Wednesday, 28 June 2017

ಕೊಂಕಣ ರೈಲೂ ಹಾಳೆಕೊಟ್ಟೆಯ ಬೆನ್ನೂ..

ಕೊಂಕಣ ರೈಲೂ ಹಾಳೆಕೊಟ್ಟೆಯ ಬೆನ್ನೂ..
   ಕೊಂಕಣ ರೈಲ್ವೆ ಬಂದ ಹೊಸತರಲ್ಲಿ ಅದರ ಸೀಟಿಯ ಶಬ್ಧಕ್ಕೆ ಮೈಮನ ಕುಣಿದಾಡುತ್ತಿದ್ದ ದಿನಗಳವು.ಈ ಕೊಂಕಣ ರೈಲ್ವೆ ಬರಲು ಅದೇಷ್ಟು ಜನ ತಮ್ಮ ಹೊಲ-ಗದ್ದೆ-ತೋಟಗಳನ್ನು ತ್ಯಾಗ ಮಾಡಿದರು,ಭೂತಾಯಿ ಅದೇಷ್ಟು ಉಳಿಪೆಟ್ಟಿನ ನೋವ ಸಹಿಸಿದಳು,ವನದೇವಿ ತನ್ನ ಅದೇಷ್ಟು ಮಕ್ಕಳನ್ನು ಬಲಿಕೊಟ್ಟಳು ಎಂದು ಅರಿವು ಮೂಡಿರದ ವಯಸ್ಸಾಗಿತ್ತದು.ದಿನನಿತ್ಯವೂ ಕೊಂಕಣ ರೈಲ್ವೆಯನ್ನು ಕಂಡೊಡನೆ,ಅದರ ಶಬ್ಧ ಕೇಳಿದೊಡನೆ ಹಿಡಿಶಾಪ ಹಾಕುವ ಹಿರಿಯರ ನಡುವೆ ಅದನ್ನು ಮುಗ್ಧವಾಗಿ-ಮುಕ್ತವಾಗಿ ಸ್ವಾಗತಿಸಿದ್ದು ಮಾತ್ರ ನಮ್ಮಂತಹ ಚಿಣ್ಣರು.ಹೀಗಿರುವಾ ಬೇಸಿಗೆರಜೆ ಶುರುವಾದರೂ ಆಡಲು ಬರುತ್ತಿರುವ ಮಕ್ಕಳ ಸಂಖ್ಯೆ ಮಾತ್ರ ನಿತ್ಯ ಕಡಿಮೆಯಾಗುತ್ತಲೇ ಇತ್ತು.ಇದರ ಹಿನ್ನೆಲೆಯನ್ನೆಲ್ಲಾ ಅರಿಯದಿದ್ದ ನಾನು ನಮ್ಮೊಡನೆ ಆಡಲು ಬರುತ್ತಿದ್ದ ಕುಪ್ಪುವನ್ನು ಹಿಡಿದು 'ಎಂತದಾ?ಆಡುಕೆ ಬರುದಿಲ್ಲಾಲ ಈಗ,ಎಂತಾ ಮೀನ್ ಹಿಡುಕ್ ಗಜ್ನಿಗ್ ಹೋಗ್ತ್ರಾನಾ?' ಕೇಳಿದ್ದಕ್ಕೆ,ಅವ 'ಇಲ್ವೇ ದೊಡ್ತಂಗಿ,ನಾಮೆಲ್ಲಾ ದಿನಾ ರೇಲ್ ನೋಡುಕ್ ಹೋಗ್ತ್ರು. ದಿನಾ ೧೨ಘಂಟಿಗ್ ಬತ್ತಿದು,ನಾಮ್ ಟಾಟಾ ಮಾಡ್ತ್ರು,ಅವ್ರೂ ಟಾಟಾ ಮಾಡ್ತ್ರು.ಬರ್ಬೇಕಾರೆ ಮಾಯ್ನಣ್ಣೆಲಾ ತಿಂದ್ಕ ಬತ್ರು,ಛೋಲೋ ಆತಿದು' ಎಂದಾಗ ನನಗೆ ಸಿಕ್ಕಾಪಟ್ಟೆ ಆಸೆಯಾಗಿ ನಾನೂ ಬರುವೆನೆಂದು ಹಠಹಿಡಿದೆ.ಅವರಿಗೆ ನಮ್ಮಮ್ಮ-ಅಜ್ಜಿಯ ಭಯವಿದ್ದರೂ ನಾನು ಧೈರ್ಯ ಹೇಳಿ ಹ್ಮೂಂಗುಡಿಸಿದ್ದೆ.
  ಮರುದಿನ ನಮ್ಮಮ್ಮ ಅಜ್ಜಿಯ ಕಣ್ತಪ್ಪಿಸಿ ನಾನು ನನ್ನ ಎರಡೂವರೆ ವರುಷದ ತಂಗಿಯೊಡನೆ ಮನೆಯಿಂದ ಹೊರಬಿದ್ದೆ.ನಮ್ಮ ತೋಟದ ತುದಿಗೆ ಬರುವಷ್ಟರಲ್ಲಿ ಕುಪ್ಪು,ಶಂಕ್ರ,ತಿಮ್ಮಕ್ಕ,ಸೋಮ,ನಾಗು,ವಿಜಯ,ಲಲಿತ ನಮಗೋಸ್ಕರ ಕಾದಿದ್ದರು.ನನ್ನ ಪುಟ್ಟ ತಂಗಿಯು ನಡೆದು ಸುಸ್ತಾಗಿ ಹಠ ಮಾಡಬಾರದೆಂದು ಕುಪ್ಪು,ಸೋಮ,ವಿಜಯ,ತಿಮ್ಮಕ್ಕ ಸರತಿಯಂತೆ ಅವಳನ್ನು ಕಂಕುಳಲ್ಲಿ,ಹೆಗಲಲ್ಲಿ ಹೊತ್ತುಕೊಂಡು ನಡೆದರು.ಉಳಿದವರೆಲ್ಲಾ ಗದ್ದೆಯಂಚಲ್ಲಾಗುವ ಕುಸುಮಾಲೆ ಹಣ್ಣು,ಬಿಂಬ್ಲಕಾಯಿ,ರಾಜನೆಲ್ಲಿಕಾಯಿ,ಜಂಬೆಹಣ್ಣನ್ನು ಮೆಲ್ಲುತ್ತಾ,ನಡುನಡುವೆ ವಿಶ್ರಮಿಸುತ್ತಾ ಊರಂಚಿಗೆ ತಲುಪಿದೆವು.ಅಲ್ಲೇ ಇದ್ದ ಸಣ್ಣ ಕೆರೆಯಲ್ಲಿ ಕೈಕಾಲು-ಮುಖ ತೊಳೆದು,ಕೆಸರಲ್ಲಿ ಅರಳಿದ ಕಮಲವ ಹರಸಾಹಸಪಟ್ಟರೂ ಕೊಯ್ಯಲಾಗದೇ ಬಿಟ್ಟು,ಅಲ್ಲಿಂದ ತೆರಳಿ ಕೊಂಕಣ ರೈಲ್ವೆಯ ಬುಡದಲ್ಲಿದ್ದ ಗದ್ದೆಯಲ್ಲಿ ಸಾಲಾಗಿ ಮಂಗಗಳ ಗುಂಪಂತೆ ಕುಳಿತೆವು ರೈಲು ಬರುವುದನ್ನೇ ಕಾಯುತ್ತಾ.
    ರೈಲ್ವೆಯ ಚುಕುಬುಕು ಶಬ್ಧ ಕೇಳಿದೊಡನೆ ಕಿವಿನೆಟ್ಟಗಾಗಿ ಕುಳಿತಿದ್ದವೆಲ್ಲಾ ಆವೇಶಬಂದವರಂತೆ ಜಿಗಿದೆದ್ದೆವು.ಅದಾಗಿ ಅರ್ಧಘಂಟೆಯಾದರೂ ರೈಲು ಬರದಿದ್ದುದ ಕಂಡು ನಿರಾಸೆಯಿಂದ ಚಡಪಡಿಸತೊಡಗಿ,'ಏಯ್ ಕುಪ್ಪು ಎಲ್ಲದ್ಯಾ?ಬರ್ಲೇ ಇಲ್ವಲಾ ಇನ್ನುವಾ?' ಎಂದೆ.ಅದಕ್ಕವ 'ತಡ್ಯೆ ದೊಡ್ತಂಗಿ,ಎಲ್ಲೋ ಆಸ್ರಿ ಕುಡುಕೆ ನಿಲ್ಸಿರನಾ' ಎಂದ ಸರ್ವಜ್ನನಂತೆ.ಕಂಡಕಂಡಲ್ಲಿ ಊಟ-ತಿಂಡಿಗೆ ನಿಲ್ಲಿಸಲು ಅದೇನು ಸಾರಿಗೆ ಬಸ್ಸಾ? ಎಂಬ ಪ್ರಶ್ನೆ ಕೂಡ ನಮ್ಮಲ್ಲಿ ಉದಯಿಸದಷ್ಟು ಮುಗ್ಧರಾಗಿದ್ದೆವು.ಕೊನೆಗೆ ಚುಕುಬುಕು ಶಬ್ಧ ಜೋರಾಗಿ ಕೇಳಿಸತೊಡಗಿ,ದೂರದಲ್ಲಿ ರೈಲಿನ ಮೂತಿಯೂ ಕಂಡೊಡನೆ 'ಹೋ' ಎಂದು ಕುಣಿದಾಡಿದ್ದೆವು.
ರೈಲಿನಲ್ಲಿ ಕುಳಿತಿದ್ದ ಜನ ಸಮೀಪವೆನಿಸಿದಾಗ ಕೈಬೀಸಿ ಟಾಟಾ ಮಾಡಿದಾಗ,ಕೆಲವರು ತಿರುಗಿ ಟಾಟಾ ಮಾಡಿದಾಗ ನಮಗಾಗಿದ್ದ ಆನಂದ ಹೇಳಲಾಗದ್ದು. ರೈಲ್ವೆಯಲ್ಲಿ ಪ್ರಯಾಣ ಮಾಡುವವರೆಲ್ಲಾ ಇಂಗ್ಲೀಷಲ್ಲಿ ಪರಿಣಿತರು ಎಂಬ ಸಿನಿಮಿಯ ಮೋಡಿಗೊಳಗಾಗಿದ್ದ ಕಾಲವದು.ಅದಕ್ಕೆ ಅಪ್ಪ ಆಗಷ್ಟೇ ಕಲಿಸತೊಡಗಿದ್ದ ಒಂದೆರಡು ಇಂಗ್ಲೀಷ್ ಶಬ್ಧಗಳು 'Hello..How Do You Do?' ಎಂದು ಹಾರಬಿಟ್ಟೆ.ಅದಕ್ಕೆ ಪ್ರತ್ಯುತ್ತರ ಬರದಾಗ ಪಿಚ್ಚೆನಿಸಿದ್ದರೂ,ಉಳಿದ ಮಕ್ಕಳ ಮುಂದೆ ಪಂಡಿತಳಂತೆ ಬೀಗಿದ್ದೆ.ಹೀಗೇ ರೈಲು ಮರೆಯಾಗುವವರೆಗೆ ನಿಂತ ನಮಗೆ ಮಧ್ಯಾಹ್ನ ಊಟದ ಸಮಯ ಮೀರಿದ್ದೂ ಗೊತ್ತಿರಲಿಲ್ಲ,ಮನೆಯ ನೆನಪೂ ಆಗಲಿಲ್ಲ.
   ಮೀನು ಗಜ್ನಿಯ ವಾಸನೆಗೆ 'ಛೀ' ಎಂದು ಮೂಗ್ಮುಚ್ಚಿಕೊಂಡು ದಾಟಿ,ಪಕ್ಕದ ಝರಿಯ ತಣ್ಣೀರಲ್ಲಿ ಆಟವಾಡಿ ಹೊರಟೆವು.ತೋಟದಂಚಿನ ಗದ್ದೆಗೆ ಬಿದ್ದ ಮಾವಿನಹಣ್ಣನ್ನೆಲ್ಲಾ ಫ್ರಾಕಿನಲ್ಲಿ ತುಂಬಿಕೊಂಡು ಮುಂದುವರೆದೆವು.ಮಾವಿನಹಣ್ಣಿನ ಹಪ್ಪಳದ ಆಸೆಗೆ ದಾಕ್ಷಾಣಜ್ಜಿಯ ಮನೆ ತೋಟದ ಮಾವಿನ ಹಣ್ಣನ್ನು ಕೊಯ್ಯಲು ಕುಪ್ಪು ಮರ ಹತ್ತಿದ್ದನಷ್ಟೇ,ಅದೆಲ್ಲಿದ್ದರೋ ಅಜ್ಜಿ ಕೋಲುಹಿಡಿದು ಬಂದೇ ಬಿಟ್ಟರು.ಅವರದ್ದೇ ಮರದ ಮಾವಿನಹಣ್ಣನ್ನು ನಾವು ತುಂಬಿಕೊಂಡಿದ್ದೆಂದು ತಪ್ಪು ತಿಳಿದು ಬೈಯತೊಡಗಿದಾಗ,ಅಲ್ಲಿಂದ ಕಾಲ್ಕಿತ್ತೆವು.
 ಓಡಿಈಡಿ ಸುಸ್ತಾಗಿ ಬೊಮ್ಮಿಮಾಸ್ತಿಯ ಗದ್ದೆಯಂಚಲಿ ಕೂತು ಉಸಿರುಬಿಟ್ಟಾಗ ಮೊದಲಬಾರಿಗೆ ಹಸಿವಾದದ್ದು ಗಮನಕ್ಕೆ ಬಂತು.ಎಲ್ಲರೂ ಅವರವರ ಬಳಿಯಿದ್ದ ಮಾವಿನಹಣ್ಣನ್ನು ತಿನ್ನತೊಡಗಿದಾಗ,ನಾನೂ-ತಂಗಿಯೂ ಅದನ್ನೇ ಅನುಸರಿಸಿದೆವು.'ತೊಳೆಯದೇ ಹಣ್ಣು ತಿನ್ನಬಾರದು'ಎಂದು ಅಮ್ಮ ಕಲಿಸಿದ ಪಾಠವೆಲ್ಲಾ ಕಾಣದಂತೆ ಅಡಗಿ ಕುಳಿತಿತ್ತು.ಅಂತೂ ನಮ್ಮ ತೋಟದವರೆಗೆ ನಮ್ಮನ್ನು ಬೀಳ್ಕೊಟ್ಟ ಸೈನ್ಯ,ಮನೆಯಲ್ಲಿ ಬೈದರೆ ತಮ್ಮ ಹೆಸರು ಹೇಳಬಾರದೆಂದು ತಾಕಿತು ಮಾಡಿತೆರಳಿತು.ತೋಟದಲ್ಲಿ ನಡೆಯುವಾಗ ಅಷ್ಟು ಹೊತ್ತ ನೆನಪಾಗದ ಅಮ್ಮ ನೆನಪಾದಳು,ಶೆಳೆ(ಸಪೂರ ದಾಸವಾಳದ ಕೋಲು) ಕಾದಿರುವುದಂತೂ ಖಚಿತವೆಂದು ಅದರಿಂದ ತಪ್ಪಿಸಿಕೊಳ್ಳುವ ಉಪಾಯ ಮಾಡುತ್ತಾ ಮನೆಯೆಡೆಗೆ ಹೆಜ್ಜೆ ಹಾಕಿದೆವು.
   ತೆಂಗಿನಮರದ ಸುಂಕವನ್ನು ತಂಗಿಯ ಕೈಹಿಡಿದು ದಾಟುವಾಗಲೇ ಪಕ್ಕದ್ಮನೆ ಸಾವಿತ್ರಕ್ಕ ಓಡಿಬಂದರು.'ಎಲ್ ಹೋಗಿದ್ರೆ ಕೂಸ್ಗಳೆ?ಆಯಿಗಾರೂ ಹೇಳಿಕ್ ಹೋಗುಕಾಗ್ಲಿಲ್ವಾ?ಊರೆಲ್ಲ ಹುಡ್ಕ್ತಿದ್ರು,ಕಡೆಗೆ ಬೊಮ್ಮು ನೀವು ಗೆದ್ದೆ ಬದೀಲ್ ಕಂಡೆ ಹೇಳಿ.ಈಗ್ ನೋಡು ಶೆಳೆ ಹಿಡ್ಕಂಡ್ ಕುಂತರೆ,ಬೆನ್ನಿಗೆ ಹಾಳೆಕೊಟ್ಟೆ ಕಟ್ಕ ಹೋಗಿ' ಎಂದಾಗ,ಹೊಟ್ಟೆಯಿಂದ ಛಳಿ ಕಿತ್ತುಕೊಂಡು ಬಂದು ತತ್ತರಿಸತೊಡಗಿದೆವು.(ವಿ.ಸೂ: ಬೆನ್ನಿಗೆ ಪೆಟ್ಟು ಬೀಳಬಾರದೆಂದು ಚಿಕ್ಕಮಕ್ಕಳಿಗೆ ಹೇಳುವ ಉಪಮೆಯೆ ಬೆನ್ನಿಗೆ ಹಾಳೆಕೊಟ್ಟೆ ಕಟ್ಟುವುದು).
 ಶಬ್ಧವಾಗದಂತೆ ಬಚ್ಚಲಲ್ಲಿ ಕಾಲ್ತೊಳೆದು,ತಂಗಿಯದ್ದೂ ಕಾಲ್ತೊಳಿಸಿ,ಮನೆಯೊಳಗೆ ಕಾಲಿಟ್ಟೆವು ಮೆಲ್ಲ.ಪುಟ್ಟತಂಗಿಗೆ ಪೆಟ್ಟುಬಿಳುವುದು ಕಡಿಮೆಯೆಂದು ಅವಳನ್ನೇ ಮುಂದೆ ಅಸ್ತ್ರದಂತೆ ನಡೆಸಿಕೊಂಡು ಹೆಜ್ಜೆಯೆರಡಿಟ್ಟಿದ್ದೆ.ಇದನ್ನೆಲ್ಲಾ ಮೊದಲೇ ಗ್ರಹಿಸಿದ್ದ ಅಮ್ಮನಂತೂ ಸಪೂರ ಶೆಳೆ ಹಿಡಿದು ಬಾಗಿಲಸಂಧಿಯಲ್ಲಿ ಕಳ್ಳಬೆಕ್ಕಂತೆ ಹೊಂಚುಹಾಕುತ್ತಿದ್ದಳು. ಕೋಲುಕಂಡೆ ಹೆದರಿ ತಂಗಿ ಬೊಬ್ಬೆ ಹಾಕತೊಡಗಿದಾಗ,ಕೋಲು ತಿರುಗಿದ್ದು ನನ್ನೆಡೆಗೆ.ಚುಬುಕು ಚುಬುಕೆಂದು ಎರಡೇಟು ಬಿದ್ದರೂ ತಪ್ಪಿಸಿಕೊಂಡು,ಅಜ್ಜಿಯ ಬೆನ್ನಹಿಂದೆ ಅಡಗಿಕೊಂಡು ಅಳತೊಡಗಿದ್ದೆ,ಅಜ್ಜಿ ಅಮ್ಮನಿಗೆ ಬೈಯತೊಡಗಿದರು.ಅದಕ್ಕಮ್ಮ ಕೋಪಮಿಶ್ರಿತ ದುಃಖದಲ್ಲಿ 'ಅಮ್ಮಾ ನೀವ್ ಮುದ್ದ್ ಮಾಡೇ ಹಾಳಾದ ಇವ್ಳು.ಹೋಗಕಾರೆ ಒಂದ್ ಮಾತ್ ಹೇಳಿಕ್ ಹೋಜಿಲ್ಲೆ ಈ ಕೂಸು.ಸಂತಿಗ್ ಈ ಪಿಳ್ಳೆನ ಬೇರೆ ಕರ್ಕಂಡ್ ಹೋಜು.ಹೋದ್ ಜಾಗ ಬೇರೆ ಸರಿಯಿಲ್ಲೆ,ಬಿಸಿಲು-ನೀರಿಪ್ಪು ಜಾಗ,ಎಂತಾರು ಆಗಿದ್ರೆ' ಕೇಳುತ್ತಾ ಕಣ್ತುಂಬಿಕೊಂಡಾಗ ನನಗೆ ಬೇಸರವಾಯ್ತು.ಅಮ್ಮನ ಸಂಕಟವನ್ನರಿತ ಅಜ್ಜಿ ನಮಗೇ ನಾಜೂಕಾಗಿ ಬುದ್ಧಿ ಹೇಳಿಲ್ಲಿ ಬಿಸಿಲುಗುಮ್ಮ ಇರುವನೆಂದು,ಚೆಂದದ ಮಕ್ಕಳ ಕದ್ಕೊಂಡ್ ಹೋಗ್ತಾನೆಂದು ಹೆದರಿಸಿದಾಗ ಮತ್ತೆ ಕೊಂಕಣ ರೈಲ್ವೆ ನೋಡಲು ಹೋಗಲಿಲ್ಲವಾದರೂ,ಆ ಮಧುರ ನೆನಪು ಮನಸ್ಸಿಂದ ಇಂದಿಗೂ ಮರೆಯಾಗಿಲ್ಲ.
  -ಶುಭಶ್ರೀ ಭಟ್ಟ,ಬೆಂಗಳೂರು

No comments:

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...