Sunday 24 June 2012

ಮುಗುದೆ ಮಾಸ್ತಿ ಮತ್ತವಳ ಪ್ರೀತಿ...

       

ನಮ್ಮನೆಗೆ ದಿನವೂ ಕೆಲಸಕ್ಕೆಂದು ಬರುತ್ತಿದ್ದ ಮಾಸ್ತಿಯ ಜೊತೆಗಿನ ಮಧುರ ದಿನಗಳ ನೆನಪಿಂದೂ ಕೂಡ ಹಸಿರಾಗಿದೆ..'ಮಾಸ್ತಿ'-ಹಾಲಕ್ಕಿ ಒಕ್ಕಲಿಗರ ಜನಾಂಗಕ್ಕೆ ಸೇರಿದ ಹೆಣ್ಣುಮಗಳು..
ಎತ್ತಿಕಟ್ಟಿದ ತುರುಬು,ಕೂದಲೇ ಕಾಣದಂತೆ ಸುತ್ತಿರುವ ಮಾರುಗಟ್ಟಲೆ ಹೂವು, ಅಂಗೈಯಗಲದ ಹಣೆಬೊಟ್ಟು,ತುಟಿಯಂಚನ್ನು ಸೋಕುವ ಮೂಗ್ನತ್ತು,ಕಿವಿಯಲ್ಲೊಂದು ಪುಟ್ಟ ಓಲೆ,ಕುಪ್ಪಸವಿಲ್ಲದೆ
ವಿಶಿಷ್ಟವಾಗಿ ಸೀರೆಯುಡುವ ರೀತಿ,ಅರೆತೆರೆದ ಮೈಯೆಲ್ಲಾ ಮುಚ್ಚುವಂತೆ ಧರಿಸುವ ಮಣಿಹಾರ,ಕೈ ತುಂಬಾ ಬಳೆ,ಭುಜದಲ್ಲಿನ ಬಾಹುಬಂಧಿಗಳು,ಹೀಗೆ ಅವಳ ವೇಷಭೂಷಣವೇ ನನಗೆ ಮೊದಲ ಆಕರ್ಷಣೆಯಾಗಿತ್ತು..
ಬಾಯಿತುಂಬ ಕವಳ ತುಂಬಿಕೊಂಡು,ಅವಳಾಡುವ ಹಳೆಗನ್ನಡದಂತಹ ಗ್ರಾಮೀಣ ಭಾಷೆ ಕೇಳಲು ಮುದಕೊಡುತ್ತಿತ್ತು.. ನಾನು-ನನ್ನ ಪುಟ್ಟ ತಂಗಿ ದಿವ್ಯ ಇಬ್ಬರೂ ಸೇರಿ ಅವಳಾಡುವ ಪ್ರತೀ ಮಾತನ್ನು
ಅಣಕಿಸುತ್ತಾ, ಬೇಕೂಂತಲೇ ಅವಳಿಂದ ಕ್ಲಿಷ್ಟಕರವಾದ ಶಬ್ಧವನ್ನು ಹೇಳಿಸಿ,ಅದನ್ನು ಉಚ್ಚರಿಸಲಾಗದೇ ತೊದಲುವ ಅವಳನ್ನು ಕೀಟಲೆ ಮಾಡಿದರೂ,ಒಂದಿನೀತೂ ಬೇಸರಿಸದೇ ನಮ್ಮ ನಗುವಿಗೆ ದನಿಯಾಗುತ್ತಿದ್ದಳು..
    
 ನನ್ನಮ್ಮ ಮದುವೆಯಾಗಿ ಬಂದಾಗಿನಿಂದ ಅಮ್ಮನ ಸಹಾಯಕ್ಕೆಂದು  ಕೆಲಸಕ್ಕೆ ಸೇರಿದವಳು,ಒಂದು  ದಿನವೂ ವಿನಾಕಾರಣ ಕೆಲಸ ತಪ್ಪಿಸಿದ್ದಿಲ್ಲ..ಮಾಡುವ ಕೆಲಸದಲ್ಲಿನ ಅವಳ ಶೃಧ್ಧೆ,ಅದರಲ್ಲಿನ ಅಚ್ಚುಕಟ್ಟುತನ
ಇಂದಿನವರಲ್ಲಿ ಕಾಣಲು ಸಿಗಲಾರದು..ದಿನವೂ ಕುಡಿದ ಮತ್ತಿನಲ್ಲಿ ವಿನಾಕಾರಣ ಹಿಂಸಿಸುವ ಗಂಡ ಬೀರನನ್ನು ಸಹಿಸಿಕೊಂಡು,ಒಂದಾದ ಮೇಲೊಂದರಂತೆ ಏಳುಮಕ್ಕಳನ್ನು ಹಡೆದು, ಸರಿಯಾಗಿ ಬಾಣಂತನದ
ಆರೈಕೆಯಿಲ್ಲದೇ ದಿನೇ-ದಿನೇ ಸೊರಗತೊಡಗಿದಳು..ಅವಳ ಕುಡುಕ ಗಂಡನ ಕಣ್ತಪ್ಪಿಸಿ ನನ್ನಮ್ಮ ಕೊಡುತ್ತಿದ್ದ ಕಷಾಯ,ತಿಂಡಿ-ತಿನಿಸುಗಳೆಲ್ಲಾ ಅವಳ ಮಕ್ಕಳ ಪಾಲಾಗುತ್ತಿತ್ತು..ರಕ್ತವಿಲ್ಲದೇ ಅವಳು ಬಿಳುಚಿಕೊಂಡ ರೀತಿಗೆ
ನಾವೆಲ್ಲ ಕಂಗಾಲು..ಕೊನೆಗೆ ಅವರ ಸಮುದಾಯದ ಊರಗೌಡನಿಗೆ ಮುಂದಿನ ಸೂಕ್ಷ್ಮತೆಯ ಬಗ್ಗೆ ತಿಳಿಸಿ,ಅವನು ಅವಳ ಗಂಡನಿಗೆ ಬಹಿಷ್ಕಾರದ ಬೆದರಿಕೆ ಹಾಕಿದ ಮೇಲೆ ಪರಿಸ್ಥಿತಿ ತಿಳಿಯಾಗುತ್ತ ಬಂದು,
ನಮ್ಮ ಮಾಸ್ತಿ ಪುನರ್ಜನ್ಮ ಪಡೆದಳು..ಅಷ್ಟು ಹಿಂಸಿಸಿದ ಗಂಡನನ್ನು ಇಂದಿಗೂ ದೇವರೆಂದೇ ಗೌರವಿಸಿ,ಅವನಿಗೆದುರಾಡದೇ ನಡೆದುಕೊಳ್ಳುವ ಅವಳ ಮುಗುದತೆಗೆ ಕೆಲವೊಮ್ಮೆ ನಾ ತುಂಬ ಮರುಗುತ್ತೆನೆ..
      
 ಮುಂದೆ ಓದಲೆಂದು ನಾ ಬೇರೆಯೂರಿಗೆ ಹೋಗುವುದೆಂದು ನಿಶ್ಚಯವಾದಾಗ ಮಾಸ್ತಿಯ ಕಣ್ಣಂಚಲಿ ತುಳುಕುವ ನೀರು..ಅದನ್ನು ನಮಗೆ ಕಾಣದಂತೆ ತೊಡೆದು "ದೊಡ್ತಂಗಿ(ನನಗವಳು ಕರೆಯುತ್ತಿದುದೇ ಹಾಗೆ)!
ಹುಸಾರು ಮಗಾ.ಛೊಲೊ ಬರ(ಬರಹ) ಕಲ್ತಕಂಡು ಬಾ" ಎನ್ನುವಾಗ ಅವಳ ದನಿಯಲ್ಲಿನ ನಡುಕ ಸ್ಪಷ್ಟವಾಗಿತ್ತು..ಪ್ರತೀಮುಂಜಾನೆಗೂ ನನ್ನ ಜೊತೆಗಿರುತ್ತಿದ್ದ ನನ್ನೂರನ್ನು,ನನ್ನವರನ್ನು ಅಗಲಿರುವುದು
 ನನಗೂ ಸುಲಭವಾಗಿರಲಿಲ್ಲ,ಆದರೂ ಅನಿವಾರ್ಯ..ಅಂತೂ ಮೊದಲನೇ ಸೆಮಿಸ್ಟರ್ ಮುಗಿಸಿ ಊರೆನೆಡೆ ಪಯಣಿಸುತ್ತಿದ್ದವಳಿಗೆ 'ಚೊಚ್ಚಲು ಬಸುರಿ ತವರಿಗೆ' ಹಿಂತಿರುಗುತ್ತಿದ್ದಾಗಿನ ಸಂಭ್ರಮ..
ಮನೆ ತಲುಪಿದವಳಿಗೆ ಸಿಕ್ಕಿದ್ದು ತುಂಬು ಪ್ರೀತಿಯ ಸ್ವಾಗತ.ಅಮ್ಮ ಮಾಡಿಕೊಟ್ಟ ತಿಂಡಿ ತಿಂದು ಹೊರಗೆ ಬರುವಾಗಲೇ ಮಾಸ್ತಿಯ ಆಗಮನ..ಅವಳ ಕೈ ತುಂಬಾ ನನ್ನಿಷ್ಟದ 'ಸೀತಾಫಲ' ಹಣ್ಣುಗಳು.. "'ಆರಾಮೀವ್ಯ ದೊಡ್ತಂಗಿ?
ರಾಶ್ಶಿ ಜೀರು(ತೆಳ್ಳಗೆ) ಆಗೀಯಲೇ!! ಊಟುವೆಲ್ಲಾ ಸಮಾ ಕೊಡ್ತ್ರಾ ಇಲ್ಲಾ ಅಲ್ಲಿ?? ಕೊಟ್ಟಿದ್ದಾರು ಸರಿ ತಿಂಬುಕೆ(ತಿನ್ನಲು) ವೈಯಾರ ನಿಂಗೆ.." -ಹೀಗೆ ಒಂದೇ ಸಮ ಮಾತನಾಡುತ್ತಿದ್ದ
ಮಾಸ್ತಿಯ ಕಣ್ಣಲ್ಲಿ ಕಂಡಿದ್ದು ಮುಗ್ಧ ಪ್ರೀತಿ-ತುಂಬು ಕಾಳಜಿ..ನಾನದಕ್ಕೆಲ್ಲ ಉತ್ತರಿಸುವ ಮೊದಲೇ ನನ್ನ ಕೈಲಿ ಹಣ್ಣನ್ನಿಟ್ಟು- "ಇಕ ತಂಗಿ!ಈ ಸೀತಾಫಲ ನಿಂಗೆ ರಾಶ್ಶಿ ಪಿರ್ತಿ(ಪ್ರೀತಿ)ಹೇಳಿ ತಕ್ಕಂಡು ಬಂದೆ.
ನೀ ಒಬ್ಳೇ ತಿನ್ನು,ಸಣ್ತಂಗಿಗೆಲ್ಲ(ನನ್ನ ತಂಗಿಗೆ)ಕೊಡುದು ಬ್ಯಾಡ..ನಿಂಗಾರೆ ರಾಶ್ಶಿ ಅಪ್ರೂಪ(ಅಪರೂಪ)" ಎಂದವಳ ಮಾತಲ್ಲಡಗಿದ ಸಂತಸ ನನ್ನನ್ನು ಮೂಕಳನ್ನಾಗಿಸಿತ್ತು..ನಾನು ಊರಿಗೆ ಬರುವ ಸುದ್ದಿ ತಿಳಿದಾಗಿನಿಂದ
ಸೀತಾಫಲದ ಕಾಯಿ ಕೊಯ್ದು,ಹುಲ್ಲಡಿಗಿಟ್ಟು ಅದನ್ನು ಹಣ್ಣು ಮಾಡಿಸಿ,ಅದನ್ನವಳ ಮಕ್ಕಳೀಗೂ ಮುಟ್ಟಕೊಡದೇ ನನಗಾಗಿ ತಂದು ಕೊಟ್ಟದ್ದನ್ನು ಅಮ್ಮ ಹೆಮ್ಮೆಯಿಂದ ವರ್ಣಿಸುತ್ತಿದ್ದರೆ ನನ್ನ ಕಣ್ಣಂಚಾಗಲೇ ತೇವಗೊಳ್ಳುತ್ತಿತ್ತು..

  ಅದಾದಮೇಲೆ ಪ್ರತೀಸಾರಿ ಊರಿಗೆ ಹೋಗುವಾಗಲೂ ಅವಳಿಗೆಂದು ಬಳೆಯೋ,ಬಿಂದಿಯೋ,ಸೀರೆಯೋ ಕೊಂಡೊಯ್ದು,ಅದನ್ನವಳ ಕೈಯಲ್ಲಿಟ್ಟು ಅವಳಾಡದೆ ದನಿಸುವ ನಗುವು ನನಗೆ ತೃಪ್ತಿಕೊಡುತ್ತಿತ್ತು..
ಈಗ ಅವಳಿಗೂ ತುಂಬಾ ವಯಸ್ಸಾಗಿದೆ,ಬೆನ್ನು ಮೆಲ್ಲ ಬಾಗ್ತಿದೆ, ದೃಷ್ಟಿಯೂ ಮಂಜಾಗ್ತಿದೆ..ಮೊದಲಿನಂತೆ ನನ್ನನ್ನು ನೋಡಲು ನಮ್ಮನೆಗೆ ಬರಲಾಗ್ತಿಲ್ಲ ಅವಳಿಗೆ..ಅದಕ್ಕೆ ಊರಿಗೆ ಹೋದಾಗಲೊಮ್ಮೆ ಬಿಡುವಿದ್ದಾಗ
ಅವಳಿಷ್ಟದ 'ಚಹ-ಕವಳ' ತೆಗೆದುಕೊಂಡು ಅವಳ ಮನೆಗೇ ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದೆನೆ..ನಾನಲ್ಲಿ ಹೋದಾಗ ಅವರುಗಳು ಕೊಡುವ ಮರ್ಯಾದೆ,ಮಾಸ್ತಿಯ ಮಾಸದ ಪ್ರೀತಿ ನನ್ನನ್ನು ಮೂಕಳನ್ನಾಗಿ ಮಾಡುತ್ತದೆ..
ಆದರೂ ಕೆಲಸದ ಒತ್ತಡದಲ್ಲಿ ಒಮ್ಮೊಮ್ಮೆ ಅವಳನ್ನು ಮಾತನಾಡಿಸದೇ ಹಿಂತಿರುಗಬೇಕಾದಾಗ ಮನಸ್ಸಿನ ಮೂಲೆಯಲ್ಲೆಲ್ಲೊ ಚುಚ್ಚಿದಂತಾಗುತ್ತದೆ..
ಮುಗುದ ಮಾಸ್ತಿಗೆ ಮತ್ತವಳ ಪ್ರೀತಿಗೆ ಬಹುಶ: ನನ್ನಿಂದ ಬೆಲೆ ಕಟ್ಟಲಾಗುವುದಿಲ್ಲ..ಮನೆವರೆಲ್ಲರ ಸಹಜ ಪ್ರೀತಿಯ ಜೊತೆ,ವಿಶಿಷ್ಟವಾದ ಅವಳ ಪ್ರೀತಿ,ನನ್ನಲ್ಲಿ ಸದಾ ಮಾಸದೆ ಇರುತ್ತದೆ ಎಂದಷ್ಟೆ ಹೇಳಬಲ್ಲೆ..
                  
     -ಶುಭಶ್ರೀ ಭಟ್ಟ

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...