Wednesday, 19 July 2017

ಬೊಮ್ಮಿಮಾಸ್ತಿಯ ಗಾಳಿಮದ್ದು


 ಬೊಮ್ಮಿಮಾಸ್ತಿಯ ಗಾಳಿಮದ್ದು 
    ಅವನೊಬ್ಬ ಆರೂವರೆ-ಎಳಡಿ ಎತ್ತರದ ಕಟ್ಟುಮಸ್ತಾಗಿ ಕಾಣಿಸುವ ಆಳು,ವಯಸ್ಸಾದ್ದರಿಂದ ಜೋತುಬಿದ್ದ ದೇಹ,ಹೆಸರು ಬೊಮ್ಮಿಮಾಸ್ತಿ.'ಹಾಲಕ್ಕಿ ಗೌಡ' ಎಂಬ ವಿಶಿಷ್ಟ ಸಮುದಾಯದವ.ಊರಲ್ಲಿರುವ ಎಮ್ಮೆ-ದನಗಳನ್ನು ಗೋರೆಗುಡ್ಡೆಯ ಹುಲ್ಲಿನ ಬಯಲಿಗೆ ಹೊಡೆದುಕೊಂಡು ಹೋಗಿ,ಸಂಜೆಯೊಳಗೆ ಊರಿಗೆ ಬರುವ ದನಗಾಹಿ.ಊರಿನ ಬ್ರಾಹ್ಮಣ ಹೆಂಗಸರು ಕೊಡುವ ಚಾಕಣ್ಣು,ದಪ್ಪ್ ದೋಸೆಯೇ ಬೆಳಗ್ಗಿನ ತಿಂಡಿ.ಸಂಜೆ ಬಂದು ಗಂಜಿ ಕುಡಿದು ಹೊರಟನೆಂದರೆ ಅದು ಜೂಜಿಗೆಂದೇ ಅರ್ಥ.ಅವನ ಜೂಜಿನ ಸಂಖ್ಯೆಯನ್ನು ನನ್ನ ತಂಗಿಯೇ ಹೇಳಬೇಕು,ಕಾರಣವಿಷ್ಟೇ ಅವಳು ತಮಾಷೆಗೆ ಹೇಳಿದ ಸಂಖ್ಯೆ ಅವನಿಗೆ ಕೆಲವು ಸಲ ಅದೃಷ್ಟ ತಂದಿಟ್ಟಿತ್ತು. ಜೂಜಲ್ಲಿ ಗೆದ್ದ ಪುಡಿಗಾಸಲ್ಲಿ ಒಂದು ಕೊಟ್ಟೆ ಸಾರಾಯಿ ಪ್ಯಾಕೆಟ್ ಜೊತೆ ಒಂದೆರಡು ಬಂಗಡೆ ಮೀನು ಹಿಡಿದು ಮನೆಗೆ ಬರುತ್ತಿದ್ದ.ಅವನು ಬರುವಾಗ ದಿನವೂ ಅಡ್ಡಗಟ್ಟುವ ನಾವು, "ಹೊಳೆಬಾಳೆಕಾಯಿ(ಮೀನು) ತಂದೀನ್ರಾ,ಇದ್ನೆಲ್ಲಾ ಹೈಂಗ್ರು(ಹವ್ಯಕರು) ಕಾಂಬುಕಾಗ" ಎಂದು ಗೋಗರೆದರೂ ಅವನು ಮೀನು ತೋರಿಸುವವರೆಗೆ ಬಿಡುತ್ತಿರಲಿಲ್ಲ.ರೇಷನ್ ಅಕ್ಕಿಯ ಗಂಜಿಯ ಅನ್ನ ಜೊತೆಗೆ ಮೀನ್ ಸಾರು ತಿಂದು,ಕೊಟ್ಟೆ ಸಾರಾಯಿ ಕುಡಿದು ಮಲಗಿದರೆ ಬೆಳಗಿನ ತನಕ ನಿರ್ಜೀವ ಅವ.
      ದೈತ್ಯದೇಹಿ,ಬ್ರಹ್ಮಚಾರಿ,ಚಿಕ್ಕಮಕ್ಕಳ ಗುಮ್ಮ,ದನ ಕಾಯುವವ,ಮೀನು ತೋರಿಸುವವ, ಜೂಜಾಡುವವ, ನಿರುಪದ್ರವಿ ಹೀಗೆ ಹತ್ತು ಹಲವು ಬಿರುದುಗಳನ್ನೊಳಗೊಂಡ ಬೊಮ್ಮಿಮಾಸ್ತಿಯಲ್ಲಿನ ಮತ್ತೊಂದು ಮುಖ ನಾಟಿವೈದ್ಯನ ಮುಖ ಪರಿಚಯವಾದ ಸಂದರ್ಭ ಮಾತ್ರ ಬಲು ವಿಚಿತ್ರವಾಗಿತ್ತು. ಅದೊಂದು ದಿನ ಎಂದಿನಂತೆ ಬೆಳಿಗ್ಗೆ ನಸುಕಿನಲ್ಲೇ ಎದ್ದ ಕೆಲಸದ ಮಾಸ್ತಿಯ ಜೊತೆ ಅವರಮನೆ ಕೋಳಿಗೂ ಬೆಳಗಾಗಿತ್ತು.ಬಾಗಿಲು ತೊಳೆದು,ರಂಗೋಲಿಯಿಟ್ಟು ಕೊಟ್ಟಿಗೆಯಲ್ಲಿನ ಸರಸ್ವತಿಗೆ ಹುಲ್ಲುಹಾಕಿ ಮನೆಗೆ ಬಂದವಳೇ ಕುತ್ತಿಗೆ ನೋವು ಬೆನ್ನು ನೋವೆಂದು ಮಲಗಿದಳು.ವಯಸ್ಸಾದ ಕಾರಣಕ್ಕೆ ಬಂದ ಕಸುವಿನಿಂದೆಂದು ಕಷಾಯ ಕೊಟ್ಟರು,ಅಪ್ಪ ಕುಮಟೆಯಿಂದ ಔಷಧಿ ತಂದುಕೊಟ್ಟರು.ವಾರವೆರಡು ಕಳೆದರೂ ಬೆನ್ನುನೋವು ಕಡಿಮೆಯಾಗದಾಗ ನನ್ನಜ್ಜಿಗೇನೋ ಸಂಶಯ. ಅವಳ ಬದಲಿಗೆ ಕೆಲಸಕ್ಕೆ ಬಂದ ಅವಳ ಮಗಳು ತಿಮ್ಮಕ್ಕನನ್ನು "ಅಲ್ವೇ ತಿಮ್ಮಕ್ಕಾ ಯಾವ್ ಔಷುಧಿಗೂ ನಿಮ್ಮವ್ವಿಗೆ ಕಡ್ಮೆ ಆಗ್ಲಿಲ್ಲಾಂದ್ರೇ ಗಾಳಿ-ಗೀಳಿ ಹೋಡದ್ಯಾ ಹೇಳಿ' ಎಂದು ಅವಳ ತಲೆಗೂ ಹುಳಬಿಟ್ಟರು.ಮೊದಲೇ ಮೂಢನಂಬಿಕೆಯನ್ನು ಅತಿಯಾಗೆಂಬಂತೆ ನಂಬುವ ಜನ.ಮುಂಚೆ ಹಳ್ಳಿಯಲ್ಲಿ 'ಗಾಳಿದೆವ್ವ' ಅಂತ ಇರುತ್ತಿತ್ತಂತೆ (ಈಗಿಲ್ಲಾ ಅಂತ ಕಾಣಿಸುತ್ತೆ,ಬೇಜಾರಾಗಿ ಊರುಬಿಟ್ಟಿರಬೇಕು),ಅದು ಗಾಳಿಯಲ್ಲೇ ಎದೆ-ಕುತ್ತಿಗೆ-ಬೆನ್ನು-ಮುಖಕ್ಕೆಲ್ಲಾ 'ಗಾಳಿಗುದ್ದು' ಕೊಟ್ಟು ಹೋಗುತ್ತಿತ್ತಂತೆ. ಅದರ ಬೆರಳು ಮೂಡುತ್ತಿದ್ದಷ್ಟು ಕಾಲ ಗಾಳಿ ಹೊಡೆಸಿಕೊಂಡವರು ಬದುಕುತ್ತಾರೆಂದು ಹಳ್ಳಿಗರ ನಂಬಿಕೆಯಾಗಿತ್ತು.ಇದರಂತೆ ನಮ್ಮಮಾಸ್ತಿಗೂ ಮೂರು ಬೆರಳು ಮೂಡಿತ್ತಂತೆ.ಅಂದರೆ ಅದರ ಪ್ರಕಾರ ಅವಳು ಬದುಕುವುದು ಮೂರೇ ತಿಂಗಳು ಎಂದರ್ಥ. 
        ಆಗ ನಾವಿನ್ನು ತುಂಬಾ ಚಿಕ್ಕವರು,ಇದೆಲ್ಲಾ ಮೂಢನಂಬಿಕೆಯೆಂದು ಅರ್ಥವಾಗದ ವಯಸ್ಸು.ಮಾಸ್ತಿಗಾದ ಅವಸ್ಥೆಗೆ ಮರಗುತ್ತಿದ್ದೆ.ಅಮ್ಮ ಕೊಟ್ಟು ಕಳುಹಿಸುತ್ತಿದ್ದ ಚಾಕಣ್ಣು-ದೋಸೆಯನ್ನು ಕೊಟ್ಟುಬರುವ ನೆಪಮಾಡಿ ಅವರ ಮನೆಯಲ್ಲೇ ಗಂಟೆಗಟ್ಟಲೇ ಕುಳಿತಿರುತ್ತಿದ್ದೆ.ಆವಾಗಲೇ ಒಂದು ದಿನ ಬೊಮ್ಮಿಮಾಸ್ತಿ ಅವರ ಮನೆಗೆ ಬಂದ,ಬರುತ್ತಲೇ ನನಗೆ ಮನೆಗೆ ಹೋಗೆಂದು ಹೆದರಿಸಿದ,ಸುತ್ತಲಿದ್ದ ಮಕ್ಕಳನ್ನೂ ಓಡಿಸಿದ.ಆದರೂ ನಾವೆಲ್ಲಾ ಮನೆಯ ಜಗುಲಿಯ ಹಿಂದಿನ ಕಟ್ಟೆಯ ಹಿಂದಡಗಿ ಅವನ ಮಾತನ್ನು ಕೇಳಿಸಿಕೊಳ್ಳುತ್ತಿದ್ದೆವು.'ನೋಡಾ!ನಾ ಔಷುಂದಿ ತಕಬತ್ತೆ.ಆದ್ರೆ ಔಷುಂದಿ ತರುಕಾರೆ ಯಾವ್ ಹೆಂಗ್ಸ್ರು ನನ್ನ್ ಮಾತಾಡ್ಸುಕಾಗ,ಯಾವ್ ಬಳೆ-ಗೆಜ್ಜೆ ಶಬ್ಧೂ ಕೇಳುಕಾಗ' ಎಂದು ಮಾಸ್ತಿ ಮನೆಯವರಿಗೆ ಹೇಳುತ್ತಿದ್ದ.ನಮಗೆಲ್ಲಾ ಕೆಟ್ಟ ಕುತೂಹಲ,ಅವನ ಹಿಂಬಾಲಿಸಲು ಹೋಗಿ ಕುಪ್ಪಜ್ಜಿ ಕೈಯಲ್ಲಿ ಬೈಸಿಕೊಂಡು ವಾಪಸ್ಸಾದೆವು.ಮನೆಗೆ ಬಂದು ಅಜ್ಜಿಯ ಬಳಿ ಗಾಳಿದೆವ್ವದ ಔಷಧಿಯೆಲ್ಲಿ ಸಿಗುತ್ತದೆಂದು ಕೇಳಿದೆ.ಅದಕ್ಕವರು 'ಅದು ಎರಡ್ ಬೆಟ್ಟ ದಾಟಿದ್ಮೇಲೆ ಇಪ್ಪಾ ಕಾಡಲ್ಲಿ ಸಿಕ್ತು.ಅದ್ನಾ ಹುಟ್ಟಾ ಬ್ರಹ್ಮಚಾರಿಯಕ್ಕೋ ಮಾತ್ರ ತರವು.ನಮ್ಮೂರ ಸುತ್ತಮುತ್ತಾ ಅದು ಗುತ್ತಿಪ್ಪುದು ಬೊಮ್ಮಿಮಾಸ್ತಿಗಷ್ಟೇ' ಎಂದರು.ಅದರ ನಿಜವಾದ ಅರ್ಥ ಆವಾಗ ಅರಿವಾಗದಿದ್ದರೂ,ಬೊಮ್ಮಿಮಾಸ್ತಿ ತರುವ ಔಷಧಿಯಿಂದ ನನ್ನ ಮಾಸ್ತಿಗೆ ಗುಣವಾಗುತ್ತದೆ ಎಂಬ ವಿಚಾರವೇ ಖುಷಿ ಕೊಟ್ಟಿತ್ತು.
   ಶುಕ್ರವಾರದ ನಸುಕಿನಲ್ಲೇ ಎದ್ದು ಬೆಟ್ಟಕ್ಕೆ ಹೋದ ಬೊಮ್ಮಿಮಾಸ್ತಿ ಬರುವುದರೊಳಗೆ ನಮಗೆಲ್ಲಾ ಹತ್ತಿರ ನುಸುಳದಂತೆ ಎಚ್ಚರಿಸಿಯಾಗಿತ್ತು. ಅವನು ಔಷಧಿ ತೆಗೆದುಕೊಂಡು ಬರುವ ದಾರಿಯಲ್ಲೆಲ್ಲಾ ಗೆಜ್ಜೆ-ಬಳೆಯ ಶಬ್ಧಗಳೇನೂ ಕೇಳಬಾರದಂತೆ,ಯಾವ ಹೆಂಗಸರೂ ಅವನನ್ನು ಮಾತನಾಡಿಸಬಾರದಂತೆ ಹೀಗೆ ನಿಯಮಗಳು ಹತ್ತಲವಿದ್ದವು.ಆದರೂ ಕುತೂಹಲ ತಡೆಯದೇ ನನ್ನದೊಂದು ಕಪಿಸೈನ್ಯ ತೋಟದಲ್ಲಿನ ಬಿಂಬ್ಲುಮರದಲ್ಲಿ ಬೀಡು ಬಿಟ್ಟಿತ್ತು,ಬೆಳಗ್ಗಿನ ತಿಂಡಿಯನ್ನೂ ತಿನ್ನದೇ.ಕಾದು ಕಾದು ಸುಸ್ತಾಗಿ ಇನ್ನೇನು ಮರವಿಳಿದು ಮನೆಗೆ ಹೊರಡಬೇಕು ಬೊಮ್ಮಿಮಾಸ್ತಿ,ತೆಳ್ಳಗಿನ ಕಚ್ಚೆಪಂಚೆಯುಟ್ಟು,ತಲೆಗೊಂದು ಟವೆಲ್ ಸುತ್ತಿ,ಕೈಯಲ್ಲೊಂದು ಬಿಳಿವಸ್ತ್ರದ ತುಂಡು ಹಿಡಿದು.ಮುಂದಾಗುವ ಅದ್ಭುತವನ್ನು ಕಾಣಲಿಕ್ಕೆ ಉತ್ಸುಕರಾಗಿ ಕುಳಿತೆವು ನಾವಲ್ಲೇ.
   ಬೊಮ್ಮಿಮಾಸ್ತಿ ಬಂದವನೇ ಮಾಸ್ತಿಯ ಮಗನಿಗೇನೋ ಸನ್ನೆ ಮಾಡಿದ.ಅವನು ತಂಬಿಗೆ ನೀರು ಜೊತೆಗೆ ಸೊಪ್ಪು ಅರೆಯುವ ಸಣ್ಣ ಕಲ್ಲು ತಂದಿಟ್ಟು ಬದಿಸರಿದ. ಮನೆಯೆಲ್ಲಾ ನಿಶ್ಶಬ್ಧ,ಉಸಿರುಬಿಗಿ ಹಿಡಿದು ನಿಂತಂತಿದ್ದರೆಲ್ಲಾ. ಬೊಮ್ಮಿ ಮಾಸ್ತಿ ಸೊಪ್ಪನ್ನು ಅರೆದು ಬೆನ್ನಿಗೆಲ್ಲಾ ಹಚ್ಚಿದ,ನೀರನ್ನು ಕುಡಿಸಿದ,ಮರುಮಾತಾಡದೇ ಅಲ್ಲಿಂದ ತೆರಳಿದ. ಮತ್ತೇನೋ ಅದ್ಭುತವಾಗುವುದೆಂದು ಕುಳಿತಿದ್ದ ನಮಗೆ ನಿರಾಸೆಯಾಗಿತ್ತು.ಆದರೂ ಅದಾಗಿ ವಾರದೊಳಗೆ ಮಾಸ್ತಿಗೆ ಸಂಪೂರ್ಣ ಗುಣವಾಗಿದ್ದು ಮಾತ್ರ ನಂಬಲಸಾಧ್ಯವಾದ ವಿಷಯವಾಗಿತ್ತು.ಇವತ್ತಿಗೂ ಏನೂ ಹೇಗೆ ಎಂಬ ಪ್ರಶ್ನೆ ಹಾಗೇ ಉಳಿದಿದೆ.ಉತ್ತರ ಹೇಳಲು ಬೊಮ್ಮಿಮಾಸ್ತಿಯೂ ಇಲ್ಲ,ಮಾಸ್ತಿಯೂ ಇಲ್ಲ,ನನ್ನಜ್ಜಿಯೂ ಇಲ್ಲ.ಆದರೆ ನೆನಪು ಮಾತ್ರ ಹಾಗೇ ಹಸುರಾಗಿದೆ.
-ಶುಭಶ್ರೀ ಭಟ್ಟ

No comments:

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...