Sunday, 18 June 2017

ನಮಸ್ತುಲಸಿ ಕಲ್ಯಾಣಿ

(ಸತ್ವಧಾರದಲ್ಲಿ ಪ್ರಕಟವಾಗಿದೆ)

   "ಓಂ ತುಳಸೀಚ ವಿದ್ಮಹೇ
   ವಿಷ್ಣುಪ್ರಿಯಾಯ ಧಿಮಹೇ
   ತನ್ನೋ ವೃಂದಾ ಪ್ರಚೋಯದಾತ್||"
   ಈ ತುಳಸೀ ಗಾಯತ್ರಿ ಮಂತ್ರದ ಅರ್ಥ ಹೀಗಿದೆ- "ವಿಷ್ಣುವಿನ ಪ್ರೀತಿಪಾತ್ರಳಾದ ಶ್ರೀತುಳಸಿಯೇ ನಾನು ನಿನ್ನನ್ನು ಧ್ಯಾನಿಸುತ್ತೆನೆ.ಅಪರಿಮಿತವಾದ ಜ್ನಾನವನ್ನು ಕೊಟ್ಟು ನನ್ನ ಬುದ್ಧಿಯನ್ನು ಪ್ರಚೋದಿಸು". ಇದನ್ನು ನಿತ್ಯವೂ ಶುಚಿರ್ಭುತರಾಗಿ,ತುಳಸಿಕಟ್ಟೆಗೆ ಪ್ರದಕ್ಷಿಣೆ ಹಾಕುತ್ತಾ,ಶುದ್ಧಮನಸ್ಸಿನಿಂದ,ಉಚ್ಛಾರ ದೋಷವಿಲ್ಲದೇ ಪಟಿಸುವುದರಿಂದ ಶ್ರೀಮಹಾಲಕ್ಷ್ಮೀಯ ಅನುಗ್ರಹವಾಗುವುದರ ಜೊತೆಗೆ,ಉಸಿರಾಟಕ್ಕೆ ಸಂಬಂಧ ಪಟ್ಟ ತೊಂದರೆಗಳು ಕ್ರಮೇಣ ದೂರವಾಗುವವು ಎಂದು ಜೈನಗುರುಗಳೊಬ್ಬರು ನಮ್ಮ ವಿಶ್ವವಿದ್ಯಾಲಯದಲ್ಲಿ ಮಾಡಿದ ಪ್ರವಚನದಲ್ಲಿ ಪ್ರಸ್ಥಾಪಿಸಿದ್ದರು.
  ಸರ್ವರಿಂದಲೂ ಪೂಜಿಸಲ್ಪಡುವ ಈ ಹರಿಪ್ರಿಯ ತುಳಸಿಯು,ಉಳಿದೆಲ್ಲಾ ಸಸ್ಯಗಳಿಗಿಂತಲೂ ವಿಶಿಷ್ಠ ಸ್ಥಾನಮಾನವನ್ನು ಹೊಂದಿದೆ.
 "ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ
 ಯದಗ್ರೇ ಸರ್ವದೇವಾಶ್ಚ ತುಲಸೀ ತ್ಮಾಂ ನಮಾಮ್ಯಹಂ|| " ಈ ಶ್ಲೋಕದ ಮೂಲಕ ತುಳಸಿಗೆ ಸರಿಸಾಟಿಯಾದುದು ಯಾವುದೂ ಇಲ್ಲವೆಂದೆ ಹೇಳಿದ್ದಾರೆ ಹಿರಿಯರು.
ತುಳಸಿಯು 'ಹರಿಪ್ರಿಯಾ,ವಿಷ್ಣುಪ್ರಿಯಾ,ವೃಂದಾ,ದಿವ್ಯಾ,ವೈಷ್ಣವಿ,ವಿಷ್ಣುವಲ್ಲಭೆ,ಪವಿತ್ರಾ, ಭಾರತೀ,ಧಾರಿಣಿ,ಸಾವಿತ್ರಿ,ಪದ್ಮಿನಿ,ಶ್ರೀಮತಿ,ತೃಷ್ಣಾ,ಕಾಮಕ್ಷೀ' ಹೀಗೆ ಬಹುನಾಮಗಳಿಂದ ಕರೆಯಲ್ಪಡುತ್ತಾಳೆ.ಅಮೃತವನ್ನು ಪಡೆಯಲಿಕ್ಕಾಗಿ ದೇವದಾನವರು ಕ್ಷೀರಸಮುದ್ರವನ್ನು ಕಡೆಯತೊಡಗಿದ್ದರು. ದೇವಾಸುರರ ನಡುವೆ ಅಮೃತಕ್ಕಾಗಿ ಘರ್ಷಣೆಯಾಗುತ್ತಿದ್ದಾಗ ಹರಿಯ ಕೈಯಲ್ಲಿದ್ದ ಕಲಶದಲ್ಲಿ ಬಿದ್ದ ಅಮೃತಬಿಂದುವಿನಿಂದ ಹುಟ್ಟಿದವಳೇ 'ತುಳಸಿ',ಅದಕ್ಕೆ ಇವಳು ಹರಿಪ್ರಿಯಳು ಎಂಬ ಕಥೆಯೊಂದಿದೆ. ಇನ್ನು ಕೆಲವು ಮೂಲಗಳ ಪ್ರಕಾರ 'ಜಲಂಧರ(ಶಿವನ ಮೂರನೇ ಕಣ್ಣಿಂದ ಜನಿಸಿದವ)ನ ಪತ್ನಿಯಾದ ವೃಂದಾ ಅಪರಿಮಿತ ಪತಿವೃತೆಯಾಗಿ,ವಿಷ್ಣುವಿನ ಪರಮ ಭಕ್ತಳಾಗಿದ್ದಳು.ವೃಂದೆಯ ಶಕ್ತಿಯನ್ನು ದುರುಪಯೋಗಿಸುತ್ತಾ ಜಲಂಧರನು ದುರಹಂಕಾರಿಯಾದನು.ಅವನನ್ನು ಹುಡುಕುವುದು ಸಾಕ್ಷಾತ್ ಪರಶಿವನಿಗೇ ಕಷ್ಟವಾದಾಗ,ದೇವತೆಗಳೆಲ್ಲಾ ವಿಷ್ಣುವಿನ ಮೊರೆಹೊಕ್ಕರು.ವಿಷ್ಣುವು ಉಪಾಯದಿಂದ ಜಲಂಧರನ ವೇಷ ಧರಿಸಿ ವೃಂದೆಯ ಕಣ್ಮುಂದೆ ಬಂದಾಗ ತನ್ನ ಪತಿಯೆಂದೇ ತಿಳಿದು ವಿಷ್ಣುವನ್ನು ಸ್ಪರ್ಶಿಸಿದಳು.ಸ್ಪರ್ಶಮಾತ್ರದಿಂದ ತನ್ನ ಪಾತಿವೃತ್ಯದ ಶಕ್ತಿಕಳೆದುಕೊಂಡಾಗ ಅದು ಜಲಂಧರನ ಅವಸಾನಕ್ಕೆ ಕಾರಣವಾಯ್ತು.ಅದಕ್ಕೆ ತನ್ನ ಇಷ್ಟದೈವವಾದ ವಿಷ್ಣುವಿನ ಮೇಲೆ ಸಿಟ್ಟುಕೊಂಡ ತುಳಸಿಯು 'ಕಲ್ಲಾಗು' ಎಂದು ಶಪಿಸಿದಾಗ,ಅದನ್ನು ಸಂತೋಷದಿಂದಲೇ ಸ್ವೀಕರಿಸಿದ ವಿಷ್ಣುವು 'ಸಾಲಿಗ್ರಾಮ'ವೆಂಬ ಹೆಸರಿನಲ್ಲಿ ಕಲ್ಲಾದನು. ಯೋಗಾಗ್ನಿಯಲ್ಲಿ ತನ್ನನ್ನು ತಾನು ದಹಿಸಿಕೊಳ್ಳಲು ಹೊರಟ ವೃಂದೆಗೆ 'ಇನ್ನುಮುಂದೆ ನೀನು ತುಳಸಿಯೆಂಬ ಸಸ್ಯವಾಗಿ ಪ್ರಸಿದ್ಧಿ ಪಡೆಯುವೆ,ನೀನಿಲ್ಲದೇ ಮಾಡುವ ಯಾವ ಪೂಜೆಯೂ ನನಗೆ ಸಲ್ಲುವುದಿಲ್ಲ.'ಎಂದು ವರವನ್ನಿತ್ತನೆಂದು ಕಥೆಯಿದೆ.
 ಪವಿತ್ರವಾದ ತುಳಸಿಯಲ್ಲಿಯೂ ಎರಡು ವಿಧವಿದೆ.ಒಂದು ಶ್ರೀತುಳಸಿ(ರಾಮ ತುಳಸಿ),ಇನ್ನೊಂದು ಕೃಷ್ಣತುಳಸಿಯೆಂದು.ಶ್ರೀತುಳಸಿಯ ಎಲೆಗಳು ಹಸಿರಾಗಿದ್ದರೆ,ಕೃಷ್ಣತುಳಸಿಯ ಎಲೆಗಳು ಕಪ್ಪುಬಣ್ಣದಂತಿರುತ್ತದೆ.ಈ ಪೂಜ್ಯ ತುಳಸಿಯು ಸಾಲಿಗ್ರಾಮದ ಪೂಜೆಗೆ ಅತ್ಯವಶ್ಯವಾದುದ್ದು,ಜೊತೆಗೆ ಶ್ರೇಷ್ಠ ಕೂಡ. ಕಾರ್ತಿಕಮಾಸದ ಉತ್ಥಾನ ದ್ವಾದಶಿಯಂದು 'ವಿಷ್ಣುವಿಗೂ-ತುಳಸಿಗೂ' ಮದುವೆ ಮಾಡುವ ವಿಶಿಷ್ಠ ಸಂಪ್ರದಾಯ ಇನ್ನೂ ನಮ್ಮಲ್ಲಿ ಜೀವಂತವಾಗಿದೆ. ಹೆಚ್ಚಾಗಿ ಸ್ತ್ರೀಯರೇ ಆಚರಿಸುವ ಈ ಹಬ್ಬ ನಮ್ಮ ಸಂಸ್ಕೃತಿಗೊಂದು ಮೆರುಗಿಟ್ಟಂತೆ.
   ತುಳಸಿ ಕೇವಲ ಪೂಜನೀಯ ಮಾತ್ರವಲ್ಲ,ಉಪಯುಕ್ತ ಔಷದೀ ಸಸ್ಯವೂ ಹೌದು.ಮನೆಯ ಸುತ್ತಾಮುತ್ತಾ ತುಳಸಿಯಿದ್ದರೇ ಯಾವ ದುಷ್ಟಶಕ್ತಿಗೂ ಮನೆಯೊಳಗೆ ಬರಲಾಗುವುದಿಲ್ಲವಂದು ಹಿರಿಯರು ಹೇಳುವ ಮಾತು ಉತ್ಪ್ರೇಕ್ಷೆಯಂತೂ ಖಂಡಿತ ಅಲ್ಲ. ವೈಜ್ನಾನಿಕ ದೃಷ್ಥಿಕೋನದಿಂದ ನೋಡುವುದಾದರೆ ತುಳಸಿಗಾಳಿಯನ್ನು ಸೇವಿಸುವವರು ಹೆಚ್ಚುಕಾಲ ಆರೋಗ್ಯದಿಂದ ಬಾಳುತ್ತಾರೆ.ಸಸ್ಯಶಾಸ್ತ್ರದ Lumiaccae ಕುಟುಂಬಕ್ಕೆ ಸೇರಿದ ಇದನ್ನು ಆಂಗ್ಲಭಾಷೆಯಲ್ಲಿ 'Holly Basils’ ಎಂದು ಕರೆಯುತ್ತಾರೆ.
 ತುಳಸೀ ಕಟುಕಾ ತಿಕ್ತಾ
  ಹೃದ್ಯೋಷ್ಣಾ ದಾಹಪಿತ್ತಕೃತ್|
 ದೀಪನೀ ಕುಷ್ಠಕೃಚ್ಛಾಸ್ರ
 ಪಾರ್ಶ್ವರುಕ್ ಕಫವಾತಜಿತ್||
    ತುಳಸಿಯು ರುಚಿಯಲ್ಲಿ ಕಹಿ-ಖಾರದಿಂದ ಕೂಡಿದ್ದರೂ,ಅದು ಆರೋಗ್ಯಕ್ಕೆ ಅತೀ ಉಪಯೋಗಕಾರಿ.ಹೃದಯದ ಕಾಯಿಲೆಗೆ,ವಿಷಚಿಕಿತ್ಸೆಗೆ,ಜ್ವರಕ್ಕೆ, ಕುಷ್ಠರೋಗಕ್ಕೆ,ಚರ್ಮರೋಗ-ಮೂತ್ರರೋಗ ತೊಂದರೆಗೆ ತುಳಸಿಯು ತುಂಬಾ ಉಪಯುಕ್ತವಾದುದ್ದು. ಕಾಲರಾ ರೋಗ ನಿವಾರಣೆಯಲ್ಲೂ ಬಲು ಸಹಕಾರಿ.
   ಇಂತಹ ಬಹುಪಯೋಗಿ ತುಳಸಿಯನ್ನು ದೇಹಾಂತವಾದ ಮೇಲೂ ಉಪಯೋಗಿಸುತ್ತಾರೆ.ಇದರಿಂದ ವೈಕುಂಠವಾಸ ಪ್ರಾಪ್ತವಾಗುವುದೆಂದು ನಂಬಿಕೆಯಿದೆ. 'ಒಂದು ದಳ ಶ್ರೀ ತುಳಸಿ,ಒಂದು ಗಂಗೋದಕವು' ಎಂದು ದಾಸರು ಹಾಡಿ ತುಳಸಿಯ ಮಹಿಮೆಯನ್ನು ಜಗತ್ತಿಗೆ ಸಾರಿದ್ದಾರೆ. ಗಂಗಾಜಲದಷ್ಟೇ ಪವಿತ್ರವಾದುದು ಈ ತುಳಸಿ ನೀರು ಎಂದು ಇದರಿಂದ ತಿಳಿದುಬರುತ್ತದೆ.
   ಸರ್ವರಿಗೂ ತುಳಸಿಯ ಮಹತ್ವದ ಅರಿವಾಗಲಿ,ಮನೆಮನೆಯಲ್ಲಿ ತುಳಸೀ ಬನವಿರಲಿ ಎಂದು ಆಶಿಸುತ್ತಾ
 "ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೆ ಶುಭೆ
   ನಮೋ ಮೋಕ್ಷಪ್ರದೇ ದೇವಿ ನಮಸ್ಸಂಪತ್ಪ್ರಾದಾಯಿನಿ||"
-ಶುಭಶ್ರೀ ಭಟ್ಟ ಗುಡಬಳ್ಳಿ,ಬೆಂಗಳೂರು

ಕನಸು ಕಾಣಲು ಕಾಸು ಕೊಡಬೇಕಾಗಿಲ್ಲ

 ಕನಸು ಕಾಣಲು ಕಾಸು ಕೊಡಬೇಕಾಗಿಲ್ಲ

(ಜನಮಾಧ್ಯಮದಲ್ಲಿ ಪ್ರಕಟ)

       'ಅತೀ ದೊಡ್ಡ ಕನಸನ್ನು ಕಾಣುವುದು ಖಂಡಿತ ಅಪರಾಧವಲ್ಲ..ಆದರೆ ಕನಸನ್ನೇ ಕಾಣದಿರುವುದು ಮಾತ್ರ ಮಹಾಪರಾಧ' ಎನ್ನುತ್ತದೆ ಒಂದು ಸಂಶೋಧನೆ.. ಕೆಲವರು ಅಂದುಕೊಳ್ಳುತ್ತಾರೆ ಕನಸೇ ಬೇರೆ,ಗುರಿಯೇ ಬೇರೆಯೆಂದು,ಆದರದು ಸತ್ಯವಲ್ಲ.ಗುರಿ ಮತ್ತು ಕನಸು ಒಂದೇ ನಾಣ್ಯದ ಎರಡು ಮುಖಗಳಂತೆ.ಕನಸು ಸಾಕಾರವಾದರೆ ಗುರಿ ತಲುಪಿದಂತೆ,ಗುರಿ ಮುಟ್ಟಿದರೆ ಕನಸು ನನಸಾದಂತೆ.ಹಾಗೇ ನೋಡಿದರೆ ನಾವು ಕಾಣುವ ಸುಂದರ ಕನಸುಗಳೇ ಬದುಕಲ್ಲಿ ಜೀವಸೆಲೆ ಚಿಮುಕಿಸುವುದು.ಕನಸು ಕಾಣದವ ಅರ್ಧ ಸತ್ತ ಹಾಗೆ ಎಂದು ಮಾತಿದೆ.ಕಂಡ ನೂರು ಕನಸಲ್ಲಿ ಒಂದು ಕನಸು ನನಸಾದರೂ,ಆಗ ನಮಗಾಗುವ ಆತ್ಮತೃಪ್ತಿ,ಸಂತಸಕ್ಕೆ ಪಾರವಿರುವುದೇ? ಅಂದರೆ ಕನಸು ಕಾಣುತ್ತಾ,ಅದನ್ನು ಸಾಕಾರಗೊಳಿಸುವತ್ತ ಹೆಜ್ಜೆಯಿಟ್ಟರೆ,ಜೀವನದಲ್ಲಿ ಅದೇಷ್ಟು ಜೀವಂತಿಕೆ ತುಂಬಬಹುದು ಯೋಚಿಸಿ.
      ಜೀವನದಲ್ಲಿ ಕಂಡ ಕನಸೆಲ್ಲಾ ನನಸಾಗಬೇಕೆಂದಿಲ್ಲ.ಆದರೆ ಕೊನೆಪಕ್ಷ ಕನಸಿನ ಸಮೀಪವಂತೂ ಕರೆದೊಯ್ಯುವುದಂತೂ ಸತ್ಯ. ಉದಾಹರಣೆಗೆ ನೀವು 'ಆಕಾಶಕ್ಕೆ ಏಣಿ ಹಾಕಿ ಚಂದ್ರನ ಮುಟ್ಟಿ ಬರುವೆನೆಂದು' ಕನಸು ಕಾಣುವಿರೆಂದಿಟ್ಟುಕೊಳ್ಳಿ,ಚಂದ್ರಲೋಕಕ್ಕೆ ಏಣಿಯಲ್ಲಿ ತಲುಪುವ ಕನಸು ನನಸಾಗದಿದ್ದರೂ,ವಿಮಾನದಲ್ಲಿ ಚಂದ್ರ-ತಾರೆಗಳ ನಡುವೆ ಹಾಯ್ದು ಹೋಗುವ ಅವಕಾಶವಾದರೂ ಬರಬಹುದು.ಅದಕ್ಕೆ ಕನಸು ಕಾಣಿರಿ,ಕನಸಿಗೆ ಯಾವ ಇತಿಮಿತಿಯೂ ಇಲ್ಲ, ಕನಸಿಗೆ ಸುಂಕವೂ ತೆರಬೇಕಾಗಿಲ್ಲ..ಇದರರ್ಥ ಬರೀ ಕನಸು ಕಾಣುತ್ತಾ,ಮನಸ್ಸಲ್ಲೇ ಮಂಡಿಗೆ ತಿಂದರೆ ರುಚಿ ತಿಳಿಯುವುದಿಲ್ಲ. ಕನಸು ಕಾಣುತ್ತಲೇ,ಅದನ್ನು ಸಾಕಾರಗೊಳಿಸುವತ್ತ ಸ್ವಲ್ಪ ಪ್ರಯತ್ನಿಸಿ. ಆಗ ನೋಡಿ ನಿಮ್ಮ ಕನಸಿಗೆ ಅದೇಷ್ಟು ಅಗಾಧ ಶಕ್ತಿಯಿದೆಯಂದು..
   ಕಳೆದ ವರ್ಷ ನೇಮಿಚಂದ್ರರ 'ಬದುಕ ಬದಲಿಸಬಹುದು' ಎಂಬ ಪುಸ್ತಕ ಓದುತ್ತಿದ್ದೆ.ಕನಸು ಕಾಣುವುದು ಹೇಗೆ ಎಂದು ಅತ್ಯಂತ ಸರಳವಾಗಿ ವಿವರಿಸಿದ್ದಾರೆ.ಅವರೇ ಪುಸ್ತಕದಲ್ಲಿ ಬರೆದುಕೊಂಡಂತೆ ನಿಮಗೆ ಪುರಸೊತ್ತಾದಾಗ ಕನಸಿನ ಪಟ್ಟಿ ಮಾಡಿಟ್ಟುಕೊಳ್ಳಿ,ಸಾಕಾರವಾದ ಕನಸಿನ ಮುಂದೆ ಟಿಕ್ ಮಾರ್ಕ್ ಹಾಕಿಡಿ ಎಂದು.ನಾನೂ ಇದನ್ನು ಸ್ವತಃ ಪ್ರಯೋಗ ಮಾಡಿನೋಡಿದ್ದೆನೆ.ನನ್ನ ಕನಸಿನ ನೂರಾರು ಪಟ್ಟಿಯಲ್ಲಿ,ಕೆಲವೊಂದು ಈಡೇರಿದಾಗ ಆಗುವ ತೃಪ್ತಿಯಿದೆಯಲ್ಲಾ,ಅದನ್ನು ಬಹುಷಃ ಜಗತ್ತಿನ ಇನ್ಯಾವುದೇ ವಸ್ತುವೂ ಕಟ್ಟಿಕೊಡದು. ಕೆಲವೊಮ್ಮೆ ಮನಸ್ಸಿಗಾದ ಒಂದು  ಸಣ್ಣ ಕಿರಿಕಿರಿಯಿಂದಾಗಿ,ಮನ ಮುದುಡಿ ಕುಳಿತಿರುತ್ತದೆ.ಆಗ ನಿಮ್ಮ ಕನಸಿನ ಪಟ್ಟಿಯನ್ನು ತೆಗೆದುನೋಡಿ,ಕ್ಷಣದಲ್ಲಿ ಅದ್ಯಾವ ಜಾದೂ ಮಾಡಿ ನಿಮಗೆ ಆಹ್ಲಾದದ ಅನುಭವ ತಂದುಕೊಡುತ್ತದೆಯೆಂದು. 
  ಮುಪ್ಪಿನ ಷಡಕ್ಷರಿಯವರು ಬರೆದ 'ತಿರುಕನ ಕನಸು'ಪದ್ಯವನ್ನು ಬಾಲ್ಯದಿಂದಲೇ ಕೇಳಿ ಬೆಳೆದಿದ್ದೆವೆ. "ತಿರುಕನೊರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿಒರಗಿರುತ್ತಲೊಂದು ಕನಸ ಕಂಡನೆಂತೆನೆ" ಎಂದು ತಿರುಕನ ಕನಸು ಬಿಚ್ಚಿಕೊಳ್ಳುವ ಪರಿಯಿದೆಯಲ್ಲಾ,ಅದು ವರ್ಣಿಸಲಾದುದು. ಪುರದ ರಾಜ ಸತ್ತು ಅವನ ರಾಜಕುವರಿಯನ್ನು ತಾನೇ ವರಿಸಿ,ಅವಳಿಂದ ಮಕ್ಕಳನ್ನು ಪಡೆದು, ಆ ಮಕ್ಕಳ ಮದುವೆಯನ್ನೂ ಮಾಡಿ,ಧನಬಲ-ಜನಬಲದಿಂದ ಮೆರೆಯುತ್ತಿದ್ದಾಗ,ಯಾರೋ ತನ್ನ ಮುರುಕು ಧರ್ಮಶಾಲೆಗೆ ನುಗ್ಗಿದಂತೆನೆಸಿ ಅವ ಕಣ್ಣು ತೆರೆಯುವಾಗ ಕನಸು ಮುಗಿದಿರುತ್ತದೆ.ಆದರೆ ನನ್ನ ದೃಷ್ಟಿಕೋನದ ಪ್ರಕಾರ ಕನಸು ಮುಗಿದಿರಬಹುದು,ಆದರೆ ಆ ತಿರುಕನ ಕನಸನ್ನು ನನಸಾಗಿಸಲೇ ಆ ನೃಪರು ಬಂದಿರಬಹುದಲ್ಲಾ?ಕನಸನ್ನು ಸಾಕಾರಗೊಳಿಸಲೆಂದೇ ಅವ ನಿದ್ದೆಯಿಂದ ಎಚ್ಚಿತ್ತಿರಬಹುದಲ್ಲಾ?ಮುಂದಿನ ಊಹೆ ಅವರವರ ಭಾವಕ್ಕೆ-ಭಕುತಿಗೆ..
     ಜಗತ್ತಿನಲ್ಲಿ ಯಾರೂ ಕನಸು ಕಾಣುವುದಿಲ್ಲಾ ಹೇಳಿ? ಮನುಷ್ಯನಾದಿಯಾಗಿ,ಮೂಕಪ್ರಾಣಿಗಳೂ ಕನಸು ಕಾಣುತ್ತವೆ.ಮನುಷ್ಯ ಆಸ್ತಿ-ಅಂತಸ್ತು,ಆಕಾಶ-ಭೂಮಿಯೆಂದು ಕನಸು ಕಂಡರೆ, ಮುಗ್ಧ ಮೂಕಪ್ರಾಣಿಗಳು ತಮ್ಮ ಒಡೆಯ,ಮೇವು,ಆಹಾರವೆಂದು ಕನಸು ಕಾಣುತ್ತವೆ.ಕನಸು ಕಾಣುವುದು ಖಂಡಿತ ತಪ್ಪಲ್ಲ,ಆದರೆ ಒಳ್ಳೆಯ ಕನಸು ಕಾಣಿರಿ.ಒಳ್ಳೆಯ ಕನಸು ಕಾಣುವುದು ಜೀವನದಲ್ಲಿ ಧನಾತ್ಮಕ ಅಂಶವನ್ನು ವೃದ್ಧಿಸಿ,ಹೊಸಹುರುಪು ಕಟ್ಟಿಕೊಟ್ಟು,ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.ಅದೇ ಬೇರೆಯವರಿಗೆ ಕೆಟ್ಟದಾಗುವ ಮನೆಮುರುಕ ಕನಸು ಕಂಡರೆ,ಅದರಿಂದ ಋಣಾತ್ಮಕ ಅಂಶಗಳು ಹೆಚ್ಚಾಗಿ ಜೀವನ ಅಂಧಕಾರದತ್ತ ಜಾರತೊಡಗುತ್ತದೆ.ಇದನ್ನು ಯೋಚಿಸಿ ಕನಸು ಕಾಣಿರಿ.

    ಯಾರೂ ಹುಟ್ಟುತ್ತಲೇ ಯಶಸ್ಸನ್ನು ಬೆನ್ನಿಗಂಟಿಸಿಕೊಂಡು ಬರುವುದಿಲ್ಲ.ಇವತ್ತಿನ ದಿನ ಅವರು ಯಶಸ್ವಿಯಾಗಿದ್ದಾರೆ ಅಂದರೆ ಅದಕ್ಕೆ ಅವರು ಕಂಡ ಕನಸು,ಅದನ್ನು ಸಾಕಾರಗೊಳಿಸುವತ್ತ ಅವರ ಪರಿಶ್ರಮವೇ ಮುಖ್ಯ ಕಾರಣವಾಗಿರುತ್ತದೆ.ಕನಸು ಕಾಣದೇ ಇದ್ದರೆ ಮುಂದೊಂದು ದಿನ ಬದುಕು ಎಕತಾನತೆಯಿಂದ ಬರಡಾದೀತು,ಮನಸ್ಸು ಮೂಕವಾದೀತು.ಬದುಕಲ್ಲಿ ಸ್ವಾರಸ್ಯವಿರಬೇಕೆಂದರೆ, ಪ್ರಗತಿಯಿರಬೇಕೆಂದಿದ್ದರೆ,ಆತ್ಮತೃಪ್ತಿ-ಆತ್ಮವಿಶ್ವಾಸದಿಂದ ಕೂಡಿರಬೇಕಂದರೆ ಕನಸು ಕಾಣಲೇಬೇಕು.
  ಕೊನೆಯದಾಗಿ ಇದನ್ನು ಹೇಳಲೇಬೇಕು,ಕನಸಿಗೂ ವಾಸ್ತವಕ್ಕೂ ವ್ಯತ್ಯಾಸದ ಅರಿವಿದ್ದರೆ ಉತ್ತಮ.ಯಾಕೆಂದರೆ ಕನಸಿಗೆ ಯಾವ ಪರಿಶ್ರಮವೂ ಬೇಡ,ಅದೇ ಕನಸನ್ನು ವಾಸ್ತವವಾಗಿಸಲು ತುಂಬಾ ತಾಳ್ಮೆ,ಪರಿಶ್ರಮ ಅತ್ಯಗತ್ಯ.ಉದಾಹರಣೆಗೆ:"ಈ ವರ್ಷ ನೀವು ಸಿಂಗಾಪೂರಕ್ಕೆ ಪ್ರವಾಸ ಹೋಗಬೇಕೆಂದು ಕನಸು ಕಾಣುತ್ತಾ ಕುಳಿತುಕೊಂಡರೆ,ನಿಮ್ಮನ್ನು ಅಲ್ಲಾದ್ದೀನ್ ಕಾರ್ಟೂನಿನಲ್ಲಿ ಬರುವ ಜೀನಿ ನಿಮ್ಮನ್ನು ಸಿಂಗಾಪೂರಕ್ಕೆ ಕರೆದೊಯ್ಯುವುದಿಲ್ಲ.ಆ ಕನಸು ಸಾಕಾರವಾಗಬೇಕಾದರೆ ವೀಸಾ,ಹಣ,ಸಮಯವನ್ನೆಲ್ಲಾ ನೀವು ಸಿದ್ಧಪಡಿಸಿಕೊಂಡಿರಲೇ ಬೇಕು." ಹೀಗೆಯೆ ಬರೀ ಕನಸಷ್ಟೇ ಕಾಣುತ್ತಾ ಕುಳಿತುಕೊಳ್ಳದೇ,ಅದನ್ನು ನನಸಾಗುವತ್ತಲೂ ಪ್ರಯತ್ನ ಪಡಿ.ಕನಸು ಕಾಣುತ್ತಲೇ ಇರಿ,ಕನಸು ಕಾಣಲು ಯಾವ ಕಾಸು ಕೊಡಬೇಕಾಗಿಲ್ಲ.
-ಶುಭಶ್ರೀ ಭಟ್ಟ,ಬೆಂಗಳೂರು

ನೋಡ ಬನ್ನಿ ನಮ್ಮೂರ ಸುಗ್ಗಿ ಕುಣಿತವ ಕಾಮನ ಸುಡುವ ಹಬ್ಬವ








(ವಿಶ್ವವಾಣಿ ಗುರುಪುರವಣಿಯಲ್ಲಿ ಪ್ರಕಟ: 13/04/2017)


-ನೋಡ ಬನ್ನಿ ನಮ್ಮೂರ ಸುಗ್ಗಿ ಕುಣಿತವ ಕಾಮನ ಸುಡುವ ಹಬ್ಬವ-

  'ಢಣಢಣ ಢಣ್ ಢಣಾ' ಎಂದು ತಮಟೆಯ ಶಬ್ಧ ಕೇಳಿದರೆ ಇಂದಿಗೂ ಮೈ ರೋಮಾಂಚನಗೊಳ್ಳುತ್ತದೆ. ನಾವೆಲ್ಲಾ ಚಿಕ್ಕವರಿದ್ದಾಗ ಈ ರೀತಿ ತಮಟೆ ಶಬ್ಧಕೇಳಿದರೆ ಮಾಡುತ್ತಿರೋ ಕೆಲಸವನ್ನೆಲ್ಲಾ ಬದಿಗೊತ್ತಿ ಜಿಂಕೆಯಂತೆ ಜಿಗಿಯುತ್ತಾ ಓಡುತ್ತಿದ್ದೆವು.ಇದರೆಲ್ಲೇನೂ ವಿಶೇಷ ಅಂತೀರಾ?ಅದರಲ್ಲೇ ಇದೆ ವಿಶೇಷ.ಇದುನಮ್ಮೂರ ಸುಗ್ಗಿಯ ಸಂಭ್ರಮ. ಕರಾವಳಿಯ ಕಣ್ಮಣಿಯಾಗಿ ಕಂಗೊಳಿಸುತ್ತಿರೋ ಕುಮಟಾ-ಉತ್ತರಕನ್ನಡ ಜಿಲ್ಲೆಯ ಸಾಂಸ್ಕೃತಿಕತಾಣಗಳಲ್ಲೊಂದು.ಕಡಲಿನಲೆಯಂತೆ ಆಕಾಶದೆತ್ತರಕ್ಕೆ ಚಿಮ್ಮಲು ಪ್ರಯತ್ನಿಸುತ್ತಿರುವ ಪ್ರತಿಭೆಗಳಿಗೆ ಭರವಿಲ್ಲ ಇಲ್ಲಿ.ಹಿಂದಿನಿಂದ ಬಂದ ಕಲೆ-ಸಂಸ್ಕೃತಿಗಳನ್ನುಉಳಿಸಿ ಬೆಳೆಸಲು ಇಂದಿನವರೂ ಶ್ರಮಿಸುತ್ತಿದ್ದಾರೆ.ಅಂತೆಯೇ ಕಾರ್ಯತತ್ಪರಾದವರಲ್ಲಿ 'ಹಾಲಕ್ಕಿ ಒಕ್ಕಲಿಗರೂ' ಕೂಡ ಒಬ್ಬರು.ತಲೆತಲಾಂತರಗಳಿಂದಅವರಿಗೆ ಕೊಡುಗೆಯಾಗಿ ಬಂದಿರುವಂತಹ 'ಸುಗ್ಗಿ ಕುಣಿತ'ವನ್ನು ಅವರೆಂದೂ ಕೈ ಬಿಟ್ಟಿಲ್ಲ,ಉಳಿಸಿ ಬೆಳೆಸುತ್ತಿದಾರೆ.ಯಾರಿಂದ ಏನನ್ನೂ ಅಪೇಕ್ಷಿಸದೆ ಜನರಿಗೆಮುದನೀಡುವ ಇವರೂ ಸಂಸ್ಕೃತಿಯ ಪಾಲಕರೆಂದರೆ ತಪ್ಪಾಗಲಾರದೂ!!..
  ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ವಾಸಿಸುವ ಈ ಸಮುದಾಯದ ಜನರು ಕೂಲಿ ಕೆಲಸಕ್ಕಾಗಿ ಹೆಸರಾದವರು.ಘಟ್ಟದ ಮೇಲಿನ ಶಿರಸಿ,ಸಿದ್ಧಾಪುರದಲ್ಲಿನಜನರು ಇವರನ್ನು ತೋಟದಮನೆ ಕೆಲಸ,ಅಡಿಕೆ ಕೊಯ್ಯಲು ಮುಂತಾದ ಕೆಲಸಗಳಿಗಾಗಿ ಕರೆಸಿಕೊಳ್ಳುತ್ತಾರೆ. ಇವರಲ್ಲಿನ ಬಲಿಷ್ಠತೆ,ನಂಬಿಕೆ, ವಿಶ್ವಾಸಾರ್ಹಗುಣ,ಮಾಡುವ ಕೆಲಸದಲ್ಲಿನ ಅಚ್ಚುಕಟ್ಟುತನವೇ ಇದಕ್ಕೆ ಕಾರಣ.ಇತ್ತಿಚಿನ ದಿನಗಳಲ್ಲಿ ಶಾಲೆ ಕಲಿತು ಉದ್ಯೋಗ ಮಾಡುವವರೂ ಇದ್ದಾರೆ.ಆದರೆ ಅವರೂ ಕೂಡಅಧುನಿಕ ಸಂಸ್ಕೃತಿಗೆ ಮರುಳಾಗಿ ತಮ್ಮ ವಿಶಿಷ್ಠ ಸಂಸ್ಕೃತಿಯಾದ ಸುಗ್ಗಿ ಕುಣಿತವನ್ನು ಮರೆಯದೇ ಮುಂದುವರೆಸುತ್ತಿದ್ದಾರೇ ಎಂಬುದೇ ಗಮನಾರ್ಹ. ಏಲಕ್ಕಿಹೋಳಿಗೆಯ ಘಮದ ಜೊತೆಗೆ ಹಾಲಕ್ಕಿ ಒಕ್ಕಲಿಗರ ಸುಗ್ಗು ಕುಣಿತದ ಸಂಭ್ರಮ ಬೆರೆತರೆ,ಆಹಾ! ಅದರ ಮಜವೇ ಬೇರೆ,ವರ್ಣನೆಗೆ ನಿಲುಕದ್ದು.
  ಹೋಳಿ ಹುಣ್ಣಿಮೆಗಿಂತ ಮುಂಚಿತವಾಗಿ ಬರುವ ದಶಮಿಯಂದು ಈ ಒಕ್ಕಲಿಗ ಸಮುದಾಯದವರು ಹಬ್ಬಕ್ಕೆ ಅವರ ಶಾಸ್ತ್ರದಂತೆ ಚಾಲನೆ ನೀಡುತ್ತಾರೆ.ಬೀರಪ್ಪದೇವರ(ಅವರ ಸಮುದಾಯದ ದೇವರು) ಪೂಜೆ ಮಾಡಿ 'ಊರಗೌಡ' (ಸಮುದಾಯದ ನಾಯಕ) ಹಬ್ಬಕ್ಕೆ ಶುಭಾರಂಭವನ್ನೀಯುತ್ತಾನೆ. 'ಬುಧವಂತ' ಎಂಬಪಟ್ಟಹೊತ್ತವನು ಊರಿಗೆಲ್ಲಾ ಸುಗ್ಗಿ ಪ್ರಾರಂಭವಾದುದರ ಕುರಿತು ಹೇಳುತ್ತಾನೆ.ಇನ್ನು 'ಕೋಲಕಾರ' (ಕಾಮದಹನಕ್ಕೆ ಕೆಂಡ ತಯಾರಿ ಮಾಡುವವ) ಎಂಬುವವನುಪರಂಪರೆಯಾಗಿ ಬಂದ ಬೆತ್ತದೊಡನೆ ಊರೂರಿಗೆ ಹೋಗಿ ವೀಳ್ಯದೆಲೆ ಕೊಟ್ಟು ಸುಗ್ಗಿಯ ಆಗಮನದ ಬಗ್ಗೆ ತಿಳಿಸಿಬರುತ್ತಾನೆ.ಈ ಸುಗ್ಗಿಯಲ್ಲಿ ಎರಡುವಿಧವಿದೆ,ಮೊದಲನೆಯದು ಹಿರಿಸುಗ್ಗಿ,ಎರಡನೇಯದು ಕಿರಿಸುಗ್ಗಿ(ಬೋಳಸುಗ್ಗಿ). ಹಿರಿಸುಗ್ಗಿಯಲ್ಲಿ  ವಿಶಿಷ್ಠವಾಗಿ ವಿನ್ಯಾಸಗೊಂಡ ಪಗಡೆ,ಬೆಂಡಿನತುರಾಯಿ,ನವಿಲುಗರಿಯ ಕುಂಚಸಿಕ್ಕಿಸಿ,ತರೇವಾರಿ ವೇಷತೊಟ್ಟು 'ಬೋ ಹೋ ಸೋ.. ಛೋ ಹೋ ಹೋಯ್' ಎನ್ನುತ್ತಾ ,ತಮ್ಮದೇ ಆದ ಪ್ರಾಸ ಹಾಕಿ,ಅವರದ್ದೇಧಾಟಿಯಲ್ಲಿ ಹಾಡಿಕೊಂಡು ಕುಣಿಯುತ್ತಾರೆ. ಅದೇ ಕಿರಿಸುಗ್ಗಿಯಲ್ಲಿ ತಲೆಗೊಂದು ರುಮಾಲು ಸುತ್ತಿ,ತಮ್ಮ ವಾದ್ಯದೊಡನೆ ಕೇವಲ ತಮ್ಮ ಸಮುದಾಯದಮನೆಗಷ್ಟೇ ಹೋಗುತ್ತಾರೆ. ಈ ಎರಡೂ ಸುಗ್ಗಿಯನ್ನು ಅವರ ಬೀರಪ್ಪ ದೇವರಿಗಾಗೇ ಮಾಡುತ್ತಾರೆ. ಇನ್ನೂ ಕೆಲವರ ಪ್ರಕಾರ ಸಣ್ಣ ದೇವರಿಗಾಗಿ ಕಿರಿಸುಗ್ಗಿ,ದೊಡ್ಡದೇವರಿಗಾಗಿ  ವರ್ಷಕ್ಕೊಂದು ಸುಗ್ಗಿಯನ್ನು ಕುಣಿದು ಅವರ ಪರಂಪರೆಯನ್ನು ಮುಂದುವರೆಸುತ್ತಾರೆ. ಊರೂರು ಅಲೆದು ಮನದಣಿಯೇ ಕುಣಿದರೂ ಅವರಿಗೆದಣಿವಿಲ್ಲ.ಮೊದಲ ದಿನದಿಂದ ಕೊನೆಯತನಕ ಅದೇ ಉತ್ಸಾಹ,ಅದೇ ಶಕ್ತಿ ಚೈತನ್ಯವನ್ನ ನಿಜಕ್ಕೂ ಮೆಚ್ಚಲೇಬೇಕು.
ಗ್ರಾಮದಲ್ಲಿ ಹಿಂದೂ ಹಾಲಕ್ಕಿ ಒಕ್ಕಲಿಗರ ಒಕ್ಕೂಟದಿಂದ ಸಭೆಕರೆದು ಕರ್ಚುವೆಚ್ಚದ ಬಗ್ಗೆ ನಿರ್ಣಯಿಸಲಾಗುತ್ತದೆ.ಪ್ರತಿ ಮನೆಗೆ ಸರಿ ಸುಮಾರು ೧೦೦-೨೦೦ರೂಪಾಯಿಯಂತೆ ಖರ್ಚಾಗಬಹುದು ಎನ್ನುತ್ತಾರೆ. ದೇವಸ್ಥಾನಗಳಿಗೆ,ಮನೆಯಿಂದ ಮನೆಗೆ,ಊರಿಂದೂರಿಗೆ ತೆರಳಿ,ವೇಷಕಟ್ಟಿ ನರ್ತಿಸಿ ನೋಡುಗರಮನಸೂರೆಗೊಳ್ಳುತ್ತಾರೆ.ಪೊಗಡೆ,ಬಿಂಗು,ಕೋರು,ವಿಭಿನ್ನ ವಸ್ತ್ರ ಮುಂತಾದ ಕಲಾಕೃತಿಗಳು,ಬಣ್ಣ(ಮೇಕಪ್),ಕಾಲ್ಗೆಜ್ಜೆ ಮುಂತಾದವುಗಳ ವೆಚ್ಚ ಎಂಟು ದಿನಕ್ಕೆಸುಮಾರು ೨೦-೨೫ ಸಾವಿರ ರೂಪಾಯಿಗಳಷ್ಟಾಗಿರುತ್ತದೆ. ತಮ್ಮದೇ ದುಡಿಮೆಯ ಹಣವನ್ನು ಕರ್ಚುಮಾಡಿ,ಯಾರಿಂದ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ, ಮನೆಯವರು ಕೊಡುವ ಅಕ್ಕಿ-ಕಾಯಿ-ದುಡ್ಡು ಪ್ರೀತಿಯಿಂದ ತೆಗೆದುಕೊಂಡು ಮುನ್ನಡೆಯುತ್ತಾರೆ.ರಾತ್ರಿ ೧೨ಘಂಟೆಗೂ ಮಧ್ಯಾನ್ಹ ೧೨ರ ಉತ್ಸಾಹ, ನೋವನ್ನುಂಡಾದ್ರೂ ನಗಿಸಬೇಕೆಂಬ ಮಾತಿನಂತೆ ಎಲ್ಲರಿಗೂ ಸಂತಸವನ್ನೇ ನೀಡುವ ಇವರು ನನಗೆ ಯಾವಾಗ್ಲೂ ಅಚ್ಚರಿಯೆನಿಸುತ್ತಾರೆ.
  ಹೋಳಿ ಹುಣ್ಣಿಮೆಯ ಹಿಂದಿನ ದಿನ ಕೂಟದ ಯಜಮಾನನ ಮನೆಯ ತುಳಸಿಕಟ್ಟೆಯ ಮುಂದೆ ಕಮಿ(ಕಣಿ) ಹೇಳಲಾಗುತ್ತದೆ.'ಹರಿವಿನ್ ಎಂಬುದು ಗುರುವಿನ್ಗುಲಗಂಜಿ' ಎಂಬುದು ಸುಗ್ಗಿಯಲ್ಲಿ ಪ್ರಪ್ರಥಮವಾಗಿ ಬರುವ ಕಮಿ(ಕಣಿ)ಯ ಪದವಾಗಿದೆ.ಇದನ್ನು ಸೀತಮ್ಮನವರ ಕಮಿ ಎಂದೂ ಕರೆಯಲಾಗುವುದು.ಇದನ್ನುಸೀತಾಮಾತೆ ರಾಮನಿಗಾಗಿ ಹಾಡುತ್ತಿದ್ದ ಪದ್ಯವೆಂದೂ ಪ್ರಚಲಿತದಲ್ಲಿದೆ.ಸುಮಾರು ಒಂದು ತಾಸಿನವರೆಗೆ ಹಾಡಲಾಗುವ ಈ ಸೀತೆ ಕಮಿ(ಕಣಿ)ಯನ್ನು ಸುಗ್ಗಿಕುಣಿತದ ಆರಂಭದಲ್ಲೂ ಹಾಡಲಾಗುವುದು.
  ಚಿನ್ನದಿಂದ ಮೈತೊಳೆದು ಬಂದಂತೆ ಕಾಣುವ ಚಂದಿರ ಬಾನಂಚಲಿ ಮೆಲ್ಲನವತರಿಸಿದ ರಾತ್ರಿಯದು.ಎಲ್ಲರೂ ಅದುಮಿಟ್ಟ ಭಕ್ತಿಭಾವವನ್ನು ಭೊರ್ಗರೆದುತೆಗೆದಿಡುವ ಫಾಲ್ಗುಣ ಶುಕ್ಲ ಪೌರ್ಣಮಿಯ ಆಗಮನವಾಗುವ ಶುಭದಿನಕ್ಕಾಗಿ ಊರಮಂದಿಯೆಲ್ಲಾ ಕಾತರಿಸಿ ಕಾಯುತ್ತಾರೆ. ಹಗಲಿಡೀ ಬಣ್ಣವೆರೆಚಿಓಕುಳಿಯಾಡಿ, ನಂತರ ಕಾಮದಹನಕ್ಕಾಗಿ ತಯಾರಿ ಭರದಿಂದ ನಡೆಯುತ್ತದೆ.ಮುಸ್ಸಂಜೆ ಸೂರ್ಯ ಮನೆಗೋಡುವುದೇ ತಡ,ಇತ್ತ ಯಜಮಾನನತುಳಸೀವನದ ಬಳಿ ಜನಜಂಗುಳಿ.ಕಾಮದಹನಕ್ಕೂ ಮೊದಲು ಈ ತುಳಸಿವನಕ್ಕೆ ಯಜಮಾನ ಪೂಜೆಮಾಡಿದ ಮೇಲೆ ತುರಾಯಿ ಕಟ್ಟಿ ಕೊನೆಯ ಸುಗ್ಗುಕುಣಿತವ ಕುಣಿದು ಮಂಗಳ ಹಾಡುತ್ತಾರೆ.ನೋಡನೋಡುತ್ತಿದ್ದಂತೆ ಯುವಕ ವೃದ್ಧರ ಬೇಧವಿಲ್ಲದೇ ಆವೇಶಭರಿತರಾಗಿ ಕುಣಿಯುತ್ತಾರೆ,ವಿಚಿತ್ರವಾಗಿ ಏನೇನೋಮಾತನಾಡತೊಡಗುತ್ತಾರೆ. ಇದಕ್ಕೆ ಅವರು ಹೇಳುವುದು 'ದೇವ್ರು ಮೈಮೇಲ್ ಬಂತು' ಎಂದು.ಬ್ರಹ್ಮದೇವರ ಪೂಜೆ ಮುಗಿದು ಯಜಮಾನ ಅಪ್ಪಣೆಕೊಡುವುದೊಂದೇ ತಡ ಅಬಾಲವೃದ್ಧರೆಲ್ಲಾ 'ಹೊಂಯ್ಕ್ಯೋ' (ಹೋ ಕಾಮ) ಎನ್ನುತ್ತಾ ಒಂದು ಗುಡ್ಡದೆಡೆಗೆ ಓಡುತ್ತಾರೆ.
  ಇತ್ತ ಕರಿದೇವರ ಗುಡ್ಡ(ಅವರ ಬೀರಪ್ಪ ದೇವರ ವಿಗ್ರಹವಿರುವ ಗುಡ್ಡ)ದಲ್ಲಿ ಕೋಲಕಾರ ಪಟ್ಟ ಹೊತ್ತವನು ಮೊದಲೇ  ೧೦-೧೫ ಕ್ವಿಂಟಾಲ್ ಸೌದೆಯ ಕೆಂಡವನ್ನುಸಿದ್ಧಪಡಿಸಿಟ್ಟುಕೊಳ್ಳುತ್ತಾನೆ.ಇವರ ಕೆಂಡಹಾಯುವುದನ್ನು (ಕಾಮದಹನದ ಒಂದು ವಿಧ) ನೋಡಲು ಎಲ್ಲೆಲ್ಲಿಂದಲೋ ಜನಜಾತೆ ನೆರೆದಿರುತ್ತದೆ. ಕೆಂಡಸಿದ್ಧಪಡಿಸಿದ ಕೋಲಕಾರ ಪಟಾಕಿ ಹೊಡೆದು,ಆಚೆ ಗುಡ್ಡದಲ್ಲಿರುವವರಿಗೆ ಸೂಚನೆ ಕೊಡುತ್ತಾನೆ.ಕ್ಷಣಮಾತ್ರದಲ್ಲಿ ಬಾಣದಂತೆ ಚಿಮ್ಮಿ ಬಂದು ಮೂರು ಸಾರಿಕೆಂಡವನ್ನು ಹಾಯ್ದುಹೋಗುತ್ತಾರೆ.ನೋಡುಗರ ಮೈ ಜುಮ್ಮೆಂದು ಕಂಪನವಾಗುತ್ತುರುವಾಗಲೇ,ಕೆಂಡ ಹಾಯುವವರು ಆರಾಮಾಗಿ ದೇವರ ಪೂಜೆಗೆ ಕೈಮುಗಿದುನಿಂತಿರುತ್ತಾರೆ.'ಕೆಂಡ ಹಾಯುವಾಗ ಬೆಂಕಿ ಬಿಸಿನೇ ನಮ್ಗಾಗುದಿಲ್ಲ.ತಂಪನ್ ನೀರಲ್ಲಿ ಹೋದಾಂಗ್ ಆತೀತು.ಇದ್ಕೆ ನಮ್ ಬೀರಪ್ಪ ದ್ಯಾವ್ರೆ ಕಾರ್ಣ' ಎಂದು ಅವರುಸ್ಪಷ್ಟಿಕರಣವೀಯುತ್ತಾರೆ.ಅವರ ಆದೇಶಪೂರಿತ ಭಕ್ತಿ,ಭಯವಿಲ್ಲದ ನಡೆ,ಅಪಾರ ಆತ್ಮವಿಶ್ವಾಸವೇ ಇದಕ್ಕೆ ಕಾರಣವೆಂದು ನಾವೆಂದುಕೊಳ್ಳೊಣ.ಅದೆಲ್ಲವಆಚೆಯಿರಿಸಿ ನೋಡಿದಾಗ ನಮಗೆ ಕಾಣುವುದು ಸಂಸ್ಕೃತಿ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರೋ ಅವರ ಗುಣ,ಅಭಿನಂದನಾರ್ಹ.
 ಇದು ಕೇವಲ ನಮ್ಮೂರು ಗುಡಬಳ್ಳಿ ಊರಿನ ಒಕ್ಕಲಿಗರ ಸುಗ್ಗಿಯಲ್ಲ.ಬದಲಾಗಿ ಉತ್ತರಕನ್ನಡ ಜಿಲ್ಲೆಯ ಸಂಸ್ಕೃತಿಯ ಕೀರ್ತಿಕಿರಿಟದಲ್ಲಿ ಕಂಗೊಳಿಸುತ್ತಿರೋಪುಟ್ಟಗರಿ. 'ಕುಣಿಸಲು ನೀನು,ಕುಣಿವೆನು ನಾನು' ಎನ್ನುವಂತೆ ಆ ದೇವರಲ್ಲಿ ಅಪರಿಮಿತ ನಂಬಿಕೆಯನ್ನಿಟ್ಟ ಈ ಮುಗ್ಧಜನರೆಂದೂ ತಮ್ಮ ಸಂಪ್ರದಾಯ ಬಿಡದಿರಲಿ. ಅದನ್ನು ಬೆಳೆಸಿ ಮುನ್ನಡೆಸಲು ಆ ಭಗವಂತ ಶಕ್ತಿಯನ್ನೀಯಲಿ ಎಂದಾಶಿಸುತ್ತೇನೆ. ಓದುಗರೇ! ನಿಮಗೂ ಈ ಸುಗ್ಗಿ ಕುಣಿತ,ಕೆಂಡ ಹಾಯುವುದನ್ನು ನೋಡಬೇಕುಅನಿಸುತ್ತಿದೆಯಾ? ಮುಂದಿನ ವರ್ಷ ತಪ್ಪದೇ ಬನ್ನಿ,ನಮ್ಮೂರು ತಮ್ಮ ಸ್ವಾಗತಕ್ಕೆ ಸದಾ ಸಿದ್ಧ..
 
ಲೇಖನ: ಶುಭಶ್ರೀ ಭಟ್ಟ,ಬೆಂಗಳೂರು
ಫೊಟೋ ಕೃಪೆ: ಗಜಾನನ ಹೆಗಡೆ,ವಿಸ್ಮಯ ಟಿ.ವಿ.ಕುಮಟಾ

Wednesday, 17 May 2017

ಅಹಲ್ಯೆಯೆಂಬ ಮತ್ತೊಬ್ಬ ಶಬರಿ

(ಅಮೇರಿಕದ ನ್ಯೂಜೆರ್ಸಿಯಲ್ಲಿನ ದ್ವೈಮಾಸಿಕ ಪತ್ರಿಕೆ 'ಬೃಂದಾವನ ವಾಣಿ'ಯಲ್ಲಿ ಪ್ರಕಟವಾದ ಕಥೆ)


 
 ಅದೊಂದು ಹಿಮಾಲಯದ ತೊಪ್ಪಲಿನ ಸುಂದರ ಮುಂಜಾವು.ಒಂದುಕಡೆ ಪರ್ವತದಂಚಿಂದ ಬಿಳಿಸೀರೆಯುಟ್ಟು, ಬೆಳ್ಳಿಗೆಜ್ಜೆ ತೊಟ್ಟು ನುಲಿಯುತ್ತಾ, ಕುಣಿಯುತ್ತಾ, ಬಿಳಿನವಿಲು ನರ್ತಿಸಿದಂತೆ ಝುಳು-ಝುಳು ಹರಿಯುತ್ತಿರುವ ಗಂಗೆ,ಇನ್ನೊಂದೆಡೆ ಗೌತಮರ ಆಶ್ರಮ,ಅದರ ಪಕ್ಕ ಅಪರೂಪದ ನಾಗಪುಷ್ಪ,ಬ್ರಹ್ಮಕಮಲ,ಸೌಗಂಧಿಕಾ ಪುಷ್ಪಗಳಂತಹ ಪುಷ್ಪರಾಶಿಯನ್ನು ಹೊತ್ತ ತೊಪ್ಪಲು,ಅದರಿಂದ ಹೊರಬರುತ್ತಿರೋ ಪರಿಮಳ,ಪತಿಯ ಪೂಜೆಗೆಂದು ಹೂವು ಕೊಯ್ಯಲು ಬಂದವಳು ಮೈಮರೆತು ನಿಂತಿದ್ದೆ,ಸುತ್ತಲಿನ ಸೊಬಗನ್ನು ಬೆರಗಿನಿಂದ ಆಸ್ವಾದಿಸುತ್ತಿದ್ದೆ. ಆಗಲೇ ಕಾಣಿಸಿಕೊಂಡನವ,ಮೋಡಗಳ ರಥದಲ್ಲು ಕುಳಿತು ಎಲ್ಲಿಗೋ ತೆರಳುತ್ತಿದ್ದ. ಈಗ ನಮ್ಮ ಆಶ್ರಮದತ್ತ ಕಣ್ಣು ಹಾಯಿಸಲೂ ಭಯ ಅವನಿಗೆ,ನನಗೂ ಅವನ ಕಂಡಾಗಲೆಲ್ಲಾ ಏನೋ ಹೇಳಲಾರದ ಕಸಿವಿಸಿ. ಲಗುಬಗೆಯಿಂದ ಹೂವು ಕೊಯ್ದು,ಪತಿಯ ಧ್ಯಾನಕ್ಕೆ-ಪೂಜೆಗೆ ಅಣಿಮಾಡಿ,ನಾನೂ ಧ್ಯಾನಕ್ಕೆ ಕುಳಿತರೆ ಮನಸ್ಸು ಸ್ಥಿಮಿತ ತಪ್ಪಿತ್ತು. ಮಾತು ಕೇಳದೇ ಹಠ ಮಾಡುವ ಮಗುವಿನಂತೆ ನೆನಪು ಹಿಂದಕ್ಕೋಡಿತು...
             *ಜನನ-ಬಾಲ್ಯ*
  ಸೃಷ್ಟಿಕರ್ತನಾದ ಬ್ರಹ್ಮನಿಗೆ ಸದಾ ಹೊಸತೊಂದು ಬಗೆಯ ಸೃಷ್ಟಿ ಪ್ರಯೋಗ ಮಾಡುವುದರಲ್ಲೇ ಆಸಕ್ತಿ. ಹೀಗಿರಲಿ ಒಂದು ದಿನ ಅವರಿಗೆ ಜಗತ್ತಿನಲ್ಲೇ ಅತೀ ಸುಂದರಳಾದ ಹೆಣ್ಣನ್ನು ಸೃಷ್ಟಿಮಾಡಬೇಕೆಂದು ಬಯಕೆಯುಂಟಾಯ್ತಂತೆ.ಜಗತ್ತಿನ ಸುಂದರ ಸ್ತ್ರೀಯರ ಸೌಂದರ್ಯ-ಲಾವಣ್ಯಗಳ ಮಿಶ್ರಣದಂತೆ ಇರುವ ಒಂದು ಮಗುವನ್ನು ಸೃಷ್ಟಿಸಿ, ಲೋಪವಿಲ್ಲದಿರುವ ಮಾಸದ ಚೆಲುವು ಎಂಬರ್ಥ ಬರುವ 'ಅಹಲ್ಯಾ' ಎಂಬ ಹೆಸರಿಟ್ಟರಂತೆ. ಹೀಗೇ ಸೃಷ್ಟಿಸಿದ ತಮ್ಮ ಮಾನಸಪುತ್ರಿಯನ್ನು ಬೆಳೆಸುವುದು ಹೇಗೆ? ಅದಕ್ಕೆ ಯೋಗ್ಯರಾದವರು ಯಾರು ಎಂಬ ಯೋಚನೆ ಕಾಡಿದೊಡನೆ,ನನ್ನ ಪಿತಾಮಹನಿಗೆ ನೆನಪಾಗಿದ್ದೇ,ವೇದಶಾಸ್ತ್ರಪಾರಂಗತರೂ, ಸಕಲಗುಣ ಸಂಪನ್ನರೂ ಆದ ಗೌತಮ ಋಷಿಗಳು. ತಕ್ಷಣ ಗೌತಮರನ್ನು ಕರೆಯಿಸಿ ಅವರ ಕೈಗೆ ನನ್ನನ್ನು ಕೊಟ್ಟು ಬೆಳೆಸಲು ತಿಳಿಸಿ,ನಾನು ಸುಂದರ ಯುವತಿಯಾಗಿ ಬೆಳೆದು ನಿಂತಾಗ ತಮ್ಮಲ್ಲಿ ಮತ್ತೆ ಕರೆತರುವಂತೆ ತಿಳಿಸಿ ಕಳುಹಿಸಿಕೊಟ್ಟರಂತೆ. ಇತ್ತ ವಿಧೇಯರಾದ ಗೌತಮರು ನನ್ನನ್ನು ಮಗುವಂತೆ ಮುಚ್ಚಟೆಮಾಡಿ,ವೇದಶಾಸ್ತ್ರದ ಅಧ್ಯಯನದ ಜೊತೆಗೆ ಸಂಸ್ಕಾರವಂತಳಾಗಿ ಬೆಳೆಸುತ್ತಿದ್ದರು.ಹುಟ್ಟಿದಾಗಲಿನಿಂದ ನನ್ನನ್ನು ಸಾಕಿ ಸಲಹುತ್ತಿರೋ ಗೌತಮರನ್ನು ನಾನು ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದೆ. ದಿನದಿಂದ ದಿನಕ್ಕೆ ನನ್ನ ಸೌಂದರ್ಯ ವೃದ್ಧಿಸುತ್ತಿತ್ತು,ಹುಣ್ಣಿಮೆಯ ಚಂದ್ರನೂ ನಾಚುವಂತ ರೂಪವತಿಯೆಂದು ಆಶ್ರಮದ ಗೆಳತಿಯರು ಹೊಗಳುತ್ತಿದ್ದರು. ಅವರ ಹೊಗಳುವಿಕೆಗೆ ಹುಸಿಮುನಿಸು ತೋರಿದಂತಾಡಿದರೂ ಮನ ಮತ್ತೆ-ಮತ್ತೆ ಸೌಂದರ್ಯದ ವರ್ಣನೆ ಕೇಳಬಯಸುತ್ತಿತ್ತು. ಒಂದು ದಿನ ಗೌತಮರು ಕರೆದು ನನ್ನನ್ನು ನನ್ನ ಪಿತಾಮಹ ಬ್ರಹ್ಮದೇವರಲ್ಲಿಗೆ ಕರೆದೊಯ್ಯುವುದಾಗಿ ತಿಳಿಸಿದರು. ಹೊಸ ಜಾಗ, ಹೊಸ ಜನ, ಬೇರೆಯದ್ದೇ ಜಗತ್ತು,ಪಿತಾಮಹ,ದೇವಲೋಕ ಎಲ್ಲವನ್ನೂ ನೋಡಿ ಸವಿಯುವ ಅವಕಾಶವೆಂದು ತಿಳಿದು ಸಡಗರದಿಂದ ತಯಾರಿಗೆ ಬಿದ್ದೆ. ಹಗಲೂ-ಇರುಳೂ ನೂರಾರು ಬಣ್ಣ ಬಣ್ಣದ ಕನಸುಗಳು.ಆಗ ತಾನೇ ಯೌವ್ವನವೂ ತೆಕ್ಕೆಮುರಿದು ಬಿದ್ದಿತ್ತು ..
      *ಯೌವ್ವನ-ಮದುವೆ*
   ಹದಿಹರೆಯದ ಹೊಸ್ತಿಲಲ್ಲಿ ಮೈದುಂಬಿಕೊಂಡು,ಕಣ್ತುಂಬುವಂತೆ ಎದುರು ನಿಂತ ತಮ್ಮ ಮಾನಸ ಪುತ್ರಿಯನ್ನು ನೋಡಿ ಪಿತಾಮಹ ಬ್ರಹ್ಮದೇವನಿಗೆ ಕ್ಷಣಕಾಲ ಮಾತೇ ಹೊರಡಲಿಲ್ಲ.ಮರುಕ್ಷಣ ನನ್ನ ತಲೆ ಅವರ ಪಾದದಡಿಯಿತ್ತು,ಅವರು ನನ್ನ ತಲೆ ಸವರುತ್ತಿದ್ದರು. ತನ್ನ ಮಾನಸ ಪುತ್ರಿ ಅಲೌಕಿಕ ಸುಂದರಿಯಾದರೂ , ಯಾವುದೇ ಪ್ರಲೋಭೆಗೊಳಗಾಗದೆ,ವಿಧೇಯನಾಗಿ ತನ್ನೆಡೆಗೆ ಅವಳನ್ನು ಕರೆತಂದ ಗೌತಮರ ಮೇಲೆ ಪಿತಾಮಹರಿಗೆ ವಿಶೇಷ ಅಭಿಮಾನ, ಅಕ್ಕರಾಸ್ಥೆಗಳುಂಟಾಗಿದ್ದವು.ನನ್ನ ಸೌಂದರ್ಯಕ್ಕೆ ಮರುಳಾಗಿ ನನ್ನ ವಿವಾಹವಾಗಲು ಪೈಪೋಟಿಗಿಳಿದಾಗ, ಪಿತಾಮಹರು ಒಂದು ಉಪಾಯ ಮಾಡಿದರು. ಸುರಾಸುರರಲ್ಲಿ ಯಾರು ಮೊದಲು ಜಗವನ್ನೆಲ್ಲಾ ಒಂದು ಪ್ರದಕ್ಷಿಣೆಗೈದು ಯಾರು ಮೊದಲು ತಲಪುವರೋ,ಅವರಿಗೆ ನನ್ನನ್ನು ಕೊಟ್ಟು ವಿವಾಹ ಮಾಡುತ್ತೆನೆ ಎಂದು ಘೋಷಿಸುವುದೇ ತಡ,ಎಲ್ಲರೂ ತಮಗೆ ತೋಚಿದ ಮಾರ್ಗದಲ್ಲಿ ಶರತ್ತನ್ನು ಮುಗಿಸಲು ಮುಗಿಬಿದ್ದರು,ಅದರಲ್ಲಿ ಇಂದ್ರ ಮೊದಲಿಗಿದ್ದ. ಸ್ತ್ರೀ ಲಂಪಟನಾದ ಇಂದ್ರನಿಗೆ ನನ್ನನ್ನು ವಿವಾಹ ಮಾಡಿಕೊಡುವುದು ಪಿತಾಮಹರಿಗೂ,ನನ್ನ ಸಹೋದರ ನಾರದರಿಗೂ ಒಂದಿನೀತೂ ಇಷ್ಟವಿರಲಿಲ್ಲ.
   ಆದರೆ ಯೌವ್ವನದ ಹೊಸ್ತಿಲಲ್ಲಿ ಕಾಲಿಟ್ಟ ನನಗೆ ಇದೆಲ್ಲದೂ ಆಕರ್ಷಕವಾಗಿತ್ತು.ಥಳ-ಥಳಿಸುವ ದೇವಲೋಕ,ಅಲ್ಲಿನ ವೈಭವದಲ್ಲಿ ಮೆರೆಯುವ ಜನರೆಲ್ಲಾ, ನನ್ನನ್ನು ವಿವಾಹವಾಗಲು ಬಯಸುತ್ತಿರುವುದು ವಯೋಸಹಜವಾದ ಆನಂದವಾಗಿತ್ತು.ಮನವು ನವಿಲಂತೆ ಕುಣಿಯುತ್ತಿತ್ತು ರೆಕ್ಕೆಬಿಚ್ಚಿ..
 ಇತ್ತ ನನ್ನನ್ನು ಪಿತಾಮಹನಿಗೊಪ್ಪಿಸಿ ತಮ್ಮ ಕರ್ತವ್ಯ ಮುಗಿಸಿದ ಗೌತಮರು ಭೂಲೋಕದತ್ತ ತೆರಳುವಾಗ ದಾರಿಯಲ್ಲಿ ಕಾಮಧೇನುವಿಗೆ ಪ್ರಸವ ವೇದನೆ ಶುರುವಾಗಿ,ಪುಟ್ಟ ಕರುವಿಗೆ ಜನ್ಮನೀಡಿತಂತೆ.ರಕ್ತದ ಮುದ್ದೆಯಲ್ಲಿ ಬಿದ್ದುಕೊಂಡ ಆ ಎಳೆಗರುವನ್ನು ಶುದ್ಧಗೊಳಿಸಿ,ತಾಯಿ ಕಾಮಧೇನುವಿಗೆ ಯಥೇಚ್ಛ ಹುಲ್ಲು ನೀಡಿ, ಅದಕ್ಕೊಂದು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ,ತಮ್ಮ ಆಶ್ರಮದತ್ತ ಮುನ್ನಡೆಯುತ್ತಿದ್ದರಂತೆ.ಇದನ್ನೆಲ್ಲಾ ತಮ್ಮ ತಪಃಶಕ್ತಿಯಿಂದ ನೋಡಿದ ಪಿತಾಮಹರು ಗೌತಮರನ್ನು ಮತ್ತೆ ತಮ್ಮೆಡೆಗೆ ಕರೆಸಿಕೊಂಡರು.ಕಾಮಧೇನುವಿನ ಪ್ರದಕ್ಷಿಣೆಯೂ ಒಂದೇ,ಜಗತ್ತಿನ ಪ್ರದಕ್ಷಿಣೆಯೂ ಒಂದೇ,ನಿಮ್ಮ ಬಿಟ್ಟರೇ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವರಿಲ್ಲವೆಂದು ಹೊಗಳುತ್ತಾ,ಗೌತಮರಿಗೆ ನನ್ನ ಧಾರೆಯೆರೆದು ಕೊಟ್ಟರು,ನನ್ನ ಇಚ್ಛೆಯನ್ನು ಕೇಳುವ ಮನಸ್ಸೂ ಮಾಡದೇ..
  ಗೌತಮರನ್ನು ತಂದೆಯ ಸ್ಥಾನದಲ್ಲಿಟ್ಟು ಗೌರವದಿಂದಿದ್ದ ನನಗೆ ಅವರನ್ನು ಪತಿಯೆಂದು ಒಪ್ಪಲು ಸಾಧ್ಯವಾಗಲೇ ಇಲ್ಲ.ಬ್ರಹ್ಮ ಹೇಳಿದ್ದಕ್ಕೆ ವಿಧೇಯನಾಗಿ ಇವರು ನನ್ನನ್ನು ಕಟ್ಟಿಕೊಂಡರು.ತನ್ನದೇ ವಯಸ್ಸಿನವನಿಗೆ ತನ್ನ ಮಗಳನ್ನು ಧಾರೆಯೆರೆದು ಕೊಟ್ಟರೆ ಅವಳಿಗೆನನಿಸಬಹುದು?ಅವಳ ಇಷ್ಟಾನಿಷ್ಟಗಳೇನು ಎಂದು ತಿಳಿಯಲೂ ಪ್ರಯತ್ನಿಸಲಿಲ್ಲ.ಸುಂದರವಾಗಿ ನನ್ನ ಹುಟ್ಟಿಸಿದ್ದೊಂದು ಬಿಟ್ಟರೇ,ಇನ್ನೇನೂ ಮಾಡದ ಪಿತಾಮಹನ ಮೇಲಿದ್ದ ಗೌರವ-ಪ್ರೀತಿ ಕಡಿಮೆಯಾಗಿತ್ತು. ಅಷ್ಟರಲ್ಲಾಗಲೇ ಜಗತ್ತನ್ನು ಪ್ರದಕ್ಷಿಣೆ ಮಾಡಿಬಂದ ಸುರಾಸುರರೆಲ್ಲರೂ,ನಮ್ಮ ವಿವಾಹ ನೋಡಿ ದಂಗಾಗಿದ್ದರು.ಎಲ್ಲರಿಗಿಂತ ಮೊದಲು ಬಂದ ಇಂದ್ರನಂತೂ ಕುದಿಯತೊಡಗಿದ್ದ.ಆಡುವಂತಿಲ್ಲ,ನುಂಗಿವಂತಿಲ್ಲ,ಸುಮ್ಮನೇ ಧುಮ್ಮಿಕ್ಕುತ್ತಾ ಹೋದೆ.ಅವನು ಹೋದೆಡೆ ಕ್ಷಣ ನೋಡಿದ ದೀರ್ಘ ನಿಟ್ಟುಸಿರೊಂದು ಹೊರಬಂತು. ಅಲ್ಲಿಗೆ ಎಲ್ಲಾ ಭಾವನೆಗಳಿಗೂ ಹೊರಗಟ್ಟಲ್ಪಟ್ಟವು. ನಾನು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದೆ
       *ಪ್ರೀತಿ-ಪ್ರಣಯ-ಶಾಪಗ್ರಹಣ*
  ಮದುವೆಯಾಗಿ ವರುಷವೇ ಕಳೆಯತ್ತಾ ಬಂದರೂ ಗೌತಮರಿಗೆ ನನ್ನೆಡೆಗೆ ಅದೇ ನಿರ್ಲಿಪ್ತಭಾವ.ಪತ್ನಿಯ ದರ್ಜೆಯೊಂದು ಸಿಕ್ಕಿದ್ದು ಬಿಟ್ಟರೆ ಮತ್ಯಾವ ಬದಲಾವಣೆಯೂ ಇಲ್ಲ.ನನಗೂ ಅಷ್ಟೇ ಅವರನ್ನು ತಂದೆಯ ಸ್ಥಾನದಿಂದ ಕೆಳಗಿಳಿಸಿ,ಪತಿಯೆಂಬ ಸಿಂಹಾಸನವನ್ನೇರಿಸಿ ಕುಳಿತಿದ್ದು ಬಿಟ್ಟರೇ ಮತ್ಯಾವ ವಿಶೇಷ ಪ್ರೇಮವೆನೂ ಉಕ್ಕಿ ಬರಲಿಲ್ಲ. ಆದರೆ ಅವರು ಹಾಕಿಕೊಟ್ಟ ಸಂಸ್ಕಾರದಲ್ಲಿ ನಡೆಯುತ್ತಿದ್ದ ನನಗೆ ಪತಿಯೇ ಪರದೈವವಾಗಿದ್ದರು.ಬೆಳಿಗ್ಗೆ ಕೋಳಿ ಕೂಗುವ ವೇಳೆ ನದಿಯತ್ತ ತೆರಳಿ,ಪ್ರಾತ:ಕರ್ಮಾದಿಗಳನ್ನು ಮುಗಿಸಿ ಶುದ್ಧರಾಗಿ ಆಶ್ರಮದತ್ತ ಬಂದು ತಮ್ಮ ಎಂದಿನ ಧ್ಯಾನ-ಪೂಜೆಯನ್ನು ಮುಗಿಸುವ ವೇಳೆಗೆ,ನಾನೂ ಸ್ನಾನಾದಿಗಳನ್ನು ಮುಗಿಸಿ ಫಲಹಾರಾದಿಗಳನ್ನು ಉಪಹಾರಕ್ಕೆ ತಂದಿಡುತ್ತಿದ್ದೆ.
  ಅದೊಂದು ಕರಾಳದಿನವೆನ್ನಲೋ?ಕಣ್ತೆರೆಸಿದ ದಿನವೆನ್ನಲೋ ತಿಳಿಯದು. ಗೌತಮರು ಎಂದಿನಂತೆ ಕೋಳಿ ಕೂಗಿದೊಡನೆ ಎದ್ದು ನದಿ ತೀರಕ್ಕೆ ತೆರಳಿದ ಕೆಲ ನಿಮಿಷಕ್ಕೆ ಹಿಂತಿರುಗಿ ಬಂದರು.ಯಾವತ್ತೂ ಇಲ್ಲದ ಪ್ರೀತಿ-ಸಲುಗೆ ತೋರಿಸುತ್ತಾ ಬಳಿಸರಿದರು,ಸೆರಗು ಕೆಳಗೆ ಜಾರಿತ್ತು..ನನ್ನ ಸೌಂದರ್ಯವನ್ನು ಬಗೆಬಗೆಯಾಗಿ ವರ್ಣಿಸುತ್ತಾ ಬಿಗಿದಪ್ಪಿದರು,ಮೈಯೆಲ್ಲಾ ನವಿರೆದ್ದಿತ್ತು..ತಪೋಶಕ್ತಿಯಿಂದ ಬಳಿಬಂದಂದ್ದು ಇಂದ್ರನೆಂದು ತಿಳಿದು,ಅವನಿಗೆ ಬುದ್ಧಿ ಹೇಳಿ ಸಾಗಹಾಕಲು ಯತ್ನಿಸಿದಷ್ಟೂ ಸಮೀಪಿಸುತ್ತಿದ್ದ. ನನ್ನ ಚೆಲುವನ್ನು ಹೊಗಳುತ್ತಾ ಅಟ್ಟಕ್ಕೇರಿಸಿ,ಮಾತಲ್ಲೇ ಮರಳು ಮಾಡಿ,ಅವನ ಮೋಡಿಗೆ ಮೈಮರೆತು ಎಚ್ಚೆತ್ತುಕೊಳ್ಳುವಷ್ಟರಲ್ಲಿ  ನನ್ನನ್ನು ಸೂರೆಹೊಡೆದಿದ್ದ.ವಿವಾಹವಂತೂ ಆಗಲಿಲ್ಲ,ಕೊನೆಗೊಂದು ದಿನ ಅಹಲ್ಯೆಯನ್ನು ಸೌಂದರ್ಯವನ್ನು ಆಸ್ವಾದಿಸುವುದೇ ಎಂದು ಶಪಥ ಮಾಡಿ ಕುತಂತ್ರ ಮಾಡಿದ್ದನಂತೆ. ಗೌತಮರಿಗೆ ತಂತ್ರ ಮಾಡಿ ಕೇವಲ ಸೌಂದರ್ಯಕ್ಕಾಗಿ ನನ್ನನ್ನು ಅನುಭವಿಸಿದೆನೆಂದು ಇಂದ್ರ ಥರಥರನೆ ನಡುಗತೊಡಗಿದ್ದ.ಅವನ ಹೊಗಳಿಕೆಗೆ ಮರುಳಾಗಿ ಪತಿಗೆ ದ್ರೋಹ ಬರೆದೆನಲ್ಲಾ ಎಂದೂ ನಾನೂ ಕಂಪಿಸುತ್ತಿದ್ದೆ. ಅವನನ್ನೂ ಹೊರನೂಕುವಷ್ಟರಲ್ಲಿ ಮರಳಿ ಬಂದ ಗೌತಮರು,ಕ್ಷಣಮಾತ್ರದೀ ನಡೆದಿದ್ದೆಲ್ಲವ ಗ್ರಹಿಸಿದರು.
 ಕೋಪೊದ್ರಿಕ್ತರಾದ ಗೌತಮರು, ಸ್ತ್ರೀಯಲ್ಲಿ ಅಪಾರ ಆಸಕ್ತಿ ಹೊಂದಿರುವ ಇಂದ್ರನಿಗೆ ಸಹಸ್ರಯೋನಿಯಾಗುವಂತೆ ಶಪಿಸಿದರು.ನಾನು ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದೆ, ಬೇಡಿಕೊಂಡೆ,ಆದರೂ ಅವರ ಕೋಪ ಕಡಿಮೆಯಾಗಲಿಲ್ಲ.ನನ್ನ ಮುಖವನ್ನೂ ನೋಡದೆ,ನೆರಳೂ ತಾಕದಂತೆ ನಿಂತು 'ನಿನಗೆ ನಿನ್ನ ಸೌಂದರ್ಯದ ಮೇಲೆ ಅಪಾರ ಅಭಿಮಾನವಲ್ಲವೇ?ಇವತ್ತಿನಿಂದ ನಿನ್ನ ಸೌಂದರ್ಯ ಯಾರ ಕಣ್ಣಿಗೂ ಕಾಣದಿರಲಿ,ಕಲ್ಲಾಗು.. ಸಾಕ್ಷಾತ್ ವಿಷ್ಣು ಈ ಆಶ್ರಮಕ್ಕೆ ಕಾಲಿಡುವ ತನಕ ನಿನಗೆ ಈ ಶಾಪದಿಂದ ಮುಕ್ತಿಯಿಲ್ಲ.' ಎಂದು ಶಾಪವನ್ನಿತ್ತು ಹಿಮಾಲಯದತ್ತ ತೆರಳಿದರು.ನಾನು ಕಲ್ಲಾದೆ,ಜೊತೆಗೆ ನನ್ನ ಮನವೂ..
 ಇಷ್ಟು ದಿನ ಆಶ್ರಮದಲ್ಲಿ ನನಗೆ ಗೌರವ ಕೊಡುತ್ತಿದ್ದವರೆಲ್ಲಾ,ನನ್ನನ್ನಿಂದು ತುಚ್ಛವಾಗಿ ಕಾಣತೊಡಗಿದ್ದರು.ಈ ಶಿಲೆಕಲ್ಲನ್ನು ನೋಡಿಕೊಂಡು ಹೋಗುವ ನೆಪ ಮಾಡಿ, ನಡೆದಿದ್ದೆಲ್ಲವುದಕ್ಕೆ ಉಪ್ಪು-ಖಾರ ಸೇರಿಸಿ ಹೇಳುತ್ತಾ ಢಂಗೂರ ಸಾರುತ್ತಿದ್ದರು.ಇತ್ತ ಜನರಾಡುವ ಮಾತಿಗೆ ಕಿವಿಯಾಗಿ ಕಿವುಡಾಗಿ ಶಿಲೆಯಲ್ಲೊಂದು ಶಿಲೆಯಾಗಿದ್ದೆ.
         *ರಾಮಾಗಮನ-ಶಾಪಮುಕ್ತಿ*
  ಇದೆಲ್ಲಾ ಕಳೆದು ತುಂಬಾ ವರುಷಗಳೇ ಕಳೆಯಿತೋ ನಾ ತಿಳಿಯೆ.ಹಸಿವು,ಬಾಯರಿಕೆ,ತಿಂಗಳ ನೋವೆಲ್ಲಾ ಅನುಭವಿಸಿ ನರಳಿ ನರಳಿ ಕೊರಡಾಗಿದ್ದೆ. ಮೊದ ಮೊದಲು ನನ್ನ ಮನದಿಚ್ಛೆಯನ್ನೂ ಅರಿಯದೇ ಮದುವೆಯಾದಾಗಲಿನಿಂದ ಯಾವ ಸುಖವನ್ನೂ ನೀಡದೆ,ನಿಗ್ರಹಿಯಾಗಿದ್ದ ಪತಿಗೆ ತಕ್ಕ ಶಾಸ್ತಿ ಮಾಡಿದ್ದೆನೆಂದು ಬೀಗುತ್ತಿದ್ದೆ. ಸೌಂದರ್ಯವನ್ನು ಮಕರಂದ ಹೀರಿದ ದುಂಬಿಯಂತೆ ಹೀರಿ,ನಂತರ ಪರಿಸ್ಥಿತಿಯನ್ನು ಎದುರಿಸುವ ತಾಕತ್ತಿಲ್ಲದೇ ಥರಗುಟ್ಟುತ್ತಿದ್ದ ಹೆದರುಪುಕ್ಕಲ ಇಂದ್ರನ ಮೇಲೆ ಅಸಹ್ಯ ಹುಟ್ಟಿತ್ತು. ನನ್ನ ನೆರಳು ಬಿದ್ದರೂ ಅಪವಿತ್ರನಾಗುವೆನೆಂದು ದೂರದಿ ಬೆನ್ನಿ ತಿರುಗಿಸಿ ನಿಂತು ಶಾಪ ಹಾಕಿದ ಗೌತಮರ ಮೇಲೆ ಕೋಪಗೊಂಡೆ. ಕೊನೆಕೊನೆಗೆ ಕ್ಷಣಿಕ ಸುಖಕ್ಕಾಗಿ ಮೈಮರೆತು,ಕೈಹಿಡಿದವನೂ ಎಂತವನೇ ಆದರೂ ಅನುಸರಿಸಿಕೊಂಡು ಹೋಗಬೇಕಾದ ಪತ್ನಿ ಧರ್ಮ ಮರೆತದ್ದಕ್ಕೆ ತಳಮಳಿಸುತ್ತಿದ್ದೆ.ಕಾಲಕ್ರಮೇಣ ಮನವೊಂದು ಸ್ಥಿಮಿತಕ್ಕೆ ಬಂದ ಮೇಲೆ ನನ್ನ ತಪ್ಪೆನೆಂದು ಅರಿವಾಗಿತ್ತು. ಪಶ್ಚಾತ್ತಾಪದ ಬೇಗೆಯಲ್ಲಿ ಕುದಿಯತೊಡಗಿದ್ದೆ,ರಾಮನಿಗಾಗಿ ಕಾಯತೊಡಗಿದ್ದೆ. 
  ಅದೊಂದು ಸುದಿನ,ನನ್ನ ಜೀವನದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ರಾಮನವತಾರದಲ್ಲಿದ್ದ ವಿಷ್ಣುವಿನ ಆಗಮನವಾಯ್ತು ನಮ್ಮ ಆಶ್ರಮದೊಳು. ಅವನ ಸ್ಪರ್ಶಮಾತ್ರದಿಂದ,ನಾನು ಶಾಪಮುಕ್ತಳಾದೆ. ಶಿಲೆಯಿಂದೆದ್ದು ಬಂದೆ ಪರಿಶುದ್ಧಳಾಗಿ, ಪಶ್ಚಾತ್ತಾಪದ ಬೆಂಕಿಯ ಪುಟಕ್ಕಿಟ್ಟ ಚಿನ್ನದಂತೆ. ಅನುದಿನವೂ, ಅನುಕ್ಷಣವೂ ನೊಂದಿದ್ದವಳಿಗೆ ಗೌತಮರ ಮಾತೆಲ್ಲವೂ ನೆನಪಿತ್ತು. ಯಾವಾಗ ಶಾಪಮುಕ್ತಳಾಗಿ ಗೌತಮರ ಸೇರುವೆನೋ?ಯಾವಾಗ ಅವರಲ್ಲಿ ಕ್ಷಮೆಯಾಚಿಸುವೆನೋ? ವಿಷ್ಣುವಿನ ಅವತಾರಿ ಯಾವಗ ಬರುವನೋ?' ಎಂದೆಲ್ಲಾ ಪರಿತಪಿಸುತ್ತಿರುವ ನನಗೆ ಶಾಪದಿಂದ ಮುಕ್ತಿ ಸಿಕ್ಕಿತ್ತು. ಅದಾದ ಮೇಲೆ ಹಿಮಾಲಯದಲ್ಲಿ ಗೌತಮರನ್ನು ಸೇರಿ ಮರು ಜೀವನ ಶುರುಮಾಡಿದ್ದೆ.ಈಗ ನಾನು ಪತೀತೆಯಾಗದೇ ಪತಿವೃತೆಯಾಗಿದ್ದೆ...
  'ಅಹಲ್ಯಾ' ಎಂಬ ಗೌತಮರ ಕೂಗು ನೆನಪಿನಾಳದಿಂದ ಅವಳನ್ನೆಬ್ಬಿಸಿ ಒಳಗೆ ಕರೆದೊಯ್ದಿತು..
-ಶುಭಶ್ರೀ ಭಟ್ಟ

Tuesday, 16 May 2017

ಹೆಣಕಂಡ ಮಳೆ

(ಕಹಳೆ ಬಳಗ ಆಯೋಜಿಸಿದ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕಥೆ)



 ರೇವತಿ ಎಂದಿನಂತೆ ತನ್ನ ಶಾಲೆಯ ಪಾಠ ಮುಗಿಸಿ ಮನೆಗೆ ಬರುವಷ್ಟರಲ್ಲಿ ಮನೆಯ ಮನೆಯ ಮುಂದೆ ವಾಹನಗಳು,ತುಂಬಿಹೋದ ಚಪ್ಪಲಿ ಸಾಲು,ಕಂಡರಿಯದ ನೆಂಟರು,ರೇವಂತನ ಕಡೆಯ ಬಳಗದವರು ಮನೆಯ ಹೊರಗೂ-ಒಳಗೂ ತುಂಬಿ ಬಿಟ್ಟಿದ್ದರು.ಎಲ್ಲರೂ ನನ್ನೆಡೆಗೆ ಅನುಕಂಪದ ದೃಷ್ಟಿಯನ್ನು ಹರಿಸತೊಡಗಿದಾಗ ಮನದಲ್ಲೆಲ್ಲಾ ಕಂಪನ.ಮಗಳು ಮತ್ತೆ ಅತ್ತೆಯ ನೆನಪಾಗಿ ಕಾಲು ಮುಂದೆ ಹೆಜ್ಜೆಯಿಡದೇ ಮುಷ್ಕರ ಹೂಡಿದ್ದವು.ಮನ ಶಂಕೆಯ ಬಲೆಗೆ ಸಿಕ್ಕಿಬಿದ್ದೊಡನೆ,ಬಲ ಹುಬ್ಬು ಅದುರತೊಡಗಿತ್ತು.ಶಕುನವನ್ನೆಲ್ಲಾ ನಂಬದ ನಾನು ಅಳುಕುತ್ತಲೇ ಒಳಗಡಿಯಿಟ್ಟೆ. ಮೂಲೆಯಲ್ಲಿ ಬಿಕ್ಕಿತ್ತಿದ್ದ ಅತ್ತೆಯ ಮಡಿಲಲ್ಲಿ ಕುಳಿತಿದ್ದ ಮಗಳು ಓಡಿ ಬಂದು ತೆಕ್ಕೆಬಿದ್ದಾಗ ಮನಸ್ಯಾಕೋ ನಿರಾಳವಾದಂತಾಗಿ ಮೆಲ್ಲನೆ ಅತ್ತೆಯೆಡೆಗೆ ತಿರುಗಿದೆ.ಅಮ್ಮನಂತೇ ನಮ್ಮನ್ನು ನೋಡಿಕೊಳ್ಳುತ್ತಿದ್ದ ಅತ್ತೆಯು ರೋಧಿಸುತ್ತಲೇ ಮಂಚದೆಡೆಗೆ ಕೈ ತೋರಿಸಿದರು.ನಡುಗುತ್ತಲೇ ಅತ್ತ ಕಣ್ಣು ಹಾಯಿಸಿದರೇ, ಮಂಚದ ಕೆಳಗಿನ ಚಾಪೆಯಲ್ಲಿ ಚಿರನಿದ್ರೆಗೆ ಜಾರಿ ಮಲಗಿದ್ದ ನನ್ನ ರೇವಂತ್.ವರುಷದ ಹಿಂದೆ ಅಮ್ಮ-ಹೆಂಡತಿ-ಮಗಳು ಎಲ್ಲಾ ಸಂಬಂಧ ಕಡಿದು ಹೊರಟವನಿಂದು ಹೆಣವಾಗಿ ಬಂದು ಮಲಗಿದ್ದ.ಕಣ್ಣು ಕತ್ತಲೆಯಿಟ್ಟು ಬೀಳುವಂತಾದಾಗ ಸಾವರಿಸಿಕೊಂಡೆ.ಬಿಕ್ಕುಕ್ಕಿ ಬಂದು ಗಂಟಲಲ್ಲಿ ಅಡಗಿ ಕುಳಿತಿತ್ತು ಹೊರಬರಲಾರದೆ.ನಾನೂ ಅಳುತ್ತಾ ಕುಳಿತರೆ,ಅತ್ತೆಯೂ-ಮಗಳೂ ಕಂಗಾಲಾಗುತ್ತಾರೆಂದು ದುಃಖವ ಬದಿಗೊತ್ತಿ ಮುಂದಿನ ಕಾರ್ಯದ ಬಗ್ಗೆ ಗಮನ ಹರಿಸಿದೆ.
ಮೊಳಕಾಲಷ್ಟಿದ್ದ ಮಗಳಿಂದಲೇ ಅವರಪ್ಪನ ಚಿತೆಗೆ ಅಗ್ನಿ ಸ್ಪರ್ಶ ಮಾಡಿಸಿ ಹಿಂತಿರುಗಿ ಬರುವಾಗ ಧಾರಾಕಾರ ಮಳೆ,ಶವವಾಗಿ ಮಲಗಿದ ರೇವಂತ್ ಅಳುತ್ತಿದ್ದನಾ ಗೊತ್ತಿಲ್ಲ.ಮತ್ತೆ ಮಳೆ ಕಡಿಮೆಯಾದಾಗ,ಮರುಚಿತೆಯ ಕಾರ್ಯವನ್ನೂ ಮುಗಿಸಿ ಮನೆಗೆ ಬಂದರೆ ಮನೆಯಲ್ಲೆನೋ ಗವ್ವೆನ್ನುವ ಭೀಕರ ಕಗ್ಗತ್ತಲು.ಕಾರ್ಯ ಮುಗಿಸಿ ಎಲ್ಲರೂ ಅವರವರ ಮನೆಗೆ ತೆರಳಿದರು,ಅತ್ತೆಯಿನ್ನೂ ಬಿಕ್ಕುತ್ತಲೇ ಇದ್ದರು.ಏಷ್ಟಾದರೂ ಹೆತ್ತಕರುಳು,ಶುದ್ಧ ಅಂತಃಕರಣ ಸೆಲೆಯುಳ್ಳವರು.ಮಗಳು ಹುಟ್ಟಿ ಒಂದು ವರುಷಕ್ಕೆ ಕಾರಣವಿಲ್ಲದೇ ಜಗಳ ತೆಗೆದು 'ನನ್ನ ಆಸೆ-ಕನಸುಗಳೇ ಬೇರೆ.ನಿಮ್ಮನ್ನೆಲ್ಲಾ ಸಾಕುತ್ತಾ ಬದುಕಿ ಕನಸನ್ನ ಕೊಲ್ಲುವುದು ಇಷ್ಟವಿಲ್ಲ.ನಿಮ್ಮ ದಾರಿ ನಿಮಗೆ,ನನ್ನದು ನನಗೆ' ಎಂದು ಮನೆ-ತೋಟವನ್ನೆಲ್ಲಾ ನಮ್ಮ ಹೆಸರಿಗೆ ಮಾಡಿ ಮನೆಬಿಟ್ಟು ಹೋದ ಮಗನ ಮೇಲೆ ಕಡುಕೋಪವಿದ್ದರೂ, ಅವರನ್ನು ನೆನೆಸಿಕೊಂಡು ನನಗೆ ಕಾಣದಂತೆ ಕಣ್ಣೀರು ಮಿಡಿಯುತ್ತಿದ್ದರು.ನಡು ನೀರಲ್ಲಿ ಕೈಕೊಟ್ಟು ಹೋದ ಗಂಡ,ಅತ್ತ ಈಜಲೂ ಬಾರದೇ,ಮುಳುಗಲೂ ಬಾರದೇ ಒದ್ದಾಡುತ್ತಿದ್ದವಳನ್ನು,ಸ್ವಂತ ಮಗಳಂತೆ ನೋಡಿಕೊಂಡು,ಸ್ಥೈರ್ಯತುಂಬಿ ಉದ್ಯೋಗಕ್ಕೆ ಸೇರಲು ಪ್ರೇರೆಪಿಸಿದರು.ಸಣ್ಣ ಪುಟ್ಟದ್ದಕ್ಕೂ ರೇವಂತನ ಮೇಲೆ ಅವಂಬಿತಳಾಗಿ,ಅವನನ್ನು ಕಳೆದುಕೊಂಡು ಖಿನ್ನಳಾಗಿದ್ದ ನನ್ನನ್ನು ಉತ್ಸಾಹದ ಚಿಲುಮೆಯನ್ನಾಗಿ ಮಾಡಿದರು.ಶಾಲೆಯಲ್ಲಿ ಪಾಠಮಾಡುತ್ತಾ,ಮಕ್ಕಳೊಂದಿಗಿನ ಒಡನಾಟ,ಮನೆಯಲ್ಲಿ ಮಗಳ ತೊದಲ್ನುಡಿಯ ತುಂಟಾಟ,ಅತ್ತೆಯ ಮಮತೆಯ ಚಿಲುಮೆಯಲ್ಲಿ ರೇವಂತನ ನೆನಪು ನಿಧಾನಕ್ಕೆ ಕರಗತೊಡಗಿತ್ತು.
ತಪ್ಪು-ತಪ್ಪು ಹೆಜ್ಜೆಯನ್ನಿಟ್ಟು ಬೀಳುತ್ತಿದ್ದ ಮಗಳನ್ನು ತಡೆಯಲು ಹೋಗದೆ ಸುಮ್ಮನೆ ನೋಡುತ್ತಾ ಕುಳಿತಿರುತ್ತಿದ್ದೆ.ಬಿದ್ದ ಮಗಳು ಮತ್ತೆ ಎದ್ದು ಮರಳಿ ಪ್ರಯತ್ನವ ಮಾಡತೊಡಗುವಾಗ ಮನವರಳುತ್ತಿತ್ತು.ಮುದ್ದು ಮುದ್ದು ಮಾತನಾಡಿ,ಇನ್ನಿಲ್ಲದ ಪ್ರಶ್ನೆ ಕೇಳಿ ಜೀವನದಲ್ಲಿ ಕಲಿಯಬೇಕು ಎಂಬುದನ್ನು ತೋರಿಸಿಕೊಡುತ್ತಿದ್ದಳು.ಹೀಗೇ ಪ್ರತೀ ಕ್ಷಣ ತನಗರಿವಿಲ್ಲದೆಯೇ ಜೀವನದ ಪಾಠ ಕಲಿಸುತ್ತಿದ್ದಳು ನನ್ನ ಮಗಳು.ಶಾಲೆ ಕೆಲಸ ಮುಗಿಸಿ ಮನೆಗೆ ಬರುವಾಗಲೇ ಅಜ್ಜಿ-ಮೊಮ್ಮಗಳ ಸವಾರಿ ಪಕ್ಕದಲ್ಲಿನ ಪಾರ್ಕಿನೆಡೆಗೆ ಹೊರಟಿರುತ್ತಿತ್ತು.ನಾನೂ ಬಟ್ಟೆ ಬದಲಾಯಿಸಿ,ಕೈಕಾಲು ತೊಳೆದು,ಒಂದು ಲೋಟ ಚಹಾ-ಅದಕ್ಕೆರಡು ಬಿಸ್ಕಿಟ್ ತಿಂದು ಅವರನ್ನು ಕರೆತರಲು ಹೊರಡುತ್ತಿದ್ದೆ.ಮನೆಗೆ ಬಂದು ದೇವರ ದೀಪ ಹಚ್ಚಿ,ಮಗಳಿಂದ ಶ್ಲೋಕ ಹೇಳಿಸಿ,ಒಂದ್ಲೋಟ ಹಾಲನ್ನು ಅಜ್ಜಿ-ಮೊಮ್ಮಗಳಿಗೆ ಕುಡಿಯ ಕೊಟ್ಟು,ಮೊಮ್ಮಗಳಿಗೆ ಅಜ್ಜಿ ಹೇಳುವ ಪುರಾಣದ ಸ್ವಾರಸ್ಯದ ಕಥೆಗಳಿಗೆ ಕಿವಿಯಾಗುತ್ತಾ, ರಾತ್ರಿಯಡುಗೆಗೆ ಸಿದ್ಧಮಾಡುತ್ತಿದ್ದೆ.ಶಾಲೆಯಲಿನ ತುಂಟ ಮಕ್ಕಳ ಚೆಲ್ಲಾಟವನ್ನು ವಿವರಿಸುತ್ತಾ,ಹರಟುತ್ತಾ ಊಟ ಮುಗಿಸಿ ಒಟ್ಟಿಗೆ ಮಲಗುತ್ತಿದ್ದೆವು ಜಗುಲಿಯಲ್ಲಿ.ಮೊದಮೊದಲು ನಿದ್ರೆ ಬಾರದೇ ನಿಡುಸುಯ್ದು,ಕನವರಿಸಿಕೊಂಡು ರಾತ್ರಿ ಕಳೆಯುತ್ತಿತ್ತು.ಇತ್ತಿಚಿಗೆ ಬೆಳಗಿನ ಜಾವಕ್ಕೆ ಜೊಂಪು ಹತ್ತಿ,ಅತ್ತೆಯೆಬ್ಬಿಸಿದಾಗಲೇ ಎಚ್ಚರವಾಗುತ್ತಿತ್ತು.ಕಾರಣವಿಲ್ಲದೇ ಬಿಟ್ಟು ಹೋದ ರೇವಂತ್ ಎಂಬ ನೋವು ಬಿಟ್ಟರೆ,ಉಳಿದಿದ್ದೆಲ್ಲಾ ನಿರಾಳವಾಗಿತ್ತು.ಆದರೆ ಅವ ಹೀಗೆ ಧಿಡಿರನೇ ಹೆಣವಾಗಿ ಮರಳಿ ಮನೆಯಲ್ಲಿನ-ಮನದಲ್ಲಿನ ತಿಳಿನೀರ ಕೊಳಕ್ಕೆ ಕಲ್ಲೆಸೆದಂತಾಗಿತ್ತು.
 ಗೋಕರ್ಣದ ಉಪಾಧ್ಯರ ಮನೆಯಲ್ಲಿ ತಿಥಿಕರ್ಮವನ್ನೆಲ್ಲಾ ಮುಗಿಸಿ,ಗರುಡ ಪುರಾಣ ಓದಿಸಿ ಅವನಾತ್ಮಕ್ಕೆ ಶಾಂತಿ ಕೋರಿ ಮನೆಗೆ ಹಿಂತಿರುಗಿ ಬಂದಾಗ ದಪ್ಪದೊಂದು ಲಕೋಟೆ ನಮ್ಮ ದಾರಿ ಕಾಯುತ್ತಿತ್ತು.ಅದರಲ್ಲಿ 'ನನ್ನ ಪ್ರೀತಿಯ ರೇವತಿಗೆ' ಎಂಬ ರೇವಂತನ ದುಂಡಗಿನಕ್ಷರ ನಮ್ಮನ್ನು ಸೆಳೆಯಿತು.ಲಗುಬಗೆಯಿಂದ ಬೀಗ ತೆಗೆದು ಕೋಣೆಗೊಡಿದೆ,ನನಗೆ ತೊಂದರೆಯಾಯಿತೆಂದು ಮಗಳನ್ನು ಪಕ್ಕದ ಮನೆಗೆ ಆಡಲು ಕಳುಹಿಸಿದ ಅತ್ತೆ,ಮೆಲ್ಲ ನನ್ನ ಪಕ್ಕ ಬಂದು ಕುಳಿತರು.ಲಕೋಟೆಯನ್ನು ತೆರೆಯುವಾಗ ಅಗತ್ಯಕ್ಕಿಂತ ಹೆಚ್ಚಾಗಿ ಕೈ ನಡುಗಿತ್ತಿತ್ತು,ಮೆಲ್ಲ ಓದಲು ಶುರುಮಾಡಿದೆ.ಪತ್ರದಲ್ಲಿ ಹೀಗಿತ್ತು..
 "ನನ್ನೊಲುಮೆಯ ಅರಗಿಣಿ ರೇವತಿ ನಕ್ಷತ್ರವೇ,ಬಹುಶಃ ಈ ಪತ್ರ ನಿನ್ನ ತಲುಪುವುದಕ್ಕೂ ಮೊದಲು,ನನ್ನ ಪ್ರಾಣವಿಲ್ಲದ ದೇಹ ನಿಮ್ಮನ್ನು ತಲುಪಿರಲಿಕ್ಕೂ ಸಾಕು.ನನ್ನಮೇಲಿನ್ನೂ ಕೋಪವೇ ಗಿಣಿ?ನನಗೆ ಗೊತ್ತು ನಿಮಗೆಲ್ಲಾ ನಾನು ಮಾಡಿದ್ದು ಕ್ಷಮಿಸಲಾರದ ತಪ್ಪೆಂದು,ಆದರೆ ನನ್ನ ಪ್ರಕಾರ ನಾನು ಮಾಡಿದ್ದೇ ಸರಿಯಾಗಿತ್ತು ಕಣೆ. ನಾನು ನಿಮ್ಮನ್ನು ದೂರಮಾಡುವ ಕಾರಣ ತಿಳಿಸಿದ್ದರೆ,ನೀವೆಲ್ಲಾ ನನಗಾಗಿ ಮನೆ-ಮಠ ಕಳೆದುಕೊಂಡು,ಸಾಲದ ಹೊರೆಹೊತ್ತು ಬೀದಿಯಲ್ಲಿ ನಿಂತಿರುತ್ತಿದ್ದಿರಿ.ಅದು ನನಗೆ ಬೇಡವಾಗಿತ್ತು. ಆದರೀಗ ನೀನು ಸ್ವಾವಲಂಬಿಯಾಗಿ ನಿನ್ನ ಕಾಲಮೇಲೆ ನೀನು ನಿಂತು,ಅಮ್ಮನನ್ನು ಮಗನಂತೆ,ಮಗಳನ್ನು ಅಪ್ಪನಂತೆ ಸಾಕು ಬದುಕುತ್ತಿರುವ ರೀತಿ ಕಂಡು,ನನಗೂ ಬದುಕುವ ಆಸೆಯಾಗ್ತಿದೆ ರೇವತಿ.ಹ್ಮುಂ!ಅಚ್ಚರಿಬೇಡ,ನಿಮ್ಮನ್ನು ದೂರ ಮಾಡಿಕೊಂಡ ಕಾರಣವನ್ನ ಹೇಳುತ್ತೆನೆ ಕೇಳಿಸಿಕೋ.. ಸದಾ ತಲೆನೋವೆಂದು ಒದ್ದಾಡುತ್ತಿದ್ದ ನನ್ನನ್ನು,ನನ್ನ ಜೀವದ ಗೆಳೆಯ ಪ್ರಕಾಶ ಅವನ ತಮ್ಮನ ಆಸ್ಪತ್ರೆಗೆ ಕರೆದೊಯ್ದ ಹಠಮಾಡಿ.ಆಗಲೇ ನನ್ನ ಬಿಟ್ಟು ಬಿಡದ ತಲೆನೋವಿಗೆ ಕಾರಣ 'ಬ್ರೈನ್ ಟ್ಯೂಮರ್'ಎಂದು.ಅದು ಗುಣಪಡಿಸಲಾಗದ ಸ್ಥಿತಿಗೆ ಆಗಲೇ ತಲುಪಿದೇ ಎಂದು ತಿಳಿಸಿದಾಗ ಮಾತ್ರ ಕುಸಿದುಬಿದ್ದಿದ್ದೆ.
  ಮಮತೆಯ ಮಳೆಸುರಿಸೋ ಅಮ್ಮ,ಪ್ರೀತಿಯ ರಸದೌತಣ ಬಡಿಸುವ ಹೆಂಡತಿ,ಜೀವದ ಮುದ್ದೆಯಾದ ಪುಟ್ಟಕಂದ ಎಲ್ಲರ ನೆನಪಾಗಿ ಚಿಕ್ಕ ಮಕ್ಕಳಂತೆ ಕಣ್ಣಿರಿಟ್ಟೆ.ಮಗಳಿಡುವ ಅಂಬೆಗಾಲು,ಅವಳಾಡೋ ತೊದಲ್ನುಡಿ,ಅವಳಳುವಿಗೆ ಕೂಸುಮರಿ ಮಾಡಿ ಅಂಬೆ ತೋರಿಸಿದಾಗ ಅವಳು ನಗುವ ಕಿಲಕಿಲ ನಾದ ಎಲ್ಲವನ್ನೂ ಕಳೆದುಕೊಳ್ಳುತ್ತೆನೆಂದುಕೊಂಡಾಗ ಎದೆಬಿರಿದು ಬಿಕ್ಕತೊಡಗಿತ್ತು.ಮಗಳನ್ನು ಧಾರೆಯೆರೆದು ಕೊಟ್ಟು ಗಂಡನ ಮನೆಗೆ ಕಳುಹಿಸುವಾಗ ಅವಳು ಅಳದಂತೆ ಅವಳನ್ನು ನಗಿಸಬೇಕೆಂಬ ದೊಡ್ಡ ಕನಸಿನ ಸೌಧ ಕಣ್ಣೆದುರೇ ಕುಸಿದು ಕುಂತಿತ್ತು.ನಮ್ಮ ೨೫ನೇ ವರುಷದ ಮದುವೆ ವಾರ್ಷಿಕೋತ್ಸವಕ್ಕೆ ನಿನ್ನಿಷ್ಟದ ಬಣ್ಣದ ಕಾರು ತಂದುಕೊಟ್ಟು,ನಿನ್ನ ಕಂಗಳಲಿ ಕುಣಿವ ಜಿಂಕೆಯ ಹಿಂಡನ್ನು ನೋಡಬೇಕೆಂಬ ಕನಸಿನ ಜೋಕಾಲಿಯ ಹಗ್ಗ ತುಂಡಾಗಿ ಬಿದ್ದಿತ್ತು.ಅಮ್ಮನ ಪ್ರೀತಿಯ ಪುಣ್ಯಕ್ಷೇತ್ರಗಳಿಗೆ ವರುಷಕ್ಕೊಮ್ಮೆಯಾದರೂ ನಾವೆಲ್ಲ ಒಟ್ಟಿಗೆ ತೆರಳಬೇಕೆಂಬ ಕನಸಿನ ಹಕ್ಕಿ ರೆಕ್ಕೆಮುರಿದು ಮೂಲೆಗುಂಪಾಗಿತ್ತು.ತಾಸೆರಡರ ನಂತರ ಎಚ್ಚೆತ್ತುಕೊಂಡು ಗೆಳೆಯ ಪ್ರಕಾಶನ ಬಳಿ ಯಾರಿಗೂ ಹೇಳದಂತೆ ಮಾತು ತೆಗೆದುಕೊಂಡು ಮನೆಗೆ ಬಂದಿದ್ದೆ,ದುಃಖವನ್ನೆಲ್ಲಾ ಎದೆಯಲ್ಲಿ ಹೆಪ್ಪುಗಟ್ಟಿಸಿಕೊಂಡು.
  ಹಗಲಿರುಳೂ ಯೋಚಿಸಿಯೇ ಯೋಚಿಸೆ ಒಂದು ನಿರ್ಧಾರಕ್ಕೆ ಬಂದು,ಮನೆ-ತೋಟ-ಬ್ಯಾಂಕಿನಲ್ಲಿದ್ದ ಹಣವನ್ನೆಲ್ಲಾ ನಿಮ್ಮ ಮೂವರೊಳಗೆ ಹಂಚಿ ವರ್ಗಾಯಿಸಿದೆ ನಿಮಗ್ಯಾರಿಗೂ ಸುಳಿವೂ ಕೊಡದಂತೆ.ಜೊತೆ ಜೊತೆಗೆ ನಿನ್ನ ಮೇಲೂ,ಅಮ್ಮನ ಮೇಲೂ ವಿನಾಕಾರಣ ಸಿಡುಕತೊಡಗಿದ್ದೆ ನೆನಪಿದ್ಯಾ ಗಿಣಿ?ಅಪ್ಪಿಕೊಳ್ಳಲು ಕಾಲಿಗೆ ತಡಕಾಡುವ ಮಗಳನ್ನಂತೂ ಕಣ್ಣೆತ್ತಿಯೂ ನೋಡದೆ ಕೋಣೆ ಸೇರುತ್ತಿದ್ದೆ.ಇದೆಲ್ಲಾ ಆಗಿ ತಿಂಗಳು ಕಳೆಯುವುದರೊಳಗೆ ನಿಮ್ಮನ್ನಗಲಿ ದೂರಹೋಗುವ ಸಿಡಿಮದ್ದನ್ನು ಸಿಡಿಸಿದ್ದೆ.ನೀನು ಕಾಲಿಗೆ ಬಿದ್ದೆ,ಬೇಡಿದೆ,ಬಿಗಿದಪ್ಪಿ ಅಳತೊಡಗಿದೆ,ನಾನು ಕರಗಲಿಲ್ಲ. ನಿನ್ನ ನಿರಂತರ ಆರ್ತತೆ,ಬಿಕ್ಕಳಿಕೆ,ಅಮ್ಮನ ನಿಶ್ಶಬ್ಧದ ಕಣ್ಣೀರ ಧಾರೆ,ನಿಮ್ಮಳುವ ಕಂಡ ಮಗಳ ಪೆಚ್ಚು ಮುಖ ಎಲ್ಲವೂ ಎದೆಗೆ ಚೂರಿ ಹಾಕುವಂತಿದ್ದರೂ,ಮನವನ್ನು ಕರಗ ಬಿಡದೇ ಕಲ್ಲಾಗಿಸಿ ಮನೆಬಿಟ್ಟೆ. ತಿರುಗಿ ನೋಡಿದರೆಲ್ಲಿ ಕರಗಿಬಿಡುವೆನೆಂದು ಹಿಂತಿರುಗದೇ ಹೊರನಡೆದೆ ದೂರದೂರಿನ ಆಶ್ರಮಕ್ಕೆ..
ಆಶ್ರಮಕ್ಕೆ ಒಂದಿಷ್ಟು ಹಣಕೊಟ್ಟು ನನ್ನನ್ನು ಇಲ್ಲಿರುವಂತೆ ಮಾಡಿದ್ದು ಪ್ರಕಾಶ.ನಾನಿಲ್ಲದೇ ನೀವು ಪಡುತಿರುವ ನೋವು ಸಂಕಟವನ್ನೆಲ್ಲಾ ಪ್ರಕಾಶ ಯಥಾವತ್ತಾಗಿ ವರದಿ ಒಪ್ಪಿಸುವಾಗ ಕರುಳು ಕಿತ್ತು ಬರುತ್ತಿತ್ತು ಕಣೆ.ಬರಬರುತ್ತಾ ನಿನ್ನ ಛಲ,ಅಮ್ಮನ ಬೆಂಬಲದಿಂದ,ಮುಗ್ಧ ಮಗುವಂತಿದ್ದ ನೀನು ಮನೆಯ ಜವಾಬ್ಧಾರಿಯ ಜೊತೆಗೆ,ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುವ ಪರಿ,ಮಗಳನ್ನು ಬೆಳೆಸುತ್ತಿರುವ ರೀತಿ,ಎಲ್ಲವನ್ನೂ ಕೇಳುತ್ತಲೇ ಮನ ಕುಣಿತುತ್ತಿತ್ತು.ನನಗೂ ಮತ್ತೆ ಬದುಕ ಬೇಕೆಂಬಾಸೆ ಹೆಚ್ಚಾಗುತ್ತಿತ್ತು.ಆದರೆ ವಿಧಿಯಾಟವೇ ಬೇರೆ ನೋಡು,ಸಾವಿನ ದವಡೆಗೆ ನಿಧಾನಕ್ಕೆ ಜಾರುತ್ತಿರುವುದನ್ನು ಅನುಭವಿಸತೊಡಗಿದ್ದೆ.ಸಾವನ್ನು ಹತ್ತಿರದಿಂದ ದಿನವೂ ಕಾಣುವ ಕರ್ಮವಿದೆಯಲ್ಲಾ,ಇದ್ಯಾವ ಶತ್ರುವಿಗೂ ಬೇಡ ಕಣೆ.
 ನಿನ್ನ ಮುಗ್ಧ ಪ್ರೀತಿಗೆ,ಅಮ್ಮನ ಕಲ್ಮಶವಿಲ್ಲದ ಮಮತೆಗೆ,ಜೀವದ ಮಗಳಿಗೆ ಮೋಸಮಾಡಿ ದೂರವಾಗಿಲ್ಲ ಎನ್ನುವ ಸತ್ಯ ನನ್ನ ಸಾವಿನ ನಂತರವಾದರೂ ತಿಳಿಸಬೇಕೆನೆಸಿತ್ತು ಗಿಣಿ.ಅದಕ್ಕೆ ಈ ಪತ್ರವನ್ನು ಬರೆಯತೊಡಗಿದ್ದೆ. ನಡು ನೀರಲ್ಲಿ ನಿಮ್ಮನ್ನೆಲ್ಲಾ ಕೈಬಿಟ್ಟು ಹೊರಟಿರುವೆ,ನಾವಿಕನಿಲ್ಲದೆ ದೋಣಿಯನ್ನು ಧೈರ್ಯದ ಹರಿಗೋಲು ಹಿಡಿದು ದಡ ಸೇರಿಸುತ್ತಿಯಾ ಎಂಬ ನಂಬಿಕೆಯ ಸುಖವೇ ಸಾಕು ನನಗೆ.ನೀನೇ ನಾವಿಕಳು ರೇವತಿ,ಅಮ್ಮನಿಗೆ ಮಗನ ಕೊರತೆ ನೀಗಿ,ಮಗಳಿಗೆ ಅಪ್ಪನ ಸ್ಥಾನ ತುಂಬಿ ಬೆಳೆಸು.ನಿನಗಾಗಿ ನನಗೇನೂ ಮಾಡಲು ಉಳಿದಿಲ್ಲ,ಕೇವಲ ಪ್ರಕಾಶನ ಹೊರತು. ಅವನೊಬ್ಬ ಒಳ್ಳೆಯ ಗೆಳೆಯನ್ನಷ್ಟೇ ಅಲ್ಲ,ನನ್ನ ಕಷ್ಟದಲ್ಲಿ ಸ್ಪಂದಿಸಿದ ಜೀವ.ಅವನನ್ನು ಮದುವೆಯಾಗಿ ಸುಖವಾಗಿರು.ಮತ್ತೊಂದು ಜನ್ಮವಿದ್ದರೆ ನಿನ್ನ ಗರ್ಭದಲ್ಲಿ ಹುಟ್ಟು ನಿನ್ನ ಋಣ ತೀರಿಸುವೆ.
ನಿನ್ನ,
ರೇವೂ.."
 ಓದಿ ಮುಗಿಸುವಷ್ಟರಲ್ಲಿ ಗಂಟಲಲ್ಲಿ ಕಾಲದಿಂದ ಅಡಗಿ ಕುಳಿತಿದ್ದ ಬಿಕ್ಕು ಭೋರ್ಗರೆದು ಹೊರಬಂತು.ತಾಸುಗಟ್ಟಲೆ ಅತ್ತೆಯ ಮಡಿಲಲ್ಲಿ ಮುದುಡಿ ಬಿಕ್ಕುತ್ತಾ ಮಗುವಾಗಿದ್ದೆ,ಅತ್ತೆ ಮತ್ತೆ ತಾಯಾಗಿದ್ದರು. 'ಅಜ್ಜಿ ಅಮ್ಮಂಗೆ ಆಲು ಬೈದ್ಲು?ಹಚಾ ಮಾತ್ತಿನಿ ಚುಮ್ಮಿರು ಅಮ್ಮಾ.ಅಲಬೇಡ' ಎಂಬ ಮಗಳ ತೊದಲ್ನುಡಿಗೆ,ಕಂಬನಿಯೊರೆಸತೊಡಗಿದ ಅವಳ ಬೆಣ್ಣೆ ಸ್ಪರ್ಶಕ್ಕೆ ಮೆಲ್ಲ ಕಣ್ತೆರೆದೆ. ಇವರ ಗೆಳೆಯ ಪ್ರಕಾಶರ ಕೈಹಿಡಿದು ಬಳಿ ನಿಂತಿದ್ದಳು ಮಗಳು..
-ಶುಭಶ್ರಿ ಭಟ್ಟ

ಎದೆಯ ಸ್ಮಶಾನದೊಳೂಳಿಡುವ ನರಿಗಳು

(ಪ್ರತಿಲಿಪಿ ಕನ್ನಡದಲ್ಲಿ ಪ್ರಕಟವಾದ ಕಥೆ)



 ಅದೊಂದು ಪ್ರಶಸ್ತಿ ವಿತರಣಾ ಸಮಾರಂಭ.ಗಣ್ಯಾತಿಗಣ್ಯರ ನಡುವೆ ಮುದ್ದೆಯಾಗಿ ಕುಳಿತಿದ್ದೆ ನಾನು,ಮುಜುಗರದಿಂದಲ್ಲ-ಸಿಡಿಲು ಬಡಿದವರಂತೆ.ಯಾವಾಗ ನನ್ನ ಕಥಾಸಂಕಲನಕ್ಕೆ ಪ್ರಶಸ್ತಿ ಸುದ್ದಿ ತಿಳಿದಾಗಿನಿಂದ ಹೀಗೇ ಆಡುತ್ತಿದ್ದೆ ಗರಬಡಿದವರಂತೆ.ಕಾರಣ ಕೇಳ್ತಿರಾ? ಹೇಳಲಾ ಬೇಡವಾ ಎಂಬ ದ್ವಂದ್ವದೊಡನೆ ಕುಳಿತಿದ್ದಂತೆ ನನ್ನ ಹೆಸರನ್ನು ಕರೆದಿದ್ದಾಯ್ತು.ಪ್ರಶಸ್ತಿ ಸ್ವೀಕರಿಸುವಾಗ  ಕೈ ನಡುಗುತ್ತಿತ್ತು,ಕಣ್ಣಂಚಲ್ಲಿ ನೀರು ಮಡುಗಟ್ಟಿತ್ತು..ಅದನ್ನೆಲ್ಲರೂ ಸಂತಸದ ಕಣ್ಣೀರೆಂದುಕೊಂಡರು. ಕಣ್ಣೀರ ಹಿಂದೆ ಹೆಪ್ಪುಗಟ್ಟಿದ್ದ ವಿಷಾದತೆ ನನಗಷ್ಟೇ ಗೊತ್ತಿತ್ತು..ಮಾತನಾಡಲಾಗದೇ ಗಂಟಲು ಬಿಗಿದು ಬಂತು,ಎಲ್ಲರೂ ಸಮಾಧಾನಿಸಿ ಕುಳ್ಳಿರಿಸಿದರು. ಕಾರ್ಯಕ್ರಮ ಮತ್ತೆ ಮುಂದುವರೆಯತೊಡಗಿತು. ಮೆಲ್ಲನೆ ಕತ್ತೆತ್ತಿ ವೀಕ್ಷಕರ ವಲಯದ ಮೊದಲ ಸಾಲಿನಲ್ಲಿ ಕುಳಿತ ಹೆಂಡತಿ ಜ್ಯೋತಿಯೆಡೆ ನೋಡಿದೆ,ಅವಳು ಹೆಮ್ಮೆಯಿಂದ ಬೀಗುತ್ತಿದ್ದಾಳೆ ಅನಿಸಿದಾಗ ಮಾತ್ರ ಮತ್ತೆ ಮುಳ್ಳು ಚುಚ್ಚಿದಂತಾಯ್ತು.ಕಾರ್ಯಕ್ರಮವೆಲ್ಲಾ ಮುಗಿಸಿ ಮನೆಗೆ ಮರಳುವಾಗಲೂ ಮಂಕಾಗಿದ್ದೆ. ನನ್ನ ಈ ಪರಿಯ ಮೌನ ನನ್ನ ಹೆಂಡತಿಗೆ ಅಚ್ಚರಿಯುಂಟು ಮಾಡಿದ್ರೂ,ಯಾಕೋ ಎನೋ ಕೇಳದೆ ಸುಮ್ಮನಾಗಿದ್ದಳು.ಮನೆಗೆ ಬಂದ ಮೇಲೆ ಜ್ಯೋತಿ ಸಮಾರಂಭದ ಸಂಭ್ರಮವ ಚಾಚೂ ಬಿಡದೆ ಸಡಗರದಿಂದ ನನ್ನಮ್ಮನಿಗೆ ವರದಿ ಒಪ್ಪಿಸುತ್ತಿದ್ದಳು.ಅವರ ಸಡಗರವ ನೋಡಲಾಗದೆ ಹೊಟ್ಟೆಲಿ ಕಿಚ್ಚೆದ್ದಿತ್ತು,ಅವರನ್ನು ಗದರಿಸಿ ಮಲಗಿಸಿದೆ. ನನ್ನ ವಿಚಿತ್ರ ವರ್ತನೆಗೆ ಎಲ್ಲರೂ ಗೊಣಗುತ್ತಲೇ ಮಲಗಿದರು,ನನ್ನೊಬ್ಬನ ಬಿಟ್ಟು..'ನಾನು ಪಾಪಿ' ಅನಿಸಿದೊಡನೆ ಅಳುವಿಕ್ಕಿ ಬಂತು. ನಿಶ್ಶಬ್ಧವಾದ ರಾತ್ರಿಯಲ್ಲಿ ಬಿಕ್ಕಲೂ ಆಗದೇ,ಅಲ್ಲಿಂದೆದ್ದು ಬಾಲ್ಕನಿಗೆ ಬಂದೆ.ತಂಪಾಗಿ ತೂಗಿ ಬರೋ ತಂಗಾಳಿ,ಮನ ಮುದಗೊಳಿಸುವ ಬೆಳದಿಂಗಳು ಆಹ್ಲಾದವನ್ನೀಯಲಿಲ್ಲ. ನೆನಪು ಬೇಡವೆಂದರೂ ಮಾತು ಕೇಳದೆ ಹಿಂದಕ್ಕೋಡಿತು..
 ಅಂದು 'ಅಜ್ಜಯ್ಯಾ ಅಜ್ಜಯ್ಯಾ' ಎಂದು ಕರೆಯುತ್ತಾ ಅಜ್ಜನ ಕೋಣೆಗೆ ಹೋದೆ. ಕರೆಂಟ್ ಇದ್ರೂ ಅಜ್ಜಯ್ಯ ತನ್ನ ಕೋಣೆಯಲ್ಲಿ ಚಿಮಣಿ ದೀಪವನ್ನೇ ಉಪಯೋಗಿಸುತ್ತಿದ್ದ.ಅವನಿಗೆ ಆ ಚಿಮಣಿಯ ಬೆಳಕಲ್ಲಿ ಬರೆಯಲು,ಓದಲು ತುಂಬಾ ಇಷ್ಟ.ದೊಡ್ಡ ಕನ್ನಡಕದ ಮುಖವನ್ನು ಪುಸ್ತಕದಲ್ಲಿ ಹುದುಗಿಸಿಟ್ಟಂತೆ ಓದುತ್ತಿದ್ದ.ಮುಕ್ಕಾಲು ನೆರೆತ ತಲೆಗೂದಲು, ದಪ್ಪಂಚಿನ ಕನ್ನಡಕ,ದೊಗಳೆಯಾದ ಪಂಚೆ-ಶರ್ಟು ,ಕೈಯಲ್ಲೊಂದು ಶಾಯಿಪೆನ್ನು ಹಿಡಿದು ಮೆಲ್ಲನೆ ತಲೆಯೆತ್ತಿದ್ದ ಅಜ್ಜಯ್ಯಾ ನನಗೆ ಐನಸ್ಟೈನ್ ಅವರಂತೆ ಕಂಡಿದ್ದ. 'ಏನು' ಎಂಬ ಪ್ರಶ್ನೆಯ ಮೊಗ ಹೊತ್ತ ಅಜ್ಜಯ್ಯನಿಗೆ 'ಊಟಕ್ಕೆ ಬಾ' ಎಂದು ಕರೆದು ಹೊರಡಲನುವಾದೆ. ತಕ್ಷಣ ನನ್ನ ಕುಳಿತು ಹೇಳಿದ ಅಜ್ಜಯ್ಯ,ಅಚ್ಚರಿಯಿಂದಲೇ ಕುಳಿತುಕೊಂಡೆ..ಸದಾ ಮೌನಕ್ಕೆ ಶರಣಾಗಿದ್ದ ಅಜ್ಜಯ್ಯ ನನ್ನನ್ನು ಕುಳೀತುಕೊಳ್ಳುವಂತೆ ಹೇಳಿದ್ದು ಮಾತ್ರ ನನಗೆ ವಿಪರೀತ ಅಚ್ಚರಿಪಡುವಂತದ್ದಾಗಿತ್ತು.ನಿಮಿಷಗಳೇ ಉರುಳಿದರೂ ಅಜ್ಜಯ್ಯ ಏನೂ ಮಾತನಾಡಲಿಲ್ಲ,ತಾಳ್ಮೆಗರ್ಥ ಗೊತ್ತಿಲ್ಲದ ನಾನೂ ಕೂಡ ಇಂದು ಸುಮ್ಮನೆ ಕುಳಿತಿದ್ದೆ ನಾನೂ ಅಚ್ಚರಿಗೊಳ್ಳುವಂತೆ..
 ಐದಾರು ನಿಮಿಷಗಳಾದ ಮೇಲೆ,ಅಜ್ಜಯ್ಯ ನನ್ನ ಕೈಹಿಡಿದು ಒಂದು ಹಳೆಯ ಕಬ್ಬಿಣದ ಪೆಟ್ಟಿಗೆಯ ಬಳಿ ಕರೆದೊಯ್ದ.ದುಡ್ಡು-ಗಿಡ್ಡು-ಚಿನ್ನ-ಪಿನ್ನ ಕೊಡ್ತಾರೆನೋ ಎಂಬ ಆಲೋಚನೆ ನನ್ನ ನೀಚಬುದ್ಧಿಯ ತಲೆಯದಾಗಿತ್ತು.ಭಾರವಾದ ಆ ಪೆಟ್ಟಿಗೆಯ ಬಾಗಿಲು ಕಟ-ಕಟವೆಂಬ ಭಯಾನಕ ಶಬ್ಧದೊಡನೆ ತೆರೆದುಕೊಂಡಿತು. ಕ್ಷಣದೊಳಗೆ ನಿರಾಸನಾಗಿದ್ದೆ ನಾನು,ಅಲ್ಲಿರುವ ಭಾರಿ-ಭಾರಿ ಪುಸ್ತಕದ ರಾಶಿ ಕಂಡು.ಎಲ್ಲವೂ ಮಹಾನ್ ಅತಿರಥ-ಮಹಾರಥರು ಬರೆದಿದ್ದ ಅತ್ಯಮೂಲ್ಯ ಪುಸ್ತಕಗಳಾಗಿದ್ದವು. ಅದರ ನಡುವಿಂದ ಸುಮಾರು ನೂರಕ್ಕೂ ಹೆಚ್ಚಿಗಿನ ಹಾಳೆಗಳನ್ನು ತೆಗೆದು ಧೂಳು ಕೊಡವಿ ನನ್ನ ಕೈಯಲ್ಲಿಟ್ಟ. ನನಗೆ ತಲೆಬುಡ ಅರ್ಥವಾಗದೇ ಕುಳಿತಿದ್ದೆ ಸುಮ್ಮನೆ. ಪೆಟ್ಟಿಗೆಯನ್ನು ಮತ್ತೆ ಭದ್ರಪಡಿಸಿ,ಹಾಳೆಗಳನ್ನು ಎತ್ತಿಕೊಂಡು ಬರಲು ತಿಳಿಸಿದ ಅಜ್ಜಯ್ಯ.ಸುಮ್ಮನೆ ಕಾಲಹರಣ ಮಾಡುತ್ತಿರುವ ಅಜ್ಜಯ್ಯನ ಮೇಲೆ ಕೋಪವುಕ್ಕಿ ಬಂದರೂ, ರೇಗದೆ ಅನಿವಾರ್ಯವಾಗಿ 'ಆಕ್ಷೀ.....' ಎಂದು ಸೀನುತ್ತಾ,ಅದನ್ನೆಲ್ಲಾ ಎತ್ತಿ ಅಜ್ಜಯ್ಯನ ಮೇಜಿನ ಮೇಲಿಟ್ಟೆ.ನನಗೆ ಮತ್ತೆ ಕುಳೀತುಕೊಳ್ಳಲು ಹೇಳಿದ ಅಜ್ಜಯ್ಯಾ 'ಆ ಹಾಳೆ ಗಂಟನ್ನೇ' ಅಪ್ಯಾಯಮಾನವಾಗಿ ನೋಡುತ್ತಾ,ಮೆಲ್ಲ ಸವರುತ್ತಿದ್ದ. ನನಗದೆಲ್ಲಾ ಒಂಚೂರೂ ಸಹನೆಯಾಗದೇ,ಅಸಹನೆಯ ಬುಗ್ಗೆಯಾಗಿ ಕುದಿಯತೊಡಗಿದ್ದೆ..ಅದನ್ನೆಲ್ಲಾ ಅಜ್ಜಯ್ಯ ಗಮನಿಸದವನಾಗಿದ್ದ..
  ಕೆಲಕಾಲ ಬಿಟ್ಟು ಮೆಲ್ಲ ನನ್ನೆಡೆ ನೋಡಿ 'ಪುಟ್ಟಣ್ಣಾ (ಅಜ್ಜ ನನ್ನ ಹಾಗೇ ಕರೆಯುತ್ತಿದ್ದ)!! ನನ್ನದೊಂದು ಆಸೆಯನ್ನು ನೇರವೆರಿಸಿಕೊಡ್ತಿಯಾ ಮಗೂ?' ಎಂದೆನ್ನುತ್ತಲೇ ಕಣ್ತುಂಬಿಕೊಂಡ. ಅಜ್ಜಯ್ಯನ್ನೆಂದೂ ಹಾಗೆ ನೋಡಿದವನಲ್ಲ ನಾನು.ಸದಾ ಗಂಭೀರ ವದನ,ಶಿಸ್ತು, ಕೋಪಿಷ್ಠನಾಗಿದ್ದ ಅಜ್ಜಯ್ಯನನ್ನು ಹೀಗೆ ಊಹೆಯೂ ಮಾಡಿಕೊಂಡಿರಲಿಲ್ಲ. ಒಮ್ಮೇಲೆ ಮೆತ್ತಗಾಗಿಬಿಟ್ಟೆ ನಾನು..ನನ್ನ ಕಣ್ಣ ಒಪ್ಪಿಗೆಯೇ ಸಾಕೆಂಬಂತೆ ಅಜ್ಜಯ್ಯ ಮಾತು ಮುಂದುವರೆಸಿದ -'ಪುಟ್ಟಣ್ಣಾ!!ಇವೆಲ್ಲಾ ನಾನು ಬರೆದ ಕವನ,ಚುಟುಕು,ಕಥೆ,ನೀಳ್ಗಥೆ,ಕಾದಂಬರಿಗಳು ಕಣೋ.ಮೊದಲಿನಿಂದ ನನಗೆ ಕುವುಂಪೆ ತರಹ ಸಾಹಿತ್ಯದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಆಸೆಯಿತ್ತು. ಆದರೆ ನನ್ನ ಅಪ್ಪನಿಗೆ ನಾನು ಸಾಹಿತ್ಯ ಅದಿ-ಇದು ಅಂತ ಹೋದ್ರೆ ಹೊಟ್ಟೆ ತುಂಬಲ್ಲಾ ಅಂತಾ,ನನ್ನಾಸೆಗೆ ಚಿಕ್ಕಾಸೂ ಬೆಲೆ ಕೊಡದೆ ಮಾಸ್ತರಾಗಿ ಮಾಡಿಬಿಟ್ಟ.ಅಪ್ಪನ ಕಾಲವಾದ ಮನೆ ಜವಾಬ್ಧಾರಿ,ಹೆಂಡ್ತಿ-ಮಕ್ಕಳು ಇದೇ ಜೀವನವಾಯ್ತು,ಆದರೂ ನಾನು ಬರೆಯುವದನ್ನು ನಿಲ್ಲಿಸಿರಲಿಲ್ಲ.ನನ್ನ ವಯಸ್ಸಿನವರೆಲ್ಲಾ ಸಾಹಿತ್ಯದಲ್ಲಿ ದೊಡ್ಡ ದೊಡ್ಡ ಹೆಸರು ಮಾಡಿ ಕವಿಗಳೆನಿಸಿಕೊಂಡಾಗ,ನನ್ನ ನೋವನ್ನು ನಾನು ಹೊಟ್ಟೆಯಲ್ಲೇ ನುಂಗಿಕೊಂಡು ಬರೆಯುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ಆದರೆ ಆ ಆಸೆ-ಕನಸುಗಳು ಮತ್ತೆ ಚಿಗುರೊಡೆದಿದ್ದು ನಿನ್ನಮ್ಮನಿಂದ,ಅವಳ ಭರವಸೆ-ಪ್ರೋತ್ಸಾಹ-ಸಹಕಾರದಿಂದ.ನನ್ನ ಸ್ವಂತ ಮಕ್ಕಳಿಗೆ ಅರ್ಥವಾಗದ್ದು,ನನ್ನ ಸೊಸೆಯೆಂಬ ಪಟ್ಟ ಹೊತ್ತು ಬಂದು,ಮಗಳಾಗಿದ್ದ ನಿನ್ನಮ್ಮನಿಗೆ ಅರಿವಾಗಿತ್ತು. ಆದರೆ ವಿಧಿಯಾಟ ನೋಡು ಆ ದೇವರು ನನ್ನ ಸ್ಪೂರ್ತಿದೇವತೆಯನ್ನೇ ಬೇಗ ಕರೆಸಿಕೊಂಡುಬಿಟ್ಟ.ಇದನ್ನೆಲ್ಲಾ ಪುಸ್ತಕ ಮಾಡಿ ಪ್ರಕಟಣೆ ಮಾಡ್ತೀನಿ ಅಂತ ನಿನ್ನಮ್ಮ ಜೋಪಾನ ಮಾಡಿಟ್ಟಿದ್ಲು ಮಗಾ. ಇವತ್ಯಾಕೋ ನಿನ್ನಮ್ಮನ ನೆನಪು ತುಂಬಾ ಕಾಡ್ತಿದೆ,ಅವಳ ಮಗನಾಗಿ ನೀ ನನ್ನ ಆಸೆ ನೇರವೆರಿಸ್ತಿಯಾ ಅಂದ್ಕೊಂಡು ಹೇಳ್ತಾ ಇದಿನಿ.ಅವಸರವೇನಿಲ್ಲಾ,ನಿಧಾನಕ್ಕೆ ನಿನಗೆ ಪುರಸೊತ್ತು ಸಿಕ್ಕಾಗ ಮಾಡು.ನಾನು ಸಾಯೋದ್ರೊಳಗೆ,ಇಲ್ಲಾ ನಾನು ಸತ್ಮೇಲಾದ್ರೂ ನನ್ನಲ್ಲಡಗಿದ್ದ ಲೇಖಕನೀಚೆ ಬರಲಿ.ಸರಿ ಮಗೂ,ನೀನಿನ್ನು ಹೊರಡು ಊಟಕ್ಕೆ.ನನಗಿವತ್ತು ಬರೀಲಿಕ್ಕೆ ತುಂಬಾ ಇದೆ.ಊಟಾನ  ಇಲ್ಲೇ ತಂದಿಡು' ಎನ್ನುತ್ತಾ ನಿಡಿದಾದ ಉಸಿರೆಳೆದುಕೊಂಡ ಅಜ್ಜಯ್ಯ್ಯಾ,ತನ್ನ ದಪ್ಪ ಕನ್ನಡಕವನ್ನು ತೆಗೆದು ತನ್ನ ಪಂಚೆಯ ತುದಿಯಿಂದ ಒರೆಸತೊಡಗಿದ,ನನ್ನ ಪ್ರತ್ಯುತ್ತರಕ್ಕೂ ಕಾಯದೇ. ಮೇಲಿಂದ ಮೇಲೆ ಅಚ್ಚರಿಗೊಳಗಾಗಿ ನಿಷ್ಕ್ರಿಯಗೊಂಡಿದ್ದ ಮನವೀಗ ಬಿದ್ದುಕೊಂಡಿತ್ತು ಮಖಾಡೆ.ಅಜ್ಜಯ್ಯನಿಗೆ ಊಟ ತಂದಿಟ್ಟು,ನಾನೂ ಉಂಡು ಮಲಗಿದೆ.ತಲೆಯಲ್ಲೇನೋ ವಿಚಾರಧಾರೆಗಳು,ಎಲ್ಲಾ ಅಸಂಬದ್ಧವಾದ್ದು..
ರಾತ್ರೆಯೆಲ್ಲಾ ಸರಿಯಾಗಿ ನಿದ್ರೆಯಿಲ್ಲದ್ದಕ್ಕೆ, ಬೆಳಿಗ್ಗೆ ಏಳುವುದೂ ತಡವಾಯ್ತು. ಲಗುಬಗೆಯಿಂದೆದ್ದು ಕಚೇರಿಗೆ ಹೊರಡಲನುವಾದಾಗ,ಪಕ್ಕದ ಕೋಣೆಯಲ್ಲಿ ಕಿಟಾರನೇ ಕಿರುಚಿಕೊಂಡ ಅಜ್ಜಿ,ಒಮ್ಮೇಲೆ ಆಕಾಶ ತಲೆಮೇಲೆ ಬಿದ್ದಾಂಗೆ ಅಳತೊಡಗಿದ್ದಳು. ನಾನು,ಜ್ಯೋತಿ ಗಾಭರಿಬಿದ್ದು ಧಾವಿಸಿದವರೇ,ಅಲ್ಲಿನ ದೃಶ್ಯ ಕಂಡು ಕಲ್ಲಾಗಿದ್ದೆವು. ಅರ್ಧತಿಂದಿಟ್ಟ ಊಟ,ಕೈಯಲ್ಲಿಡಿದ ಪೆನ್ನು,ಜಾರಿಬಿದ್ದ ದಪ್ಪ ಕನ್ನಡಕ, ದೊಡ್ಡ ಗ್ರಂಥಕ್ಕೆ ತಲೆಯಿಟ್ಟ ಅಜ್ಜಯ್ಯ ಹೃದಯ ಸ್ತಂಭನದಿಂದ ಇನ್ನಿಲ್ಲವಾಗಿದ್ದರು.ನಿನ್ನೆಯಿದ್ದ ಅಜ್ಜಯ್ಯಾ ಇಂದಿಲ್ಲವೆಂಬ ಕಠುಸತ್ಯವನ್ನ ಅರಗಿಸಿಕೊಳ್ಳಲ್ಲಾಗದ ದಿಗ್ಭ್ರಮೆಯಲ್ಲೇ ಕಚೇರಿಗೆ ವಿಷಯ ತಿಳಿಸಿ ರಜಾ ತೆಗೆದುಕೊಂಡೆ. ಅಜ್ಜಯ್ಯನ ಕ್ರಿಯೆಗಳೆಲ್ಲಾ ಸಾಂಗವಾಗಿ ಮುಗಿದವು,ಅಜ್ಜಿಯೂ ದುಃಖದಿಂದ ಹೊರಬಂದಿದ್ದಳು.ಆದರೂ ನನಗೆ ಅಜ್ಜಯ್ಯನ ಕೋಣೆಗೆ ಕಾಲಿಡಲೇ ಭಯವಾಗುತ್ತಿತ್ತು,ನನ್ನೆದೆಯಲ್ಲಿದ್ದ ವಂಚಕ ನರಿಗಳು ಹೊಂಚುಹಾಕಲು ಕಾದಿದ್ದವು.. ಆದರೆ ನನ್ನ ಭಯವನ್ನು ತನ್ನದೇ ದೃಷ್ಟಿಯಲ್ಲಿ ಅರ್ಥೈಸಿಕೊಂಡ ನನ್ನ ಹೆಂಡತಿ ನನ್ನ ಛೇಡಿಸುತ್ತಾ 'ಸಾಕು ಸುಮ್ನೆ ಬನ್ರಿ ನನ್ಜೊತೆ.ಅಜ್ಜಯ್ಯನೇನೂ ಭೂತವಾಗೊಲ್ಲ,ನಾವು ಗೋಕರ್ಣದಲ್ಲಿ ಕರ್ಮಮಾಡಿದ್ವಲ್ಲಾ.ಅಜ್ಜಯ್ಯನ ಆತ್ಮಕ್ಕೆ ಶಾಂತಿ ಸಿಕ್ಕಿದೆ ಬನ್ನಿ ಸುಮ್ನೆ.ಆ ಕೋಣೆಯನ್ನು ಚೊಕ್ಕ ಮಾಡಿ ಬೇಡದ್ದನ್ನ ರದ್ದಿಗೆ ಕೊಡ್ಬೇಕು,ಆದರೆ ಅಲ್ಲಿರೋದೆಲ್ಲಾ ಬರೀ ಪುಸ್ತಕ,ನಂಗೇನೂ ತಿಳಿಯೊದಿಲ್ಲ ಬದನೆಕಾಯಿ. ಅದಿಕ್ಕೆ ಯಾವ್ದು ಬೇಕು,ಯಾವ್ದು ಬೇಡ ಒಂಚೂರು ಹೇಳಿ ಬನ್ನಿ.. ರಾಮ ರಾಮಾ ಎಂಥಾ ಧೂಳು,ಬರೀ ಜೇಡರ ಬಲೆ. ಇಲ್ಲಿ ಅಜ್ಜಯ್ಯಾ ಹೇಗಿರ್ತಿದ್ರೋ?'ಎಂದು ಗೊಣಗುತ್ತಾ ಒಳನಡೆದಳು. ಕಲಿತರೂ ಮೂಢನಂಬಿಕೆಯ ಮಾಯೆಯಿಂದ ಹೊರಬರದ ಮುಗ್ಧ ಹೆಣ್ಣಾಕೆ,ಅವಳ ಮಾತಿಗೆ ನಸುನಕ್ಕು ಅವಳನ್ನೇ ಹಿಂಬಾಲಿಸಿದೆ. ಮೂಗಿಗೆ ಧೂಳು ಬಡಿದು ಶೀತವಾಗದಿರಲೆಂದು ವಸ್ತ್ರ ಬೀಗಿದು,ಸೀರೆಯನ್ನೆತ್ತಿ ಸೊಂಟಕ್ಕೆ ಕಟ್ಟಿ,ಕೈಯಲ್ಲಿ ಪೊರಕೆ ಹಿಡಿದು ಕುರ್ಚಿಯ ಮೇಲೆ ಹತ್ತುನಿಂತಿದ್ದ ಜ್ಯೋತಿಯ ಕಂಡು ನಾನು-ಅಜ್ಜಿ 'ಸೂತಕದ ಮನೆ'ಯಲ್ಲಿ ಮೊದಲಬಾರಿಗೆಂಬಂತೆ ನಕ್ಕು,ನನ್ನವಳ ಕಿಡಿಗಣ್ಣಿಗೆ ಬಲಿಯಾಗಿದ್ದೆವು.
ಕಬ್ಬಿಣದ ಭಾರವಾದ ಆ ಪೆಟ್ಟಿಗೆಯನ್ನು ಎಳೆಯುವಾಗ ಕೈಯಾಕೋ ಅಗತ್ಯಕಿಂತ ಜಾಸ್ತಿಯೇ ನಡುಗುತ್ತಿತ್ತು. ದೊಡ್ಡ ದೊಡ್ಡ ಗ್ರಂಥಗಳನ್ನು,ಕಥೆ ಪುಸ್ತಕ,ಕಾದಂಬರಿಗಳನ್ನು ಒಂದೆಡೆ ಶುಭ್ರವಾಗಿ ಜೋಡಿಸಿಟ್ಟೆ,ಆ ಹಾಳೆಕಟ್ಟಿನ ಹೊರತು.ಅದನ್ನು ಭಾರವಾದ ನಡಗುವ ಕೈಗಳಿಂದೆತ್ತಿ,ಅವಳಿಗೆ ಕಾಣದಂತೆ ತೆಗೆದಿರಿಸಿದೆ.ಹೊರಬಂದು ಕುಳಿತವನೆದೆಯಲ್ಲಿ ನೂರಾರೂ ಕೀಚಕ ನರಿಗಳ 'ತಕಧಿಮಿತಾಂ'.. ರಾತ್ರಿಯೀಡಿ ಯೋಚಿಸಿಯೇ ಯೋಚಿಸಿದೆ,ಏನೋ ಒಂದು ನಿರ್ಧರಿಸಿದಂತೆ ಬೆಚ್ಚನೆ ಮಲಗಿಬಿಟ್ಟೆ.ನನ್ನ ಯಾವ ಕಿರಾತಕ ಬುದ್ಧಿಯ ಅರಿವಿರದೇ ಮುದ್ದಾಗಿ ಮಲಗಿದ್ದಳು ಜ್ಯೋತಿ ಪಕ್ಕದಲ್ಲಿ. 
ಎರಡು ವಾರದ ರಜೆಯಿಂದಾಗಿ ಇನ್ನೆರಡು ದಿನ ಕಚೇರಿಗೆ ಹೋಗುವ ರಗಳೆಯಿರಲಿಲ್ಲ.ಅದಕ್ಕೆ ಬೆಳಿಗ್ಗೆ ಕಾಫಿಯನ್ನು ಆಸ್ವಾದಿಸುತ್ತಾ,ದೈನಂದಿನ ಪತ್ರಿಕೆಯೊದುತ್ತಿದ್ದೆ.ಆಗ ಅಚಾನಕ್ ಆಗಿ ನನ್ನ ಕಾಕದೃಷ್ಠಿಗೆ ಬಿತ್ತು 'ಬರಹಗಳಿಗೆ ಆಹ್ವಾನ' ಎಂಬ ಪ್ರಕಟಣೆ.ಕೇಳಬೇಕಾ ನಿನ್ನೆಯಿಂದ ಕೀಚಕನಂತೆ ಕಾಡುತ್ತಿದ್ದ ನರಿಗಳು ಹೊರಗೊಡಿಬಂದಿದ್ದವು.ಒಂದು ಕಡೆ ಕುಳಿತು ಬರೆಯತೊಡಗಿದ ನನ್ನ ಕಂಡು ಜ್ಯೋತಿ ಹುಬ್ಬೇರಿಸಿ ಹೋಗಿದ್ದಳು.ಒಂದೆರಡು ತಾಸಾದರೂ ಅಲ್ಲೇ ಕುಳೀತು ಗೀಚುತ್ತಿದ್ದ ನನ್ನ ಕಂಡು ಕೂತುಹಲ ತಡೆಯಲಾಗದೇ 'ಏನ್ರೀ!!ಅಜ್ಜಯ್ಯನ ತರಹ ಆಗಿಬಿಟ್ರೆನೂ?' ಎಂದು ಕೇಳಿದಾಗ,ನನಗೆ ಚೂರಿಯಿಂದ ಚುಚ್ಚಿದಂತಾಗಿತ್ತು. ಕ್ಷಣಕೂಡ ಅಲ್ಲಿ ನಿಲ್ಲಲಾಗದೇ ಅಲ್ಲಿಂದೆದ್ದು ಹೊರಟ ನನ್ನನ್ನು ಅಚ್ಚರಿಯಿಂದ ನೋಡುತ್ತಿದ್ದರು ಅಜ್ಜಿ-ಹೆಂಡತಿ.ಬಾಲ್ಕನಿಯಲ್ಲಿ ತಂಪಾಗಿ ಬೀಸುತ್ತಿದ್ದ ತಂಗಾಳಿ, ನವಿರಾಗಿ ಮನ ಮುದಗೊಳಿಸುವಂತಿದ್ದ ಸಂಪಿಗೆ,ಯಾವೂದೂ ನನ್ನೆದೆಯುರಿಯನ್ನಾರಿಸಲಿಲ್ಲ.ಆದರೆ ಕೀಚಕತೆಗೆ ಭಾವನೆಗಳೆಲ್ಲಾ ಸುಲಭದಲ್ಲಿ ತಟ್ಟುವುದಿಲ್ಲ.ಕ್ಷಣದಲ್ಲಿ ಸಾವರಿಸಿಕೊಂಡು ಮತ್ತೆ ಬರೆಯಲು ಬಂದು ಕುಳಿತಿದ್ದೆ,ನನ್ನೆಲ್ಲಾ ಭಾವನೆಯ ಕೊಡವಿಕೊಂಡು...
ಇತ್ತಿಚಿಗೆ ಮನೆಯಲ್ಲಿ ನಾನು ಅಚ್ಚರಿಯ ವಿಷಯವಾಗಿದ್ದೆ.ಮರಳಿ ಕಚೇರಿ ಶುರುವಾಗುವವರೆಗೂ ಬರೆಯುತ್ತಲೇ ಇದ್ದೆ,ನಿಮಿಷವನ್ನೂ ವ್ಯಯಿಸದಂತೆ.ಹಾಗೆಯೇ ತಿಂಗಳುಗಳೇ ಕಳೆದವು.ಅದೊಂದು ದಿನ ನನ್ನ  ಹೆಸರಿಗೊಂದು ದೀಪಾವಳಿ ಸಂಚಿಕೆ,ಜೊತೆಗೆ ಆರುಸಾವಿರದ್ದೊಂದು ಚೆಕ್ಕು ಬಂದಿದ್ದು.ಪ್ರಸಿದ್ಧ ಮಾಸಪತ್ರಿಕೆಯಲ್ಲಿನ ಕಥಾಸ್ಪರ್ಧೆಯಲ್ಲಿ ನನ್ನ ಕಥೆ(?)ಗೆ ಪ್ರಥಮ ಸ್ಥಾನ ಬಂದಿದ್ದು ಕಂಡು ಜ್ಯೋತಿ ಕುಣಿದಾಡಿದ್ದಳು,ನಾನೂ ಖುಶಿಯಾದೆ.ವಿಷಯ ತಿಳಿದ ಅಜ್ಜಿಯೂ 'ನಿನ್ನ ಅಜ್ಜಯ್ಯನೂ ಕಥೆ ಕವನ ಎಲ್ಲಾ ಬರಿತಿದ್ರೂ ಕಣಾ,ಅದೆಲ್ಲಾ ನಂಗ್ ತಿಳಿತಿರ್ಲಿಲ್ಲ.ಆದರಾ ಕಾಲದಲ್ಲಿ ಇಷ್ಟು ಸಲೀಸಾಗಿ ಪತ್ರಿಕೆಗೆ ಕಳ್ಸದೆಲ್ಲಾ ಗೊತ್ತಿರ್ಲಿಲ್ಲ. ನೀನಾದ್ರೂ ಹೆಸ್ರು ತಗಾ.ಮೇಲಿರೋ ಅಜ್ಜಯ್ಯಾ ನಿಜ್ವಾಗಿ ಖುಶಿ ಪಡ್ತಾರೆ ಕಣಾ' ಎಂದಿನ ಗೊಗ್ಗರು ದನಿಯಲ್ಲಿ ಹೇಳಿದಾಗ ಮಾತ್ರ ಮೆಲ್ಲ ನಡುಗಿಬಿಟ್ಟೆ.ಅದೆಲ್ಲಾ ಕ್ಷಣವಷ್ಟೇ ನಂತರ ಯಾವ ಪಶ್ಚಾತ್ತಾಪದ ಛಾಯೆಯೂ ನನ್ನಲ್ಲಿರಲಿಲ್ಲ.ನನ್ನಾಕೆಯ ಮುಗ್ಧ ಸಂಭ್ರಮವನ್ನು ನಾನೂ ಆಚರಿಸಿದೆ..

ಮತ್ತೆರಡು ತಿಂಗಳು ಕಳೆದ ಮೇಲೆ ನಾನು ಒಂದು ಕಥಾಸಂಕಲನ 'ನಿನ್ನ ನೆನಪಲಿ'ಯನ್ನು ಬಿಡುಗಡೆ ಮಾಡಿದೆ.ಅದೇಷ್ಟು ಜನಪ್ರಿಯತೆ ಪಡೆಯಿತು ಅಂದರೆ ನನಗೇ ಅಚ್ಚರಿ ಹುಟ್ಟಿಸುವಷ್ಟು!ಜನಪ್ರಿಯತೆಯ ಜೊತೆಜೊತೆಗೆ ಹಣವನ್ನೂ ಬಾಚಿಕೊಂಡಿದ್ದೊಂದು ವಿಶೇಷ.ದಿನಪತ್ರಿಕೆಯಲ್ಲೆಲ್ಲಾ ನನ್ನದೇ ಸುದ್ದಿ 'ಎಲೆಮರೆಯ ಕಾಯಿ', 'ಮಿಂಚಿನ ಪ್ರತಿಭೆ',ಹೀಗೆ ದಿನಕ್ಕೊಂದು ಶಿರ್ಷೀಕೆಯಡಿ ನನ್ನ ಸಂದರ್ಶನ ಬರುತ್ತಲೇ ಇತ್ತು.ಅಜ್ಜಿ ಮತ್ತೆ ಹೆಂಡತಿ ಸಂತೋಷದಿಂದ ಉಬ್ಬಿದ್ದರು,ನಾನೇನೂ ಕಡೀಮೆಯಿರಲಿಲ್ಲ. ಆದರೆ ಈ ಸಂತೋಷ ಬಹಳ ಕಾಲ ಉಳಿಯಲಿಲ್ಲ.ಅಂದು ನನ್ನ ಕಥಾಸಂಕಲನಕ್ಕೆ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಿದಾಗಲಿನಿಂದ ನಾನು ನಾನಾಗಿರಲಿಲ್ಲ.ನನ್ನೊಳಗಿನ ಕಿರಾತಕ ನರಿಗಳು ಒಮ್ಮೇಲೆ ವಿಜೃಂಭಿಸಿದಂತಾಡಿ ಸತ್ತು ಬಿದ್ದುದರಿಂದ ನಾನು ಮೊದಲಿನಂತಾಗಿದ್ದೆ.ನನ್ನನ್ನೀಗ ಕಾಡುತ್ತಿದ್ದುದು ಬರೀ ನೋವು,ಬರೀ ಪಶ್ಚಾತ್ತಾಪದ ಬೇಗೆ..
 ಆದರಿಂದು ನಾನೊಂದು ನಿರ್ಧಾರ ಮಾಡಿದ್ದೆನೆ.ಎಲ್ಲವನ್ನೂ ಹೆಂಡರಿ-ಅಜ್ಜಿಯ ಮುಂದೆ ಹೇಳಿದ ಮೇಲೆ, ಪತ್ರಿಕಾಗೋಷ್ಠಿ ಕರೆಸಿ ಇರುವ ವಿಷಯ ಹೇಳಿಬಿಡುತ್ತೆನೆ. ನನ್ನನ್ನು ಹೊಗಳಿ ಬರೆದ ಪತ್ರಿಕೆಗಳೆಲ್ಲಾ,ನನ್ನ ಬಗ್ಗೆ ಭಯಾನಕವಾಗಿ ಚಿತ್ರಿಸಿದ್ರೂ, ಅಜ್ಜಿ-ಜ್ಯೋತಿಯ ದೃಷ್ಠಿಯಲ್ಲಿ ಸಣ್ಣವನಾದ್ರೂ ಚಿಂತಿಲ್ಲ. ಎಲ್ಲವನ್ನೂ ಹೇಳೇ ಬಿಡುತ್ತೆನೆ ಎಂದು ಮಾಡಿಕೊಂಡ ಸಮಾಧಾನ ಕ್ಷಣಮಾತ್ರದ್ದಾಗಿತ್ತು. ಕಾರಣ? ಮನಃಸಾಕ್ಷಿಯ ವಿರುದ್ಧವಾಗಿ ನಡೆದುದ್ದಕ್ಕೆ ನನ್ನೆದೆಯ ಗೂಡಲ್ಲಿ ಊಳಿಡುವ ನರಿಗಳು ಸುಮ್ಮನಿರ್ತಾವಾ? ನಾನೇ ಮಾಡಿಕೊಂಡ ಆತ್ಮವಂಚನೆ ಸಾಮಾನ್ಯದ್ದಾ? ಎಂಬೆಲ್ಲಾ ಪ್ರಶ್ನೆ ಬಂದೊಡೆ ಮನ ಬೆಂಕಿಯ ಗೂಡಾಗುತ್ತದೆ,ಮನ ಪಶ್ಚಾತ್ತಾಪದ ಕಿಡಿಯಲಿ ಬೆಂದು ಹೋಗುತ್ತಿದೆ.ಆದರೂ ಎಲ್ಲಾವನ್ನೂ ಎಲ್ಲರಿಗೆ ಹೇಳಿದ್ದೆನೆ,ಬಂದ ಹಣವನ್ನೆಲ್ಲಾ ವೃದ್ಧಾಶ್ರಮಕ್ಕೆ ಅಜ್ಜಯ್ಯನ ಹೆಸರಲ್ಲಿ ದಾನ ಮಾಡಿದ್ದೆನೆ. ಅಜ್ಜಯ್ಯನ ಉಳಿದ ಕಥೆ-ಕವನ-ಕಾದಂಬರಿ-ಪ್ರಭಂದದ ಪುಸ್ತಕಗಳನ್ನು ಪ್ರಕಟಿಸಿದ್ದೆನೆ..ಮನವೀಗ ಸಮಾಧಾನಗೊಂಡರೂ 'ಎದೆಗೂಡಲ್ಲು ಊಳಿಡೂವ ನರಿಗಳು' ನಾನು ಮಾಡಿದ ತಪ್ಪನ್ನು ಆಗಾಗ ನೆನಪಿಸುತ್ತಿರುತ್ತವೆ.
-ಶುಭಶ್ರೀ ಭಟ್ಟ

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...