದ ಅನುಭವ,ಸಂಪ್ರದಾಯಸ್ಥ ಕೂಡು ಕುಟುಂಬದ ಹಿಡಿಮಡಿ,ಹೊರಗಿನ ಕೆಲಸಕ್ಕಷ್ಟೇ ಮೀಸಲಾದ ಅಮ್ಮ,ಕಣ್ಮುಂದಿದ್ದರೂ ಸಿಗದ ತಿಂಡಿ,ಕದ್ದು ತಿಂಡಿಕೊಡುವ ಅಜ್ಜಿ,ಹಂಗಿಸುವ ಚಿಕ್ಕಪ್ಪಂದಿರು,ಕೊನೆಯ ಚಿಕ್ಕಪ್ಪನ ಒಳ್ಳೆತನದಿಂದ ದೊರೆತ ಒಳ್ಳೆಯ ಶಿಕ್ಷಣ,ಶಕುನಿಮಾವನ ದೆಸೆಯಿಂದ ದೊರೆಯದ ಸಮಪಾಲು,ಕೊನೆಗೂ ಸಿಗದ ಅಜ್ಜಿಯ ಕಾಸಿನಸರ-ಹೀಗೆ ಹುಟ್ಟಿದಾರಭ್ಯ ಕಷ್ಟವನ್ನೇ ಉಟ್ಟುಂಡರೂ ಒಬ್ಬರ ಬಗ್ಗೆ ದೂರಿದವರಲ್ಲ ನನ್ನಪ್ಪ.ಈ ಕಥೆಯನ್ನೆಲ್ಲಾ ಅಜ್ಜಿ ನಮಗೆ ಹೇಳಿರದಿದ್ದರೆ,ಅದರ ಸುಳಿವು ನಮಗೆ ಸಿಗುತ್ತಿರಲಿಲ್ಲವೆನೋ.ಯಾರಿಗೂ ಎದುರಾಡದೇ, ಯಾರನ್ನೂ ದೂರದೇ,ದುಡುಕದೇ ಜೀವನದುದ್ದಕ್ಕೂ ಪಾಲಿಗೆ ಬಂದಿದ್ದು ಪಂಚಾಮೃತವೆಂಬಂತೇ ಸೌಮ್ಯವಾಗೇ ಬದುಕಿಬಿಟ್ಟರು.ಇಂತಹ ಶಾಂತಮೂರ್ತಿಯ,ಮುಗ್ಧಜೀವಿಯ ಒಳ್ಳೆಯ ಗುಣವನ್ನು ದುರುಪಯೋಗಪಡಿಸಿಕೊಂಡವರೇ ಅನೇಕರು.ತಮಗೆ ಕೇಡು ಬಯಸಿದವರಿಗೂ ಒಳ್ಳೆಯದಾಗಲಿ ಎಂದು ಹರಸುವ ಬುದ್ಧಿ ದೇವರಂತವರಿಗಲ್ಲದೇ ಇನ್ಯಾರಿಗಿದ್ದೀತು?
         ಹುಟ್ಟಿದ್ದು ಹೆಣ್ಣುಮಗುವೆಂದು ತಿಳಿದಾಗ ಅಜ್ಜಿ ಬಲು ಬೇಸರಗೊಂಡಿದ್ದರಂತೆ.ಆಗಲೇ ತಮ್ಮ ಮಗಳನ್ನು ಮಗನಂತೇ ಬೆಳೆಸುತ್ತೆನೆಂದು ನಿರ್ಧಾರ ತೆಗೆದುಕೊಂಡ ಅಪ್ಪ ನನ್ನನ್ನೆಂದೂ ಮಗಳಂತೆ ನೋಡಲೇ ಇಲ್ಲ.ಯಾಕೆಂದರೆ ನಾನವರ ಪಾಲಿಗೆ 'ಮಗ'ನಾಗಿದ್ದೆ,ಇಂದಿಗೂ ಮಗನೇ..ನಮಗೆ ಬುದ್ಧಿಬಂದಾಗಿನಿಂದ ಅವರು ನನ್ನ ಮತ್ತು ತಂಗಿ ಮೇಲೆ ಕೋಪಗೊಂಡಿದ್ದಾಗಲಿ,ಹೊಡೆಯಲು ಕೈಯೆತ್ತಿದ್ದಾಗಲಿ,ಬೈಯ್ದಿದ್ದಾಗಲಿ ನೆನಪೇ ಇಲ್ಲ.ನನ್ನ ತಂಗಿಯಂತೂ ಚಿಕ್ಕವಳಿದ್ದಾಗ ಅಪ್ಪನ ಮುಖ ನೋಡದೇ ಕಣ್ಣೇ ತೆರೆಯುತ್ತಿರಲಿಲ್ಲ.ಅವಳನ್ನು 'ಉಪ್ಪಿಮೂಟೆ' ಮಾಡಿಯೋ,ತಲೆಮೇಲೆ ಹೊತ್ತುಕೊಂಡೋ ತೋಟ ಸುತ್ತಿಸಿದರೆ ಮನೆಯವರ ದಿನವೆಲ್ಲಾ ಸುಗಮವಾಗುತ್ತಿತ್ತು,ಇಲ್ಲದಿದ್ದರೇ ದಿನವಿಡೀ ಪಕ್ಕವಾದ್ಯ-ಚಂಡೆಮದ್ದಳೆ.ನಾನೂ ಅಷ್ಟೇ ಅಪ್ಪ ನನ್ನನ್ನೆತ್ತಿಕೊಂಡು ಮಹಡಿಯ ಕೋಣೆಯಲ್ಲಿ ಮಲಗಿಸಲೆಂದು , ಹಜಾರದ ಖುರ್ಚಿಯಲ್ಲೇ ಕಳ್ಳನಿದ್ರೆ ಮಾಡುತ್ತಿದ್ದೆ. ನಿದ್ದೆಬಾರದ ದಿನಗಳಲ್ಲಿ ಅಪ್ಪ ಹೇಳುವ ಕಟ್ಟುಕಥೆಗೆ(ಆಗ ಗೊತ್ತಿರಲಿಲ್ಲ) ಕಿವಿಯಾಗುತ್ತ ರಾತ್ರಿಯ ನಿದ್ರಾದೇವಿಯ ತೆಕ್ಕೆಗೆ ಶರಣಾಗುತ್ತಿದ್ದೆವು.
      ಶಕುನಿಪಾಲಲ್ಲಿ ಸಿಕ್ಕ ಕಾಡಿನಂತಿದ್ದ ಜಾಗದಲ್ಲಿ ತೋಟಮಾಡಿ,ಮನೆಕಟ್ಟಿದ್ದರಂತೆ,ಅದಕ್ಕೆ ನಮ್ಮಜ್ಜಿ 'ಪರಶ್ರಾಮ ಸೃಷ್ಟಿ ನಿನ್ನಪ್ಪಂದು' ಎಂದು ಕೊನೆತನಕ ಹೇಳುತ್ತಲೇ ಇದ್ದರು.ಅವರು ಮನಸ್ಸು ಮಾಡಿದ್ದರೆ ಎಕರೆಗಟ್ಟಲೇ ತೋಟ ಆಸ್ತಿ ಮಾಡಿಕೊಂಡು ತಮ್ಮ ನಿವೃತ್ತಿ ಜೀವನವನ್ನು ಮತ್ತಷ್ಟು ಸುಭದ್ರಗೊಳಿಸಿಕೊಳ್ಳಬಹುದಿತ್ತು.ಆದರೆ ಅವರು ಹಾಗೇ ಮಾಡದೇ 'ಮಗಾ,ಅಪ್ಪಿ ನಿಂಗವಿಬ್ರೂ ಎಷ್ಟ್ ಓದತ್ರಾ ಓದ್ಸ್ತೆ.ಇದೇ ನಾ ನಿಂಗಕ್ ಕೊಡಾ ಆಸ್ತಿ' ಎಂದೆನ್ನುತ್ತಾ, ನನಗೆ ನನ್ನ ತಂಗಿಗೆ ಉನ್ನತ ಶಿಕ್ಷಣ ಕೊಡಿಸಿದರು.ಇದನ್ನೆಲ್ಲಾ ಅರಿಯದ ಕೆಲವು ಸಣ್ಣಮನಸ್ಸಿನ ಶ್ರೀಮಂತ ಜನ ನನ್ನ ತವರುಮನೆಯನ್ನು ನೋಡಿ 'ಮನೆ ಸ್ವಲ್ಪ್ ಚಿಕ್ಕದಾಯ್ತಲ್ದಾ' ಎಂದರೆ ನನಗೆ ಬೆಟ್ಟದಷ್ಟು ಕೋಪವುಕ್ಕಿ ಬರುತ್ತದೆ.'ಮನೆ ಚಿಕ್ಕದಾದರೇನು ಮನಸ್ಸು ದೊಡ್ಡದಾಗಿದೆ' ಎಂಬ ಸತ್ಯ ಅವರಿಗೆಲ್ಲಾ ಯಾಕರ್ಥವಗಲ್ವೋ ನಾ ಕಾಣೆ.
       ಬಿಸಿಲು-ಮಳೆಯೆನ್ನದೇ ಊರಮಕ್ಕಳ ಗುಂಪುಕಟ್ಟಿಕೊಂಡು, ಹಗಲು ರಾತ್ರಿಯೆನ್ನದೇ ಕುಂಟಾಬಿಲ್ಲೆಯಾಡುತ್ತಾ ಶೀತಮಾಡಿಕೊಳ್ಳುತ್ತಿದ್ದ ನಾನು ಅಮ್ಮನಿಗೆ ತಲೆನೋವಾಗಿದ್ದೆ.ಅದನ್ನು ತಪ್ಪಿಸಲು ಅಪ್ಪನೇನೂ ಪೆಟ್ಟುಕೊಡಲಿಲ್ಲ ಬದಲಿಗೆ ಪುಸ್ತಕವನ್ನು ಕೊಟ್ಟು ಓದುವ ರುಚಿ ಹತ್ತಿಸಿದರು.ಚಂಪಕ-ಬಾಲಮಂಗಳ-ಬಾಲಮಿತ್ರದಿಂದ ಶುರುವಾದ ನನ್ನ ಪುಸ್ತಕ ಪ್ರೀತಿ, ಹೈಸ್ಕೂಲ್ ಗೆ ಬರೊವಷ್ಟರಲ್ಲಿ ಅಪ್ಪ ಲೈಬ್ರರಿಯಿಂದ ತರುತ್ತಿದ್ದ 'ಕೌಂಡಿನ್ಯ,ಯಂಡಮೂರಿ,ಸಿಡ್ನಿ ಶೆಲ್ಡನ್, ರಾಬರ್ಟ್ ಲುಡ್ಲಮ್'ರ ಕೃತಿಗಳನು ಓದುವಷ್ಟರ ಮಟ್ಟಿಗೆ ಬಂದು ನಿಂತಿತ್ತು.ನನಗಾಗಲೇ ಬರೆಯುವ ಹುಚ್ಚು,ಬರೆದಿದ್ದೆಲ್ಲಾ ಪತ್ರಿಕೆಗೆ ಕಳುಹಿಸುತ್ತಿದ್ದೆ (ಈಗಲೂ ಅದೇ ಅಭ್ಯಾಸ).ಮೊದಮೊದಲಿಗೆ ಕಳುಹಿಸದ್ದೆಲ್ಲಾ ತಿರಸ್ಕೃತವಾಗಿ ಮರಳಿ ಬರುತ್ತಿದ್ದಾಗ ಅತ್ತಿದ್ದೂ ಅಪ್ಪನ ಹೆಗಲ ಹಿಡಿದೇ.ಮನೆಯಲ್ಲಿ ಅಮ್ಮನಿಗೂ ತಿಳಿಸದೇ ನಾನು ಕಳುಹಿಸಿದ್ದೆಲ್ಲಾ ಪತ್ರಿಕೆಗೆ ಕಳುಹಿಸುತ್ತಿದ್ದುದು ಅಪ್ಪನೇ.ನಾನು ಪಿಯುಸಿಯಲ್ಲಿದ್ದಾಗ ಮೊದಲಸಲ ನನ್ನ ಕಥೆ 'ಪ್ರಿಯಾಂಕ' ಪತ್ರಿಕೆಯಲ್ಲಿ ಪ್ರಕಟವಾಗಿತ್ತು, ಆಗ ಅಪ್ಪ ಪಟ್ಟ ಖುಶಿಯನ್ನು ಹೇಗೆ ವರ್ಣಿಸಲಿ.ಅದಾದಮೇಲೆ ಆಗ ಟಿ.ಕಸ್ತೂರಿಯವರಿಂದ ಬಂದ ಪತ್ರ,ಗೌರವಧನವೆರಡೂ ಅಪ್ಪನ ಬಳಿ ಇಂದಿಗೂ ಜೋಪಾನವಾಗಿದೆ,ಅದು ಅಮೂಲ್ಯ ಆಸ್ತಿಯೆನೋ ಎಂಬಂತೆ.ನಂತರ 'ಮಯೂರದ' ಗುಬ್ಬಚ್ಚಿಗೂಡು' ಅಂಕಣಕ್ಕೆ ನನ್ನ ಲೇಖನ ಆಯ್ಕೆಯಾದಾಗ, ಪತ್ರಿಕೆಯವರು ಮನೆಗೆ ಕರೆಮಾಡಿ ಅಪ್ಪನ ಬಳಿ ಮಾತನಾಡಿ ನನ್ನ ಬಗ್ಗೆ ವಿಚಾರಿಸಿಕೊಂಡಿದ್ದು ಅವರಿಗೆ ಹೆಮ್ಮೆಯ ವಿಚಾರವಾಗಿತ್ತು.ಅದರಲ್ಲೂ ಅಪ್ಪನ ಗೆಳೆಯರು,ನೆಂಟರಿಷ್ಟರೂ ನನ್ನ ಲೇಖನವನ್ನು ಹೊಗಳಿದಾಗ ಅಪ್ಪನಿಗಾದ ಸಂತೋಷ,ಆ ಕಣ್ಣಲ್ಲಿ ನಾ ಕಂಡ ಮಿಂಚೇ ನನ್ನನ್ನೂ ಮತ್ತಷ್ಟೂ,ಮಗದಷ್ಟು ಬರೆಯಲು ಪ್ರೇರೆಪಿಸುವುದು.
       ಜೀವನದಲ್ಲಿ ಹೀನಾಯ ಸೋಲುಕಂಡಾಗಲೂ,ಮುಗ್ಗರಿಸಿ ಬಿದ್ದಾಗಲೂ ನನಗೆಂದೂ ಒಂಟಿತನ ಕಾಡಲೇ ಇಲ್ಲ,ಕಾರಣ ಪ್ರತೀ ಹೆಜ್ಜೆಯಲ್ಲೂ ನೆರಳಾಗಿ,ಬೆನ್ನೆಲುಬಾಗಿ ಅಪ್ಪನಿದ್ದರಲ್ಲ.ಕಷ್ಟದ ಅರಿವೇ ಮಾಡಿಸದೇ,ಅತಿಯಾಗಿ ಮುದ್ದುಮಾಡಿ,ಬೇಕಾದಷ್ಟು ಸ್ವಾತಂತ್ರಕೊಟ್ಟು ಬೆಳೆಸಿದರೂ,ಅವರ ಪ್ರೀತಿಯನ್ನು ನಾನು-ನನ್ನ ತಂಗಿ ಅದರ ದುರುಪಯೋಗ ಪಡೆದುಕೊಳ್ಳಲಿಲ್ಲ.ನಮ್ಮ ಮದುವೆಯಾದ ಮೇಲೆ ಅವರ ಜವಾಬ್ಧಾರಿ ಕಡಿಮೆಯಾದರೂ ಅವರ ಪ್ರೀತಿ-ಕಾಳಜಿಯಲ್ಲಿ ಎಳ್ಳುಕಾಳಷ್ಟು ಕಡಿಮೆಯಾಗಲಿಲ್ಲ.ನನಗೆ ಮದುವೆಯಾಗಿ ಜೀವ ಹಂಚಿಕೊಳ್ಳುವ ಸಂಗಾತಿಯಿದ್ದರೂ ಅಪ್ಪನ ಬಳಿ ಎಲ್ಲವನ್ನೂ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಜೀವಕ್ಕೆ. ಕಾರಣ 'ಅಪ್ಪ ನನ್ನ ಮೊದಲ ಹೀರೋ',ನಾ ಕಂಡ ದೇವತಾ ಮನುಷ್ಯ,ನಾನು ದೇವರಾ ಮಗ(ಳು).ಈ ಲೇಖನಿಯ ಮೂಲಕ ನನ್ನ ದೇವರಂಥಹ ಅಪ್ಪನಿಗೆ 'ಅಪ್ಪಂದಿರ ದಿನದ ಶುಭಾಶಯಗಳು..ನಗುತಾ ನಗುತಾ ಬಾಳು ನೀನು ನೂರು ವರುಷ' ಎಂದು ಶುಭಕೋರುವೆ.
-ಶುಭಶ್ರೀ ಭಟ್ಟ,ಬೆಂಗಳೂರು

No comments:

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...