Wednesday 15 February 2017

ಮೊಗ್ಗಿನ ಮನಸು



ಕುಂಟಾಬಿಲ್ಲೆ ಆಡುತಿರಲು
ಬಿಂಕದಿಂದ ಕುಣಿಯುತಿರಲು
ಜಿಂಕೆಯಂತೆ ನಲಿಯುತಿರಲು
ಚಿಮ್ಮಿತಂದು ನೆತ್ತರು||
ಕಿಬ್ಬೊಟ್ಟೆ ಕಿರಿಚುತಿರಲು
ಸಂಧಿಗೊಂದು ಸೋರುತಿರಲು
ಕುಳಿತಿರುವ ಗೃಹಬಂಧನವಿರಲು
ಮನದೀ ಬರೀ ಕತ್ತಲು||
ದಿನವು ನಾಕು ಮುಗಿಯುತಿರಲು
ಗಂಧದೆಣ್ಣೆಯ ಅಭ್ಯಂಜನವಿರಲು
ಸೊಂಟಪಟ್ಟಿ ಕೆನ್ನೆಗೊಂಚಲು
ಮೂಡಿತಾಗ ನಗುವ ಕದಿರು||
ತಲೆತುಂಬಾ ಮೊಗ್ಗಿನ ಜಡೆಯಿರಲು
ಮೈತುಂಬಾ ರೇಶಿಮೆ ಸೆರಗಿರಲು
ಬಾಲೆಯಲ್ಲಿ ಯವ್ವನವುಕ್ಕಲು
ಕುಣಿಯಿತೊಂದು ಹೆಣ್ನವಿಲು||
ಬಾಲ್ಯ ಕಳೆದು ಪ್ರಾಯವುಕ್ಕಿ
ಆಟೋಟವಿಲ್ಲದೇ ಮನವು ಬಿಕ್ಕಿ
ಬಾಲೆಯೆದೆಯು ಕಕ್ಕಾಬಿಕ್ಕಿ
ಮುಗುದೆ ಮರಗುತ್ತಿದ್ದಳು||
ಚೆಂದವಾಗಿ ನೆರಿಗೆಯಿಕ್ಕಿ
ಒಡಲತುಂಬಾ ಬೆಳ್ಳಿ ಚುಕ್ಕಿ
ಜಡೆಯಲ್ಲಿ ಹೂವ ಸಿಕ್ಕಿ
ಕನಸಕಾಣ ತೊಡಗಿದ್ದಳು
ಅವಳಿಗರಿವಿರದೆ ದೊಡ್ಡವಳಾಗಿದ್ದಳು||
 ಶುಭಶ್ರೀ ಭಟ್ಟ

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...