Wednesday 17 May 2017

ಅಹಲ್ಯೆಯೆಂಬ ಮತ್ತೊಬ್ಬ ಶಬರಿ

(ಅಮೇರಿಕದ ನ್ಯೂಜೆರ್ಸಿಯಲ್ಲಿನ ದ್ವೈಮಾಸಿಕ ಪತ್ರಿಕೆ 'ಬೃಂದಾವನ ವಾಣಿ'ಯಲ್ಲಿ ಪ್ರಕಟವಾದ ಕಥೆ)


 
 ಅದೊಂದು ಹಿಮಾಲಯದ ತೊಪ್ಪಲಿನ ಸುಂದರ ಮುಂಜಾವು.ಒಂದುಕಡೆ ಪರ್ವತದಂಚಿಂದ ಬಿಳಿಸೀರೆಯುಟ್ಟು, ಬೆಳ್ಳಿಗೆಜ್ಜೆ ತೊಟ್ಟು ನುಲಿಯುತ್ತಾ, ಕುಣಿಯುತ್ತಾ, ಬಿಳಿನವಿಲು ನರ್ತಿಸಿದಂತೆ ಝುಳು-ಝುಳು ಹರಿಯುತ್ತಿರುವ ಗಂಗೆ,ಇನ್ನೊಂದೆಡೆ ಗೌತಮರ ಆಶ್ರಮ,ಅದರ ಪಕ್ಕ ಅಪರೂಪದ ನಾಗಪುಷ್ಪ,ಬ್ರಹ್ಮಕಮಲ,ಸೌಗಂಧಿಕಾ ಪುಷ್ಪಗಳಂತಹ ಪುಷ್ಪರಾಶಿಯನ್ನು ಹೊತ್ತ ತೊಪ್ಪಲು,ಅದರಿಂದ ಹೊರಬರುತ್ತಿರೋ ಪರಿಮಳ,ಪತಿಯ ಪೂಜೆಗೆಂದು ಹೂವು ಕೊಯ್ಯಲು ಬಂದವಳು ಮೈಮರೆತು ನಿಂತಿದ್ದೆ,ಸುತ್ತಲಿನ ಸೊಬಗನ್ನು ಬೆರಗಿನಿಂದ ಆಸ್ವಾದಿಸುತ್ತಿದ್ದೆ. ಆಗಲೇ ಕಾಣಿಸಿಕೊಂಡನವ,ಮೋಡಗಳ ರಥದಲ್ಲು ಕುಳಿತು ಎಲ್ಲಿಗೋ ತೆರಳುತ್ತಿದ್ದ. ಈಗ ನಮ್ಮ ಆಶ್ರಮದತ್ತ ಕಣ್ಣು ಹಾಯಿಸಲೂ ಭಯ ಅವನಿಗೆ,ನನಗೂ ಅವನ ಕಂಡಾಗಲೆಲ್ಲಾ ಏನೋ ಹೇಳಲಾರದ ಕಸಿವಿಸಿ. ಲಗುಬಗೆಯಿಂದ ಹೂವು ಕೊಯ್ದು,ಪತಿಯ ಧ್ಯಾನಕ್ಕೆ-ಪೂಜೆಗೆ ಅಣಿಮಾಡಿ,ನಾನೂ ಧ್ಯಾನಕ್ಕೆ ಕುಳಿತರೆ ಮನಸ್ಸು ಸ್ಥಿಮಿತ ತಪ್ಪಿತ್ತು. ಮಾತು ಕೇಳದೇ ಹಠ ಮಾಡುವ ಮಗುವಿನಂತೆ ನೆನಪು ಹಿಂದಕ್ಕೋಡಿತು...
             *ಜನನ-ಬಾಲ್ಯ*
  ಸೃಷ್ಟಿಕರ್ತನಾದ ಬ್ರಹ್ಮನಿಗೆ ಸದಾ ಹೊಸತೊಂದು ಬಗೆಯ ಸೃಷ್ಟಿ ಪ್ರಯೋಗ ಮಾಡುವುದರಲ್ಲೇ ಆಸಕ್ತಿ. ಹೀಗಿರಲಿ ಒಂದು ದಿನ ಅವರಿಗೆ ಜಗತ್ತಿನಲ್ಲೇ ಅತೀ ಸುಂದರಳಾದ ಹೆಣ್ಣನ್ನು ಸೃಷ್ಟಿಮಾಡಬೇಕೆಂದು ಬಯಕೆಯುಂಟಾಯ್ತಂತೆ.ಜಗತ್ತಿನ ಸುಂದರ ಸ್ತ್ರೀಯರ ಸೌಂದರ್ಯ-ಲಾವಣ್ಯಗಳ ಮಿಶ್ರಣದಂತೆ ಇರುವ ಒಂದು ಮಗುವನ್ನು ಸೃಷ್ಟಿಸಿ, ಲೋಪವಿಲ್ಲದಿರುವ ಮಾಸದ ಚೆಲುವು ಎಂಬರ್ಥ ಬರುವ 'ಅಹಲ್ಯಾ' ಎಂಬ ಹೆಸರಿಟ್ಟರಂತೆ. ಹೀಗೇ ಸೃಷ್ಟಿಸಿದ ತಮ್ಮ ಮಾನಸಪುತ್ರಿಯನ್ನು ಬೆಳೆಸುವುದು ಹೇಗೆ? ಅದಕ್ಕೆ ಯೋಗ್ಯರಾದವರು ಯಾರು ಎಂಬ ಯೋಚನೆ ಕಾಡಿದೊಡನೆ,ನನ್ನ ಪಿತಾಮಹನಿಗೆ ನೆನಪಾಗಿದ್ದೇ,ವೇದಶಾಸ್ತ್ರಪಾರಂಗತರೂ, ಸಕಲಗುಣ ಸಂಪನ್ನರೂ ಆದ ಗೌತಮ ಋಷಿಗಳು. ತಕ್ಷಣ ಗೌತಮರನ್ನು ಕರೆಯಿಸಿ ಅವರ ಕೈಗೆ ನನ್ನನ್ನು ಕೊಟ್ಟು ಬೆಳೆಸಲು ತಿಳಿಸಿ,ನಾನು ಸುಂದರ ಯುವತಿಯಾಗಿ ಬೆಳೆದು ನಿಂತಾಗ ತಮ್ಮಲ್ಲಿ ಮತ್ತೆ ಕರೆತರುವಂತೆ ತಿಳಿಸಿ ಕಳುಹಿಸಿಕೊಟ್ಟರಂತೆ. ಇತ್ತ ವಿಧೇಯರಾದ ಗೌತಮರು ನನ್ನನ್ನು ಮಗುವಂತೆ ಮುಚ್ಚಟೆಮಾಡಿ,ವೇದಶಾಸ್ತ್ರದ ಅಧ್ಯಯನದ ಜೊತೆಗೆ ಸಂಸ್ಕಾರವಂತಳಾಗಿ ಬೆಳೆಸುತ್ತಿದ್ದರು.ಹುಟ್ಟಿದಾಗಲಿನಿಂದ ನನ್ನನ್ನು ಸಾಕಿ ಸಲಹುತ್ತಿರೋ ಗೌತಮರನ್ನು ನಾನು ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದೆ. ದಿನದಿಂದ ದಿನಕ್ಕೆ ನನ್ನ ಸೌಂದರ್ಯ ವೃದ್ಧಿಸುತ್ತಿತ್ತು,ಹುಣ್ಣಿಮೆಯ ಚಂದ್ರನೂ ನಾಚುವಂತ ರೂಪವತಿಯೆಂದು ಆಶ್ರಮದ ಗೆಳತಿಯರು ಹೊಗಳುತ್ತಿದ್ದರು. ಅವರ ಹೊಗಳುವಿಕೆಗೆ ಹುಸಿಮುನಿಸು ತೋರಿದಂತಾಡಿದರೂ ಮನ ಮತ್ತೆ-ಮತ್ತೆ ಸೌಂದರ್ಯದ ವರ್ಣನೆ ಕೇಳಬಯಸುತ್ತಿತ್ತು. ಒಂದು ದಿನ ಗೌತಮರು ಕರೆದು ನನ್ನನ್ನು ನನ್ನ ಪಿತಾಮಹ ಬ್ರಹ್ಮದೇವರಲ್ಲಿಗೆ ಕರೆದೊಯ್ಯುವುದಾಗಿ ತಿಳಿಸಿದರು. ಹೊಸ ಜಾಗ, ಹೊಸ ಜನ, ಬೇರೆಯದ್ದೇ ಜಗತ್ತು,ಪಿತಾಮಹ,ದೇವಲೋಕ ಎಲ್ಲವನ್ನೂ ನೋಡಿ ಸವಿಯುವ ಅವಕಾಶವೆಂದು ತಿಳಿದು ಸಡಗರದಿಂದ ತಯಾರಿಗೆ ಬಿದ್ದೆ. ಹಗಲೂ-ಇರುಳೂ ನೂರಾರು ಬಣ್ಣ ಬಣ್ಣದ ಕನಸುಗಳು.ಆಗ ತಾನೇ ಯೌವ್ವನವೂ ತೆಕ್ಕೆಮುರಿದು ಬಿದ್ದಿತ್ತು ..
      *ಯೌವ್ವನ-ಮದುವೆ*
   ಹದಿಹರೆಯದ ಹೊಸ್ತಿಲಲ್ಲಿ ಮೈದುಂಬಿಕೊಂಡು,ಕಣ್ತುಂಬುವಂತೆ ಎದುರು ನಿಂತ ತಮ್ಮ ಮಾನಸ ಪುತ್ರಿಯನ್ನು ನೋಡಿ ಪಿತಾಮಹ ಬ್ರಹ್ಮದೇವನಿಗೆ ಕ್ಷಣಕಾಲ ಮಾತೇ ಹೊರಡಲಿಲ್ಲ.ಮರುಕ್ಷಣ ನನ್ನ ತಲೆ ಅವರ ಪಾದದಡಿಯಿತ್ತು,ಅವರು ನನ್ನ ತಲೆ ಸವರುತ್ತಿದ್ದರು. ತನ್ನ ಮಾನಸ ಪುತ್ರಿ ಅಲೌಕಿಕ ಸುಂದರಿಯಾದರೂ , ಯಾವುದೇ ಪ್ರಲೋಭೆಗೊಳಗಾಗದೆ,ವಿಧೇಯನಾಗಿ ತನ್ನೆಡೆಗೆ ಅವಳನ್ನು ಕರೆತಂದ ಗೌತಮರ ಮೇಲೆ ಪಿತಾಮಹರಿಗೆ ವಿಶೇಷ ಅಭಿಮಾನ, ಅಕ್ಕರಾಸ್ಥೆಗಳುಂಟಾಗಿದ್ದವು.ನನ್ನ ಸೌಂದರ್ಯಕ್ಕೆ ಮರುಳಾಗಿ ನನ್ನ ವಿವಾಹವಾಗಲು ಪೈಪೋಟಿಗಿಳಿದಾಗ, ಪಿತಾಮಹರು ಒಂದು ಉಪಾಯ ಮಾಡಿದರು. ಸುರಾಸುರರಲ್ಲಿ ಯಾರು ಮೊದಲು ಜಗವನ್ನೆಲ್ಲಾ ಒಂದು ಪ್ರದಕ್ಷಿಣೆಗೈದು ಯಾರು ಮೊದಲು ತಲಪುವರೋ,ಅವರಿಗೆ ನನ್ನನ್ನು ಕೊಟ್ಟು ವಿವಾಹ ಮಾಡುತ್ತೆನೆ ಎಂದು ಘೋಷಿಸುವುದೇ ತಡ,ಎಲ್ಲರೂ ತಮಗೆ ತೋಚಿದ ಮಾರ್ಗದಲ್ಲಿ ಶರತ್ತನ್ನು ಮುಗಿಸಲು ಮುಗಿಬಿದ್ದರು,ಅದರಲ್ಲಿ ಇಂದ್ರ ಮೊದಲಿಗಿದ್ದ. ಸ್ತ್ರೀ ಲಂಪಟನಾದ ಇಂದ್ರನಿಗೆ ನನ್ನನ್ನು ವಿವಾಹ ಮಾಡಿಕೊಡುವುದು ಪಿತಾಮಹರಿಗೂ,ನನ್ನ ಸಹೋದರ ನಾರದರಿಗೂ ಒಂದಿನೀತೂ ಇಷ್ಟವಿರಲಿಲ್ಲ.
   ಆದರೆ ಯೌವ್ವನದ ಹೊಸ್ತಿಲಲ್ಲಿ ಕಾಲಿಟ್ಟ ನನಗೆ ಇದೆಲ್ಲದೂ ಆಕರ್ಷಕವಾಗಿತ್ತು.ಥಳ-ಥಳಿಸುವ ದೇವಲೋಕ,ಅಲ್ಲಿನ ವೈಭವದಲ್ಲಿ ಮೆರೆಯುವ ಜನರೆಲ್ಲಾ, ನನ್ನನ್ನು ವಿವಾಹವಾಗಲು ಬಯಸುತ್ತಿರುವುದು ವಯೋಸಹಜವಾದ ಆನಂದವಾಗಿತ್ತು.ಮನವು ನವಿಲಂತೆ ಕುಣಿಯುತ್ತಿತ್ತು ರೆಕ್ಕೆಬಿಚ್ಚಿ..
 ಇತ್ತ ನನ್ನನ್ನು ಪಿತಾಮಹನಿಗೊಪ್ಪಿಸಿ ತಮ್ಮ ಕರ್ತವ್ಯ ಮುಗಿಸಿದ ಗೌತಮರು ಭೂಲೋಕದತ್ತ ತೆರಳುವಾಗ ದಾರಿಯಲ್ಲಿ ಕಾಮಧೇನುವಿಗೆ ಪ್ರಸವ ವೇದನೆ ಶುರುವಾಗಿ,ಪುಟ್ಟ ಕರುವಿಗೆ ಜನ್ಮನೀಡಿತಂತೆ.ರಕ್ತದ ಮುದ್ದೆಯಲ್ಲಿ ಬಿದ್ದುಕೊಂಡ ಆ ಎಳೆಗರುವನ್ನು ಶುದ್ಧಗೊಳಿಸಿ,ತಾಯಿ ಕಾಮಧೇನುವಿಗೆ ಯಥೇಚ್ಛ ಹುಲ್ಲು ನೀಡಿ, ಅದಕ್ಕೊಂದು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ,ತಮ್ಮ ಆಶ್ರಮದತ್ತ ಮುನ್ನಡೆಯುತ್ತಿದ್ದರಂತೆ.ಇದನ್ನೆಲ್ಲಾ ತಮ್ಮ ತಪಃಶಕ್ತಿಯಿಂದ ನೋಡಿದ ಪಿತಾಮಹರು ಗೌತಮರನ್ನು ಮತ್ತೆ ತಮ್ಮೆಡೆಗೆ ಕರೆಸಿಕೊಂಡರು.ಕಾಮಧೇನುವಿನ ಪ್ರದಕ್ಷಿಣೆಯೂ ಒಂದೇ,ಜಗತ್ತಿನ ಪ್ರದಕ್ಷಿಣೆಯೂ ಒಂದೇ,ನಿಮ್ಮ ಬಿಟ್ಟರೇ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವರಿಲ್ಲವೆಂದು ಹೊಗಳುತ್ತಾ,ಗೌತಮರಿಗೆ ನನ್ನ ಧಾರೆಯೆರೆದು ಕೊಟ್ಟರು,ನನ್ನ ಇಚ್ಛೆಯನ್ನು ಕೇಳುವ ಮನಸ್ಸೂ ಮಾಡದೇ..
  ಗೌತಮರನ್ನು ತಂದೆಯ ಸ್ಥಾನದಲ್ಲಿಟ್ಟು ಗೌರವದಿಂದಿದ್ದ ನನಗೆ ಅವರನ್ನು ಪತಿಯೆಂದು ಒಪ್ಪಲು ಸಾಧ್ಯವಾಗಲೇ ಇಲ್ಲ.ಬ್ರಹ್ಮ ಹೇಳಿದ್ದಕ್ಕೆ ವಿಧೇಯನಾಗಿ ಇವರು ನನ್ನನ್ನು ಕಟ್ಟಿಕೊಂಡರು.ತನ್ನದೇ ವಯಸ್ಸಿನವನಿಗೆ ತನ್ನ ಮಗಳನ್ನು ಧಾರೆಯೆರೆದು ಕೊಟ್ಟರೆ ಅವಳಿಗೆನನಿಸಬಹುದು?ಅವಳ ಇಷ್ಟಾನಿಷ್ಟಗಳೇನು ಎಂದು ತಿಳಿಯಲೂ ಪ್ರಯತ್ನಿಸಲಿಲ್ಲ.ಸುಂದರವಾಗಿ ನನ್ನ ಹುಟ್ಟಿಸಿದ್ದೊಂದು ಬಿಟ್ಟರೇ,ಇನ್ನೇನೂ ಮಾಡದ ಪಿತಾಮಹನ ಮೇಲಿದ್ದ ಗೌರವ-ಪ್ರೀತಿ ಕಡಿಮೆಯಾಗಿತ್ತು. ಅಷ್ಟರಲ್ಲಾಗಲೇ ಜಗತ್ತನ್ನು ಪ್ರದಕ್ಷಿಣೆ ಮಾಡಿಬಂದ ಸುರಾಸುರರೆಲ್ಲರೂ,ನಮ್ಮ ವಿವಾಹ ನೋಡಿ ದಂಗಾಗಿದ್ದರು.ಎಲ್ಲರಿಗಿಂತ ಮೊದಲು ಬಂದ ಇಂದ್ರನಂತೂ ಕುದಿಯತೊಡಗಿದ್ದ.ಆಡುವಂತಿಲ್ಲ,ನುಂಗಿವಂತಿಲ್ಲ,ಸುಮ್ಮನೇ ಧುಮ್ಮಿಕ್ಕುತ್ತಾ ಹೋದೆ.ಅವನು ಹೋದೆಡೆ ಕ್ಷಣ ನೋಡಿದ ದೀರ್ಘ ನಿಟ್ಟುಸಿರೊಂದು ಹೊರಬಂತು. ಅಲ್ಲಿಗೆ ಎಲ್ಲಾ ಭಾವನೆಗಳಿಗೂ ಹೊರಗಟ್ಟಲ್ಪಟ್ಟವು. ನಾನು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದೆ
       *ಪ್ರೀತಿ-ಪ್ರಣಯ-ಶಾಪಗ್ರಹಣ*
  ಮದುವೆಯಾಗಿ ವರುಷವೇ ಕಳೆಯತ್ತಾ ಬಂದರೂ ಗೌತಮರಿಗೆ ನನ್ನೆಡೆಗೆ ಅದೇ ನಿರ್ಲಿಪ್ತಭಾವ.ಪತ್ನಿಯ ದರ್ಜೆಯೊಂದು ಸಿಕ್ಕಿದ್ದು ಬಿಟ್ಟರೆ ಮತ್ಯಾವ ಬದಲಾವಣೆಯೂ ಇಲ್ಲ.ನನಗೂ ಅಷ್ಟೇ ಅವರನ್ನು ತಂದೆಯ ಸ್ಥಾನದಿಂದ ಕೆಳಗಿಳಿಸಿ,ಪತಿಯೆಂಬ ಸಿಂಹಾಸನವನ್ನೇರಿಸಿ ಕುಳಿತಿದ್ದು ಬಿಟ್ಟರೇ ಮತ್ಯಾವ ವಿಶೇಷ ಪ್ರೇಮವೆನೂ ಉಕ್ಕಿ ಬರಲಿಲ್ಲ. ಆದರೆ ಅವರು ಹಾಕಿಕೊಟ್ಟ ಸಂಸ್ಕಾರದಲ್ಲಿ ನಡೆಯುತ್ತಿದ್ದ ನನಗೆ ಪತಿಯೇ ಪರದೈವವಾಗಿದ್ದರು.ಬೆಳಿಗ್ಗೆ ಕೋಳಿ ಕೂಗುವ ವೇಳೆ ನದಿಯತ್ತ ತೆರಳಿ,ಪ್ರಾತ:ಕರ್ಮಾದಿಗಳನ್ನು ಮುಗಿಸಿ ಶುದ್ಧರಾಗಿ ಆಶ್ರಮದತ್ತ ಬಂದು ತಮ್ಮ ಎಂದಿನ ಧ್ಯಾನ-ಪೂಜೆಯನ್ನು ಮುಗಿಸುವ ವೇಳೆಗೆ,ನಾನೂ ಸ್ನಾನಾದಿಗಳನ್ನು ಮುಗಿಸಿ ಫಲಹಾರಾದಿಗಳನ್ನು ಉಪಹಾರಕ್ಕೆ ತಂದಿಡುತ್ತಿದ್ದೆ.
  ಅದೊಂದು ಕರಾಳದಿನವೆನ್ನಲೋ?ಕಣ್ತೆರೆಸಿದ ದಿನವೆನ್ನಲೋ ತಿಳಿಯದು. ಗೌತಮರು ಎಂದಿನಂತೆ ಕೋಳಿ ಕೂಗಿದೊಡನೆ ಎದ್ದು ನದಿ ತೀರಕ್ಕೆ ತೆರಳಿದ ಕೆಲ ನಿಮಿಷಕ್ಕೆ ಹಿಂತಿರುಗಿ ಬಂದರು.ಯಾವತ್ತೂ ಇಲ್ಲದ ಪ್ರೀತಿ-ಸಲುಗೆ ತೋರಿಸುತ್ತಾ ಬಳಿಸರಿದರು,ಸೆರಗು ಕೆಳಗೆ ಜಾರಿತ್ತು..ನನ್ನ ಸೌಂದರ್ಯವನ್ನು ಬಗೆಬಗೆಯಾಗಿ ವರ್ಣಿಸುತ್ತಾ ಬಿಗಿದಪ್ಪಿದರು,ಮೈಯೆಲ್ಲಾ ನವಿರೆದ್ದಿತ್ತು..ತಪೋಶಕ್ತಿಯಿಂದ ಬಳಿಬಂದಂದ್ದು ಇಂದ್ರನೆಂದು ತಿಳಿದು,ಅವನಿಗೆ ಬುದ್ಧಿ ಹೇಳಿ ಸಾಗಹಾಕಲು ಯತ್ನಿಸಿದಷ್ಟೂ ಸಮೀಪಿಸುತ್ತಿದ್ದ. ನನ್ನ ಚೆಲುವನ್ನು ಹೊಗಳುತ್ತಾ ಅಟ್ಟಕ್ಕೇರಿಸಿ,ಮಾತಲ್ಲೇ ಮರಳು ಮಾಡಿ,ಅವನ ಮೋಡಿಗೆ ಮೈಮರೆತು ಎಚ್ಚೆತ್ತುಕೊಳ್ಳುವಷ್ಟರಲ್ಲಿ  ನನ್ನನ್ನು ಸೂರೆಹೊಡೆದಿದ್ದ.ವಿವಾಹವಂತೂ ಆಗಲಿಲ್ಲ,ಕೊನೆಗೊಂದು ದಿನ ಅಹಲ್ಯೆಯನ್ನು ಸೌಂದರ್ಯವನ್ನು ಆಸ್ವಾದಿಸುವುದೇ ಎಂದು ಶಪಥ ಮಾಡಿ ಕುತಂತ್ರ ಮಾಡಿದ್ದನಂತೆ. ಗೌತಮರಿಗೆ ತಂತ್ರ ಮಾಡಿ ಕೇವಲ ಸೌಂದರ್ಯಕ್ಕಾಗಿ ನನ್ನನ್ನು ಅನುಭವಿಸಿದೆನೆಂದು ಇಂದ್ರ ಥರಥರನೆ ನಡುಗತೊಡಗಿದ್ದ.ಅವನ ಹೊಗಳಿಕೆಗೆ ಮರುಳಾಗಿ ಪತಿಗೆ ದ್ರೋಹ ಬರೆದೆನಲ್ಲಾ ಎಂದೂ ನಾನೂ ಕಂಪಿಸುತ್ತಿದ್ದೆ. ಅವನನ್ನೂ ಹೊರನೂಕುವಷ್ಟರಲ್ಲಿ ಮರಳಿ ಬಂದ ಗೌತಮರು,ಕ್ಷಣಮಾತ್ರದೀ ನಡೆದಿದ್ದೆಲ್ಲವ ಗ್ರಹಿಸಿದರು.
 ಕೋಪೊದ್ರಿಕ್ತರಾದ ಗೌತಮರು, ಸ್ತ್ರೀಯಲ್ಲಿ ಅಪಾರ ಆಸಕ್ತಿ ಹೊಂದಿರುವ ಇಂದ್ರನಿಗೆ ಸಹಸ್ರಯೋನಿಯಾಗುವಂತೆ ಶಪಿಸಿದರು.ನಾನು ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದೆ, ಬೇಡಿಕೊಂಡೆ,ಆದರೂ ಅವರ ಕೋಪ ಕಡಿಮೆಯಾಗಲಿಲ್ಲ.ನನ್ನ ಮುಖವನ್ನೂ ನೋಡದೆ,ನೆರಳೂ ತಾಕದಂತೆ ನಿಂತು 'ನಿನಗೆ ನಿನ್ನ ಸೌಂದರ್ಯದ ಮೇಲೆ ಅಪಾರ ಅಭಿಮಾನವಲ್ಲವೇ?ಇವತ್ತಿನಿಂದ ನಿನ್ನ ಸೌಂದರ್ಯ ಯಾರ ಕಣ್ಣಿಗೂ ಕಾಣದಿರಲಿ,ಕಲ್ಲಾಗು.. ಸಾಕ್ಷಾತ್ ವಿಷ್ಣು ಈ ಆಶ್ರಮಕ್ಕೆ ಕಾಲಿಡುವ ತನಕ ನಿನಗೆ ಈ ಶಾಪದಿಂದ ಮುಕ್ತಿಯಿಲ್ಲ.' ಎಂದು ಶಾಪವನ್ನಿತ್ತು ಹಿಮಾಲಯದತ್ತ ತೆರಳಿದರು.ನಾನು ಕಲ್ಲಾದೆ,ಜೊತೆಗೆ ನನ್ನ ಮನವೂ..
 ಇಷ್ಟು ದಿನ ಆಶ್ರಮದಲ್ಲಿ ನನಗೆ ಗೌರವ ಕೊಡುತ್ತಿದ್ದವರೆಲ್ಲಾ,ನನ್ನನ್ನಿಂದು ತುಚ್ಛವಾಗಿ ಕಾಣತೊಡಗಿದ್ದರು.ಈ ಶಿಲೆಕಲ್ಲನ್ನು ನೋಡಿಕೊಂಡು ಹೋಗುವ ನೆಪ ಮಾಡಿ, ನಡೆದಿದ್ದೆಲ್ಲವುದಕ್ಕೆ ಉಪ್ಪು-ಖಾರ ಸೇರಿಸಿ ಹೇಳುತ್ತಾ ಢಂಗೂರ ಸಾರುತ್ತಿದ್ದರು.ಇತ್ತ ಜನರಾಡುವ ಮಾತಿಗೆ ಕಿವಿಯಾಗಿ ಕಿವುಡಾಗಿ ಶಿಲೆಯಲ್ಲೊಂದು ಶಿಲೆಯಾಗಿದ್ದೆ.
         *ರಾಮಾಗಮನ-ಶಾಪಮುಕ್ತಿ*
  ಇದೆಲ್ಲಾ ಕಳೆದು ತುಂಬಾ ವರುಷಗಳೇ ಕಳೆಯಿತೋ ನಾ ತಿಳಿಯೆ.ಹಸಿವು,ಬಾಯರಿಕೆ,ತಿಂಗಳ ನೋವೆಲ್ಲಾ ಅನುಭವಿಸಿ ನರಳಿ ನರಳಿ ಕೊರಡಾಗಿದ್ದೆ. ಮೊದ ಮೊದಲು ನನ್ನ ಮನದಿಚ್ಛೆಯನ್ನೂ ಅರಿಯದೇ ಮದುವೆಯಾದಾಗಲಿನಿಂದ ಯಾವ ಸುಖವನ್ನೂ ನೀಡದೆ,ನಿಗ್ರಹಿಯಾಗಿದ್ದ ಪತಿಗೆ ತಕ್ಕ ಶಾಸ್ತಿ ಮಾಡಿದ್ದೆನೆಂದು ಬೀಗುತ್ತಿದ್ದೆ. ಸೌಂದರ್ಯವನ್ನು ಮಕರಂದ ಹೀರಿದ ದುಂಬಿಯಂತೆ ಹೀರಿ,ನಂತರ ಪರಿಸ್ಥಿತಿಯನ್ನು ಎದುರಿಸುವ ತಾಕತ್ತಿಲ್ಲದೇ ಥರಗುಟ್ಟುತ್ತಿದ್ದ ಹೆದರುಪುಕ್ಕಲ ಇಂದ್ರನ ಮೇಲೆ ಅಸಹ್ಯ ಹುಟ್ಟಿತ್ತು. ನನ್ನ ನೆರಳು ಬಿದ್ದರೂ ಅಪವಿತ್ರನಾಗುವೆನೆಂದು ದೂರದಿ ಬೆನ್ನಿ ತಿರುಗಿಸಿ ನಿಂತು ಶಾಪ ಹಾಕಿದ ಗೌತಮರ ಮೇಲೆ ಕೋಪಗೊಂಡೆ. ಕೊನೆಕೊನೆಗೆ ಕ್ಷಣಿಕ ಸುಖಕ್ಕಾಗಿ ಮೈಮರೆತು,ಕೈಹಿಡಿದವನೂ ಎಂತವನೇ ಆದರೂ ಅನುಸರಿಸಿಕೊಂಡು ಹೋಗಬೇಕಾದ ಪತ್ನಿ ಧರ್ಮ ಮರೆತದ್ದಕ್ಕೆ ತಳಮಳಿಸುತ್ತಿದ್ದೆ.ಕಾಲಕ್ರಮೇಣ ಮನವೊಂದು ಸ್ಥಿಮಿತಕ್ಕೆ ಬಂದ ಮೇಲೆ ನನ್ನ ತಪ್ಪೆನೆಂದು ಅರಿವಾಗಿತ್ತು. ಪಶ್ಚಾತ್ತಾಪದ ಬೇಗೆಯಲ್ಲಿ ಕುದಿಯತೊಡಗಿದ್ದೆ,ರಾಮನಿಗಾಗಿ ಕಾಯತೊಡಗಿದ್ದೆ. 
  ಅದೊಂದು ಸುದಿನ,ನನ್ನ ಜೀವನದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ರಾಮನವತಾರದಲ್ಲಿದ್ದ ವಿಷ್ಣುವಿನ ಆಗಮನವಾಯ್ತು ನಮ್ಮ ಆಶ್ರಮದೊಳು. ಅವನ ಸ್ಪರ್ಶಮಾತ್ರದಿಂದ,ನಾನು ಶಾಪಮುಕ್ತಳಾದೆ. ಶಿಲೆಯಿಂದೆದ್ದು ಬಂದೆ ಪರಿಶುದ್ಧಳಾಗಿ, ಪಶ್ಚಾತ್ತಾಪದ ಬೆಂಕಿಯ ಪುಟಕ್ಕಿಟ್ಟ ಚಿನ್ನದಂತೆ. ಅನುದಿನವೂ, ಅನುಕ್ಷಣವೂ ನೊಂದಿದ್ದವಳಿಗೆ ಗೌತಮರ ಮಾತೆಲ್ಲವೂ ನೆನಪಿತ್ತು. ಯಾವಾಗ ಶಾಪಮುಕ್ತಳಾಗಿ ಗೌತಮರ ಸೇರುವೆನೋ?ಯಾವಾಗ ಅವರಲ್ಲಿ ಕ್ಷಮೆಯಾಚಿಸುವೆನೋ? ವಿಷ್ಣುವಿನ ಅವತಾರಿ ಯಾವಗ ಬರುವನೋ?' ಎಂದೆಲ್ಲಾ ಪರಿತಪಿಸುತ್ತಿರುವ ನನಗೆ ಶಾಪದಿಂದ ಮುಕ್ತಿ ಸಿಕ್ಕಿತ್ತು. ಅದಾದ ಮೇಲೆ ಹಿಮಾಲಯದಲ್ಲಿ ಗೌತಮರನ್ನು ಸೇರಿ ಮರು ಜೀವನ ಶುರುಮಾಡಿದ್ದೆ.ಈಗ ನಾನು ಪತೀತೆಯಾಗದೇ ಪತಿವೃತೆಯಾಗಿದ್ದೆ...
  'ಅಹಲ್ಯಾ' ಎಂಬ ಗೌತಮರ ಕೂಗು ನೆನಪಿನಾಳದಿಂದ ಅವಳನ್ನೆಬ್ಬಿಸಿ ಒಳಗೆ ಕರೆದೊಯ್ದಿತು..
-ಶುಭಶ್ರೀ ಭಟ್ಟ

Tuesday 16 May 2017

ಹೆಣಕಂಡ ಮಳೆ

(ಕಹಳೆ ಬಳಗ ಆಯೋಜಿಸಿದ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕಥೆ)



 ರೇವತಿ ಎಂದಿನಂತೆ ತನ್ನ ಶಾಲೆಯ ಪಾಠ ಮುಗಿಸಿ ಮನೆಗೆ ಬರುವಷ್ಟರಲ್ಲಿ ಮನೆಯ ಮನೆಯ ಮುಂದೆ ವಾಹನಗಳು,ತುಂಬಿಹೋದ ಚಪ್ಪಲಿ ಸಾಲು,ಕಂಡರಿಯದ ನೆಂಟರು,ರೇವಂತನ ಕಡೆಯ ಬಳಗದವರು ಮನೆಯ ಹೊರಗೂ-ಒಳಗೂ ತುಂಬಿ ಬಿಟ್ಟಿದ್ದರು.ಎಲ್ಲರೂ ನನ್ನೆಡೆಗೆ ಅನುಕಂಪದ ದೃಷ್ಟಿಯನ್ನು ಹರಿಸತೊಡಗಿದಾಗ ಮನದಲ್ಲೆಲ್ಲಾ ಕಂಪನ.ಮಗಳು ಮತ್ತೆ ಅತ್ತೆಯ ನೆನಪಾಗಿ ಕಾಲು ಮುಂದೆ ಹೆಜ್ಜೆಯಿಡದೇ ಮುಷ್ಕರ ಹೂಡಿದ್ದವು.ಮನ ಶಂಕೆಯ ಬಲೆಗೆ ಸಿಕ್ಕಿಬಿದ್ದೊಡನೆ,ಬಲ ಹುಬ್ಬು ಅದುರತೊಡಗಿತ್ತು.ಶಕುನವನ್ನೆಲ್ಲಾ ನಂಬದ ನಾನು ಅಳುಕುತ್ತಲೇ ಒಳಗಡಿಯಿಟ್ಟೆ. ಮೂಲೆಯಲ್ಲಿ ಬಿಕ್ಕಿತ್ತಿದ್ದ ಅತ್ತೆಯ ಮಡಿಲಲ್ಲಿ ಕುಳಿತಿದ್ದ ಮಗಳು ಓಡಿ ಬಂದು ತೆಕ್ಕೆಬಿದ್ದಾಗ ಮನಸ್ಯಾಕೋ ನಿರಾಳವಾದಂತಾಗಿ ಮೆಲ್ಲನೆ ಅತ್ತೆಯೆಡೆಗೆ ತಿರುಗಿದೆ.ಅಮ್ಮನಂತೇ ನಮ್ಮನ್ನು ನೋಡಿಕೊಳ್ಳುತ್ತಿದ್ದ ಅತ್ತೆಯು ರೋಧಿಸುತ್ತಲೇ ಮಂಚದೆಡೆಗೆ ಕೈ ತೋರಿಸಿದರು.ನಡುಗುತ್ತಲೇ ಅತ್ತ ಕಣ್ಣು ಹಾಯಿಸಿದರೇ, ಮಂಚದ ಕೆಳಗಿನ ಚಾಪೆಯಲ್ಲಿ ಚಿರನಿದ್ರೆಗೆ ಜಾರಿ ಮಲಗಿದ್ದ ನನ್ನ ರೇವಂತ್.ವರುಷದ ಹಿಂದೆ ಅಮ್ಮ-ಹೆಂಡತಿ-ಮಗಳು ಎಲ್ಲಾ ಸಂಬಂಧ ಕಡಿದು ಹೊರಟವನಿಂದು ಹೆಣವಾಗಿ ಬಂದು ಮಲಗಿದ್ದ.ಕಣ್ಣು ಕತ್ತಲೆಯಿಟ್ಟು ಬೀಳುವಂತಾದಾಗ ಸಾವರಿಸಿಕೊಂಡೆ.ಬಿಕ್ಕುಕ್ಕಿ ಬಂದು ಗಂಟಲಲ್ಲಿ ಅಡಗಿ ಕುಳಿತಿತ್ತು ಹೊರಬರಲಾರದೆ.ನಾನೂ ಅಳುತ್ತಾ ಕುಳಿತರೆ,ಅತ್ತೆಯೂ-ಮಗಳೂ ಕಂಗಾಲಾಗುತ್ತಾರೆಂದು ದುಃಖವ ಬದಿಗೊತ್ತಿ ಮುಂದಿನ ಕಾರ್ಯದ ಬಗ್ಗೆ ಗಮನ ಹರಿಸಿದೆ.
ಮೊಳಕಾಲಷ್ಟಿದ್ದ ಮಗಳಿಂದಲೇ ಅವರಪ್ಪನ ಚಿತೆಗೆ ಅಗ್ನಿ ಸ್ಪರ್ಶ ಮಾಡಿಸಿ ಹಿಂತಿರುಗಿ ಬರುವಾಗ ಧಾರಾಕಾರ ಮಳೆ,ಶವವಾಗಿ ಮಲಗಿದ ರೇವಂತ್ ಅಳುತ್ತಿದ್ದನಾ ಗೊತ್ತಿಲ್ಲ.ಮತ್ತೆ ಮಳೆ ಕಡಿಮೆಯಾದಾಗ,ಮರುಚಿತೆಯ ಕಾರ್ಯವನ್ನೂ ಮುಗಿಸಿ ಮನೆಗೆ ಬಂದರೆ ಮನೆಯಲ್ಲೆನೋ ಗವ್ವೆನ್ನುವ ಭೀಕರ ಕಗ್ಗತ್ತಲು.ಕಾರ್ಯ ಮುಗಿಸಿ ಎಲ್ಲರೂ ಅವರವರ ಮನೆಗೆ ತೆರಳಿದರು,ಅತ್ತೆಯಿನ್ನೂ ಬಿಕ್ಕುತ್ತಲೇ ಇದ್ದರು.ಏಷ್ಟಾದರೂ ಹೆತ್ತಕರುಳು,ಶುದ್ಧ ಅಂತಃಕರಣ ಸೆಲೆಯುಳ್ಳವರು.ಮಗಳು ಹುಟ್ಟಿ ಒಂದು ವರುಷಕ್ಕೆ ಕಾರಣವಿಲ್ಲದೇ ಜಗಳ ತೆಗೆದು 'ನನ್ನ ಆಸೆ-ಕನಸುಗಳೇ ಬೇರೆ.ನಿಮ್ಮನ್ನೆಲ್ಲಾ ಸಾಕುತ್ತಾ ಬದುಕಿ ಕನಸನ್ನ ಕೊಲ್ಲುವುದು ಇಷ್ಟವಿಲ್ಲ.ನಿಮ್ಮ ದಾರಿ ನಿಮಗೆ,ನನ್ನದು ನನಗೆ' ಎಂದು ಮನೆ-ತೋಟವನ್ನೆಲ್ಲಾ ನಮ್ಮ ಹೆಸರಿಗೆ ಮಾಡಿ ಮನೆಬಿಟ್ಟು ಹೋದ ಮಗನ ಮೇಲೆ ಕಡುಕೋಪವಿದ್ದರೂ, ಅವರನ್ನು ನೆನೆಸಿಕೊಂಡು ನನಗೆ ಕಾಣದಂತೆ ಕಣ್ಣೀರು ಮಿಡಿಯುತ್ತಿದ್ದರು.ನಡು ನೀರಲ್ಲಿ ಕೈಕೊಟ್ಟು ಹೋದ ಗಂಡ,ಅತ್ತ ಈಜಲೂ ಬಾರದೇ,ಮುಳುಗಲೂ ಬಾರದೇ ಒದ್ದಾಡುತ್ತಿದ್ದವಳನ್ನು,ಸ್ವಂತ ಮಗಳಂತೆ ನೋಡಿಕೊಂಡು,ಸ್ಥೈರ್ಯತುಂಬಿ ಉದ್ಯೋಗಕ್ಕೆ ಸೇರಲು ಪ್ರೇರೆಪಿಸಿದರು.ಸಣ್ಣ ಪುಟ್ಟದ್ದಕ್ಕೂ ರೇವಂತನ ಮೇಲೆ ಅವಂಬಿತಳಾಗಿ,ಅವನನ್ನು ಕಳೆದುಕೊಂಡು ಖಿನ್ನಳಾಗಿದ್ದ ನನ್ನನ್ನು ಉತ್ಸಾಹದ ಚಿಲುಮೆಯನ್ನಾಗಿ ಮಾಡಿದರು.ಶಾಲೆಯಲ್ಲಿ ಪಾಠಮಾಡುತ್ತಾ,ಮಕ್ಕಳೊಂದಿಗಿನ ಒಡನಾಟ,ಮನೆಯಲ್ಲಿ ಮಗಳ ತೊದಲ್ನುಡಿಯ ತುಂಟಾಟ,ಅತ್ತೆಯ ಮಮತೆಯ ಚಿಲುಮೆಯಲ್ಲಿ ರೇವಂತನ ನೆನಪು ನಿಧಾನಕ್ಕೆ ಕರಗತೊಡಗಿತ್ತು.
ತಪ್ಪು-ತಪ್ಪು ಹೆಜ್ಜೆಯನ್ನಿಟ್ಟು ಬೀಳುತ್ತಿದ್ದ ಮಗಳನ್ನು ತಡೆಯಲು ಹೋಗದೆ ಸುಮ್ಮನೆ ನೋಡುತ್ತಾ ಕುಳಿತಿರುತ್ತಿದ್ದೆ.ಬಿದ್ದ ಮಗಳು ಮತ್ತೆ ಎದ್ದು ಮರಳಿ ಪ್ರಯತ್ನವ ಮಾಡತೊಡಗುವಾಗ ಮನವರಳುತ್ತಿತ್ತು.ಮುದ್ದು ಮುದ್ದು ಮಾತನಾಡಿ,ಇನ್ನಿಲ್ಲದ ಪ್ರಶ್ನೆ ಕೇಳಿ ಜೀವನದಲ್ಲಿ ಕಲಿಯಬೇಕು ಎಂಬುದನ್ನು ತೋರಿಸಿಕೊಡುತ್ತಿದ್ದಳು.ಹೀಗೇ ಪ್ರತೀ ಕ್ಷಣ ತನಗರಿವಿಲ್ಲದೆಯೇ ಜೀವನದ ಪಾಠ ಕಲಿಸುತ್ತಿದ್ದಳು ನನ್ನ ಮಗಳು.ಶಾಲೆ ಕೆಲಸ ಮುಗಿಸಿ ಮನೆಗೆ ಬರುವಾಗಲೇ ಅಜ್ಜಿ-ಮೊಮ್ಮಗಳ ಸವಾರಿ ಪಕ್ಕದಲ್ಲಿನ ಪಾರ್ಕಿನೆಡೆಗೆ ಹೊರಟಿರುತ್ತಿತ್ತು.ನಾನೂ ಬಟ್ಟೆ ಬದಲಾಯಿಸಿ,ಕೈಕಾಲು ತೊಳೆದು,ಒಂದು ಲೋಟ ಚಹಾ-ಅದಕ್ಕೆರಡು ಬಿಸ್ಕಿಟ್ ತಿಂದು ಅವರನ್ನು ಕರೆತರಲು ಹೊರಡುತ್ತಿದ್ದೆ.ಮನೆಗೆ ಬಂದು ದೇವರ ದೀಪ ಹಚ್ಚಿ,ಮಗಳಿಂದ ಶ್ಲೋಕ ಹೇಳಿಸಿ,ಒಂದ್ಲೋಟ ಹಾಲನ್ನು ಅಜ್ಜಿ-ಮೊಮ್ಮಗಳಿಗೆ ಕುಡಿಯ ಕೊಟ್ಟು,ಮೊಮ್ಮಗಳಿಗೆ ಅಜ್ಜಿ ಹೇಳುವ ಪುರಾಣದ ಸ್ವಾರಸ್ಯದ ಕಥೆಗಳಿಗೆ ಕಿವಿಯಾಗುತ್ತಾ, ರಾತ್ರಿಯಡುಗೆಗೆ ಸಿದ್ಧಮಾಡುತ್ತಿದ್ದೆ.ಶಾಲೆಯಲಿನ ತುಂಟ ಮಕ್ಕಳ ಚೆಲ್ಲಾಟವನ್ನು ವಿವರಿಸುತ್ತಾ,ಹರಟುತ್ತಾ ಊಟ ಮುಗಿಸಿ ಒಟ್ಟಿಗೆ ಮಲಗುತ್ತಿದ್ದೆವು ಜಗುಲಿಯಲ್ಲಿ.ಮೊದಮೊದಲು ನಿದ್ರೆ ಬಾರದೇ ನಿಡುಸುಯ್ದು,ಕನವರಿಸಿಕೊಂಡು ರಾತ್ರಿ ಕಳೆಯುತ್ತಿತ್ತು.ಇತ್ತಿಚಿಗೆ ಬೆಳಗಿನ ಜಾವಕ್ಕೆ ಜೊಂಪು ಹತ್ತಿ,ಅತ್ತೆಯೆಬ್ಬಿಸಿದಾಗಲೇ ಎಚ್ಚರವಾಗುತ್ತಿತ್ತು.ಕಾರಣವಿಲ್ಲದೇ ಬಿಟ್ಟು ಹೋದ ರೇವಂತ್ ಎಂಬ ನೋವು ಬಿಟ್ಟರೆ,ಉಳಿದಿದ್ದೆಲ್ಲಾ ನಿರಾಳವಾಗಿತ್ತು.ಆದರೆ ಅವ ಹೀಗೆ ಧಿಡಿರನೇ ಹೆಣವಾಗಿ ಮರಳಿ ಮನೆಯಲ್ಲಿನ-ಮನದಲ್ಲಿನ ತಿಳಿನೀರ ಕೊಳಕ್ಕೆ ಕಲ್ಲೆಸೆದಂತಾಗಿತ್ತು.
 ಗೋಕರ್ಣದ ಉಪಾಧ್ಯರ ಮನೆಯಲ್ಲಿ ತಿಥಿಕರ್ಮವನ್ನೆಲ್ಲಾ ಮುಗಿಸಿ,ಗರುಡ ಪುರಾಣ ಓದಿಸಿ ಅವನಾತ್ಮಕ್ಕೆ ಶಾಂತಿ ಕೋರಿ ಮನೆಗೆ ಹಿಂತಿರುಗಿ ಬಂದಾಗ ದಪ್ಪದೊಂದು ಲಕೋಟೆ ನಮ್ಮ ದಾರಿ ಕಾಯುತ್ತಿತ್ತು.ಅದರಲ್ಲಿ 'ನನ್ನ ಪ್ರೀತಿಯ ರೇವತಿಗೆ' ಎಂಬ ರೇವಂತನ ದುಂಡಗಿನಕ್ಷರ ನಮ್ಮನ್ನು ಸೆಳೆಯಿತು.ಲಗುಬಗೆಯಿಂದ ಬೀಗ ತೆಗೆದು ಕೋಣೆಗೊಡಿದೆ,ನನಗೆ ತೊಂದರೆಯಾಯಿತೆಂದು ಮಗಳನ್ನು ಪಕ್ಕದ ಮನೆಗೆ ಆಡಲು ಕಳುಹಿಸಿದ ಅತ್ತೆ,ಮೆಲ್ಲ ನನ್ನ ಪಕ್ಕ ಬಂದು ಕುಳಿತರು.ಲಕೋಟೆಯನ್ನು ತೆರೆಯುವಾಗ ಅಗತ್ಯಕ್ಕಿಂತ ಹೆಚ್ಚಾಗಿ ಕೈ ನಡುಗಿತ್ತಿತ್ತು,ಮೆಲ್ಲ ಓದಲು ಶುರುಮಾಡಿದೆ.ಪತ್ರದಲ್ಲಿ ಹೀಗಿತ್ತು..
 "ನನ್ನೊಲುಮೆಯ ಅರಗಿಣಿ ರೇವತಿ ನಕ್ಷತ್ರವೇ,ಬಹುಶಃ ಈ ಪತ್ರ ನಿನ್ನ ತಲುಪುವುದಕ್ಕೂ ಮೊದಲು,ನನ್ನ ಪ್ರಾಣವಿಲ್ಲದ ದೇಹ ನಿಮ್ಮನ್ನು ತಲುಪಿರಲಿಕ್ಕೂ ಸಾಕು.ನನ್ನಮೇಲಿನ್ನೂ ಕೋಪವೇ ಗಿಣಿ?ನನಗೆ ಗೊತ್ತು ನಿಮಗೆಲ್ಲಾ ನಾನು ಮಾಡಿದ್ದು ಕ್ಷಮಿಸಲಾರದ ತಪ್ಪೆಂದು,ಆದರೆ ನನ್ನ ಪ್ರಕಾರ ನಾನು ಮಾಡಿದ್ದೇ ಸರಿಯಾಗಿತ್ತು ಕಣೆ. ನಾನು ನಿಮ್ಮನ್ನು ದೂರಮಾಡುವ ಕಾರಣ ತಿಳಿಸಿದ್ದರೆ,ನೀವೆಲ್ಲಾ ನನಗಾಗಿ ಮನೆ-ಮಠ ಕಳೆದುಕೊಂಡು,ಸಾಲದ ಹೊರೆಹೊತ್ತು ಬೀದಿಯಲ್ಲಿ ನಿಂತಿರುತ್ತಿದ್ದಿರಿ.ಅದು ನನಗೆ ಬೇಡವಾಗಿತ್ತು. ಆದರೀಗ ನೀನು ಸ್ವಾವಲಂಬಿಯಾಗಿ ನಿನ್ನ ಕಾಲಮೇಲೆ ನೀನು ನಿಂತು,ಅಮ್ಮನನ್ನು ಮಗನಂತೆ,ಮಗಳನ್ನು ಅಪ್ಪನಂತೆ ಸಾಕು ಬದುಕುತ್ತಿರುವ ರೀತಿ ಕಂಡು,ನನಗೂ ಬದುಕುವ ಆಸೆಯಾಗ್ತಿದೆ ರೇವತಿ.ಹ್ಮುಂ!ಅಚ್ಚರಿಬೇಡ,ನಿಮ್ಮನ್ನು ದೂರ ಮಾಡಿಕೊಂಡ ಕಾರಣವನ್ನ ಹೇಳುತ್ತೆನೆ ಕೇಳಿಸಿಕೋ.. ಸದಾ ತಲೆನೋವೆಂದು ಒದ್ದಾಡುತ್ತಿದ್ದ ನನ್ನನ್ನು,ನನ್ನ ಜೀವದ ಗೆಳೆಯ ಪ್ರಕಾಶ ಅವನ ತಮ್ಮನ ಆಸ್ಪತ್ರೆಗೆ ಕರೆದೊಯ್ದ ಹಠಮಾಡಿ.ಆಗಲೇ ನನ್ನ ಬಿಟ್ಟು ಬಿಡದ ತಲೆನೋವಿಗೆ ಕಾರಣ 'ಬ್ರೈನ್ ಟ್ಯೂಮರ್'ಎಂದು.ಅದು ಗುಣಪಡಿಸಲಾಗದ ಸ್ಥಿತಿಗೆ ಆಗಲೇ ತಲುಪಿದೇ ಎಂದು ತಿಳಿಸಿದಾಗ ಮಾತ್ರ ಕುಸಿದುಬಿದ್ದಿದ್ದೆ.
  ಮಮತೆಯ ಮಳೆಸುರಿಸೋ ಅಮ್ಮ,ಪ್ರೀತಿಯ ರಸದೌತಣ ಬಡಿಸುವ ಹೆಂಡತಿ,ಜೀವದ ಮುದ್ದೆಯಾದ ಪುಟ್ಟಕಂದ ಎಲ್ಲರ ನೆನಪಾಗಿ ಚಿಕ್ಕ ಮಕ್ಕಳಂತೆ ಕಣ್ಣಿರಿಟ್ಟೆ.ಮಗಳಿಡುವ ಅಂಬೆಗಾಲು,ಅವಳಾಡೋ ತೊದಲ್ನುಡಿ,ಅವಳಳುವಿಗೆ ಕೂಸುಮರಿ ಮಾಡಿ ಅಂಬೆ ತೋರಿಸಿದಾಗ ಅವಳು ನಗುವ ಕಿಲಕಿಲ ನಾದ ಎಲ್ಲವನ್ನೂ ಕಳೆದುಕೊಳ್ಳುತ್ತೆನೆಂದುಕೊಂಡಾಗ ಎದೆಬಿರಿದು ಬಿಕ್ಕತೊಡಗಿತ್ತು.ಮಗಳನ್ನು ಧಾರೆಯೆರೆದು ಕೊಟ್ಟು ಗಂಡನ ಮನೆಗೆ ಕಳುಹಿಸುವಾಗ ಅವಳು ಅಳದಂತೆ ಅವಳನ್ನು ನಗಿಸಬೇಕೆಂಬ ದೊಡ್ಡ ಕನಸಿನ ಸೌಧ ಕಣ್ಣೆದುರೇ ಕುಸಿದು ಕುಂತಿತ್ತು.ನಮ್ಮ ೨೫ನೇ ವರುಷದ ಮದುವೆ ವಾರ್ಷಿಕೋತ್ಸವಕ್ಕೆ ನಿನ್ನಿಷ್ಟದ ಬಣ್ಣದ ಕಾರು ತಂದುಕೊಟ್ಟು,ನಿನ್ನ ಕಂಗಳಲಿ ಕುಣಿವ ಜಿಂಕೆಯ ಹಿಂಡನ್ನು ನೋಡಬೇಕೆಂಬ ಕನಸಿನ ಜೋಕಾಲಿಯ ಹಗ್ಗ ತುಂಡಾಗಿ ಬಿದ್ದಿತ್ತು.ಅಮ್ಮನ ಪ್ರೀತಿಯ ಪುಣ್ಯಕ್ಷೇತ್ರಗಳಿಗೆ ವರುಷಕ್ಕೊಮ್ಮೆಯಾದರೂ ನಾವೆಲ್ಲ ಒಟ್ಟಿಗೆ ತೆರಳಬೇಕೆಂಬ ಕನಸಿನ ಹಕ್ಕಿ ರೆಕ್ಕೆಮುರಿದು ಮೂಲೆಗುಂಪಾಗಿತ್ತು.ತಾಸೆರಡರ ನಂತರ ಎಚ್ಚೆತ್ತುಕೊಂಡು ಗೆಳೆಯ ಪ್ರಕಾಶನ ಬಳಿ ಯಾರಿಗೂ ಹೇಳದಂತೆ ಮಾತು ತೆಗೆದುಕೊಂಡು ಮನೆಗೆ ಬಂದಿದ್ದೆ,ದುಃಖವನ್ನೆಲ್ಲಾ ಎದೆಯಲ್ಲಿ ಹೆಪ್ಪುಗಟ್ಟಿಸಿಕೊಂಡು.
  ಹಗಲಿರುಳೂ ಯೋಚಿಸಿಯೇ ಯೋಚಿಸೆ ಒಂದು ನಿರ್ಧಾರಕ್ಕೆ ಬಂದು,ಮನೆ-ತೋಟ-ಬ್ಯಾಂಕಿನಲ್ಲಿದ್ದ ಹಣವನ್ನೆಲ್ಲಾ ನಿಮ್ಮ ಮೂವರೊಳಗೆ ಹಂಚಿ ವರ್ಗಾಯಿಸಿದೆ ನಿಮಗ್ಯಾರಿಗೂ ಸುಳಿವೂ ಕೊಡದಂತೆ.ಜೊತೆ ಜೊತೆಗೆ ನಿನ್ನ ಮೇಲೂ,ಅಮ್ಮನ ಮೇಲೂ ವಿನಾಕಾರಣ ಸಿಡುಕತೊಡಗಿದ್ದೆ ನೆನಪಿದ್ಯಾ ಗಿಣಿ?ಅಪ್ಪಿಕೊಳ್ಳಲು ಕಾಲಿಗೆ ತಡಕಾಡುವ ಮಗಳನ್ನಂತೂ ಕಣ್ಣೆತ್ತಿಯೂ ನೋಡದೆ ಕೋಣೆ ಸೇರುತ್ತಿದ್ದೆ.ಇದೆಲ್ಲಾ ಆಗಿ ತಿಂಗಳು ಕಳೆಯುವುದರೊಳಗೆ ನಿಮ್ಮನ್ನಗಲಿ ದೂರಹೋಗುವ ಸಿಡಿಮದ್ದನ್ನು ಸಿಡಿಸಿದ್ದೆ.ನೀನು ಕಾಲಿಗೆ ಬಿದ್ದೆ,ಬೇಡಿದೆ,ಬಿಗಿದಪ್ಪಿ ಅಳತೊಡಗಿದೆ,ನಾನು ಕರಗಲಿಲ್ಲ. ನಿನ್ನ ನಿರಂತರ ಆರ್ತತೆ,ಬಿಕ್ಕಳಿಕೆ,ಅಮ್ಮನ ನಿಶ್ಶಬ್ಧದ ಕಣ್ಣೀರ ಧಾರೆ,ನಿಮ್ಮಳುವ ಕಂಡ ಮಗಳ ಪೆಚ್ಚು ಮುಖ ಎಲ್ಲವೂ ಎದೆಗೆ ಚೂರಿ ಹಾಕುವಂತಿದ್ದರೂ,ಮನವನ್ನು ಕರಗ ಬಿಡದೇ ಕಲ್ಲಾಗಿಸಿ ಮನೆಬಿಟ್ಟೆ. ತಿರುಗಿ ನೋಡಿದರೆಲ್ಲಿ ಕರಗಿಬಿಡುವೆನೆಂದು ಹಿಂತಿರುಗದೇ ಹೊರನಡೆದೆ ದೂರದೂರಿನ ಆಶ್ರಮಕ್ಕೆ..
ಆಶ್ರಮಕ್ಕೆ ಒಂದಿಷ್ಟು ಹಣಕೊಟ್ಟು ನನ್ನನ್ನು ಇಲ್ಲಿರುವಂತೆ ಮಾಡಿದ್ದು ಪ್ರಕಾಶ.ನಾನಿಲ್ಲದೇ ನೀವು ಪಡುತಿರುವ ನೋವು ಸಂಕಟವನ್ನೆಲ್ಲಾ ಪ್ರಕಾಶ ಯಥಾವತ್ತಾಗಿ ವರದಿ ಒಪ್ಪಿಸುವಾಗ ಕರುಳು ಕಿತ್ತು ಬರುತ್ತಿತ್ತು ಕಣೆ.ಬರಬರುತ್ತಾ ನಿನ್ನ ಛಲ,ಅಮ್ಮನ ಬೆಂಬಲದಿಂದ,ಮುಗ್ಧ ಮಗುವಂತಿದ್ದ ನೀನು ಮನೆಯ ಜವಾಬ್ಧಾರಿಯ ಜೊತೆಗೆ,ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುವ ಪರಿ,ಮಗಳನ್ನು ಬೆಳೆಸುತ್ತಿರುವ ರೀತಿ,ಎಲ್ಲವನ್ನೂ ಕೇಳುತ್ತಲೇ ಮನ ಕುಣಿತುತ್ತಿತ್ತು.ನನಗೂ ಮತ್ತೆ ಬದುಕ ಬೇಕೆಂಬಾಸೆ ಹೆಚ್ಚಾಗುತ್ತಿತ್ತು.ಆದರೆ ವಿಧಿಯಾಟವೇ ಬೇರೆ ನೋಡು,ಸಾವಿನ ದವಡೆಗೆ ನಿಧಾನಕ್ಕೆ ಜಾರುತ್ತಿರುವುದನ್ನು ಅನುಭವಿಸತೊಡಗಿದ್ದೆ.ಸಾವನ್ನು ಹತ್ತಿರದಿಂದ ದಿನವೂ ಕಾಣುವ ಕರ್ಮವಿದೆಯಲ್ಲಾ,ಇದ್ಯಾವ ಶತ್ರುವಿಗೂ ಬೇಡ ಕಣೆ.
 ನಿನ್ನ ಮುಗ್ಧ ಪ್ರೀತಿಗೆ,ಅಮ್ಮನ ಕಲ್ಮಶವಿಲ್ಲದ ಮಮತೆಗೆ,ಜೀವದ ಮಗಳಿಗೆ ಮೋಸಮಾಡಿ ದೂರವಾಗಿಲ್ಲ ಎನ್ನುವ ಸತ್ಯ ನನ್ನ ಸಾವಿನ ನಂತರವಾದರೂ ತಿಳಿಸಬೇಕೆನೆಸಿತ್ತು ಗಿಣಿ.ಅದಕ್ಕೆ ಈ ಪತ್ರವನ್ನು ಬರೆಯತೊಡಗಿದ್ದೆ. ನಡು ನೀರಲ್ಲಿ ನಿಮ್ಮನ್ನೆಲ್ಲಾ ಕೈಬಿಟ್ಟು ಹೊರಟಿರುವೆ,ನಾವಿಕನಿಲ್ಲದೆ ದೋಣಿಯನ್ನು ಧೈರ್ಯದ ಹರಿಗೋಲು ಹಿಡಿದು ದಡ ಸೇರಿಸುತ್ತಿಯಾ ಎಂಬ ನಂಬಿಕೆಯ ಸುಖವೇ ಸಾಕು ನನಗೆ.ನೀನೇ ನಾವಿಕಳು ರೇವತಿ,ಅಮ್ಮನಿಗೆ ಮಗನ ಕೊರತೆ ನೀಗಿ,ಮಗಳಿಗೆ ಅಪ್ಪನ ಸ್ಥಾನ ತುಂಬಿ ಬೆಳೆಸು.ನಿನಗಾಗಿ ನನಗೇನೂ ಮಾಡಲು ಉಳಿದಿಲ್ಲ,ಕೇವಲ ಪ್ರಕಾಶನ ಹೊರತು. ಅವನೊಬ್ಬ ಒಳ್ಳೆಯ ಗೆಳೆಯನ್ನಷ್ಟೇ ಅಲ್ಲ,ನನ್ನ ಕಷ್ಟದಲ್ಲಿ ಸ್ಪಂದಿಸಿದ ಜೀವ.ಅವನನ್ನು ಮದುವೆಯಾಗಿ ಸುಖವಾಗಿರು.ಮತ್ತೊಂದು ಜನ್ಮವಿದ್ದರೆ ನಿನ್ನ ಗರ್ಭದಲ್ಲಿ ಹುಟ್ಟು ನಿನ್ನ ಋಣ ತೀರಿಸುವೆ.
ನಿನ್ನ,
ರೇವೂ.."
 ಓದಿ ಮುಗಿಸುವಷ್ಟರಲ್ಲಿ ಗಂಟಲಲ್ಲಿ ಕಾಲದಿಂದ ಅಡಗಿ ಕುಳಿತಿದ್ದ ಬಿಕ್ಕು ಭೋರ್ಗರೆದು ಹೊರಬಂತು.ತಾಸುಗಟ್ಟಲೆ ಅತ್ತೆಯ ಮಡಿಲಲ್ಲಿ ಮುದುಡಿ ಬಿಕ್ಕುತ್ತಾ ಮಗುವಾಗಿದ್ದೆ,ಅತ್ತೆ ಮತ್ತೆ ತಾಯಾಗಿದ್ದರು. 'ಅಜ್ಜಿ ಅಮ್ಮಂಗೆ ಆಲು ಬೈದ್ಲು?ಹಚಾ ಮಾತ್ತಿನಿ ಚುಮ್ಮಿರು ಅಮ್ಮಾ.ಅಲಬೇಡ' ಎಂಬ ಮಗಳ ತೊದಲ್ನುಡಿಗೆ,ಕಂಬನಿಯೊರೆಸತೊಡಗಿದ ಅವಳ ಬೆಣ್ಣೆ ಸ್ಪರ್ಶಕ್ಕೆ ಮೆಲ್ಲ ಕಣ್ತೆರೆದೆ. ಇವರ ಗೆಳೆಯ ಪ್ರಕಾಶರ ಕೈಹಿಡಿದು ಬಳಿ ನಿಂತಿದ್ದಳು ಮಗಳು..
-ಶುಭಶ್ರಿ ಭಟ್ಟ

ಎದೆಯ ಸ್ಮಶಾನದೊಳೂಳಿಡುವ ನರಿಗಳು

(ಪ್ರತಿಲಿಪಿ ಕನ್ನಡದಲ್ಲಿ ಪ್ರಕಟವಾದ ಕಥೆ)



 ಅದೊಂದು ಪ್ರಶಸ್ತಿ ವಿತರಣಾ ಸಮಾರಂಭ.ಗಣ್ಯಾತಿಗಣ್ಯರ ನಡುವೆ ಮುದ್ದೆಯಾಗಿ ಕುಳಿತಿದ್ದೆ ನಾನು,ಮುಜುಗರದಿಂದಲ್ಲ-ಸಿಡಿಲು ಬಡಿದವರಂತೆ.ಯಾವಾಗ ನನ್ನ ಕಥಾಸಂಕಲನಕ್ಕೆ ಪ್ರಶಸ್ತಿ ಸುದ್ದಿ ತಿಳಿದಾಗಿನಿಂದ ಹೀಗೇ ಆಡುತ್ತಿದ್ದೆ ಗರಬಡಿದವರಂತೆ.ಕಾರಣ ಕೇಳ್ತಿರಾ? ಹೇಳಲಾ ಬೇಡವಾ ಎಂಬ ದ್ವಂದ್ವದೊಡನೆ ಕುಳಿತಿದ್ದಂತೆ ನನ್ನ ಹೆಸರನ್ನು ಕರೆದಿದ್ದಾಯ್ತು.ಪ್ರಶಸ್ತಿ ಸ್ವೀಕರಿಸುವಾಗ  ಕೈ ನಡುಗುತ್ತಿತ್ತು,ಕಣ್ಣಂಚಲ್ಲಿ ನೀರು ಮಡುಗಟ್ಟಿತ್ತು..ಅದನ್ನೆಲ್ಲರೂ ಸಂತಸದ ಕಣ್ಣೀರೆಂದುಕೊಂಡರು. ಕಣ್ಣೀರ ಹಿಂದೆ ಹೆಪ್ಪುಗಟ್ಟಿದ್ದ ವಿಷಾದತೆ ನನಗಷ್ಟೇ ಗೊತ್ತಿತ್ತು..ಮಾತನಾಡಲಾಗದೇ ಗಂಟಲು ಬಿಗಿದು ಬಂತು,ಎಲ್ಲರೂ ಸಮಾಧಾನಿಸಿ ಕುಳ್ಳಿರಿಸಿದರು. ಕಾರ್ಯಕ್ರಮ ಮತ್ತೆ ಮುಂದುವರೆಯತೊಡಗಿತು. ಮೆಲ್ಲನೆ ಕತ್ತೆತ್ತಿ ವೀಕ್ಷಕರ ವಲಯದ ಮೊದಲ ಸಾಲಿನಲ್ಲಿ ಕುಳಿತ ಹೆಂಡತಿ ಜ್ಯೋತಿಯೆಡೆ ನೋಡಿದೆ,ಅವಳು ಹೆಮ್ಮೆಯಿಂದ ಬೀಗುತ್ತಿದ್ದಾಳೆ ಅನಿಸಿದಾಗ ಮಾತ್ರ ಮತ್ತೆ ಮುಳ್ಳು ಚುಚ್ಚಿದಂತಾಯ್ತು.ಕಾರ್ಯಕ್ರಮವೆಲ್ಲಾ ಮುಗಿಸಿ ಮನೆಗೆ ಮರಳುವಾಗಲೂ ಮಂಕಾಗಿದ್ದೆ. ನನ್ನ ಈ ಪರಿಯ ಮೌನ ನನ್ನ ಹೆಂಡತಿಗೆ ಅಚ್ಚರಿಯುಂಟು ಮಾಡಿದ್ರೂ,ಯಾಕೋ ಎನೋ ಕೇಳದೆ ಸುಮ್ಮನಾಗಿದ್ದಳು.ಮನೆಗೆ ಬಂದ ಮೇಲೆ ಜ್ಯೋತಿ ಸಮಾರಂಭದ ಸಂಭ್ರಮವ ಚಾಚೂ ಬಿಡದೆ ಸಡಗರದಿಂದ ನನ್ನಮ್ಮನಿಗೆ ವರದಿ ಒಪ್ಪಿಸುತ್ತಿದ್ದಳು.ಅವರ ಸಡಗರವ ನೋಡಲಾಗದೆ ಹೊಟ್ಟೆಲಿ ಕಿಚ್ಚೆದ್ದಿತ್ತು,ಅವರನ್ನು ಗದರಿಸಿ ಮಲಗಿಸಿದೆ. ನನ್ನ ವಿಚಿತ್ರ ವರ್ತನೆಗೆ ಎಲ್ಲರೂ ಗೊಣಗುತ್ತಲೇ ಮಲಗಿದರು,ನನ್ನೊಬ್ಬನ ಬಿಟ್ಟು..'ನಾನು ಪಾಪಿ' ಅನಿಸಿದೊಡನೆ ಅಳುವಿಕ್ಕಿ ಬಂತು. ನಿಶ್ಶಬ್ಧವಾದ ರಾತ್ರಿಯಲ್ಲಿ ಬಿಕ್ಕಲೂ ಆಗದೇ,ಅಲ್ಲಿಂದೆದ್ದು ಬಾಲ್ಕನಿಗೆ ಬಂದೆ.ತಂಪಾಗಿ ತೂಗಿ ಬರೋ ತಂಗಾಳಿ,ಮನ ಮುದಗೊಳಿಸುವ ಬೆಳದಿಂಗಳು ಆಹ್ಲಾದವನ್ನೀಯಲಿಲ್ಲ. ನೆನಪು ಬೇಡವೆಂದರೂ ಮಾತು ಕೇಳದೆ ಹಿಂದಕ್ಕೋಡಿತು..
 ಅಂದು 'ಅಜ್ಜಯ್ಯಾ ಅಜ್ಜಯ್ಯಾ' ಎಂದು ಕರೆಯುತ್ತಾ ಅಜ್ಜನ ಕೋಣೆಗೆ ಹೋದೆ. ಕರೆಂಟ್ ಇದ್ರೂ ಅಜ್ಜಯ್ಯ ತನ್ನ ಕೋಣೆಯಲ್ಲಿ ಚಿಮಣಿ ದೀಪವನ್ನೇ ಉಪಯೋಗಿಸುತ್ತಿದ್ದ.ಅವನಿಗೆ ಆ ಚಿಮಣಿಯ ಬೆಳಕಲ್ಲಿ ಬರೆಯಲು,ಓದಲು ತುಂಬಾ ಇಷ್ಟ.ದೊಡ್ಡ ಕನ್ನಡಕದ ಮುಖವನ್ನು ಪುಸ್ತಕದಲ್ಲಿ ಹುದುಗಿಸಿಟ್ಟಂತೆ ಓದುತ್ತಿದ್ದ.ಮುಕ್ಕಾಲು ನೆರೆತ ತಲೆಗೂದಲು, ದಪ್ಪಂಚಿನ ಕನ್ನಡಕ,ದೊಗಳೆಯಾದ ಪಂಚೆ-ಶರ್ಟು ,ಕೈಯಲ್ಲೊಂದು ಶಾಯಿಪೆನ್ನು ಹಿಡಿದು ಮೆಲ್ಲನೆ ತಲೆಯೆತ್ತಿದ್ದ ಅಜ್ಜಯ್ಯಾ ನನಗೆ ಐನಸ್ಟೈನ್ ಅವರಂತೆ ಕಂಡಿದ್ದ. 'ಏನು' ಎಂಬ ಪ್ರಶ್ನೆಯ ಮೊಗ ಹೊತ್ತ ಅಜ್ಜಯ್ಯನಿಗೆ 'ಊಟಕ್ಕೆ ಬಾ' ಎಂದು ಕರೆದು ಹೊರಡಲನುವಾದೆ. ತಕ್ಷಣ ನನ್ನ ಕುಳಿತು ಹೇಳಿದ ಅಜ್ಜಯ್ಯ,ಅಚ್ಚರಿಯಿಂದಲೇ ಕುಳಿತುಕೊಂಡೆ..ಸದಾ ಮೌನಕ್ಕೆ ಶರಣಾಗಿದ್ದ ಅಜ್ಜಯ್ಯ ನನ್ನನ್ನು ಕುಳೀತುಕೊಳ್ಳುವಂತೆ ಹೇಳಿದ್ದು ಮಾತ್ರ ನನಗೆ ವಿಪರೀತ ಅಚ್ಚರಿಪಡುವಂತದ್ದಾಗಿತ್ತು.ನಿಮಿಷಗಳೇ ಉರುಳಿದರೂ ಅಜ್ಜಯ್ಯ ಏನೂ ಮಾತನಾಡಲಿಲ್ಲ,ತಾಳ್ಮೆಗರ್ಥ ಗೊತ್ತಿಲ್ಲದ ನಾನೂ ಕೂಡ ಇಂದು ಸುಮ್ಮನೆ ಕುಳಿತಿದ್ದೆ ನಾನೂ ಅಚ್ಚರಿಗೊಳ್ಳುವಂತೆ..
 ಐದಾರು ನಿಮಿಷಗಳಾದ ಮೇಲೆ,ಅಜ್ಜಯ್ಯ ನನ್ನ ಕೈಹಿಡಿದು ಒಂದು ಹಳೆಯ ಕಬ್ಬಿಣದ ಪೆಟ್ಟಿಗೆಯ ಬಳಿ ಕರೆದೊಯ್ದ.ದುಡ್ಡು-ಗಿಡ್ಡು-ಚಿನ್ನ-ಪಿನ್ನ ಕೊಡ್ತಾರೆನೋ ಎಂಬ ಆಲೋಚನೆ ನನ್ನ ನೀಚಬುದ್ಧಿಯ ತಲೆಯದಾಗಿತ್ತು.ಭಾರವಾದ ಆ ಪೆಟ್ಟಿಗೆಯ ಬಾಗಿಲು ಕಟ-ಕಟವೆಂಬ ಭಯಾನಕ ಶಬ್ಧದೊಡನೆ ತೆರೆದುಕೊಂಡಿತು. ಕ್ಷಣದೊಳಗೆ ನಿರಾಸನಾಗಿದ್ದೆ ನಾನು,ಅಲ್ಲಿರುವ ಭಾರಿ-ಭಾರಿ ಪುಸ್ತಕದ ರಾಶಿ ಕಂಡು.ಎಲ್ಲವೂ ಮಹಾನ್ ಅತಿರಥ-ಮಹಾರಥರು ಬರೆದಿದ್ದ ಅತ್ಯಮೂಲ್ಯ ಪುಸ್ತಕಗಳಾಗಿದ್ದವು. ಅದರ ನಡುವಿಂದ ಸುಮಾರು ನೂರಕ್ಕೂ ಹೆಚ್ಚಿಗಿನ ಹಾಳೆಗಳನ್ನು ತೆಗೆದು ಧೂಳು ಕೊಡವಿ ನನ್ನ ಕೈಯಲ್ಲಿಟ್ಟ. ನನಗೆ ತಲೆಬುಡ ಅರ್ಥವಾಗದೇ ಕುಳಿತಿದ್ದೆ ಸುಮ್ಮನೆ. ಪೆಟ್ಟಿಗೆಯನ್ನು ಮತ್ತೆ ಭದ್ರಪಡಿಸಿ,ಹಾಳೆಗಳನ್ನು ಎತ್ತಿಕೊಂಡು ಬರಲು ತಿಳಿಸಿದ ಅಜ್ಜಯ್ಯ.ಸುಮ್ಮನೆ ಕಾಲಹರಣ ಮಾಡುತ್ತಿರುವ ಅಜ್ಜಯ್ಯನ ಮೇಲೆ ಕೋಪವುಕ್ಕಿ ಬಂದರೂ, ರೇಗದೆ ಅನಿವಾರ್ಯವಾಗಿ 'ಆಕ್ಷೀ.....' ಎಂದು ಸೀನುತ್ತಾ,ಅದನ್ನೆಲ್ಲಾ ಎತ್ತಿ ಅಜ್ಜಯ್ಯನ ಮೇಜಿನ ಮೇಲಿಟ್ಟೆ.ನನಗೆ ಮತ್ತೆ ಕುಳೀತುಕೊಳ್ಳಲು ಹೇಳಿದ ಅಜ್ಜಯ್ಯಾ 'ಆ ಹಾಳೆ ಗಂಟನ್ನೇ' ಅಪ್ಯಾಯಮಾನವಾಗಿ ನೋಡುತ್ತಾ,ಮೆಲ್ಲ ಸವರುತ್ತಿದ್ದ. ನನಗದೆಲ್ಲಾ ಒಂಚೂರೂ ಸಹನೆಯಾಗದೇ,ಅಸಹನೆಯ ಬುಗ್ಗೆಯಾಗಿ ಕುದಿಯತೊಡಗಿದ್ದೆ..ಅದನ್ನೆಲ್ಲಾ ಅಜ್ಜಯ್ಯ ಗಮನಿಸದವನಾಗಿದ್ದ..
  ಕೆಲಕಾಲ ಬಿಟ್ಟು ಮೆಲ್ಲ ನನ್ನೆಡೆ ನೋಡಿ 'ಪುಟ್ಟಣ್ಣಾ (ಅಜ್ಜ ನನ್ನ ಹಾಗೇ ಕರೆಯುತ್ತಿದ್ದ)!! ನನ್ನದೊಂದು ಆಸೆಯನ್ನು ನೇರವೆರಿಸಿಕೊಡ್ತಿಯಾ ಮಗೂ?' ಎಂದೆನ್ನುತ್ತಲೇ ಕಣ್ತುಂಬಿಕೊಂಡ. ಅಜ್ಜಯ್ಯನ್ನೆಂದೂ ಹಾಗೆ ನೋಡಿದವನಲ್ಲ ನಾನು.ಸದಾ ಗಂಭೀರ ವದನ,ಶಿಸ್ತು, ಕೋಪಿಷ್ಠನಾಗಿದ್ದ ಅಜ್ಜಯ್ಯನನ್ನು ಹೀಗೆ ಊಹೆಯೂ ಮಾಡಿಕೊಂಡಿರಲಿಲ್ಲ. ಒಮ್ಮೇಲೆ ಮೆತ್ತಗಾಗಿಬಿಟ್ಟೆ ನಾನು..ನನ್ನ ಕಣ್ಣ ಒಪ್ಪಿಗೆಯೇ ಸಾಕೆಂಬಂತೆ ಅಜ್ಜಯ್ಯ ಮಾತು ಮುಂದುವರೆಸಿದ -'ಪುಟ್ಟಣ್ಣಾ!!ಇವೆಲ್ಲಾ ನಾನು ಬರೆದ ಕವನ,ಚುಟುಕು,ಕಥೆ,ನೀಳ್ಗಥೆ,ಕಾದಂಬರಿಗಳು ಕಣೋ.ಮೊದಲಿನಿಂದ ನನಗೆ ಕುವುಂಪೆ ತರಹ ಸಾಹಿತ್ಯದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಆಸೆಯಿತ್ತು. ಆದರೆ ನನ್ನ ಅಪ್ಪನಿಗೆ ನಾನು ಸಾಹಿತ್ಯ ಅದಿ-ಇದು ಅಂತ ಹೋದ್ರೆ ಹೊಟ್ಟೆ ತುಂಬಲ್ಲಾ ಅಂತಾ,ನನ್ನಾಸೆಗೆ ಚಿಕ್ಕಾಸೂ ಬೆಲೆ ಕೊಡದೆ ಮಾಸ್ತರಾಗಿ ಮಾಡಿಬಿಟ್ಟ.ಅಪ್ಪನ ಕಾಲವಾದ ಮನೆ ಜವಾಬ್ಧಾರಿ,ಹೆಂಡ್ತಿ-ಮಕ್ಕಳು ಇದೇ ಜೀವನವಾಯ್ತು,ಆದರೂ ನಾನು ಬರೆಯುವದನ್ನು ನಿಲ್ಲಿಸಿರಲಿಲ್ಲ.ನನ್ನ ವಯಸ್ಸಿನವರೆಲ್ಲಾ ಸಾಹಿತ್ಯದಲ್ಲಿ ದೊಡ್ಡ ದೊಡ್ಡ ಹೆಸರು ಮಾಡಿ ಕವಿಗಳೆನಿಸಿಕೊಂಡಾಗ,ನನ್ನ ನೋವನ್ನು ನಾನು ಹೊಟ್ಟೆಯಲ್ಲೇ ನುಂಗಿಕೊಂಡು ಬರೆಯುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ಆದರೆ ಆ ಆಸೆ-ಕನಸುಗಳು ಮತ್ತೆ ಚಿಗುರೊಡೆದಿದ್ದು ನಿನ್ನಮ್ಮನಿಂದ,ಅವಳ ಭರವಸೆ-ಪ್ರೋತ್ಸಾಹ-ಸಹಕಾರದಿಂದ.ನನ್ನ ಸ್ವಂತ ಮಕ್ಕಳಿಗೆ ಅರ್ಥವಾಗದ್ದು,ನನ್ನ ಸೊಸೆಯೆಂಬ ಪಟ್ಟ ಹೊತ್ತು ಬಂದು,ಮಗಳಾಗಿದ್ದ ನಿನ್ನಮ್ಮನಿಗೆ ಅರಿವಾಗಿತ್ತು. ಆದರೆ ವಿಧಿಯಾಟ ನೋಡು ಆ ದೇವರು ನನ್ನ ಸ್ಪೂರ್ತಿದೇವತೆಯನ್ನೇ ಬೇಗ ಕರೆಸಿಕೊಂಡುಬಿಟ್ಟ.ಇದನ್ನೆಲ್ಲಾ ಪುಸ್ತಕ ಮಾಡಿ ಪ್ರಕಟಣೆ ಮಾಡ್ತೀನಿ ಅಂತ ನಿನ್ನಮ್ಮ ಜೋಪಾನ ಮಾಡಿಟ್ಟಿದ್ಲು ಮಗಾ. ಇವತ್ಯಾಕೋ ನಿನ್ನಮ್ಮನ ನೆನಪು ತುಂಬಾ ಕಾಡ್ತಿದೆ,ಅವಳ ಮಗನಾಗಿ ನೀ ನನ್ನ ಆಸೆ ನೇರವೆರಿಸ್ತಿಯಾ ಅಂದ್ಕೊಂಡು ಹೇಳ್ತಾ ಇದಿನಿ.ಅವಸರವೇನಿಲ್ಲಾ,ನಿಧಾನಕ್ಕೆ ನಿನಗೆ ಪುರಸೊತ್ತು ಸಿಕ್ಕಾಗ ಮಾಡು.ನಾನು ಸಾಯೋದ್ರೊಳಗೆ,ಇಲ್ಲಾ ನಾನು ಸತ್ಮೇಲಾದ್ರೂ ನನ್ನಲ್ಲಡಗಿದ್ದ ಲೇಖಕನೀಚೆ ಬರಲಿ.ಸರಿ ಮಗೂ,ನೀನಿನ್ನು ಹೊರಡು ಊಟಕ್ಕೆ.ನನಗಿವತ್ತು ಬರೀಲಿಕ್ಕೆ ತುಂಬಾ ಇದೆ.ಊಟಾನ  ಇಲ್ಲೇ ತಂದಿಡು' ಎನ್ನುತ್ತಾ ನಿಡಿದಾದ ಉಸಿರೆಳೆದುಕೊಂಡ ಅಜ್ಜಯ್ಯ್ಯಾ,ತನ್ನ ದಪ್ಪ ಕನ್ನಡಕವನ್ನು ತೆಗೆದು ತನ್ನ ಪಂಚೆಯ ತುದಿಯಿಂದ ಒರೆಸತೊಡಗಿದ,ನನ್ನ ಪ್ರತ್ಯುತ್ತರಕ್ಕೂ ಕಾಯದೇ. ಮೇಲಿಂದ ಮೇಲೆ ಅಚ್ಚರಿಗೊಳಗಾಗಿ ನಿಷ್ಕ್ರಿಯಗೊಂಡಿದ್ದ ಮನವೀಗ ಬಿದ್ದುಕೊಂಡಿತ್ತು ಮಖಾಡೆ.ಅಜ್ಜಯ್ಯನಿಗೆ ಊಟ ತಂದಿಟ್ಟು,ನಾನೂ ಉಂಡು ಮಲಗಿದೆ.ತಲೆಯಲ್ಲೇನೋ ವಿಚಾರಧಾರೆಗಳು,ಎಲ್ಲಾ ಅಸಂಬದ್ಧವಾದ್ದು..
ರಾತ್ರೆಯೆಲ್ಲಾ ಸರಿಯಾಗಿ ನಿದ್ರೆಯಿಲ್ಲದ್ದಕ್ಕೆ, ಬೆಳಿಗ್ಗೆ ಏಳುವುದೂ ತಡವಾಯ್ತು. ಲಗುಬಗೆಯಿಂದೆದ್ದು ಕಚೇರಿಗೆ ಹೊರಡಲನುವಾದಾಗ,ಪಕ್ಕದ ಕೋಣೆಯಲ್ಲಿ ಕಿಟಾರನೇ ಕಿರುಚಿಕೊಂಡ ಅಜ್ಜಿ,ಒಮ್ಮೇಲೆ ಆಕಾಶ ತಲೆಮೇಲೆ ಬಿದ್ದಾಂಗೆ ಅಳತೊಡಗಿದ್ದಳು. ನಾನು,ಜ್ಯೋತಿ ಗಾಭರಿಬಿದ್ದು ಧಾವಿಸಿದವರೇ,ಅಲ್ಲಿನ ದೃಶ್ಯ ಕಂಡು ಕಲ್ಲಾಗಿದ್ದೆವು. ಅರ್ಧತಿಂದಿಟ್ಟ ಊಟ,ಕೈಯಲ್ಲಿಡಿದ ಪೆನ್ನು,ಜಾರಿಬಿದ್ದ ದಪ್ಪ ಕನ್ನಡಕ, ದೊಡ್ಡ ಗ್ರಂಥಕ್ಕೆ ತಲೆಯಿಟ್ಟ ಅಜ್ಜಯ್ಯ ಹೃದಯ ಸ್ತಂಭನದಿಂದ ಇನ್ನಿಲ್ಲವಾಗಿದ್ದರು.ನಿನ್ನೆಯಿದ್ದ ಅಜ್ಜಯ್ಯಾ ಇಂದಿಲ್ಲವೆಂಬ ಕಠುಸತ್ಯವನ್ನ ಅರಗಿಸಿಕೊಳ್ಳಲ್ಲಾಗದ ದಿಗ್ಭ್ರಮೆಯಲ್ಲೇ ಕಚೇರಿಗೆ ವಿಷಯ ತಿಳಿಸಿ ರಜಾ ತೆಗೆದುಕೊಂಡೆ. ಅಜ್ಜಯ್ಯನ ಕ್ರಿಯೆಗಳೆಲ್ಲಾ ಸಾಂಗವಾಗಿ ಮುಗಿದವು,ಅಜ್ಜಿಯೂ ದುಃಖದಿಂದ ಹೊರಬಂದಿದ್ದಳು.ಆದರೂ ನನಗೆ ಅಜ್ಜಯ್ಯನ ಕೋಣೆಗೆ ಕಾಲಿಡಲೇ ಭಯವಾಗುತ್ತಿತ್ತು,ನನ್ನೆದೆಯಲ್ಲಿದ್ದ ವಂಚಕ ನರಿಗಳು ಹೊಂಚುಹಾಕಲು ಕಾದಿದ್ದವು.. ಆದರೆ ನನ್ನ ಭಯವನ್ನು ತನ್ನದೇ ದೃಷ್ಟಿಯಲ್ಲಿ ಅರ್ಥೈಸಿಕೊಂಡ ನನ್ನ ಹೆಂಡತಿ ನನ್ನ ಛೇಡಿಸುತ್ತಾ 'ಸಾಕು ಸುಮ್ನೆ ಬನ್ರಿ ನನ್ಜೊತೆ.ಅಜ್ಜಯ್ಯನೇನೂ ಭೂತವಾಗೊಲ್ಲ,ನಾವು ಗೋಕರ್ಣದಲ್ಲಿ ಕರ್ಮಮಾಡಿದ್ವಲ್ಲಾ.ಅಜ್ಜಯ್ಯನ ಆತ್ಮಕ್ಕೆ ಶಾಂತಿ ಸಿಕ್ಕಿದೆ ಬನ್ನಿ ಸುಮ್ನೆ.ಆ ಕೋಣೆಯನ್ನು ಚೊಕ್ಕ ಮಾಡಿ ಬೇಡದ್ದನ್ನ ರದ್ದಿಗೆ ಕೊಡ್ಬೇಕು,ಆದರೆ ಅಲ್ಲಿರೋದೆಲ್ಲಾ ಬರೀ ಪುಸ್ತಕ,ನಂಗೇನೂ ತಿಳಿಯೊದಿಲ್ಲ ಬದನೆಕಾಯಿ. ಅದಿಕ್ಕೆ ಯಾವ್ದು ಬೇಕು,ಯಾವ್ದು ಬೇಡ ಒಂಚೂರು ಹೇಳಿ ಬನ್ನಿ.. ರಾಮ ರಾಮಾ ಎಂಥಾ ಧೂಳು,ಬರೀ ಜೇಡರ ಬಲೆ. ಇಲ್ಲಿ ಅಜ್ಜಯ್ಯಾ ಹೇಗಿರ್ತಿದ್ರೋ?'ಎಂದು ಗೊಣಗುತ್ತಾ ಒಳನಡೆದಳು. ಕಲಿತರೂ ಮೂಢನಂಬಿಕೆಯ ಮಾಯೆಯಿಂದ ಹೊರಬರದ ಮುಗ್ಧ ಹೆಣ್ಣಾಕೆ,ಅವಳ ಮಾತಿಗೆ ನಸುನಕ್ಕು ಅವಳನ್ನೇ ಹಿಂಬಾಲಿಸಿದೆ. ಮೂಗಿಗೆ ಧೂಳು ಬಡಿದು ಶೀತವಾಗದಿರಲೆಂದು ವಸ್ತ್ರ ಬೀಗಿದು,ಸೀರೆಯನ್ನೆತ್ತಿ ಸೊಂಟಕ್ಕೆ ಕಟ್ಟಿ,ಕೈಯಲ್ಲಿ ಪೊರಕೆ ಹಿಡಿದು ಕುರ್ಚಿಯ ಮೇಲೆ ಹತ್ತುನಿಂತಿದ್ದ ಜ್ಯೋತಿಯ ಕಂಡು ನಾನು-ಅಜ್ಜಿ 'ಸೂತಕದ ಮನೆ'ಯಲ್ಲಿ ಮೊದಲಬಾರಿಗೆಂಬಂತೆ ನಕ್ಕು,ನನ್ನವಳ ಕಿಡಿಗಣ್ಣಿಗೆ ಬಲಿಯಾಗಿದ್ದೆವು.
ಕಬ್ಬಿಣದ ಭಾರವಾದ ಆ ಪೆಟ್ಟಿಗೆಯನ್ನು ಎಳೆಯುವಾಗ ಕೈಯಾಕೋ ಅಗತ್ಯಕಿಂತ ಜಾಸ್ತಿಯೇ ನಡುಗುತ್ತಿತ್ತು. ದೊಡ್ಡ ದೊಡ್ಡ ಗ್ರಂಥಗಳನ್ನು,ಕಥೆ ಪುಸ್ತಕ,ಕಾದಂಬರಿಗಳನ್ನು ಒಂದೆಡೆ ಶುಭ್ರವಾಗಿ ಜೋಡಿಸಿಟ್ಟೆ,ಆ ಹಾಳೆಕಟ್ಟಿನ ಹೊರತು.ಅದನ್ನು ಭಾರವಾದ ನಡಗುವ ಕೈಗಳಿಂದೆತ್ತಿ,ಅವಳಿಗೆ ಕಾಣದಂತೆ ತೆಗೆದಿರಿಸಿದೆ.ಹೊರಬಂದು ಕುಳಿತವನೆದೆಯಲ್ಲಿ ನೂರಾರೂ ಕೀಚಕ ನರಿಗಳ 'ತಕಧಿಮಿತಾಂ'.. ರಾತ್ರಿಯೀಡಿ ಯೋಚಿಸಿಯೇ ಯೋಚಿಸಿದೆ,ಏನೋ ಒಂದು ನಿರ್ಧರಿಸಿದಂತೆ ಬೆಚ್ಚನೆ ಮಲಗಿಬಿಟ್ಟೆ.ನನ್ನ ಯಾವ ಕಿರಾತಕ ಬುದ್ಧಿಯ ಅರಿವಿರದೇ ಮುದ್ದಾಗಿ ಮಲಗಿದ್ದಳು ಜ್ಯೋತಿ ಪಕ್ಕದಲ್ಲಿ. 
ಎರಡು ವಾರದ ರಜೆಯಿಂದಾಗಿ ಇನ್ನೆರಡು ದಿನ ಕಚೇರಿಗೆ ಹೋಗುವ ರಗಳೆಯಿರಲಿಲ್ಲ.ಅದಕ್ಕೆ ಬೆಳಿಗ್ಗೆ ಕಾಫಿಯನ್ನು ಆಸ್ವಾದಿಸುತ್ತಾ,ದೈನಂದಿನ ಪತ್ರಿಕೆಯೊದುತ್ತಿದ್ದೆ.ಆಗ ಅಚಾನಕ್ ಆಗಿ ನನ್ನ ಕಾಕದೃಷ್ಠಿಗೆ ಬಿತ್ತು 'ಬರಹಗಳಿಗೆ ಆಹ್ವಾನ' ಎಂಬ ಪ್ರಕಟಣೆ.ಕೇಳಬೇಕಾ ನಿನ್ನೆಯಿಂದ ಕೀಚಕನಂತೆ ಕಾಡುತ್ತಿದ್ದ ನರಿಗಳು ಹೊರಗೊಡಿಬಂದಿದ್ದವು.ಒಂದು ಕಡೆ ಕುಳಿತು ಬರೆಯತೊಡಗಿದ ನನ್ನ ಕಂಡು ಜ್ಯೋತಿ ಹುಬ್ಬೇರಿಸಿ ಹೋಗಿದ್ದಳು.ಒಂದೆರಡು ತಾಸಾದರೂ ಅಲ್ಲೇ ಕುಳೀತು ಗೀಚುತ್ತಿದ್ದ ನನ್ನ ಕಂಡು ಕೂತುಹಲ ತಡೆಯಲಾಗದೇ 'ಏನ್ರೀ!!ಅಜ್ಜಯ್ಯನ ತರಹ ಆಗಿಬಿಟ್ರೆನೂ?' ಎಂದು ಕೇಳಿದಾಗ,ನನಗೆ ಚೂರಿಯಿಂದ ಚುಚ್ಚಿದಂತಾಗಿತ್ತು. ಕ್ಷಣಕೂಡ ಅಲ್ಲಿ ನಿಲ್ಲಲಾಗದೇ ಅಲ್ಲಿಂದೆದ್ದು ಹೊರಟ ನನ್ನನ್ನು ಅಚ್ಚರಿಯಿಂದ ನೋಡುತ್ತಿದ್ದರು ಅಜ್ಜಿ-ಹೆಂಡತಿ.ಬಾಲ್ಕನಿಯಲ್ಲಿ ತಂಪಾಗಿ ಬೀಸುತ್ತಿದ್ದ ತಂಗಾಳಿ, ನವಿರಾಗಿ ಮನ ಮುದಗೊಳಿಸುವಂತಿದ್ದ ಸಂಪಿಗೆ,ಯಾವೂದೂ ನನ್ನೆದೆಯುರಿಯನ್ನಾರಿಸಲಿಲ್ಲ.ಆದರೆ ಕೀಚಕತೆಗೆ ಭಾವನೆಗಳೆಲ್ಲಾ ಸುಲಭದಲ್ಲಿ ತಟ್ಟುವುದಿಲ್ಲ.ಕ್ಷಣದಲ್ಲಿ ಸಾವರಿಸಿಕೊಂಡು ಮತ್ತೆ ಬರೆಯಲು ಬಂದು ಕುಳಿತಿದ್ದೆ,ನನ್ನೆಲ್ಲಾ ಭಾವನೆಯ ಕೊಡವಿಕೊಂಡು...
ಇತ್ತಿಚಿಗೆ ಮನೆಯಲ್ಲಿ ನಾನು ಅಚ್ಚರಿಯ ವಿಷಯವಾಗಿದ್ದೆ.ಮರಳಿ ಕಚೇರಿ ಶುರುವಾಗುವವರೆಗೂ ಬರೆಯುತ್ತಲೇ ಇದ್ದೆ,ನಿಮಿಷವನ್ನೂ ವ್ಯಯಿಸದಂತೆ.ಹಾಗೆಯೇ ತಿಂಗಳುಗಳೇ ಕಳೆದವು.ಅದೊಂದು ದಿನ ನನ್ನ  ಹೆಸರಿಗೊಂದು ದೀಪಾವಳಿ ಸಂಚಿಕೆ,ಜೊತೆಗೆ ಆರುಸಾವಿರದ್ದೊಂದು ಚೆಕ್ಕು ಬಂದಿದ್ದು.ಪ್ರಸಿದ್ಧ ಮಾಸಪತ್ರಿಕೆಯಲ್ಲಿನ ಕಥಾಸ್ಪರ್ಧೆಯಲ್ಲಿ ನನ್ನ ಕಥೆ(?)ಗೆ ಪ್ರಥಮ ಸ್ಥಾನ ಬಂದಿದ್ದು ಕಂಡು ಜ್ಯೋತಿ ಕುಣಿದಾಡಿದ್ದಳು,ನಾನೂ ಖುಶಿಯಾದೆ.ವಿಷಯ ತಿಳಿದ ಅಜ್ಜಿಯೂ 'ನಿನ್ನ ಅಜ್ಜಯ್ಯನೂ ಕಥೆ ಕವನ ಎಲ್ಲಾ ಬರಿತಿದ್ರೂ ಕಣಾ,ಅದೆಲ್ಲಾ ನಂಗ್ ತಿಳಿತಿರ್ಲಿಲ್ಲ.ಆದರಾ ಕಾಲದಲ್ಲಿ ಇಷ್ಟು ಸಲೀಸಾಗಿ ಪತ್ರಿಕೆಗೆ ಕಳ್ಸದೆಲ್ಲಾ ಗೊತ್ತಿರ್ಲಿಲ್ಲ. ನೀನಾದ್ರೂ ಹೆಸ್ರು ತಗಾ.ಮೇಲಿರೋ ಅಜ್ಜಯ್ಯಾ ನಿಜ್ವಾಗಿ ಖುಶಿ ಪಡ್ತಾರೆ ಕಣಾ' ಎಂದಿನ ಗೊಗ್ಗರು ದನಿಯಲ್ಲಿ ಹೇಳಿದಾಗ ಮಾತ್ರ ಮೆಲ್ಲ ನಡುಗಿಬಿಟ್ಟೆ.ಅದೆಲ್ಲಾ ಕ್ಷಣವಷ್ಟೇ ನಂತರ ಯಾವ ಪಶ್ಚಾತ್ತಾಪದ ಛಾಯೆಯೂ ನನ್ನಲ್ಲಿರಲಿಲ್ಲ.ನನ್ನಾಕೆಯ ಮುಗ್ಧ ಸಂಭ್ರಮವನ್ನು ನಾನೂ ಆಚರಿಸಿದೆ..

ಮತ್ತೆರಡು ತಿಂಗಳು ಕಳೆದ ಮೇಲೆ ನಾನು ಒಂದು ಕಥಾಸಂಕಲನ 'ನಿನ್ನ ನೆನಪಲಿ'ಯನ್ನು ಬಿಡುಗಡೆ ಮಾಡಿದೆ.ಅದೇಷ್ಟು ಜನಪ್ರಿಯತೆ ಪಡೆಯಿತು ಅಂದರೆ ನನಗೇ ಅಚ್ಚರಿ ಹುಟ್ಟಿಸುವಷ್ಟು!ಜನಪ್ರಿಯತೆಯ ಜೊತೆಜೊತೆಗೆ ಹಣವನ್ನೂ ಬಾಚಿಕೊಂಡಿದ್ದೊಂದು ವಿಶೇಷ.ದಿನಪತ್ರಿಕೆಯಲ್ಲೆಲ್ಲಾ ನನ್ನದೇ ಸುದ್ದಿ 'ಎಲೆಮರೆಯ ಕಾಯಿ', 'ಮಿಂಚಿನ ಪ್ರತಿಭೆ',ಹೀಗೆ ದಿನಕ್ಕೊಂದು ಶಿರ್ಷೀಕೆಯಡಿ ನನ್ನ ಸಂದರ್ಶನ ಬರುತ್ತಲೇ ಇತ್ತು.ಅಜ್ಜಿ ಮತ್ತೆ ಹೆಂಡತಿ ಸಂತೋಷದಿಂದ ಉಬ್ಬಿದ್ದರು,ನಾನೇನೂ ಕಡೀಮೆಯಿರಲಿಲ್ಲ. ಆದರೆ ಈ ಸಂತೋಷ ಬಹಳ ಕಾಲ ಉಳಿಯಲಿಲ್ಲ.ಅಂದು ನನ್ನ ಕಥಾಸಂಕಲನಕ್ಕೆ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಿದಾಗಲಿನಿಂದ ನಾನು ನಾನಾಗಿರಲಿಲ್ಲ.ನನ್ನೊಳಗಿನ ಕಿರಾತಕ ನರಿಗಳು ಒಮ್ಮೇಲೆ ವಿಜೃಂಭಿಸಿದಂತಾಡಿ ಸತ್ತು ಬಿದ್ದುದರಿಂದ ನಾನು ಮೊದಲಿನಂತಾಗಿದ್ದೆ.ನನ್ನನ್ನೀಗ ಕಾಡುತ್ತಿದ್ದುದು ಬರೀ ನೋವು,ಬರೀ ಪಶ್ಚಾತ್ತಾಪದ ಬೇಗೆ..
 ಆದರಿಂದು ನಾನೊಂದು ನಿರ್ಧಾರ ಮಾಡಿದ್ದೆನೆ.ಎಲ್ಲವನ್ನೂ ಹೆಂಡರಿ-ಅಜ್ಜಿಯ ಮುಂದೆ ಹೇಳಿದ ಮೇಲೆ, ಪತ್ರಿಕಾಗೋಷ್ಠಿ ಕರೆಸಿ ಇರುವ ವಿಷಯ ಹೇಳಿಬಿಡುತ್ತೆನೆ. ನನ್ನನ್ನು ಹೊಗಳಿ ಬರೆದ ಪತ್ರಿಕೆಗಳೆಲ್ಲಾ,ನನ್ನ ಬಗ್ಗೆ ಭಯಾನಕವಾಗಿ ಚಿತ್ರಿಸಿದ್ರೂ, ಅಜ್ಜಿ-ಜ್ಯೋತಿಯ ದೃಷ್ಠಿಯಲ್ಲಿ ಸಣ್ಣವನಾದ್ರೂ ಚಿಂತಿಲ್ಲ. ಎಲ್ಲವನ್ನೂ ಹೇಳೇ ಬಿಡುತ್ತೆನೆ ಎಂದು ಮಾಡಿಕೊಂಡ ಸಮಾಧಾನ ಕ್ಷಣಮಾತ್ರದ್ದಾಗಿತ್ತು. ಕಾರಣ? ಮನಃಸಾಕ್ಷಿಯ ವಿರುದ್ಧವಾಗಿ ನಡೆದುದ್ದಕ್ಕೆ ನನ್ನೆದೆಯ ಗೂಡಲ್ಲಿ ಊಳಿಡುವ ನರಿಗಳು ಸುಮ್ಮನಿರ್ತಾವಾ? ನಾನೇ ಮಾಡಿಕೊಂಡ ಆತ್ಮವಂಚನೆ ಸಾಮಾನ್ಯದ್ದಾ? ಎಂಬೆಲ್ಲಾ ಪ್ರಶ್ನೆ ಬಂದೊಡೆ ಮನ ಬೆಂಕಿಯ ಗೂಡಾಗುತ್ತದೆ,ಮನ ಪಶ್ಚಾತ್ತಾಪದ ಕಿಡಿಯಲಿ ಬೆಂದು ಹೋಗುತ್ತಿದೆ.ಆದರೂ ಎಲ್ಲಾವನ್ನೂ ಎಲ್ಲರಿಗೆ ಹೇಳಿದ್ದೆನೆ,ಬಂದ ಹಣವನ್ನೆಲ್ಲಾ ವೃದ್ಧಾಶ್ರಮಕ್ಕೆ ಅಜ್ಜಯ್ಯನ ಹೆಸರಲ್ಲಿ ದಾನ ಮಾಡಿದ್ದೆನೆ. ಅಜ್ಜಯ್ಯನ ಉಳಿದ ಕಥೆ-ಕವನ-ಕಾದಂಬರಿ-ಪ್ರಭಂದದ ಪುಸ್ತಕಗಳನ್ನು ಪ್ರಕಟಿಸಿದ್ದೆನೆ..ಮನವೀಗ ಸಮಾಧಾನಗೊಂಡರೂ 'ಎದೆಗೂಡಲ್ಲು ಊಳಿಡೂವ ನರಿಗಳು' ನಾನು ಮಾಡಿದ ತಪ್ಪನ್ನು ಆಗಾಗ ನೆನಪಿಸುತ್ತಿರುತ್ತವೆ.
-ಶುಭಶ್ರೀ ಭಟ್ಟ

ಕಥೆಯಾದಳು ರಾಧೆ

(ಪ್ರತಿಲಿಪಿ ಕನ್ನಡದಲ್ಲಿ ಪ್ರಕಟವಾದ ಕಥೆ)



  'ಪಿಳ್ಳಂಗೋವಿಯ ಚೆಲ್ವ ಕೃಷ್ಣನಾ...' ಮೆಲ್ಲಗೆ ಹಾಡಿಕೊಳ್ಳುತ್ತಾ ಮಜ್ಜಿಗೆಯನ್ನು ಕಡೆಯುತ್ತಿದ್ದಳಾಕೆ.ಮಧುರವಾಗಿ ಮೆಲುದನಿಯಲ್ಲಿ ತೇಲಿ ಬರುತ್ತಿದ್ದ ಆಕೆಯ ಧ್ವನಿಗೆ ಅಕ್ಕ-ಪಕ್ಕದಲ್ಲಿನ ಗೋಪಿಕೆಯರಲ್ಲೆನೋ ಕದಲಿಕೆ,ಹೇಳಿಕೊಳ್ಳಲಾಗದ ಚಡಪಡಿಕೆ,ಕನವರಿಕೆ.ಕೊನೆಗೆ ತಡೆಯಲಾಗದೇ ತಮ್ಮ ಕೆಲಸಗಳನ್ನೆಲ್ಲಾ ಅರ್ಧಕ್ಕೆ ಬಿಟ್ಟು, ಅವಳ ಮನೆಯಲ್ಲಿ ನೆರೆದರು ಗೋಪಿಕೆಯರು. ಎಲ್ಲರೂ ಮಂತ್ರಮುಗ್ಧರಾದವರಂತೆ  ಅವಳ ಹಾಡಿಗೆ ತಲೆದೂಗುತ್ತಾ ನಿಂತಲ್ಲೇ ಶಿಲೆಯಾಗಿದ್ದರು..
 ಮಜ್ಜಿಗೆ ಕಡೆಯುವುದ ಮುಗಿಸಿ,ಹಾಡುತ್ತಲೇ ಹಿಂತಿರುಗಿದವಳಿಗೆ ಕಾಣಿಸಿದ್ದು ಮನೆಯೆಲ್ಲಾ ನೆರೆದಿರುವ ಗೋಪಿಯರು.ಅವಳಿಗದು ಅಚ್ಚರಿಯುಂಟು ಮಾಡಲಿಲ್ಲ, ಬದಲಿಗೆ ಮುಜುಗರವಾಯ್ತೋ ಎಂಬ ಭಾವದಿಂದ ಮೆಲ್ಲಗೆ ಕೇಳಿದಳು 'ಸಹೋದರಿಯರೇ!ನನ್ನಿಂದ ತಮಗೇನಾದರೂ ಉಪದ್ರವವಾಯಿತೇ?'. ಅದನ್ನು ಮೊದಲೇ ಗ್ರಹಿಸದಂತೆ ಗೋಪಿಯೊಬ್ಬಳು ಗುಂಪಿನಿಂದ ಮುಂದೆ ಬಂದು 'ಸಹೋದರಿ! ವರುಷವೇ ಕಳೆಯಿತು.ಇನ್ನು ನಮ್ಮ ಮುದ್ದು ಕೃಷ್ಣನ ದರ್ಶನವಾಗುವುದ್ಯಾವಾಗ?' ಎಂದು ಕೇಳಿದಳು. ಅದಕ್ಕೇನೂ ಮಾತನಾಡದೇ ಮುಗುಳುನಗುತ್ತಾ ತನ್ನ ಕೆಲಸಕ್ಕೆ ಹಿಂತಿರುಗಿದವಳ ಕಣ್ಣಲ್ಲಿ ತೆಳ್ಳನೆಯ ಪನ್ನೀರ ಪೊರೆಯಿತ್ತು.ತಮ್ಮದೇ ಭಾವದ ಗುಂಗಲ್ಲಿರುವ ಗೋಪಿಯರಿಗದು ಕಾಣಿಸಲೂ ಇಲ್ಲ.
 ಗೋಪಿಯರೆಲ್ಲಾ ತಮ್ಮದೇ ಆದ ಮಧುರ ನೆನಪುಗಳನ್ನು ಮೆಲಕು ಹಾಕುತ್ತಾ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಇವಳ ಕೈ ದೈನಂದಿನ ಕೆಲಸ ಮುಂದುವರೆಸುತ್ತಿದ್ದರೂ,ಮನವು ಹಿಂದಕ್ಕೊಡಿತು..
              -ನೆನಪು:೧-
 ಅದೊಂದು ಸುಂದರ ಸಂಜೆ ಜೀವನದಲ್ಲಿ ಮರೆಯಲಾಗದ ಮೊದಲ ಮಧುರ ಸಂಜೆ. ಎಲ್ಲಾ ಗೋಪಿಯರೊಡಗೂಡಿ ಕಾತ್ಯಾಯಿನಿದೇವಿಯ ಪೂಜೆಗೆಂದು ಹೂವನ್ನು ತರಲು ಕಾನನಕ್ಕೆ ಬಂದಿದ್ದೆ. ಹೂವನ್ನು ಕೊಯ್ಯುತ್ತಿದ್ದಾಗಲೇ ಕೇಳಿಸಿತ್ತು ಆ ಸುಮಧುರವಾದ ಕೊಳಲನಾದ. ಅದ ಕೇಳಿ ಮೈಯೆಲ್ಲಾ ಸಂಚಲನಗೊಂಡಿತ್ತು, ಮನವ್ಯಾವುದೋ ಸಮ್ಮೋಹಿನಿಗೆ ಒಳಗಾದಂತಿತ್ತು, ಗೋಪಿಯರ ಮೊಗವಾಗಲೇ ಕೆಂದಾವರೆಯಂತೆ ಅರಳಿಕೊಂಡಿತ್ತು.ಆ ಕೊಳಲಗಾನದ ಜಾಡುಹಿಡಿದು ಹುಡುಕುತ್ತಾ ಹೊರಟೆವು.ಆಗಲೇ ಕಾಣಿಸಿದ್ದು ಆ ಶ್ಯಾಮಸುಂದರಾಂಗ. ಅವನ ಮುದ್ದು ನೀಲ ಕೈಗಳು ಕೊಳಲೊಡನೆ ತಿಲ್ಲಾನ ಹಾಡುತಿರೆ,ತನ್ನ ಪುಟ್ಟ ಕೆಂಬಣ್ಣದ ತುಟಿಯನ್ನು ಆ ಕೊಳಲತುದಿಗಿರಿಸಿದ್ದ,ಅರಳುಗಣ್ಣನ್ನು ಅರೆತೆರೆದು ಆಲದಮರದ ಕೆಳಗೆ ಪವಡಿಸಿದ್ದ.ಕೆಂಪಾದ ಅವನ ಪುಟ್ಟ ಪಾದವನ್ನು ಪುಟ್ಟಕರುವೊಂದು ಮೆಲ್ಲ ಮೂಸುತ್ತಿತ್ತು.ಆ ಸುಮಧುರ ಗಾಯನಕ್ಕೆ ತಂಗಾಳಿ ತಂಬೂರಿ ಮೀಟುತ್ತಿರೆ,ದುಂಬಿಯೊಂದು ಶೃತಿ ತೀಡುತ್ತಿತ್ತು, ಸುತ್ತಲಿನ ವೃಕ್ಷಗಳೆಲ್ಲಾ ಪ್ರೇಕ್ಷಕರಾಗಿ ತಲೆದೂಗತೊಡಗಿದ್ದವು.ಪಶು-ಪಕ್ಷಿಗಳೆಲ್ಲಾ ಪಕ್ಷಭೇದ ಮರೆತು ಸುತ್ತ ನೆರೆದು ಗಾಯನಕ್ಕೆ ಕಿವಿಯಾಗಿದ್ದವು,ಎತ್ತ ನೋಡಿದರೂ ಗೋಪಿಯರ್ಯಾರೂ ಕಾಣಬರಲಿಲ್ಲ.ಮೊದಲ ಬಾರಿಗೆ ಆ ದಟ್ಟ ಕಾನನದಲ್ಲಿ ಭಯವೂ ಆಗಲಿಲ್ಲ,ಗಾಭರಿ ಬೀಳಲೂ ಇಲ್ಲ.ಆದರೆ ಶ್ಯಾಮಸುಂದರನ ಸನಿಹ ಬರುವ ಧೈರ್ಯ ಸಾಲದೇ ನಿಂತಲ್ಲೇ ಶಿಲೆಯಾಗಿದ್ದೆ. ಏಲ್ಲೋ ಗಾಢ ಕನಸಿನಲ್ಲಿರುವಂತೆ ಭಾಸವಾಗುತ್ತಿತ್ತು.
   ಒಮ್ಮೇಲೆ ಎಚ್ಚೆತ್ತೆ,ಸುದೀರ್ಘವಾದ ನಿದ್ದೆಯಿಂದೆದ್ದಂತೆ. ಸುತ್ತ ನೋಡಿದರೆ ನಾನಿದ್ದುದು ನನ್ನ ಮನೆಯಲ್ಲೇ..ನಿಜಕ್ಕೂ ಗಾಭರಿಬಿದ್ದೆ. 'ಅರೆರೆ !! ಇದೇನಿದು.ಹೇಗೆ ಮನೆಗೆ ಬಂದೆ ನಾನು?ಮನದಲ್ಲಿ ಅಸ್ಪಷ್ಟ ನೆನಪು,ಎಲ್ಲಾ ಕಳೆದ ಕನಸಿನಂತೆ.ಅಂದರೇ ಆ ಶ್ಯಾಮಸುಂದರ ಕೃಷ್ಣನೇ ನನ್ನನ್ನಿಲ್ಲಿಗೇ ತಂದುಬಿಟ್ಟನೇ? ಅಥವಾ ಗೋಪಿಯರು?.. ಹಾಗಾದರೆ ಕೊಳನೂದಿಯಾದ ಮೇಲೆ ಕೃಷ್ಣ ತುಂಟನಗುವ ಬೀರುತ್ತಾ ನನ್ನೆಡೆಗೆ ಬಂದಿದ್ದು,ನನ್ನ ಅಂಗೈ ಹಿಡಿದು ಮೆಲ್ಲ ಚುಂಬಿಸಿದ್ದು, ಅನಾಮತ್ತಾಗಿ ನನ್ನನ್ನೆತ್ತಿಕೊಂಡು ಜೋಕಾಲಿ ತೂಗಿಸಿದ್ದು,ಅವನ ಹೆಗಲಿಗೆ ತಲೆಯಿಟ್ಟಾಗಲಿನ ಆ ಮಧುರಾನುಭೂತಿ ಎಲ್ಲವೂ ಭ್ರಮೆಯೇ?ಎಲ್ಲವೂ ಕನಸೇ?' ಎನೂ ಅರಿವಾಗಲಿಲ್ಲ. ಆದರೆ ಒಂದಂತೂ ಸತ್ಯ 'ಆ ಶ್ಯಾಮಸುಂದರ ಮುರಳಿ ಕೃಷ್ಣ ನನ್ನವ.ನನ್ನೊಳಗೇ ಇದ್ದಾನೆ ಅವ,ಕಣಕಣದಲ್ಲೂ'. ಹೀಗೆ ಅಂದುಕೊಂಡಾಗ ಮಾತ್ರ ಹೃದಯತುಂಬಿ ಬಂತು,ಅವ್ಯಕ್ತಭಾವದಿಂದ ಮನ ಕುಣಿಯುತ್ತಲಿತ್ತು.ಮೆಲ್ಲನೆ ಮಂಚವಿಳಿದು ಹೊರಬಂದೆ ಸುತ್ತಲೂ ಕತ್ತಲಾವರಿಸುತ್ತಿತ್ತು...
          -ನೆನಪು:೨-
 ಯಮುನಾತೀರದಲ್ಲಿನ ಒಂದು ಸುಂದರ ಮುಂಜಾವು..ಗೋಪಾಲಕರೆಲ್ಲಾ ಹಸುಗಳನ್ನು ಮೇಯಿಸಲು ಕಾಡಿಗೆ ಹೊರಟಾಗಿತ್ತು,ಗೋಪಿಯರಿಗೆ ತಮ್ಮ ತಮ್ಮ ಮನೆಕೆಲಸದಲ್ಲಿ ಮಗ್ನರಾಗಿದ್ದರು.. ನಾನು ಒಬ್ಬಂಟಿಯಾಗಿ ನೀರು ತರಲು ಯಮುನೆಗೆ ಬಂದಿದ್ದೆ.ತಂದಿದ್ದೆರಡು ಕೊಡದೊಳಗೆ ನೀರು ತುಂಬಿ ತಿರುಗಿದೆ, ತಲೆತಿರುಗಿ ಬಿಳುವಂತಾಗಿ ಸಾವರಿಸಿಕೊಂಡೆ.ಕಾರಣ!! ತುಂಟನಗು ಬೀರುತ್ತ,ಕೈಯಲ್ಲಿ ಕೊಳಲ ಹಿಡಿದು, ಆ ಮೃದುಲ ಕುತ್ತಿಗೆ ಬಾಗಿಸಿದಂತೆ ನಿಂತಿದ್ದನಲ್ಲಿ ನನ್ನ ಮನದೊಡೆಯ ಶ್ಯಾಮಸುಂದರ ಕೃಷ್ಣ..ಮಾತು ಮುಂದೆ ಬರಲೊಪ್ಪದೆ ಹಠ ಮಾಡುತ್ತಿತ್ತು,ಮೌನ ಜೀಕುತ್ತಿತ್ತು,ನೇರಾನೇರ ಅವನೆಡೆಗೆ ನೋಡಲು ಆಗದಂತೆ ನಾಚಿಕೆ ಮುದುರಿಬಿದ್ದಿತ್ತು..ಸುಮ್ಮನೆ ಶಿಲೆಯಾಗಿ ನಿಂತುಬಿಟ್ಟಿದ್ದೆ ನಾಚಿಕೆಯ ಮೊಟ್ಟೆಯಾಗಿ.ಅವನೇ ಮುಂದೆ ಬಂದು ಮೆಲ್ಲನೆ ತಲೆಮೇಲೆ ಪವಡಿಸಿದ್ದ ಕೊಡವನ್ನಿಳಿಸಿದ, ಅಪ್ರಯತ್ನವಾಗಿ ಸೊಂಟದ ಮೇಲೊರಗಿದ್ದ ಇನ್ನೊಂದು ಕೊಡ ನೆಲಕ್ಕಿಳಿಯಿತು.ಅಲ್ಲೇ ಕುಳಿತುಕೊಳ್ಳಲು ಹವಣಿಸಿದ ಕೃಷ್ಣ,ಮನ ತಕ್ಷಣ ಜಾಗೃತವಾಯಿತು. 'ಅಯ್ಯೋ ಪ್ರಭು! ನಂದರಾಜರ ಕುವರ ತಾವು.ಇಂತಹ ಕಲ್ಲು ಜಾಗದಲ್ಲಿ ಕುಳಿತರೆ ಆ ಕೋಮಲ ದೇಹಕ್ಕೆಷ್ಟು ನೋವಾಗಬಹುದು' ಎಂದು ಮನದಲ್ಲೇ ಹಲುಬುತ್ತಿದ್ದೆ ಕಾರಣ, ಮಾತೇ ಹೊರಬರುತ್ತಿರಲಿಲ್ಲ.ನಾನೇ ಮುಂದೆ ಬಾಗಿ ಕಲ್ಲು ಚಪ್ಪಡಿಯ ಮೇಲೆ ನೀರ ತರಲು ತಂದಿದ್ದ ಸೀರೆಯ ಸಿಂಬೆಯನ್ನಿಟ್ಟು ಕೃಷ್ಣನೆಡೆಗೆ ನೋಡಿದೆ. ಅವನು ಮೆಲ್ಲನೆ ಮುಗುಳುನಗುತ್ತಾ ನನ್ನ ಕೈಯನ್ನು ತನ್ನ ಕೆಂಪು ಕೈಯೊಳಗೆ ತೆಗೆದುಕೊಂಡು,ನನ್ನನ್ನೇ ಅಲ್ಲಿ ಕುಳ್ಳಿರಿಸಿ,ನನ್ನ ಕಾಲಬಳಿ ತಾನು ಕುಳಿತುಕೊಂಡ.ಒಂದು ಕ್ಷಣ ನನ್ನೆಡೆ ತನ್ನ ನಿರ್ಮಲ ಕಂಗಳಿಂದಾ ನೋಡಿ ಮೆಲ್ಲ ನನ್ನ ಮಡಿಲಲ್ಲಿ ತಲೆಯಿರಿಸಿದ. 'ಆಹಾ! ನಾನೆಂತಾ ಭಾಗ್ಯವತಿ..ನನ್ನ ಆರಾಧ್ಯದೈವ ನನ್ನ ಮಡಿಲಲ್ಲಿ' ಮನದಲ್ಲಿ ಗಿರಿನವಿಲು ಕುಣಿಯುತ್ತಿತ್ತು,ಮುಖದಲ್ಲಿ ಸಾವಿರಾರು ಹಣತೆಯ ಬೆಳಕಿನ ಕಳೆ, ಬೇಡವೆಂದರೂ ಧುಮ್ಮಿಕ್ಕುತ್ತಿದ್ದ ಸಂತಸದ ನೀರ್ಗೊಳ.ಮೆಲ್ಲನೆ ನನ್ನವನ ತಲೆ ನೇವರಿಸತೊಡಗಿದೆ. ಅವ ನನಗೆ ಮಗುವಾದಂತೆ ನಾನವನಿಗೆ ತಾಯಾಗತೊಡಗಿದೆ. ಇಹಪರದ ಅರಿವಿರಲಿಲ್ಲ.
         -ನೆನಪು:೩-
 ಶರಧೃತುವಿನ ಒಂದು ಮಧುರ ಮುಸ್ಸಂಜೆ..ಎಲ್ಲೆಲ್ಲೂ ಪಸರಿಸಿದ ಶ್ರೀಗಂಧದ ಪರಿಮಳ,ಗೂಡು ಸೇರಲು ಹಾರತೊಡಗಿರುವ ಹಕ್ಕಿಗಳ ಚಿಲಿಪಿಲಿ ಕಲರವ,ಕೊಟ್ಟಿಗೆಯಲ್ಲಿರುವ ಕರುಗಳಿಗಾಗಿ ಧಾವಿಸಿ ಬರುತ್ತಿರುವ ತಾಯಿಹಸುವಿನ ಮುಗ್ಧ ಕೂಗು,ಗೋಪಿಕೆಯರ ಪಿಸುದನಿ-ನಸುನಗು, ಮಾತೆಯರ ಮೆಲುದನಿಯ ಜೋಗುಳ, ಹೀಗೇ ಇಡೀ ನಂದನವನವೇ ಹೊಸತನವ ಹೊತ್ತುಕೊಂಡಂತಿತ್ತು. ಸಂಜೆ ಸೂರ್ಯ ತನ್ನ ದೈನಂದಿನ ಕೆಲಸ ಮುಗಿಸಿ ಇಳೆವೆಣ್ಣಿನ ಸೆರಗ ಹಿಂದೆ ವಿರಮಿಸಲು ಮರೆಯಾಗಿದ್ದ. ಆಗ ತಾನೇ ಮಿಂದು ಸಂಧ್ಯಾವಂದನೆ ಮುಗಿಸಿ ಬಂದವನಂತೆ ಶುಭ್ರನಾಗಿದ್ದ ಚಂದ್ರ,ತನ್ನ ಬೆಳದಿಂಗಳ ತಂಪನ್ನು ಸುತ್ತಲೂ ಪಸರಿಸಿದ್ದ.ಎನೋ ಅರಿಯದ ಭಾವ, ಒಳಗೊಳಗೆ ಹೇಳಲಾಗದ ಚಡಪಡಿಕೆ, ಯಾರದೋ ಕಾತರಿಕೆಯಲ್ಲಿದ್ದ ನನ್ನ ಮನವೂ ತೂಗುತ್ತಲೇ ಇತ್ತು. 
  ಆಗಲೇ ಕೇಳಿಸಿತ್ತು ಆ ದನಿ,ನನ್ನಿಯ ಶ್ಯಾಮಸುಂದರನ ಕೊಳಲದನಿ. ಒಂದು ಕ್ಷಣ ನನ್ನ ನಾ ಮರೆತೆ,ಆ ಇಳಿಹೊತ್ತಲ್ಲಿ ನನ್ನವನರಸುತ್ತಾ ಹೊರಬಂದೆ. ಯಾರ ಭಯವೂ ಇಲ್ಲದಂತೆ,ಯಾರ ಅಡೆತಡೆಗೂ ಜಗ್ಗದಂತೆ ನಡೆದೇ ನಡೆದೇ,ಮುಗ್ಗರಿಸಿದೆ, ಸಾವರಿಸಿಕೊಂಡು ಮತ್ತೆ ಮತ್ತೆ ಹುಡುಕಿದೆ.. ಅದೋ!! ಕಾಣಿಸಿದ ನನ್ನೊಡೆಯ ಎಂದಿನ ತನ್ನ ತುಂಟುನಗುವ ಮೊಗದಲ್ಲಿಟ್ಟು. ಆದರೆ ಮನಸ್ಸಿಗ್ಯಾಕೋ ಕಸಿವಿಸಿಯಾಯ್ತು,ಕಾರಣ ನನಗಿಂತ ಮೊದಲೇ ಅಲ್ಲಿ ನೆರೆದಿದ್ದ ಗೋಪಿಯರಾ?? ಅರಿಯದಾದೆ. ಸುಮ್ಮನೆ ನಿಂತಲ್ಲೇ ನಿಂತಿದ್ದೆ ನನ್ನ ಪ್ರೇಮಮೂರ್ತಿಯ ನೆನೆಯುತ್ತಾ.ಆಗ ಗೋಪಿಯರ ನಡುವೆಯಿಂದ್ದೆದ್ದ ಕೃಷ್ಣ,ಮೆಲ್ಲ ನನ್ನ ಕೈಹಿಡಿದು ಬೇರೆಡೆ ಕರೆದೊಯ್ದ.ಗೋಪಿಕೆಯರಲ್ಲೆನೋ ಕದಲಿಕೆ..ನಾನೋ ಅತ್ಯಾನಂದದಿಂದ ಬೀಗುತ್ತಿದ್ದೆ!!ಮನ ಹೂವಾಗಿ ಘಮಿಸುತ್ತಿತ್ತು. ನನ್ನ ಹೃದಯೇಶ್ವರನ ಮಗ್ಗುಲಲ್ಲೇ ಕುಳಿತ ನನಗೆ ಮಾತೇ ಹೊರಡುತ್ತಿರಲಿಲ್ಲ.ಸುಮ್ಮನೇ ಮಾಂತ್ರಿಕ ಮೋಡಿಗೊಳಗಾದವಳಂತೆ ಶ್ಯಾಮಸುಂದರ ಪ್ರೇಮಮುರ್ತಿಯ ಆರಾಧಿಸುತ್ತಾ ಕುಳಿತುಬಿಟ್ಟಿದ್ದೆ. ಆಗ ಕೃಷ್ಣ ಅನಾಮತ್ತಾಗಿ ನನ್ನೆತ್ತಿದವನೇ ಬೆಳದಿಂಗಳು ನಿಚ್ಚಳವಾಗಿ ಹರಡಿದ್ದ ಬಯಲಿಗೆ ಕರೆತಂದ.ಅಲ್ಲಿ ನನ್ನ ಕಣ್ಣೇ ನಂಬಲಸಾಧ್ಯವಾದ ದೃಶ್ಯವಿತ್ತು.
   ವೃತ್ತಾಕಾರದಲ್ಲಿ ನೆರೆದಿರುವ ಗೋಪಿಕೆಯರು,ಪ್ರತೀ ಗೋಪಿಯರಿಗೊಬ್ಬ ಕೃಷ್ಣ..ಇದೇನೋ ಮಾಯೆಯೋ?ಭ್ರಮೆಯೋ?ಇದೆಲ್ಲಾ ಹೇಗೆ ಸಾಧ್ಯ? ನನ್ನ ಪ್ರಶ್ನೆಗೆ ಕೃಷ್ಣನ ತುಂಟನಗುವೇ ಉತ್ತರವಾಯ್ತು..ನನ್ನ ಜೊತೆಯಿರುವವನೇ ನಿಜವಾದ ಕೃಷ್ಣ,ಅವರ ಜೊತೆಗಿರುವುದೆಲ್ಲಾ ಬರೀ ಮಾಯೆ ಎಂದು ಸಮಾಧಾನಿಸಿಕೊಂಡೆ.. ತನುಮನವೆಲ್ಲಾ ಕೃಷ್ಣನಿಗೆ ಶರಣಾಗಿತ್ತು,ನನ್ನೊಡೆಯನ ಕೈಯಲ್ಲಿ ನಾನು ಕೊಳಲಾಗಿದ್ದೆ.ಅವ ಮೆಲ್ಲ ಮೀಟುತಿರೆ,ರಾಗವಾಗಿ ಹರಿದೆ,ನಾಚಿ ನೀರಾದೆ, ಪ್ರೇಮಸುಧೆಯ ಹರಿಸಿ ನವಿಲಂತೆ ಹಗುರಾದೆ..ಹೀಗೆ ವರ್ಣಿಸಲಸದಳವಾಗಿತ್ತು ಆ ಹುಣ್ಣಿಮೆಯ ರಾತ್ರಿ.ಮರೆಯಲಾಗದ ಸಿಹಿನೆನಪುಗಳ ಚೀಲಗಳನ್ನ ಹೊತ್ತು, ಒಲ್ಲದ ಮನಸ್ಸಿಂದ  ಮನೆಗೆ ಹಿಂತಿರುಗಿದೆ..ಮೊದಲಬಾರಿಗೆ ನಿಶಾದೇವಿ ತನ್ನನ್ನು ಸೂರ್ಯನಿಗೆ ಒಪ್ಪಿಸಿಕೊಂಡು ಬೆಳಗುವದ ಕಂಡಿದ್ದೆ..
    -ನೆನಪು:೪-
ಬೆಳಿಗ್ಗೆ ಇದ್ದಾಗಿನಿಂದ ಮನವ್ಯಾಕೋ ಸುಖಾಸುಮ್ಮನೆ ಹೊಯ್ದಾಡುತ್ತಿತ್ತು..ಆಗಲೇ ಬಂದಳಲ್ಲಾ ಕನಕೆ ಘನಘೋರ ಸುದ್ದಿಯೊಂದ ಹೊತ್ತು.ನಾಲ್ಕು ಕಡೆಯಿಂದ ಸಿಡಿಲು ಬಡಿದ ಅನುಭವ,ಆ ಸಿಡಿಲ ರಭಸಕ್ಕೆ ಸುಟ್ಟು ಕರಕಲಾಗಿ ಕುಸಿವ ತೆಂಗಿನಮರದಂತೆ ಕುಸಿದುಬಿದ್ದೆ.ಸುದ್ದಿ ತಂದ ಕನಕೆಯ ಸ್ಥಿತಿಯೇನೂ ಇದಕ್ಕಿಂತ ಭಿನ್ನವಾಗಿರಲಿಲ್ಲ.ನನಗೆ ಸಾಂತ್ವನ ಹೇಳಲು ಯಾರೂ ಮುಂದಾಗಲಿಲ್ಲ,ಒಬ್ಬರಿಗೊಬ್ಬರು ಸಾಂತ್ವನ ಹೇಳುವ ಸ್ಥಿತಿಯಲ್ಲಾರೂ ಇರುವಂತೆ ಕಾಣಲಿಲ್ಲ.ಅಸಲಿಗೆ ನಮ್ಮ ಮುದ್ದುಕೃಷ್ಣ ನಮ್ಮನಗಲಿ ಅಕ್ರೂರನೊಟ್ಟಿಗೆ ದ್ವಾರಕೆಗೆ ತೆರಳುತ್ತಾನೆಂಬುದನ್ನು ಜೀರ್ಣಿಸಿಕೊಳ್ಳಲಾಗದೇ ಅಳುತ್ತಾ ಕುಳಿತಿದ್ದರೆಲ್ಲರೂ.ಎಲ್ಲರಂತೆ ಬಿಕ್ಕಳಿಸಿ ಅಳಲೂ ಬಾರದೇ ನೋವನುಂಗಿ ತಟಸ್ಥಳಾಗಿ ಕುಳಿತಿದ್ದೆ ಗರಬಡಿದಂತೆ.ಮನಸ್ಸಿಗೆ ದಟ್ಟ ಕಾರ್ಮೋಡ ಕವಿದಂತಿತ್ತು.
  ಮರುದಿನ ಕೃಷ್ಣ ಅಕ್ರೂರ-ಬಲರಾಮರೊಡಗೂಡಿ ದ್ವಾರಕೆಯತ್ತ ಪ್ರಯಾಣ ಬೆಳೆಸಲು ಸಿದ್ಧನಾಗಿದ್ದ.ಇಡೀ ನಂದನವನದ ಪ್ರತೀ ಜೀವಿಯೂ ನೆರೆದಿದ್ದರಲ್ಲಿ, ಹಸುಕರುಗಳೂ ಸಹ..ನಾನೂ ಬರಲಾರದ ಮನಸ್ಸಿಂದ ಗೋಪಿಯರ ಒತ್ತಾಯಕ್ಕೆ ಕಟ್ಟುಬಿದ್ದು,ಮೆಲ್ಲ ಕಾಲೆಳೆಯುತ್ತಾ ಎಲ್ಲರಿಗಿಂತ ಹಿಂದೆ ಮೂಲೆಯಲ್ಲೊಂದು ಮರಹಿಡಿದು ನಿಂತಿದ್ದೆ.ನನ್ನ ಪ್ರೇಮದೈವದ ದರುಶನಕ್ಕೆ ಇದೇ ಕೊನೆಯೆನೋ ಎಂದು ಮನ ಕೇಡುಬಗೆಯುತ್ತಿರೆ, ಎದೆಯಲ್ಲೆಲ್ಲಾ ಅವಲಕ್ಕಿ ಕುಟ್ಟಿದ ಅನುಭವ. ರಥದಲ್ಲಿ ಬರುತ್ತಿದ್ದ ಕೃಷ್ಣ ಸಮೀಪಿಸುತ್ತಿರೆ ಮನಕ್ಕಿನ್ನೂ ತಡೆದುಕೊಳ್ಳಲಾಗದೇ ರಥದ ಬಳಿ ಇನ್ನಿಲ್ಲದಂತೆ ಓಡಿ,ಎಲ್ಲರ ನಡುವೆಯಿಂದ ತೂರಿಕೊಂಡು ಮುಂದೆ ಬಂದು ನಿಂತಿದ್ದೆ. 'ಕೃಷ್ಣಾ!!ನನ್ನೊಡೆಯಾ..ನನ್ನನ್ನಗಲಿ ಹೋಗುವೇಯಾ?' ಮನ ಚೀರಿ ಚೀರಿ ಅಳುತ್ತಲಿತ್ತು,ಮತ್ತೆ ನಾಲಿಗೆ ಮುಷ್ಕರ ಹೂಡಿತ್ತು ಮಾತು ಹೊರಬರದಂತೆ. ಅದನ್ನರಿತಂತೆ ಕೃಷ್ಣ 'ಅಳಬೇಡಾ ಸಖಿ!!ಮತ್ತೆ ಬರುವೆ..ಹೋಗಿಬರಲೇ ನನ್ನ ರಾಣಿ?ಎಂದು ಕಣ್ಣಲ್ಲೇ ಸಂಭಾಷಿಸಿದ..ಮೆಲ್ಲ ಹಿಂದೆ ಸರಿದೆ,ರಥ ಮುಂದಕ್ಕೋಡಿತು..ಮರೆಯಾಗುವ ತನಕವೂ,ನಂತರವೂ ಅಲ್ಲಿಯೇ ನಿಂತಿದ್ದೆ ಯಾವುದರ ಪರಿವೆಯಿಲ್ಲದೆ..ನನ್ನ ಪ್ರೇಮದರಸ ಕೃಷ್ಣನಿಲ್ಲದ ಮತ್ತೊಂದು ಘಟ್ಟ ಶುರುವಾಗಿದ್ದು ಹಾಗೇಯೇ ಅರಿವಿಲ್ಲದೇ..
--------
'ಅಯ್ಯೋ! ಇದೇನಿದು ರಾಧಾ,ಇಂತಾಪರಿ ಮಳೆಯಲ್ಲಿ ನೆನೆಯುತ್ತಾ ಕುಳಿತಿದ್ದೆಯಲ್ಲಾ?ಸಾಕಿನ್ನು ಒಳಗೆ ನಡೆ ಸಖಿ,ಅನಾರೋಗ್ಯವಾದೀತು' ಎಂಬ ಮನದ ದುಗುಡವನ್ನರಿತ ಗೋಪಿಯೊಬ್ಬಳ ಮಾತಿಗೆ ತಟ್ಟನೆ ಎಚ್ಚರವಾಯ್ತು..ನೆನಪಿನ ಮಳೆಯಿಂದ ತೋಯ್ದು ತಂಪಾದವಳಿಗೆ,ಬಾಹ್ಯ ಮಳೆಯ ಅನುಭವವಾಗದಿದ್ದುದು ಅಚ್ಚರಿಯೆನಲ್ಲ.ಮೆಲ್ಲ ಒಳನಡೆದಳು ರಾಧೆ ನೆನಪುಗಳ ಜೋಳಿಗೆ ಕಟ್ಟಿಕೊಂಡು..
  'ಶ್ಯಾಮಸುಂದರ ಇಂದು ಬಂದಾನು,ನಾಳೆ ಬಂದಾನು'ಎಂಬ ನಂಬಿಕೆಯೊಡನೆ ಎಲ್ಲರೂ ಕಾಲತಳ್ಳುತ್ತಿದ್ದರು..ಬೆಳಿಗ್ಗೆ ಇಷ್ಟ ದೇವರ ಪೂಜೆಗೆ ಹೂ ಕೊಯ್ಯುತ್ತಿದ್ದ ರಾಧೆಯ ಕೈ ಅಗತ್ಯಕ್ಕಿಂತ ಜಾಸ್ತಿಯೇ ನಡುಗುತ್ತಲಿತ್ತು,ಮನ ದುಗುಡಗೊಂಡಿತ್ತು..ಒಲ್ಲದ ಮನಸ್ಸಿಂದ ದೈನಂದಿನ ಕೆಲಸ ಮುಗಿಸಿ ಕೃಷ್ಣನ ನೆನೆಯುತ್ತಾ ಕಣ್ಮುಚ್ಚಿ ಒಂದೆಡೆ ಕುಳಿತವಳಿಗೆ ಕೃಷ್ಣ ಪಕ್ಕ ಬಂದು ಕುಳಿತಂತಾಯ್ತು.ತಟಕ್ಕನೆ ಕಣ್ತೆರೆದು ನೋಡಿದರೆ ಅವನಿರಲಿಲ್ಲವಲ್ಲಿ.ಅವಳಿಗದೂ ನಂಬಿಕೆಯಿರಲಿಲ್ಲ,ಕೃಷ್ಣ ಬಂದು ಸುಮ್ಮನೇ ಸತಾಯಿಸುತ್ತಿರಬಾರದೇಕೇ? ಎಂಬ ಹುಚ್ಚು ಭ್ರಮೆ.ಎಲ್ಲಾ ಗೋಪಿಯರ ಮನೆಯಲ್ಲೂ,ಅವರಿಬ್ಬರ ಪ್ರಿಯಸ್ಥಳದಲ್ಲೆಲ್ಲಾ ನೋಡಿ ಬಂದಳು,ಅವನೆಲ್ಲೂ ಕಾಣಸಿಗಲಿಲ್ಲ.ರಾತ್ರಿಯಿಡೀ ಯೋಚಿಸಿಯೇ ಯೊಚಿಸಿದಳು. 'ಇನ್ನೇಷ್ಟು ಕಾಲ ಹೀಗೆ ಇರಲಿ? ನೆಪಮಾತ್ರಕ್ಕೆ ದೇಹವಿಟ್ಟುಕೊಂಡು?ಕೃಷ್ಣನಲ್ಲೇ ನೆಲೆಸಿರುವ ಜೀವಕ್ಕೆ ಈ ದೇಹದ ಅಗತ್ಯವಾದರೂ ಎಂತಿದೆ? ಎಂದೆಲ್ಲಾ ತರ್ಕಿಸಿ ಒಂದು ನಿರ್ಧಾರಕ್ಕೆ ಬಂದು ಮಲಗಿದವಳಿಗೆ ಕೃಷ್ಣನಿಲ್ಲದ ಮೇಳೆ ಮೊದಲಬರಿಗೆ ಸೊಗಸಾದ ನಿದ್ರೆ.
 ನಸುಕಲ್ಲೇ ಎದ್ದು ಸ್ನಾನ ಮಾಡಿ,ಮಡಿಯುಟ್ಟು ಇಷ್ಟದೈವದ ಪೂಜೆ ಮಾಡಿ,ನಿತ್ಯಕರ್ಮಾದಿಗಳನ್ನೆಲ್ಲಾ ಪೂರೈಸಿ,ಯಮುನೆಯೆಡೆಗೆ ತೆರಳುತ್ತಿದ್ದ ರಾಧೆಯ ತುಟಿಯಲ್ಲಿ ಅರಳಿತ್ತೊಂದು ಹೂನಗೆ ಸರಿಸುಮಾರು ಕೃಷ್ಣನಂತೆ..ನಂದನವನದ ಯಾವ ಮನೆಗೂ ಬೆಳಗಾಗಿರಲಿಲ್ಲ ಇನ್ನೂ,ಛಾಯಾದೇವಿ ಮಗ ಸೂರ್ಯನನ್ನು ಭೂವಿಗೆ ತೆರಳಲು ಎಚ್ಚರಿಸುತ್ತಿದ್ದಳು,ಸೂರ್ಯ ಮೆಲ್ಲ ಕಣ್ತೆರೆದಿದ್ದ..ಬಿರ ಬಿರನೆ ಹೆಜ್ಜೆ ಹಾಕುತ್ತಾ ಭೋರ್ಗರೆವ ಯಮುನೆಯ ಸಮೀಪಿಸಿದವಳಿಗೆ ನಿರೀಕ್ಷಿಸಿದ ಭಯವೂ ಆಗಲಿಲ್ಲ..ಮೆಲ್ಲ ಕಣ್ಮುಚ್ಚಿ ತನ್ನ ಪ್ರೇಮಮೂರ್ತಿಯ ನೆನೆದಳು. ಕೃಷ್ಣ ಯಮುನೆಯ ಮಧ್ಯೆ ನಿಂತು ಕೈಬೀಸಿ ಕರೆದಂತಾಗಿ ಮೆಲ್ಲನೆ ನೀರಿಗಿಳಿದು ಅವನೆಡೆಗೆ ಸಾಗಿದಳು..ಯಮುನೆ ಭೊರ್ಗರೆವುದ ನಿಲ್ಲಿಸಿ ಮೆಲ್ಲನೆ ತನ್ನ ತೆಕ್ಕೆಗೆ ರಾಧೆಯ ತೆಗೆದುಕೊಂಡು ಶಾಂತಳಾದಳು..
 ಇತ್ತ ರುಕ್ಮಿಣಿಯೊಡನೆ ಸುಪ್ಪತ್ತಿಗೆಯಲ್ಲಿ ಪವಡಿಸಿದ್ದ ಕೃಷ್ಣನ ಹೃದಯದಲ್ಲೊಮ್ಮೆ ಕದಲಿಕೆ;ರಾಧೆ ತನ್ನರಸನ ಎದೆಯೊಳಗೆ ಸೇರಿಬಿಟ್ಟಿದ್ದರಿಂದ..
-ಶುಭಶ್ರೀ ಭಟ್ಟ

 ಕೊನೆಹನಿ

(ಪ್ರತಿಲಿಪಿ ಕನ್ನಡದಲ್ಲಿ ಪ್ರಕಟವಾದ ಕಥೆ)




  'ಅಯ್ಯೋ ದೇವ್ರೇ, ಮಾನ್ಸಿಗೆ ಹೇಗೆ ಹೇಳಲಿ?ಅವನ ಬಗ್ಗೆ ಏನೇನೋ ಕನ್ಸು ಕಟ್ಕೊಂಡು ಕಾದು ಕುಳಿತಿರೊಇವಳಿಗೆ ನಿನ್ನವ ಇನ್ನಿಲ್ಲವೆಂದು ಯಾವ್ ಬಾಯಲ್ಲಿ ಹೇಳಲಿ?ನಿನ್ನ ಹುಡ್ಕೊಂಡು ಕೇರಳಕ್ಕೆ ಬರ್ತಿರುವಾಗಆಕ್ಸಿಡೆಂಟ್ ಆಯ್ತು ಅಂತ ಹೇಗಪ್ಪಾ ಹೇಳಲಿಅಂತ ಹಲಬುತ್ತಾ ಓಡೊಡಿ ಬರ್ತಿದ್ದ ಕಾವ್ಯ,ರೂಮಲ್ಲಿಕಾಲಿಟ್ಟೊಡನೆ ಶಿಲೆಯಂತಾದಳು.ಅದೇ ಮಾಸದ ನಗು ಹೊತ್ತು,ಕೈಯಲ್ಲೊಂದು ಪತ್ರವನ್ಹಿಡಿದು ಚಿರನಿದ್ರೆಗೆಜಾರಿದ ಗೆಳತಿಯ ಕಂಡು ನಿಂತಲ್ಲೇ ಸ್ತಂಭವಾದಳು ಕಾವ್ಯ.ಮೆಲ್ಲ ಸಾವರಿಸಿಕೊಂಡು ಪತ್ರವ ತೆಗೆದುಕೊಂಡುಕಣ್ಣಾಡಿಸತೊಡಗಿದಳು..
ಹೇ ನನ್ನ ಹುಡುಗಾ!
  ನೀನು ಇಲ್ಲಿಗೆ ಬರ್ತಿದೀಯಾಂತ ಕ್ಷಣಕ್ಕೆ ಮೊದಲು ಗೊತ್ತಾಯ್ತು ಕಣೋ.ತುಂಬಾ ದಿನದ ನಂತರ ನಿನ್ನನ್ನಕಣ್ತುಂಬಿಕೊಳ್ಳಬಹುದು,ನಿನ್ನ ಮಡಿಲಲ್ಲೇ ಕೊನೆಯುಸಿರು ಬಿಡುವಾಸೆ ಕಣೋ ನನ್ನ ಜೀವ.ಆದರೂ ಎದೆಯಲ್ಲೆಲ್ಲಾಉರಿ,ಹೇಳಲಾಗದ ಸಂಕಟ,ಸರಿಯಾಗಿ ಉಸಿರಾಡಲೂ ಸಾಧ್ಯವಾಗ್ತಿಲ್ಲ ನನಗೆನೀನು ಬರುವ ತನಕಜೀವವಿಲ್ಲದರೇ  ಪತ್ರವನ್ನು ಓದು.ಯಾಕೆ ಹೀಗೆ ಹೇಡಿತರಹ ಯಾಕಾಡ್ದ್ಯೇ ಅನ್ನಬೇಡ್ವೋ.ನನಗೆ  ಪರಿಯಒಂಟಿತನಏಕಾಂಗಿಭಾವ ಏಂದೂ ಕಾಡಿರಲಿಲ್ಲ,ನಿನ್ನ ಬಿಟ್ಟು ಬೇರೆಯವರ ಜೊತೆ ಮದುವೆಯಾಗಿ ಬದುಕಲುನನ್ನಿಂದಾಗಲಿಲ್ಲ ಕಣೋಮನಸ್ಸನ್ನ ನಿನಗೆ ಕೊಟ್ಟು,ದೇಹವನ್ನು ಇನ್ನೊಬ್ಬರಿಗೆ ಕೊಟ್ಟು ವ್ಯಭಿಚಾರಿಣಿ ತರಹಬದುಕುವುದು ನನ್ನಿಂದ ಸಾಧ್ಯವಿರಲಿಲ್ಲ ಗೆಳೆಯ.
  ನೀನೊಬ್ಬನೇ ನನ್ನ ಪ್ರೀತಿಸಿಲ್ಲ ಗೆಳೆಯಾ,ನಿನಗಿಂತ ಮುಂಚೆ ನಾನಿನಗೆ ಮನಸೋತಿದ್ದೆ.ನಿನ್ನ ಮನದಮೂಲೆಯಲ್ಲಿದ್ದ ನಿನ್ನ ಒಳ್ಳೆತನವೇ ನನ್ನ ಮೇಲಣ ಪ್ರೀತಿನೇ ನಿನ್ನ ಬದಲಾಯಿಸಿದ್ದು ಹೊರತು ನಾನಲ್ಲ.ಎಲ್ಲಾದಕ್ಕೂಒಂದು ಪ್ರೇರಣೆ ಬೇಕಿತ್ತು ನಿನಗೆ,ಅದು ನಾನಾಗಿದ್ದೆ ಅಷ್ಟೇ.ನಿನ್ನ ಬೆಳವಣಿಗೆಗೆ ನಾನು ಮಾಡುವ ಪ್ರೀತಿಅಡ್ಡಿಯಾಗಬಾರದೆಂದು,ನನ್ನ ಪ್ರೀತಿಯ ವಿಷಯ  ನಿನಗೇ ತಿಳಿಸಲೇ ಇಲ್ಲ.ದೂರದ ಕೇರಳದಲ್ಲಿದ್ದುಕೊಂಡೆ ನಿನ್ನಪ್ರತೀ ಬೆಳವಣಿಗೆಯನ್ನು ನೋಡಿ ಖುಷಿ ಪಡ್ತಿದ್ದೆನೀನು ಜೊತೆಗಿಲ್ಲ ಅನ್ನೋ ಕೊರಗು ಬಿಟ್ರೆ ನಾನುಸುಖವಾಗಿದ್ದೆ.ಆದರೂ ನಿನ್ನ ಪ್ರೀತಿಯಿಂದ ದೂರವಿರಲು ಆಗ್ಲೇ ಇಲ್ಲ ನನಗೆ,ಅದರಲ್ಲೂ ಬೇರೆಯೊಬ್ಬನ ಜೊತೆಮದುವೆ..
 ನನಗೆ ಗೊತ್ತು ಕಣೋ ಹುಡುಗಾ !ನಿನ್ನ ಕಣ್ಣಲ್ಲಾಗಲೇ ನೀರು ಬರ್ತಿದೆಯೆಂದು.ಹೇಯ್ ಒರೆಸಿಬಿಡು ಅದನ್ನ,ನನ್ನಒಲವಿನಿಂದ ನೋಡ್ತಿದ್ದ ಕಣ್ಣಲ್ಲಿ ನೋವಿನ ಕಣ್ಣೀರು ಬರೋದು ನಂಗಿಷ್ಟವಿಲ್ಲ.ಬೇಗ ಒಮ್ಮೆ ನಕ್ಕು ಬಿಡು ನನ್ನಗೆಳೆಯಾ..ಹ್ಮಾಂಇದೇ ನಗುವಿನಲ್ಲಿ ನಾನು ಸದಾ ಇರ್ತಿನಿ ಕಣೋ.ಮತ್ತೆನಿಲ್ಲ ಎದೆಯಿಲ್ಲಾ ತುಂಬಾ ಉರಿ-ಉರಿಯಾಗ್ತಿದೆ.ನಿನ್ನ ನಗುವಿನಲ್ಲಿ ಸೇರಲು ಆದಷ್ಟೂ ಬೇಗ ಬರ್ತಿದಿನೇನೋ?ಬರಲಾ ಗೆಳೆಯಾ..ನಗ್ತಾ ಇರು... 
ನಿನ್ನಲ್ಲಿರುವ ನಿನ್ನ ಹುಡುಗಿ,
  ಮಾನಸ  "
ಪತ್ರವನ್ನೋದಿ ಮುಗಿಸಿದ ಕಾವ್ಯಳ ಕಣ್ಣಾಲಿಗಳು ತಿಲ್ಲಾನ ಹಾಡುತ್ತಿದ್ದರೇ,' ಬದುಕಿದ್ದಾಗ ಒಂದಾಗದ ವಿಧಿ ಅವರನ್ನುಸಾವಿನಲ್ಲಿ ಒಂದು ಮಾಡಿತಲ್ಲಎಂಬ ಮೂಕವೇದನೆಯೊಂದು ಮೌನದೊಡನೆ ತಾಳಹಾಕುತ್ತಿತ್ತು..
ಶುಭಶ್ರೀ ಭಟ್ಟ

ಸೌಂದರ್ಯರಾಣಿ

(ಪ್ರತಿಲಿಪಿ ಕನ್ನಡದಲ್ಲಿ ಪ್ರಕಟವಾದ ಕಥೆ)




 ಇನ್ನೇನು ಗೋಕರ್ಣ ಸಮೀಪಿಸುವುದರಲ್ಲಿದ್ದ ನನ್ನ ಕಾರು 'ದಡ್-ದಡ್' ಎಂದು ಶಬ್ಧ ಮಾಡುತ್ತಾ ಕೆಟ್ಟು ನಿಂತಿತು. ಒಂದು ತಾಸಾದರೂ ಮುಗಿದಿರಲಿಲ್ಲ ನನ್ನ ಡ್ರೈವರಾದ ರಾಜುವಿನ ಕಾರು ರಿಪೇರಿ.ನನಗೋ ಒಳಗೆ ಕುಳಿತು-ಕುಳಿತು ಬೇಸರವಾಗಿ ಕೆಳಗಿಳಿದರೆ,ಅಲ್ಲಿಯೇ ಸುಳಿದಾಡುತ್ತಿದ್ದ ಪಡ್ಡೆಯ ಹುಡುಗರಿಗೆ ಅಚ್ಚರಿಯಾಗಿತ್ತು.ಅಷ್ಟೊತ್ತು ಸುಮ್ನೆ ಕುಳಿತು ಹರಟೆ ಹೊಡೆಯುತ್ತಿದ್ದವರು,ನನ್ನ ಕಂಡೊಡನೆ ಎದ್ನೋ-ಬಿದ್ನೋ ಎಂಬಂತೆ ಸಹಾಯಕ್ಕಾಗಿ ಓಡಿ ಬಂದರು.ರಾಜು ಅಂತವರನ್ನೆಲ್ಲಾ ಚೆನ್ನಾಗಿ ಬಲ್ಲವ,ಬಳಿಯೆಲ್ಲೂ ಸುಳಿಯಗೊಡಲಿಲ್ಲ.ಬಲಿಷ್ಠನಾಗಿದ್ದ ರಾಜುವಿಗೆ ಹೆದರಿ ಮತ್ತದೇ ಕಟ್ಟೆ ಮೇಲೆ ಹೋಗಿ ಕುಳಿತರೂ,ಸಿಟ್ಟಿನ ನೋಟವಿತ್ತಲೇ ಇತ್ತು.ರಿಪೇರಿಯಾದ ಕಾರು ಹೊರಟಾಗ ಅವರಲ್ಲೊಬ್ಬ ಪೊಗರಾಗಿ ಮಾತಾಡುತ್ತಿದ್ದ-'ಲೋ!ಇವ್ರದ್ದೆಲಾ ಗೊತ್ತಿರುದೆಯಾ.ಬರೀ ಬಣ್ಣದ ಪಾತರಗಿತ್ತಿರು,ಅದೇಷ್ಟು ಜನರನ್ನೂ ಸೆರಗಲ್ಲಿಟ್ಕಂಡವ್ಳೇ ಯಾರಿಗ್ ಗೊತ್ತಾ?ನಮ್ಮುಂದಷ್ಟೆ ಮಡಿ-ಮಡಿ ಮಾಡುದು' ಅವನ ಮಾತು ಕೇಳಿ ಮೈಯೆಲ್ಲಾ ಉರಿದರೂ,ಸಧ್ಯ ರಾಜು ಕೇಳಿಸ್ಕೋಳ್ಲಿಲ್ಲ ಅಂತ ಸಮಾಧಾನ,ಇಲ್ಲಾಂದ್ರೆ ಮತ್ತೊಂದು ಮಾರಮಾರಿ ಆಗೋದ್ರಲ್ಲಿ ಸಂಶವಿರಲಿಲ್ಲ..ಆದರೂ ಸುಳ್ಳಾಪಾದನೆಯಿಂದ ಬೆಚ್ಚಿದ್ದೆ,ಮನ ಪೆಚ್ಚಾಗಿತ್ತು.ಕಾರೋಡುತ್ತಲೇ ಇತ್ತು,ಮನವೂ ಹಿಂದಕ್ಕೋಡುವುದರಲ್ಲಿತ್ತು..ಅಷ್ಟರಲ್ಲೇ ಮೊಬೈಲ್ ರಿಂಗಣಿಸತೊಡಗಿದ್ದರಿಂದ ಅದನ್ನೆತ್ತಿಕೊಂಡೆ ಒಲ್ಲದ ಮನಸ್ಸಿಂದ-'ಡೈರೆಕ್ಟ್ರು ಭಾಳ ಸಿರಿಯಸ್ ಆಗವ್ರೇ ಕಣವ್ವ,ಲೇಟಾಗೋಗೈತೆ ಬೇಗ ಬನ್ರವ್ವ' ಅತ್ತಲಿಂದ ಮೇಕಪ್ ಮೆನ್ ಕಮ್ ಅಸಿಸ್ಟೆಂಟ್ ಆಗಿದ್ದ ಶಿವಪ್ಪ ಫೋನ್ ಮಾಡಿದ್ರು..ತಲೆ ಚಿಟ-ಚಿಟ ಅನ್ನತೊಡಗಿತ್ತು..
 ಮಂಜಾವಿನ ಬಾಲರವಿ ತನ್ನಾಟ ಮುಗಿಸಿದ್ದ,ಮದ್ಯಾಹ್ನದ ಬಿಸಿಲು ನೆತ್ತಿಗೇರುವುದರಲ್ಲಿತ್ತು.ಸುಂದರವಾದ ಆ ಪರಿಸರದಲ್ಲಿ ಆ ಕ್ಷಣಕ್ಕೂ ಮೈಮರೆತಂತಾದ್ರೂ ಕಾರಿನಿಂದಿಳಿದು ತಟಪಟಾಂತ ಶೂಟಿಂಗ್ ಸ್ಥಳಕ್ಕೆ ಧಾವಿಸಿದ್ದೆ.ಡೈರೆಕ್ಟ್ರು ಕೋಪದಿಂದಿದ್ರೂ ತೋರಗೊಡದೆ ಅಂದಿನ ಸ್ಕ್ರೀಪ್ಟನ್ನು ಕೈಗಿತ್ತು ಬೇಗ ಬೇಗ ತಯಾರಾಗುವಂತೆ ಹೇಳಿ ಮತ್ತೊಂದೆಡೆ ಹೊರಟರು.ಮಹಾಬಲೇಶ್ವರ ದೇವಾಲಯದಲ್ಲೇ ಆರಂಭಿಸಿ,ಸಮುದ್ರದೆಡೆಗೆ ತೆರಳಿದ್ದೆವು.ಕಾಲಿಗೆ ಕಚಗುಳಿಯಿಕ್ಕೋ ಮುದ್ದಾದ ಅಲೆಗಳು,ಮೃದು ಮರಳು,ಶೂಟಿಂಗ್ ಸಲುವಾಗಿ ಸೇರಿದ್ದ ಮುಗ್ಧ ಜನ,ಮೆಲ್ಲ ಬೀಸುವ ತಂಗಾಳಿ ಎಲ್ಲವೂ ಹಿತವಾಗಿತ್ತು ನನಗೆ.ಆದರೆ ಆ ಕ್ಷಣಕ್ಕೆ ನಾನದನ್ನೆಲ್ಲಾ ಅನುಭವಿಸುವ ಸ್ಥಿತಿಯಲ್ಲಿರಲಿಲ್ಲ,ಬೇಗ ಬೇಗ ನನ್ನ ಪಾತ್ರವನ್ನು ಸಿದ್ಧಪಡಿಸಿಕೊಂಡು ಕುಳಿತೆ.ಅದೊಂದು ಕಿರುಚಿತ್ರದ ಶೂಟಿಂಗ್ ನನ್ನದೇ ಮುಖ್ಯಪಾತ್ರ ಅದರಲ್ಲಿ,ಜೀವನದಲ್ಲಿ ಮನಶ್ಶಾಂತಿಯನ್ನರಸಿ ಗೋಕರ್ಣದ ಕಡಲತೀರಕ್ಕೆ ಬರುವ ಪಾತ್ರ ನನ್ನದು.ನಿಜ ಜೀವನದಲ್ಲೂ ನನಗೆ ಮನಶ್ಶಾಂತಿಯು ಬೇಕಿತ್ತು ನನಗೆ.ಎಲ್ಲವೂ ಇದ್ದು,ಏನೂ ಇಲ್ಲದಂತಹ ಪರಿಸ್ಥಿತಿ. ಹೀಗೇ ಮೈಮರೆತು ಯೋಚಿಸುತ್ತಲೇ ಇದ್ದ ನನಗೆ ಕಿವಿಗಡಚಿಕ್ಕುವ ಚಪ್ಪಾಳೆ ಎಚ್ಚರಿಸಿತು. 'ಎಂತ ಅದ್ಭುತ ಅಭಿನಯ','ಎಂತಹ ತನ್ಮಯತೆ' ಎಂದೂ ಅಭಿನಂದಿಸುವವರೇ.ನಕ್ಕೆ ವಿಷಾದದಿಂದ,ವಾಸ್ತವ ನನಗಷ್ಟೆ ಗೊತ್ತಿತ್ತು..
 ಹೀಗೆ ಮಲೆನಾಡು-ಕರಾವಳಿಯಲ್ಲಿ ವಾರಗಟ್ಟಲೇ ಶೂಟಿಂಗ್ ಮುಗಿದು ಬೆಂಗಳೂರಿಗೆ ವಾಪಸ್ಸಾಗಿದ್ದೆವು.ವಿಪರೀತ ಸುಸ್ತಾಗಿದ್ದ ನಾನು ಮನೆಗೆ ಬಂದೊಡನೆ ಮಲಗಿಬಿಟ್ಟೆ.ನಿದ್ರೆಯಲ್ಲೇನೋ ಕನವರಿಕೆಗಳು,ವಿಚಿತ್ರ ಕನಸುಗಳಿಂದ ನರಳಿದ್ದೆ.ಮರುದಿನ ಎದ್ದಾಗ ಸ್ವಾಗಸಿದ್ದು ಅಮ್ಮನ ಅದೇ ಮಾಸದ ಮುಗುಳುನಗೆ.ನನ್ನಮ್ಮ ಮನೆಯನ್ನೇ ನೆಚ್ಚಿಕೊಂಡವರು,ಶೂಟಿಂಗ್ ಗೂ ಬರ್ತಿರಲಿಲ್ಲ,ಅಪ್ಪ ಎಂದಿನಂತೆ ದೇವರಕೋಣೆ ಹೊಕ್ಕು ಕುಳಿತರೇ ಆ ಭಗವಂತನಿಂದಲೂ ಕದಲಿಸಿಕ್ಕಾಗುವುದಿಲ್ಲ.ಹಾಗಾಗೀ ಶೂಟಿಂಗಾಗಿ ದೂರ-ದೂರ ಬರುತ್ತಿದ್ದುದು ಅಣ್ಣನೇ.ಕಾಫೀ ಕುಡಿದು ಮತ್ತೆ ಮಂಚದಲ್ಲಿ ಅಡ್ಡಾದೆ ನೆನೆಪು ಹಿಂದಕ್ಕೋಡಿತು..
ಬಣ್ಣದ ಬದುಕಿನ ಬಗ್ಗೆಯೇನೂ ಗೊತ್ತಿಲ್ಲದ ದಿನಗಳವು.ಜೀವನವೇ ಬಣ್ಣದ ಲೋಕ ಅಂದುಕೊಂಡಂತಿದ್ದ ಮುಗ್ಧೆ ನಾನು.ಅಪ್ಪ-ಅಮ್ಮ-ಅಣ್ಣ ಎಲ್ಲರ ಮುಚ್ಚಟೆ ಪ್ರೀತಿಯಲ್ಲಿ ಬೆಳೆದಿದ್ದ ಮರಿಗುಬ್ಬಿ ಬೇರೆ.ಅಪರಿಮಿತ ಅನ್ನೋಷ್ಟು ಸುಂದರಿಯಾಗಿದ್ದಕ್ಕೆ ಅಮ್ಮನಿಗೆ ಸದಾ ನನ್ನದೇ ಚಿಂತೆ,ಅದನ್ನಾ ನಾನು-ಅಪ್ಪ-ಅಣ್ಣ ಗೇಲಿ ಮಾಡಿ ನಗ್ತಿದ್ವಿ.ನಾ ಬೆಳೆದಂತೆ ಸೌಂದರ್ಯವೂ ವರ್ಧಿಸಿತ್ತು.ಕಾಲೇಜ್ ಶುರುವಾಗೋ ಮೊದಲೇ ಅಪಪೋಲಿಗಳ ಪ್ರೇಮಪತ್ರಗಳು ಮನೆ ತಲುಪಿ ರಾಡಿಯೆಬ್ಬಿಸಿದ್ದವು.ಅಮ್ಮನ ವಿರೋಧದ ನಡುವೆಯೂ ನಾನು ಅಭ್ಯಾಸ ಮುಂದುವರೆಸಿದ್ದೆ,ಅಪ್ಪ-ಅಣ್ಣರ ಪೂರ್ಣ ಬೆಂಬಲವಿತ್ತು,ನನಗಂತೂ ಭಯವೇ ಇರಲಿಲ್ಲ. ಅಮ್ಮನೆಣಿಸಿದಂತೆ ಆಯ್ತು,ನನ್ನನ್ನಾರಾಧಿಸುವವರ ಗುಂಪೇ ಆಗಿಬಿಟ್ಟಿತ್ತು,ಹೆದ್ರಿಕೆಯಾದ್ರೂ ಸುಮ್ನಿದ್ದೆ.ಅಣ್ಣನಿಗೆ ಗೊತ್ತಿದ್ರೂ ಅಮ್ಮನಿಗೆ ಹೆದರಿ ಮನೆಯಲ್ಲಿ ಹೇಳಲೇ ಇಲ್ಲ.ಯಾವಾಗಲೂ ಗೆಳತಿಯರ ಜೊತೆಯಲ್ಲೇ ಹೋಗಿ ಬರೋಳು,ಅದೊಂದು ದಿನ ಲೈಬ್ರರಿಯಿಂದ ಹೊರಟಾಗಲೇ ಸಂಜೆಯಾಗಿತ್ತು.'ಆಹಾ ಗುಲಾಬಿ ಹೂವೇ','ಮಲ್ಲಿಗೇ ದಂಡೇ'ಅನ್ನುತ್ತಾ ಹಿಂದೆ ನಾಲ್ಕಾರು ಪೋಲಿಗಳ ಗುಂಪು ಹಿಂಬಾಲಿಸುತ್ತಿದ್ದರು.ಕೇಳಿಸಿದರೂ ಕೇಳಿಸದಂತೆ ಪಟ-ಪಟನೇ ನಡೆಯುತ್ತಲಿದ್ದೆ,ಅವ್ರ ಮಾತಿಗೆ ಲಕ್ಷ್ಯ ಕೊಡದೆ ಓಡುವಂತೆ ನಡೆದಾಗ,ಅದರಲ್ಲೊಬ್ಬ ಮುಂದೆ ಬಂದ,ಅವ ಊರರಾಜಕಾರಣಿಯ ಮಗ.ಮುಂದೆ ಬಂದು ನನ್ನನ್ನಪ್ಪಿ ಮುದ್ದಾಡಲು ಮುಂದಾದಾಗ,ನನ್ನ  ಬಿರುಸಾದ ಏಟಾಗಲೇ ಅವನ ಕೆನ್ನೆ ಸವರಿತ್ತು.ಓಡುತ್ತಲೇ ಮನೆ ಸೇರಿದ್ದೆ,ಮೈಮೇಲೆ ದುಪ್ಪಟ್ಟಾವಿರದದ್ದೂ ಗಮನವಿಲ್ಲದೇ.
  ಮುಸುಕು ತೆಗೆಯದೇ ಸುಮ್ನೇ ಅಳುತ್ತಿದ್ದ ನನ್ನ ಕಂಡು ಅಮ್ಮನಿಗೇನೋ ಸಂಶಯ.ಅಮ್ಮನಿಂದ ವಿಷಯ ತಿಳಿದ ಅಪ್ಪ-ಅಣ್ಣ ಕ್ಷಣಕ್ಕೆ ಗಾಭರಿಗೊಂಡರೂ ಸಾವರಿಸಿಕೊಂಡರು ಎಲ್ಲರೂ ಅಮ್ಮನ ಬಿಟ್ಟು.ಮತ್ತೆರಡು ದಿನದಲ್ಲೇ ಊರಲ್ಲೆಲ್ಲಾ ಏನೇನೋ ಊಹಾಪೋಹಗಳು,ನನ್ನ ಬಗ್ಗೆಯೇ ಇಲ್ಲ ಸಲ್ಲದ್ದು ಹಬ್ಬಿತ್ತು.ಅದನ್ನೇ ನಂಬಿದ ನಮ್ಮ ನೆಂಟರಿಷ್ಟರೂ ದೂರಾದರು. ಪುಕ್ಕಲು ಅಮ್ಮ ಅದೇ ವರ್ಷ ನಮ್ಮೂರಿನಿಂದ ಬಲುದೂರ ಹೋಗುವ ಗಟ್ಟಿ ನಿರ್ಧಾರ ಮಾಡೇಬಿಟ್ಟರು,ಯಾರ ಮಾತಿಗೂ ಬಗ್ಗದೇ.ಅಪ್ಪನ ಕಾಂಪ್ಲೆಕ್ಸ್ ಮಾರಿದ್ದಾಯ್ತು,ಮನೆಯನ್ನೂ ಕೂಡ.ದೂರದ ಬೆಂಗಳೂರಿಗೆ ಬಂದುಬಿಟ್ಟೆವು ಎಲ್ಲಾ ಮರೆತಂತೆ,ಆದರೂ ಅಮ್ಮನ ಕೊರಗು ಕಳೆದಂತಿರಲಿಲ್ಲ.ಅದಕ್ಕೆ 'ಅಮ್ಮಾ!ನನ್ನಾ ಯಾರೂ ಸಾಕಬೇಕಿಲ್ಲಮ್ಮ.ನಾನು ಬೆಳೆದು ಸಾಧಿಸಿ ಆಡಿಕೊಂಡವರ ಬಾಯ್ಮುಚ್ಚುಸುತ್ತೆನೆ ನೋಡ್ತಿರು' ಅಂದಾಗ ಮನೆಯವರೆಲ್ಲಾ ಅಚ್ಚರಿಗೊಂಡರಾದರೂ ನಿರಾಳವಾದ್ರು.ಹೀಗೇ ಯಾರ ಪರಿಚಯವೂ ಇಲ್ಲದೇ ಎರಡು ದಿನ ಕಳೆಯಿತು.
  ಒಂದುದಿನ ಅಮ್ಮನೊಡನೆ ಮಾರ್ಕೆಟ್ ಅಲ್ಲಿ ಸಿಕ್ಕ ಪರಿಚಯದ ಗೆಳತಿ ಸುಮಾ ಜೀವನದ ದಿಕ್ಕನ್ನೇ ಬದಲಿಸಿಬಿಟ್ಟಳು..ಮನಸ್ಸಿಲ್ಲದ ಮನಸ್ಸಿಂದ ಅಮ್ಮನ ಒಪ್ಪಿಗೆ ಪಡೆದು,ಮೊದಲ ಧಾರಾವಾಹಿಯ ಆಯ್ಕೆಗೆ ಹೋದೆ,ಸುಲಭವಾಗಿ ಅಯ್ಕೆಯಾಗಿದ್ದೆ.ಮೊದಲಿನಿಂದಲೂ ಕಲೆಯೆಡೆಗೆ ಆಸಕ್ತಿಯಿದ್ದುದರಿಂದ ಸುಲಭವಾಗಿ ಹೊಂದಿಕೊಂಡೆ.ಬಲುಬೇಗ ಪ್ರಸಿದ್ಧಿ ಪಡೆದುಬಿಟ್ಟೆ.ನನಗೆಲ್ಲಿ ಕೆಟ್ಟ ಅನುಭವ ಆಗುವುದೆಂದು ಅನಿಸ್ತದೋ ಅಲ್ಲಿಂದ ಮುಲಾಜಿಲ್ಲದೇ ಹೊರಬೀಳುತ್ತಿದ್ದೆ.ಅದಕ್ಕೆ ಬಹುತೇಕ ಎಲ್ಲರೂ 'ಕೊಬ್ಬಿನವಳು' ಎಂದೇ ಹೆಸರಾಗಿದ್ದೆ.ಎಲ್ಲರಿಗೂ ನನ್ನ ಸ್ನೇಹ ಬೇಕಿತ್ತು,ನಾನೂ ಯಾರೊಟ್ಟಿಗೂ ದ್ವೇಷ ಕಟ್ಟಿಕೊಳ್ಳಲಿಲ್ಲ.ಎಂದಿಗೂ 'ಗಾಸಿಪ್' ಕಾಲಂ ನಲ್ಲಿ ನನ್ನ ಹೆಸರು ಬರದೇ ಇದ್ದುದ್ದೇ ನನ್ನ ಸೌಮ್ಯತನಕ್ಕೆ ಸಾಕ್ಷಿಯಾಗಿತ್ತು. ಆದರೂ ನಾನು 'ಸಿನಿಮಾದವಳು,ಶೀಲಕ್ಕೆ ಬೆಲೆಗೊತ್ತಿಲ್ಲದವಳು' ಅನ್ನೋ ಕಾರಣವೊಡ್ಡಿ ಜೀವದಂತೆ ಪ್ರೀತಿಸುತ್ತಿದ್ದ ಪ್ರಶಾಂತ್ ದೂರ ಸರಿದ.ನಾಗರೀಕನಾದರೂ ಆಡುವರ ಮಾತಿಗೆ ಬೆಲೆಕೊಟ್ಟು ಹೊರಟ ಅವನನ್ನು ಮನಸ್ಸಿಂದಲೇ ತೆಗೆದುಬಿಟ್ಟೆ.ಅದಾದ ಮೇಲೆ ಕೆಲದಿನಗಳು ಬರೀ ಶೂನ್ಯವಾಗಿದ್ದವು..
 ಬೆಂಕಿಯಂತಿದ್ರೂ ಕೆಲಜನರು ಆಡೋ ಮಾತಿಗೆ ತುಂಬಾ ನೋವಾಗ್ತಿತ್ತು.ಕ್ರಮೇಣ 'ನಾಯಿ ಬೊಗಳಿದ್ರೆ ನನಗೇನು?' ಅಂದ್ಕೊಂಡು ಸುಮ್ನಾಗಿಬಿಟ್ಟಿದ್ದೆ.ಅವರ ಮಾತಿಗೆ ತಲೆಕೊಡದೆ,ಕಿವಿಕೊಡಗಿಕೊಂಡು ಬಂದ್ಬಿಡ್ತಿದ್ದೆ. ಕಿರುತೆರೆಯಲ್ಲಿ,ಹಿರಿತೆರೆಯಲ್ಲಿನ ನನ್ನ ಪ್ರಸಿದ್ಧಿ ಎಲ್ಲರ ಕಣ್ಣುರಿಸುವಂತಾಗಿತ್ತು.ದೂರವಾಗಿದ್ದ ನೆಂಟರೆಲ್ಲಾ ಏನೇನೋ ಕಾರಣ ಹೇಳಿ ಮತ್ತೆ ಬಳಿ ಬರತೊಡಗಿದ್ದರು.ನಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡಲೂ ಇರಲಿಲ್ಲ,ಆದರೀಗ 'ಸಕ್ಕರೆಯಿದ್ದೆಡೆ ಇರುವೆ' ಎಂಬಂತೆ,ತಮ್ಮೆಲ್ಲಾ ನಾಚಿಕೆಬಿಟ್ಟು ಹಣಕ್ಕಾಗಿ ನಮ್ಮಲ್ಲಿಗೇ ಬಂದಿದ್ದರು.ಅವರೆಲ್ಲರ ಕೀಚಕಬುದ್ಧಿಗೆ ಅಸಹ್ಯಗೊಂಡು,ದೂರಸರಿದುಬಿಟ್ಟಿದ್ದೆ.ಅಂತವರಿಗಿಂತ 'ಅನಾಥ ಮಕ್ಕಳಿಗಾಗಿ' ನನ್ನ ಜೀವನ ಮುಡಿಪು ಅಂದಿದ್ದಕ್ಕೆ ಮೊದಲು ಎಲ್ಲರೂ ವಿರೋಧಿಸಿದರೂ,ನನ್ನ ಕಠಿಣ ನಿರ್ಧಾರಕ್ಕೆ ಅವರೊಪ್ಪಲೇ ಬೇಕಾಯ್ತು.'ಮದುವೆ'ಯ ಕನಸ ಹೆಣೆಯುತ್ತಿದ್ದ ಅಮ್ಮ ಒಂದೆರಡು ದಿನ ಕೊರಗಿದರೂ,ನನ್ನ ತೃಪ್ತಿಯಲ್ಲೇ ಸುಖ ಕಂಡರು.ಇತ್ತೀಚಿಗೆ ನನ್ನ 'ಅಮ್ಮ' ಅನಾಥಾಶ್ರಮದ ಕಟ್ಟಡದ ಕಾಮಗಾರಿ ಬಲುವೇಗದೀ ನಡೆದಿತ್ತು. ಸ್ವತಃ ಅಣ್ಣನೇ ಎಲ್ಲವನ್ನೂ ನೋಡಿಕೊಳ್ಳುವುದರಿಂದ,ನಾನತ್ತ ತಲೆ ಕೆಡಿಸಿಕೊಳ್ಳದೇ ನನ್ನ ಶೂಟಿಂಗನಲ್ಲೇ ಮುಳುಗಿದ್ದೆ.ಹೀಗೇ ಯೋಚನೆಯಲ್ಲೇ ಮುಳುಗಿದ್ದ ನನ್ನನ್ನು ಅತ್ತಿಗೆಯ ಮಾತು ಎಚ್ಚರಿಸಿತು-'ಪುಟ್ಟಿ!   ಇವತ್ತು ಜಯನಗರ ಸೆಂಟ್ರಲ್ ಗೆ ಹೋಗೊಣ ಕಣೆ.ನಿನ್ನ ಹುಟ್ಟಿದ ಹಬ್ಬಾನೂ ಹತ್ರ ಬಂತು,ನನಗೂ ಸ್ವಲ್ಪ ಖರೀದಿಯಿದೆ.ಸಾಯಂಕಾಲ ನಾಲ್ಕಕ್ಕೆ ತಯಾರಾಗಿರು'ಎನ್ನುತ್ತಾ ಹೊರನಡೆದರು..
   ಸಾಯಂಕಾಲದಷ್ಟೋತ್ತಿಗೆ ನಾನು-ಅತ್ತಿಗೆ ಖರೀದಿಗೆ ತೊಡಗಿದ್ದೆವು.ನಾನೊಂದು ತಿಳಿಬಣ್ಣದ ಚೂಡಿದಾರ ಕೈಯಲ್ಲಿ ಇಟ್ಕೊಂಡು ಇನ್ನೇನು ಅತ್ತಿಗೆ ಹತ್ರ ತಿರುಗುವುದರಲ್ಲಿ 'ಅದು ನಿನ್ಗೆ ಚೆನ್ನಾಗಿ ಕಾಣೋಲ್ಲ ಪುಟ್ಟಿ' ಧ್ವನಿಬಂದತ್ತ ತಿರುಗಿದೆ ,ಅತ್ತಿಗೆಯ ಹಿಂದೆ ನಿಂತಿದ್ದ ಪ್ರಶಾಂತ್.ಒಮ್ಮೆಲೇ ಅಚ್ಚರಿಗೊಂಡರೂ ನಂತರ ಸಾವರಿಸಿಕೊಂಡು 'ಓಹ್ ಪ್ರಶಾಂತ್!ಹೇಗಿದ್ದೀಯಾ?ಯಾವಾಗ ಬಂದಿದ್ದು ಊರಿಂದ?' ಎಂದೆ. ನಿರ್ವಿಕಾರವಾಗಿ ಬಂದ ನನ್ನೀ ಪ್ರಶ್ನೆಗೆ ಅವ ಸುಸ್ತಾದ.ಅವನು ಬಳಿಯಿದ್ದರೂ ಇಲ್ಲದಂತೆ ಪ್ರತಿಯೊಂದಕ್ಕೂ ಅತ್ತಿಗೆಯನ್ನ ಕೇಳುತ್ತಿದಾಗ,ನನ್ನ ನಿರ್ಲಕ್ಷ್ಯದ ಅರಿವಾಯಿತವನಿಗೆ.ಕಣ್ಣಲ್ಲೇ ಗದರಿಕೊಂಡ ಅತ್ತಿಗೆಯನ್ನೂ ಗಮನಿಸದೇ ನನ್ನದೇ ವರಸೆ ಮುಂದುವರೆಸಿದೆ.ನನ್ನನ್ನು 'ಡ್ರೆಸ್ಸಿಂಗ್ ರೂಮ್'ಗೆ ಎಳೆದೊಯ್ದ ಅತ್ತಿಗೆ 'ನೋಡೇ ಪುಟ್ಟೀ ಅವ್ನಿಗೆ ಮತ್ತೆ ನಿನ್ಮೇಲೆ ಆಸಕ್ತಿ ಬಂದಿರೋ ಹಾಗಿದೆ.ಸುಮ್ನೆ ಯಾಕೆ ಹೀಗಾಡ್ತಿ?ಅಂದಾಗ ,ನಾ ಕೆರಳಿಬಿಟ್ಟು ಅತ್ತಿಗೆನ ಸುಮ್ಮನಾಗಿಸಿದ್ದೆ.ಎಲ್ಲಾ ಖರೀದಿಸಿ ಹೊರಡುವಾಗ ಪ್ರಶಾಂತ್ ಮನೆತನಕ ಬಿಡುತ್ತೇನೆಂದರೂ ಕೇಳದೆ ನಾನೇ ಡ್ರೈವ್ ಮಾಡಿ ಬಂದೆ ಹುಚ್ಚುಸಾಹಸಿಯಂತೆ..
  ಮನೆಗೆ ಬಂದವಳೇ ರೂಮಲ್ಲಿ ಮಲಗಿಬಿಟ್ಟೆ ಊಟ ಮಾಡದೆ.ಮನವೀಗ ಮಂಗನಂತೆ ಕುಣಿಯುತ್ತಲಿತ್ತು.ತಾಸುಗಳ ಕಾಲ ಡೋಲಾಯಮಾನವಾದ ಮನವನ್ನೊಂದು ಹಂತಕ್ಕೆ ತಂದುಕೊಂಡೆ.ಬಾಲ್ಯದ ಗೆಳೆತನ,ಬೆಳೆಯತೊಡಗಿದಾಗಿನ ಪ್ರೀತಿ ಚಿಗುರು,ಮಧುರ ಭಾವನಗಳೋಡನೆ ಆಡಿ ಇನ್ನಿಲ್ಲದಂತೆ ಗಾಯಮಾಡಿ ಹೊರಟವನಿಗೆ ಮತ್ತೆ ನನ್ನಲ್ಲಿ ಪ್ರವೇಶವಿಲ್ಲ ಎಂದೂ ಇಲ್ಲದ ಕಾಠಿಣ್ಯತೆ,ಗಾಂಭಿರ್ಯತೆಯಿಂದ ಮನಸ್ಸನ್ನು ಗಟ್ಟಿಮಾಡಿಕೊಂಡೆ.ಬಲುದಿನದ ನಂತರ ತಿಳಿಯಾದ ಮನದೊಡನೆ ನಿದ್ರಿಸಿದೆ.
ಮರುದಿನ ಬೆಳಗ್ಗೆ ಬೇಗನೇ ಎಬ್ಬಿಸಿದ ಅಮ್ಮ ಕೈಹಿಡಿದು ಹೊರಗಡೆ ಎಳೆದುಕೊಂಡು ಹೋದಳು,ಪ್ರಶ್ನೆಗೂ ಅವಕಾಶವನ್ನೀಯದೇ.ಹೊರಗಡೆ ಹಾಲ್ ಅಲ್ಲಿ ಅಪ್ಪ-ಅಣ್ಣ-ಅತ್ತಿಗೆ,ರಾಜು,ಮನೆಕೆಲಸದವರೆಲ್ಲಾ ಸಾಲಾಗಿ ನಿಂತು ನನ್ನ ಬರುವನ್ನೇ ಕಾಯುವಂತಿದ್ದರು.ಆ ಕ್ಷಣ ಗಾಭರಿಬಿದ್ದೆ.ಮನ ಏನೇನೋ ಕೇಡು ಶಂಕಿಸುತ್ತಿರುವಾಗಲೇ ಬಳಿ ಬಂದ ಅಣ್ಣ ಅಂದಿನ ದಿನಪತ್ರಿಕೆಯನ್ನು ಕೈಗೆ ಕೊಟ್ಟ.ಮೊದಲಪುಟದಲ್ಲೇ ನನಗೆ 'ಅತ್ಯುತ್ತಮ ನಟಿ' ಪ್ರಶಸ್ತಿ ದೊರೆತ ಸುದ್ದಿಯಿತ್ತು.ಎಲ್ಲರೂ ಅಭಿನಂದಿಸುವವರೇ,ಅದೇ ಆನಂದದಲ್ಲಿ ತೇಲ್ತಾ,ಮಧ್ಯಾಹ್ನದವರೆಗೂ ಬಿಡದೇ ಬಂದ ಕಥೆಗಳು ಎಲ್ಲರ ಹೊಗಳಿಕೆ ಕೇಳೀ ಕೇಳೀ ಉಬ್ಬಿಬಿಟ್ಟಿದ್ದೆ.ಬಾಲ್ಕನಿಯಲ್ಲಿ ಕುಳಿತು ಬೇರೆ ಬೇರೆ ಪತ್ರಿಕೆಯವರೂ ಹೊಗಳಿದೆ ಪರಿಯ ಓದಿ ಸುಖಿಸುತ್ತಿದ್ದೆ, 'ಸೌಂದರ್ಯ ರಾಣಿ, ಕಲಾರಾಧಕಿ,ಅಭಿನಯ ಶ್ರೇಷ್ಠ' ಅಂತೆಲ್ಲಾ ಹೊಗಳಿ ಅಟ್ಟಕ್ಕೇರಿಸಿದ್ದರು. ಇದೆಲ್ಲುದರ ನಡುವೆ 'ಪ್ರಶಾಂತ್' ಫೋನ್ ಮಾಡದೇ ಇದ್ದುದ ಕಂಡು ಅಚ್ಚರಿಯಾಗಿತ್ತು.ಬಹುಶಃ ಅವನ ಕಂಡೊಡನೆ ಮುಂಚಿನಂತೆ ಕುಣ್ಕೊಂಡು ಬರ್ತೀನಿ ಅಂದ್ಕೊಂಡಿದ್ನೇನೋ ಅಂತ ಮುಗುಳುನಗು ತೇಲಿಬಂತು..ಆದರೂ ಆ ಸಾಯಂಕಾಲ ನನ್ನ ಅಣುಕಿಸುತಲ್ಲಿತ್ತು. 'ಸೌಂದರ್ಯರಾಣಿ'ಯೆಂಬ ಪಟ್ಟಕ್ಕೆ ನನ್ನಲ್ಲೊಂದು ವಿಷಾದದಲೆ ತೇಲಿ ಹೋಯ್ತು..
ಶುಭಶ್ರೀ ಭಟ್ಟ

ಅಮ್ಮಾ! ಎಲ್ಲಿರುವೆ?

(ಪ್ರತಿಲಿಪಿ ಕನ್ನಡದಲ್ಲಿ ಪ್ರಕಟವಾದ ಕಥೆ)



                               --ಒಂದು--
      ಎಲ್ಲೋ ಕತ್ತಲೆಯಾಳದಲಿ ಅಡಗಿ ಮುದುರಿ ಕುಳಿತಂತಿದೆ ನನ್ನ ಸ್ಥಿತಿ. ಮೃದುಮನದ ಹೆಣ್ಣಾಕೆ,ಈ ಭಾವುಕ ಮನಸ್ಸಿನವಳ ಹೆಸರು 'ಅಮ್ಮಾ' ಅಂತ ಗೊತ್ತು.ನನ್ನನ್ನು ತನ್ನಲ್ಲಿ ಹೊತ್ತಿದ್ದಾಳೆ ಅಂತಾನೂ ಗೊತ್ತು.ನನಗೆ ಒಂದೆ ಸಮ ಮುದುರಿ ಕುಳಿತಿದ್ದು ಬೇಸರವಾದಾಗ ಕಾಲನ್ನೆತ್ತಿ ಬೀಸುತ್ತೆನೆ,ಆಗ ಅಮ್ಮ ಮೆಲ್ಲಗೆ ನನ್ನ ಸವರಿದ ಅನುಭವವಾಗುತ್ತದೆ. ಆದರೆ ಈಗೀಗ ಅಮ್ಮ ಬರೀ ಅಳುತ್ತಾಳೆ,ಕಾರಣದರಿವಿಲ್ಲ ನನಗೆ. ಹೇಗೆ ಕೇಳಲಿ ನಾನು?ಅಮ್ಮ ಅತ್ತಾಗೆಲ್ಲ ದಹಿಸಿಹೋಗುತ್ತೆನೆ ನಾನು,ದುಃಖದಿಂದ.ನನ್ನ ಮುದ್ದು ಅಮ್ಮನಿಗೆ ಸಮಾಧಾನ ಹೇಳಲು ಆಗದ ನನ್ನ ಸ್ಥಿತಿಗೆ ಬೇಸರವಿದೆ ನನಗೆ.ಏನೂ ತೋಚದೆ ಅಮ್ಮ ಅತ್ತಾಗ ನಾನೂ ಅಳುತ್ತೆನೆ.ನಾನು ಒದ್ದು ಚೆಂಡಾಟವಾಡಿದಾಗ,ಈಗ ಎಂದಿನಂತೆ ಅಮ್ಮ ನನ್ನ ಸವರುವುದಿಲ್ಲ.ಮೊದಲೆಲ್ಲಾ ನನ್ನ ಮುಟ್ಟಿದಂತೆ ಸವರಿ ಮುದ್ದುಗರೆಯುತ್ತಾ ಮಾತನಾಡುತಿದ್ದ ಅಮ್ಮ,ಈಗ ಮೌನಗೌರಿಯಂತಾಗಿದ್ದಾಳೆ.ಅಮ್ಮ ಮಲಗಿದಾಗ ನನಗೆ ಬೇಡವೆಂದರೂ ಕಣ್ಮುಚ್ಚಿ ಬರುತ್ತದೆ.ಮಲಿಗಿದಾಗಲೂ ಅಮ್ಮ ಬೀಡೊ ನಿಟ್ಟುಸಿರು ಗುಡುಗಿನಂತೆ ನನ್ನ ಹೆದರಿಸುತ್ತದೆ.ನನಗ್ಯಾಕೋ ಅಮ್ಮ ನನ್ನಿಂದ ದೂರವಾಗ್ತಿದಾಳೆ ಅನ್ನಿಸತೊಡಗಿದೆ.ಏಷ್ಟೋ ದಿನ ಅಮ್ಮಾ ಊಟಾನೇ ಮಾಡೊದಿಲ್ಲ,ನನಗಿಲ್ಲಿ ಹಸಿವಾಗ್ತಿರೊದೂ ಅಮ್ಮಂಗೆ ತಿಳಿಯೊಲ್ವ? ನನಗಿಲ್ಲಿದ್ದು ಸಾಕಾಗಿದೆ.ಬೇಗ ಹೊರಗೆ ಬರಬೇಕು,ಈ ಕತ್ತಲೆಯ ಸೀಳಿಕೊಂಡು ನನ್ನ ಮುದ್ದು ಅಮ್ಮನಿಗೆ ಬೆಳಕಾಗಿ.ಅಮ್ಮ ಅಳುವಾಗ ನಾನೇ ಸಮಾಧಾನಿಸಬೇಕು,ನನ್ನ ಹತ್ರ ಅಮ್ಮ ಮಾತನಾಡದ್ದಕ್ಕೆ ಬೈಯಬೇಕು,ಊಟ ಮಾಡದ್ದಕ್ಕೆ ಗದರಿಸಬೇಕು. ಅಯ್ಯೋ! ಈ ಅಮ್ಮ ನನಗೆ ಮಾತಾಡ್ಲಿಕ್ಕೆ ಬೀಡೊದಿಲ್ಲ,ಬೇಗ ನಿದ್ರೆ ಮಾಡ್ತಾಳೆ..ಆಆಆ ಹ್ಮಾಂ.......

                            --ಎರಡು--
    'ಅಯ್ಯೋ ನೋವು...' ಅಂತ ಅಮ್ಮ ಸಿಕ್ಕಾಪಟ್ಟೆ ಕಿರಿಚಾಡುತ್ತಿದ್ದಾಳೆ,ಒಂದೆ ಸಮ ಒದ್ದಾಡುತ್ತಿದ್ದಾಳೆ. ಪಾಪ ಅಮ್ಮ! ಏನಾಯ್ತೋ ಗೊತ್ತಿಲ್ಲ,ಉರುಳಾಡುತ್ತಿದ್ದಾಳೆ..ನನಗೂ ಅಳು ಬರ್ತಿದೆ.ಅಯ್ಯೋ ಅಮ್ಮ ನನಗೇನಾಯ್ತು?ನನ್ನ ಯಾರೋ ಹೊರದೂಡಿದಂತಾಗುತಿದೆ.ಅಂದ್ರೀಗ ನಾನು ನನ್ನಮ್ಮನ ಬಳಿಗೆ? ತುಂಬಾ ಖುಷಿಯಾಗ್ತಿದೆ,ಜೊತೆಗೆ ಎನೋ ಆತಂಕ!!ಅಬ್ಬಾ!ಏಷ್ಟು ಬೆಳಕು.ಕಣ್ಬಿಡಲೂ ಆಗ್ತಿಲ್ಲ..ತುಂಬಾ ಅಳುಬರ್ತಿದೆ,ಯಾರೋ ಎತ್ತಿಕೊಳ್ತಿದ್ದಾರೆ.ಆದರೆ ಅಮ್ಮನ ಬಳಿಗೇ ಬಿಡ್ತಿಲ್ಲ.ಅತ್ತೂ-ಅತ್ತೂ ಸುಸ್ತಾಯ್ತು,ಎಲ್ಲರ ಮೇಲೆ ಕೋಪ ಬರ್ತಿದೆ ನನಗೆ.ಅಯ್ಯಬ್ಬಾ!ಅಂತೂ ನನ್ನನ್ನೂ ಅಮ್ಮನ ಕೈಲಿ ಕೊಟ್ರು.ಅಮ್ಮಾ ನನ್ನನ್ನ ಹೂವಂತೆ ನನ್ನೆತ್ತಿಕೊಂಡು ಎದೆಹಾಲ ಕೊಟ್ಟಳು.ನೆತ್ತಿಗೆ ಮುತ್ತಿಟ್ಟಳು ಆದರೆ ಕಣ್ಣಲ್ಲಿ ನೀರಿತ್ತು,ಅದೇಷ್ಟು ಬೆಚ್ಚಗಿತ್ತು ಅಮ್ಮನ ಮಡಿಲು..ತಲೆನೇವರಿಸಿದಳು ಅಮ್ಮಾ,ಮಂಪರಂತಾಗಿ ನಿದ್ದೆ ಬಂತು.ಜೋರಾದ ನಿದ್ದೆಯಿಂದೆದ್ದು ಸುತ್ತ ನೋಡಿದೆ ಅಮ್ಮನಿರಲಿಲ್ಲ ಅಲ್ಲೆಲ್ಲೂ.ಕಾದೆ-ಕಾದೆ ಅಮ್ಮ ಬರಲೇ ಇಲ್ಲ.ಛೇ! ನಾ ನಿದ್ದೆ ಮಾಡಲೇ ಬಾರದಿತ್ತು.ಈ ಅಮ್ಮನಿಗೆ ನನ್ಮೇಲೆ ಕೋಪ ಬಂದು ಬಿಟ್ಟುಹೋದಳಾ?ಅಮ್ಮಾ! ನಾನಿನ್ನ ಮಡಿಲಲ್ಲಾಡಬೇಕಮ್ಮಾ,ನಿನ್ನ ಮುದ್ದಿಸಿ ಸಮಾಧಾನಿಸಬೇಕಮ್ಮಾ ಬೇಗ ಬಾ..ನಿನ್ನ ಅಳುವಿಗೆ ಕಾರಣಬೇಕಮ್ಮಾ ನನಗೆ..ನನಗೂ ಹೇಳದೆ ಎಲ್ಲಿ ಹೋದೆಯಮ್ಮಾ?ನನಗೆ ಮತ್ತೆ ಅಳುವುಕ್ಕಿ ಬಂದಿತ್ತು, ಜೊತೆಗೆ ನಿಯಂತ್ರಿಸಲಾಗದಷ್ಟು ಬಿಕ್ಕು..ಜೋರಾಗಿ ಬಿಕ್ಕಳಿಸತೊಡಗಿದೆ.ಬಿಳಿಯಂಗಿಯುಟ್ಟ ಹುಡುಗಿಯರಿಬ್ಬರು ಓಡಿಬಂದು ನನ್ನನ್ನೆತ್ತಿಕೊಂಡರು,ಅಮ್ಮನಷ್ಟು ಸುಖವಾಗಿಲ್ಲದಿದ್ದರೂ ಯಾರೋ ನನ್ನ ಜೊತೆಗಿದ್ದಾರೆಯೆಂಬ ಭಾವನೆ ಚೆನ್ನಾಗಿತ್ತು..ಒಬ್ಬಳು ಬಾಟಲಿಯಲ್ಲಿದ್ದ ಹಾಲನ್ನು ಕುಡಿಸಿದಳು,ಹಸಿವಾಗಿತ್ತು ಕುಡಿದೆ.ಅಮ್ಮನ ಅಮೃತದ ರುಚಿಕಂಡಿದ್ದ ನನಗೆ ಉಳಿದಿದ್ದೆಲ್ಲಾ ಸಪ್ಪೆಯೆನಿಸಿತು..
  ಆ ಹುಡುಗಿಯರಿಬ್ಬರೂ ನನ್ನಮ್ಮನ ಬಗ್ಗೆ ಮಾತಾಡಿಕೊಳ್ತಿದ್ದನ್ನು ನೋಡಿ ಕಿವಿ ನೆಟ್ಟಗಾಯ್ತು  ನಂದು,ಕೇಳತೊಡಗಿದೆ ಕಿವಿ ನಿಮರಿಸಿ 'ಅಲ್ವೆ ಗಾಯತ್ರಿ!ಅದೇಂತ ಕೆಟ್ಟ ಜನ್ರೇ ಮಾರಾಯ್ತಿ?ಪಾಪ ಇಂತಾ ಚೆಂದದ ಕೂಸನ್ನ ಈ ಆಸ್ಪತ್ರೆಲಿ ಬಿಟ್ಟಿಕ್ ಹೋಗಿರಲೇ..ಈ ಮಗುಗೆ ಅಪ್ಪ-ಅಮ್ಮನ ಜೊತೆ ಬದ್ಕು ಯೋಗಿಲ್ಲ ಬಿಡು. ಪಾಪದ್ದೆ ಕೂಸು ದೇವಾ... ಹೆಂಗ್ ನೋಡ್ತಿತ್ತು ನೋಡು,ನನ್ ಹೊಟ್ಟೆಲೆಲ್ಲಾ ಸಂಕ್ಟಾಗ್ತದ್ಯೇ ಪಾಪ' ಎಂಬ ಲೋಚಗುಟ್ಟುವಿಕೆ ಕೇಳಿ ನನಗೆ ತಲೆ ಸುತ್ತಿದಂತಾಗಿ, ಕಣ್ಣೆಳೆಯಿತು..
  
                             --ಮೂರು--
     ಮರುದಿನ ಕಣ್ಣುತೆರೆಯುವಷ್ಟರಲ್ಲಿ ನಾನು ಅನಾಥಾಶ್ರಮದ ಹೊಸಿಲಲ್ಲಿದ್ದೆನೆಂದು ತಿಳಿಯಿತು..ಇಲ್ಲಿನ ದಾದಿಗಳು ನನ್ನಮ್ಮನಂತೆ ತಲೆಸವರಿ ಪ್ರೀತಿ ಮಾಡೊದಿಲ್ಲ, ಮಡಿಲಲ್ಲಿ ಮಲಗಿಸಿ ಮುದ್ದು ಮಾಡೊದಿಲ್ಲ. ಈ ನನ್ನಮ್ಮ ನನ್ಯಾಕೇ ಬಿಟ್ಟುಹೋದ್ಲು? ಎಂಬ ಪ್ರಶ್ನೆಗೆ ಉತ್ತರವಿಲ್ಲದೆ ಅಳುವುಕ್ಕಿ ಬಂತು..ದಾದಿಯ ಬೈಗುಳ ಕೇಳಿ ಅಳುಮರೆತು ಸುಮ್ಮನಾದರೂ,ಅಳುತ್ತಿದ್ದೆ ಮನದೊಳಗೇ..'ಅಮ್ಮಾ! ನಿನ್ನ ಈ ಮುದ್ದು ಗೊಂಬೆ,ಚೆಂದನದ ಪುತ್ಠಳಿ ನಿನಗಿಂದು ಬೇಡವಾದೆನಾ? ಅಷ್ಟೆಲ್ಲಾ ಮುದ್ದು ಮಾಡ್ತಿದ್ದೊಳ್ಗೆ ನನ್ನನ್ನಾ ಅನಾಥ ಮಗುವನ್ನಾಗಿ ಮಾಡಲಿ ಮನಸ್ಸಾದರೂ ಹೇಗೆ ಬಂತು?ಅಮ್ಮ..ಅಮ್ಮ!ಇಲ್ಯಾರೂ ನನ್ನ ಪ್ರೀತಿ ಮಾಡೊಲ್ಲ,ಮುದ್ದು ಮಾಡೊಲ್ಲ ನಿನ್ನಂತೆ..ನಿನ್ನ ಮಡಿಲಲ್ಲಿ ಮೈಮರೆತು ಮಾಡಿದ ಮಂಪರು ನಿದ್ರೆ  ಮತ್ತೆ ಸಿಗೋಲ್ವ ನನಗೆ? ನಿನಗೆ ನಾನ್ಯಾಕೆ ಇಷ್ಟವಾಗಿಲ್ಲ ಅಮ್ಮಾ? ಹೆಣ್ಣು ಅಂತಲೇ?ಇಲ್ಲಮ್ಮ!ಹಾಗೆನೂ ಇಲ್ಲಾ ಅಲ್ವಾ?ನೀನೆಷ್ಟು ಒಳ್ಳೆಯವಳು, ನಿನಗೆ ನಾನಂದ್ರೆ ತುಂಬಾ ಇಷ್ಟ ಅಂತ ಗೊತ್ತು ನನಗೆ.  ನೀ ಮತ್ತೆ ಬಂದೇ ಬರ್ತಿಯಾ ನನ್ನ ಬಳಿ ಅಲ್ವಾ ಅಮ್ಮ. ಈ ಪ್ರಶ್ನೆಗೆಲ್ಲಾ ಉತ್ತರಿಸಲೂ ಯಾರೂ ಇರಲಿಲ್ಲ. ಈ ಬಾರಿ ಅಳು ತಡೆಯಲಾಗಲಿಲ್ಲ.ಬಿಕ್ಕಿ-ಬಿಕ್ಕಿ ಅತ್ತೂ-ಅತ್ತೂ ಸುಸ್ತಾಗಿತ್ತು.ಬರುವ ಮಂಜಾವು ನನಗೆ ಶುಭವನ್ನೀಯುವುದೆಂದ ಭರವಸೆಯಿಂದ,ಅಮ್ಮಾ ಮತ್ತೆ ಬಂದೆ ಬರುವಳೆಂಬ ನಂಬಿಕೆಯೊಡನೆ ನಿದ್ರೆ ಬಂತು..
            -----

   ಎಲ್ಲಕ್ಕೂ ಸಾಕ್ಷಿಯಾದ  ಸೂರ್ಯ ಮಾತ್ರ 'ಎಲ್ಲಿರುವೆಯಮ್ಮಾ?' ಎನ್ನುತ್ತಲೇ ಮಗುವ ಅಮ್ಮನ ಹುಡುಕಿ ತರಲು ಪಡುವಣದತ್ತ ಹೊರಟ,ಮರುದಿನ ಮತ್ತೆ ಬರುವಾಗ ಅಮ್ಮನ ಕರೆತರುವ ಭರವಸೆಯನ್ಹೊತ್ತು..

-ಶುಭಶ್ರೀ ಭಟ್ಟ

ಅಲಕೆಯೆಂಬ ಸಂಪಿಗೆ

(ಪ್ರತಿಲಿಪಿ ಕನ್ನಡ ಮತ್ತು ಅವಧಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದು)


    

             ಸುಕ್ಕಾಗಿರೋ  ಮುಖ,ಪೊರೆ ಕಳಚಿದಂತಿರುವ ಕೂದಲುಗಳ ರಾಶಿ,ಇಳಿಬಿದ್ದ ದೇಹ,ಗೂನಾದ ಬೆನ್ನು,ಮಿಂಚಿಲ್ಲದ ಕಣ್ಣುಗಳು,ಏಸಳಿಲ್ಲದ ಸಂಪಿಗೆಯಂತೆ.. ಸಂಪಿಗೆಯೆಂದೊಡನೆ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಿದ್ದ ಅಲಕೆಯ ನೆನಪು ಹಿಂದಕ್ಕೋಡಿತು..
   "ನನ್ನ ಹೆಸರು ಅಲಕೆ,ಮಹಾರಾಜರ ಪ್ರೀತಿಯ ಸಂಪಿಗೆ..ನನ್ನ ಜೊತೆಗಿನ ಸಖಿಯರು ಹೇಳುವಂತೆ ನಾನು ಚೆಲುವಿನ ಖನಿ. ದೊರೆಗಳು ವರ್ಣಿಸಿದಂತೆ 'ಉದ್ದನೆಯ ನಿಲುವು,ಹಾಲು ಬಿಳುಪು ಬಣ್ಣ,ಗುಲಾಬಿಗೆನ್ನೆ,ಚಿಗುರೆಲೆಯ ಕೆಂದುಟಿ,ಸಂಪಿಗೆ ನಾಸಿಕ,ಜಿಂಕೆಯೊಡುವ ಕಣ್ಣುಗಳು'..ಇಷ್ಟೆಲ್ಲಾ ಸೌಂದರ್ಯದರಸಿಯಾದರೇನು ಬಂತು,ಪಟ್ಟದರಸಿಯಾಗುವ ಭಾಗ್ಯವಂತೂ ಬರಲಾರದು..ಕಾರಣವೀಷ್ಟೇ! ನಾನ್ಯಾರೋ ರಾಜಕುವರಿಯಲ್ಲ,ಬದಲಿಗೆ ಹಸ್ತಿನಾಪುರ ಮಹಾರಾಜರುಗಳ ಸೇವೆಗಾಗೇ ಜೀವನ ಮುಡಿಪಿಡುವ ದಾಸಿಯ ಮಗಳು..
   'ಯಯಾತಿ' ದೊರೆಗಳ ಮನಸ್ಸನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಂಡಿರುವವರಲ್ಲಿ ನಾನು ಒಬ್ಬಳು.ಚಿಕ್ಕವಳಿದ್ದಾಗಲಿಂದ ಯುವರಾಜರ ಜೊತೆಗೆ ಆಡಿ ಬೆಳೆದವಳು,ಒಡನಾಡಿದವಳು,ಜೊತೆಗಾದವಳು..
    ಯುವರಾಜರು ಹುಟ್ಟುತ್ತಲೇ ಕವಿಹೃದಯ ಹೊಂದಿದವರು.ಅರಮನೆಯಂಗಳದಲ್ಲಿನ ಹೂದೋಟದಲ್ಲೇ ಬಹುತೇಕ ಸಮಯ ಕಳೆಯುತ್ತಿದ್ದರು.ಬಾಲ್ಯದಿಂದಲೂ ಹೂಗಳ ಸೌಂದರ್ಯವನ್ನೂ,ಸುಗಂಧವನ್ನೂ ಆರಾಧಿಸುತ್ತ,ಆಘ್ರಾಣಿಸುತ್ತ ಬೆಳೆದವರು. ಬೆಳೆಯುತ್ತ,ಬೆಳೆಯುತ್ತ ಸ್ತ್ರೀಯರಲ್ಲೇ ಹೂವನ್ನು ಕಂಡವರು. ಅವರು ಆಘ್ರಾಣಿಸಿದ ಹೂಗಳಲ್ಲಿ ನಾನು ಒಬ್ಬಳು.ಅಲಕೆಯೆಂಬ ಹೂವಿಗೆ ಅಂದರೆ ನನಗೆ ಅವರಿಟ್ಟ ಹೆಸರು 'ಸಂಪಿಗೆ'..
   ನನಗೆ ಆ ಮೊಗ್ಗುಬಿರಿದು ಹೂವಾದ ಕ್ಷಣವಿನ್ನೂ ನೆನಪಿದೆ. ನಗರದೇವಿಯ ಉತ್ಸವದಲ್ಲಿ ಶತ್ರುವಿನಿಂದ ಗಾಯಗೊಂಡು ಅಜ್ನಾತ ಸ್ಥಳದಲ್ಲಿ ಶುಶ್ರೂಷೆ ಪಡೆಯುತ್ತಿದ್ದ ಯಯಾತಿ ದೊರೆಗಳ ನೋಡಿಕೊಳ್ಳಲು ನನ್ನನ್ನು ನೇಮಿಸಲಾಗಿತ್ತು.ಪ್ರಜ್ನೆಯಿಲ್ಲದ ಅವರನ್ನು ಹಗಲು-ರಾತ್ರಿಯ ಪರಿವೆಯಿಲ್ಲದೇ ನೋಡಿಕೊಳ್ಳುತ್ತಿದ್ದೆ.ವಾರದ ನಂತರ ಅಪರಾಹ್ನಕ್ಕೆ ನಿಧಾನವಾಗಿ ಕಣ್ತೆರೆದರು.
   ನನಗೇ ಜೀವ ಮರಳಿಬಂದಷ್ಟು ಖುಶಿ-ಸಮಾಧಾನ,ಕುಲಪುತ್ರನಿಗೆ ಮರುಜನ್ಮವಾದಷ್ಟು ಸಂತಸ ನನ್ನಮ್ಮ-ಅರಮನೆಯ ಹಿರಿಯದಾಸಿಗೆ.ಮಹಾರಾಜ-ಮಹಾರಾಣಿಯರ ಸಂಭ್ರಮವಂತೂ ಹೇಳತೀರದು.ಎಲ್ಲರನ್ನೂ ದೀರ್ಘವಾಗಿ ನೋಡಿದ ಯಯಾತಿ ರಾಜರಿಗೆ ನನ್ನ ಕಂಡೊಡನೆ ಕಣ್ಣಲ್ಲಿ ಮಿಂಚು,'ಈ ಸಂಪಿಗೆಯ ಸುಗಂಧವೂ ನನ್ನ ಮೂಗಿಗೆ ಸೋಕಿದೇಯಿತ್ತ ಇಷ್ಟುದಿನ' ಎಂದು ಮೆಲ್ಲನುಸುರಿದಾಗ ನನ್ನೊಳಗೇನೋ ಅರಿಯದ ಪುಳಕ..ಅದಾಗಿ ಎರಡು ದಿನಕ್ಕೆ ನಾ ಬಿರಿದ ಹೂವಾಗಿದ್ದೆ,ನನ್ಹೆಸರು ಸಂಪಿಗೆಯೆಂದು ಮರುನಾಮಕರಣಗೊಂಡಿತ್ತು.ಮತ್ತದೇಷ್ಟೋ ದಿನ,ಲೆಕ್ಕವಿಲ್ಲದಷ್ಟು ಹಗಲು-ರಾತ್ರಿ ನಾನವರ ಶಯ್ಯೆಯಲ್ಲಿ ಸಂಪಿಗೆಯಂತೆ ಎಸಳುದುರಿಸಿ ಮಲಗಿದ್ದೆ,ಮುಲುಗಿದ್ದೆ,ನಲುಗಿದ್ದೆ..
   ಅಷ್ಟರಲ್ಲಾಗಲೇ ಈ ಸಂಪಿಗೆಯಲ್ಲೊಂದು ಪುಟಾಣಿ ಮೊಗ್ಗು ಅರಳತೊಡಗಿತ್ತು.ನಾನು ನಿಧಾನವಾಗಿ ಅರಮನೆಯೆಡೆಗೆ ಹೋಗುವುದನ್ನು ನಿಲ್ಲಿಸಿದ್ದೆ.ನನ್ನ  ಪ್ರಿಯದೊರೆಯ ಪ್ರೀತಿಯ ಮೊಗ್ಗನ್ನು ಕಣ್ರೆಪ್ಪೆ ತರಹ ಜೋಪಾನ ಮಾಡುವುದರಲ್ಲೇ ಕಾಲಕಳೆಯತೊಡಗಿದೆ. ಮತ್ತೇ ಯಯಾತಿಯ ಸೇವೆಗೆ ಹಿಂತಿರುಗಿ ಬರುವಷ್ಟರಲ್ಲೇ,ಋಷಿಪುತ್ರಿ ದೇವಯಾನಿ-ಶರ್ಮಿಷ್ಠೆಯೆಂಬ ತ್ರಿಲೋಕ ಸುಂದರಿ ಪ್ರಿಯದಾಸಿಯಾಗಿ ಸ್ಥಾನಗಳಿಸಿಯಾಗಿತ್ತು.ಇನ್ನುಮೇಲೆ ಈ ಕಾಡುಸಂಪಿಗೆಯ ಅಗತ್ಯವೇ ಯಯಾತಿ ಮಹಾರಾಜರಿಗಿಲ್ಲವೆಂದು ಅರಿವಾದಾಗ ಮಾತ್ರ ಕಂಬನಿ ಕೆನ್ನೆಯ ತೋಸಿತ್ತು..ಭಾರವಾದ ಮನಸ್ಸಿಂದ ಮನೆಗೆ ಹಿಂತಿರುಗಿ ಬರುವಷ್ಟರಲ್ಲಿ ಎಸಳಿಲ್ಲದ ಸಂಪಿಗೆಯಾಗಿದ್ದೆ.ಅದೇ ಕೊನೆ,ಮತ್ಯಾವತ್ತೂ ನಾನು ಅರಮನೆಯೊಳಗೆ ಕಾಲಿಡಲಿಲ್ಲ,ಮಹಾರಾಜರ ಸೇವೆಗೆ ಹೋಗಲಿಲ್ಲ,ಈ ಕಾಡುಸಂಪಿಗೆಯ ಸುಗಂಧವನ್ನು ಆಘ್ರಾಣಿಸುವ ಅವಶ್ಯಕತೆ ಅವರಿಗೆ ಬರಲೂ ಇಲ್ಲ..
   ಅವರೊಡನೆ ಕಳೆದ ಆ ಮಧುರ ಕ್ಷಣಗಳ ಮೆಲಕುಹಾಕುತ್ತಾ,ಅವರು ಪ್ರಸಾಧಿಸಿದ ಪುಟ್ಟಸಂಪಿಗೆಯನ್ನು ದಾಸೀ ಪರಂಪರೆಗೆ ಜಾರಗೊಡದೇ,ಸ್ವತಂತ್ರವಾಗಿ ಬೆಳೆಸಿ, ಬದುಕು ಕಟ್ಟಿಕೊಟ್ಟ ಸಮಾಧಾನವೇ ಸಾಕು ಈ ಜೀವಕ್ಕೆ.." ಎಂದುಕೊಳ್ಳುತ್ತಾ ದೀರ್ಘ ನಿಟ್ಟುಸಿರಿಟ್ಟು ನೆನಪಿನಾಳದಿಂದ ಹೊರಬಂದಳು ಅಲಕೆ..
     ರಚನೆ: ಶುಭಶ್ರೀ ಭಟ್ಟ
(ಯಯಾತಿ ಪುಸ್ತಕದಲ್ಲಿ ಬರುವ ದಾಸಿಯರ ಪಾತ್ರದಿಂದ ಪ್ರೇರಿತವಾಗಿ ಬರೆದಿದ್ದು)

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...