Sunday 18 June 2017



ನನ್ನ ಮದುವೆ-ಅಜ್ಜಿ ಕನಸು

(ವಿಶ್ವವಾಣಿ ವಿವಾಹ್ ಪುರವಣಿಯಲ್ಲಿ ಪ್ರಕಟ)

   ಅದಾಗಲೇ ಮದುವೆ ನಿಕ್ಕಿಯಾಗಿತ್ತು ನನಗೆ.ಮನೆಯವರೆಲ್ಲಾ ಖುಷಿಯಾಗಿದ್ದರು,ಮನವೂ ಹತ್ತಿಯ ಹೂವಂತೆ ಹಗುರಾಗಿ ತೇಲುತ್ತಿತ್ತು.ಇನ್ನೇನು ಎರಡು ತಿಂಗಳಲ್ಲಿ ನಿಶ್ಚಿತಾರ್ಥ,ನಿಶ್ಚಿತಾರ್ಥದ ಮದರಂಗಿ ರಂಗು ಮಾಸುವುದರೊಳಗೆ ಮದುವೆ ಎಂದು ಮಾತಾಗಿತ್ತು.ಇವೆಲ್ಲಾ ಗಡಿಬಿಡಿ ಸಂಭ್ರಮದ ನಡುವೆ ನನಗದೆನೋ ಖಾಲಿ ಖಾಲಿ ಅನುಭವ. ಹೇಳಿಕೊಳ್ಳಲಾಗದ್ದು,ಹಲುಬುವಂತಾಗಿದ್ದು ಕಾರಣವಿಲ್ಲದೆ.ಇಷ್ಟುದಿನ ಒಟ್ಟಿಗಿದ್ದ ಗೆಳತಿಯರನ್ನು ಬಿಟ್ಟಗಲುವ ನೋವಾ?ನನ್ನ ಮನೆ ಇನ್ಮುಂದೆ ತವರುಮನೆಯೆನಿಸಿಕೊಳ್ಳುತ್ತದೆ ಎಂಬ ಬೇಸರವಾ?ಅಥವಾ ಹೊಸಜೀವನದ ಶುರುವಲ್ಲಾಗುವ ಗುಡುಗುಡಿಕೆಯಾ ಗೊತ್ತಾಗಲಿಲ್ಲ.
   ಬೆಂಗಳೂರಿನ ಬೀದಿ-ಬೀದಿಯಲ್ಲಿ ಕುಳಿತಿರುವ 'ಮೆಹಂದಿ ಭಯ್ಯಾ'ಗಳಲ್ಲೊಬ್ಬರ ಬಳಿ ಬರೀ ೩೦೦ರೂಪಾಯಿ (ಊರಲ್ಲಾದರೇ ಸಾವಿರದ ದರ) ಕೊಟ್ಟು,ತುಂಬಾ ಚೆಂದದ ಕುಣಿಯುವ ನವಿಲನ್ನೆಲ್ಲಾ ಬಿಡಿಸಿಕೊಂಡು ಮನೆಗೆ ಹೊರಟಾಯ್ತು.ಎಡಗೈಗೆ ಉಂಗುರ ಹಾಕುವವರೆಂಬ ಸಿನಿಮೀಯ ನಂಬಿಕೆಯಿಂದ,ಎಡಗೈ ಬಲಗೈಗಿಂತ ಚೆಂದವಾಗಿ ಮಿಂಚುತ್ತಿತ್ತು.ಹೀಗೆ ಮದರಂಗಿ ಬಳಿದುಕೊಂಡ ನಾನು ಮಹಾರಾಣಿಯಂತೆ ಬಸ್ಸು ಹತ್ತಿ ಕುಳಿತಿದ್ದೆ.ಹೊರಲಾರದ ಚೀಲದ ಭಾರಹೊತ್ತು ಉಸ್ಸಪ್ಪಾ ಎಂದು ಪಕ್ಕದಲ್ಲಿ ಬಂದು ಕುಳಿತಳು ನನ್ನ ತಂಗಿ. ಅಷ್ಟೇನೂ ಅಲಂಕಾರ ಪ್ರಿಯಳಲ್ಲದ ಅವಳಿಗೆ,ಘಳಿಗೆಗೊಮ್ಮೆ ನನ್ನ ಒಣಗಿದ ಮದರಂಗಿಯನ್ನು ಸಕ್ಕರೆನೀರು,ನೀಲಗಿರಿ ಎಣ್ಣೆಯನ್ನು ಹತ್ತಿಯಲ್ಲಿದ್ದಿಸಿ ಮೆತ್ತಮಾಡುವುದು ಕಿರಿಕಿರಿಯಾಗಿ,ಕೊನೆಗೊಮ್ಮೆ ಸರಿಯಾಗಿ ಸಿಡುಕಿ ಮಲಗಿದಳು.ನಾನು ಮತ್ತೆ ನಕ್ಷತ್ರವ ನೋಡುತ್ತಾ ಅರ್ಥವಾಗದ ತಳಮಳದೊಂದಿಗೆ ನಿದ್ರೆಗೆ ಜಾರಿದೆ.
  'ಬಂದ್ಯಾ ಮಗಾ! ಬಾ..ಈ ಸಲ ಬಗೇಲಿ ಸುಧಾರ್ಸಿದ್ದೆ ಹ್ಮಾಂ'ಎನ್ನುವ ಅಮ್ಮನ ಕಕ್ಕುಲಾತಿ,'ಅಪ್ಪೂ ಮಗಾ ನಿದ್ದೆ ಬಂತಾ ಸಮಾವ'ಎಂಬ ಅಪ್ಪನ ಅಪ್ಯಾಯತೆಯ ನಡುವೆಯೂ ಕ್ಷಣಮಾತ್ರ ಮನ ಖಾಲಿಯೆನಿಸಿತ್ತು.ಸೆಗಣಿ ಹಾಕಿ ಸಾರಿಸಿ ಚುಕ್ಕೆ ರಂಗೋಲಿಯೆಂಬ ಮದರಂಗಿ ಹಚ್ಚಿಕೊಂಡು,ಮಾವಿನ ಟುಮಕೆಯ ಬೈತಲೆ ಬೊಟ್ಟಿಟ್ಟು,ತೆಂಗಿನಗರಿಯ ಚಪ್ಪರವೆಂಬ ದಪ್ಪಸೆರಗು,ಸುಣ್ಣ-ಬಣ್ಣವೆಂಬ ಕ್ರೀಮ್ ಬಳಿದುಕೊಂಡ ಗೋಡೆಯ ಮುಖ,ಹೀಗೆ ಒಟ್ಟಿನಲ್ಲಿ ಮನೆಯೂ ಮದುಮಗಳಂತೆ ಸಿಂಗಾರಗೊಂಡಿತ್ತು,ನನಗಿಂತಲೂ ಭರ್ಜರಿಯಾಗಿ. ಆದರೂ ಆ ಮನೆಯ ನಗುವಿನ ಹಿಂದೆ ಯಾವುದೋ ಅಸ್ಪಷ್ಟ ವಿಷಾದದಲೆ ತೇಲಿಬಂದು ಮನ ಪಿಚ್ಚೆಂದಿತು.
   ಪುರುಸೊತ್ತಿಲ್ಲದೇ ಬೆಳಿಗ್ಗೆ ಬೇಗನೆ ಎಬ್ಬಿಸಿದ ಅಮ್ಮನನ್ನು ಗೊಣಗಿಕೊಳ್ಳುತ್ತಾ ಎದ್ದು ತಯಾರಾಗತೊಡಗಿದೆವು.ಬೆಳಿಗ್ಗೆ ಪೂಜೆಗೆ ಸಾಧಾರಣ ಸೀರೆಯುಟ್ಟು ದೇವರಿಗೆ ನಮಸ್ಕರಿಸಿ,ಅಪ್ಪ-ಅಮ್ಮನಿಗೆ ಕೈಮುಗಿಯಲು ಮುಂದಾದಾಗ ಅಮ್ಮ ಕೇಳಿದರು 'ಅಜ್ಜಿಗೆ ಕೈಮುಗಿ ಮೊದಲು'. ಈ ಮಾತಿಗಾಗೇ ಮನ ಕಾಯುತ್ತಿದ್ದ ಮನಕ್ಕೆ ಬರಗಾಲದಲ್ಲಿ ಮಳೆಹನಿ ಸಿಂಪಡಿಸಿದಂತಾಯ್ತು,ಇಷ್ಟುದಿನ ಕಾಡುತ್ತಿದ್ದ-ಕೊರೆಯುತ್ತಿದ್ದ ಭಾವಕ್ಕೆಲ್ಲಾ ಅರ್ಥ ಸಿಕ್ಕಿಬಿಟ್ಟಿತ್ತು. 'ನಿನ್ನ ಮದ್ವೆ ನೋಡಗಿದ್ದೆ ಸಾಯ್ತನಿಲ್ಲೆ' ಎನ್ನುತ್ತಲೇ ಇರುತ್ತಿದ್ದ ಅಜ್ಜಿ,ನನಗೆ ವಿಷಯವೂ ತಿಳಿಸದೇ ಬಾರದ ಲೋಕಕ್ಕೆ ತೆರಳಿದ್ದರು.ಕಣ್ತುಂಬಿಕೊಂಡಂತಾಗಿ ಅಜ್ಜಿಯ ಪಟಕ್ಕೆ ಅಡ್ಡಬಿದ್ದವಳಿಗೆ,ಅಜ್ಜಿಯ ಒರಟು ಕೈ ಸ್ಪರ್ಶ ಆಶೀರ್ವಾದ ಮಾಡಿದಂತಾಗಿ ಮೇಲೆದ್ದೆ,ಅವಳಿರಲಿಲ್ಲ.'ನನ್ನ ಮದ್ವೇ...ಆಶಿರ್ವಾದ ಮಾಡೇ ಪ್ಲೀಸೇ'ಎನ್ನುತ್ತಾ ಅರಿವಿಲ್ಲದೆ ಜೋರಾಗಿ ಬಿಕ್ಕಿದ್ದೆ. ಇದನ್ನು ಕಂಡು ಮನೆಯವರೆಲ್ಲಾ ಕಣ್ತುಂಬಿಕೊಂಡಾಗ,ಅವರಿಗೆ ನೋವಾಗಬಾರದೆಂದು ಭಾವನೆಗಳನ್ನು ಕಟ್ಟಿಟ್ಟೆ.
  ನನ್ನವರ ಅಜ್ಜಿಗೆ ಬರಲಾಗುವುದಿಲ್ಲ,ತುಂಬಾ ದೂರವೆಂಬ ಕಾರಣಕ್ಕೆ ಮದುವೆ ನನ್ನವರ ಊರು ಶೃಂಗೇರಿಯಲ್ಲೇ ಎಂದು ನಿಶ್ಚಿಯವಾಯ್ತು.ಮೊದಲ ಮಗಳ ಮದುವೆಯನ್ನು ಸಹಜವಾಗಿ ತಮ್ಮ ಊರಲ್ಲೇ ಮಾಡಬೇಕೆಂಬ ಆಸೆಹೊತ್ತಿದ್ದ ಅಪ್ಪ-ಅಮ್ಮನಿಗೆ ನಿರಾಶೆಯಾದರೂ,'ಅಜ್ಜಿ'ಯ ಕಾರಣಕ್ಕೆ 'ಹ್ಮೂಂ'ಗುಟ್ಟಿದರು. ನಾನಾಗಲೇ ನನ್ನವರ ಅಜ್ಜಿಯಲ್ಲಿ,ನನ್ನಜ್ಜಿಯನ್ನು ಕಾಣತೊಡಗಿದ್ದೆ.'ಚೆಂದ್ ಸೊಸೆ ಸಿಕ್ಕಿದಾಳ್ ಕಣೇ.ಸಮಾ ಚಿನ್ನಾ ಹಾಕು ಆಯ್ತಾ' ಎಂದು ನನ್ನತ್ತೆಗೆ ಅವರು ಹೇಳುವ ರೀತಿ,ಅವರ ಬೊಚ್ಚುಬಾಯಿ ನಗು,ಆ ಒರಟುಕೈಯಿ ಪ್ರೀತಿ ಸ್ಪರ್ಶ ಎಲ್ಲವೂ ಥೇಟ್ ನನ್ನಜ್ಜಿಯಂತೇ ಅನಿಸಿಬಿಟ್ಟಿತ್ತು.
  ಮದುವೆಯ ಹಿಂದಿನ ದಿನ ನಾಂದಿಯಲ್ಲಿ ಗೂನು ಬೆನ್ನು ಬಾಗಿಸಿಕೊಂಡು ಬಂದು ಕಲಶ ಸ್ನಾನ ಮಾಡಿಸಿದ ಸಣ್ಣಜ್ಜಿ ಕಲ್ಯಾಣಿ,ನನ್ನಜ್ಜಿಯನ್ನು ನೆನಪಿಸಿ ಕಣ್ತೇವೆಗೊಳಿಸಿದ್ದರು.'ಅಬ್ಬೆ ಇದ್ದಿದ್ರೆ ಎಷ್ಟು ಖುಷಿಪಟ್ಕತ್ತಿತ್ತೇನಾ' ನೆರೆದ ಹಿರಿಯರ ಮಾತುಗಳು ಅಜ್ಜಿಯನ್ನು ಮತ್ತೆ ಮತ್ತೆ ನೆನಪಿಸಿದವು.ನನ್ನ ಮದುವೆ ನನ್ನಜ್ಜಿಯ ಕನಸಾಗಿತ್ತು.'ಚೆಂದ ಗಿಣಿ ಸಾಕಿದಾಂಗೇ ಸಾಕಿದ ಕೂಸ್ನಾ,ಛೋಲೋ ಮನೆಗ್ ಕೊಡವು' ಎಂಬುದು ಅವರ ನಿತ್ಯವಾಕ್ಯವಾಗಿತ್ತು.ಹುಷಾರಿಲ್ಲದೇ ಮಲಗಿದ್ದಾಗ ಅವರನ್ನು ನೋಡಲು ಬರುವವರಲ್ಲೆಲ್ಲಾ 'ನಾ ಇಷ್ಟ್ ಬೇಗ್ ಸಾಯ್ವವಲ್ದಾ.ನಾ ಶುಭನ್ ಮದ್ವೆ ನೋಡ್ಕಂಡೇ ಹೋಪವ' ಎಂಬ ಪದ್ಯವಾಗುತ್ತಿತ್ತು.ಇದನ್ನೆಲ್ಲಾ ಕೇಳಿಕೊಂಡೆ ಬೆಳೆದ ನನಗೆ,ಅಜ್ಜಿಗೆ ಅರುಳು-ಮರುಳಾದಾಗಲೂ,ಅವರು ಹಾಸಿಗೆ ಹಿಡಿದಾಗಲೂ,ಅವರ ಜೀವಕ್ಕೇನೂ ಅಪಾಯವಾಗೊಲ್ಲಾ ಎಂಬ ಅಪಾರ ನಂಬಿಕೆಯಿತ್ತು. ನನ್ನ ಮದುವೆಯ ಕನಸು ಹೆಣೆಯುತ್ತಾ,ಕನಸಿನ ಬುಟ್ಟಿಯನ್ನು ನನ್ನ ಕೈಲಿ ಕೊಟ್ಟು,ಹೇಳದೇ ಮರೆಯಾದರು.ಇವತ್ತು ಅವರ ಕನಸು ನನಸಾಗಿದೆ, ಆದರೆ ಅದನ್ನು ನೋಡಲು ಮಾತ್ರ ಅವರಿಲ್ಲ.
  ಮದುವೆಯ ಶಾಸ್ತ್ರವೆಲ್ಲಾ ಮುಗಿಸಿ ನನ್ನವರ ಅಜ್ಜಿಯ ಕಾಲಿಗೆ ನಮಸ್ಕರಿಸುವಾಗ ಚೂರು ತಡವಾಗೇ ಮೇಲೆದ್ದಿದ್ದೆ,ಬರುತ್ತಿರುವ ಕಣ್ಣೀರನ್ನು ಹತ್ತಿಕ್ಕುವ ನೆಪದಲ್ಲಿ. ನನ್ನವರು ಅರುಂಧತಿ ನಕ್ಷತ್ರವ ತೋರಿಸಿದಾಗ,ನನ್ನಜ್ಜಿಯೆಲ್ಲಾದರೂ ಕಾಣುತ್ತಾರೆಂದು ಅತ್ತಿತ್ತ ಕಣ್ಣಾಡಿಸಿದ್ದೆ. ನನ್ನ ಕಷ್ಟ ನೋಡಲಾಗದೇ ನನ್ನವರು ಹೇಳಿದ್ದಿಷ್ಟೇ 'ನೀನು ಚೆನ್ನಾಗಿ ನಗ್ತಾನಗ್ತಾ ಇದ್ರೇನೆ ನಿಮ್ಮಜ್ಜಿಗೆ ಖುಷಿಯಾಗತ್ತೆ.ನಮ್ಮ ಮದ್ವೆನಾ ಅವ್ರು ಅಲ್ಲಿಂದನೇ ನೋಡಿ,ಆಶೀರ್ವಾದ ಮಾಡಿದ್ದಾರೆ'ಅಂತೆಲ್ಲಾ ಮಗುವಿಂತೆ ಸಮಾಧಾನಿಸಿದಾಗ ಸ್ವಲ್ಪ ನಿರಾಳಗೊಂಡೆ.ಈಗ ಮದುವೆಯಾಗಿ ಎರಡೂವರೆ ವರುಷವಾದರೂ,ಅಜ್ಜಿ ನನ್ನ ಮದುವೆ ನೋಡಿಲ್ಲ ಎಂಬ ಕೊರಗು ಪೂರ್ಣವಾಗಿ ನಿಂತಿಲ್ಲ.ಯಾವುದೇ ಅಜ್ಜಿಯನು ಕಂಡರೂ,ಅವರ ಕಂಗಳಲಿ ತಡಕಾಡುತ್ತಿರುತ್ತೆನೆ ನನ್ನಜ್ಜಿ ಬಿಂಬವ,ನಾನು ಮದುವೆಯಾದುದನ್ನು ನೋಡುತ್ತಾಳೆಂಬ ಆಸೆಯಿಂದ.
-ಶುಭಶ್ರೀ ಭಟ್ಟ,ಬೆಂಗಳೂರು

No comments:

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...