Tuesday, 16 May 2017

ಹೆಣಕಂಡ ಮಳೆ

(ಕಹಳೆ ಬಳಗ ಆಯೋಜಿಸಿದ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕಥೆ) ರೇವತಿ ಎಂದಿನಂತೆ ತನ್ನ ಶಾಲೆಯ ಪಾಠ ಮುಗಿಸಿ ಮನೆಗೆ ಬರುವಷ್ಟರಲ್ಲಿ ಮನೆಯ ಮನೆಯ ಮುಂದೆ ವಾಹನಗಳು,ತುಂಬಿಹೋದ ಚಪ್ಪಲಿ ಸಾಲು,ಕಂಡರಿಯದ ನೆಂಟರು,ರೇವಂತನ ಕಡೆಯ ಬಳಗದವರು ಮನೆಯ ಹೊರಗೂ-ಒಳಗೂ ತುಂಬಿ ಬಿಟ್ಟಿದ್ದರು.ಎಲ್ಲರೂ ನನ್ನೆಡೆಗೆ ಅನುಕಂಪದ ದೃಷ್ಟಿಯನ್ನು ಹರಿಸತೊಡಗಿದಾಗ ಮನದಲ್ಲೆಲ್ಲಾ ಕಂಪನ.ಮಗಳು ಮತ್ತೆ ಅತ್ತೆಯ ನೆನಪಾಗಿ ಕಾಲು ಮುಂದೆ ಹೆಜ್ಜೆಯಿಡದೇ ಮುಷ್ಕರ ಹೂಡಿದ್ದವು.ಮನ ಶಂಕೆಯ ಬಲೆಗೆ ಸಿಕ್ಕಿಬಿದ್ದೊಡನೆ,ಬಲ ಹುಬ್ಬು ಅದುರತೊಡಗಿತ್ತು.ಶಕುನವನ್ನೆಲ್ಲಾ ನಂಬದ ನಾನು ಅಳುಕುತ್ತಲೇ ಒಳಗಡಿಯಿಟ್ಟೆ. ಮೂಲೆಯಲ್ಲಿ ಬಿಕ್ಕಿತ್ತಿದ್ದ ಅತ್ತೆಯ ಮಡಿಲಲ್ಲಿ ಕುಳಿತಿದ್ದ ಮಗಳು ಓಡಿ ಬಂದು ತೆಕ್ಕೆಬಿದ್ದಾಗ ಮನಸ್ಯಾಕೋ ನಿರಾಳವಾದಂತಾಗಿ ಮೆಲ್ಲನೆ ಅತ್ತೆಯೆಡೆಗೆ ತಿರುಗಿದೆ.ಅಮ್ಮನಂತೇ ನಮ್ಮನ್ನು ನೋಡಿಕೊಳ್ಳುತ್ತಿದ್ದ ಅತ್ತೆಯು ರೋಧಿಸುತ್ತಲೇ ಮಂಚದೆಡೆಗೆ ಕೈ ತೋರಿಸಿದರು.ನಡುಗುತ್ತಲೇ ಅತ್ತ ಕಣ್ಣು ಹಾಯಿಸಿದರೇ, ಮಂಚದ ಕೆಳಗಿನ ಚಾಪೆಯಲ್ಲಿ ಚಿರನಿದ್ರೆಗೆ ಜಾರಿ ಮಲಗಿದ್ದ ನನ್ನ ರೇವಂತ್.ವರುಷದ ಹಿಂದೆ ಅಮ್ಮ-ಹೆಂಡತಿ-ಮಗಳು ಎಲ್ಲಾ ಸಂಬಂಧ ಕಡಿದು ಹೊರಟವನಿಂದು ಹೆಣವಾಗಿ ಬಂದು ಮಲಗಿದ್ದ.ಕಣ್ಣು ಕತ್ತಲೆಯಿಟ್ಟು ಬೀಳುವಂತಾದಾಗ ಸಾವರಿಸಿಕೊಂಡೆ.ಬಿಕ್ಕುಕ್ಕಿ ಬಂದು ಗಂಟಲಲ್ಲಿ ಅಡಗಿ ಕುಳಿತಿತ್ತು ಹೊರಬರಲಾರದೆ.ನಾನೂ ಅಳುತ್ತಾ ಕುಳಿತರೆ,ಅತ್ತೆಯೂ-ಮಗಳೂ ಕಂಗಾಲಾಗುತ್ತಾರೆಂದು ದುಃಖವ ಬದಿಗೊತ್ತಿ ಮುಂದಿನ ಕಾರ್ಯದ ಬಗ್ಗೆ ಗಮನ ಹರಿಸಿದೆ.
ಮೊಳಕಾಲಷ್ಟಿದ್ದ ಮಗಳಿಂದಲೇ ಅವರಪ್ಪನ ಚಿತೆಗೆ ಅಗ್ನಿ ಸ್ಪರ್ಶ ಮಾಡಿಸಿ ಹಿಂತಿರುಗಿ ಬರುವಾಗ ಧಾರಾಕಾರ ಮಳೆ,ಶವವಾಗಿ ಮಲಗಿದ ರೇವಂತ್ ಅಳುತ್ತಿದ್ದನಾ ಗೊತ್ತಿಲ್ಲ.ಮತ್ತೆ ಮಳೆ ಕಡಿಮೆಯಾದಾಗ,ಮರುಚಿತೆಯ ಕಾರ್ಯವನ್ನೂ ಮುಗಿಸಿ ಮನೆಗೆ ಬಂದರೆ ಮನೆಯಲ್ಲೆನೋ ಗವ್ವೆನ್ನುವ ಭೀಕರ ಕಗ್ಗತ್ತಲು.ಕಾರ್ಯ ಮುಗಿಸಿ ಎಲ್ಲರೂ ಅವರವರ ಮನೆಗೆ ತೆರಳಿದರು,ಅತ್ತೆಯಿನ್ನೂ ಬಿಕ್ಕುತ್ತಲೇ ಇದ್ದರು.ಏಷ್ಟಾದರೂ ಹೆತ್ತಕರುಳು,ಶುದ್ಧ ಅಂತಃಕರಣ ಸೆಲೆಯುಳ್ಳವರು.ಮಗಳು ಹುಟ್ಟಿ ಒಂದು ವರುಷಕ್ಕೆ ಕಾರಣವಿಲ್ಲದೇ ಜಗಳ ತೆಗೆದು 'ನನ್ನ ಆಸೆ-ಕನಸುಗಳೇ ಬೇರೆ.ನಿಮ್ಮನ್ನೆಲ್ಲಾ ಸಾಕುತ್ತಾ ಬದುಕಿ ಕನಸನ್ನ ಕೊಲ್ಲುವುದು ಇಷ್ಟವಿಲ್ಲ.ನಿಮ್ಮ ದಾರಿ ನಿಮಗೆ,ನನ್ನದು ನನಗೆ' ಎಂದು ಮನೆ-ತೋಟವನ್ನೆಲ್ಲಾ ನಮ್ಮ ಹೆಸರಿಗೆ ಮಾಡಿ ಮನೆಬಿಟ್ಟು ಹೋದ ಮಗನ ಮೇಲೆ ಕಡುಕೋಪವಿದ್ದರೂ, ಅವರನ್ನು ನೆನೆಸಿಕೊಂಡು ನನಗೆ ಕಾಣದಂತೆ ಕಣ್ಣೀರು ಮಿಡಿಯುತ್ತಿದ್ದರು.ನಡು ನೀರಲ್ಲಿ ಕೈಕೊಟ್ಟು ಹೋದ ಗಂಡ,ಅತ್ತ ಈಜಲೂ ಬಾರದೇ,ಮುಳುಗಲೂ ಬಾರದೇ ಒದ್ದಾಡುತ್ತಿದ್ದವಳನ್ನು,ಸ್ವಂತ ಮಗಳಂತೆ ನೋಡಿಕೊಂಡು,ಸ್ಥೈರ್ಯತುಂಬಿ ಉದ್ಯೋಗಕ್ಕೆ ಸೇರಲು ಪ್ರೇರೆಪಿಸಿದರು.ಸಣ್ಣ ಪುಟ್ಟದ್ದಕ್ಕೂ ರೇವಂತನ ಮೇಲೆ ಅವಂಬಿತಳಾಗಿ,ಅವನನ್ನು ಕಳೆದುಕೊಂಡು ಖಿನ್ನಳಾಗಿದ್ದ ನನ್ನನ್ನು ಉತ್ಸಾಹದ ಚಿಲುಮೆಯನ್ನಾಗಿ ಮಾಡಿದರು.ಶಾಲೆಯಲ್ಲಿ ಪಾಠಮಾಡುತ್ತಾ,ಮಕ್ಕಳೊಂದಿಗಿನ ಒಡನಾಟ,ಮನೆಯಲ್ಲಿ ಮಗಳ ತೊದಲ್ನುಡಿಯ ತುಂಟಾಟ,ಅತ್ತೆಯ ಮಮತೆಯ ಚಿಲುಮೆಯಲ್ಲಿ ರೇವಂತನ ನೆನಪು ನಿಧಾನಕ್ಕೆ ಕರಗತೊಡಗಿತ್ತು.
ತಪ್ಪು-ತಪ್ಪು ಹೆಜ್ಜೆಯನ್ನಿಟ್ಟು ಬೀಳುತ್ತಿದ್ದ ಮಗಳನ್ನು ತಡೆಯಲು ಹೋಗದೆ ಸುಮ್ಮನೆ ನೋಡುತ್ತಾ ಕುಳಿತಿರುತ್ತಿದ್ದೆ.ಬಿದ್ದ ಮಗಳು ಮತ್ತೆ ಎದ್ದು ಮರಳಿ ಪ್ರಯತ್ನವ ಮಾಡತೊಡಗುವಾಗ ಮನವರಳುತ್ತಿತ್ತು.ಮುದ್ದು ಮುದ್ದು ಮಾತನಾಡಿ,ಇನ್ನಿಲ್ಲದ ಪ್ರಶ್ನೆ ಕೇಳಿ ಜೀವನದಲ್ಲಿ ಕಲಿಯಬೇಕು ಎಂಬುದನ್ನು ತೋರಿಸಿಕೊಡುತ್ತಿದ್ದಳು.ಹೀಗೇ ಪ್ರತೀ ಕ್ಷಣ ತನಗರಿವಿಲ್ಲದೆಯೇ ಜೀವನದ ಪಾಠ ಕಲಿಸುತ್ತಿದ್ದಳು ನನ್ನ ಮಗಳು.ಶಾಲೆ ಕೆಲಸ ಮುಗಿಸಿ ಮನೆಗೆ ಬರುವಾಗಲೇ ಅಜ್ಜಿ-ಮೊಮ್ಮಗಳ ಸವಾರಿ ಪಕ್ಕದಲ್ಲಿನ ಪಾರ್ಕಿನೆಡೆಗೆ ಹೊರಟಿರುತ್ತಿತ್ತು.ನಾನೂ ಬಟ್ಟೆ ಬದಲಾಯಿಸಿ,ಕೈಕಾಲು ತೊಳೆದು,ಒಂದು ಲೋಟ ಚಹಾ-ಅದಕ್ಕೆರಡು ಬಿಸ್ಕಿಟ್ ತಿಂದು ಅವರನ್ನು ಕರೆತರಲು ಹೊರಡುತ್ತಿದ್ದೆ.ಮನೆಗೆ ಬಂದು ದೇವರ ದೀಪ ಹಚ್ಚಿ,ಮಗಳಿಂದ ಶ್ಲೋಕ ಹೇಳಿಸಿ,ಒಂದ್ಲೋಟ ಹಾಲನ್ನು ಅಜ್ಜಿ-ಮೊಮ್ಮಗಳಿಗೆ ಕುಡಿಯ ಕೊಟ್ಟು,ಮೊಮ್ಮಗಳಿಗೆ ಅಜ್ಜಿ ಹೇಳುವ ಪುರಾಣದ ಸ್ವಾರಸ್ಯದ ಕಥೆಗಳಿಗೆ ಕಿವಿಯಾಗುತ್ತಾ, ರಾತ್ರಿಯಡುಗೆಗೆ ಸಿದ್ಧಮಾಡುತ್ತಿದ್ದೆ.ಶಾಲೆಯಲಿನ ತುಂಟ ಮಕ್ಕಳ ಚೆಲ್ಲಾಟವನ್ನು ವಿವರಿಸುತ್ತಾ,ಹರಟುತ್ತಾ ಊಟ ಮುಗಿಸಿ ಒಟ್ಟಿಗೆ ಮಲಗುತ್ತಿದ್ದೆವು ಜಗುಲಿಯಲ್ಲಿ.ಮೊದಮೊದಲು ನಿದ್ರೆ ಬಾರದೇ ನಿಡುಸುಯ್ದು,ಕನವರಿಸಿಕೊಂಡು ರಾತ್ರಿ ಕಳೆಯುತ್ತಿತ್ತು.ಇತ್ತಿಚಿಗೆ ಬೆಳಗಿನ ಜಾವಕ್ಕೆ ಜೊಂಪು ಹತ್ತಿ,ಅತ್ತೆಯೆಬ್ಬಿಸಿದಾಗಲೇ ಎಚ್ಚರವಾಗುತ್ತಿತ್ತು.ಕಾರಣವಿಲ್ಲದೇ ಬಿಟ್ಟು ಹೋದ ರೇವಂತ್ ಎಂಬ ನೋವು ಬಿಟ್ಟರೆ,ಉಳಿದಿದ್ದೆಲ್ಲಾ ನಿರಾಳವಾಗಿತ್ತು.ಆದರೆ ಅವ ಹೀಗೆ ಧಿಡಿರನೇ ಹೆಣವಾಗಿ ಮರಳಿ ಮನೆಯಲ್ಲಿನ-ಮನದಲ್ಲಿನ ತಿಳಿನೀರ ಕೊಳಕ್ಕೆ ಕಲ್ಲೆಸೆದಂತಾಗಿತ್ತು.
 ಗೋಕರ್ಣದ ಉಪಾಧ್ಯರ ಮನೆಯಲ್ಲಿ ತಿಥಿಕರ್ಮವನ್ನೆಲ್ಲಾ ಮುಗಿಸಿ,ಗರುಡ ಪುರಾಣ ಓದಿಸಿ ಅವನಾತ್ಮಕ್ಕೆ ಶಾಂತಿ ಕೋರಿ ಮನೆಗೆ ಹಿಂತಿರುಗಿ ಬಂದಾಗ ದಪ್ಪದೊಂದು ಲಕೋಟೆ ನಮ್ಮ ದಾರಿ ಕಾಯುತ್ತಿತ್ತು.ಅದರಲ್ಲಿ 'ನನ್ನ ಪ್ರೀತಿಯ ರೇವತಿಗೆ' ಎಂಬ ರೇವಂತನ ದುಂಡಗಿನಕ್ಷರ ನಮ್ಮನ್ನು ಸೆಳೆಯಿತು.ಲಗುಬಗೆಯಿಂದ ಬೀಗ ತೆಗೆದು ಕೋಣೆಗೊಡಿದೆ,ನನಗೆ ತೊಂದರೆಯಾಯಿತೆಂದು ಮಗಳನ್ನು ಪಕ್ಕದ ಮನೆಗೆ ಆಡಲು ಕಳುಹಿಸಿದ ಅತ್ತೆ,ಮೆಲ್ಲ ನನ್ನ ಪಕ್ಕ ಬಂದು ಕುಳಿತರು.ಲಕೋಟೆಯನ್ನು ತೆರೆಯುವಾಗ ಅಗತ್ಯಕ್ಕಿಂತ ಹೆಚ್ಚಾಗಿ ಕೈ ನಡುಗಿತ್ತಿತ್ತು,ಮೆಲ್ಲ ಓದಲು ಶುರುಮಾಡಿದೆ.ಪತ್ರದಲ್ಲಿ ಹೀಗಿತ್ತು..
 "ನನ್ನೊಲುಮೆಯ ಅರಗಿಣಿ ರೇವತಿ ನಕ್ಷತ್ರವೇ,ಬಹುಶಃ ಈ ಪತ್ರ ನಿನ್ನ ತಲುಪುವುದಕ್ಕೂ ಮೊದಲು,ನನ್ನ ಪ್ರಾಣವಿಲ್ಲದ ದೇಹ ನಿಮ್ಮನ್ನು ತಲುಪಿರಲಿಕ್ಕೂ ಸಾಕು.ನನ್ನಮೇಲಿನ್ನೂ ಕೋಪವೇ ಗಿಣಿ?ನನಗೆ ಗೊತ್ತು ನಿಮಗೆಲ್ಲಾ ನಾನು ಮಾಡಿದ್ದು ಕ್ಷಮಿಸಲಾರದ ತಪ್ಪೆಂದು,ಆದರೆ ನನ್ನ ಪ್ರಕಾರ ನಾನು ಮಾಡಿದ್ದೇ ಸರಿಯಾಗಿತ್ತು ಕಣೆ. ನಾನು ನಿಮ್ಮನ್ನು ದೂರಮಾಡುವ ಕಾರಣ ತಿಳಿಸಿದ್ದರೆ,ನೀವೆಲ್ಲಾ ನನಗಾಗಿ ಮನೆ-ಮಠ ಕಳೆದುಕೊಂಡು,ಸಾಲದ ಹೊರೆಹೊತ್ತು ಬೀದಿಯಲ್ಲಿ ನಿಂತಿರುತ್ತಿದ್ದಿರಿ.ಅದು ನನಗೆ ಬೇಡವಾಗಿತ್ತು. ಆದರೀಗ ನೀನು ಸ್ವಾವಲಂಬಿಯಾಗಿ ನಿನ್ನ ಕಾಲಮೇಲೆ ನೀನು ನಿಂತು,ಅಮ್ಮನನ್ನು ಮಗನಂತೆ,ಮಗಳನ್ನು ಅಪ್ಪನಂತೆ ಸಾಕು ಬದುಕುತ್ತಿರುವ ರೀತಿ ಕಂಡು,ನನಗೂ ಬದುಕುವ ಆಸೆಯಾಗ್ತಿದೆ ರೇವತಿ.ಹ್ಮುಂ!ಅಚ್ಚರಿಬೇಡ,ನಿಮ್ಮನ್ನು ದೂರ ಮಾಡಿಕೊಂಡ ಕಾರಣವನ್ನ ಹೇಳುತ್ತೆನೆ ಕೇಳಿಸಿಕೋ.. ಸದಾ ತಲೆನೋವೆಂದು ಒದ್ದಾಡುತ್ತಿದ್ದ ನನ್ನನ್ನು,ನನ್ನ ಜೀವದ ಗೆಳೆಯ ಪ್ರಕಾಶ ಅವನ ತಮ್ಮನ ಆಸ್ಪತ್ರೆಗೆ ಕರೆದೊಯ್ದ ಹಠಮಾಡಿ.ಆಗಲೇ ನನ್ನ ಬಿಟ್ಟು ಬಿಡದ ತಲೆನೋವಿಗೆ ಕಾರಣ 'ಬ್ರೈನ್ ಟ್ಯೂಮರ್'ಎಂದು.ಅದು ಗುಣಪಡಿಸಲಾಗದ ಸ್ಥಿತಿಗೆ ಆಗಲೇ ತಲುಪಿದೇ ಎಂದು ತಿಳಿಸಿದಾಗ ಮಾತ್ರ ಕುಸಿದುಬಿದ್ದಿದ್ದೆ.
  ಮಮತೆಯ ಮಳೆಸುರಿಸೋ ಅಮ್ಮ,ಪ್ರೀತಿಯ ರಸದೌತಣ ಬಡಿಸುವ ಹೆಂಡತಿ,ಜೀವದ ಮುದ್ದೆಯಾದ ಪುಟ್ಟಕಂದ ಎಲ್ಲರ ನೆನಪಾಗಿ ಚಿಕ್ಕ ಮಕ್ಕಳಂತೆ ಕಣ್ಣಿರಿಟ್ಟೆ.ಮಗಳಿಡುವ ಅಂಬೆಗಾಲು,ಅವಳಾಡೋ ತೊದಲ್ನುಡಿ,ಅವಳಳುವಿಗೆ ಕೂಸುಮರಿ ಮಾಡಿ ಅಂಬೆ ತೋರಿಸಿದಾಗ ಅವಳು ನಗುವ ಕಿಲಕಿಲ ನಾದ ಎಲ್ಲವನ್ನೂ ಕಳೆದುಕೊಳ್ಳುತ್ತೆನೆಂದುಕೊಂಡಾಗ ಎದೆಬಿರಿದು ಬಿಕ್ಕತೊಡಗಿತ್ತು.ಮಗಳನ್ನು ಧಾರೆಯೆರೆದು ಕೊಟ್ಟು ಗಂಡನ ಮನೆಗೆ ಕಳುಹಿಸುವಾಗ ಅವಳು ಅಳದಂತೆ ಅವಳನ್ನು ನಗಿಸಬೇಕೆಂಬ ದೊಡ್ಡ ಕನಸಿನ ಸೌಧ ಕಣ್ಣೆದುರೇ ಕುಸಿದು ಕುಂತಿತ್ತು.ನಮ್ಮ ೨೫ನೇ ವರುಷದ ಮದುವೆ ವಾರ್ಷಿಕೋತ್ಸವಕ್ಕೆ ನಿನ್ನಿಷ್ಟದ ಬಣ್ಣದ ಕಾರು ತಂದುಕೊಟ್ಟು,ನಿನ್ನ ಕಂಗಳಲಿ ಕುಣಿವ ಜಿಂಕೆಯ ಹಿಂಡನ್ನು ನೋಡಬೇಕೆಂಬ ಕನಸಿನ ಜೋಕಾಲಿಯ ಹಗ್ಗ ತುಂಡಾಗಿ ಬಿದ್ದಿತ್ತು.ಅಮ್ಮನ ಪ್ರೀತಿಯ ಪುಣ್ಯಕ್ಷೇತ್ರಗಳಿಗೆ ವರುಷಕ್ಕೊಮ್ಮೆಯಾದರೂ ನಾವೆಲ್ಲ ಒಟ್ಟಿಗೆ ತೆರಳಬೇಕೆಂಬ ಕನಸಿನ ಹಕ್ಕಿ ರೆಕ್ಕೆಮುರಿದು ಮೂಲೆಗುಂಪಾಗಿತ್ತು.ತಾಸೆರಡರ ನಂತರ ಎಚ್ಚೆತ್ತುಕೊಂಡು ಗೆಳೆಯ ಪ್ರಕಾಶನ ಬಳಿ ಯಾರಿಗೂ ಹೇಳದಂತೆ ಮಾತು ತೆಗೆದುಕೊಂಡು ಮನೆಗೆ ಬಂದಿದ್ದೆ,ದುಃಖವನ್ನೆಲ್ಲಾ ಎದೆಯಲ್ಲಿ ಹೆಪ್ಪುಗಟ್ಟಿಸಿಕೊಂಡು.
  ಹಗಲಿರುಳೂ ಯೋಚಿಸಿಯೇ ಯೋಚಿಸೆ ಒಂದು ನಿರ್ಧಾರಕ್ಕೆ ಬಂದು,ಮನೆ-ತೋಟ-ಬ್ಯಾಂಕಿನಲ್ಲಿದ್ದ ಹಣವನ್ನೆಲ್ಲಾ ನಿಮ್ಮ ಮೂವರೊಳಗೆ ಹಂಚಿ ವರ್ಗಾಯಿಸಿದೆ ನಿಮಗ್ಯಾರಿಗೂ ಸುಳಿವೂ ಕೊಡದಂತೆ.ಜೊತೆ ಜೊತೆಗೆ ನಿನ್ನ ಮೇಲೂ,ಅಮ್ಮನ ಮೇಲೂ ವಿನಾಕಾರಣ ಸಿಡುಕತೊಡಗಿದ್ದೆ ನೆನಪಿದ್ಯಾ ಗಿಣಿ?ಅಪ್ಪಿಕೊಳ್ಳಲು ಕಾಲಿಗೆ ತಡಕಾಡುವ ಮಗಳನ್ನಂತೂ ಕಣ್ಣೆತ್ತಿಯೂ ನೋಡದೆ ಕೋಣೆ ಸೇರುತ್ತಿದ್ದೆ.ಇದೆಲ್ಲಾ ಆಗಿ ತಿಂಗಳು ಕಳೆಯುವುದರೊಳಗೆ ನಿಮ್ಮನ್ನಗಲಿ ದೂರಹೋಗುವ ಸಿಡಿಮದ್ದನ್ನು ಸಿಡಿಸಿದ್ದೆ.ನೀನು ಕಾಲಿಗೆ ಬಿದ್ದೆ,ಬೇಡಿದೆ,ಬಿಗಿದಪ್ಪಿ ಅಳತೊಡಗಿದೆ,ನಾನು ಕರಗಲಿಲ್ಲ. ನಿನ್ನ ನಿರಂತರ ಆರ್ತತೆ,ಬಿಕ್ಕಳಿಕೆ,ಅಮ್ಮನ ನಿಶ್ಶಬ್ಧದ ಕಣ್ಣೀರ ಧಾರೆ,ನಿಮ್ಮಳುವ ಕಂಡ ಮಗಳ ಪೆಚ್ಚು ಮುಖ ಎಲ್ಲವೂ ಎದೆಗೆ ಚೂರಿ ಹಾಕುವಂತಿದ್ದರೂ,ಮನವನ್ನು ಕರಗ ಬಿಡದೇ ಕಲ್ಲಾಗಿಸಿ ಮನೆಬಿಟ್ಟೆ. ತಿರುಗಿ ನೋಡಿದರೆಲ್ಲಿ ಕರಗಿಬಿಡುವೆನೆಂದು ಹಿಂತಿರುಗದೇ ಹೊರನಡೆದೆ ದೂರದೂರಿನ ಆಶ್ರಮಕ್ಕೆ..
ಆಶ್ರಮಕ್ಕೆ ಒಂದಿಷ್ಟು ಹಣಕೊಟ್ಟು ನನ್ನನ್ನು ಇಲ್ಲಿರುವಂತೆ ಮಾಡಿದ್ದು ಪ್ರಕಾಶ.ನಾನಿಲ್ಲದೇ ನೀವು ಪಡುತಿರುವ ನೋವು ಸಂಕಟವನ್ನೆಲ್ಲಾ ಪ್ರಕಾಶ ಯಥಾವತ್ತಾಗಿ ವರದಿ ಒಪ್ಪಿಸುವಾಗ ಕರುಳು ಕಿತ್ತು ಬರುತ್ತಿತ್ತು ಕಣೆ.ಬರಬರುತ್ತಾ ನಿನ್ನ ಛಲ,ಅಮ್ಮನ ಬೆಂಬಲದಿಂದ,ಮುಗ್ಧ ಮಗುವಂತಿದ್ದ ನೀನು ಮನೆಯ ಜವಾಬ್ಧಾರಿಯ ಜೊತೆಗೆ,ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುವ ಪರಿ,ಮಗಳನ್ನು ಬೆಳೆಸುತ್ತಿರುವ ರೀತಿ,ಎಲ್ಲವನ್ನೂ ಕೇಳುತ್ತಲೇ ಮನ ಕುಣಿತುತ್ತಿತ್ತು.ನನಗೂ ಮತ್ತೆ ಬದುಕ ಬೇಕೆಂಬಾಸೆ ಹೆಚ್ಚಾಗುತ್ತಿತ್ತು.ಆದರೆ ವಿಧಿಯಾಟವೇ ಬೇರೆ ನೋಡು,ಸಾವಿನ ದವಡೆಗೆ ನಿಧಾನಕ್ಕೆ ಜಾರುತ್ತಿರುವುದನ್ನು ಅನುಭವಿಸತೊಡಗಿದ್ದೆ.ಸಾವನ್ನು ಹತ್ತಿರದಿಂದ ದಿನವೂ ಕಾಣುವ ಕರ್ಮವಿದೆಯಲ್ಲಾ,ಇದ್ಯಾವ ಶತ್ರುವಿಗೂ ಬೇಡ ಕಣೆ.
 ನಿನ್ನ ಮುಗ್ಧ ಪ್ರೀತಿಗೆ,ಅಮ್ಮನ ಕಲ್ಮಶವಿಲ್ಲದ ಮಮತೆಗೆ,ಜೀವದ ಮಗಳಿಗೆ ಮೋಸಮಾಡಿ ದೂರವಾಗಿಲ್ಲ ಎನ್ನುವ ಸತ್ಯ ನನ್ನ ಸಾವಿನ ನಂತರವಾದರೂ ತಿಳಿಸಬೇಕೆನೆಸಿತ್ತು ಗಿಣಿ.ಅದಕ್ಕೆ ಈ ಪತ್ರವನ್ನು ಬರೆಯತೊಡಗಿದ್ದೆ. ನಡು ನೀರಲ್ಲಿ ನಿಮ್ಮನ್ನೆಲ್ಲಾ ಕೈಬಿಟ್ಟು ಹೊರಟಿರುವೆ,ನಾವಿಕನಿಲ್ಲದೆ ದೋಣಿಯನ್ನು ಧೈರ್ಯದ ಹರಿಗೋಲು ಹಿಡಿದು ದಡ ಸೇರಿಸುತ್ತಿಯಾ ಎಂಬ ನಂಬಿಕೆಯ ಸುಖವೇ ಸಾಕು ನನಗೆ.ನೀನೇ ನಾವಿಕಳು ರೇವತಿ,ಅಮ್ಮನಿಗೆ ಮಗನ ಕೊರತೆ ನೀಗಿ,ಮಗಳಿಗೆ ಅಪ್ಪನ ಸ್ಥಾನ ತುಂಬಿ ಬೆಳೆಸು.ನಿನಗಾಗಿ ನನಗೇನೂ ಮಾಡಲು ಉಳಿದಿಲ್ಲ,ಕೇವಲ ಪ್ರಕಾಶನ ಹೊರತು. ಅವನೊಬ್ಬ ಒಳ್ಳೆಯ ಗೆಳೆಯನ್ನಷ್ಟೇ ಅಲ್ಲ,ನನ್ನ ಕಷ್ಟದಲ್ಲಿ ಸ್ಪಂದಿಸಿದ ಜೀವ.ಅವನನ್ನು ಮದುವೆಯಾಗಿ ಸುಖವಾಗಿರು.ಮತ್ತೊಂದು ಜನ್ಮವಿದ್ದರೆ ನಿನ್ನ ಗರ್ಭದಲ್ಲಿ ಹುಟ್ಟು ನಿನ್ನ ಋಣ ತೀರಿಸುವೆ.
ನಿನ್ನ,
ರೇವೂ.."
 ಓದಿ ಮುಗಿಸುವಷ್ಟರಲ್ಲಿ ಗಂಟಲಲ್ಲಿ ಕಾಲದಿಂದ ಅಡಗಿ ಕುಳಿತಿದ್ದ ಬಿಕ್ಕು ಭೋರ್ಗರೆದು ಹೊರಬಂತು.ತಾಸುಗಟ್ಟಲೆ ಅತ್ತೆಯ ಮಡಿಲಲ್ಲಿ ಮುದುಡಿ ಬಿಕ್ಕುತ್ತಾ ಮಗುವಾಗಿದ್ದೆ,ಅತ್ತೆ ಮತ್ತೆ ತಾಯಾಗಿದ್ದರು. 'ಅಜ್ಜಿ ಅಮ್ಮಂಗೆ ಆಲು ಬೈದ್ಲು?ಹಚಾ ಮಾತ್ತಿನಿ ಚುಮ್ಮಿರು ಅಮ್ಮಾ.ಅಲಬೇಡ' ಎಂಬ ಮಗಳ ತೊದಲ್ನುಡಿಗೆ,ಕಂಬನಿಯೊರೆಸತೊಡಗಿದ ಅವಳ ಬೆಣ್ಣೆ ಸ್ಪರ್ಶಕ್ಕೆ ಮೆಲ್ಲ ಕಣ್ತೆರೆದೆ. ಇವರ ಗೆಳೆಯ ಪ್ರಕಾಶರ ಕೈಹಿಡಿದು ಬಳಿ ನಿಂತಿದ್ದಳು ಮಗಳು..
-ಶುಭಶ್ರಿ ಭಟ್ಟ

No comments:

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...