Tuesday 16 May 2017

ಕಥೆಯಾದಳು ರಾಧೆ

(ಪ್ರತಿಲಿಪಿ ಕನ್ನಡದಲ್ಲಿ ಪ್ರಕಟವಾದ ಕಥೆ)



  'ಪಿಳ್ಳಂಗೋವಿಯ ಚೆಲ್ವ ಕೃಷ್ಣನಾ...' ಮೆಲ್ಲಗೆ ಹಾಡಿಕೊಳ್ಳುತ್ತಾ ಮಜ್ಜಿಗೆಯನ್ನು ಕಡೆಯುತ್ತಿದ್ದಳಾಕೆ.ಮಧುರವಾಗಿ ಮೆಲುದನಿಯಲ್ಲಿ ತೇಲಿ ಬರುತ್ತಿದ್ದ ಆಕೆಯ ಧ್ವನಿಗೆ ಅಕ್ಕ-ಪಕ್ಕದಲ್ಲಿನ ಗೋಪಿಕೆಯರಲ್ಲೆನೋ ಕದಲಿಕೆ,ಹೇಳಿಕೊಳ್ಳಲಾಗದ ಚಡಪಡಿಕೆ,ಕನವರಿಕೆ.ಕೊನೆಗೆ ತಡೆಯಲಾಗದೇ ತಮ್ಮ ಕೆಲಸಗಳನ್ನೆಲ್ಲಾ ಅರ್ಧಕ್ಕೆ ಬಿಟ್ಟು, ಅವಳ ಮನೆಯಲ್ಲಿ ನೆರೆದರು ಗೋಪಿಕೆಯರು. ಎಲ್ಲರೂ ಮಂತ್ರಮುಗ್ಧರಾದವರಂತೆ  ಅವಳ ಹಾಡಿಗೆ ತಲೆದೂಗುತ್ತಾ ನಿಂತಲ್ಲೇ ಶಿಲೆಯಾಗಿದ್ದರು..
 ಮಜ್ಜಿಗೆ ಕಡೆಯುವುದ ಮುಗಿಸಿ,ಹಾಡುತ್ತಲೇ ಹಿಂತಿರುಗಿದವಳಿಗೆ ಕಾಣಿಸಿದ್ದು ಮನೆಯೆಲ್ಲಾ ನೆರೆದಿರುವ ಗೋಪಿಯರು.ಅವಳಿಗದು ಅಚ್ಚರಿಯುಂಟು ಮಾಡಲಿಲ್ಲ, ಬದಲಿಗೆ ಮುಜುಗರವಾಯ್ತೋ ಎಂಬ ಭಾವದಿಂದ ಮೆಲ್ಲಗೆ ಕೇಳಿದಳು 'ಸಹೋದರಿಯರೇ!ನನ್ನಿಂದ ತಮಗೇನಾದರೂ ಉಪದ್ರವವಾಯಿತೇ?'. ಅದನ್ನು ಮೊದಲೇ ಗ್ರಹಿಸದಂತೆ ಗೋಪಿಯೊಬ್ಬಳು ಗುಂಪಿನಿಂದ ಮುಂದೆ ಬಂದು 'ಸಹೋದರಿ! ವರುಷವೇ ಕಳೆಯಿತು.ಇನ್ನು ನಮ್ಮ ಮುದ್ದು ಕೃಷ್ಣನ ದರ್ಶನವಾಗುವುದ್ಯಾವಾಗ?' ಎಂದು ಕೇಳಿದಳು. ಅದಕ್ಕೇನೂ ಮಾತನಾಡದೇ ಮುಗುಳುನಗುತ್ತಾ ತನ್ನ ಕೆಲಸಕ್ಕೆ ಹಿಂತಿರುಗಿದವಳ ಕಣ್ಣಲ್ಲಿ ತೆಳ್ಳನೆಯ ಪನ್ನೀರ ಪೊರೆಯಿತ್ತು.ತಮ್ಮದೇ ಭಾವದ ಗುಂಗಲ್ಲಿರುವ ಗೋಪಿಯರಿಗದು ಕಾಣಿಸಲೂ ಇಲ್ಲ.
 ಗೋಪಿಯರೆಲ್ಲಾ ತಮ್ಮದೇ ಆದ ಮಧುರ ನೆನಪುಗಳನ್ನು ಮೆಲಕು ಹಾಕುತ್ತಾ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಇವಳ ಕೈ ದೈನಂದಿನ ಕೆಲಸ ಮುಂದುವರೆಸುತ್ತಿದ್ದರೂ,ಮನವು ಹಿಂದಕ್ಕೊಡಿತು..
              -ನೆನಪು:೧-
 ಅದೊಂದು ಸುಂದರ ಸಂಜೆ ಜೀವನದಲ್ಲಿ ಮರೆಯಲಾಗದ ಮೊದಲ ಮಧುರ ಸಂಜೆ. ಎಲ್ಲಾ ಗೋಪಿಯರೊಡಗೂಡಿ ಕಾತ್ಯಾಯಿನಿದೇವಿಯ ಪೂಜೆಗೆಂದು ಹೂವನ್ನು ತರಲು ಕಾನನಕ್ಕೆ ಬಂದಿದ್ದೆ. ಹೂವನ್ನು ಕೊಯ್ಯುತ್ತಿದ್ದಾಗಲೇ ಕೇಳಿಸಿತ್ತು ಆ ಸುಮಧುರವಾದ ಕೊಳಲನಾದ. ಅದ ಕೇಳಿ ಮೈಯೆಲ್ಲಾ ಸಂಚಲನಗೊಂಡಿತ್ತು, ಮನವ್ಯಾವುದೋ ಸಮ್ಮೋಹಿನಿಗೆ ಒಳಗಾದಂತಿತ್ತು, ಗೋಪಿಯರ ಮೊಗವಾಗಲೇ ಕೆಂದಾವರೆಯಂತೆ ಅರಳಿಕೊಂಡಿತ್ತು.ಆ ಕೊಳಲಗಾನದ ಜಾಡುಹಿಡಿದು ಹುಡುಕುತ್ತಾ ಹೊರಟೆವು.ಆಗಲೇ ಕಾಣಿಸಿದ್ದು ಆ ಶ್ಯಾಮಸುಂದರಾಂಗ. ಅವನ ಮುದ್ದು ನೀಲ ಕೈಗಳು ಕೊಳಲೊಡನೆ ತಿಲ್ಲಾನ ಹಾಡುತಿರೆ,ತನ್ನ ಪುಟ್ಟ ಕೆಂಬಣ್ಣದ ತುಟಿಯನ್ನು ಆ ಕೊಳಲತುದಿಗಿರಿಸಿದ್ದ,ಅರಳುಗಣ್ಣನ್ನು ಅರೆತೆರೆದು ಆಲದಮರದ ಕೆಳಗೆ ಪವಡಿಸಿದ್ದ.ಕೆಂಪಾದ ಅವನ ಪುಟ್ಟ ಪಾದವನ್ನು ಪುಟ್ಟಕರುವೊಂದು ಮೆಲ್ಲ ಮೂಸುತ್ತಿತ್ತು.ಆ ಸುಮಧುರ ಗಾಯನಕ್ಕೆ ತಂಗಾಳಿ ತಂಬೂರಿ ಮೀಟುತ್ತಿರೆ,ದುಂಬಿಯೊಂದು ಶೃತಿ ತೀಡುತ್ತಿತ್ತು, ಸುತ್ತಲಿನ ವೃಕ್ಷಗಳೆಲ್ಲಾ ಪ್ರೇಕ್ಷಕರಾಗಿ ತಲೆದೂಗತೊಡಗಿದ್ದವು.ಪಶು-ಪಕ್ಷಿಗಳೆಲ್ಲಾ ಪಕ್ಷಭೇದ ಮರೆತು ಸುತ್ತ ನೆರೆದು ಗಾಯನಕ್ಕೆ ಕಿವಿಯಾಗಿದ್ದವು,ಎತ್ತ ನೋಡಿದರೂ ಗೋಪಿಯರ್ಯಾರೂ ಕಾಣಬರಲಿಲ್ಲ.ಮೊದಲ ಬಾರಿಗೆ ಆ ದಟ್ಟ ಕಾನನದಲ್ಲಿ ಭಯವೂ ಆಗಲಿಲ್ಲ,ಗಾಭರಿ ಬೀಳಲೂ ಇಲ್ಲ.ಆದರೆ ಶ್ಯಾಮಸುಂದರನ ಸನಿಹ ಬರುವ ಧೈರ್ಯ ಸಾಲದೇ ನಿಂತಲ್ಲೇ ಶಿಲೆಯಾಗಿದ್ದೆ. ಏಲ್ಲೋ ಗಾಢ ಕನಸಿನಲ್ಲಿರುವಂತೆ ಭಾಸವಾಗುತ್ತಿತ್ತು.
   ಒಮ್ಮೇಲೆ ಎಚ್ಚೆತ್ತೆ,ಸುದೀರ್ಘವಾದ ನಿದ್ದೆಯಿಂದೆದ್ದಂತೆ. ಸುತ್ತ ನೋಡಿದರೆ ನಾನಿದ್ದುದು ನನ್ನ ಮನೆಯಲ್ಲೇ..ನಿಜಕ್ಕೂ ಗಾಭರಿಬಿದ್ದೆ. 'ಅರೆರೆ !! ಇದೇನಿದು.ಹೇಗೆ ಮನೆಗೆ ಬಂದೆ ನಾನು?ಮನದಲ್ಲಿ ಅಸ್ಪಷ್ಟ ನೆನಪು,ಎಲ್ಲಾ ಕಳೆದ ಕನಸಿನಂತೆ.ಅಂದರೇ ಆ ಶ್ಯಾಮಸುಂದರ ಕೃಷ್ಣನೇ ನನ್ನನ್ನಿಲ್ಲಿಗೇ ತಂದುಬಿಟ್ಟನೇ? ಅಥವಾ ಗೋಪಿಯರು?.. ಹಾಗಾದರೆ ಕೊಳನೂದಿಯಾದ ಮೇಲೆ ಕೃಷ್ಣ ತುಂಟನಗುವ ಬೀರುತ್ತಾ ನನ್ನೆಡೆಗೆ ಬಂದಿದ್ದು,ನನ್ನ ಅಂಗೈ ಹಿಡಿದು ಮೆಲ್ಲ ಚುಂಬಿಸಿದ್ದು, ಅನಾಮತ್ತಾಗಿ ನನ್ನನ್ನೆತ್ತಿಕೊಂಡು ಜೋಕಾಲಿ ತೂಗಿಸಿದ್ದು,ಅವನ ಹೆಗಲಿಗೆ ತಲೆಯಿಟ್ಟಾಗಲಿನ ಆ ಮಧುರಾನುಭೂತಿ ಎಲ್ಲವೂ ಭ್ರಮೆಯೇ?ಎಲ್ಲವೂ ಕನಸೇ?' ಎನೂ ಅರಿವಾಗಲಿಲ್ಲ. ಆದರೆ ಒಂದಂತೂ ಸತ್ಯ 'ಆ ಶ್ಯಾಮಸುಂದರ ಮುರಳಿ ಕೃಷ್ಣ ನನ್ನವ.ನನ್ನೊಳಗೇ ಇದ್ದಾನೆ ಅವ,ಕಣಕಣದಲ್ಲೂ'. ಹೀಗೆ ಅಂದುಕೊಂಡಾಗ ಮಾತ್ರ ಹೃದಯತುಂಬಿ ಬಂತು,ಅವ್ಯಕ್ತಭಾವದಿಂದ ಮನ ಕುಣಿಯುತ್ತಲಿತ್ತು.ಮೆಲ್ಲನೆ ಮಂಚವಿಳಿದು ಹೊರಬಂದೆ ಸುತ್ತಲೂ ಕತ್ತಲಾವರಿಸುತ್ತಿತ್ತು...
          -ನೆನಪು:೨-
 ಯಮುನಾತೀರದಲ್ಲಿನ ಒಂದು ಸುಂದರ ಮುಂಜಾವು..ಗೋಪಾಲಕರೆಲ್ಲಾ ಹಸುಗಳನ್ನು ಮೇಯಿಸಲು ಕಾಡಿಗೆ ಹೊರಟಾಗಿತ್ತು,ಗೋಪಿಯರಿಗೆ ತಮ್ಮ ತಮ್ಮ ಮನೆಕೆಲಸದಲ್ಲಿ ಮಗ್ನರಾಗಿದ್ದರು.. ನಾನು ಒಬ್ಬಂಟಿಯಾಗಿ ನೀರು ತರಲು ಯಮುನೆಗೆ ಬಂದಿದ್ದೆ.ತಂದಿದ್ದೆರಡು ಕೊಡದೊಳಗೆ ನೀರು ತುಂಬಿ ತಿರುಗಿದೆ, ತಲೆತಿರುಗಿ ಬಿಳುವಂತಾಗಿ ಸಾವರಿಸಿಕೊಂಡೆ.ಕಾರಣ!! ತುಂಟನಗು ಬೀರುತ್ತ,ಕೈಯಲ್ಲಿ ಕೊಳಲ ಹಿಡಿದು, ಆ ಮೃದುಲ ಕುತ್ತಿಗೆ ಬಾಗಿಸಿದಂತೆ ನಿಂತಿದ್ದನಲ್ಲಿ ನನ್ನ ಮನದೊಡೆಯ ಶ್ಯಾಮಸುಂದರ ಕೃಷ್ಣ..ಮಾತು ಮುಂದೆ ಬರಲೊಪ್ಪದೆ ಹಠ ಮಾಡುತ್ತಿತ್ತು,ಮೌನ ಜೀಕುತ್ತಿತ್ತು,ನೇರಾನೇರ ಅವನೆಡೆಗೆ ನೋಡಲು ಆಗದಂತೆ ನಾಚಿಕೆ ಮುದುರಿಬಿದ್ದಿತ್ತು..ಸುಮ್ಮನೆ ಶಿಲೆಯಾಗಿ ನಿಂತುಬಿಟ್ಟಿದ್ದೆ ನಾಚಿಕೆಯ ಮೊಟ್ಟೆಯಾಗಿ.ಅವನೇ ಮುಂದೆ ಬಂದು ಮೆಲ್ಲನೆ ತಲೆಮೇಲೆ ಪವಡಿಸಿದ್ದ ಕೊಡವನ್ನಿಳಿಸಿದ, ಅಪ್ರಯತ್ನವಾಗಿ ಸೊಂಟದ ಮೇಲೊರಗಿದ್ದ ಇನ್ನೊಂದು ಕೊಡ ನೆಲಕ್ಕಿಳಿಯಿತು.ಅಲ್ಲೇ ಕುಳಿತುಕೊಳ್ಳಲು ಹವಣಿಸಿದ ಕೃಷ್ಣ,ಮನ ತಕ್ಷಣ ಜಾಗೃತವಾಯಿತು. 'ಅಯ್ಯೋ ಪ್ರಭು! ನಂದರಾಜರ ಕುವರ ತಾವು.ಇಂತಹ ಕಲ್ಲು ಜಾಗದಲ್ಲಿ ಕುಳಿತರೆ ಆ ಕೋಮಲ ದೇಹಕ್ಕೆಷ್ಟು ನೋವಾಗಬಹುದು' ಎಂದು ಮನದಲ್ಲೇ ಹಲುಬುತ್ತಿದ್ದೆ ಕಾರಣ, ಮಾತೇ ಹೊರಬರುತ್ತಿರಲಿಲ್ಲ.ನಾನೇ ಮುಂದೆ ಬಾಗಿ ಕಲ್ಲು ಚಪ್ಪಡಿಯ ಮೇಲೆ ನೀರ ತರಲು ತಂದಿದ್ದ ಸೀರೆಯ ಸಿಂಬೆಯನ್ನಿಟ್ಟು ಕೃಷ್ಣನೆಡೆಗೆ ನೋಡಿದೆ. ಅವನು ಮೆಲ್ಲನೆ ಮುಗುಳುನಗುತ್ತಾ ನನ್ನ ಕೈಯನ್ನು ತನ್ನ ಕೆಂಪು ಕೈಯೊಳಗೆ ತೆಗೆದುಕೊಂಡು,ನನ್ನನ್ನೇ ಅಲ್ಲಿ ಕುಳ್ಳಿರಿಸಿ,ನನ್ನ ಕಾಲಬಳಿ ತಾನು ಕುಳಿತುಕೊಂಡ.ಒಂದು ಕ್ಷಣ ನನ್ನೆಡೆ ತನ್ನ ನಿರ್ಮಲ ಕಂಗಳಿಂದಾ ನೋಡಿ ಮೆಲ್ಲ ನನ್ನ ಮಡಿಲಲ್ಲಿ ತಲೆಯಿರಿಸಿದ. 'ಆಹಾ! ನಾನೆಂತಾ ಭಾಗ್ಯವತಿ..ನನ್ನ ಆರಾಧ್ಯದೈವ ನನ್ನ ಮಡಿಲಲ್ಲಿ' ಮನದಲ್ಲಿ ಗಿರಿನವಿಲು ಕುಣಿಯುತ್ತಿತ್ತು,ಮುಖದಲ್ಲಿ ಸಾವಿರಾರು ಹಣತೆಯ ಬೆಳಕಿನ ಕಳೆ, ಬೇಡವೆಂದರೂ ಧುಮ್ಮಿಕ್ಕುತ್ತಿದ್ದ ಸಂತಸದ ನೀರ್ಗೊಳ.ಮೆಲ್ಲನೆ ನನ್ನವನ ತಲೆ ನೇವರಿಸತೊಡಗಿದೆ. ಅವ ನನಗೆ ಮಗುವಾದಂತೆ ನಾನವನಿಗೆ ತಾಯಾಗತೊಡಗಿದೆ. ಇಹಪರದ ಅರಿವಿರಲಿಲ್ಲ.
         -ನೆನಪು:೩-
 ಶರಧೃತುವಿನ ಒಂದು ಮಧುರ ಮುಸ್ಸಂಜೆ..ಎಲ್ಲೆಲ್ಲೂ ಪಸರಿಸಿದ ಶ್ರೀಗಂಧದ ಪರಿಮಳ,ಗೂಡು ಸೇರಲು ಹಾರತೊಡಗಿರುವ ಹಕ್ಕಿಗಳ ಚಿಲಿಪಿಲಿ ಕಲರವ,ಕೊಟ್ಟಿಗೆಯಲ್ಲಿರುವ ಕರುಗಳಿಗಾಗಿ ಧಾವಿಸಿ ಬರುತ್ತಿರುವ ತಾಯಿಹಸುವಿನ ಮುಗ್ಧ ಕೂಗು,ಗೋಪಿಕೆಯರ ಪಿಸುದನಿ-ನಸುನಗು, ಮಾತೆಯರ ಮೆಲುದನಿಯ ಜೋಗುಳ, ಹೀಗೇ ಇಡೀ ನಂದನವನವೇ ಹೊಸತನವ ಹೊತ್ತುಕೊಂಡಂತಿತ್ತು. ಸಂಜೆ ಸೂರ್ಯ ತನ್ನ ದೈನಂದಿನ ಕೆಲಸ ಮುಗಿಸಿ ಇಳೆವೆಣ್ಣಿನ ಸೆರಗ ಹಿಂದೆ ವಿರಮಿಸಲು ಮರೆಯಾಗಿದ್ದ. ಆಗ ತಾನೇ ಮಿಂದು ಸಂಧ್ಯಾವಂದನೆ ಮುಗಿಸಿ ಬಂದವನಂತೆ ಶುಭ್ರನಾಗಿದ್ದ ಚಂದ್ರ,ತನ್ನ ಬೆಳದಿಂಗಳ ತಂಪನ್ನು ಸುತ್ತಲೂ ಪಸರಿಸಿದ್ದ.ಎನೋ ಅರಿಯದ ಭಾವ, ಒಳಗೊಳಗೆ ಹೇಳಲಾಗದ ಚಡಪಡಿಕೆ, ಯಾರದೋ ಕಾತರಿಕೆಯಲ್ಲಿದ್ದ ನನ್ನ ಮನವೂ ತೂಗುತ್ತಲೇ ಇತ್ತು. 
  ಆಗಲೇ ಕೇಳಿಸಿತ್ತು ಆ ದನಿ,ನನ್ನಿಯ ಶ್ಯಾಮಸುಂದರನ ಕೊಳಲದನಿ. ಒಂದು ಕ್ಷಣ ನನ್ನ ನಾ ಮರೆತೆ,ಆ ಇಳಿಹೊತ್ತಲ್ಲಿ ನನ್ನವನರಸುತ್ತಾ ಹೊರಬಂದೆ. ಯಾರ ಭಯವೂ ಇಲ್ಲದಂತೆ,ಯಾರ ಅಡೆತಡೆಗೂ ಜಗ್ಗದಂತೆ ನಡೆದೇ ನಡೆದೇ,ಮುಗ್ಗರಿಸಿದೆ, ಸಾವರಿಸಿಕೊಂಡು ಮತ್ತೆ ಮತ್ತೆ ಹುಡುಕಿದೆ.. ಅದೋ!! ಕಾಣಿಸಿದ ನನ್ನೊಡೆಯ ಎಂದಿನ ತನ್ನ ತುಂಟುನಗುವ ಮೊಗದಲ್ಲಿಟ್ಟು. ಆದರೆ ಮನಸ್ಸಿಗ್ಯಾಕೋ ಕಸಿವಿಸಿಯಾಯ್ತು,ಕಾರಣ ನನಗಿಂತ ಮೊದಲೇ ಅಲ್ಲಿ ನೆರೆದಿದ್ದ ಗೋಪಿಯರಾ?? ಅರಿಯದಾದೆ. ಸುಮ್ಮನೆ ನಿಂತಲ್ಲೇ ನಿಂತಿದ್ದೆ ನನ್ನ ಪ್ರೇಮಮೂರ್ತಿಯ ನೆನೆಯುತ್ತಾ.ಆಗ ಗೋಪಿಯರ ನಡುವೆಯಿಂದ್ದೆದ್ದ ಕೃಷ್ಣ,ಮೆಲ್ಲ ನನ್ನ ಕೈಹಿಡಿದು ಬೇರೆಡೆ ಕರೆದೊಯ್ದ.ಗೋಪಿಕೆಯರಲ್ಲೆನೋ ಕದಲಿಕೆ..ನಾನೋ ಅತ್ಯಾನಂದದಿಂದ ಬೀಗುತ್ತಿದ್ದೆ!!ಮನ ಹೂವಾಗಿ ಘಮಿಸುತ್ತಿತ್ತು. ನನ್ನ ಹೃದಯೇಶ್ವರನ ಮಗ್ಗುಲಲ್ಲೇ ಕುಳಿತ ನನಗೆ ಮಾತೇ ಹೊರಡುತ್ತಿರಲಿಲ್ಲ.ಸುಮ್ಮನೇ ಮಾಂತ್ರಿಕ ಮೋಡಿಗೊಳಗಾದವಳಂತೆ ಶ್ಯಾಮಸುಂದರ ಪ್ರೇಮಮುರ್ತಿಯ ಆರಾಧಿಸುತ್ತಾ ಕುಳಿತುಬಿಟ್ಟಿದ್ದೆ. ಆಗ ಕೃಷ್ಣ ಅನಾಮತ್ತಾಗಿ ನನ್ನೆತ್ತಿದವನೇ ಬೆಳದಿಂಗಳು ನಿಚ್ಚಳವಾಗಿ ಹರಡಿದ್ದ ಬಯಲಿಗೆ ಕರೆತಂದ.ಅಲ್ಲಿ ನನ್ನ ಕಣ್ಣೇ ನಂಬಲಸಾಧ್ಯವಾದ ದೃಶ್ಯವಿತ್ತು.
   ವೃತ್ತಾಕಾರದಲ್ಲಿ ನೆರೆದಿರುವ ಗೋಪಿಕೆಯರು,ಪ್ರತೀ ಗೋಪಿಯರಿಗೊಬ್ಬ ಕೃಷ್ಣ..ಇದೇನೋ ಮಾಯೆಯೋ?ಭ್ರಮೆಯೋ?ಇದೆಲ್ಲಾ ಹೇಗೆ ಸಾಧ್ಯ? ನನ್ನ ಪ್ರಶ್ನೆಗೆ ಕೃಷ್ಣನ ತುಂಟನಗುವೇ ಉತ್ತರವಾಯ್ತು..ನನ್ನ ಜೊತೆಯಿರುವವನೇ ನಿಜವಾದ ಕೃಷ್ಣ,ಅವರ ಜೊತೆಗಿರುವುದೆಲ್ಲಾ ಬರೀ ಮಾಯೆ ಎಂದು ಸಮಾಧಾನಿಸಿಕೊಂಡೆ.. ತನುಮನವೆಲ್ಲಾ ಕೃಷ್ಣನಿಗೆ ಶರಣಾಗಿತ್ತು,ನನ್ನೊಡೆಯನ ಕೈಯಲ್ಲಿ ನಾನು ಕೊಳಲಾಗಿದ್ದೆ.ಅವ ಮೆಲ್ಲ ಮೀಟುತಿರೆ,ರಾಗವಾಗಿ ಹರಿದೆ,ನಾಚಿ ನೀರಾದೆ, ಪ್ರೇಮಸುಧೆಯ ಹರಿಸಿ ನವಿಲಂತೆ ಹಗುರಾದೆ..ಹೀಗೆ ವರ್ಣಿಸಲಸದಳವಾಗಿತ್ತು ಆ ಹುಣ್ಣಿಮೆಯ ರಾತ್ರಿ.ಮರೆಯಲಾಗದ ಸಿಹಿನೆನಪುಗಳ ಚೀಲಗಳನ್ನ ಹೊತ್ತು, ಒಲ್ಲದ ಮನಸ್ಸಿಂದ  ಮನೆಗೆ ಹಿಂತಿರುಗಿದೆ..ಮೊದಲಬಾರಿಗೆ ನಿಶಾದೇವಿ ತನ್ನನ್ನು ಸೂರ್ಯನಿಗೆ ಒಪ್ಪಿಸಿಕೊಂಡು ಬೆಳಗುವದ ಕಂಡಿದ್ದೆ..
    -ನೆನಪು:೪-
ಬೆಳಿಗ್ಗೆ ಇದ್ದಾಗಿನಿಂದ ಮನವ್ಯಾಕೋ ಸುಖಾಸುಮ್ಮನೆ ಹೊಯ್ದಾಡುತ್ತಿತ್ತು..ಆಗಲೇ ಬಂದಳಲ್ಲಾ ಕನಕೆ ಘನಘೋರ ಸುದ್ದಿಯೊಂದ ಹೊತ್ತು.ನಾಲ್ಕು ಕಡೆಯಿಂದ ಸಿಡಿಲು ಬಡಿದ ಅನುಭವ,ಆ ಸಿಡಿಲ ರಭಸಕ್ಕೆ ಸುಟ್ಟು ಕರಕಲಾಗಿ ಕುಸಿವ ತೆಂಗಿನಮರದಂತೆ ಕುಸಿದುಬಿದ್ದೆ.ಸುದ್ದಿ ತಂದ ಕನಕೆಯ ಸ್ಥಿತಿಯೇನೂ ಇದಕ್ಕಿಂತ ಭಿನ್ನವಾಗಿರಲಿಲ್ಲ.ನನಗೆ ಸಾಂತ್ವನ ಹೇಳಲು ಯಾರೂ ಮುಂದಾಗಲಿಲ್ಲ,ಒಬ್ಬರಿಗೊಬ್ಬರು ಸಾಂತ್ವನ ಹೇಳುವ ಸ್ಥಿತಿಯಲ್ಲಾರೂ ಇರುವಂತೆ ಕಾಣಲಿಲ್ಲ.ಅಸಲಿಗೆ ನಮ್ಮ ಮುದ್ದುಕೃಷ್ಣ ನಮ್ಮನಗಲಿ ಅಕ್ರೂರನೊಟ್ಟಿಗೆ ದ್ವಾರಕೆಗೆ ತೆರಳುತ್ತಾನೆಂಬುದನ್ನು ಜೀರ್ಣಿಸಿಕೊಳ್ಳಲಾಗದೇ ಅಳುತ್ತಾ ಕುಳಿತಿದ್ದರೆಲ್ಲರೂ.ಎಲ್ಲರಂತೆ ಬಿಕ್ಕಳಿಸಿ ಅಳಲೂ ಬಾರದೇ ನೋವನುಂಗಿ ತಟಸ್ಥಳಾಗಿ ಕುಳಿತಿದ್ದೆ ಗರಬಡಿದಂತೆ.ಮನಸ್ಸಿಗೆ ದಟ್ಟ ಕಾರ್ಮೋಡ ಕವಿದಂತಿತ್ತು.
  ಮರುದಿನ ಕೃಷ್ಣ ಅಕ್ರೂರ-ಬಲರಾಮರೊಡಗೂಡಿ ದ್ವಾರಕೆಯತ್ತ ಪ್ರಯಾಣ ಬೆಳೆಸಲು ಸಿದ್ಧನಾಗಿದ್ದ.ಇಡೀ ನಂದನವನದ ಪ್ರತೀ ಜೀವಿಯೂ ನೆರೆದಿದ್ದರಲ್ಲಿ, ಹಸುಕರುಗಳೂ ಸಹ..ನಾನೂ ಬರಲಾರದ ಮನಸ್ಸಿಂದ ಗೋಪಿಯರ ಒತ್ತಾಯಕ್ಕೆ ಕಟ್ಟುಬಿದ್ದು,ಮೆಲ್ಲ ಕಾಲೆಳೆಯುತ್ತಾ ಎಲ್ಲರಿಗಿಂತ ಹಿಂದೆ ಮೂಲೆಯಲ್ಲೊಂದು ಮರಹಿಡಿದು ನಿಂತಿದ್ದೆ.ನನ್ನ ಪ್ರೇಮದೈವದ ದರುಶನಕ್ಕೆ ಇದೇ ಕೊನೆಯೆನೋ ಎಂದು ಮನ ಕೇಡುಬಗೆಯುತ್ತಿರೆ, ಎದೆಯಲ್ಲೆಲ್ಲಾ ಅವಲಕ್ಕಿ ಕುಟ್ಟಿದ ಅನುಭವ. ರಥದಲ್ಲಿ ಬರುತ್ತಿದ್ದ ಕೃಷ್ಣ ಸಮೀಪಿಸುತ್ತಿರೆ ಮನಕ್ಕಿನ್ನೂ ತಡೆದುಕೊಳ್ಳಲಾಗದೇ ರಥದ ಬಳಿ ಇನ್ನಿಲ್ಲದಂತೆ ಓಡಿ,ಎಲ್ಲರ ನಡುವೆಯಿಂದ ತೂರಿಕೊಂಡು ಮುಂದೆ ಬಂದು ನಿಂತಿದ್ದೆ. 'ಕೃಷ್ಣಾ!!ನನ್ನೊಡೆಯಾ..ನನ್ನನ್ನಗಲಿ ಹೋಗುವೇಯಾ?' ಮನ ಚೀರಿ ಚೀರಿ ಅಳುತ್ತಲಿತ್ತು,ಮತ್ತೆ ನಾಲಿಗೆ ಮುಷ್ಕರ ಹೂಡಿತ್ತು ಮಾತು ಹೊರಬರದಂತೆ. ಅದನ್ನರಿತಂತೆ ಕೃಷ್ಣ 'ಅಳಬೇಡಾ ಸಖಿ!!ಮತ್ತೆ ಬರುವೆ..ಹೋಗಿಬರಲೇ ನನ್ನ ರಾಣಿ?ಎಂದು ಕಣ್ಣಲ್ಲೇ ಸಂಭಾಷಿಸಿದ..ಮೆಲ್ಲ ಹಿಂದೆ ಸರಿದೆ,ರಥ ಮುಂದಕ್ಕೋಡಿತು..ಮರೆಯಾಗುವ ತನಕವೂ,ನಂತರವೂ ಅಲ್ಲಿಯೇ ನಿಂತಿದ್ದೆ ಯಾವುದರ ಪರಿವೆಯಿಲ್ಲದೆ..ನನ್ನ ಪ್ರೇಮದರಸ ಕೃಷ್ಣನಿಲ್ಲದ ಮತ್ತೊಂದು ಘಟ್ಟ ಶುರುವಾಗಿದ್ದು ಹಾಗೇಯೇ ಅರಿವಿಲ್ಲದೇ..
--------
'ಅಯ್ಯೋ! ಇದೇನಿದು ರಾಧಾ,ಇಂತಾಪರಿ ಮಳೆಯಲ್ಲಿ ನೆನೆಯುತ್ತಾ ಕುಳಿತಿದ್ದೆಯಲ್ಲಾ?ಸಾಕಿನ್ನು ಒಳಗೆ ನಡೆ ಸಖಿ,ಅನಾರೋಗ್ಯವಾದೀತು' ಎಂಬ ಮನದ ದುಗುಡವನ್ನರಿತ ಗೋಪಿಯೊಬ್ಬಳ ಮಾತಿಗೆ ತಟ್ಟನೆ ಎಚ್ಚರವಾಯ್ತು..ನೆನಪಿನ ಮಳೆಯಿಂದ ತೋಯ್ದು ತಂಪಾದವಳಿಗೆ,ಬಾಹ್ಯ ಮಳೆಯ ಅನುಭವವಾಗದಿದ್ದುದು ಅಚ್ಚರಿಯೆನಲ್ಲ.ಮೆಲ್ಲ ಒಳನಡೆದಳು ರಾಧೆ ನೆನಪುಗಳ ಜೋಳಿಗೆ ಕಟ್ಟಿಕೊಂಡು..
  'ಶ್ಯಾಮಸುಂದರ ಇಂದು ಬಂದಾನು,ನಾಳೆ ಬಂದಾನು'ಎಂಬ ನಂಬಿಕೆಯೊಡನೆ ಎಲ್ಲರೂ ಕಾಲತಳ್ಳುತ್ತಿದ್ದರು..ಬೆಳಿಗ್ಗೆ ಇಷ್ಟ ದೇವರ ಪೂಜೆಗೆ ಹೂ ಕೊಯ್ಯುತ್ತಿದ್ದ ರಾಧೆಯ ಕೈ ಅಗತ್ಯಕ್ಕಿಂತ ಜಾಸ್ತಿಯೇ ನಡುಗುತ್ತಲಿತ್ತು,ಮನ ದುಗುಡಗೊಂಡಿತ್ತು..ಒಲ್ಲದ ಮನಸ್ಸಿಂದ ದೈನಂದಿನ ಕೆಲಸ ಮುಗಿಸಿ ಕೃಷ್ಣನ ನೆನೆಯುತ್ತಾ ಕಣ್ಮುಚ್ಚಿ ಒಂದೆಡೆ ಕುಳಿತವಳಿಗೆ ಕೃಷ್ಣ ಪಕ್ಕ ಬಂದು ಕುಳಿತಂತಾಯ್ತು.ತಟಕ್ಕನೆ ಕಣ್ತೆರೆದು ನೋಡಿದರೆ ಅವನಿರಲಿಲ್ಲವಲ್ಲಿ.ಅವಳಿಗದೂ ನಂಬಿಕೆಯಿರಲಿಲ್ಲ,ಕೃಷ್ಣ ಬಂದು ಸುಮ್ಮನೇ ಸತಾಯಿಸುತ್ತಿರಬಾರದೇಕೇ? ಎಂಬ ಹುಚ್ಚು ಭ್ರಮೆ.ಎಲ್ಲಾ ಗೋಪಿಯರ ಮನೆಯಲ್ಲೂ,ಅವರಿಬ್ಬರ ಪ್ರಿಯಸ್ಥಳದಲ್ಲೆಲ್ಲಾ ನೋಡಿ ಬಂದಳು,ಅವನೆಲ್ಲೂ ಕಾಣಸಿಗಲಿಲ್ಲ.ರಾತ್ರಿಯಿಡೀ ಯೋಚಿಸಿಯೇ ಯೊಚಿಸಿದಳು. 'ಇನ್ನೇಷ್ಟು ಕಾಲ ಹೀಗೆ ಇರಲಿ? ನೆಪಮಾತ್ರಕ್ಕೆ ದೇಹವಿಟ್ಟುಕೊಂಡು?ಕೃಷ್ಣನಲ್ಲೇ ನೆಲೆಸಿರುವ ಜೀವಕ್ಕೆ ಈ ದೇಹದ ಅಗತ್ಯವಾದರೂ ಎಂತಿದೆ? ಎಂದೆಲ್ಲಾ ತರ್ಕಿಸಿ ಒಂದು ನಿರ್ಧಾರಕ್ಕೆ ಬಂದು ಮಲಗಿದವಳಿಗೆ ಕೃಷ್ಣನಿಲ್ಲದ ಮೇಳೆ ಮೊದಲಬರಿಗೆ ಸೊಗಸಾದ ನಿದ್ರೆ.
 ನಸುಕಲ್ಲೇ ಎದ್ದು ಸ್ನಾನ ಮಾಡಿ,ಮಡಿಯುಟ್ಟು ಇಷ್ಟದೈವದ ಪೂಜೆ ಮಾಡಿ,ನಿತ್ಯಕರ್ಮಾದಿಗಳನ್ನೆಲ್ಲಾ ಪೂರೈಸಿ,ಯಮುನೆಯೆಡೆಗೆ ತೆರಳುತ್ತಿದ್ದ ರಾಧೆಯ ತುಟಿಯಲ್ಲಿ ಅರಳಿತ್ತೊಂದು ಹೂನಗೆ ಸರಿಸುಮಾರು ಕೃಷ್ಣನಂತೆ..ನಂದನವನದ ಯಾವ ಮನೆಗೂ ಬೆಳಗಾಗಿರಲಿಲ್ಲ ಇನ್ನೂ,ಛಾಯಾದೇವಿ ಮಗ ಸೂರ್ಯನನ್ನು ಭೂವಿಗೆ ತೆರಳಲು ಎಚ್ಚರಿಸುತ್ತಿದ್ದಳು,ಸೂರ್ಯ ಮೆಲ್ಲ ಕಣ್ತೆರೆದಿದ್ದ..ಬಿರ ಬಿರನೆ ಹೆಜ್ಜೆ ಹಾಕುತ್ತಾ ಭೋರ್ಗರೆವ ಯಮುನೆಯ ಸಮೀಪಿಸಿದವಳಿಗೆ ನಿರೀಕ್ಷಿಸಿದ ಭಯವೂ ಆಗಲಿಲ್ಲ..ಮೆಲ್ಲ ಕಣ್ಮುಚ್ಚಿ ತನ್ನ ಪ್ರೇಮಮೂರ್ತಿಯ ನೆನೆದಳು. ಕೃಷ್ಣ ಯಮುನೆಯ ಮಧ್ಯೆ ನಿಂತು ಕೈಬೀಸಿ ಕರೆದಂತಾಗಿ ಮೆಲ್ಲನೆ ನೀರಿಗಿಳಿದು ಅವನೆಡೆಗೆ ಸಾಗಿದಳು..ಯಮುನೆ ಭೊರ್ಗರೆವುದ ನಿಲ್ಲಿಸಿ ಮೆಲ್ಲನೆ ತನ್ನ ತೆಕ್ಕೆಗೆ ರಾಧೆಯ ತೆಗೆದುಕೊಂಡು ಶಾಂತಳಾದಳು..
 ಇತ್ತ ರುಕ್ಮಿಣಿಯೊಡನೆ ಸುಪ್ಪತ್ತಿಗೆಯಲ್ಲಿ ಪವಡಿಸಿದ್ದ ಕೃಷ್ಣನ ಹೃದಯದಲ್ಲೊಮ್ಮೆ ಕದಲಿಕೆ;ರಾಧೆ ತನ್ನರಸನ ಎದೆಯೊಳಗೆ ಸೇರಿಬಿಟ್ಟಿದ್ದರಿಂದ..
-ಶುಭಶ್ರೀ ಭಟ್ಟ

No comments:

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...