Tuesday 21 February 2017

-ಮಸಣದ ಹೂವು-








ಹೃದಯದಲಿ ರಕ್ತ ಹೆಪ್ಪುಗಟ್ಟಿದೆ
ಕಣ್ಣು ಉರಿಯುತಿದೆ
ಸೊಂಟ ಸೋಲುತಿದೆ...

ಆದರೂ ಮೈ ಬೆತ್ತಲಾಗಬೇಕು
ಕಾಡೆಮ್ಮೆಯಂತೆ ಮದಿಸುವವನಿಗೆ
ನಲುಗುತ್ತಾ ಮುಲುಗುತ್ತಾ
ಕೃತಕ ನಗುವ ಮೊಗದೊಳಿಟ್ಟು
ಹೇಸಿಗೆಯ ಹಾಸಿಗೆಯಲ್ಲೇ
ಶೃಂಗಾರ ಸಾಗರದಲ್ಲಿ ನೂಕಿಸಬೇಕು||
ಸೀರೆಯನ್ನ ಎಳೆದೆಳೆದು
ಕುಬುಸವ ಬಿಚ್ಚಿಯೆಸೆದು
ಬೆತ್ತಲೆಯ ಮೈಯಲ್ಲಿ
ಎದೆಯಮುಕಿ ತುಟಿ ಕಚ್ಚಿ
ಕಾಮದಾಟದೀ ವಿಜೃಂಭಿಸುತ್ತಾ
ಕೊರಡಾಗಿ ಸುಖಸಿಗಿವ
ಸಹಸ್ರಾರು ದುಶ್ಶಾಸನರಿಹರಿಲ್ಲಿ
ಕೂಗಿದರೂ ಬಾರ ಕೃಷ್ಣನಿಂದು
ನನ್ನಂತ ಕೃಷ್ಣೆಯ ಕರೆಗೆ||
ಎಂಜಲೆಲೆಗೆ ಹಸಿದ ನಾಯಂತೆ
ಹಾರಿಬಿದ್ದು ಮುಕ್ಕುವಾಗ
ನೆಕ್ಕಿನೆಕ್ಕಿ ನುಂಗುವಾಗ
ಕ್ಷಣಕಾದರೂ ಜೊತೆಗಿರೋ ಅಕ್ಕತಂಗಿ
ಮುದ್ದು ಮಗಳು,ಮಮತೆಯ ತಾಯಿ
ಯಾರೂ ಕಾಣಲಿಲ್ಲವೇ?
ಬೆತ್ತಲೆದೆಯ ಬಳುಕ ಹಿಂದೆ
ಬಚ್ಚಿಟ್ಟಕೊಂಡ ಹೆಪ್ಪಿಟ್ಟುಕೊಂಡ
ನೋವು ಕಾಣಲಿಲ್ಲವೇ?
ಮಗಳಾಗಬಹುದಿತ್ತು ಮೈಮಾರಿಕೊಂಡೆ
ತಾಯಾಗಬಹುದಿತ್ತು ತಲೆಹಿಡುಕಳಾದೆ
ಹೆಂಡತಿಯಾಗಬಹುದಿತ್ತು ಸವತಿಯಾದೆ
ವಿಧಿಯಾಟಕೆ ಬೆಲೆತೆತ್ತೆ ಬಲಿಕೊಟ್ಟೆ
ಮಸಣದ ಹೂವಾದೆ
ನಿತ್ಯಮುತ್ತೈದೆಯಾದೆ
||
-ಶುಭಶ್ರೀ ಭಟ್ಟ





Thursday 16 February 2017

ನೇಸರ ಸರಿಯುವ ಸಮಯ






ಮುದ್ದಾಗಿ ಕಚಗುಳಿಯಿಕ್ಕೊ ಅಲೆಗಳು
ಕಾಲ್ತಂಪಾಗಿಸೋ ಬೆಚ್ಚಗಿನ ನೀರು
ಕಣ್ಣೀರ ಒರೆಸುವ ತಿಳಿಯಾದ ತಂಗಾಳಿ

ಆದರೂ ನಿನ್ನ ಹುಡುಕುವ ತವಕ
ಈ ಜೀವನ ಮುಸ್ಸಂಜೆಯಲ್ಲಿ ||
ಅವಧಿ ಮುಗಿಯುವ ಮುನ್ನ
ನೀ ಧರೆಗಿಳಿಯ ಬಂದೆ
ರಕ್ತ-ಮಾಂಸದ ಮುದ್ದೆಯಾಗಿ
ನೀ ಜಾರಿ ಹೋದೆ 
ಮತ್ತೆಂದೂ ಮರಳಿ ಬಾರದ ಲೋಕಕ್ಕೆ||
ಕೊಟ್ಟಂತೆ ಮಾಡಿ ಕಿತ್ತುಕೊಂಡ ಅವ
ನೂರಾರು ಕನಸ ಚೂರಾಸಿಗಿದ ಅವ
ಉತ್ತರವಿಲ್ಲದ ಪ್ರಶ್ನೆ ಹುಡುಕ ಹೊರಟೆ
ನಿನ್ನ ಹೆಜ್ಜೆ ಗುರುತು ಹಿಡಿದು 
ಕಾಣದಿಹ ಅಜ್ನಾತ ಜಾಗಕ್ಕೆ||
-ಶುಭಶ್ರೀ ಭಟ್ಟ

ಭ್ರಮೆ-ಕನಸು-ವಾಸ್ತವ




ಭ್ರಮೆಯೆಂಬ ಮಾಯೆ ಕನಸೆಂಬ ಬಟ್ಟೆ ತೊಟ್ಟು

ಇಟ್ಟಿಗೆ ಗೊಡೆಯಂಚಿಂದ ಇಣುಕಿದಾಗ |
ಜೋಕಾಲಿ ಜೀಕೀಕೊಂಡು
ಮದರಂಗಿ ಮೆತ್ತಿಕೊಂಡು
ಮಾವಿನಕಾಯಿ ಚೀಪಿಕೊಂಡು
ಕುಂಟಾಬಿಲ್ಲೆ ಆಡಿಕೊಂಡು
ಬಣ್ಣದ ಬಟ್ಟೆ ತೊಟ್ಟುಕೊಂಡು
ನಲಿದಾಡಬೇಕಿದ್ದ ಮುಗುದ ಬಾಲೆಯಿಂದು 
ಭ್ರಮೆ ಕಳೆದು ಬೆತ್ತಲಾದಾಗ |
ಮಡಿಕೆ ಮಣ್ಣು ಕೈಯಲ್ಲ್ಹಿಡಿದು
ಕೊಳಕು ಬಟ್ಟೆ ಮೈಯಲ್ಲುಟ್ಟು
ಮಾಸದ ನಗುವ ಮುಖದಲ್ಲೊತ್ತು
ಕನಸ ನನಸಾಗಿಸುವಾಸೆ ಕಣ್ಣಲ್ಲ್ಹೊತ್ತು
ವಾಸ್ತವತೆಗೆ ತಲೆಬಾಗಿ ಕುಂತಿದೆ ಪುಟ್ಟಜೀವವಿಂದು||

-ಶುಭಶ್ರೀ ಭಟ್ಟ

ನಿದ್ದೆಯಲ್ಲಿ ಬಂದಿಳಿದ ನನ್ನವ






ನಿದ್ದೆಯಲ್ಲಿ ಬಂದಿಳಿದ ನನ್ನವ

ಮುದ್ದಿಲ್ಲದೇ ಬಿಳಿಚಿಕೊಂಡ ಕೆಂಗೆನ್ನೆ

ಬಂಧಿಯಾಗದೇ ಬಳಲುತಿಹ ಬಾಹು
ತುಂಟತನವಿಲ್ಲದೇ ಕಂಗೆಟ್ಟ ಕಂಗಳು
ಸಾಗರದಾಚೆಗಿಹ ಇನಿಯನ ನೆನೆದು
ವಿರಹ ತಾಪದಿ ಮುಲುಗುತ್ತಿದ್ದ ದಿನಗಳವು
ನಿದ್ದೆ ಬಾರದೇ ನಿಟ್ಟುಸಿರಿಯ್ಯೋ ರಾತ್ರಿಗಳವು
ಕಣ್ತುಂಬಿಕೊಂಡು ಕಣ್ಗಪ್ಪ ಚೆಲ್ಲುತ್ತಾ
ಅವನದೇ ಮಡಿಲೆಂದು ತಲೆಯಿಟ್ಟ ದಿಂಬು
ಅದಾಗಲೋ ಆವರಿಸಿಕೊಂಡ ನಿದ್ದೆ ಮಾಯೆ
ಮುದ್ದಾಗಿ ಸುತ್ತಿಕೊಂಡ ಸಿಹಿಗನಸಿನ ಛಾಯೆ
ದೂರದೂರಿಂದ ಬಂದಿಳಿದ ನನ್ನ ನಿದ್ದೆಕದ್ದವ
ಮುದ್ದಿಸುತ್ತಾ ಕಚಗುಳಿಯಿಕ್ಕಿ ಬಳಿಸರಿದ
ಕೂದಲಬಿಚ್ಚಿ ನೆತ್ತಿ ಮೂಸಿ,ಪ್ರೀತಿಯ ಕಂಪ ಸೂಸಿ
ಮುಗುಳುನಗೆಯೆ ಬಳುವಳಿಯನ್ನಿತ್ತು
ಬೇಗಬರುವೆನೆಂದು ಹೇಳಿ ಮಾಯವಾದ
ಅದೇ ಸಿಹಿಗನಸಿನ ನೆನೆಪಿನೊಡನೆ
ಸಿಹಿಮುತ್ತಿನ ಅಮಲಿನೊಡನೆ
ಎಂದಿಲ್ಲದ ಗಾಢನಿದ್ದೆಹೋದೆ
ಅಮ್ಮ ಸಿಕ್ಕ ಮಗುವಿನಂತೆ....

-ಶುಭಶ್ರೀ ಭಟ್ಟ

Wednesday 15 February 2017

ಮೊಗ್ಗಿನ ಮನಸು



ಕುಂಟಾಬಿಲ್ಲೆ ಆಡುತಿರಲು
ಬಿಂಕದಿಂದ ಕುಣಿಯುತಿರಲು
ಜಿಂಕೆಯಂತೆ ನಲಿಯುತಿರಲು
ಚಿಮ್ಮಿತಂದು ನೆತ್ತರು||
ಕಿಬ್ಬೊಟ್ಟೆ ಕಿರಿಚುತಿರಲು
ಸಂಧಿಗೊಂದು ಸೋರುತಿರಲು
ಕುಳಿತಿರುವ ಗೃಹಬಂಧನವಿರಲು
ಮನದೀ ಬರೀ ಕತ್ತಲು||
ದಿನವು ನಾಕು ಮುಗಿಯುತಿರಲು
ಗಂಧದೆಣ್ಣೆಯ ಅಭ್ಯಂಜನವಿರಲು
ಸೊಂಟಪಟ್ಟಿ ಕೆನ್ನೆಗೊಂಚಲು
ಮೂಡಿತಾಗ ನಗುವ ಕದಿರು||
ತಲೆತುಂಬಾ ಮೊಗ್ಗಿನ ಜಡೆಯಿರಲು
ಮೈತುಂಬಾ ರೇಶಿಮೆ ಸೆರಗಿರಲು
ಬಾಲೆಯಲ್ಲಿ ಯವ್ವನವುಕ್ಕಲು
ಕುಣಿಯಿತೊಂದು ಹೆಣ್ನವಿಲು||
ಬಾಲ್ಯ ಕಳೆದು ಪ್ರಾಯವುಕ್ಕಿ
ಆಟೋಟವಿಲ್ಲದೇ ಮನವು ಬಿಕ್ಕಿ
ಬಾಲೆಯೆದೆಯು ಕಕ್ಕಾಬಿಕ್ಕಿ
ಮುಗುದೆ ಮರಗುತ್ತಿದ್ದಳು||
ಚೆಂದವಾಗಿ ನೆರಿಗೆಯಿಕ್ಕಿ
ಒಡಲತುಂಬಾ ಬೆಳ್ಳಿ ಚುಕ್ಕಿ
ಜಡೆಯಲ್ಲಿ ಹೂವ ಸಿಕ್ಕಿ
ಕನಸಕಾಣ ತೊಡಗಿದ್ದಳು
ಅವಳಿಗರಿವಿರದೆ ದೊಡ್ಡವಳಾಗಿದ್ದಳು||
 ಶುಭಶ್ರೀ ಭಟ್ಟ

ಬಣ್ಣ ಮಾಸಿದ ಮೇಲೆ



ಆಸೆಯೆಂಬ ಚುಕ್ಕಿಯಿಟ್ಟು
ಬಯಕೆಯೆಂಬ ಕುಂಚಹಿಡಿದು

ಕನಸೆಂಬ ರಂಗುತುಂಬಿ
ಮದುವೆಗೆಂಡು ಮದರಂಗಿಯ ಹಾಕಿಕೊಂಡಿದ್ದೆ||
ಎದೆಯಲಿ ಕುಣಿವ ನವಿಲು ಗಂಡು
ಚಿಮ್ಮಿನೆಗೆವ ಜಿಂಕೆ ಹಿಂಡು
ಮುಗುಳುನಗುವ ಮೊಲದದಂಡು
ಎಲ್ಲ ನೋಡ್ತಾ ಅವನನ್ನೇ ನೆನೆಸುತ್ತಿದ್ದೆ||
ಸಿಂಗರಿಸಿಕೊಂಡ ಕಲ್ಯಾಣಂಟಪ
ರಂಗೇಸಿಕೊಂಡ ರಂಗಿನ ಕೈಕಾಲು
ಅಲಂಕರಿಸಿಕೊಂಡು ನಿಂತ ನಾನು
ತಾಳಿಕಟ್ಟಿಸಿಕೊಳ್ಳಲು ಬಂದು ಕುಳಿತಿದ್ದೆ||
ಹೊತ್ತು ಕಳೆದು ಕತ್ತಲಾಯ್ತು
ಬೆಳ್ಳಿಚಂದ್ರ ಬಾನೇರಾಯ್ತು
ಮದುವೆಯಂತು ಮುರಿದುಬಿತ್ತು
ನನ್ನವ ಬರುವನೆಂದು ಕಾಯುತಲಿದ್ದೆ||
ಮದುವಣಗಿತ್ತಿ ಪಟ್ಟ ತೊರೆದು
ತಾಳಿ ಮಾಸಿ ಮಸುಕಾಗಿ
ರೇಷ್ಮೇ ಸೀರೆ ಬಣ್ಣ ಸವೆದು
ಮದರಂಗಿ ರಂಗ ಕಳೆದು
ಮಾಸ ಮುಗಿದು ಪಕ್ಷ ದಾಟಿದ್ದರೂ
ಬರಲಿಲ್ಲ ಅವ ಹಿಂತಿರುಗಿ
ಆದರೂ ನಾನವನ ಎದುರುನೋಡುತ್ತಿದ್ದೆ||
ಶುಭಶ್ರೀ ಭಟ್ಟ

ಗೃಹಿಣಿಯ ಒಡಲಾಳ






ಒಣಸೋಗೆ ಮಡಿಲುಗರಿ ಹಾಕಿ
ಹಚ್ಚಿದ ಬಚ್ಚಲ ಒಲೆ
ಊದುಯೂದಿ ಹೊಗೆಯನ್ನೆಬ್ಬಿಸಿ
ನಿಗಿನಿಗಿಯಾಗಿಸಿದ ಹಂಡೆಯ ನೀರು
ಎಲ್ಲರಿಗೆ ಅಭ್ಯಂಜನ ಮಾಡಿಸಿ
ಎಮ್ಮೆ ಕೊಟ್ಟಿಗೆ ತೊಳೆದು
ಕುಡಿಯಲು ಕಲಗಚ್ಚಿತ್ತು
ಸ್ನಾನಕ್ಕೆಂದಿವಳು ಬರುವ ವೇಳೆ
ಬಚ್ಚಲ ಹಂಡೆಯಲ್ಲಿತ್ತು ತಣ್ಣೀರು
ಹರಿದವಳ ಕೆನ್ನೆತೋಸಿತ್ತು ಬೆಚ್ಚಗಿನ ಕಣ್ಣೀರು||೧||
ತರೇವಾರಿ ತರಕಾರಿ ಹೆಚ್ಚಿ
ಸಾಲಾಗಿ ಕಾಳಪಲ್ಲೆ ಬಿಡಿಸಿ
ಇಂಗು ತೆಂಗಿನ ಒಗ್ಗರಣೆ ಸಿಡಿಸಿ
ಬಾಳೆಯೆಲೆಯಿಟ್ಟು ಊಟ ಬಡಿಸಿ
ಎಲೆಯೆತ್ತಿ ನಾಯಿಗೆಸೆದು
ಗೋಮಯವಿಟ್ಟು ಎಂಜಲು ಸಾರಿಸಿ
ಇವಳೂಟಕೆ ಕೂರುವ ವೇಳೆ
ಬಿರುವಾದ ಬಿಳಿಯನ್ನ-ತಿಳಿಸಾರು ಮಿಕ್ಕಿ
ಮನ ಶಬ್ಧವಿಲ್ಲದೇ ಬಿಕ್ಕಿ
ತುತ್ತನುಂಡು ಅವಳೆದ್ದಳು ಮೆಲ್ಲಗೆ ಬಿಕ್ಕುವ ಕದವನ್ನಿಕ್ಕಿ ||೨||
ಒಳಜಗುಲಿಯ ಗೋಡೆಗೊರಗಿ
ಸುಣ್ಣವಚ್ಚಿ ಕವಳ ಮೆದ್ದು
ಮೆಲ್ಲನುಸುರುತ್ತಿದ್ದರವರು
ಮರುಮದುವೆಯ ಪಿಸುಮಾತ
ಬರಡುಭೂಮಿಗೆ ಬೀಜವಿಲ್ಲದೇ
ಫಸಲು ಚಿಗುರಲು ಜಾಗವೆಲ್ಲಿದೇ?
ನನ್ನ ಉತ್ತರವಿಲ್ಲದ ಪ್ರಶ್ನೆಗೆ
ಹಿತ್ತಲಬಾಗಿಲಲ್ಲಿ ಉದಿರಿತ್ತು ಕಂಬನಿ
ಹೆಬ್ಬಾಗಿಲಿನ ಸಂದಲ್ಲೆಲ್ಲಾ ಮೌನದನಿ
ಕಂಬದಲ್ಲಿನ ಗೊಂಬೆಯಲ್ಲಿ ಕನವರಿಕೆಯ ಕೊನೆಹನಿ||೩||
ಶುಭಶ್ರೀ ಭಟ್ಟ

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...