Tuesday 16 May 2017

ಎದೆಯ ಸ್ಮಶಾನದೊಳೂಳಿಡುವ ನರಿಗಳು

(ಪ್ರತಿಲಿಪಿ ಕನ್ನಡದಲ್ಲಿ ಪ್ರಕಟವಾದ ಕಥೆ)



 ಅದೊಂದು ಪ್ರಶಸ್ತಿ ವಿತರಣಾ ಸಮಾರಂಭ.ಗಣ್ಯಾತಿಗಣ್ಯರ ನಡುವೆ ಮುದ್ದೆಯಾಗಿ ಕುಳಿತಿದ್ದೆ ನಾನು,ಮುಜುಗರದಿಂದಲ್ಲ-ಸಿಡಿಲು ಬಡಿದವರಂತೆ.ಯಾವಾಗ ನನ್ನ ಕಥಾಸಂಕಲನಕ್ಕೆ ಪ್ರಶಸ್ತಿ ಸುದ್ದಿ ತಿಳಿದಾಗಿನಿಂದ ಹೀಗೇ ಆಡುತ್ತಿದ್ದೆ ಗರಬಡಿದವರಂತೆ.ಕಾರಣ ಕೇಳ್ತಿರಾ? ಹೇಳಲಾ ಬೇಡವಾ ಎಂಬ ದ್ವಂದ್ವದೊಡನೆ ಕುಳಿತಿದ್ದಂತೆ ನನ್ನ ಹೆಸರನ್ನು ಕರೆದಿದ್ದಾಯ್ತು.ಪ್ರಶಸ್ತಿ ಸ್ವೀಕರಿಸುವಾಗ  ಕೈ ನಡುಗುತ್ತಿತ್ತು,ಕಣ್ಣಂಚಲ್ಲಿ ನೀರು ಮಡುಗಟ್ಟಿತ್ತು..ಅದನ್ನೆಲ್ಲರೂ ಸಂತಸದ ಕಣ್ಣೀರೆಂದುಕೊಂಡರು. ಕಣ್ಣೀರ ಹಿಂದೆ ಹೆಪ್ಪುಗಟ್ಟಿದ್ದ ವಿಷಾದತೆ ನನಗಷ್ಟೇ ಗೊತ್ತಿತ್ತು..ಮಾತನಾಡಲಾಗದೇ ಗಂಟಲು ಬಿಗಿದು ಬಂತು,ಎಲ್ಲರೂ ಸಮಾಧಾನಿಸಿ ಕುಳ್ಳಿರಿಸಿದರು. ಕಾರ್ಯಕ್ರಮ ಮತ್ತೆ ಮುಂದುವರೆಯತೊಡಗಿತು. ಮೆಲ್ಲನೆ ಕತ್ತೆತ್ತಿ ವೀಕ್ಷಕರ ವಲಯದ ಮೊದಲ ಸಾಲಿನಲ್ಲಿ ಕುಳಿತ ಹೆಂಡತಿ ಜ್ಯೋತಿಯೆಡೆ ನೋಡಿದೆ,ಅವಳು ಹೆಮ್ಮೆಯಿಂದ ಬೀಗುತ್ತಿದ್ದಾಳೆ ಅನಿಸಿದಾಗ ಮಾತ್ರ ಮತ್ತೆ ಮುಳ್ಳು ಚುಚ್ಚಿದಂತಾಯ್ತು.ಕಾರ್ಯಕ್ರಮವೆಲ್ಲಾ ಮುಗಿಸಿ ಮನೆಗೆ ಮರಳುವಾಗಲೂ ಮಂಕಾಗಿದ್ದೆ. ನನ್ನ ಈ ಪರಿಯ ಮೌನ ನನ್ನ ಹೆಂಡತಿಗೆ ಅಚ್ಚರಿಯುಂಟು ಮಾಡಿದ್ರೂ,ಯಾಕೋ ಎನೋ ಕೇಳದೆ ಸುಮ್ಮನಾಗಿದ್ದಳು.ಮನೆಗೆ ಬಂದ ಮೇಲೆ ಜ್ಯೋತಿ ಸಮಾರಂಭದ ಸಂಭ್ರಮವ ಚಾಚೂ ಬಿಡದೆ ಸಡಗರದಿಂದ ನನ್ನಮ್ಮನಿಗೆ ವರದಿ ಒಪ್ಪಿಸುತ್ತಿದ್ದಳು.ಅವರ ಸಡಗರವ ನೋಡಲಾಗದೆ ಹೊಟ್ಟೆಲಿ ಕಿಚ್ಚೆದ್ದಿತ್ತು,ಅವರನ್ನು ಗದರಿಸಿ ಮಲಗಿಸಿದೆ. ನನ್ನ ವಿಚಿತ್ರ ವರ್ತನೆಗೆ ಎಲ್ಲರೂ ಗೊಣಗುತ್ತಲೇ ಮಲಗಿದರು,ನನ್ನೊಬ್ಬನ ಬಿಟ್ಟು..'ನಾನು ಪಾಪಿ' ಅನಿಸಿದೊಡನೆ ಅಳುವಿಕ್ಕಿ ಬಂತು. ನಿಶ್ಶಬ್ಧವಾದ ರಾತ್ರಿಯಲ್ಲಿ ಬಿಕ್ಕಲೂ ಆಗದೇ,ಅಲ್ಲಿಂದೆದ್ದು ಬಾಲ್ಕನಿಗೆ ಬಂದೆ.ತಂಪಾಗಿ ತೂಗಿ ಬರೋ ತಂಗಾಳಿ,ಮನ ಮುದಗೊಳಿಸುವ ಬೆಳದಿಂಗಳು ಆಹ್ಲಾದವನ್ನೀಯಲಿಲ್ಲ. ನೆನಪು ಬೇಡವೆಂದರೂ ಮಾತು ಕೇಳದೆ ಹಿಂದಕ್ಕೋಡಿತು..
 ಅಂದು 'ಅಜ್ಜಯ್ಯಾ ಅಜ್ಜಯ್ಯಾ' ಎಂದು ಕರೆಯುತ್ತಾ ಅಜ್ಜನ ಕೋಣೆಗೆ ಹೋದೆ. ಕರೆಂಟ್ ಇದ್ರೂ ಅಜ್ಜಯ್ಯ ತನ್ನ ಕೋಣೆಯಲ್ಲಿ ಚಿಮಣಿ ದೀಪವನ್ನೇ ಉಪಯೋಗಿಸುತ್ತಿದ್ದ.ಅವನಿಗೆ ಆ ಚಿಮಣಿಯ ಬೆಳಕಲ್ಲಿ ಬರೆಯಲು,ಓದಲು ತುಂಬಾ ಇಷ್ಟ.ದೊಡ್ಡ ಕನ್ನಡಕದ ಮುಖವನ್ನು ಪುಸ್ತಕದಲ್ಲಿ ಹುದುಗಿಸಿಟ್ಟಂತೆ ಓದುತ್ತಿದ್ದ.ಮುಕ್ಕಾಲು ನೆರೆತ ತಲೆಗೂದಲು, ದಪ್ಪಂಚಿನ ಕನ್ನಡಕ,ದೊಗಳೆಯಾದ ಪಂಚೆ-ಶರ್ಟು ,ಕೈಯಲ್ಲೊಂದು ಶಾಯಿಪೆನ್ನು ಹಿಡಿದು ಮೆಲ್ಲನೆ ತಲೆಯೆತ್ತಿದ್ದ ಅಜ್ಜಯ್ಯಾ ನನಗೆ ಐನಸ್ಟೈನ್ ಅವರಂತೆ ಕಂಡಿದ್ದ. 'ಏನು' ಎಂಬ ಪ್ರಶ್ನೆಯ ಮೊಗ ಹೊತ್ತ ಅಜ್ಜಯ್ಯನಿಗೆ 'ಊಟಕ್ಕೆ ಬಾ' ಎಂದು ಕರೆದು ಹೊರಡಲನುವಾದೆ. ತಕ್ಷಣ ನನ್ನ ಕುಳಿತು ಹೇಳಿದ ಅಜ್ಜಯ್ಯ,ಅಚ್ಚರಿಯಿಂದಲೇ ಕುಳಿತುಕೊಂಡೆ..ಸದಾ ಮೌನಕ್ಕೆ ಶರಣಾಗಿದ್ದ ಅಜ್ಜಯ್ಯ ನನ್ನನ್ನು ಕುಳೀತುಕೊಳ್ಳುವಂತೆ ಹೇಳಿದ್ದು ಮಾತ್ರ ನನಗೆ ವಿಪರೀತ ಅಚ್ಚರಿಪಡುವಂತದ್ದಾಗಿತ್ತು.ನಿಮಿಷಗಳೇ ಉರುಳಿದರೂ ಅಜ್ಜಯ್ಯ ಏನೂ ಮಾತನಾಡಲಿಲ್ಲ,ತಾಳ್ಮೆಗರ್ಥ ಗೊತ್ತಿಲ್ಲದ ನಾನೂ ಕೂಡ ಇಂದು ಸುಮ್ಮನೆ ಕುಳಿತಿದ್ದೆ ನಾನೂ ಅಚ್ಚರಿಗೊಳ್ಳುವಂತೆ..
 ಐದಾರು ನಿಮಿಷಗಳಾದ ಮೇಲೆ,ಅಜ್ಜಯ್ಯ ನನ್ನ ಕೈಹಿಡಿದು ಒಂದು ಹಳೆಯ ಕಬ್ಬಿಣದ ಪೆಟ್ಟಿಗೆಯ ಬಳಿ ಕರೆದೊಯ್ದ.ದುಡ್ಡು-ಗಿಡ್ಡು-ಚಿನ್ನ-ಪಿನ್ನ ಕೊಡ್ತಾರೆನೋ ಎಂಬ ಆಲೋಚನೆ ನನ್ನ ನೀಚಬುದ್ಧಿಯ ತಲೆಯದಾಗಿತ್ತು.ಭಾರವಾದ ಆ ಪೆಟ್ಟಿಗೆಯ ಬಾಗಿಲು ಕಟ-ಕಟವೆಂಬ ಭಯಾನಕ ಶಬ್ಧದೊಡನೆ ತೆರೆದುಕೊಂಡಿತು. ಕ್ಷಣದೊಳಗೆ ನಿರಾಸನಾಗಿದ್ದೆ ನಾನು,ಅಲ್ಲಿರುವ ಭಾರಿ-ಭಾರಿ ಪುಸ್ತಕದ ರಾಶಿ ಕಂಡು.ಎಲ್ಲವೂ ಮಹಾನ್ ಅತಿರಥ-ಮಹಾರಥರು ಬರೆದಿದ್ದ ಅತ್ಯಮೂಲ್ಯ ಪುಸ್ತಕಗಳಾಗಿದ್ದವು. ಅದರ ನಡುವಿಂದ ಸುಮಾರು ನೂರಕ್ಕೂ ಹೆಚ್ಚಿಗಿನ ಹಾಳೆಗಳನ್ನು ತೆಗೆದು ಧೂಳು ಕೊಡವಿ ನನ್ನ ಕೈಯಲ್ಲಿಟ್ಟ. ನನಗೆ ತಲೆಬುಡ ಅರ್ಥವಾಗದೇ ಕುಳಿತಿದ್ದೆ ಸುಮ್ಮನೆ. ಪೆಟ್ಟಿಗೆಯನ್ನು ಮತ್ತೆ ಭದ್ರಪಡಿಸಿ,ಹಾಳೆಗಳನ್ನು ಎತ್ತಿಕೊಂಡು ಬರಲು ತಿಳಿಸಿದ ಅಜ್ಜಯ್ಯ.ಸುಮ್ಮನೆ ಕಾಲಹರಣ ಮಾಡುತ್ತಿರುವ ಅಜ್ಜಯ್ಯನ ಮೇಲೆ ಕೋಪವುಕ್ಕಿ ಬಂದರೂ, ರೇಗದೆ ಅನಿವಾರ್ಯವಾಗಿ 'ಆಕ್ಷೀ.....' ಎಂದು ಸೀನುತ್ತಾ,ಅದನ್ನೆಲ್ಲಾ ಎತ್ತಿ ಅಜ್ಜಯ್ಯನ ಮೇಜಿನ ಮೇಲಿಟ್ಟೆ.ನನಗೆ ಮತ್ತೆ ಕುಳೀತುಕೊಳ್ಳಲು ಹೇಳಿದ ಅಜ್ಜಯ್ಯಾ 'ಆ ಹಾಳೆ ಗಂಟನ್ನೇ' ಅಪ್ಯಾಯಮಾನವಾಗಿ ನೋಡುತ್ತಾ,ಮೆಲ್ಲ ಸವರುತ್ತಿದ್ದ. ನನಗದೆಲ್ಲಾ ಒಂಚೂರೂ ಸಹನೆಯಾಗದೇ,ಅಸಹನೆಯ ಬುಗ್ಗೆಯಾಗಿ ಕುದಿಯತೊಡಗಿದ್ದೆ..ಅದನ್ನೆಲ್ಲಾ ಅಜ್ಜಯ್ಯ ಗಮನಿಸದವನಾಗಿದ್ದ..
  ಕೆಲಕಾಲ ಬಿಟ್ಟು ಮೆಲ್ಲ ನನ್ನೆಡೆ ನೋಡಿ 'ಪುಟ್ಟಣ್ಣಾ (ಅಜ್ಜ ನನ್ನ ಹಾಗೇ ಕರೆಯುತ್ತಿದ್ದ)!! ನನ್ನದೊಂದು ಆಸೆಯನ್ನು ನೇರವೆರಿಸಿಕೊಡ್ತಿಯಾ ಮಗೂ?' ಎಂದೆನ್ನುತ್ತಲೇ ಕಣ್ತುಂಬಿಕೊಂಡ. ಅಜ್ಜಯ್ಯನ್ನೆಂದೂ ಹಾಗೆ ನೋಡಿದವನಲ್ಲ ನಾನು.ಸದಾ ಗಂಭೀರ ವದನ,ಶಿಸ್ತು, ಕೋಪಿಷ್ಠನಾಗಿದ್ದ ಅಜ್ಜಯ್ಯನನ್ನು ಹೀಗೆ ಊಹೆಯೂ ಮಾಡಿಕೊಂಡಿರಲಿಲ್ಲ. ಒಮ್ಮೇಲೆ ಮೆತ್ತಗಾಗಿಬಿಟ್ಟೆ ನಾನು..ನನ್ನ ಕಣ್ಣ ಒಪ್ಪಿಗೆಯೇ ಸಾಕೆಂಬಂತೆ ಅಜ್ಜಯ್ಯ ಮಾತು ಮುಂದುವರೆಸಿದ -'ಪುಟ್ಟಣ್ಣಾ!!ಇವೆಲ್ಲಾ ನಾನು ಬರೆದ ಕವನ,ಚುಟುಕು,ಕಥೆ,ನೀಳ್ಗಥೆ,ಕಾದಂಬರಿಗಳು ಕಣೋ.ಮೊದಲಿನಿಂದ ನನಗೆ ಕುವುಂಪೆ ತರಹ ಸಾಹಿತ್ಯದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಆಸೆಯಿತ್ತು. ಆದರೆ ನನ್ನ ಅಪ್ಪನಿಗೆ ನಾನು ಸಾಹಿತ್ಯ ಅದಿ-ಇದು ಅಂತ ಹೋದ್ರೆ ಹೊಟ್ಟೆ ತುಂಬಲ್ಲಾ ಅಂತಾ,ನನ್ನಾಸೆಗೆ ಚಿಕ್ಕಾಸೂ ಬೆಲೆ ಕೊಡದೆ ಮಾಸ್ತರಾಗಿ ಮಾಡಿಬಿಟ್ಟ.ಅಪ್ಪನ ಕಾಲವಾದ ಮನೆ ಜವಾಬ್ಧಾರಿ,ಹೆಂಡ್ತಿ-ಮಕ್ಕಳು ಇದೇ ಜೀವನವಾಯ್ತು,ಆದರೂ ನಾನು ಬರೆಯುವದನ್ನು ನಿಲ್ಲಿಸಿರಲಿಲ್ಲ.ನನ್ನ ವಯಸ್ಸಿನವರೆಲ್ಲಾ ಸಾಹಿತ್ಯದಲ್ಲಿ ದೊಡ್ಡ ದೊಡ್ಡ ಹೆಸರು ಮಾಡಿ ಕವಿಗಳೆನಿಸಿಕೊಂಡಾಗ,ನನ್ನ ನೋವನ್ನು ನಾನು ಹೊಟ್ಟೆಯಲ್ಲೇ ನುಂಗಿಕೊಂಡು ಬರೆಯುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ಆದರೆ ಆ ಆಸೆ-ಕನಸುಗಳು ಮತ್ತೆ ಚಿಗುರೊಡೆದಿದ್ದು ನಿನ್ನಮ್ಮನಿಂದ,ಅವಳ ಭರವಸೆ-ಪ್ರೋತ್ಸಾಹ-ಸಹಕಾರದಿಂದ.ನನ್ನ ಸ್ವಂತ ಮಕ್ಕಳಿಗೆ ಅರ್ಥವಾಗದ್ದು,ನನ್ನ ಸೊಸೆಯೆಂಬ ಪಟ್ಟ ಹೊತ್ತು ಬಂದು,ಮಗಳಾಗಿದ್ದ ನಿನ್ನಮ್ಮನಿಗೆ ಅರಿವಾಗಿತ್ತು. ಆದರೆ ವಿಧಿಯಾಟ ನೋಡು ಆ ದೇವರು ನನ್ನ ಸ್ಪೂರ್ತಿದೇವತೆಯನ್ನೇ ಬೇಗ ಕರೆಸಿಕೊಂಡುಬಿಟ್ಟ.ಇದನ್ನೆಲ್ಲಾ ಪುಸ್ತಕ ಮಾಡಿ ಪ್ರಕಟಣೆ ಮಾಡ್ತೀನಿ ಅಂತ ನಿನ್ನಮ್ಮ ಜೋಪಾನ ಮಾಡಿಟ್ಟಿದ್ಲು ಮಗಾ. ಇವತ್ಯಾಕೋ ನಿನ್ನಮ್ಮನ ನೆನಪು ತುಂಬಾ ಕಾಡ್ತಿದೆ,ಅವಳ ಮಗನಾಗಿ ನೀ ನನ್ನ ಆಸೆ ನೇರವೆರಿಸ್ತಿಯಾ ಅಂದ್ಕೊಂಡು ಹೇಳ್ತಾ ಇದಿನಿ.ಅವಸರವೇನಿಲ್ಲಾ,ನಿಧಾನಕ್ಕೆ ನಿನಗೆ ಪುರಸೊತ್ತು ಸಿಕ್ಕಾಗ ಮಾಡು.ನಾನು ಸಾಯೋದ್ರೊಳಗೆ,ಇಲ್ಲಾ ನಾನು ಸತ್ಮೇಲಾದ್ರೂ ನನ್ನಲ್ಲಡಗಿದ್ದ ಲೇಖಕನೀಚೆ ಬರಲಿ.ಸರಿ ಮಗೂ,ನೀನಿನ್ನು ಹೊರಡು ಊಟಕ್ಕೆ.ನನಗಿವತ್ತು ಬರೀಲಿಕ್ಕೆ ತುಂಬಾ ಇದೆ.ಊಟಾನ  ಇಲ್ಲೇ ತಂದಿಡು' ಎನ್ನುತ್ತಾ ನಿಡಿದಾದ ಉಸಿರೆಳೆದುಕೊಂಡ ಅಜ್ಜಯ್ಯ್ಯಾ,ತನ್ನ ದಪ್ಪ ಕನ್ನಡಕವನ್ನು ತೆಗೆದು ತನ್ನ ಪಂಚೆಯ ತುದಿಯಿಂದ ಒರೆಸತೊಡಗಿದ,ನನ್ನ ಪ್ರತ್ಯುತ್ತರಕ್ಕೂ ಕಾಯದೇ. ಮೇಲಿಂದ ಮೇಲೆ ಅಚ್ಚರಿಗೊಳಗಾಗಿ ನಿಷ್ಕ್ರಿಯಗೊಂಡಿದ್ದ ಮನವೀಗ ಬಿದ್ದುಕೊಂಡಿತ್ತು ಮಖಾಡೆ.ಅಜ್ಜಯ್ಯನಿಗೆ ಊಟ ತಂದಿಟ್ಟು,ನಾನೂ ಉಂಡು ಮಲಗಿದೆ.ತಲೆಯಲ್ಲೇನೋ ವಿಚಾರಧಾರೆಗಳು,ಎಲ್ಲಾ ಅಸಂಬದ್ಧವಾದ್ದು..
ರಾತ್ರೆಯೆಲ್ಲಾ ಸರಿಯಾಗಿ ನಿದ್ರೆಯಿಲ್ಲದ್ದಕ್ಕೆ, ಬೆಳಿಗ್ಗೆ ಏಳುವುದೂ ತಡವಾಯ್ತು. ಲಗುಬಗೆಯಿಂದೆದ್ದು ಕಚೇರಿಗೆ ಹೊರಡಲನುವಾದಾಗ,ಪಕ್ಕದ ಕೋಣೆಯಲ್ಲಿ ಕಿಟಾರನೇ ಕಿರುಚಿಕೊಂಡ ಅಜ್ಜಿ,ಒಮ್ಮೇಲೆ ಆಕಾಶ ತಲೆಮೇಲೆ ಬಿದ್ದಾಂಗೆ ಅಳತೊಡಗಿದ್ದಳು. ನಾನು,ಜ್ಯೋತಿ ಗಾಭರಿಬಿದ್ದು ಧಾವಿಸಿದವರೇ,ಅಲ್ಲಿನ ದೃಶ್ಯ ಕಂಡು ಕಲ್ಲಾಗಿದ್ದೆವು. ಅರ್ಧತಿಂದಿಟ್ಟ ಊಟ,ಕೈಯಲ್ಲಿಡಿದ ಪೆನ್ನು,ಜಾರಿಬಿದ್ದ ದಪ್ಪ ಕನ್ನಡಕ, ದೊಡ್ಡ ಗ್ರಂಥಕ್ಕೆ ತಲೆಯಿಟ್ಟ ಅಜ್ಜಯ್ಯ ಹೃದಯ ಸ್ತಂಭನದಿಂದ ಇನ್ನಿಲ್ಲವಾಗಿದ್ದರು.ನಿನ್ನೆಯಿದ್ದ ಅಜ್ಜಯ್ಯಾ ಇಂದಿಲ್ಲವೆಂಬ ಕಠುಸತ್ಯವನ್ನ ಅರಗಿಸಿಕೊಳ್ಳಲ್ಲಾಗದ ದಿಗ್ಭ್ರಮೆಯಲ್ಲೇ ಕಚೇರಿಗೆ ವಿಷಯ ತಿಳಿಸಿ ರಜಾ ತೆಗೆದುಕೊಂಡೆ. ಅಜ್ಜಯ್ಯನ ಕ್ರಿಯೆಗಳೆಲ್ಲಾ ಸಾಂಗವಾಗಿ ಮುಗಿದವು,ಅಜ್ಜಿಯೂ ದುಃಖದಿಂದ ಹೊರಬಂದಿದ್ದಳು.ಆದರೂ ನನಗೆ ಅಜ್ಜಯ್ಯನ ಕೋಣೆಗೆ ಕಾಲಿಡಲೇ ಭಯವಾಗುತ್ತಿತ್ತು,ನನ್ನೆದೆಯಲ್ಲಿದ್ದ ವಂಚಕ ನರಿಗಳು ಹೊಂಚುಹಾಕಲು ಕಾದಿದ್ದವು.. ಆದರೆ ನನ್ನ ಭಯವನ್ನು ತನ್ನದೇ ದೃಷ್ಟಿಯಲ್ಲಿ ಅರ್ಥೈಸಿಕೊಂಡ ನನ್ನ ಹೆಂಡತಿ ನನ್ನ ಛೇಡಿಸುತ್ತಾ 'ಸಾಕು ಸುಮ್ನೆ ಬನ್ರಿ ನನ್ಜೊತೆ.ಅಜ್ಜಯ್ಯನೇನೂ ಭೂತವಾಗೊಲ್ಲ,ನಾವು ಗೋಕರ್ಣದಲ್ಲಿ ಕರ್ಮಮಾಡಿದ್ವಲ್ಲಾ.ಅಜ್ಜಯ್ಯನ ಆತ್ಮಕ್ಕೆ ಶಾಂತಿ ಸಿಕ್ಕಿದೆ ಬನ್ನಿ ಸುಮ್ನೆ.ಆ ಕೋಣೆಯನ್ನು ಚೊಕ್ಕ ಮಾಡಿ ಬೇಡದ್ದನ್ನ ರದ್ದಿಗೆ ಕೊಡ್ಬೇಕು,ಆದರೆ ಅಲ್ಲಿರೋದೆಲ್ಲಾ ಬರೀ ಪುಸ್ತಕ,ನಂಗೇನೂ ತಿಳಿಯೊದಿಲ್ಲ ಬದನೆಕಾಯಿ. ಅದಿಕ್ಕೆ ಯಾವ್ದು ಬೇಕು,ಯಾವ್ದು ಬೇಡ ಒಂಚೂರು ಹೇಳಿ ಬನ್ನಿ.. ರಾಮ ರಾಮಾ ಎಂಥಾ ಧೂಳು,ಬರೀ ಜೇಡರ ಬಲೆ. ಇಲ್ಲಿ ಅಜ್ಜಯ್ಯಾ ಹೇಗಿರ್ತಿದ್ರೋ?'ಎಂದು ಗೊಣಗುತ್ತಾ ಒಳನಡೆದಳು. ಕಲಿತರೂ ಮೂಢನಂಬಿಕೆಯ ಮಾಯೆಯಿಂದ ಹೊರಬರದ ಮುಗ್ಧ ಹೆಣ್ಣಾಕೆ,ಅವಳ ಮಾತಿಗೆ ನಸುನಕ್ಕು ಅವಳನ್ನೇ ಹಿಂಬಾಲಿಸಿದೆ. ಮೂಗಿಗೆ ಧೂಳು ಬಡಿದು ಶೀತವಾಗದಿರಲೆಂದು ವಸ್ತ್ರ ಬೀಗಿದು,ಸೀರೆಯನ್ನೆತ್ತಿ ಸೊಂಟಕ್ಕೆ ಕಟ್ಟಿ,ಕೈಯಲ್ಲಿ ಪೊರಕೆ ಹಿಡಿದು ಕುರ್ಚಿಯ ಮೇಲೆ ಹತ್ತುನಿಂತಿದ್ದ ಜ್ಯೋತಿಯ ಕಂಡು ನಾನು-ಅಜ್ಜಿ 'ಸೂತಕದ ಮನೆ'ಯಲ್ಲಿ ಮೊದಲಬಾರಿಗೆಂಬಂತೆ ನಕ್ಕು,ನನ್ನವಳ ಕಿಡಿಗಣ್ಣಿಗೆ ಬಲಿಯಾಗಿದ್ದೆವು.
ಕಬ್ಬಿಣದ ಭಾರವಾದ ಆ ಪೆಟ್ಟಿಗೆಯನ್ನು ಎಳೆಯುವಾಗ ಕೈಯಾಕೋ ಅಗತ್ಯಕಿಂತ ಜಾಸ್ತಿಯೇ ನಡುಗುತ್ತಿತ್ತು. ದೊಡ್ಡ ದೊಡ್ಡ ಗ್ರಂಥಗಳನ್ನು,ಕಥೆ ಪುಸ್ತಕ,ಕಾದಂಬರಿಗಳನ್ನು ಒಂದೆಡೆ ಶುಭ್ರವಾಗಿ ಜೋಡಿಸಿಟ್ಟೆ,ಆ ಹಾಳೆಕಟ್ಟಿನ ಹೊರತು.ಅದನ್ನು ಭಾರವಾದ ನಡಗುವ ಕೈಗಳಿಂದೆತ್ತಿ,ಅವಳಿಗೆ ಕಾಣದಂತೆ ತೆಗೆದಿರಿಸಿದೆ.ಹೊರಬಂದು ಕುಳಿತವನೆದೆಯಲ್ಲಿ ನೂರಾರೂ ಕೀಚಕ ನರಿಗಳ 'ತಕಧಿಮಿತಾಂ'.. ರಾತ್ರಿಯೀಡಿ ಯೋಚಿಸಿಯೇ ಯೋಚಿಸಿದೆ,ಏನೋ ಒಂದು ನಿರ್ಧರಿಸಿದಂತೆ ಬೆಚ್ಚನೆ ಮಲಗಿಬಿಟ್ಟೆ.ನನ್ನ ಯಾವ ಕಿರಾತಕ ಬುದ್ಧಿಯ ಅರಿವಿರದೇ ಮುದ್ದಾಗಿ ಮಲಗಿದ್ದಳು ಜ್ಯೋತಿ ಪಕ್ಕದಲ್ಲಿ. 
ಎರಡು ವಾರದ ರಜೆಯಿಂದಾಗಿ ಇನ್ನೆರಡು ದಿನ ಕಚೇರಿಗೆ ಹೋಗುವ ರಗಳೆಯಿರಲಿಲ್ಲ.ಅದಕ್ಕೆ ಬೆಳಿಗ್ಗೆ ಕಾಫಿಯನ್ನು ಆಸ್ವಾದಿಸುತ್ತಾ,ದೈನಂದಿನ ಪತ್ರಿಕೆಯೊದುತ್ತಿದ್ದೆ.ಆಗ ಅಚಾನಕ್ ಆಗಿ ನನ್ನ ಕಾಕದೃಷ್ಠಿಗೆ ಬಿತ್ತು 'ಬರಹಗಳಿಗೆ ಆಹ್ವಾನ' ಎಂಬ ಪ್ರಕಟಣೆ.ಕೇಳಬೇಕಾ ನಿನ್ನೆಯಿಂದ ಕೀಚಕನಂತೆ ಕಾಡುತ್ತಿದ್ದ ನರಿಗಳು ಹೊರಗೊಡಿಬಂದಿದ್ದವು.ಒಂದು ಕಡೆ ಕುಳಿತು ಬರೆಯತೊಡಗಿದ ನನ್ನ ಕಂಡು ಜ್ಯೋತಿ ಹುಬ್ಬೇರಿಸಿ ಹೋಗಿದ್ದಳು.ಒಂದೆರಡು ತಾಸಾದರೂ ಅಲ್ಲೇ ಕುಳೀತು ಗೀಚುತ್ತಿದ್ದ ನನ್ನ ಕಂಡು ಕೂತುಹಲ ತಡೆಯಲಾಗದೇ 'ಏನ್ರೀ!!ಅಜ್ಜಯ್ಯನ ತರಹ ಆಗಿಬಿಟ್ರೆನೂ?' ಎಂದು ಕೇಳಿದಾಗ,ನನಗೆ ಚೂರಿಯಿಂದ ಚುಚ್ಚಿದಂತಾಗಿತ್ತು. ಕ್ಷಣಕೂಡ ಅಲ್ಲಿ ನಿಲ್ಲಲಾಗದೇ ಅಲ್ಲಿಂದೆದ್ದು ಹೊರಟ ನನ್ನನ್ನು ಅಚ್ಚರಿಯಿಂದ ನೋಡುತ್ತಿದ್ದರು ಅಜ್ಜಿ-ಹೆಂಡತಿ.ಬಾಲ್ಕನಿಯಲ್ಲಿ ತಂಪಾಗಿ ಬೀಸುತ್ತಿದ್ದ ತಂಗಾಳಿ, ನವಿರಾಗಿ ಮನ ಮುದಗೊಳಿಸುವಂತಿದ್ದ ಸಂಪಿಗೆ,ಯಾವೂದೂ ನನ್ನೆದೆಯುರಿಯನ್ನಾರಿಸಲಿಲ್ಲ.ಆದರೆ ಕೀಚಕತೆಗೆ ಭಾವನೆಗಳೆಲ್ಲಾ ಸುಲಭದಲ್ಲಿ ತಟ್ಟುವುದಿಲ್ಲ.ಕ್ಷಣದಲ್ಲಿ ಸಾವರಿಸಿಕೊಂಡು ಮತ್ತೆ ಬರೆಯಲು ಬಂದು ಕುಳಿತಿದ್ದೆ,ನನ್ನೆಲ್ಲಾ ಭಾವನೆಯ ಕೊಡವಿಕೊಂಡು...
ಇತ್ತಿಚಿಗೆ ಮನೆಯಲ್ಲಿ ನಾನು ಅಚ್ಚರಿಯ ವಿಷಯವಾಗಿದ್ದೆ.ಮರಳಿ ಕಚೇರಿ ಶುರುವಾಗುವವರೆಗೂ ಬರೆಯುತ್ತಲೇ ಇದ್ದೆ,ನಿಮಿಷವನ್ನೂ ವ್ಯಯಿಸದಂತೆ.ಹಾಗೆಯೇ ತಿಂಗಳುಗಳೇ ಕಳೆದವು.ಅದೊಂದು ದಿನ ನನ್ನ  ಹೆಸರಿಗೊಂದು ದೀಪಾವಳಿ ಸಂಚಿಕೆ,ಜೊತೆಗೆ ಆರುಸಾವಿರದ್ದೊಂದು ಚೆಕ್ಕು ಬಂದಿದ್ದು.ಪ್ರಸಿದ್ಧ ಮಾಸಪತ್ರಿಕೆಯಲ್ಲಿನ ಕಥಾಸ್ಪರ್ಧೆಯಲ್ಲಿ ನನ್ನ ಕಥೆ(?)ಗೆ ಪ್ರಥಮ ಸ್ಥಾನ ಬಂದಿದ್ದು ಕಂಡು ಜ್ಯೋತಿ ಕುಣಿದಾಡಿದ್ದಳು,ನಾನೂ ಖುಶಿಯಾದೆ.ವಿಷಯ ತಿಳಿದ ಅಜ್ಜಿಯೂ 'ನಿನ್ನ ಅಜ್ಜಯ್ಯನೂ ಕಥೆ ಕವನ ಎಲ್ಲಾ ಬರಿತಿದ್ರೂ ಕಣಾ,ಅದೆಲ್ಲಾ ನಂಗ್ ತಿಳಿತಿರ್ಲಿಲ್ಲ.ಆದರಾ ಕಾಲದಲ್ಲಿ ಇಷ್ಟು ಸಲೀಸಾಗಿ ಪತ್ರಿಕೆಗೆ ಕಳ್ಸದೆಲ್ಲಾ ಗೊತ್ತಿರ್ಲಿಲ್ಲ. ನೀನಾದ್ರೂ ಹೆಸ್ರು ತಗಾ.ಮೇಲಿರೋ ಅಜ್ಜಯ್ಯಾ ನಿಜ್ವಾಗಿ ಖುಶಿ ಪಡ್ತಾರೆ ಕಣಾ' ಎಂದಿನ ಗೊಗ್ಗರು ದನಿಯಲ್ಲಿ ಹೇಳಿದಾಗ ಮಾತ್ರ ಮೆಲ್ಲ ನಡುಗಿಬಿಟ್ಟೆ.ಅದೆಲ್ಲಾ ಕ್ಷಣವಷ್ಟೇ ನಂತರ ಯಾವ ಪಶ್ಚಾತ್ತಾಪದ ಛಾಯೆಯೂ ನನ್ನಲ್ಲಿರಲಿಲ್ಲ.ನನ್ನಾಕೆಯ ಮುಗ್ಧ ಸಂಭ್ರಮವನ್ನು ನಾನೂ ಆಚರಿಸಿದೆ..

ಮತ್ತೆರಡು ತಿಂಗಳು ಕಳೆದ ಮೇಲೆ ನಾನು ಒಂದು ಕಥಾಸಂಕಲನ 'ನಿನ್ನ ನೆನಪಲಿ'ಯನ್ನು ಬಿಡುಗಡೆ ಮಾಡಿದೆ.ಅದೇಷ್ಟು ಜನಪ್ರಿಯತೆ ಪಡೆಯಿತು ಅಂದರೆ ನನಗೇ ಅಚ್ಚರಿ ಹುಟ್ಟಿಸುವಷ್ಟು!ಜನಪ್ರಿಯತೆಯ ಜೊತೆಜೊತೆಗೆ ಹಣವನ್ನೂ ಬಾಚಿಕೊಂಡಿದ್ದೊಂದು ವಿಶೇಷ.ದಿನಪತ್ರಿಕೆಯಲ್ಲೆಲ್ಲಾ ನನ್ನದೇ ಸುದ್ದಿ 'ಎಲೆಮರೆಯ ಕಾಯಿ', 'ಮಿಂಚಿನ ಪ್ರತಿಭೆ',ಹೀಗೆ ದಿನಕ್ಕೊಂದು ಶಿರ್ಷೀಕೆಯಡಿ ನನ್ನ ಸಂದರ್ಶನ ಬರುತ್ತಲೇ ಇತ್ತು.ಅಜ್ಜಿ ಮತ್ತೆ ಹೆಂಡತಿ ಸಂತೋಷದಿಂದ ಉಬ್ಬಿದ್ದರು,ನಾನೇನೂ ಕಡೀಮೆಯಿರಲಿಲ್ಲ. ಆದರೆ ಈ ಸಂತೋಷ ಬಹಳ ಕಾಲ ಉಳಿಯಲಿಲ್ಲ.ಅಂದು ನನ್ನ ಕಥಾಸಂಕಲನಕ್ಕೆ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಿದಾಗಲಿನಿಂದ ನಾನು ನಾನಾಗಿರಲಿಲ್ಲ.ನನ್ನೊಳಗಿನ ಕಿರಾತಕ ನರಿಗಳು ಒಮ್ಮೇಲೆ ವಿಜೃಂಭಿಸಿದಂತಾಡಿ ಸತ್ತು ಬಿದ್ದುದರಿಂದ ನಾನು ಮೊದಲಿನಂತಾಗಿದ್ದೆ.ನನ್ನನ್ನೀಗ ಕಾಡುತ್ತಿದ್ದುದು ಬರೀ ನೋವು,ಬರೀ ಪಶ್ಚಾತ್ತಾಪದ ಬೇಗೆ..
 ಆದರಿಂದು ನಾನೊಂದು ನಿರ್ಧಾರ ಮಾಡಿದ್ದೆನೆ.ಎಲ್ಲವನ್ನೂ ಹೆಂಡರಿ-ಅಜ್ಜಿಯ ಮುಂದೆ ಹೇಳಿದ ಮೇಲೆ, ಪತ್ರಿಕಾಗೋಷ್ಠಿ ಕರೆಸಿ ಇರುವ ವಿಷಯ ಹೇಳಿಬಿಡುತ್ತೆನೆ. ನನ್ನನ್ನು ಹೊಗಳಿ ಬರೆದ ಪತ್ರಿಕೆಗಳೆಲ್ಲಾ,ನನ್ನ ಬಗ್ಗೆ ಭಯಾನಕವಾಗಿ ಚಿತ್ರಿಸಿದ್ರೂ, ಅಜ್ಜಿ-ಜ್ಯೋತಿಯ ದೃಷ್ಠಿಯಲ್ಲಿ ಸಣ್ಣವನಾದ್ರೂ ಚಿಂತಿಲ್ಲ. ಎಲ್ಲವನ್ನೂ ಹೇಳೇ ಬಿಡುತ್ತೆನೆ ಎಂದು ಮಾಡಿಕೊಂಡ ಸಮಾಧಾನ ಕ್ಷಣಮಾತ್ರದ್ದಾಗಿತ್ತು. ಕಾರಣ? ಮನಃಸಾಕ್ಷಿಯ ವಿರುದ್ಧವಾಗಿ ನಡೆದುದ್ದಕ್ಕೆ ನನ್ನೆದೆಯ ಗೂಡಲ್ಲಿ ಊಳಿಡುವ ನರಿಗಳು ಸುಮ್ಮನಿರ್ತಾವಾ? ನಾನೇ ಮಾಡಿಕೊಂಡ ಆತ್ಮವಂಚನೆ ಸಾಮಾನ್ಯದ್ದಾ? ಎಂಬೆಲ್ಲಾ ಪ್ರಶ್ನೆ ಬಂದೊಡೆ ಮನ ಬೆಂಕಿಯ ಗೂಡಾಗುತ್ತದೆ,ಮನ ಪಶ್ಚಾತ್ತಾಪದ ಕಿಡಿಯಲಿ ಬೆಂದು ಹೋಗುತ್ತಿದೆ.ಆದರೂ ಎಲ್ಲಾವನ್ನೂ ಎಲ್ಲರಿಗೆ ಹೇಳಿದ್ದೆನೆ,ಬಂದ ಹಣವನ್ನೆಲ್ಲಾ ವೃದ್ಧಾಶ್ರಮಕ್ಕೆ ಅಜ್ಜಯ್ಯನ ಹೆಸರಲ್ಲಿ ದಾನ ಮಾಡಿದ್ದೆನೆ. ಅಜ್ಜಯ್ಯನ ಉಳಿದ ಕಥೆ-ಕವನ-ಕಾದಂಬರಿ-ಪ್ರಭಂದದ ಪುಸ್ತಕಗಳನ್ನು ಪ್ರಕಟಿಸಿದ್ದೆನೆ..ಮನವೀಗ ಸಮಾಧಾನಗೊಂಡರೂ 'ಎದೆಗೂಡಲ್ಲು ಊಳಿಡೂವ ನರಿಗಳು' ನಾನು ಮಾಡಿದ ತಪ್ಪನ್ನು ಆಗಾಗ ನೆನಪಿಸುತ್ತಿರುತ್ತವೆ.
-ಶುಭಶ್ರೀ ಭಟ್ಟ

No comments:

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...