Sunday 24 June 2012

ಮುಗುದೆ ಮಾಸ್ತಿ ಮತ್ತವಳ ಪ್ರೀತಿ...

       

ನಮ್ಮನೆಗೆ ದಿನವೂ ಕೆಲಸಕ್ಕೆಂದು ಬರುತ್ತಿದ್ದ ಮಾಸ್ತಿಯ ಜೊತೆಗಿನ ಮಧುರ ದಿನಗಳ ನೆನಪಿಂದೂ ಕೂಡ ಹಸಿರಾಗಿದೆ..'ಮಾಸ್ತಿ'-ಹಾಲಕ್ಕಿ ಒಕ್ಕಲಿಗರ ಜನಾಂಗಕ್ಕೆ ಸೇರಿದ ಹೆಣ್ಣುಮಗಳು..
ಎತ್ತಿಕಟ್ಟಿದ ತುರುಬು,ಕೂದಲೇ ಕಾಣದಂತೆ ಸುತ್ತಿರುವ ಮಾರುಗಟ್ಟಲೆ ಹೂವು, ಅಂಗೈಯಗಲದ ಹಣೆಬೊಟ್ಟು,ತುಟಿಯಂಚನ್ನು ಸೋಕುವ ಮೂಗ್ನತ್ತು,ಕಿವಿಯಲ್ಲೊಂದು ಪುಟ್ಟ ಓಲೆ,ಕುಪ್ಪಸವಿಲ್ಲದೆ
ವಿಶಿಷ್ಟವಾಗಿ ಸೀರೆಯುಡುವ ರೀತಿ,ಅರೆತೆರೆದ ಮೈಯೆಲ್ಲಾ ಮುಚ್ಚುವಂತೆ ಧರಿಸುವ ಮಣಿಹಾರ,ಕೈ ತುಂಬಾ ಬಳೆ,ಭುಜದಲ್ಲಿನ ಬಾಹುಬಂಧಿಗಳು,ಹೀಗೆ ಅವಳ ವೇಷಭೂಷಣವೇ ನನಗೆ ಮೊದಲ ಆಕರ್ಷಣೆಯಾಗಿತ್ತು..
ಬಾಯಿತುಂಬ ಕವಳ ತುಂಬಿಕೊಂಡು,ಅವಳಾಡುವ ಹಳೆಗನ್ನಡದಂತಹ ಗ್ರಾಮೀಣ ಭಾಷೆ ಕೇಳಲು ಮುದಕೊಡುತ್ತಿತ್ತು.. ನಾನು-ನನ್ನ ಪುಟ್ಟ ತಂಗಿ ದಿವ್ಯ ಇಬ್ಬರೂ ಸೇರಿ ಅವಳಾಡುವ ಪ್ರತೀ ಮಾತನ್ನು
ಅಣಕಿಸುತ್ತಾ, ಬೇಕೂಂತಲೇ ಅವಳಿಂದ ಕ್ಲಿಷ್ಟಕರವಾದ ಶಬ್ಧವನ್ನು ಹೇಳಿಸಿ,ಅದನ್ನು ಉಚ್ಚರಿಸಲಾಗದೇ ತೊದಲುವ ಅವಳನ್ನು ಕೀಟಲೆ ಮಾಡಿದರೂ,ಒಂದಿನೀತೂ ಬೇಸರಿಸದೇ ನಮ್ಮ ನಗುವಿಗೆ ದನಿಯಾಗುತ್ತಿದ್ದಳು..
    
 ನನ್ನಮ್ಮ ಮದುವೆಯಾಗಿ ಬಂದಾಗಿನಿಂದ ಅಮ್ಮನ ಸಹಾಯಕ್ಕೆಂದು  ಕೆಲಸಕ್ಕೆ ಸೇರಿದವಳು,ಒಂದು  ದಿನವೂ ವಿನಾಕಾರಣ ಕೆಲಸ ತಪ್ಪಿಸಿದ್ದಿಲ್ಲ..ಮಾಡುವ ಕೆಲಸದಲ್ಲಿನ ಅವಳ ಶೃಧ್ಧೆ,ಅದರಲ್ಲಿನ ಅಚ್ಚುಕಟ್ಟುತನ
ಇಂದಿನವರಲ್ಲಿ ಕಾಣಲು ಸಿಗಲಾರದು..ದಿನವೂ ಕುಡಿದ ಮತ್ತಿನಲ್ಲಿ ವಿನಾಕಾರಣ ಹಿಂಸಿಸುವ ಗಂಡ ಬೀರನನ್ನು ಸಹಿಸಿಕೊಂಡು,ಒಂದಾದ ಮೇಲೊಂದರಂತೆ ಏಳುಮಕ್ಕಳನ್ನು ಹಡೆದು, ಸರಿಯಾಗಿ ಬಾಣಂತನದ
ಆರೈಕೆಯಿಲ್ಲದೇ ದಿನೇ-ದಿನೇ ಸೊರಗತೊಡಗಿದಳು..ಅವಳ ಕುಡುಕ ಗಂಡನ ಕಣ್ತಪ್ಪಿಸಿ ನನ್ನಮ್ಮ ಕೊಡುತ್ತಿದ್ದ ಕಷಾಯ,ತಿಂಡಿ-ತಿನಿಸುಗಳೆಲ್ಲಾ ಅವಳ ಮಕ್ಕಳ ಪಾಲಾಗುತ್ತಿತ್ತು..ರಕ್ತವಿಲ್ಲದೇ ಅವಳು ಬಿಳುಚಿಕೊಂಡ ರೀತಿಗೆ
ನಾವೆಲ್ಲ ಕಂಗಾಲು..ಕೊನೆಗೆ ಅವರ ಸಮುದಾಯದ ಊರಗೌಡನಿಗೆ ಮುಂದಿನ ಸೂಕ್ಷ್ಮತೆಯ ಬಗ್ಗೆ ತಿಳಿಸಿ,ಅವನು ಅವಳ ಗಂಡನಿಗೆ ಬಹಿಷ್ಕಾರದ ಬೆದರಿಕೆ ಹಾಕಿದ ಮೇಲೆ ಪರಿಸ್ಥಿತಿ ತಿಳಿಯಾಗುತ್ತ ಬಂದು,
ನಮ್ಮ ಮಾಸ್ತಿ ಪುನರ್ಜನ್ಮ ಪಡೆದಳು..ಅಷ್ಟು ಹಿಂಸಿಸಿದ ಗಂಡನನ್ನು ಇಂದಿಗೂ ದೇವರೆಂದೇ ಗೌರವಿಸಿ,ಅವನಿಗೆದುರಾಡದೇ ನಡೆದುಕೊಳ್ಳುವ ಅವಳ ಮುಗುದತೆಗೆ ಕೆಲವೊಮ್ಮೆ ನಾ ತುಂಬ ಮರುಗುತ್ತೆನೆ..
      
 ಮುಂದೆ ಓದಲೆಂದು ನಾ ಬೇರೆಯೂರಿಗೆ ಹೋಗುವುದೆಂದು ನಿಶ್ಚಯವಾದಾಗ ಮಾಸ್ತಿಯ ಕಣ್ಣಂಚಲಿ ತುಳುಕುವ ನೀರು..ಅದನ್ನು ನಮಗೆ ಕಾಣದಂತೆ ತೊಡೆದು "ದೊಡ್ತಂಗಿ(ನನಗವಳು ಕರೆಯುತ್ತಿದುದೇ ಹಾಗೆ)!
ಹುಸಾರು ಮಗಾ.ಛೊಲೊ ಬರ(ಬರಹ) ಕಲ್ತಕಂಡು ಬಾ" ಎನ್ನುವಾಗ ಅವಳ ದನಿಯಲ್ಲಿನ ನಡುಕ ಸ್ಪಷ್ಟವಾಗಿತ್ತು..ಪ್ರತೀಮುಂಜಾನೆಗೂ ನನ್ನ ಜೊತೆಗಿರುತ್ತಿದ್ದ ನನ್ನೂರನ್ನು,ನನ್ನವರನ್ನು ಅಗಲಿರುವುದು
 ನನಗೂ ಸುಲಭವಾಗಿರಲಿಲ್ಲ,ಆದರೂ ಅನಿವಾರ್ಯ..ಅಂತೂ ಮೊದಲನೇ ಸೆಮಿಸ್ಟರ್ ಮುಗಿಸಿ ಊರೆನೆಡೆ ಪಯಣಿಸುತ್ತಿದ್ದವಳಿಗೆ 'ಚೊಚ್ಚಲು ಬಸುರಿ ತವರಿಗೆ' ಹಿಂತಿರುಗುತ್ತಿದ್ದಾಗಿನ ಸಂಭ್ರಮ..
ಮನೆ ತಲುಪಿದವಳಿಗೆ ಸಿಕ್ಕಿದ್ದು ತುಂಬು ಪ್ರೀತಿಯ ಸ್ವಾಗತ.ಅಮ್ಮ ಮಾಡಿಕೊಟ್ಟ ತಿಂಡಿ ತಿಂದು ಹೊರಗೆ ಬರುವಾಗಲೇ ಮಾಸ್ತಿಯ ಆಗಮನ..ಅವಳ ಕೈ ತುಂಬಾ ನನ್ನಿಷ್ಟದ 'ಸೀತಾಫಲ' ಹಣ್ಣುಗಳು.. "'ಆರಾಮೀವ್ಯ ದೊಡ್ತಂಗಿ?
ರಾಶ್ಶಿ ಜೀರು(ತೆಳ್ಳಗೆ) ಆಗೀಯಲೇ!! ಊಟುವೆಲ್ಲಾ ಸಮಾ ಕೊಡ್ತ್ರಾ ಇಲ್ಲಾ ಅಲ್ಲಿ?? ಕೊಟ್ಟಿದ್ದಾರು ಸರಿ ತಿಂಬುಕೆ(ತಿನ್ನಲು) ವೈಯಾರ ನಿಂಗೆ.." -ಹೀಗೆ ಒಂದೇ ಸಮ ಮಾತನಾಡುತ್ತಿದ್ದ
ಮಾಸ್ತಿಯ ಕಣ್ಣಲ್ಲಿ ಕಂಡಿದ್ದು ಮುಗ್ಧ ಪ್ರೀತಿ-ತುಂಬು ಕಾಳಜಿ..ನಾನದಕ್ಕೆಲ್ಲ ಉತ್ತರಿಸುವ ಮೊದಲೇ ನನ್ನ ಕೈಲಿ ಹಣ್ಣನ್ನಿಟ್ಟು- "ಇಕ ತಂಗಿ!ಈ ಸೀತಾಫಲ ನಿಂಗೆ ರಾಶ್ಶಿ ಪಿರ್ತಿ(ಪ್ರೀತಿ)ಹೇಳಿ ತಕ್ಕಂಡು ಬಂದೆ.
ನೀ ಒಬ್ಳೇ ತಿನ್ನು,ಸಣ್ತಂಗಿಗೆಲ್ಲ(ನನ್ನ ತಂಗಿಗೆ)ಕೊಡುದು ಬ್ಯಾಡ..ನಿಂಗಾರೆ ರಾಶ್ಶಿ ಅಪ್ರೂಪ(ಅಪರೂಪ)" ಎಂದವಳ ಮಾತಲ್ಲಡಗಿದ ಸಂತಸ ನನ್ನನ್ನು ಮೂಕಳನ್ನಾಗಿಸಿತ್ತು..ನಾನು ಊರಿಗೆ ಬರುವ ಸುದ್ದಿ ತಿಳಿದಾಗಿನಿಂದ
ಸೀತಾಫಲದ ಕಾಯಿ ಕೊಯ್ದು,ಹುಲ್ಲಡಿಗಿಟ್ಟು ಅದನ್ನು ಹಣ್ಣು ಮಾಡಿಸಿ,ಅದನ್ನವಳ ಮಕ್ಕಳೀಗೂ ಮುಟ್ಟಕೊಡದೇ ನನಗಾಗಿ ತಂದು ಕೊಟ್ಟದ್ದನ್ನು ಅಮ್ಮ ಹೆಮ್ಮೆಯಿಂದ ವರ್ಣಿಸುತ್ತಿದ್ದರೆ ನನ್ನ ಕಣ್ಣಂಚಾಗಲೇ ತೇವಗೊಳ್ಳುತ್ತಿತ್ತು..

  ಅದಾದಮೇಲೆ ಪ್ರತೀಸಾರಿ ಊರಿಗೆ ಹೋಗುವಾಗಲೂ ಅವಳಿಗೆಂದು ಬಳೆಯೋ,ಬಿಂದಿಯೋ,ಸೀರೆಯೋ ಕೊಂಡೊಯ್ದು,ಅದನ್ನವಳ ಕೈಯಲ್ಲಿಟ್ಟು ಅವಳಾಡದೆ ದನಿಸುವ ನಗುವು ನನಗೆ ತೃಪ್ತಿಕೊಡುತ್ತಿತ್ತು..
ಈಗ ಅವಳಿಗೂ ತುಂಬಾ ವಯಸ್ಸಾಗಿದೆ,ಬೆನ್ನು ಮೆಲ್ಲ ಬಾಗ್ತಿದೆ, ದೃಷ್ಟಿಯೂ ಮಂಜಾಗ್ತಿದೆ..ಮೊದಲಿನಂತೆ ನನ್ನನ್ನು ನೋಡಲು ನಮ್ಮನೆಗೆ ಬರಲಾಗ್ತಿಲ್ಲ ಅವಳಿಗೆ..ಅದಕ್ಕೆ ಊರಿಗೆ ಹೋದಾಗಲೊಮ್ಮೆ ಬಿಡುವಿದ್ದಾಗ
ಅವಳಿಷ್ಟದ 'ಚಹ-ಕವಳ' ತೆಗೆದುಕೊಂಡು ಅವಳ ಮನೆಗೇ ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದೆನೆ..ನಾನಲ್ಲಿ ಹೋದಾಗ ಅವರುಗಳು ಕೊಡುವ ಮರ್ಯಾದೆ,ಮಾಸ್ತಿಯ ಮಾಸದ ಪ್ರೀತಿ ನನ್ನನ್ನು ಮೂಕಳನ್ನಾಗಿ ಮಾಡುತ್ತದೆ..
ಆದರೂ ಕೆಲಸದ ಒತ್ತಡದಲ್ಲಿ ಒಮ್ಮೊಮ್ಮೆ ಅವಳನ್ನು ಮಾತನಾಡಿಸದೇ ಹಿಂತಿರುಗಬೇಕಾದಾಗ ಮನಸ್ಸಿನ ಮೂಲೆಯಲ್ಲೆಲ್ಲೊ ಚುಚ್ಚಿದಂತಾಗುತ್ತದೆ..
ಮುಗುದ ಮಾಸ್ತಿಗೆ ಮತ್ತವಳ ಪ್ರೀತಿಗೆ ಬಹುಶ: ನನ್ನಿಂದ ಬೆಲೆ ಕಟ್ಟಲಾಗುವುದಿಲ್ಲ..ಮನೆವರೆಲ್ಲರ ಸಹಜ ಪ್ರೀತಿಯ ಜೊತೆ,ವಿಶಿಷ್ಟವಾದ ಅವಳ ಪ್ರೀತಿ,ನನ್ನಲ್ಲಿ ಸದಾ ಮಾಸದೆ ಇರುತ್ತದೆ ಎಂದಷ್ಟೆ ಹೇಳಬಲ್ಲೆ..
                  
     -ಶುಭಶ್ರೀ ಭಟ್ಟ

Monday 16 April 2012

ನೀನಿಲ್ಲದೇ.....



ನೀನಿಲ್ಲದೇ ಮಾಸಗಳುರುಳಿ
ಪಕ್ಷವೆರಡು ಬದಿಸರಿದರೂ
ನನ್ನೆದೆಯ ಸಮುದ್ರದೊಳು
ನೀನಿಟ್ಟ ಹೆಜ್ಜೆಗುರುತಿನ್ನೂ ಮಾಸಿಲ್ಲ||
 
   ನ೦ಬಿಕೆಯ ತಳಹದಿಯಲ್ಲಿ ಕಟ್ಟಿದ
   ಪ್ರೀತಿಯ ಸೌಧವ ಚೂರಾಗಿಸಿ
   ಇನ್ನಿಲ್ಲಿರಲಾರೆನೆ೦ಬ೦ತೆ ನನ್ನಗಲಿದ
   ಅವಸರದ ಹಿ೦ದಿರುವ ಪ್ರಶ್ನೆಗೆ
   ಉತ್ತರವಿನ್ನೂ ಸಿಕ್ಕಿಲ್ಲ||

ಬದಲಾವಣೆಯ ಅಲೆಯೊಡನೆ
ಬಲುದೂರ ತೇಲಿಹೋದ ನೀನು
ಕ್ಷಣವೂ ಸೋನೆಸುರಿಸುವ ಮನಕ್ಕೆ
ಸಾ೦ತ್ವನ ಹೇಳಲಾದರೂ ಮರಳಿ
ಬರುವೆಯೆ೦ಬ ನಿರೀಕ್ಷೆಯೀಗ ಹಸಿಯಾಗಿಲ್ಲ||

    -ಶುಭಶ್ರೀ ಭಟ್ಟ

Thursday 5 April 2012

ನೆನಪುಗಳ ಗರ್ಭ...

ಮನವೆರಡರ ಪ್ರಣಯದಲ್ಲಿ
ಋತುಮಾಸಗಳು ಉರುಳಿ
ನೆನಪುಗಳೆಲ್ಲಾ ಗರ್ಭಕಟ್ಟಿ
ಕನಸೆ೦ಬ ಭ್ರೂಣ ಬೆಳೆದು
ನನಸೆ೦ಬ ಮಗುವಾಗಿ
ಜನಿಸುವ ಮುನ್ನವೇ
ವೇದನೆಯೀ೦ದ ಅಸುನೀಗಿದೆ
ಬರಿದಾದ ಮಡಿಲಾದರೂ
ಮನವೀಗ ಹಸೀ ಬಾಣ೦ತಿ||
  -ಶುಭಶ್ರೀ ಭಟ್ಟ

Friday 17 February 2012

ಅಮ್ಮ ನಿನ್ನ ಎದೆಯಾಳದಲ್ಲಿ..

   'ಅಮ್ಮ' ಅವೆರಡೇ ಏರಡು ಅಕ್ಷ್ರರದಲ್ಲಿ ಅದಿನ್ನೆ೦ತಹ ಮಾ೦ತ್ರಿಕ ಮೋಡಿಯಿದೆಯೋ!!.. ವಶೀಕರಣಕ್ಕೋಳಗಾದ೦ತೆ ಮೆಲ್ಲನೆ 'ಅಮ್ಮ' ಎ೦ಬ ಅಮ್ರತರೂಪಿಯ ಸೆಳೆತಕ್ಕೊಳಗಾಗಿ ಬಿಡುತ್ತೇವೆ.ನಾವದೇಷ್ಟೇ ಬೇಸರದ ಪಾತಾಳದಲ್ಲಿ ಕುಸಿದು ಬಿದ್ದಿದ್ದರೂ,ನಮ್ಮನ್ನು ಚಿಲುಮೆಯ೦ತೆ ಚಿಮ್ಮಿಸುವ ಶಕ್ತಿಯನ್ನು ನೀಡಬಲ್ಲ ತಾಕತ್ತಿರುವುದು ಬಹುಶಃ ಅಮ್ಮನಿಗಷ್ಟೇ..
ಇ೦ತಿಪ್ಪ ಅಮ್ಮ ಭೂಮಿಯ೦ತಹ ಮನಸ್ಸುಳ್ಳವಳು,ತಾಳ್ಮೆ-ಸಹನೆಯ ಪ್ರತಿರೂಪವೇ ಸರಿ...

  ಬರೋಬ್ಬರಿ ಒ೦ಭತ್ತು ತಿ೦ಗಳಷ್ತು ಕಾಲ ಇನ್ನೊ೦ದು ಪುಟ್ಟ ಜೀವವನ್ನು ತನ್ನಲ್ಲಿರಿಸಿಕೊ೦ಡು,ಸಹಿಸಲಸಾಧ್ಯದ ನೋವಿನಲ್ಲ್ಲಿ ಮಗುವಿಗೆ ಜನ್ಮ ನೀಡುವ ಮೂಲಕ ತಾನೂ ಪುನರ್ಜನ್ಮವನ್ನು ಪಡೆಯುತ್ತಾಳೆ.. ಅಪಾರ ನೋವಿನಲ್ಲೂ ನಸುನಗುತ್ತಲೇ,ಎಲ್ಲವನ್ನೂ ಮರೆಯುತ್ತಾಳೆ ಮಗುವಿನ ಮುಖ ನೋಡಿ... ಅದನ್ನು ತಿಳಿದ೦ತಾಡುವ ಮಗು ಮೆಲ್ಲನೆ
ಅಮ್ಮನೆಡೆಗೆ ನೋಡಿ ಹೂನಗು ಬೀರಿದರ೦ತೂ ಮುಗಿಯಿತು, 'ಸ್ವರ್ಗಕ್ಕೆ ಮೂರೇ ಗೇಣು' ಎ೦ಬ೦ತೆ ಖುಷಿ ಅಮ್ಮನಿಗೆ. ಒದೆಯುತ್ತಲೇ ಎದೆಹಾಲು ಕುಡಿಯುವ ಮಗು,ಅರೆತೆರೆದ ಕಣ್ಣಿನಿ೦ದ ಅಮ್ಮನೆಡೆಗೆ ನೋಡಿದಾಗಲ೦ತೂ ಅವಳಿಗೆ ತಾಯ್ತನದ ಸ೦ಪೂರ್ಣ ಅನುಭೂತಿ...ರಾತ್ರಿಯೀಡಿ ರಚ್ಚೆಹಿಡಿದು ಹಟಮಾಡುವ ಮಗುವಿನ ಬಗ್ಗೆ ಒ೦ದಿನೀತೂ ಬೇಸರವಿಲ್ಲ,ತಾನೂ ಅದರ ಜೋತೆ ಜಾಗರಣೆಗೆ ಕುಳಿತವಳ೦ತೆ,ರಾತ್ರಿಯೆಲ್ಲಾ ಮಗುವ ಓಲೈಸುವುದರಲ್ಲೇ ಕಳೆಯುತ್ತಾಳೆ. ನಿದ್ದೆಯಲ್ಲಿ ಸುಮ್ಮನೆ ನಸುನಗುವ ಮಗುವ ಕ೦ಡು 'ದೇವರ ಜೊತೆ ಮಾತನಾಡ್ತಿದೆ' ಅನ್ನೊ ಹೆಮ್ಮೆ ಬೇರೆ.. ಹೀಗೇ ಕಾಲವುರುಳಿ ಮುದ್ದಾಗಿ ಬೆಳೆಯುತಲಿದ್ದ ಮಗುವನ್ನು ಕ೦ಡು ಅವಳಿಗೆ ಹೇಳಲಾರದಷ್ತು ಸ೦ತಸ..ಬಿದ್ದಾಗ ಮುದ್ದಸಿ,ಗೆದ್ದಾಗ ಪ್ರೋತ್ಸಾಹಿಸುವ ಅಮ್ಮ ಎಲ್ಲರಿಗಿ೦ತ ಭ್ಹಿನ್ನವಾಗಿ ಕಾಣುವುದೆ ಇದಕ್ಕೆನೋ..
  ಪುಟ್ಟ ಸೂಜಿಮೊನೆ ತಗುಲಿಸಿಕೋ೦ಡರೂ 'ಅಮ್ಮಾ' ಎ೦ದು ಚೀರಿವ ಮಕ್ಕಳಿಗೆ,ಬೆಳೆಯುತ್ತಾ ಬ೦ದ೦ತೆ ಅಮ್ಮನ ಅಗತ್ಯ ಅಷ್ಟಾಗಿ ಬೇಡವಾಗುತ್ತದೆ..'ಅಮ್ಮ ನಿನ್ನ ರಕ್ಷೆಗೂಡಲ್ಲಿ ಅಡಗಲಿ ಏಷ್ತು ದಿನ?' ಎ೦ದು ಗುನುಗುನಿಸುತ್ತಾ ಅಮ್ಮನಿ೦ದ ದೂರವಾಗುವ ಪ್ರಯತ್ನ ಮಾಡತೋಡಗುತ್ತಾರೆ..ಅದರ ಸುಳಿವು ದೊರೆತ ಅಮ್ಮನಿಗೆ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭ್ಹವ.. ಎದೆಯಾಳದಿ೦ದ ಚಿಮ್ಮಿಬರುವ ದುಃಖವ ಮೆಲ್ಲನೆ ನು೦ಗಿ,ಎಲ್ಲರೆದುರು ನಸುನಗುತ್ತಿರುವ ಅಮ್ಮನೊಳಗೆ ಮಾತ್ರ ಬರೀ ನೋವಿನದ್ದೆ ಸಾಮ್ರಾಜ್ಯ..ಹೆತ್ತು ಬೆಳೆಸಿದ ಮಗು ದೂರಾಗುತ್ತಿರುವ ಸ೦ಕಟವಿದ್ದರೂ,ಮಗು ಸುಖವಾಗಿರಲೆ೦ದು ಹಾರೈಸುವ ಮನಸ್ಸು.. ಹೀಗೇ ಸದಾ ಮಕ್ಕಳ ಶ್ರೇಯಸ್ಸನ್ನೇ ಬಯಸುವುದು ಬಹುಶಃ 'ಅಮ್ಮ'ನಿ೦ದಷ್ಟೇ ಸಾಧ್ಯ..
  ತನ್ನೀಡೀ ಜೀವನವನ್ನು ಮಕ್ಕಳಿಗಾಗಿಯೆ ಮೀಸಲಿಡುವ ಅಮ್ಮನಿಗೂ ಒ೦ದು ಮನಸ್ಸಿದೆ,ಅದರಲ್ಲೂ ಪುಟ್ಟ ಕನಸಿದೆ ಎ೦ದು ನಾವು ಕ್ಷಣ ಕೂಡ ಯೋಚಿಸುವುದಿಲ್ಲ..ಆ ಮಹಾತಾಯಿ ಎ೦ದಿಗೂ ಬಾಯಿಬಿಟ್ಟು ಕೇಳಲೊಲ್ಲಳು.. ನಮ್ಮ ಸಣ್ಣ ಸನ್ನೆಯನ್ನೂ ಕೂಡ ಅರ್ಥಮಾಡಿಕೊಳ್ಳುವ ಶಕ್ತಿ ಅಮ್ಮನಿಗೆ ಇರಬೇಕಾದರೆ,ಅವಳ ಮನಸ್ಸನ್ನು ಅರ್ಥ ಮಾಡಿಕೊ೦ಡು,ಅದರ೦ತೆ
ನಡೆದುಕೊಳ್ಳುವ ಶಕ್ತಿ ನಮಗಿಲ್ಲವೇ??.. ಪ್ರಯತ್ನಿಸಿದರೆ ಎಲ್ಲವೂ ಸಾಧ್ಯ.. ಒಬ್ಬರ ಬೆಲೆ ನಮಗೆ ಅರಿವಾಗುವುದು ಅವರ ಗೈರುಹಾಜರಿಯಲ್ಲೇ..ಎದುರಿದ್ದಾಗ ಅವರಿಗಿಷ್ಟವಾದ್ದನ್ನು ಮಾಡಲಿಕ್ಕಾಗದೇ,ಅವರಿಲ್ಲದ ಮೇಲೆ ಹಳಹಳಿಸುವುದರಲ್ಲಿ ಅರ್ಥವಿಲ್ಲ..ನಮ್ಮ ಅಮ್ಮನ ವಿಚಾರದಲ್ಲಿ ಹಾಗಾಗುವುದು ಬೇಡ..
   ಶ್ರೀ ಶ್ರೀ ಶ೦ಕರಾಚಾರ್ಯರು ಹೇಳಿದ೦ತೆ 'ಜಗತ್ತಿನಲ್ಲಿ ಕೆಟ್ಟ ಮಗನಿರಬಹುದು,ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ'. ಇದು ಅಕ್ಷರಶಃ ಸತ್ಯ.. ಇದಕ್ಕೆ ಉದಾಹರಣೆಯೋ ಎ೦ಬ೦ತೆ ಇ೦ದು ನಾವು ಕಾಣುತ್ತಿರುವ ವೃದ್ಧಾಶೃಮಗಳು..ತನ್ನ ಜೀವನವನ್ನೆ ಮಕ್ಕಳಿಗಾಗಿ ತೇದು ಸಣ್ಣಗಾದ ಅಮ್ಮನನ್ನು,ಅವಳ ಬಾಳ ಮುಸ್ಸ೦ಜೆಯಲ್ಲಿ ನೋಡಿಕೊಳ್ಳಲು ನಮಗಾಗದೇ??
 ದಿನೇ ದಿನೇ ಹೆಚ್ಚುತ್ತಿರುವ ವೃದ್ಧಾಶೃಮಶೃಮಗಳನ್ನೂ,ಅದರಲ್ಲಿ ತು೦ಬಿರುವ ವೃದ್ಧರನ್ನೂ ನೋಡಿದರೆ ಮನುಷ್ಯನ ದುರ್ಬುದ್ದಿಗೆ ಅಸಹ್ಯವಾಗುತ್ತದೆ..ಕೊನೆಯಲ್ಲಿ ಇಲ್ಲದ ನೆಪವೊಡ್ಡಿ ಅಮ್ಮನನ್ನು ವೃದ್ಧಾಶೃಮಕ್ಕೆ ಅಟ್ಟುವುದನ್ನು ಬಿಟ್ಟು,ಅಮ್ಮನಿಗೆ ನಿಮ್ಮ ಕೈಲಾದ ಸೇವೆ ಮಾಡಿ. ಅಮ್ಮನನ್ನು ಪ್ರೀತೀಯಿ೦ದ ಮಗುವ೦ತೆ ನೋಡಿಕೊಳ್ಳಿ,ಅಮ್ಮ ನಿಮ್ಮ ಮಡಿಲಲ್ಲಿ ಮಗುವಾಗಿ ನಗುತ್ತಾಳೆ. ಎಲ್ಲರೂ ಅಮೃತರೂಪಿಯಾದ ಅಮ್ಮನನ್ನು ಸದಾ ಖುಷಿಯಿ೦ದಿಟ್ಟರೆ,ಈ ಲೇಖನಿಯ ಉದ್ದೇಶವೂ ಸಾರ್ಥಕ

ಶುಭಶ್ರೀ ಭಟ್ಟ

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...